Tuesday, March 9, 2010

ಸಂಬಂಧಗಳ ಸುಳಿಯಲ್ಲಿ...

ನಾವು ಕೊಲ್ಕತ್ತಾದಲ್ಲಿದ್ದಾಗ ಪ್ರತೀ ವರ್ಷ ಊರಿಗೆ ಬರುತ್ತಿದ್ದೆವು.... ೩೬ ಘಂಟೆಗಳು ರೈಲಿನಲ್ಲಿ ಪಯಣಿಸಿ ಬರುವಾಗ ಪ್ರತೀ ಬಾರಿಯೂ ಹೊಸ ಹೊಸ ಪರಿಚಯಗಳಾಗುತ್ತಿತ್ತು. ಹಾಗೇ ಒಂದು ಸಲ ನಾವು ವಾಪಸ್ಸು ಹೋಗುವಾಗ, ಮದ್ರಾಸಿನಲ್ಲಿ ಕೋರಮಂಡಲ್ ಎಕ್ಸ್ ಪ್ರೆಸ್ಸ್ ಹತ್ತಿ ಕೆಲವು ಘಂಟೆಗಳೊಳಗೆ ನಾನು ರೈಲು ಹತ್ತುವ ಮೊದಲು ನನ್ನ ಕೈಯಲ್ಲಿಟ್ಟುಕೊಂಡಿದ್ದ, ೨೫೦ ರೂಗಳನ್ನು ಕಳೆದುಕೊಂಡು ಬಿಟ್ಟಿದ್ದೆ. ನಾನು ಕುಳಿತಿದ್ದ ಆಸನದ ಕೆಳಗೆ, ಸಾಮಾನುಗಳನ್ನು ಸರಿಸಿ, ಆತಂಕದಿಂದ ಹುಡುಕುತ್ತಿದ್ದಾಗ, ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಒಂದು ಸಂಸಾರ (ತಮಿಳು ಮಾತನಾಡುತ್ತಿದ್ದರು - ಗಂಡ, ಹೆಂಡತಿ ಮತ್ತು ಎರಡು ಗಂಡು ಹುಡುಗರು), ಕರಿದ ಚಕ್ಕುಲಿಯಂತದೇನೋ ತಿನ್ನುತ್ತಾ, ನನ್ನನ್ನೇ ನೋಡುತ್ತಿದ್ದರು. ಕೊನೆಗೆ ಕಣ್ಣಲ್ಲಿ ನೀರು ತುಂಬಿ, ನಾನು ನಿರಾಸೆಯಿಂದ ಎದ್ದಾಗ, ಆ ಮಹಿಳೆ (ಮಾಮಿ) ನನ್ನನ್ನು "ಎನ್ನಮ್ಮಾ ತೇಡರೆ"? ಎಂದು ಕೇಳಿದರು.... ಸರಿ ನನ್ನ ಗಂಗಾ-ಕಾವೇರಿ ಪ್ರವಾಹ ಹರಿಯಲು ಯಾರಾದರೊಬ್ಬರ ಸಾಂತ್ವನ ನುಡಿ ಬೇಕಾಗಿತ್ತು.... ನಾನು ಕಥೆಯೆಲ್ಲಾ ಹೇಳಿದೆ. ಅವರು ನನ್ನನ್ನು ಮಾತನಾಡಿಸುತ್ತಾ, ನನ್ನ ದು:ಖ ಮರೆಸುವ ಪ್ರಯತ್ನ ಮಾಡುತ್ತಿದ್ದರು. ಮಾತಿನ ಮಧ್ಯದಲ್ಲಿ ನಾನು ಸೀಮೆ ಎಣ್ಣೆ ಸ್ಟೋವಿನಲ್ಲಿ ಅಡುಗೆ, ತಿಂಡಿ ಎಲ್ಲಾ ಮಾಡಿ, ಕೆಲಸಕ್ಕೆ ಹೋಗುತ್ತೇನೆಂಬ ವಿಷಯ ಕೇಳಿ, ಅವರು ತುಂಬಾ ಮರುಗಿದರು. ಆ ಮಾಮಿ ರಿಸರ್ವ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಮನೆ ವಿಳಾಸ ಕೊಟ್ಟು ಕರೆದರು. ಊರಿಗೆ ಹಿಂತಿರುಗಿ ನಾನು ಅವರ ಕರೆ ಮರೆತೇ ಬಿಟ್ಟಿದ್ದೆ. ಒಂದು ದಿನ ಲೇಕ್ ಮಾರ್ಕೆಟ್ ನಲ್ಲಿ ಮಾಮಿಯ ಪತಿಯ ಭೇಟಿಯಾಯಿತು ಮತ್ತು ಅವರು ನಮ್ಮನ್ನು ಬಲವಂತದಿಂದ ಮನೆಗೆ ಕರೆದೊಯ್ದರು. ಮಾಮಿ ತನ್ನ ಹತ್ತಿರ ಇದ್ದ ಒಂದು ಗ್ಯಾಸ್ ಸಿಲಿಂಡರ್ ಕೂಡ ಕೊಟ್ಟರು. ಕೆಲಸಕ್ಕೆ ಹೋಗುವ ಹುಡುಗಿ, ಎಷ್ಟು ಕಷ್ಟ ಪಡುತ್ತೀ ಎಂದು ಅಕ್ಕರೆ ತೋರಿದರು.... ಅಲ್ಲಿಂದ ಸುಮಾರು ೫ ವರ್ಷಗಳ ಕಾಲ ನಾನು ಬೇರೆ ಹೊಸ ಗ್ಯಾಸ್ ಸಂಪರ್ಕ ತೆಗೆದುಕೊಳ್ಳದೆಲೇ (ರೇಷನ್ ಕಾರ್ಡ್ ಇಲ್ಲದೆ ಹೊಸ ಸಂಪರ್ಕ ಕೊಡುತ್ತಿರಲಿಲ್ಲ ಮತ್ತು ನಮಗೆ ಕೊಲ್ಕತ್ತದ ರೇಷನ್ ಕಾರ್ಡ್ ಇರಲಿಲ್ಲ) ಅವರ ಆ ಒಂದು ಸಿಲಿಂಡರ್ ನ್ನೇ ಇಟ್ಟುಕೊಂಡು, ಗ್ಯಾಸ್ ತರಿಸಿಕೊಂಡು ಉಪಯೋಗಿಸುತ್ತಿದ್ದೆ. ಹೀಗೆ ರೈಲಿನಲ್ಲಿ ಬರಿಯ ಕೆಲವು ಘಂಟೆಗಳಲ್ಲಿ ಆದ ಪರಿಚಯ, ಸ್ನೇಹ ಮುಂದೆ ಒಂದು ಆಪ್ತ ಸಂಬಂಧಕ್ಕೇ ತಳಪಾಯ ಹಾಕಿತ್ತು. ಅವರು ನನ್ನ ಮಗ ಹುಟ್ಟಿದಾಗ ಕೂಡ ನನಗೆ ತುಂಬಾ ಸಹಾಯ ಮಾಡಿದ್ದರು. ಇದನ್ನು ಮೊದಲು ಬರಿಯ ಸ್ನೇಹವೆಂದೇ ಅಂದುಕೊಂಡಿದ್ದರೂ ಕೂಡ ಆತ್ಮೀಯತೆ ಬೆಳೆದಂತೆ ಸ್ನೇಹ ಯಾವುದೋ ಒಂದು ಅವಿನಾಭಾವ ಸಂಬಂಧ ಕಲ್ಪಿಸಿಬಿಟ್ಟಿತ್ತು. ಈ ಆತ್ಮೀಯ ಬಂಧವು ಸ್ನೇಹವೇ ಆದರೂ, ಇದನ್ನು ಸಂಬಂಧದ ಚೌಕಟ್ಟಿಲ್ಲದೆ ನೋಡಲು ನನಗೆ ಸಾಧ್ಯವಾಗಲಿಲ್ಲ.... ಅವರು ನನಗೆ ತಾಯಿಯಂತೆಯೂ, ಹಿರಿಯಕ್ಕನಂತೆಯೂ ಪ್ರೀತಿ ತೋರಿದರು.... ಇಲ್ಲಿ ವಯಸ್ಸಿನ ಅಂತರವಿಲ್ಲದೆ ಶುದ್ಧ ಸ್ನೇಹವಿತ್ತು ಮತ್ತು ಆ ಸ್ನೇಹದ ಚೌಕಟ್ಟಿಗೆ ಪ್ರೀತಿಯ ಬಂಧನವಿತ್ತು, ಗೌರವವಿತ್ತು.....

ಮತ್ತೊಂದು ಪ್ರಸಂಗ ಮತ್ತು ನನ್ನ ಮತ್ತಿಬ್ಬರು ಬಸ್ ಸ್ನೇಹಿತರ ವಿಚಾರ ಹೇಳದಿದ್ದರೆ ಹೇಗೆ... ನಾನಾಗ ಗರ್ಭಿಣಿಯಾಗಿದ್ದೆ. ನನ್ನ ಕಛೇರಿ ನಮ್ಮ ಮನೆಯಿಂದ ಸುಮಾರು ೫ ಕಿ.ಮೀ ದೂರ ಇತ್ತು. ಮನೆಯಿಂದ ೫ ನಿಮಿಷದ ನಡಿಗೆ ಬಸ್ ನಿಲ್ದಾಣಕ್ಕೆ. ನಾನು ಪಾರ್ಕ್ ಸ್ಟ್ರೀಟ್ ಎಂಬ ಸ್ಥಳಕ್ಕೆ ಹೋಗ ಬೇಕಾಗಿತ್ತು, ದಿನವೂ.. ಮನೆ ಹತ್ತಿರದಿಂದ (ಲೇಕ್ ರೋಡ್ ಸ್ಟಾಪ್) ಒಂದು ಮಿನಿ ಬಸ್ ನೇರವಾಗಿ ನನ್ನನ್ನು ನನ್ನ ಕಛೇರಿಯ ಮುಂದೆ ಇಳಿಸುತ್ತಿತ್ತು.... ಎಷ್ಟೇ ಬೇಗ ಎದ್ದು ಒದ್ದಾಡಿದರೂ ನನಗೆ ೧೦ ನಿಮಿಷ ಮುಂಚೆ ಮನೆ ಬಿಡುವುದಾಗುತ್ತಿರಲಿಲ್ಲ ಮತ್ತು ದಿನವೂ ನಾನು ಬಸ್ ಸ್ಟಾಪ್ ತಲುಪುವ ವೇಳೆಗೆ, ಬಸ್ ತುಂಬಿರುತ್ತಿತ್ತು.... ನಾನು ನಿಂತೇ ೫ ಕಿ.ಮೀ ಪಯಣಿಸಬೇಕಾಗಿತ್ತು.... ಕೆಲವು ದಿನಗಳು ಇದನ್ನು ಗಮನಿಸುತ್ತಿದ್ದ ಒಬ್ಬರು ತಮಿಳು, ಮಧ್ಯವಯಸ್ಕರು, ನನ್ನನ್ನು ಕರೆದು ತಾವು ಕುಳಿತಿದ್ದ ಸೀಟು ಬಿಟ್ಟುಕೊಟ್ಟರು. ನಾನು ಸಂಕೋಚದಿಂದಲೇ ಕುಳಿತೆ.... ಅದೇ ಶುರು ನೋಡಿ... ಅಲ್ಲಿಂದ ಒಂದು ಶುಭ್ರ, ಸಪ್ರೇಮ ಸ್ನೇಹ ಆ ’ಮಾಮ’ನಿಗೂ ನನಗೂ ಏರ್ಪಟ್ಟಿತು. ಕೊಂಚ ಬೇಗ ಬರೋಕೇನಮ್ಮಾ ಎಂದು ದಿನವೂ ಅಕ್ಕರೆಯಿಂದ ರೇಗುವರು.... ಒಂದು ಸೀಟು ನನಗಾಗಿ ಕಾದಿರಿಸಿರುತ್ತಿದ್ದರು. ಇಲ್ಲದಿದ್ದರೆ ಆ ದಿನ ಅವರ ಪ್ರಯಾಣ ನಿಂತೇ ಆಗುತ್ತಿತ್ತು... ಕೆಲವು ದಿನಗಳ ನಂತರ ಇವರ ಜೊತೆ ಇನ್ನೊಬ್ಬರು ’ಮಾಮ’ ಕೂಡ ಸೇರಿದರು. ಇಬ್ಬರೂ ಸೇರಿ ಮೂವರು ಕುಳಿತುಕೊಳ್ಳುವ ಒಂದು ಸೀಟಿನಲ್ಲಿ ಜಾಗ ಹಿಡಿದು ಕುಳಿತಿರುತ್ತಿದ್ದರು.... ನಾನು ಮಹಾರಾಣಿಯಂತೆ ಬಸ್ ಹೊರಟ ನಂತರ ಬಂದು ಹತ್ತಿ ಕಾಯ್ದಿಟ್ಟ ಜಾಗದಲ್ಲಿ ಕುಳಿತು, ಅವರೊಡನೆ ಹರಟುತ್ತಾ ಪಯಣಿಸುತ್ತಿದ್ದೆ.... ಕೊನೆ ಕೊನೆಗೆ ನನಗಾಗಿ ಅವರು ಮೊದಲ ಬಸ್ ಬಿಟ್ಟು, ಎರಡನೆ ಬಸ್ಸಿಗಾಗಿ ಕಾಯುತ್ತಾ ನಿಲ್ಲುತ್ತಿದ್ದರು..... ಇದೂ ನಿಷ್ಕಲ್ಮಶವಾದ ಸ್ನೇಹವೇ... ಆದರೆ ಸ್ನೇಹದಲ್ಲಿ ಎಲ್ಲೂ ಬರೆಯದ, ಮೇಲ್ಮುಖಕ್ಕೆ ಕಾಣಿಸದ, ಒಂದು ಅಜ್ಞಾತವಾದ ಸಂಬಂಧವಿತ್ತು. ಅವರು ನನ್ನನ್ನು ತಮ್ಮ ತಂಗಿಯಾಗಿ, ಮಗಳಾಗಿ ಪ್ರೀತಿಸಿದರು, ಅಕ್ಕರೆ ತೋರಿದರು... ಯಾವುದೇ ರಕ್ತ ಸಂಬಂಧವಲ್ಲವೆಂದರೂ ಅಲ್ಲೊಂದು ಸ್ನೇಹ ಸಂಬಂಧವಿತ್ತು.... ಈಗ ಅವರು ಎಲ್ಲಿದ್ದಾರೋ, ಏನೋ ನನಗೆ ಗೊತ್ತಿಲ್ಲ... ಆದರೆ ಅವರು ತೋರಿದ ಆ ಅಕ್ಕರೆ, ಆ ನಿಷ್ಕಲ್ಮಶವಾದ ಸ್ನೇಹ ನಾನೆಂದೂ ಮರೆಯಲಾಗುವುದೇ ಇಲ್ಲ.....

ಇದೆಲ್ಲಾ ಸಂಸಾರದ, ಬಳಗದವರಲ್ಲದವರ ಜೊತೆಗಿನ ಸ್ನೇಹ ಸಂಬಂಧಗಳಾದವು... ಆದರೆ ನಮ್ಮದೇ ಬಂಧು ಬಳಗಗಳಲ್ಲಿ... ಪುಟ್ಟ ಸಂಸಾರದಲ್ಲೇ ಸ್ನೇಹವಿದೆಯಲ್ಲವೇ..? ಎಲ್ಲಕಿಂತ ಮೊದಲು ತಾಯಿ-ಮಗುವಿನದು... ಗರ್ಭದಲ್ಲೇ ಹೇಗೆ ತಾಯಿ ತನ್ನ ಮಗುವಿನ ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಾಳೋ... ಹಾಗೇ ಅದರ ಜೊತೆಗೆ ಸ್ನೇಹ ಸಂಬಂಧವೂ ಬೆಳೆದುಬಿಟ್ಟಿರುತ್ತೆ.... ಮಗು ಹುಟ್ಟಿದಾಗಿನಿಂದಲೂ ತಾಯಿಯ ಸ್ಪರ್ಶವನ್ನು ಗುರುತಿಸುವಂತೆಯೇ, ತಾಯಿಯ ಮುಗುಳುನಗುವನ್ನೂ ಗುರುತಿಸುತ್ತದೆ. ನಗುವೇ ಸ್ನೇಹದ ಹಾಡು....ಅಲ್ಲವೇ? ಮಗು ಬೆಳೆಯುತ್ತಾ ಬಂದಂತೆ ಜೊತೆಗೇ ಬೆಳೆಯುವ ಪ್ರೀತಿಯೂ, ಬಂಧನವೂ ಸ್ನೇಹವೇ ಆಗಿರುತ್ತದೆ. ಇಲ್ಲಿ ತಾಯಿ ತನ್ನ ಮಗುವನ್ನು ತಾನು ಪೂಜಿಸುವ, ಆರಾಧಿಸುವ ಭಗವಂತನಂತೆ ಕಾಣುತ್ತಾಳೆ... ಮಕ್ಕಳು ದೊಡ್ಡವರಾದಂತೆಲ್ಲಾ ತಾಯಿಯಲ್ಲಿ ತನ್ನ ಅತ್ಯಂತ ಆಪ್ತ, ನಿಕಟ ಸ್ನೇಹಿತರನ್ನೇ ಕಾಣುತ್ತಾರೆ..... ತನ್ನ ಸ್ನೇಹಿತರ ಜೊತೆಗಿನ ಆಟ, ಶಾಲೆಯಲ್ಲಿನ ಪಾಠ, ತನ್ನ ಬೇಕು ಬೇಡವುಗಳೆಲ್ಲಕ್ಕೂ ತಾಯಿಯನ್ನೇ ಆಶ್ರಯಿಸುತ್ತಾ...ಅತ್ಯಂತ ನಿಕಟವಾದ ಸ್ನೇಹ ಬಂಧನ ಬೆಳೆಸಿಕೊಂಡು ಬಿಟ್ಟಿರುತ್ತೆ.... ಮಕ್ಕಳ ಬಾಲ ಲೀಲೆಗಳಲ್ಲಿ ತಾಯಿ ತನ್ನ ಬಾಲ್ಯವನ್ನೂ, ತಾರುಣ್ಯದಲ್ಲಿ ತನ್ನ ಭಾವನೆಗಳ ಏರುಪೇರಿನ ನೆರಳುಗಳನ್ನೂ ಕಾಣುತ್ತಾಳೆ.... ಎಲ್ಲಿ ಈ ಸಸ್ನೇಹ ಸಂಬಂಧವಿರುತ್ತದೋ ಅಲ್ಲಿ, ತಾಯಿ ಮಕ್ಕಳ ಸಂಬಂಧ ಗಟ್ಟಿಯಾದ ಅಡಿಪಾಯದ ಮೇಲೆ ಸುಭದ್ರವಾದ ಕಟ್ಟಡವಾಗಿರುತ್ತದೆ....ಹಾಗೇ ತಂದೆ-ಮಕ್ಕಳ ನಡುವೆ ಕೂಡ ಆರೋಗ್ಯಕರ, ನಿಕಟ ಸ್ನೇಹವಿಲ್ಲದಿದ್ದರೆ, ಸಂಬಂಧ ಗಟ್ಟಿಯಾಗುವುದಿಲ್ಲ.....

ಹೀಗೇ ಈ ಸ್ನೇಹ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಒಳ್ಳೆಯ ಸ್ನೇಹಿತರಾಗುವುದರ ಮೂಲಕ, ಅತ್ಯಂತ ಆತ್ಮೀಯವಾಗುತ್ತದೆ. ಅಣ್ಣ-ತಮ್ಮ, ಅಕ್ಕ-ತಂಗಿಯರ ಮಧ್ಯೆ ಪ್ರೀತಿಯಿಲ್ಲದಿರುವುದಿಲ್ಲ, ಆದರೆ ಎಲ್ಲಿ ಸ್ನೇಹವಿರುತ್ತದೋ ಅಲ್ಲಿ, ಸಂಬಂಧ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಅಕ್ಕ ತನ್ನ ತಮ್ಮ, ತಂಗಿಯರ ವ್ಯಕ್ತಿತ್ವ ವಿಕಾಸಕ್ಕೂ, ಬೆಳವಣಿಗೆಗೂ ಯಾವಾಗಲೂ ಆಪ್ತ ಸೂಚನೆ, ಸಲಹೆಗಳನ್ನು ಕೊಟ್ಟು, ಸ್ನೇಹಿತೆಯಂತಿರಬಹುದು. ಇಲ್ಲಿ ಸಂಬಂಧಕ್ಕಿಂತ ಸ್ನೇಹ ಹೆಚ್ಚು ಮುಖ್ಯವಾಗುತ್ತದೆ..... ಈ ಥರಹದ ಸ್ನೇಹ ಸಂಬಂಧಗಳಲ್ಲಿ, ಅಣ್ಣ-ತಂಗಿಯರ ಸ್ನೇಹ ಮಾತ್ರ ಅತ್ಯಂತ ಅಪೂರ್ವವಾದದ್ದು... ಏಕೆಂದರೆ ತಂಗಿ ತನ್ನ ಅಣ್ಣನಲ್ಲಿ ಬರಿಯ ಅಣ್ಣ ಮಾತ್ರವಲ್ಲ, ತಂದೆ, ಮಾರ್ಗದರ್ಶಕ, ಅಧ್ಯಾಪಕ, ಆತ್ಮೀಯ ಮತ್ತು ತನ್ನ ಸಂದೇಹಗಳನ್ನು ನಿವಾರಿಸುವ ಒಬ್ಬ ಆರೋಗ್ಯಕರ ವ್ಯಕ್ತಿತ್ವವುಳ್ಳ, ಆದರ್ಶ ಭಾವನೆಗಳುಳ್ಳ ವ್ಯಕ್ತಿಯೆಂದು ನಂಬಿರುತ್ತಾಳೆ.... ಅಕ್ಕ ತಮ್ಮನ ಪ್ರೀತಿಯಲ್ಲಿ, ಸಂಬಂಧದಲ್ಲಿ ಒಂಥರಾ ತಾಯಿ-ಮಗುವಿನ ಛಾಯೆ ಮೇಲ್ನೋಟಕ್ಕೇ ಕಂಡ ಬರುತ್ತದೆ, ಆದರೆ ಅಣ್ಣ-ತಂಗಿಯರ ಸಂಬಂಧದಲ್ಲಿ ಅದು ಬೇರೆಯೇ ಇರುತ್ತದೆ. ಅಣ್ಣ-ತಂಗಿಯರ ಸಂಬಂಧ ಮಾತ್ರ ಅತ್ಯಂತ ಸೂಕ್ಷ್ಮವಾದ, ಮಧುರವಾದ, ಅನುರಾಗದಿಂದ ಕೂಡಿದ, ಎಲ್ಲಾ ಸಂಬಂಧಗಳಿಗೂ ಮೀರಿದ ಸ್ನೇಹದ ಸಂಬಂಧ....

ಕೊನೆಯದಾಗಿ ಸಂಬಂಧಗಳಲ್ಲಿಯ ಸ್ನೇಹದ ಮಾತು ಎಂದರೆ ಗಂಡ-ಹೆಂಡತಿಯರ ನಡುವಿನದು.... ಹಿರಿಯರೊಪ್ಪಿ ನಿಶ್ಚಯಿಸಿದ ಮದುವೆಯೋ, ಪ್ರೇಮ ವಿವಾಹವೋ.. ಮದುವೆಯ ವಿಧಾನ ಅಥವಾ ರೀತಿ ಇಲ್ಲಿ ಮುಖ್ಯವಾಗುವುದಿಲ್ಲ. ಮದುವೆಯ ನಂತರದ ಗಂಡ-ಹೆಂಡತಿಯರ ಸಂಬಂಧ ಬೆಸೆಯುವ ಸ್ನೇಹ ಮುಖ್ಯವಾಗುತ್ತದೆ. ಎಲ್ಲದಕ್ಕಿಂತ ಮೊದಲು ಇಬ್ಬರ ನಡುವೆ ಸ್ನೇಹ ತಂತು ಬೆಸೆಯಲೇಬೇಕು. ಒಬ್ಬರಲ್ಲಿ ಒಬ್ಬರು ತಮ್ಮ ಆತ್ಮೀಯ ಸ್ನೇಹಿತರನ್ನು ಕಂಡಾಗಷ್ಟೇ... ಸಂಬಂಧ ಹೆಚ್ಚು ಅರ್ಥಪೂರ್ಣವಾಗುವುದು. ಯಾವುದೇ ವಿಷಯಗಳ ಬಗ್ಗೆಯೂ ಕಟ್ಟುಪಾಡಿಲ್ಲದೇ ಚರ್ಚಿಸಬಹುದಾದರೆ ಅದು ಅಣ್ಣ-ತಂಗಿಯರ ಮಧ್ಯೆ ಮತ್ತು ಗಂಡ-ಹೆಂಡತಿಯರ ಮಧ್ಯೆ ಮಾತ್ರ.... ಹೆಣ್ಣು ತನ್ನ ಎಲ್ಲಾ ಬೇಕು ಬೇಡಗಳ ನಿಗಾ ವಹಿಸುವ, ತನ್ನ ಭಾವನೆಗಳನ್ನು ಗೌರವಿಸುವಂತಹ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಬಯಸುತ್ತಾಳೆ. ತನ್ನ ಸಂಗಾತಿ ಸಂದರ್ಭಗಳಿಗೆ ತಕ್ಕಂತೆ ತನ್ನನ್ನು, ಅಣ್ಣನಂತೆ ಅರ್ಥ ಮಾಡಿಕೊಂಡು - ತಂದೆಯಂತೆ ಸಂತೈಸಿ, ಗೆಳೆಯನಂತೆ ಚರ್ಚಿಸಬೇಕೆಂದು, ಬಯಸುತ್ತಾಳೆ... ಹೆಣ್ಣು ಮಾತ್ರ ತನ್ನ ಗಂಡನಿಗೆ, ಅಕ್ಕನಾಗಿ, ತಾಯಿಯಾಗಿ, ಗೆಳತಿಯಾಗಿ ವಿಧವಿಧ ಪಾತ್ರಗಳನ್ನು ನಿಭಾಯಿಸಬೇಕಾಗಿಲ್ಲ... ಗಂಡು ಕೂಡ ಹಾಗೇ ಮಾಡಿದಾಗಷ್ಟೇ ಸಂಬಂಧ ಕೊನೆತನಕ ಉಳಿಯುವುದು. ಸಂಬಂಧ ಉಳಿಯಬೇಕೆಂದರೆ ಎಲ್ಲಕ್ಕಿಂತ ಮೊದಲು ಇಬ್ಬರಲ್ಲೂ ಸ್ವಾರ್ಥ ರಹಿತ, ಯಾವುದೇ ನಿರೀಕ್ಷಣೆಯಿಲ್ಲದ ಪವಿತ್ರ ಸ್ನೇಹ ಏರ್ಪಡಬೇಕು ಮತ್ತು ಈ ಸ್ನೇಹದ ಭದ್ರ ಕೋಟೆಯ ಒಳಗೆ, ಹೊಸ ಜೀವನದ ಸುಂದರ ಅರಮನೆ ಕಟ್ಟಬೇಕು. ಆ ಅರಮನೆಯ ತೋಟದಲ್ಲಿ ಪ್ರೇಮದ ಹೂಗಳು ಅರಳಬೇಕು....

ಕೆಲವು ದಿನಗಳ ಹಿಂದೆ ನಾನು " ಸಿಂಪಥಿ ಮತ್ತು ಎಂಫಥಿ "ಯ ಮಧ್ಯದ ತೆಳುವಾದ ಗೆರೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೆ ... ನಿಘಂಟಿನ ಅರ್ಥಗಳನ್ನು ಬಿಟ್ಟು, ಇನ್ನೂ ಸ್ವಲ್ಪ ಆಳವಾಗಿ ಯೋಚಿಸಿದಾಗ, ನನಗೆ ನಿಜಕ್ಕೂ ಅಚ್ಚರಿಯಾಗಿತ್ತು. ಅಬ್ಬಾ..!! ನನ್ನ ಜೀವನದಲ್ಲೇ ಇದರ ಅನುಭೂತಿ ಎಷ್ಟು ಚೆನ್ನಾಗಿ ಆಗಿದೆಯೆಂದು.... ಮಧುರ ಸ್ನೇಹದ ಸಂಬಂಧಗಳೇರ್ಪಟ್ಟಾಗಲೇ ನಮಗೆ ಎಂಫಥಿಯ ನಿಜವಾದ ಅರ್ಥದ ಅನುಭವವಾಗುವುದು... ಸಿಂಪಥಿ ಮತ್ತು ಎಂಫಥಿಯ ಜೊತೆ ಇನ್ನೊಂದು ಶಬ್ದವನ್ನೂ ಜೋಡಿಸಬಹುದು ಅದು... "ಕಂಪ್ಯಾಶನ್".......ಮೂಲ ಅರ್ಥ ನೋಡಿದರೆ ಒಂದೇ ಅನ್ನಿಸುವುದಾದರೂ. ಇದನ್ನು ನಾವು ಮಾನವೀಯತೆಯ ಜೊತೆ ಹೆಚ್ಚು ಜೋಡಿಸಬಹುದು... ಆಂಗ್ಲದ ಒಂದು ಮಾತು... "Give compassion and you will receive understanding....Give unconditional love and you will become infinite".... ಅದರರ್ಥವನ್ನು ವಿಶ್ಲೇಷಿಸಿದಾಗ ಮಾನವೀಯತೆಯ ಮತ್ತು ಸ್ನೇಹದ ಹಸ್ತವನ್ನು ನಾವು ಮತ್ತೊಬ್ಬರೆಡೆ ಚಾಚಿದಾಗ, ನಮಗೆ ಬದುಕಿನ ನಿಜವಾದ ಅರ್ಥ ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ... ಹಾಗೂ ಯಾವುದೇ ನಿರೀಕ್ಷಣೆಯಿಲ್ಲದ, ಕಟ್ಟುಪಾಡುಗಳಿಲ್ಲದ, ಮುಕ್ತವಾದ ಪ್ರೀತಿಯನ್ನು ಸ್ನೇಹದೊಂದಿಗೆ ಬೆರೆಸಿ ಎಲ್ಲರಿಗೂ ಹಂಚಿದರೆ, ನಾವು ಈ ಬ್ರಹ್ಮಾಂಡದಲ್ಲಿರುವ ಪ್ರಚಂಡ ಶಕ್ತಿಯೊಂದಿಗೆ ವಿಲೀನಗೊಳ್ಳುತ್ತೇವೆ.... ಅಂದರೆ ಪ್ರೀತಿಯಂತೆ ನಾವು ಸ್ನೇಹವನ್ನೂ ಪವಿತ್ರ (divine) ಎನ್ನಬಹುದು... ಇಷ್ಟೆಲ್ಲ ಸ್ನೇಹದ ವಿಚಾರ ನಾನು ಬರಿಯ ಮನುಷ್ಯ ಸಂಬಂಧಗಳಿಗೆ ಹೇಳಿದೆ... ಆದರೆ ಇಲ್ಲಿ ನನ್ನ ಮಾತುಗಳನ್ನು ಮುಗಿಸುವ ಮುನ್ನ...

"ನಮ್ಮ ನಿಮ್ಮಗಳ ನಡುವಿನದಲ್ಲದ, ನಾವು ನಂಬುವ ಭಗವಂತನ ಜೊತೆಗಿನ ನಮ್ಮ ಅಂತರಂಗದ ಸಂಬಂಧವನ್ನೂ ನಾವು ಸ್ನೇಹವೆಂದೇ ಕರೆಯುತ್ತೇವಲ್ಲವೇ....
ನಮ್ಮ ಆರಾಧ್ಯ ದೈವವೇ ನಮ್ಮ ಅಂತರಂಗದ ಹಾಗೂ ಅತ್ಯಂತ ನಿಕಟ ಸ್ನೇಹಿತನಲ್ಲವೇ....
ನಾವು ನಮ್ಮ ದೈವದ ಜೊತೆಗೆ ತೋರುವ ನಮ್ಮ ಪ್ರೀತಿ, ಭಕ್ತಿ, ಅನುಬಂಧ ಎಲ್ಲವೂ ಸ್ನೇಹ ಮಯವೇ ಅಲ್ಲವೇ...
ನಾವು ಮೆಚ್ಚಿ ಆರಾಧಿಸುವ ಭಗವಂತನಿಂದ ನಾವು unconditional ಪ್ರೀತಿ/ಸ್ನೇಹ ಪಡೆದುಕೊಳ್ಳುತ್ತಿರುವಾಗ, ನಾವೂ ಸ್ನೇಹಕ್ಕೆ ಪುಟ್ಟ ಸಂಬಂಧದ ಎಳೆ ಬೆರೆಸಿ, ಸ್ನೇಹವನ್ನು ವಿಶ್ವವ್ಯಾಪಿಯಾಗಿಸಬೇಕೆಂಬುದೇ ನನ್ನ ಅಭಿಪ್ರಾಯ....."

ರಕ್ತ ಸಂಬಂಧಗಳಲ್ಲೇ ನಾವು ಸ್ನೇಹವನ್ನು ಅನುಮೋದಿಸುವಾಗ.... ಸ್ನೇಹಿತರ ಜೊತೆಗೆ ಸಂಬಂಧ ಗುರುತಿಸಿಕೊಳ್ಳುವುದರಲ್ಲಿ ನನಗೆ ಯಾವ ತಪ್ಪೂ ಕಾಣುವುದಿಲ್ಲ. ಸ್ನೇಹಿತರ ಜೊತೆಗೂ ನಾವು ಭಾವನಾತ್ಮಕವಾಗಿ ಸಂಬಂಧ ಕಲ್ಪಿಸಿಕೊಂಡಾಗಲೇ ಆತ್ಮೀಯತೆ ಹೆಚ್ಚುವುದು ಮತ್ತು ಮುಕ್ತವಾಗಿ ಚರ್ಚಿಸಲು ಅವಕಾಶವಾಗುವುದು...... ರಕ್ತ ಸಂಬಂಧಗಳಲ್ಲಿರುವ ನಿರೀಕ್ಷಣೆ ಸ್ನೇಹದಲ್ಲಿ ಇರುವುದಿಲ್ಲವೆಂಬುದೊಂದು ಮುಖ್ಯ ಕಾರಣವಾದರೆ, "ಸ್ನೇಹ"ದ ಕಡಲು "ರಕ್ತ ಸಂಬಂಧ"ದ ಕಡಲಿಗಿಂತ ಅತ್ಯಂತ ವಿಶಾಲವಾದುದು ಮತ್ತು ಕಡಲಿಗಿಳಿಯುವ ಪ್ರತೀ ದೋಣಿಗೂ, ತೇಲಲು ಬೇಕಾದಷ್ಟು ವಿಸ್ತಾರ ಇರುವುದು....

ನನ್ನ ಮಿತ್ರರೊಬ್ಬರ ಸಂದೇಶ...."ಆಕಾಶಕ್ಕಿಂತ ಅಗಲವಾದುದು ಆಸೆ....
ನೀರಿಗಿಂತ ತೆಳುವಾದುದು ಉಸಿರು....
ಹೂವಿಗಿಂತ ಮೃದುವಾದುದು ಮನಸು...
ವಜ್ರಕ್ಕಿಂತ ಅಮೂಲ್ಯವಾದುದು ಪ್ರೀತಿ....
ಪ್ರೀತಿಗಿಂತ ಪವಿತ್ರವಾದುದು ಸ್ನೇಹ".....

ಪ್ರತಿಯೊಬ್ಬರ ಜೀವನದಲ್ಲೂ "ಸ್ನೇಹ" ಎಷ್ಟು ಅವಶ್ಯಕ ಮತ್ತು ಸ್ನೇಹವೇ ಉಸಿರು ಎಂಬುದನ್ನು ಸರಳವಾಗಿ ಮೇಲಿನ ಕೆಲವು ಸಾಲುಗಳು ಅರ್ಥ ಬಿಡಿಸಿಟ್ಟಿವೆ.... ಇದನ್ನು ಕಳುಹಿಸಿದ ನನ್ನ ಸ್ನೇಹಿತರಿಗೆ, ಸಸ್ನೇಹ ವಂದನೆಗಳನ್ನು ಸಲ್ಲಿಸುತ್ತಾ...

ಹೀಗೆ ನಾವು ನಮ್ಮ ಬದುಕಿನ ಎಲ್ಲಾ ಕೊಂಡಿಗಳನ್ನೂ ಸ್ನೇಹಕ್ಕೇ ಜೋಡಿಸಿದರೆ, ಎಲ್ಲವೂ ಮತ್ತು ಎಲ್ಲರೂ ’ಸಂಬಂಧಗಳೇ’.... ಸಂಬಂಧಗಳಿಲ್ಲದ ಪ್ರೀತಿ ಸ್ನೇಹವಲ್ಲ, ಸ್ನೇಹವಿಲ್ಲದ ಬದುಕು ಬದುಕಲ್ಲ"... ನಾ ಮೇಲೆ ಹೇಳಿದ ಎಲ್ಲಾ ಸಂಬಂಧಗಳಲ್ಲೂ ಸ್ನೇಹವಿದ್ದೇ ಇರುವುದರಿಂದಲೇ ನಮಗೆ ನಿಷ್ಕಲ್ಮಶವಾದ ಪ್ರೀತಿಯ ಸಂಬಂಧಗಳು ಸಿಗುತ್ತವೆ.

13 comments:

 1. ನಿಷ್ಕಲ್ಮಶವಾದ ಸ್ನೇಹ ಪಡೆಯಲು-ಹೊಂದಲು ಪುಣ್ಯ ಮಾಡಿರಬೇಕು ಅನಿಸುತ್ತದೆ. ಸ್ನೇಹದ ಬಗೆಗಿನ ನಿಮ್ಮ ಅಭಿಪ್ರಾಯ ನನಗಂತೂ ಇಷ್ಟವಾಯಿತು. ಇಂತಹ ಸ್ನೇಹದಲ್ಲಿ ನಿಜವಾಗಿ ಬೇಕಿರುವುದು ಅಚಲ ನಂಬಿಕೆ ಮತ್ತು ವಿಶ್ವಾಸ. Community oriented ಸ್ನೇಹ ಸಂಬಂಧಗಳಲ್ಲೇ ಇತ್ತೀಚಿಗೆ ಜನರಿಗೆ ನಂಬಿಕೆ ಹೆಚ್ಚಾಗುತ್ತಿದೆಯೇನೋ ಎನಿಸುತ್ತದೆ. :). ನಿಮ್ಮ ಲೇಖನ ಉಪಯುಕ್ತವಾದುದು. ಧನ್ಯವಾದಗಳು

  ReplyDelete
 2. ”ಪ್ರೀತಿಗಿಂತ ಪವಿತ್ರವಾದುದು ಸ್ನೇಹ"....ಈ ನುಡಿ ಸತ್ಯ..
  ಸ್ನೇಹಕ್ಕೆ ಜಾತಿ,ಭಾಷೆ, ವಯಸ್ಸು, ಕಾಲ, ಲಿ೦ಗ ಯಾವುದೂ ಅಡ್ಡಬರದೆ೦ಬುದು ನಿಮ್ಮ ಲೇಖನದಿ೦ದ ನಿರೂಪಿತವಾಗಿದೆ. ಆದರೆ ಪೊಸೆಸಿವ್ ನೆಸ್ ಮತ್ತು ಅತಿಸಲಿಗೆ ಒ೦ದು ಒಳ್ಳೆಯ ಸ್ನೇಹವನ್ನೆ ಹಾಳುಮಾಡಿಬಿಡಬಹುದು..ಒಳ್ಳೆಯ ಅನುಭವವನ್ನ ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

  ReplyDelete
 3. ತುಂಬ ಚೆನ್ನಾಗಿ ವಿವರಿಸಿದ್ದೀರಿ ಸ್ನೇಹದ ಪ್ರಾಮುಖ್ಯತೆಯನ್ನು. ಪವಿತ್ರ ಸ್ನೇಹದೊಳಗಿನ ಮಧುರತೆಯನ್ನು, ಶಕ್ತಿಯನ್ನು ಅದರೊಳಗೆ ಮುಳುಗಿದವನೇ ಬಲ್ಲ.

  ReplyDelete
 4. ತು೦ಬಾ ಚೆ೦ದದ ಲೇಖನ. ಸ೦ಭ೦ಧಗಳು ಸ೦ಭ೦ಧಿಕರಿ೦ದಲೇ ಬರಬೇಕೆ೦ದಿಲ್ಲ ಎ೦ಬ ವಿಶಯ ತು೦ಬಾ ಪ್ರಸ್ತುತ. ಸ್ನೇಹದ ಹರವು, ಮಾನವತೆಯ ವಿಸ್ತಾರ ಅವುಗಳಲ್ಲಿ ತೆರೆದುಕೊಳ್ಳುವ ಸ೦ಭ೦ಧಗಳು ಕೆಲವೊಮ್ಮೆ ಅವಿಸ್ಮರಣೀಯ.

  ReplyDelete
 5. ಸುಬ್ರಹ್ಮಣ್ಯ ಭಟ್ಟರಿಗೆ ಲೇಖನ ಹಾಗು ನನ್ನ ಅಭಿಪ್ರಾಯವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಸ್ನೇಹದ ಬುನಾದಿಯೇ ವಿಶ್ವಾಸ ಮತ್ತು ನಂಬಿಕೆ. Unconditional ಸ್ನೇಹ ನಾವು ಕೊಟ್ಟರೆ ನಮಗೆ ಅದು ಮತ್ತೆ ತಿರುಗಿ ಸಿಗುತ್ತದೆಯೆಂದು ನನ್ನ ನಂಬಿಕೆ.

  ReplyDelete
 6. ಚುಕ್ಕಿ ಚಿತ್ತಾರದ ಮೇಡಮ್...
  ಧನ್ಯವಾದಗಳು...ಸ್ನೇಹದಲ್ಲಿ ನಾನು ತಿಳಿದಂತೆ ಪೊಸೆಸಿವ್ ನೆಸ್ ಇರಬಾರದು. ಎಲ್ಲಿ ಶುದ್ಧ ಮನದ ಮುಕ್ತ ಸ್ನೇಹವಿರತ್ತೋ, ಅಲ್ಲಿ ಬೇರೆ ಏನು ಇರಲು ಅವಕಾಶವೇ ಇಲ್ಲ. ಒಂದುವೇಳೆ ಇದ್ದರೆ ಅದು unconditional love ಆಗೋಲ್ಲ. ಎಲ್ಲಿ ಕಟ್ಟುಪಾಡುಗಳಿರತ್ತೋ ಅಲ್ಲಿ ಸ್ನೇಹ ಶುದ್ಧವಾಗುವುದಿಲ್ಲವೆಂದು ನನ್ನ ಅಭಿಪ್ರಾಯ.

  ReplyDelete
 7. ತೇಜಸ್ವಿನಿ ಮೇಡಮ್
  ಧನ್ಯವಾದಗಳು.. ಹೌದು ತೇಜಸ್ವಿನಿಯವರೇ..ಪವಿತ್ರ ಸ್ನೇಹದ ಶಕ್ತಿಯನ್ನು ಮತ್ತು ಮಧುರತೆಯನ್ನು ಅದರಲ್ಲಿ ಮುಳುಗಿದವರೇ ಬಲ್ಲರು..

  ಸೀತಾರಾಮ ಸಾರ್...
  ಧನ್ಯವಾದಗಳು. ಸಂಬಂಧಗಳು ಸಂಬಂಧಿಕರಿಂದಲೇ ಬರಬೇಕಿಲ್ಲ ಎಂಬುದು ನಿಜವಾದ ಮಾತು ಅಲ್ವಾ..? ಸ್ನೇಹದ ಹರವು ಇದ್ದಾಗ, ಮಾನವತೆಯ ವಿಸ್ತಾರ ತಾನೇ ವಿಸ್ತರಿಸಿಕೊಳ್ಳುತ್ತದೆ ಮತ್ತು ಅವಿನಾಭಾವಿ ಸಂಬಂಧಗಳು ಅವಿಸ್ಮರಣೀಯವಾಗಿ ಆವರಣಗೊಳ್ಳುತ್ತವೆ....

  ReplyDelete
 8. ಸಂಬಂಧಗಳ ಸುಳಿಯಲ್ಲಿ .... ನಿಮ್ಮ ಅನುಭವಗಳನ್ನೂ ಸೇರಿಸಿ ಬರೆದ ಈ ಬರಹ ಅರ್ಥಪೂರ್ಣವಾಗಿ ಹೊರಹೊಮ್ಮಿದೆ. ಕೊನೆಯಲ್ಲಿನ ಸಂದೇಶದ ಸಾಲುಗಳನ್ನು ಸೂಕ್ತವಾಗಿ ಬಳಸಿಕೊಂಡಿದ್ದೀರಿ.
  ಧನ್ಯವಾದಗಳು.
  ಸಿಗೋಣ.

  ReplyDelete
 9. ಚಂದ್ರೂ..
  ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು... ಹೌದು ಆ ಸಂದೇಶ ನಿಜಕ್ಕೂ ನನ್ನ ಲೇಖನದ ವಿಷಯಕ್ಕೆ ಪೂರಕವಾಗಿದೆ........

  ReplyDelete
 10. ಸ್ನೇಹ ಸಂಬಂಧ ಬಗ್ಗೆ ಉತ್ತಮ ಲೇಖನ. ಸಂಭಂದಗಳಲ್ಲಿ ಸ್ನೇಹದ ಬಂಧ ಅತ್ಯಂತ ಶ್ರೆಷ್ಥವಾದದ್ದು. ಸ್ನೇಹ-ಪ್ರೀತಿಗಳಲ್ಲಿ ನಂಬಿಕೆ ವಿಶ್ವಾಸದ ಬುನಾದಿ ಅತ್ಯಗತ್ಯ.
  keep writing...........

  ReplyDelete
 11. ಪ್ರವೀಣ್ ಅವರಿಗೆ ಸ್ವಾಗತ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

  ReplyDelete
 12. ಸಂಬಂದಗಳ ಕುರಿತಾದ ಅರ್ಥಪೂರ್ಣ ಬರಹ .

  ReplyDelete
 13. ಆತ್ಮ ಸಂತೃಪ್ತರೇ...

  ನನ್ನ ಬ್ಲಾಗ್ ಲೋಕಕ್ಕೆ ಸ್ವಾಗತ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ ನನ್ನ ಅಂತರಂಗದ ಮಾತುಗಳನ್ನೋದಲು...

  ReplyDelete