Monday, October 11, 2010

ಇಳೆ - ವರುಣ - ರವಿ...



ಬೆಳಿಗ್ಗೆಯಿಂದ ಏನೋ ಒಂಥರಾ ಆಲಸ್ಯವಾಗಿತ್ತು. ರವಿ ಅತ್ಯಂತ ತುಂಟತನದಲ್ಲಿ ಕಣ್ಣು ಮುಚ್ಚಾಲೆಯಾಡುತ್ತಾ ಆಡುತ್ತಾ.... ನನ್ನ ಬೆಳಗಿನ ಉತ್ಸಾಹಕ್ಕೆ ಸ್ವಲ್ಪ ನಿಧಾನಗತಿಯನ್ನು ಜೋಡಿಸಿದ್ದ. ಆದರೂ ನನಗೇಕೋ ರೀತಿಯ ಮೋಡ ಮುಸುಕಿದ ಆಗ, ವಾತಾವರಣ ತುಂಬಾ ಇಷ್ಟವಾಗುತ್ತದೆ. ಹಗಲಿನಲ್ಲೂ ನಸುಕತ್ತಲ ಛಾಯೆಯನ್ನು ಅನುಭವಿಸುವುದೆಂದರೆ ನನಗದೇನೋ ಒಂದು ರೀತಿಯ ಸಂತೋಷ. ಹಗಲಿನಲ್ಲಿ ವಿದ್ಯುತ್ ದೀಪ ಬೆಳಗಿಸಿ, ಓದುತ್ತಾ ಕೂರುವುದೊಂದು ಇಷ್ಟವಾದ ಹವ್ಯಾಸ ನನಗೆ. ಮಧ್ಯೆ ಮಧ್ಯೆ ತನ್ನಿಷ್ಟ ಬಂದಾಗ ಚೂರೇ ಇಣುಕಿ, ತಾನಲ್ಲೇ ಬಾನಿನಲ್ಲಿ ಮುಚ್ಚಿಟ್ಟುಕೊಂಡಿದ್ದೇನೆಂದು ನನಗೆ ತೋರಿಸುತ್ತಾ ಮುದ ಕೊಡುವ ಸೂರ್ಯನನ್ನು ಕಾಯುತ್ತಾ, ಕಂಡಾಗೊಮ್ಮೆ, ಛಕ್ಕನೆ ಬೆಳಕ ಹಾಯಿಸುವ ಜೀವ ಜ್ಯೋತಿಯನ್ನು ಹುಡುಕುತ್ತಾ, ನನ್ನದೇ ಲಹರಿಯ ಬೆನ್ನತ್ತಿ ಹೋಗುತ್ತಾ, ಮನದಲ್ಲಿಯ ಮಾತುಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ ಮಾಡುತ್ತಾ, ನನ್ನ ಅಂತರಂಗದಲ್ಲಿಯ ಪುಸ್ತಕದ ಒಂದು ಹಾಳೆ ಮಗುಚುವ ಅಭ್ಯಾಸ ನನಗೆ ನೆನಪಿರುವಂತೆ ೮ – ೯ನೇ ತರಗತಿಯಿಂದಲೇ ಬಂದಿದೆ. ಆಗ ಅಕ್ಕಂದಿರೂ, ಅಮ್ಮ ಎಲ್ಲರೂ ಇವಳೊಬ್ಬಳು ಯಾವಾಗಲೂ ಮೋಡ ಕವಿದರೆ ಚೆನ್ನಾಗಿರತ್ತೆ ಅಂತಿರ್ತಾಳೆ... ನನ್ನ ಹಪ್ಪಳ-ಸಂಡಿಗೆ ಒಣಗೋಲ್ಲ, ಆಹಾರ ಪದಾರ್ಥಗಳೆಲ್ಲ ಕೆಟ್ಟು ಹೋಗತ್ತೆ ಎಂದು ಅಮ್ಮ, ಥೂ.. ಬೇಜಾರು ಮೂಡೇ ಇರಲ್ಲ ಎಂದು ಅಕ್ಕ, ಸುಮ್ಮನೆ ಬಿಸಿ ಕಾಫಿ ಕುಡಿದು ಬೆಚ್ಚಗೆ ಕೂತಿರೋಣ ಅನ್ಸತ್ತೆ, ಹೊರಗೆ ಹೋಗುವ ಇಷ್ಟವಾಗೋಲ್ಲ ಎಂದು ಅಪ್ಪ.... ಗೊಣಗುಟ್ಟುತ್ತಿದ್ದರೆ ನಾನು ಮಾತ್ರ, ಆಹಾ ಎಂದು ಸಂತಸಪಡುತ್ತಾ, ಅಮ್ಮನ ಕೈಯಲ್ಲಿ ಬೈಸಿಕೊಂಡು, ಬಿಸಿ ಕಾಫಿ ಕುಡಿಯುತ್ತಾ, ಚಕ್ಕುಲಿ-ಕೋಡುಬಳೆಗಳ ಸಂಗ್ರಹಕ್ಕೆ ಲಗ್ಗೆ ಹಾಕುತ್ತಾ, ಕೈಯಲ್ಲೊಂದು ಕಥೆ ಪುಸ್ತಕ ಹಿಡಿದೋ ಅಥವಾ ಕಿಟಕಿಯ ಬಳಿ ಕುಳಿತು ಹೊರಗೆ ನೋಡುತ್ತಲೋ, ಕಲ್ಪನಾ
MySpace Layouts

ಸಾಮ್ರಾಜ್ಯದಲ್ಲಿ ವಿಹರಿಸುತ್ತಲೋ ಕಳೆಯುತ್ತಿದ್ದೆ...

ಅಂಥದೊಂದು ಬಾಲ್ಯ, ಯೌವನದ ದಿನಗಳ ನೆನಪಾಗಿತ್ತು ಇಂದು ಕೂಡ. ಈಗ ಸುಮಾರು ಕೆಲವು ದಿನಗಳಿಂದಲೇ ಹೀಗೆ ನಡುನಡುವೆ ಮೋಡ ಕವಿದು ನನ್ನ ಮನದಾಳದ ಮಾತುಗಳನ್ನು ಕೆದಕುತ್ತಿದ್ದರೂ, ಅದೇಕೋ ಇಂದು ಇನ್ನು ತಡೆಯಲಾರೆ, ನಾ ಹೊರಗೆ ಬಂದೇ ಬರುವೆನೆನ್ನುತ್ತಾ ಆ ಸಂತಸದ, ಮುದದ ಭಾವ ಇಣುಕ ತೊಡಗಿತ್ತು...

ಕೆಲವು ದಿನಗಳ ಹಿಂದೆ ವಿಜಯ ಕರ್ನಾಟಕದಲ್ಲಿ ಮೊದಲನೆ ಪುಟದಲ್ಲೇ ಭದ್ರಾ ಜಲಾಶಯ ತುಂಬಿ, ನೀರು ನದಿಗೆ ಹರಿಯ ಬಿಟ್ಟಿರುವ ಚಿತ್ರ ಕೂಡ ನನ್ನ ಮನದ ಬಾಗಿಲನ್ನು ತಟ್ಟಿತ್ತು. ನದಿಯಲ್ಲಿ ನೀರು ತುಂಬಿರುವ ದೃಶ್ಯ ಕಣ್ಣ ಮುಂದೆ ಸುಳಿದಾಡುತ್ತಿರುವಾಗ, ಇಲ್ಲಿ ಬೆಂಗಳೂರಿನಲ್ಲಿ ನಮ್ಮೆಲ್ಲರ ಪ್ರಿಯ ಮಿತ್ರ ರವಿ, ನಿಧಾನವಾಗೆದ್ದು, ತುಂಟತನದ ಭಾವದಲ್ಲಿದ್ದ. ಸ್ವಲ್ಪ ಸ್ವಲ್ಪವೇ ಇಣುಕಿ ನೋಡುತ್ತಾ, ಸಂಭ್ರಮ ಪಡುತ್ತಿದ್ದದ್ದು ಕಂಡಾಗ ನನಗೇಕೋ ಒಂದು ಹೊಸ ಅಲೆಯ ಭಾವ ಬಂದಿತ್ತು. ಈ ತುಂಟ ರವಿ ಯಾವುದೋ ಅತ್ಯಂತ ಆಪ್ತವಾದ, ಆಳವಾದ ಒಂದು ದೃಶ್ಯ ಕಾವ್ಯಕ್ಕೆ ವೇದಿಕೆ ಸಿದ್ಧ ಪಡಿಸುತ್ತಿದ್ದಾನೆಂಬ ಚಿಕ್ಕ ಸಂಶಯ ಕೂಡ ಬಂದಿತ್ತು. ಅದಾವ ಭಾವೋಲ್ಲಾಸದ ಕ್ಷಣಗಳನ್ನು ಸೃಷ್ಟಿಸುವನೋ, ಅನುರಾಗದ ಅಲೆಯನ್ನು ಹರಿಸುವನೋ, ಅದಾವ ಅದ್ಭುತ ಅನುಭವವಾಗುವುದೋ, ಮತ್ತಾವ ಮಹಾ ಕಾವ್ಯದ ಉದ್ಭವಕ್ಕೆ ನಾ ಸಾಕ್ಷಿಯಾಗುವೆನೋ ಎಂದೆಲ್ಲಾ ಕಲ್ಪನೆಗಳ ಕುದುರೆ ಹತ್ತಿ ನಾಗಾಲೋಟದಲ್ಲೋಡುತ್ತಿತ್ತು ನನ್ನ ಮನಸ್ಸು. ಹೀಗೇ ಹೊರಗೆ ನೋಡುತ್ತಾ ನನ್ನ ಲಹರಿಯನ್ನು ಸ್ವಚ್ಛಂದವಾಗಿ ಹರಿಯ ಬಿಟ್ಟು ಕಾತುರದಿಂದ ಕಾಯುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಧೋ.... ಎಂದು ಸುರಿಯಲಾರಂಭಿಸಿದ ಮಳೆ ನನ್ನೆಲ್ಲ ಭಾವಗಳನ್ನೂ ಅಚ್ಚ ಬಿಳಿಯ ವೇದಿಕೆಯಲ್ಲಿ, ಬಣ್ಣ ಬಣ್ಣದ, ವಿವಿಧ ಆಕಾರಗಳ, ಮೋಡಿ ಮಾಡುವ ಅಕ್ಷರಗಳ ಸಾಲುಗಳನ್ನು ರೂಪಿಸಲು ಪ್ರೇರೇಪಿಸಿತು.



ಒಮ್ಮೆಲೇ... ಪಕ್ಕ ವಾದ್ಯಗಳೊಂದಿಗಿನ ಸಂಗೀತಕ್ಕೆ ನಾಟ್ಯವಾಡುತ್ತಾ ಧರೆಗಿಳಿದ ವರುಣರಾಯ.... ಸುಮಾರು ೧೫ ನಿಮಿಷಗಳ ಕಾಲ ತನ್ಮಯತೆಯಿಂದ ತರು ಲತೆಗಳೊಂದಿಗೆ ಉಲ್ಲಾಸದ ನರ್ತನ ಮಾಡಿ, ಮೋಡಿ ಮಾಡುತ್ತಾ.. ವಸುಂಧರೆಯ ತನು, ಮನವನ್ನು ತನ್ನ ಧಾರೆಯಲ್ಲಿ ರಭಸದಿಂದ ತೋಯಿಸಿದ ಪ್ರಣಯರಾಜ,... ಮುದದಿಂದ ಮೈ ಮರೆತು, ಅರಳಿ, ಬಂದಷ್ಟೇ ವೇಗವಾಗಿ ತನ್ನ ಕೆಲಸ ಮುಗಿಯಿತೆಂದು, ವಸುಂಧರೆಗೆ ವಿದಾಯ ಕೂಡ ಹೇಳದೆ, ಇದ್ದಕ್ಕಿದ್ದಂತೆ ಹೊರಟೇ ಹೋಗಿದ್ದ.... ಮಂದ ಮಂದವಾಗಿ, ಹಿತವಾಗಿ ಹತ್ತಿರದಲ್ಲೇ ಸುಳಿದಾಡಿದ ಮಂದಾನಿಲನ ಸ್ಪರ್ಶದಿಂದ, ಕನಸಿನ ಲೋಕದಲ್ಲಿದ್ದ ಇಳೆ, ಸುಖದಿಂದ ಇನಿಯನ ಅನುರಾಗದಲ್ಲಿ ಲೀನವಾಗಿದ್ದವಳು, ಆಯಾಸದಿಂದಲೂ, ಕಷ್ಟದಿಂದಲೂ , ಮೆಲ್ಲನೆ ಕಣ್ಣು ತೆರೆದಳು....

ಇನಿಯನನ್ನು ಕಾಣದೆ, ಅವಳ ಕಣ್ಗಳು ಪಟಪಟನೆ ರೆಪ್ಪೆ ಬಡಿಯುತ್ತಾ, ಒಮ್ಮೆಲೇ ಸ್ಥಬ್ದವಾಗಿ, ತಬ್ಬಿಬ್ಬಾಗಿ ಸುತ್ತಲೂ ನೋಡತೊಡಗಿದ್ದಳು. ಅದೇ ಸಮಯಕ್ಕೆ ಸರಿಯಾಗಿ ವರುಣನ ಆರ್ಭಟಕ್ಕೆ ಹೆದರಿದ್ದನೋ ಅಥವಾ ಭಕ್ತಿಯ ಅರ್ಪಣೆಯಲ್ಲಿ ತಾನಿರಬಾರದು ಎಂಬಂತೆಯೋ, ಮೋಡಗಳ ತೆಕ್ಕೆಯಲ್ಲಿ ಅಡಗಿದ್ದ ರವಿ... ಮೆಲ್ಲಗೆ ಇಣುಕುತ್ತಾ... ಕತ್ತಲ ಛಾಯೆಯಾವರಿಸಿದ್ದ ವಸುಂಧರೆಗೆ ಬಂಗಾರದ ಕಿರಣಗಳ ಸೋಕಿಸುತ್ತಾ ಹೊರ ಬರತೊಡಗಿದ. ಸೂರ್ಯರಶ್ಮಿಯ ಬಂಗಾರದ ಬಣ್ಣ ತನ್ನನ್ನಾವರಿಸಿದ್ದು ಕಂಡು ಇಳೆ, ಎಚ್ಚೆತ್ತು... ನಾಚಿ ನೀರಾದಾಗ, ಅವಳ ಸುಂದರ ಸುಕೋಮಲ ಕದಪುಗಳು ರಂಗೇರಿದವು. ತನ್ನ ಹಾಗೂ ತನ್ನಿನಿಯ ವರುಣನ ಚೆಲ್ಲಾಟವನ್ನೂ, ಪ್ರೀತಿಯ ಧಾರೆಯನ್ನು ರವಿ ಕಂಡು ಬಿಟ್ಟನೇನೋ ಎಂದು ಇಳೆ ಗಲಿಬಿಲಿಗೊಂಡಾಗ, ಅವಳ ರಂಗೇರಿದ ಕದಪುಗಳೂ, ಅರಳಿದ ತನುವೂ ಸೂರ್ಯರಶ್ಮಿಯ ಬಂಗಾರದ ಬಣ್ಣದೊಡನೆ ನೇರ ಸ್ಪರ್ಧೆಗಿಳಿದಂತಿತ್ತು... ರವಿಯು ತನ್ನ ಹೊಂಗಿರಣಗಳ, ಹೂ ಬಿಸಿಲಿನಲ್ಲಿ ಇಳೆಯನ್ನು ಆವರಿಸಿದಾಗ, ತನ್ನಿನಿಯ ವರುಣನ ಪ್ರೇಮದಾಟವನ್ನು ಕಣ್ಮುಚ್ಚಿ ನೆನೆಯುತ್ತಾ, ಅನುರಾಗದ ಅನುಭೂತಿಯನ್ನು ಸವಿಯುತ್ತಾ, ಸುಖಿಸುತ್ತಾ, ತೇಲಾಡುತ್ತಾ ಮೋಡಗಳ ಹೊನ್ನಿನ ರಥವನ್ನೇರಿ, ಮತ್ತೇರಿದಂತೆ ಇಳೆ ವರುಣನನ್ನು ಹುಡುಕುತ್ತಾ ಹೊರಟಿದ್ದಳು........


ಚಿತ್ರಕೃಪೆ : ಅಂತರ್ಜಾಲ

16 comments:

  1. ಶ್ಯಾಮಲಾ,
    ನೀವು ಪ್ರಕೃತಿಯನ್ನು ಪ್ರೀತಿಸುವ ಭಾವಜೀವಿಯಾಗಿದ್ದೀರಿ. ನಿಸರ್ಗದ ವಿವಿಧ ‘ಮೂಡು’ಗಳು ನಿಮ್ಮಲ್ಲೂ ಸಹ ವಿವಿಧ ಮೂಡುಗಳನ್ನು ಪ್ರೇರೇಪಿಸುತ್ತವೆ. ಅವುಗಳನ್ನು ಕಲಾತ್ಮಕವಾಗಿ ಬರಹದಲ್ಲಿ ಇಳಿಸುವ ಸಾಮರ್ಥ್ಯ ನಿಮಗಿದೆ.ಸುಂದರ ಲೇಖನವನ್ನು ನಮಗೆ ಕೊಟ್ಟಿದ್ದೀರಿ. ಧನ್ಯವಾದಗಳು.

    ReplyDelete
  2. ಶ್ಯಾಮಲಾ ಸುನಾಥಣ್ಣ ನನ್ನ ಮನದ ಮಾತು ಕಿತ್ಕೊಂಡ್ರು ತಮ್ಮ ಲೇಖನಿಯಿಂದ ಹರಿಸಲು...ಹಹಹ...ಬಹಳ ಒಳ್ಳೆಯ ಎಳೆ-ಎಳೆ ಬಿಡಿಸಿದಂತಹ ವರ್ಣನೆ..ಚನ್ನ ಪ್ರಕೃತಿಯ ವಿವಿಧ ಆಯಾಮಗಳನ್ನು ನೋಡೋದು...ಒಳ್ಳೆ ಅನುಭವ ಲೇಖನದ ಮೂಲಕ..

    ReplyDelete
  3. ಇಳೆಗೆ ಮಳೆ ನೀಡುವ ಸಿಂಚನದ ಸೌಂದರ್ಯ ಲಹರಿ ನಿಮ್ಮ ಈ ಲೇಖನ !! ವರ್ಣನೆ ಅದ್ಭುತವಾಗಿದೆ ನಿಮಗೆ ಥ್ಯಾಂಕ್ಸ್.

    ReplyDelete
  4. ಪ್ರಕೃತಿಯಲ್ಲಿನ ಬದಲಾವಣೆ ಹೇಗೆ ನಮ್ಮ ಮೈಮನಗಳಲ್ಲಿ ಹೊಸ ಹೊಸ ಲಹರಿಗಳನ್ನು ಸ್ಫುರಿಸುತ್ತದೆ ಎ೦ಬುದನ್ನು ಸುಲಲಿತವಾಗಿ ಬರಹರೂಪಕ್ಕೆ ಇಳಿಸಿದ್ದೀರಿ. ತು೦ಬಾ ಚೆನ್ನಾಗಿದೆ. ಜೊತೆಗೆ ನಿಜವೋ ಎನಿಸುವ೦ತಹ ಮಳೆಯ ಚಿತ್ರ ನನ್ನ ಮನಸ್ಸನ್ನೂ ಒದ್ದೆಮಾಡಿತು.

    ReplyDelete
  5. ಅಕ್ಕಾ,

    ನನಗೂ ಈ ಮೋಡಕವಿದ ವಾತಾವರಣವೆಂದರಾಗದು. ಒಂದೋ ಧೋ ಎಂದು ಮಳೆಸುರಿಯಬೇಕು ಇಲ್ಲಾ ಚೆನ್ನಾಗಿ ಬಿಸಿಲಿರಬೇಕು. ಈ ತ್ರಿಶಂಕು ಸ್ಥಿತಿ ಎಂದರೆ ಒಂಥರಾ ಅಲರ್ಜಿ :)

    ಪ್ರಕೃತಿಯ ಕುರಿತು ಬಹು ಭಾವಪರವಶರಾಗಿ ಬರೆದಿದ್ದೀರಿ. ಚೆನ್ನಾಗಿದೆ.

    ReplyDelete
  6. ಶ್ಯಾಮಲಾ, ನಿಸರ್ಗದಲ್ಲಿ ಮೋಡಗಳು ಕವಿದಾಗ ಮೂಡುವ ಮೂಡುಗಳನ್ನು ಮುದ್ದಾದ ಅಕ್ಷರಗಳಲ್ಲಿ, ಭಾವನಾಲೋಕದಲ್ಲಿ ಸೆರೆಹಿಡಿದಿದ್ದೀರಿ. ಮಳೆಯ ನೈಜ ಚಿತ್ರವನ್ನೂ ಕೊಟ್ಟಿದ್ದೀರಿ. ಬರಹದ ಓಟ, ಮಳೆರಾಯನ ಕಾಟ... ಹಹ್ಹ... ಎಲ್ಲ ಚೆನ್ನಾಗಿದೆ.

    ಧನ್ಯವಾದಗಳು.

    ReplyDelete
  7. ಶ್ಯಾಮಲ ಮೇಡಂ, ಕವನ-ಸಾಹಿತ್ಯಕ್ಕೆ, ಗದ್ಯಪದ್ಯಗಳಿಗೆ ಮೂಲವಾಗುವುದು ಹಲವೊಮ್ಮೆ ಪ್ರಕೃತಿ, ಚೆನ್ನಾಗಿ ಬರೆದಿದ್ದೀರಿ, ಶರನ್ನವರಾತ್ರಿಯ ಶುಭಾಶಯಗಳು.ಧನ್ಯವಾದ

    ReplyDelete
  8. ಶ್ಯಾಮಲ ಮೇಡಮ್,

    ಮಳೆಯ ವಾತಾವರಣ, ಮೋಡಮುಸುಕಿದ್ದು ಇಣುಕುವ ಸೂರ್ಯ..ತಣ್ಣನೆ ಗಾಳಿ...ಇನ್ನೂ ಏನೇನೋ...ಆದಾಗಲೇ ತಾನೆ ಮನಸ್ಸು ಗರಿಗೆದರುವುದು ನಿಮ್ಮ ಮನಸ್ಸು ಕೂಡ ಹಾಗಾಗಿ ಎಲ್ಲವೂ ಬರಹವಾಗಿಬಿಟ್ಟಿದೆ. ನೀವು ಹಾಕಿರುವ ಮಳೆಯಲ್ಲಿ ನೆನೆಯುತ್ತಿರುವ ಪುಟ್ಟ ಸೇತುವೆ ಭದ್ರಾ ದಂಡೆಯಲ್ಲಿರುವ "ರಿವರ್ ಟರ್ನ್ ಜಂಗಲ್ ಲಾಡ್ಜ್" ನದೆನಿಸುತ್ತದೆ. ನಾನು ಹೋಗಿದ್ದರಿಂದ ಅದರ ನೆನಪಾಯಿತು..

    ReplyDelete
  9. ಶ್ಯಾಮಲ ಮೇಡಮ್,
    ಮಳೆಯ ವಾತಾವರಣದಲ್ಲಿ ಮೋಡಮುಸುಕಿದ ರವಿಯ ವರ್ಣನೆ ತುಂಬಾ ಇಷ್ಟ ಆಯ್ತು......
    ವರ್ಣನೆ, ನಿರೂಪಣೆ ತುಂಬಾ ಚನ್ನಾಗಿದೆ

    ReplyDelete
  10. ಕಾಕಾ
    ಬರಹ ಹಾಕಿದ ಕೆಲವೇ ನಿಮಿಷಗಳಲ್ಲಿ ಓದಿ, ಸುಂದರ ಬರಹವೆಂದು ಮೆಚ್ಚಿದ ನಿಮಗೆ ಧನ್ಯವಾದಗಳು. ಹೌದು ಕಾಕಾ ನಾನು ಪ್ರಕೃತಿಯಲ್ಲಿ ವಿವಿಧ ’ಮೂಡು’ಗಳನ್ನು ನೋಡಲು ಅನುಭೂತಿಸಲು ಇಷ್ಟಪಡುವವಳು..


    ಡಾ.ಆಜಾದ್..
    :-)ಪ್ರಕೃತಿಯ ವಿವಿಧ ಆಯಾಮಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುವುದೂ, ಅದನ್ನು ನಮ್ಮ ಜೀವನಕ್ಕೆ ಹೋಲಿಸಿಕೊಳ್ಳುವುದೂ ನಿಜಕ್ಕೂ ಸುಂದರವಾದ ಭಾವ. ಧನ್ಯವಾದಗಳು.

    ಬಾಲು ಅವರೇ..
    ಸೌಂದರ್ಯ ಲಹರಿ ನಿಮ್ಮ ಈ ಲೇಖನ ಎಂದು ಅತಿಶಯವಾಗಿ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ಪರಾಂಜಪೆ ಸಾರ್
    ಲೇಖನದ ಜೊತೆ ಚಿತ್ರವನ್ನೂ ಮೆಚ್ಚಿದ್ದೀರಿ. Thanks ಅಂತರ್ಜಾಲಕ್ಕೆ, ಚಿತ್ರ ಹಾಕಿದವರಿಗೆ ಸೇರುತ್ತದೆ. ಧನ್ಯವಾದಗಳು

    ತಂಗೀ ತೇಜಸ್ವಿನಿ
    ನನ್ನ ಪ್ರಕಾರ ಪ್ರಕೃತಿಯ ಎಲ್ಲಾ ಬದಲಾವಣೆಗಳನ್ನೂ, ವ್ಯತ್ಯಾಸಗಳನ್ನೂ ನಾವು ಆಳವಾಗಿ ಅನುಭೂತಿಸಬೇಕು. ಒಂದೇ ಒಂದು ಸಾರಿ ಮೋಡ ಕವಿದ ವಾತಾವರಣವೂ ಚೆನ್ನಾಗಿದೆ ಅನ್ಕೊಂಡು ನೋಡಿ.. :-) ನನ್ನಂತೆ ನೀವು ಇಷ್ಟ ಪಡತೊಡಗುತ್ತೀರಿ. ಧನ್ಯವಾದಗಳು ತಂಗೀ...

    ಚಂದ್ರೂ...
    ಮಳೆರಾಯ ನನ್ನ ಮನಸ್ಸನ್ನ ಮುದಗೊಳಿಸಿದ್ದಕ್ಕೇ ಈ ಬರಹ ಹುಟ್ಕೊಂತು. ಪಾಪ ಅವನು ಇಳೆಯನ್ನು ಮೆಚ್ಚಿಸುವ ಭರದಲ್ಲಿದ್ದ, ಹಾಗಾಗಿ ನನಗೆ ಕಾಟ ಅನ್ನಿಸಲಿಲ್ಲ :-) ನನ್ನ ಭಾವನೆಗಳ ಅಕ್ಷರ ರೂಪ ನಿಮಗೆ ಮೆಚ್ಚಿಗೆಯಾಗಿದ್ದಕ್ಕೆ ನನಗೆ ಸಂತಸವಾಯಿತು. ಧನ್ಯವಾದಗಳು...

    ReplyDelete
  11. ಭಟ್ ಸಾರ್
    ಸಾಹಿತ್ಯದ ಎಲ್ಲಾ ಪ್ರಾಕಾರಗಳಿಗೂ ಪ್ರಕೃತಿಯೇ ಸ್ಫೂರ್ತಿಯಾಗುವುದು ಸರ್ವಕಾಲಕ್ಕೂ.. ಅಂತ ನನ್ನ ಅನಿಸಿಕೆ. ನಾವು ಪ್ರಕೃತಿಯೊಳಗೆ ಲೀನವಾಗಿ ಅನುಭೂತಿಸಿದಾಗಷ್ಟೇ ನಮಗೆ ಅದರ ವೈವಿಧ್ಯಮಯ ಸೌಂದರ್ಯದ ಪರಿಚಯ ಆಗೋದು ಅಲ್ವಾ ಸಾರ್... ಧನ್ಯವಾದಗಳು ಮತ್ತು ನಿಮಗೂ ನವರಾತ್ರಿಯ ಶುಭಾಶಯಗಳು.

    ಶಿವು ಸಾರ್
    ಚಿತ್ರ ಅಂತರ್ಜಾಲದ್ದು. ಯಾವ ಸೇತುವೆಯೆಂದು ನನಗೆ ತಿಳಿದಿಲ್ಲ. ನನ್ನ ಬರಹಕ್ಕೆ ಪೂರಕವಾಗಿದೆ ಮತ್ತು ನನ್ನಂತೇ ಎಲ್ಲರಿಗೂ ಇಷ್ಟವಾಗಬಹುದೆಂದು ಹಾಕಿದೆ. ಧನ್ಯವಾದಗಳು

    ಪ್ರವೀಣ ಅವರೇ
    ಮೋಡದಲ್ಲಿ ಮುಚ್ಚಿಟ್ಟುಕೊಂಡ ರವಿಯನ್ನೂ, ಮಳೆಯನ್ನೂ, ಇಳೆಯನ್ನೂ ಮೆಚ್ಚಿದ ನಿಮಗೆ ಧನ್ಯವಾದಗಳು.....

    ReplyDelete
  12. ಪ್ರಕೃತಿಯನ್ನು ಇಷ್ಟ ಪಡುವವರು ಬೇಕಾದಷ್ಟು ಮಂದಿ ಸಿಗ್ತಾರೆ,
    ಆದರೆ ನಿಮ್ಮಂತೆ ಅದನ್ನು ಸುಂದರವಾಗಿ ಅಕ್ಷರದಲ್ಲಿ ಹಿಡಿಯೂದಿದೆಯಲ್ಲ...
    ಅದು ತುಂಬಾ ಕಷ್ಟ.
    ಸುಂದರವಾದ ಗದ್ಯಲೇಖನ..
    ಅಭಿನಂದನೆಗಳು..

    ReplyDelete
  13. ಪ್ರಕೃತಿಯ ವಿವಿಧ ಬದಲಾವಣೆಗಳನ್ನು ಪ್ರೀತಿಸುವ, ಅನುಭೂತಿಸುವ ಹೊಸ ವ್ಯಾಖ್ಯೆಯನ್ನು ನಿಮ್ಮ ಬರವಣಿಗೆಯಲ್ಲಿ ಸು೦ದರವಾಗಿ ನಿರೂಪಿಸಿದ್ದೀರಿ ಶ್ಯಾಮಲಾ. ನಾವು ಪ್ರಕೃತಿಯ ಕೂಸೇ ಆಗಿರುವುದರಿ೦ದ ಈ ಎಲ್ಲ ಭಾವಗಳೂ ಸಹಜವಾಗಿ, ಸುಲಲಿತವಾಗಿ ಮತ್ತು ನೈಜವಾಗಿ ಮೂಡಿಬ೦ದಿದೆ. ಎಲ್ಲಕ್ಕೂ ಮಿಗಿಲಾಗಿ ಭಾವನೆಗಳನ್ನು ಮನಮುಟ್ಟುವ೦ತೆ ನಿರೂಪಿಸುವ ಶೈಲಿ ನಿಮ್ಮ ಬರಹದ ಹೈಲೈಟ್!

    ಶುಭಾಶಯಗಳು
    ಅನ೦ತ್

    ReplyDelete
  14. ವೆಂಕಟಕೃಷ್ಣ ಅವರಿಗೆ ನನ್ನ ಅಂತರಂಗದ ಮಾತುಗಳ ಓದಲು ಸ್ವಾಗತ. ನನ್ನ ಬರಹವನ್ನು ತುಂಬಾ ಮೆಚ್ಚಿದ್ದೀರಿ, ನಿಜಕ್ಕೂ ಸಂತಸವಾಯಿತು. ಧನ್ಯವಾದಗಳು

    ReplyDelete
  15. ಪ್ರಕೃತಿಯನ್ನು ನಾನು ಅನುಭೂತಿಸಿರುವ ರೀತಿ ನಿಮಗೆ ತುಂಬಾ ಇಷ್ಟವಾದಂತಿದೆ. ಹೌದು ನಿಮ್ಮ ಮಾತು ನಾನೂ ಒಪ್ಪುತ್ತೇನೆ ಅನಂತ್ ಸಾರ್... ನಾವೆಲ್ಲರೂ ಪ್ರಕೃತಿಯ ಮಕ್ಕಳೇ.. ಭಾವನೆಗಳನ್ನು ಮನಮುಟ್ಟುವಂತೆ ನಿರೂಪಿಸುತ್ತೇನೆಂದೂ ಮೆಚ್ಚಕೊಂಡಿದ್ದೀರಿ... :-) ಧನ್ಯವಾದಗಳು ಸಾರ್..

    ReplyDelete
  16. prakrutiyannu taavu anubhutisuva mattu anubhavisuva kriye taavu prakrutipriya bhaavajeevi ennuvadannu etti torisutte. chendada mana hidididuva bhaashaeayall sogasaada varnane.

    ReplyDelete