Monday, February 1, 2010

ಪುಸ್ತಕಗಳ ಬಿಡುಗಡೆ ಸಮಾರಂಭ....

ನಿನ್ನೆ ೩೧ನೇ ಜನವರಿಯಂದು ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು. ಅದರಲ್ಲಿ ಮೂರು ಪುಸ್ತಕಗಳು ’ಪ್ರತಿದಿನ ಪರಿಸರ ದಿನ’, ’ಇರುವುದೊಂದೇ ಭೂಮಿ’ ಮತ್ತು ’ಸುರಿಹೊಂಡ ಭರತ ಖಂಡ’ ಅಂಕಿತ ಪ್ರಕಾಶನದಿಂದ ಮರು ಮುದ್ರಣಗೊಂಡವು. ಹೊಸದಾದ ಮೂರು ಪುಸ್ತಕಗಳು "ಅಭಿವೃದ್ಧಿಯ ಅಂಧಯುಗ", "ಟಿಪ್ಪು ಖಡ್ಗದ ನ್ಯಾನೋ ಕಾರ್ಬನ್" ಮತ್ತು "ಕೊಪೇನ್ ಹೇಗನ್ ಋತು ಸಂಹಾರ" ಭೂಮಿ ಬುಕ್ಸ್ ಪ್ರಕಾಶನದ ಮೊಟ್ಟ ಮೊದಲ ಪುಸ್ತಕಗಳು.. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಪ್ರೊ.ಬಿ ಕೆ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ, ಕೆ ವಿ ಅಕ್ಷರ ಮತ್ತು ಶ್ರೀಮತಿ ನೇಮಿಚಂದ್ರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನಡೆಯಿತು ಪುಸ್ತಕಗಳ ಲೋಕಾರ್ಪಣಾ ಸಮಾರಂಭ. ಎಂದಿನಂತೆ ಅಂಕಿತದವರು ಉಪಹಾರವನ್ನೂ ಏರ್ಪಡಿಸಿ ಬಿಟ್ಟಿದ್ದರು. ಈ ಸಮಾರಂಭದಲ್ಲಿ ನನ್ನನ್ನು ಆಕರ್ಷಿಸಿದ ವಿಚಾರಗಳೆಂದರೆ ಭೂಮಿ ಬುಕ್ಸ್ ಪ್ರಕಾಶನದವರ ಪ್ರತಿ ಪುಸ್ತಕಕ್ಕೆ ಬದಲು ಒಂದು ಗಿಡ ನೆಡುವ ಸಂಕಲ್ಪ ಮತ್ತು ಅತಿಥಿಗಳಿಗೆ ಪ್ರೀತಿಯಿಂದ ಕೊಟ್ಟ ಸಸಿಗಳು. ಹಸಿರು ಸಸಿಗಳು ಒಬ್ಬರಿಂದೊಬ್ಬರಿಗೆ ವಿನಿಮಯವಾಗುವ ವಿಷಯವೇ ನನ್ನನ್ನು ಬಹಳ ಸಂತೋಷ ಪಡಿಸಿತ್ತು. ಎರಡು ವರ್ಷಗಳ ಹಿಂದೆ ನಮ್ಮ ಚಿಕ್ಕಮ್ಮನ ಮನೆಯಲ್ಲಿ ನರಸಿಂಹ ಹೋಮ ಮಾಡಿದಾಗ, ನಾವು ಉಡುಗೊರೆಯಾಗಿ ಪುಟ್ಟ ಪುಟ್ಟ ಸಸಿಗಳನ್ನು ಕೊಟ್ಟಾಗ, ಅಲ್ಲಿ ನೆರೆದಿದ್ದ ಎಲ್ಲಾ ಸಾರ್ವಜನಿಕರೂ (ಎಲ್ಲರೂ ನಮ್ಮ ಬಳಗವೆಂಬ ವರ್ಗಕ್ಕೆ ಸೇರಿದವರೇ...!! :-) ನಮ್ಮನ್ನೇ ವಿಚಿತ್ರವಾಗಿ ನೋಡಿದ್ದರು. ಆದರೆ ಪುಸ್ತಕ ಬಿಡುಗಡೆಯಂತಹ ಸಾರ್ವಜನಿಕ ಸಮಾರಂಭಗಳಲ್ಲಿ ಈ ಆಚರಣೆ ನೋಡಿ ನನಗೆ ನಿಜಕ್ಕೂ ಸಂತೋಷವಾಯಿತು.

ಎಲ್ಲಾ ಅತಿಥಿಗಳ ಮಾತುಗಳ ನಂತರ ಶ್ರೀ ನಾಗೇಶ ಹೆಗಡೆಯವರು ತಮ್ಮ ಚಿಕ್ಕ ಚೊಕ್ಕವಾದ ಮಾತುಗಳನ್ನು ಆಡಿದರು. ಅವರು ಅಲ್ಲಿ ನೆರೆದಿದ್ದವರಿಗೆಲ್ಲಾ "ನಿಮ್ಮ ನಿಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಘಟನೆಗಳು ನಡೆದಾಗಲೆಲ್ಲಾ (ಅಂದರೆ ನಮ್ಮ ಜನ್ಮ ದಿನಗಳಂದು, ಮದುವೆಯ ವಾರ್ಷಿಕೋತ್ಸವ, ಮಕ್ಕಳ ಹುಟ್ಟು ಹಬ್ಬ, ಅನ್ನಪ್ರಾಶನ ಹೀಗೆ.......) ನೀವು ನೆನಪಾಗಿ ಒಂದೊಂದು ಗಿಡ ನೆಟ್ಟರೆ, ಬೆಂಗಳೂರು ಮತ್ತೆ ಹಸಿರು ವನವಾಗುತ್ತದೆ ಎಂದು ಕರೆ ಕೊಡುವುದರ ಮೂಲಕ ತಮ್ಮ ಪರಿಸರ ಮತ್ತು ಹಸಿರು ಕಾಳಜಿಯನ್ನು ವ್ಯಕ್ತಪಡಿಸಿದರು. ನನಗೆ ಅವರ ಈ ವಿಧಾನ ಅತ್ಯಂತ ಪ್ರಭಾವಕಾರಿ ಅನ್ನಿಸಿತು. ಸರಕಾರ ತಿಪ್ಪಗೊಂಡನಹಳ್ಳಿಯ ಸಮೀಪ ’ಸ್ಫೂರ್ತಿ ವನ’ಕ್ಕೆ ಜಾಗ ಕೊಟ್ಟಿದೆಯೆಂದೂ ಮತ್ತು ಭೂಮಿ ಪ್ರಕಾಶನ ಹೊರ ತರುವ ಪ್ರತಿಯೊಂದು ಪುಸ್ತಕಕ್ಕೆ ಬದಲಾಗಿ ಅಥವಾ ನೆನಪಾಗಿ ಈ ಸ್ಫೂರ್ತಿವನದಲ್ಲಿ ಒಂದೊಂದು ಗಿಡ ನೆಡಲಾಗುತ್ತದೆಂದು ಭರವಸೆಯಿತ್ತರು. ಇದರ ಶುರುವಾತು ಶ್ರೀಮತಿ ನೇಮಿಚಂದ್ರರವರು, ತಾವೇ ನೆಟ್ಟ ನೇರಳೆ ಸಸಿಯನ್ನು ಶ್ರೀ ನಾಗೇಶ ಹೆಗಡೆಯವರಿಗೆ ಕಾಣಿಕೆಯಾಗಿ ನೀಡುವ ಮೂಲಕ ಮಾಡಿದರು.

ಸಮಾರಂಭದ ಚಿತ್ರ ’ಅವಧಿ’ಯಲ್ಲಿದೆ. ಶ್ರೀ ನಾಗೇಶ ಹೆಗಡೆಯವರ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ ನನ್ನನ್ನು ತುಂಬಾ ಆಕರ್ಷಿಸಿತು.....

ಕೊನೆಯದಾಗಿ ಹೇಳಲೇಬೇಕಾದ ಒಂದು ಮಾತು.... ಸಮಾರಂಭದಲ್ಲಿ ನಾನು ಭೇಟಿಯಾದ ನಮ್ಮ ಸಂಪದ ಮಿತ್ರರು... ಹರಿ, ಶ್ರೀಹರ್ಷ, ವಿನಯ್..... ಮತ್ತು ಬ್ಲಾಗ್ ಲೋಕದ ಗೆಳೆಯರು ಕ್ಷಣ ಚಿಂತನೆ ಖ್ಯಾತಿಯ ಚಂದ್ರಶೇಖರ್, ಛಾಯಾ ಕನ್ನಡಿ ಖ್ಯಾತಿಯ ಶಿವು ಮತ್ತು ಮಲ್ಲಿ ಕಣ್ಣಲ್ಲಿ (ಕ್ಯಾಮೆರಾ) ಖ್ಯಾತಿಯ ಡಿ ಜಿ ಮಲ್ಲಿಕಾರ್ಜುನ್.... ನನಗೆ ನಿಜಕ್ಕೂ ಕಾರ್ಯಕ್ರಮಕ್ಕೆ ಹೋಗಿದ್ದು ಸಂತಸ ತಂದಿತ್ತು........




25 comments:

  1. ನೀವು ಹೇಳಿದ ಕೆಲವು ಬ್ಲಾಗ್ ಗೆಳೆಯರನ್ನು ನಾನು ಈ ಮೊದಲು ಬೇಟಿಯಾಗಿದ್ದೆ. ನಿಮ್ಮನ್ನು ಮೊದಲ ಸಲ ಬೇಟಿಯಾಗಿದ್ದು ಖುಷಿಯಾಯಿತು...

    ReplyDelete
  2. ಶ್ಯಾಮಲಾ ಮೇಡಂ, ಪುಸ್ತಕ ಬಿಡುಗಡೆಯ ಪುಟ್ಟ ವರದಿಯನ್ನೇ ಕೊಟ್ಟಿದ್ದೀರಿ. ಧನ್ಯವಾದಗಳು. ನೀವು ಒಬ್ಬ ಪತ್ರಕರ್ತೆಯಾಗಿದ್ದರೆ ಇನ್ನೂ ಚೆನ್ನಿರುತ್ತಿತ್ತು (ಬೇಸರಿಸಿಕೊಳ್ಳಬೇಡಿ,ಪ್ಲೀಸ್). ಏಕೆಂದರೆ, ಸರಳವಾದ ನಿರೂಪಣೆ ಮಾಡಿದ್ದೀರಿ. ಅದಕ್ಕೆ ಹಾಗೆ ಬರೆದೆ.
    ಇನ್ನು ನಾನೂ ಸಹ ಖುಷಿಯಾಗಿದ್ದು ಏಕೆಂದರೆ, ಸಂಪದ ಬಳಗದವರ ಪರಿಚಯ ಅಲ್ಲದೆ ನಮ್ಮ ತಂದೆಯ ಸ್ನೇಹಿತರ ಸೋದರ ಮತ್ತು ಸೋದರಿಯೂ ಸಿಕ್ಕಿದ್ದು (ಸುಮಾರು ವರ್ಷಗಳ ನಂತರ).

    ಸ್ನೇಹದಿಂದ,

    ReplyDelete
  3. ಒಂದೆರಡು ಫೋಟೋ ಹಾಕಿದ್ದರೆ ನಾವೂ ನೋಡಿರುತ್ತಿದ್ದೆವು...... ನಿರೂಪಣೆ ಚೆನ್ನಾಗಿದೆ..... ಧನ್ಯವಾದ....

    ReplyDelete
  4. ಶಿವು ಸಾರ್..
    ನಿಮ್ಮನ್ನು ಭೇಟಿಯಾಗಿದ್ದು ನನಗೂ ಖುಷಿಯಾಯಿತು. ಧನ್ಯವಾದಗಳು....



    ಸೀತಾರಾಮ ಸಾರ್...
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು


    ದಿನಕರ ಸಾರ್....
    ನಾನು ಚಿತ್ರಗಳನ್ನು ತೆಗೆಯಲಿಲ್ಲ. ಅದಿಕ್ಕೇ ಚಿತ್ರ ’ಅವಧಿ’ಯಲ್ಲಿವೆಯೆಂದು ಬರೆದಿದ್ದೇನೆ. ನಿರೂಪಣೆ ಮೆಚ್ಚಿದ್ದಕ್ಕೆ ಧನ್ಯವಾದಗಳು...

    ReplyDelete
  5. ನಿಮ್ಮ ವರದಿ ನೋಡಿ ಹೋದಷ್ಟೇ ಸಂತಸ ಆಯಿತು
    ಪರಿಸರ ಉಳಿಸಲು ಇಂದೇ ಮುಂದಾಗದಿದ್ದರೆ
    ನಾಳೆ ಪರಿಸರ ಇರದು
    ಒಳ್ಳೆಯ ಸಂದೇಶ ಹೊತ್ತ ಸಮಾರಂಬ

    ReplyDelete
  6. ಚಂದ್ರು ಸಾರ್...
    ನಿಮ್ಮನ್ನು ನಾನು ನಿರೀಕ್ಷಿಸಿರಲಿಲ್ಲ ಹಾಗಾಗಿ ಭೇಟಿಯಾಗಿದ್ದು ಸಂತಸವಾಯಿತು. ಪತ್ರಕರ್ತೆಯಾಗಬೇಕಿತ್ತು ಎಂದಿದ್ದೀರಿ... ನನಗೇನೂ ಬೇಸರವಿಲ್ಲ ಬದಲು ಬಹಳ ಸಂತೋಷವಾಯಿತು. ನನಗೆ journalism or psychology ಓದಬೇಕೆಂದು ತುಂಬಾ ಆಸೆಯಿತ್ತು. ಆದರೆ hostelನಲ್ಲಿ ಬಿಟ್ಟು psychology ಓದಿಸಲು ಅಪ್ಪ ತಯಾರಿರಲಿಲ್ಲ (ತಿಪಟೂರು ಕಲ್ಪತರು ಕಾಲೇಜಿಗೇ ಬರಬೇಕಿತ್ತು)... journalism ಓದುವ ಅವಕಾಶ ಸಿಗಲಿಲ್ಲ... ನಾ ಪತ್ರಕರ್ತೆಯಾಗದಿದ್ದರೇನು.. ಪತ್ರಕರ್ತರ ಮಗಳಲ್ಲವೇ... ಅಷ್ಟೇ ತೃಪ್ತಿ ನನಗೆ... ಧನ್ಯವಾದಗಳು...

    ReplyDelete
  7. ಹ್ಮ್ಮ್ , ನೀವೇ ಎಲ್ಲ ಬರೆದಿದ್ದೀರಿ ಹಾಗಾಗಿ ನೀವು ಚಿತ್ರ ಸಂತೆ ಮಿಸ್ ಮಾಡ್ಕೊಂಡ್ರಿ ಅಂತಷ್ಟೇ ನಾ ಹೇಳಬಹುದು ;)

    ReplyDelete
  8. ಹೌದು ತಮ್ಮಾ...
    ಎಲ್ಲವನ್ನೂ ಒಂದೇ ದಿನ, ಒಂದೇ ಸಲ ಮಾಡೋಕಾಗೋಲ್ಲ ಅಲ್ವಾ? ಇನ್ನೊಂದವಕಾಶ ಖಂಡಿತಾ ಬರತ್ತೆ... :-)

    ಶ್ಯಾಮಲ

    ReplyDelete
  9. ನಾನು ಎರಡೂ ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಬೇಸರವಾಗುತ್ತಿದೆ...

    ನಿಮ್ಮ ವರದಿ ಓದಿ ತುಂಬಾ ಖುಷಿಯಾಯಿತು...

    ಚಂದ್ರು ಹೇಳಿದ ಮಾತಿಗೆ ನನ್ನ ಅನುಮೋದನೆ ಇದೆ..

    ನಿಮ್ಮ ವರದಿ ಓದಿ..
    ನನಗೆ ಕಾರ್ಯಕ್ರಮಕ್ಕೆ ಹೋಗಿ ಬಂದಷ್ಟೆ ಖುಷಿಯಾಯಿತು...

    ಅಭಿನಂದನೆಗಳು..

    ReplyDelete
  10. ಶ್ಯಾಮಲಾ ಮೇಡಂ,
    ಕಾರ್ಯಕ್ರಮದ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  11. ಶಾಮಲ ಮೇಡಂ ಸಮಾರಂಭಕ್ಕೆ ಬರಲು ಆಗಿರಲಿಲ್ಲ ಒಳ್ಳೆಯ ವಿವರಣೆ ನೀಡಿರುವಿರಿ ಧನ್ಯವಾದಗಳು....

    ReplyDelete
  12. ದೂರದ ಲಿಬಿಯಾದಿಂದ ಸಮಾರಂಭಕ್ಕೆ ಹೋಗಲಿಲ್ಲವಾದರೂ ನಿಮ್ಮ ವರದಿ ಓದಿ ಸಮಾರಂಭಕ್ಕೆ ಹೋದಷ್ಟೆ ಖುಶಿಯಾಯಿತು.

    ReplyDelete
  13. ಡಾ.ಗುರು ಸಾರ್, ಸುಬ್ರಹ್ಮಣ್ಯ ಸಾರ್, ಉಮೇಶ್ ಸಾರ್ ಮತ್ತು ಉದಯ್ ಸಾರ್... ನಿಮ್ಮೆಲ್ಲರಿಗೂ ವರದಿ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  14. ಪ್ರಕಾಶಣ್ಣ...
    ನಿಮ್ಮನ್ನು ಚಂದ್ರು ಅವರು ತುಂಬಾ ನೆನೆಸಿಕೊಂಡರು... ನೀವಿದ್ದರೆ ಇಡೀ ವಾತಾವರಣವೇ ಗಲಗಲವಾಗಿರುತ್ತಿತ್ತೆಂದರು.... ಮತ್ತೆ ಭೇಟಿಯಾಗೋಣ ಹೀಗೇ ಯಾವಾಗಲಾದರೂ... ವರದಿ ಮೆಚ್ಚಿದ್ದಕ್ಕೆ ಧನ್ಯವಾದಗಳು. ನನ್ನ ಪತ್ರಕರ್ತೆಯಾಗಬೇಕೆಂದಿದ್ದ ಆಸೆಯನ್ನು ನಾನೀರೀತಿ ನಿಮ್ಮೆಲ್ಲರೊಂದಿಗೆ ನನ್ನ ಭಾವನೆಗಳನ್ನು ಹಂಚಿಕೊಳ್ಳುವುದರ ಮೂಲಕ ಸ್ವಲ್ಪ ಮಟ್ಟಿಗೆ ಪೂರೈಸಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು...

    ReplyDelete
  15. ಪುಟ್ಟ ವರದಿಯನ್ನು ಓದಲು ಈಗ ಸಮಯ ಮಾಡಿಕೊ೦ಡೆ. ಸಮಾರ೦ಭದಲ್ಲಿ ಭಾಗವಹಿಸುವುದು ಸ೦ತಸದ ವಿಷಯವಾದರೆ ಅದನ್ನು ಹ೦ಚಿಕೊಳ್ಳುವುದು ಮತ್ತಷ್ಟು ಸ೦ತಸದ ವಿಷಯ.ಉತ್ತಮ ಗೆಳೆಯರ ಬಳಗವನ್ನು ಹೊ೦ದಿದ ನಿಮಗೆ ಧನ್ಯವಾದಗಳು.ಹೂ೦..ಒ೦ದು ವಿಷ್ಯ...ಸಸಿಯನ್ನೇನೋ ನೀವು ಹ೦ಚುತ್ತೀರಿ..ಆದರೆ ಬೆ೦ಗಳೂರು ಶಹರದಲ್ಲಿ..ಅದನ್ನು ನೆಡಲು ಮನೆಯ ಸುತ್ತ ಜಾಗವಿರುವುದು ಅನುಮಾನವಲ್ಲವೆ!!

    ಅನ೦ತ್

    ReplyDelete
  16. ಸಕಾಲಿಕ ವಿವರ ಗಮನ ಸೆಳೆಯಿತು, ನನಗೂ ಬರಬೇಕೆಂಬ ಆಸೆ ಇತ್ತು, ಬಹುಶ ನಿಮಗೆಲ್ಲ ನಾನು ಹೊಸಬನಾದರೂ ನಮ್ಮ ಇಟ್ಟಿಗೆ ಸಿಮೆಂಟು ಬಂದಿದ್ರೆ ಅವರ ಮುಖಾಂತರ ಪರಿಚಯವಾಗುತ್ತಿತ್ತು, ಅವರೂ ಬರಲಿಲ್ಲ, ನಂದೂ ಹಾಗೇ.

    ReplyDelete
  17. ಅನಂತಣ್ಣಾ ಸಮಯ ಮಾಡಿಕೊಂಡು ವರದಿ ಓದಿದ್ದಕ್ಕೂ ನನ್ನ ಗೆಳೆಯರ ಬಳಗವನ್ನು ಮೆಚ್ಚಿದ್ದಕ್ಕೂ ಧನ್ಯವಾದಗಳು. ಯಾಕಣ್ಣಾ ನಿಮಗಷ್ಟೊಂದು ಸಂದೇಹ... ಸಸಿ ಕೊಟ್ಟರೆ ಅವರವರ ಮನೆ ಬಾಲ್ಕನಿಯಲ್ಲೋ, ಟೆರೇಸ್ ನಲ್ಲೋ, ಕಿಟಕಿಯಲ್ಲೋ ಇಡುತ್ತಾರೆ. ಯಾವುದೂ ಸಾಧ್ಯವಾಗದಿದ್ದರೆ, atleast ಮಿಂಚೇನೆ ತಿಳಿಸಿದರೆ, indoor plantsನೇ ಕೊಡ್ತೀನಿ... ಮನೆ ಒಳಗೇ ಇಡ್ತಾರೆ... ಆಗಬಹುದಲ್ವಾ? ಏನಂತೀರಿ? :-)

    ReplyDelete
  18. ವಿ ಆರ್ ಭಟ್ ಸಾರ್..
    ನನ್ನ ವಿವರ ನಿಮ್ಮ ಗಮನ ಸೆಳೆದಿದ್ದು ನನಗೆ ಖುಷಿಯಾಗಿದೆ. ಮತ್ತೊಂದು ಅವಕಾಶ ಸಿಕ್ಕಾಗ ಎಲ್ಲರ ಪರಿಚಯ ಖಂಡಿತಾ ಆಗತ್ತೆ.. ನನ್ನ ಬ್ಲಾಗ್ ಲೋಕಕ್ಕೆ ನಿಮಗೆ ಆದರದ ಸ್ವಾಗತ......ಧನ್ಯವಾದಗಳು..

    ReplyDelete
  19. ನಾನೂ ಬರುವ ಸಿದ್ಧತೆಯಲ್ಲಿದೆ, ಕ್ಷಣಚಿಂತನೆ ಚಂದ್ರು ಗೆ ನಾನೇ ಫೋನಾಯಿಸಿ ಬನ್ನಿ ಅ೦ತ ಹೇಳಿದ್ದೆ. ಕೊನೆಗಳಿಗೆ ಯಲ್ಲಿ ನನ್ನ ಪೂರ್ವನಿಯೋಜಿತ ಕಾರ್ಯಕ್ರಮ ರದ್ದಾಗಿ ನಾನು ಬೇರೆ ಕಡೆ ಹೋಗಬೇಕಾಯ್ತು. ನಿಮ್ಮನ್ನು ಭೆಟ್ಟಿ ಯಾಗುವ ಅವಕಾಶ ಮತ್ತೆ ತಪ್ಪಿತು.

    ReplyDelete
  20. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಪರಾಂಜಪೆ ಸಾರ್...

    ನನಗೂ ಅವಕಾಶ ತಪ್ಪಿತು... ನೋಡೋಣ ಮತ್ತೆ ಯಾವಾಗ ಅಂತ?

    ReplyDelete
  21. ಶ್ಯಾಮಲಾ ಮೇಡಮ್, ಕಾರ್ಯಕ್ರಮದ ವಿವರಣೆ ಚೆನ್ನಾಗಿ ಮಾಡಿದ್ದೀರಿ. ನನಗೂ ನನ್ನೆಲ್ಲ ಬ್ಲಾಗ್ ಸ್ನೇಹಿತರನ್ನು ಒಮ್ಮೆ ಭೇಟಿ ಮಾಡಬೇಕೆನಿಸಿದೆ

    ReplyDelete
  22. ಇನಿದನಿಯ ದೀಪಸ್ಮಿತಾ ಮೇಡಮ್...

    ಧನ್ಯವಾದಗಳು ಹಾಗೂ ನನ್ನ ಬ್ಲಾಗ್ ಗೆ ಸ್ವಾಗತ. ಇನ್ನೊಮ್ಮೆ ಹೀಗೆ ಯಾವುದಾದರು ಕಾರ್ಯಕ್ರಮದಲ್ಲಿ ನಾವೆಲ್ಲಾ ಭೇಟಿಯಾಗೋಣ ಬನ್ನಿ...

    ReplyDelete
  23. ನಾಗೇಶ್ ಹೆಗಡೆಯವರ ಉತ್ತಮ ವಿಚಾರ ಇಷ್ಟವಾಯಿತು. ನಿಮ್ಮ ವರದಿ ಕೂಡ ಚೆನ್ನಾಗಿದೆ.

    ReplyDelete
  24. ತೇಜಸ್ವಿನಿಯವರೇ ವರದಿ ಮೆಚ್ಚಿದ್ದಕ್ಕೆ ಧನ್ಯವಾದಗಳು.....

    ReplyDelete