ನಮ್ಮ ಜಯನಗರ ೬ನೇ ಬಡಾವಣೆಯಲ್ಲಿ ನಿಮಗೆ ಗೊತ್ತಿರುವಂತೆ ಯಡಿಯೂರು ಕೆರೆ.. . ಎದುರುಗಡೆ ಹಾಗೂ ಸುತ್ತಮುತ್ತ ಅನೇಕ ಬಹು ಮಹಡಿ ಕಟ್ಟಡಗಳು ಇವೆ..... ಇಲ್ಲಿಯ ಕೆಲವು ಮನೆಗಳ ಪೂರ್ವ ದಿಕ್ಕಿನ ಮಾಳಿಗೆಗಳು (ಬಾಲ್ಕನಿಗಳು) ಕೆರೆಯ ಅಭಿಮುಖವಾಗಿ ಇದೆ. ದಿನವೂ ಬೆಳಿಗ್ಗೆ ಸೂರ್ಯೋದಯದ ಪ್ರಥಮ ಕಿರಣಗಳು ಭೂಮಿಯನ್ನು ಮುಟ್ಟುವ ತವಕದಲ್ಲಿ ಇರುವಾಗಲೇ... ಇಲ್ಲಿಯ ಮನೆಗಳ ಅಕ್ಕ ಪಕ್ಕದಲ್ಲಿ ಬೆಳಗಿನ ಸುಪ್ರಭಾತ ಆರಂಭವಾಗಿ ಬಿಡುತ್ತದೆ....... ಕೋಗಿಲೆಗಳ ಮಧುರ ಕಂಠದಿಂದ... ಕುಹೂ.... ಕುಹೂ.... ಎಂದು. ಬೆಳಗಿನ ಸೂರ್ಯೋದಯ ಯಡಿಯೂರು ಕೆರೆಯ ಹತ್ತಿರ ಅತ್ಯಂತ ಸುಂದರವಾದ, ಭಗವಂತನ ದೃಶ್ಯ ಸಂಯೋಜನೆಯಂತಿರುತ್ತದೆ. ನಿಧಾನವಾಗಿ ಪೂರ್ವ ದಿಕ್ಕು ತಿಳಿಯಾಗಿ... ಚಿನ್ನದ ಬಣ್ಣ ಕಣ್ಣನ್ನು ಕಿರಿದಾಗಿಸತೊಡಗುತ್ತದೆ.... ಜೊತೆ ಜೊತೆಗೇ ಸುಂದರವಾದ ಕೆಂಪು ಬಣ್ಣದ ಅತ್ಯಂತ ದೊಡ್ಡ ಚಿನ್ನದ ಮೆರುಗಿನ ದೊಡ್ಡ ತಟ್ಟೆ ಕಾಣತೊಡಗುತ್ತದೆ. ನೋಡು ನೋಡುತ್ತಿರುವಾಗಲೇ... ರಕ್ತ ವರ್ಣದಿಂದ ಕಂಗೊಳಿಸ ತೊಡಗುತ್ತದೆ..... ಮುಗಿಲು ತಿಳಿಯಾಗಲಾರಂಭವಾದೊಡನೇ ಶುರುವಾಗಿ ಬಿಟ್ಟಿರುತ್ತದೆ... ಕುಹೂ ಕುಹೂ ಕೋಗಿಲೆಯ ಸುಪ್ರಭಾತ..."ಇನ್ನು ನಿದ್ದೆಯ ತಳೆದು ತನ್ನ ತಾನವನೊಲಿದು... ಭಿನ್ನ ಭಾವವ ಬಿಟ್ಟ ಕೋಗಿಲೇ... ಎನ್ನ ಕನ್ನಡನಾಡ ಚೆನ್ನರಳೂವಂತೆ ಪಾಡುವೆಯಾ ಪೇಳು ಕೋಗಿಲೆ" ಎಂಬ ಸಾಲು ನೆನಪಿಸುತ್ತಾ..... ಹಿನ್ನೆಲೆ ಸಂಗೀತದ ಸಮೇತ ಎಲ್ಲರ ಮನೆ, ಮನ ಬೆಳಗಲು, ಜ್ಯೋತಿಯಂತೆ ಸೂರ್ಯನ ಉದಯ..... ಸ್ವಲ್ಪ ಮೇಲೆ ಬರುತ್ತಿದ್ದಂತೆ ಸೂರ್ಯನ ಬೆಳ್ಳಗಿನ ಪ್ರತಿಫಲನ ಕೆರೆಯ ನೀರನ್ನು ಬೆಳ್ಳಿಯಂತೆ ಬೆಳಗಿಸುತ್ತದೆ. ಸುಮಾರು ಅರ್ಧ ಕೆರೆಯಷ್ಟು ನೀರು ಮಿರ ಮಿರ ಮಿಂಚುತ್ತಿರುತ್ತದೆ. ಒಂದು ಕಡೆ ಪಕ್ಕದಲ್ಲಿ ಬೆಳೆದ ದೊಡ್ಡ ದೊಡ್ಡ ತಾವರೆ ಎಲೆಗಳ ಗುಂಪು... ನೀರಿನ ಒಂದು ಪಕ್ಕ ಬೆಳ್ಳಂಬೆಳ್ಳ ಬಣ್ಣ, ಈ ಕಡೆ ಪಕ್ಕದಲ್ಲಿ ದಟ್ಟ ಹಸಿರು ಮರಗಳ ಸಾಲು....ತಂಪಾದ ಗಾಳಿ...
ಕೆಲವು ತಿಂಗಳುಗಳ ಹಿಂದೆ ಯಡಿಯೂರು ಕೆರೆ ಸುಂದರಗೊಳಿಸಲ್ಪಟ್ಟಿತ್ತು. ಇಡೀ ಕೆರೆಯ ನೀರನ್ನು ತೆಗೆದು, ಹೂಳು ಎತ್ತಿ, ಹೊಸ ನೀರು ಹರಿಸಿ, ಬೇಕಾ ಬಿಟ್ಟಿ, ಅಡ್ಡಾದಿಡ್ಡಿ ಬೆಳೆದಿದ್ದ ಗಿಡಗಳೆಲ್ಲಾ ಸೌಂದರ್ಯ ತಜ್ಞರ ಕೈಯಲ್ಲಿನ ಕತ್ತರಿಯ ಹೊಡೆತಕ್ಕೆ ಸಿಕ್ಕು, ಸೌಂದರ್ಯ ಸ್ಪರ್ಧೆಗೆ ಹೊರಟವರಂತೆ ನೀಟಾಗಿದ್ದರು. ಹೊಸದಾಗಿ ತಂದು ನೆಟ್ಟಿದ್ದ, ಅನೇಕ ಜಾತಿಯ, ಬಣ್ಣದ, ಚಿಕ್ಕ - ದೊಡ್ಡ ಹೂ ಗಿಡಗಳು ಹೂವು ಬಿಡಲು ಆರಂಭಿಸಿದ್ದವು. ಒಂದು ಕಡೆ ಪಕ್ಕದಲ್ಲಿ ಚಿಕ್ಕ ನೀರಿನ ಕಾರಂಜಿಗೆ ಬಣ್ಣ ಬಣ್ಣದ ದೀಪದ ಸೊಬಗು ಕೂಡ ಸೇರಿತ್ತು. ಮಕ್ಕಳಿಗಾಗಿ ಆಟ ಆಡಲು ಪ್ರತ್ಯೇಕ ಜಾಗ, ನಗೆ ಸಂಘದ ಹಿರಿಯ-ಕಿರಿಯ ಸದಸ್ಯರುಗಳ ಕಲರವ... ಅಬ್ಬರದ ನಗೆ.... ದಿನವೂ ಮುಂಜಾವು ಮತ್ತು ಸಂಜೆ ಬೆಂಚುಗಳ ಮೇಲೆ ಕುಳಿತು ಪಿಸುಮಾತು ಹಂಚಿಕೊಳ್ಳುವ ಯುವ ಪ್ರೇಮಿಗಳು.... ವಾರಾಂತ್ಯಗಳಲ್ಲಿ ಬಸಿರಿ ಮನದನ್ನೆಯ ಜೊತೆ ನಿಧಾನವಾಗಿ ಹೆಜ್ಜೆ ಹಾಕುವ ಪತಿ..... ಆರೋಗ್ಯಕ್ಕಾಗಿ ನಡೆಯುವವರೂ..... ತಮ್ಮ ಸ್ಥೂಲ ಕಾಯವನ್ನು ಕರಗಿಸಲಾರದೆ, ಬೆವರಿಳಿಸುವವರು...... ಮಧ್ಯೆ ಮಧ್ಯೆ ಎಲ್ಲರ ಕಿರಿಕಿರಿಗೆ ಒಳಗಾಗುವಂತೆ ಹಾದಿಯಲ್ಲಿ ನಿಂತು ಏರೋಬಿಕ್ಸ್ ಮಾಡುವವರು...... ಓಯ್..ಓಡಬೇಡಾ... ನಿಲ್ಲು... ಬೀಳ್ತೀಯಾ ಎಂದು ಕೂಗುತ್ತಾ, ಮೊಮ್ಮಕ್ಕಳ ಹಿಂದೆ ಓಡಲಾರದೆ ಏದುಸಿರು ಬಿಡುವ ಅಜ್ಜ-ಅಜ್ಜಿಯರು.......... ಇದು ಬೆಂಗಳೂರಿನ ಅತ್ಯಂತ ಸುಂದರವಾದ, ಯಡಿಯೂರು ಕೆರೆಯ ಸುತ್ತ ಮುತ್ತ ಕಂಡುಬರುವ ಸಾಯಂಕಾಲದ ದೃಶ್ಯ.....
ಶುಭೋದಯದ ದೃಶ್ಯದ ಸಂಭ್ರಮ, ವೈಭವವೇ ಬೇರೆ.... ಆಗ ಮಕ್ಕಳ ಕಲರವ, ನಗೆ ಸಂಘದ ಅಬ್ಬರ ಇರುವುದಿಲ್ಲ.... ಆದರೆ ಆರೋಗ್ಯದ ಕಾಳಜಿಯಿರುವ ಚಿಕ್ಕ ದೊಡ್ಡ, ಗಿಡ್ಡ ಕುಳ್ಳ, ದಪ್ಪ ತೆಳ್ಳ, ಕರಿ ಬಿಳಿ, ವೆಂಕ ಸೀನ ನಾಣಿ, ಸರೋಜ, ಗಿರಿಜಾ, ಪಾರ್ವತಿ, ಲತಾ, ಶಕ್ಕೂ, ಶಾರಿ, .... ಎಲ್ಲಾ ಥರಹದ ಜನಗಳೂ ಬಿರುಸಿನಿಂದ, ನಿಧಾನವಾಗಿ, ಮೆಲ್ಲಗೆ ಓಡುತ್ತಾ, ಜೋರಾಗಿ ಓಡುತ್ತಾ.... ಸಂಚಾರಿ ದೂರವಾಣಿಯಲ್ಲಿ ಸುಪ್ರಭಾತ , ಎಫ್ ಎಂ ರೈನ್ ಬೋದಲ್ಲಿ ಬೆಳ್ಬೆಳಿಗ್ಗೇನೆ... ಮೈ ಇಕ್ ರಾಜಾ ಹೂಂ... ಎಂದು ಪ್ರೇಮ ಗೀತೆ ಕೇಳುತ್ತಾ, ಇನ್ನೂ ಕೆಲವರು ಐ ಪಾಡ್ ನಲ್ಲಿ ಭಕ್ತಿ, ಪ್ರೇಮ, ವಿರಹದ ಕಲಸು ಮೇಲೋಗರದ ಹಾಡುಗಳನ್ನು ಕೇಳುತ್ತಾ....., ಜೊತೆಗೆ ವಿಷ್ಣು / ಲಲಿತಾ ಸಹಸ್ರನಾಮಗಳನ್ನೂ ಕೇಳುತ್ತಾ....... ಥರಹೇವಾರಿ ಚಪ್ಪಲಿಗಳೂ, ಬ್ರ್ಯಾಂಡೆಡ್ ಶೂಗಳನ್ನು ಪ್ರದರ್ಶಿಸುತ್ತಾ....... ಕೆಲವರು ಕೆರೆಯ ಎಡಗಡೆಯಿಂದ ಬಲದಿಕ್ಕಿಗೂ.... ಇನ್ನೂ ಕೆಲವರು ಬಲಗಡೆಯಿಂದ ಎಡ ದಿಕ್ಕಿಗೂ... ನಡೆಯುತ್ತಾ... ಎದುರು ಕಂಡವರಿಗೆ ಒಂದು ಚಂದದ ಬೆಳಗಿನ ಮುಗುಳ್ನಗೆಯನ್ನು... ಹೋದರೆ ಹೋಗಲಿ ಪಾಪ ಅನ್ನೋ ಹಾಗೆ ಬಿಸಾಕಿ... ನಡೆಯುತ್ತಿರುತ್ತಾರೆ...... ಇನ್ನೂ ಕೆಲವರು ಎದ್ದ ಕೂಡಲೆ ಅದೇನು ಶೋಕಿಯೋ... ಅಥವಾ ಇನ್ಯಾವತೆರನಾದ ಸಮಸ್ಯೆಯೋ ಗೊತ್ತಿಲ್ಲ.... ಗಾಢವಾದ perfume ಹಾಕಿ ಎದುರುಗಡೆಯಿಂದ ಹತ್ತಿರ ಬರುವವರ ಉಸಿರು ಕಟ್ಟುವಂತೆ ಹಾದು ಹೋಗುತ್ತಾರೆ......
ಇದೆರಡೂ ವಿಭಿನ್ನ ಸನ್ನಿವೇಶಗಳಿಗೂ ಸಾಕ್ಷಿಯಾಗಿ, ತಮ್ಮದೇ ಲೋಕದಲ್ಲಿ ವಿಹರಿಸುತ್ತಾ.... ಸುತ್ತಲಿನ ಜನರ ಪರಿವೆಯೇ ಇಲ್ಲದೇ ಇರುವವರ.... ದೇಹದ ತೂಕ ಇಳಿಸುವ ಯಾವ ಚಿಂತೆಯೂ ಇಲ್ಲದವರ.... ಹಾಡು, ಸುಪ್ರಭಾತ ಕೇಳಲು ಯಾವುದೇ ಸಂಚಾರಿ ದೂರವಾಣಿಯ, ಐ ಪಾಡ್ ನ ಅವಶ್ಯಕತೆಯೇ ಎಂದಿಗೂ ಬೇಕಾಗದ......, ತಮ್ಮ ತಮ್ಮಲ್ಲೇ ಅತ್ಯಂತ ಸ್ನೇಹದಿಂದಿರುವ.... ಒಟ್ಟಿಗೇ ಅವಿಭಕ್ತ ಕುಟುಂಬದವರು family albumಗಾಗಿ ಫೋಸ್ ಕೊಡುವಂತೆ ಗುಂಪಾಗಿ ಬಹು ಮಹಡಿ ಕಟ್ಟಡಗಳ ಚಿತ್ರ ವಿಚಿತ್ರ ವಿನ್ಯಾಸದ ಬಿಸಿಲು ಮಹಡಿಯ ಪುಟ್ಟ ಗೋಡೆಯ ಮೇಲೋ... ಅಂದಕ್ಕಾಗಿ ಹಾಸಿರುವ ಥರಾವರಿ ಆಕಾರದ ಹಂಚುಗಳ ಮೇಲೋ ಕುಳಿತಿರುವ.... ಸೌಂದರ್ಯ ಸ್ಪರ್ಧೆ ನಡೆಯುತ್ತಿದೆಯೇನೋ ಎಂಬಂತೆ ವೈಯಾರದಿಂದ ಕತ್ತು ಕೊಂಕಿಸಿ ಈ ಕಡೆ ಆ ಕಡೆ ನೋಡುತ್ತಿರುವ..... ಒಂದು ದೊಡ್ಡ ಸಮುದಾಯವೇ ಕೆರೆಯ ಸುತ್ತ ಮುತ್ತ ಪರಿವಾರ ಸಮೇತ ಬೀಡು ಬಿಟ್ಟಿವೆ. ಇಲ್ಲಿಯ ಬಹು ಮಹಡಿ ಕಟ್ಟಡಗಳ ಜನರಂತೆ, ಅವರ ಜೊತೆಗೇ, ಭದ್ರವಾಗಿ ನೆಲೆಯೂರಿರುವ ಈ ಮಿತ್ರ ಸಮುದಾಯ... ಸುಂದರ ಪಾರಿವಾಳಗಳು....... ನೂರಾರು ಪಾರಿವಾಳಗಳು ವಾಸಿಸುವ ಈ ಬಡಾವಣೆ, ಬೆಳಗಿನ ಹೊತ್ತಿನಲ್ಲಿ ಈ ನಮ್ಮ ಮಿತ್ರರ ಕಲರವದಿಂದ, ಚೈತನ್ಯ ಪೂರ್ಣವಾಗಿ, ಚೇತೋಹಾರಿಯಾಗಿ ಇರುತ್ತದೆ...... ಇಲ್ಲಿನ ಬಹು ಮಹಡಿ ಕಟ್ಟಡಗಳ ನಿವಾಸಿಗಳು ಈ ಪಾರಿವಾಳಗಳಿಗೆ ತಮ್ಮ ತಮ್ಮ ಮಾಳಿಗೆಗಳಲ್ಲಿ ಪುಟ್ಟ ಪುಟ್ಟ ಪಾತ್ರೆಗಳಲ್ಲಿ ನೀರು ತುಂಬಿಸಿ ಇಟ್ಟಿರುತ್ತಾರೆ ಮತ್ತು ದಿನವೂ ಬೆಳಗಿನ ಹೊತ್ತು... ಗೋಧಿ, ಜೋಳದ ಕಾಳುಗಳನ್ನು ಹಾಕುತ್ತಾರೆ. ಆಗ ನೋಡಬೇಕು... ಈ ಅವಿಭಕ್ತ ಕುಟುಂಬದ ಒಗ್ಗಟ್ಟು..... ಮನೆಗೆ ಹಿರಿಯ ಅನ್ನಿಸಿಕೊಂಡವ ಬಂದನೆಂದರೆ ಮುಗಿಯಿತು..... ಬಾಕಿಯವರಿಗೆಲ್ಲಾ ಅರೆಹೊಟ್ಟೆ, ಬರಿಹೊಟ್ಟೆಯೇ ಗತಿ.... ಇವನು ತಾನೂ ತಿನ್ನವೊಲ್ಲ.... ಬೇರೆಯವರಿಗೆ ತಿನ್ನಲೂ ಬಿಡಲೊಲ್ಲ... ಈ ಕಾಳಗ ನೋಡುವಾಗ, ಇವರೇನಾ family albumಗೆ ಫೋಸ್ ಕೊಟ್ಟಿದ್ದೋರು ಅನ್ಕೋಬೇಕು..... !!! ಇದು ಬರೀ ಕಾಳು ಹೆಕ್ಕುವಾಗಿನ ಕದನ ಅಷ್ಟೆ... ಎಲ್ಲಾ ಮುಗಿದ ನಂತರ ಮತ್ತೆ ಇವರ ಫೋಸ್ ಕಟ್ಟಡದ ಮಹಡಿಯ ಮೇಲೆ....
ಪಾರಿವಾಳಗಳಂತೆಯೇ.. ಸಾಕ್ಷಿಯಾಗಿ ಇಲ್ಲಿ ಇನ್ನೊಂದು ಬಳಗ ಇದೆ..... ಅವುಗಳು ಮರಗಳ ಮರೆಯಲ್ಲಿ ಅವಿತು ಆಗಾಗ... ಒಮ್ಮೊಮ್ಮೆ... ಮನಬಂದಾಗ, ಮುದಗೊಂಡಾಗ, ಮೈ ಮುರಿಯುವಾಗ, ತನ್ನ ಮನದನ್ನೆಯನ್ನು ಮುದ್ದಿಸುವ ಇಚ್ಛೆಯಾದಾಗ, ಸುಂದರ ಹೂವುಗಳ ಪರಿಮಳ ಗಾಳಿಯಲ್ಲಿ ತೇಲಿ ಬಂದಾಗ...... ಹೀಗೆ ಒಂದೊಂದು ಸನ್ನಿವೇಶಗಳಲ್ಲಿ, ಒಟ್ಟಿನಲ್ಲಿ ತಮಗೆ mood ಬಂದಾಗ, ಲಹರಿ ಶುರು ಮಾಡುತ್ತವೆ.... "ಕುಹೂ ಕುಹೂ... ಬೋಲೇ ಕೋಯಲಿಯಾ..." ಎಂದು.... ಎಲ್ಲಕ್ಕಿಂತ ಮೊದಲು ಇಲ್ಲಿಯ ನಿವಾಸಿಗಳಿಗೆ ಸುಪ್ರಭಾತ ಹಾಡುವವರೇ ಈ ಕೋಗಿಲೆಗಳು.... ಮುಗಿಲು ಚೂರೇ ಚೂರು ತಿಳಿಯಾದ ತಕ್ಷಣವೇ ಅದೆಂತಹ ಸಂಭ್ರಮ ಈ ಬಳಗಕ್ಕೆ... ಸೂರ್ಯನನ್ನು ಎದಿರುಗೊಳ್ಳಲು.... ಪ್ರಥಮ ಕಿರಣಗಳು ವಸುಧೆಯನ್ನು ಮುತ್ತಿಕ್ಕುತ್ತಿದ್ದಂತೆಯೇ... ಧಾರಿಣಿ ಪುಳಕಗೊಳ್ಳುವಾಗಲೇ... ಈ ವಾದ್ಯ ಸಂಗೀತ ಮೇಳೈಸಿಬಿಟ್ಟಿರುತ್ತದೆ.... ಸೂರ್ಯ ರಶ್ಮಿ ಮತ್ತು ಧಾರಿಣಿಯ ಸಂಗಮಕ್ಕೆ... ದ ರಾ ಬೇಂದ್ರೆಯವರ ವ್ಯೋಮ ಮಂಡಲ ಸುಖಧಾಮವಾಗುವಂತೆ... ಕಾಮರತಿಯ ಮೀರಿ ಕೋಗಿಲೇ... ಪ್ರೇಮ ಕವಿಯು ಕಂಡ ಸಾಮವೇದದ ಗಟ್ಟಿಮೇಳ ನುಡಿಸುವಂತೆ... ಒಮ್ಮೆಲೇ ಹತ್ತಾರು ಕಂಠಗಳು ಕುಹೂ ಕುಹೂ... ಕುಹೂ ಕುಹೂ.... ಎಂದು ಹಾಡಲಾರಂಭಿಸಿದಾಗ.... "ಅತ್ತವೋ ಕೋಗಿಲೇ...... ಇತ್ತವೋ ಕೋಗಿಲೇ...." ಎಂದು ನಮ್ಮ ಮನ ಹಾಡಲು ಆರಂಭಿಸಿರುತ್ತದೆ... ಇದು ಬರಿಯ ಬೆಳಗು ಜಾವದ ರವಿ-ಧರಿತ್ರಿಯ ಸಂಗಮದ ಸಂಗೀತವಲ್ಲಾ.... ಸಾಯಂಕಾಲವೂ ಸೂರ್ಯನ ಬೀಳ್ಕೊಡುಗೆಗೂ ಹೀಗೇ ನಿಸ್ಸಂಕೋಚವಾಗಿ, ನಿರ್ವಂಚನೆಯಿಂದ, ಸಂಜೆವೆಣ್ಣು ಬರುವಳೋ ಎಂದು ಸ್ವಾಗತಿಸುವಂತೆ "ದಿನವಿಲ್ಲ ನಿಶೆಯಿಲ್ಲ... ದನಿಗೈಯುತಲಿರುವೆ.. ನೀನ್ಯಾವ ಬಸಂತನ ಕೋಗಿಲೇ"... ಎಂಬಂತೆ ಮತ್ತೆ ಕುಹೂ....ಕುಹೂ ಕುಹೂ.... ಗಾಯನ... "ಮೃಣ್ಮಯ ದೇಹದಿ ಮನ್ಮಯನಾದೆ ನಾ..... ಸನ್ಮಯತೆಯ ಕಂಡು ಕೋಗಿಲೇ..... ಚಿನ್ಮಯಾನಂದದಿ ತನ್ಮಯವಾಗಿ ನೀ ಕುಹುಹೂ... ಕುಕಿಲುವೆ ಕೋಗಿಲೇ...." ಎನ್ನುವಂತೆ ನಿಶೆಯ ರಾಜ್ಯಭಾರ ಶುರುವಾಗುವವರೆಗೂ ಮುಂದುವರೆಯುತ್ತದೆ ಈ ಸಂಗೀತ ಕಛೇರಿ...... ಮತ್ತೆ ಬೆಳಗಿನ ಶುಭೋದಯಕ್ಕೆ ಪ್ರಾರಂಭ..... ಯಾವುದೇ ಸರಕಾರಿ ರಜೆ ಇಲ್ಲ.... ವಾರಾಂತ್ಯದ ವೆರೈಟಿ ಹುಡುಕೋಲ್ಲಾ.... ಸುಖ-ದು:ಖ, ಬೇಸರ-ಸಂತೋಷ, ಪ್ರಸನ್ನತೆ-ಖಿನ್ನತೆ, ಹುಟ್ಟು-ಸಾವು... ಯಾವುದೇ ಸಂದರ್ಭದಲ್ಲೂ ವಿಚಲಿತರಾಗದೆ... ಚಿನ್ಮಯಾನಂದ ಕೊಡುವುದಕ್ಕಾಗಿಯೇ ಹಾಡುವವರು ಈ ನಮ್ಮ ಕೋಗಿಲೆಗಳು.........
ಸಕತ್ ಲೇಖನ ಅಕ್ಕ ,ನಿಜವಾಗಿಯೂ ನಿಮ್ಮ ವಿವರಣೆಯ ಶೈಲಿ ತುಂಬಾ ಸೂಪರ್ ಆಗಿದೆ.
ReplyDeleteಹಾ ಅಂದಹಾಗೆ ,ನೀವು ಹೇಳಿದಂತ ಬೆಳಿಗ್ಗೆ ನಾ ಬೆಂಗಳೂರಿನಲ್ಲಿ ಎಂದೂ ನೋಡಿಲ್ಲ ;)
ಕೋಗಿಲೆಯ ಸ್ವರಮಾಧುರ್ಯ, ಮೂಡಣದ ಉದಯ ರವಿಯ ಬಣ್ಣದೋಕುಳಿ, ಬೆಂಗಳೂರಿನ ಬೆಳಗು, ಇವೆಲ್ಲದರ ಬಗ್ಗೆ ತುಂಬಾ ಚೆನ್ನಾಗಿ ವರ್ಣಿಸಿದ್ದೀರಾ!
ReplyDeleteಸುಂದರ ಲೇಖನಕ್ಕೆ ಧನ್ಯವಾದಗಳು.
ಯಡಿಯೂರು ಕೆರೆ ಪರಿಸರದ ಬೆಳಗನ್ನು ಯಥಾವತ್ ನಿಮ್ಮ ಬರಹದಲ್ಲಿ ಚಿತ್ರಿಸಿದ್ದೀರಿ, ಚೆನ್ನಾಗಿದೆ.
ReplyDeleteಕಾಣುವ ಕಣ್ಣು,ನಲಿಯುವ ಮನಸ್ಸು ಇದ್ದಾಗ ಪರಿಸರವೆಲ್ಲ ದೇವಲೋಕವಾಗುವದರಲ್ಲಿ ಸಂದೇಹವಿಲ್ಲ!
ReplyDeleteರವಿಕಾಣದ್ದನ್ನು ಕವಿ ಕಂಡ ಎನ್ನುವಂತೆ, ನೀವು ಕಂಡ ಸೊಬಗು ಸೊಗಸಾಗಿದೆ.
ReplyDeleteಅಂತರಂಗದ ಮಾತುಗಳು...
ReplyDeleteಎಷ್ಟು ಸುಂದರವಾಗಿ ಬರೆದಿದ್ದೀರಿ...
ಸ್ವಲ್ಪ ಹೊಟ್ಟೆಕಿಚ್ಚಾಯಿತು.. !
ನೋಡುವ ಕಣ್ಣಿರಲು..
ಕೇಳುವ ಕಿವಿಯಿರಲು..
ಎಲ್ಲೆಲ್ಲೂ.. ಸೌಂದರ್ಯವೇ...
ಸಂಗೀತವೆ...!!
ಸೊಗಸಾದ ಬರಹಕ್ಕೆ ಅಭಿನಂದನೆಗಳು...
ಮೊದಲ್ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ತಮ್ಮಾ ವಿನಯ್... ನಾ ಹೇಳಿದಂತ ಬೆಳಗು ನೀ ನೋಡಬೇಕೆಂದರೆ, ಬೇಗನೆದ್ದು.... ಯಡಿಯೂರು ಕೆರೆ ಹತ್ತಿರ ಹೋಗು. ಒಂದು ಘಂಟೆ ನಿನ್ನ ಸಮಯ ಅಲ್ಲಿ ಕಳೆದೆಯೆಂದರೆ, ನಾ ಹೇಳಿರುವ ಎಲ್ಲವನ್ನೂ ನೀನು ನೋಡಿ, ಆನಂದಿಸಬಹುದು..... !!!!!!!! :-)
ReplyDeleteಪ್ರವೀಣ್...
ReplyDeleteಉಳಿದಿರುವ ಕೆಲವು ಕೆರೆಗಳಲ್ಲಿ ಯಡಿಯೂರು ಕೆರೆಯೂ ಒಂದು... ಬೆಳಗಿನ ಕೋಗಿಲೆಯ ಸಂಗೀತ ಕಛೇರಿ ಕೇಳಿದರೆ, ನೀವು ಬೆಂಗಳೂರಿನಲ್ಲಿದ್ದೀರೆಂಬುದೇ ಮರೆತು ಹೋಗುತ್ತದೆ..... ಧನ್ಯವಾದಗಳು
ಪರಾಂಜಪೆ ಸಾರ್.... ಧನ್ಯವಾದಗಳು.
ReplyDeleteಸುನಾತ್ ಕಾಕಾ...
ಸುಂದರ ಪರಿಸರ, ಹಸಿರುಟ್ಟು ನಗುವ ಪ್ರಕೃತಿ ಕಂಡಾಗ ಎಲ್ಲರ ಕಲ್ಪನೆಯೂ ಗರಿಕೆದರಿ ಹಾರಾಡುವುದು ಸಹಜವಲ್ಲವೇ..? ಧನ್ಯವಾದಗಳು.
ಸುಬ್ರಹ್ಮಣ್ಯ ಅವರೇ....
ಮನಸೇ ಎಲ್ಲಕ್ಕೂ ಕಾರಣವಲ್ಲವೇ..? ಮನಸ್ಸೊಂದು ಮುದಗೊಂಡು, ಸಂತಸದಿಂದಿದ್ದರೆ... ಪರಿಸರದ ಸೌಂದರ್ಯ ಕಲ್ಪನೆಯ ಕೂಸಿನ ಕೈಯಲ್ಲಿ ಲೇಖನಿ ಕೊಟ್ಟು, ಅಕ್ಷರಗಳ ಜೊತೆ ಭಾವನೆಗಳ ಸಂಗಮ ಮಾಡಿಸುತ್ತೆ... ಧನ್ಯವಾದಗಳು.
ಪ್ರಕಾಶ್ ಸಾರ್...
ReplyDeleteನೀವೇ ಎಷ್ಟು ಚೆನ್ನಾಗಿ ಬರೆಯುತ್ತೀರಿ... ಹೊಟ್ಟೆಕಿಚ್ಚು ಯಾಕಾಯ್ತು ಸಾರ್..? ಹೌದು ನೀವು ಹೇಳಿದಂತೆ, ನೋಡುವ ಕಣ್ಣಿಗೆ... ಸೌಂದರ್ಯ ಸವಿಯುವ ಮನಸ್ಸಿನ ಬೆಂಬಲ ಇರಬೇಕು... ಅರಳಿದ ಮನಸ್ಸು ಎಲ್ಲೆಲ್ಲೂ ಸೌಂದರ್ಯವನ್ನೇ ಕಾಣುತ್ತೆ... ಧನ್ಯವಾದಗಳು ನನ್ನ ಭಾವನೆಗಳನ್ನು ನೀವು ಮೆಚ್ಚಿ ಅನುಮೋದಿಸಿದ್ದಕ್ಕೆ...
This comment has been removed by the author.
ReplyDeleteಪರಿಸರದ ಬೆಡಗನ್ನು ಬೆರುಗುಗೊಳಿಸುವ೦ತೆ ಬರೆದಿದ್ದಿರಾ..... ಚೆ೦ದದ ಲೇಖನ ನಿಮ್ಮ ಮನೆಯಲ್ಲಿ ಒ೦ದುದಿನ ಇದ್ದು ಎಲ್ಲ ಸವಿಯುವ ಆಶೆ ಒ೦ದುಕ್ಷಣ ಮನದಲ್ಲಿ ಬ೦ದಿತು..
ReplyDeleteಶ್ಯಾಮಲಾ ಅವರೆ, ಸುಪ್ರಭಾತ... ಶುಭೋದಯ... ಲಯಬದ್ಧವಾದ ಸಂಗೀತದಂತೆ ಬರೆದಿರುವಿರಿ. ಸೊಗಸಾದ ಸುತ್ತಮುತ್ತಲಿನ ಬೆಳಗಿನ ವಿವರ ಕೊಟ್ಟಿದ್ದೀರಿ.
ReplyDeleteಧನ್ಯವಾದಗಳು.
ಸೀತಾರಾಮ ಸಾರ್...
ReplyDeleteನಾ ಬರೆದ ಪರಿಸರದ ಸೊಬಗು ಮೆಚ್ಚಿದ್ದಕ್ಕೆ ಧನ್ಯವಾದಗಳು...
ಚಂದ್ರೂ....
’ಲಯಬದ್ಧವಾದ ಸಂಗೀತದಂತೆ’ ಎಂದು ನೀವು ಬರೆದ ಮಾಗುಗಳು ತುಂಬಾ ಮುದ ಕೊಡತ್ವೆ... ನನ್ನ ಅಷ್ಟು ದೊಡ್ಡ ಬರಹಕ್ಕೆ ನಿಮ್ಮ ಒಂದೇ ಒಂದು ಸಾಲು ಪ್ರತಿಕ್ರಿಯೆ.. ತೋರಣ ಕಟ್ಟಿದಂತಿದೆ.. ಧನ್ಯವಾದಗಳು...
ಅಕ್ಕ,
ReplyDeleteನಾನೂ ಒಮ್ಮೆ ನನ್ನ ಪುಟ್ಟಿ ಹಾಗೂ ನನ್ನವರ ಜೊತೆ ಈ ಲೇಕ್ಗೆ ಬಂದಿದ್ದೆ. ಆಗ ಅಷ್ಟೊಂದು ಡೆವಲೆಪ್ ಆಗಿರಲಿಲ್ಲ. ಈಗ ಮತ್ತೊಮ್ಮೆ ಬರುವ ಆಸೆಯಾಗಿದೆ ನಿಮ್ಮ ಸುಂದರ ಲೇಖನವನ್ನೋದಿ. ಉತ್ತಮ ಲೇಖನ.... ಚೆನ್ನಾಗಿ ವಿವರಿಸಿದ್ದೀರಿ.
ಶ್ಯಾಮಲ ಮೇಡಮ್,
ReplyDeleteಯಡಿಯೂರು ಕೆರೆಯ ಸುತ್ತಮುತ್ತ ನಡೆಯುವ ಎಲ್ಲಾ ಘಟನೆಗಳನ್ನು ನೀವು ಕ್ಯಾಮೆರಾ ಕಣ್ಣಿಂದಲೇ ನೋಡಿದ್ದೀರಿ ಅನಿಸುತ್ತೆ. ಪ್ರತಿಯೊಂದು ಸೂಕ್ಷ್ಮಗಳನ್ನು ಚೆನ್ನಾಗಿ ಗಮನಿಸಿ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ. ಓದುತ್ತಾ enjoy ಮಾಡಿದೆ.
ಧನ್ಯವಾದಗಳು.
ತೇಜಸ್ವಿನಿ...
ReplyDeleteಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೌದು ಈಗ ಕೆರೆಯ ಪರಿಸರ ಸುಂದರವಾಗಿದೆ.... ಒಮ್ಮೆ ಬನ್ನಿ... ನಿಮಗೆ ವ್ಯತ್ಯಾಸ ತಿಳಿಯುತ್ತದೆ.... ಸಾಯಂಕಾಲದ ಸಮಯ ಸಂತೋಷವಾಗಿ ಕಳೆಯಬಹುದು. ಸುಮ್ಮನೆ ಕುಳಿತು ಅಲ್ಲಿ ಬರುವ ಜನರನ್ನು ಗಮನಿಸಿದರೆ ಸಾಕು... :-)
ಶಿವು ಸಾರ್....
ReplyDeleteಧನ್ಯವಾದಗಳು.... ನೀವಾಗಿದ್ದರೆ ಸುಂದರವಾದ ಚಿತ್ರಗಳನ್ನೂ ಜೊತೆಗೆ ಹಾಕಿಬಿಡುತ್ತಿದ್ದಿರಿ.... ನನಗೆ ನನ್ನ ಕಣ್ಣುಗಳೇ ಕ್ಯಾಮೆರಾ ಆದವು... :-) ನನ್ನವರು ಚಿತ್ರ ತೆಗೆದು ಕೊಡುತ್ತೇನೆಂದರೂ... ನನಗೇಕೋ ಕಾಯುವ ತಾಳ್ಮೆ ಇರಲಿಲ್ಲ, ಹಾಗಾಗಿ ಲೇಖನ ಪ್ರಕಟಿಸಿಬಿಟ್ಟೆ. ಕೆಲವು ಸುಂದರ ಅನುಭವಗಳನ್ನು ಮನಸ್ಸಿನಾಳದಿಂದ ಅನುಭೂತಿಸುವುದೇ ಹೆಚ್ಚು ಸುಂದರವಾಗಿರತ್ತೆ ಅಲ್ವಾ...? ಅದೇಕೋ ನನಗೆ ಇದು ಚಿತ್ರಗಳಿಗಿಂತ ಬರವಣಿಗೆಯೇ ಹೆಚ್ಚು ಪರಿಣಾಮಕಾರಿ ಅನ್ನಿಸ್ತು....
ದೂರದ ಹುಬ್ಬಳ್ಳಿಯಲ್ಲಿ ಇದ್ದರೂ ಯಡಿಯೂರು ಕೆರೆ ಪರಿಸರ ರಲ್ಲಿದ್ದಂತೆ ಭಾಸವಾಯ್ತು.ಹೃತ್ಕಪಾಟೋದ್ಘಾಟ ಅನುಭವ.ಸೃಷ್ಟಿಯ ಸೊಬಗು ಸವಿಯಲು ಒಳಗಣ್ಣು ಬೇಕು.ಬರೀಗಣ್ಣಿಗಿಂತ ದೃಷ್ಟಿ ಬೇಕು.ಕಣ್ಣು ಎಲ್ಲರಿಗೂ ಇರುತ್ತವೆ.ದೃಷ್ಟಿ?
ReplyDelete- ರಾಜೇಂದ್ರ ಪಾಟೀಲ್
( ಉಮಾತನಯರಾಜ್)
ಕವಿ, ಪತ್ರಕರ್ತ
ಹುಬ್ಬಳ್ಳಿ
,9591323453
ದೂರದ ಹುಬ್ಬಳ್ಳಿಯಲ್ಲಿ ಇದ್ದರೂ ಯಡಿಯೂರು ಕೆರೆ ಪರಿಸರ ರಲ್ಲಿದ್ದಂತೆ ಭಾಸವಾಯ್ತು.ಹೃತ್ಕಪಾಟೋದ್ಘಾಟ ಅನುಭವ.ಸೃಷ್ಟಿಯ ಸೊಬಗು ಸವಿಯಲು ಒಳಗಣ್ಣು ಬೇಕು.ಬರೀಗಣ್ಣಿಗಿಂತ ದೃಷ್ಟಿ ಬೇಕು.ಕಣ್ಣು ಎಲ್ಲರಿಗೂ ಇರುತ್ತವೆ.ದೃಷ್ಟಿ?
ReplyDelete- ರಾಜೇಂದ್ರ ಪಾಟೀಲ್
( ಉಮಾತನಯರಾಜ್)
ಕವಿ, ಪತ್ರಕರ್ತ
ಹುಬ್ಬಳ್ಳಿ
,9591323453
ದೂರದ ಹುಬ್ಬಳ್ಳಿಯಲ್ಲಿ ಇದ್ದರೂ ಯಡಿಯೂರು ಕೆರೆ ಪರಿಸರ ರಲ್ಲಿದ್ದಂತೆ ಭಾಸವಾಯ್ತು.ಹೃತ್ಕಪಾಟೋದ್ಘಾಟ ಅನುಭವ.ಸೃಷ್ಟಿಯ ಸೊಬಗು ಸವಿಯಲು ಒಳಗಣ್ಣು ಬೇಕು.ಬರೀಗಣ್ಣಿಗಿಂತ ದೃಷ್ಟಿ ಬೇಕು.ಕಣ್ಣು ಎಲ್ಲರಿಗೂ ಇರುತ್ತವೆ.ದೃಷ್ಟಿ?
ReplyDelete- ರಾಜೇಂದ್ರ ಪಾಟೀಲ್
( ಉಮಾತನಯರಾಜ್)
ಕವಿ, ಪತ್ರಕರ್ತ
ಹುಬ್ಬಳ್ಳಿ
,9591323453
ದೂರದ ಹುಬ್ಬಳ್ಳಿಯಲ್ಲಿ ಇದ್ದರೂ ಯಡಿಯೂರು ಕೆರೆ ಪರಿಸರ ರಲ್ಲಿದ್ದಂತೆ ಭಾಸವಾಯ್ತು.ಹೃತ್ಕಪಾಟೋದ್ಘಾಟ ಅನುಭವ.ಸೃಷ್ಟಿಯ ಸೊಬಗು ಸವಿಯಲು ಒಳಗಣ್ಣು ಬೇಕು.ಬರೀಗಣ್ಣಿಗಿಂತ ದೃಷ್ಟಿ ಬೇಕು.ಕಣ್ಣು ಎಲ್ಲರಿಗೂ ಇರುತ್ತವೆ.ದೃಷ್ಟಿ?
ReplyDelete- ರಾಜೇಂದ್ರ ಪಾಟೀಲ್
( ಉಮಾತನಯರಾಜ್)
ಕವಿ, ಪತ್ರಕರ್ತ
ಹುಬ್ಬಳ್ಳಿ
,9591323453