ಗೌರಿ ಗಣೇಶನ ಹಬ್ಬದ, ಆಚರಣೆಯ ಸಿಹಿ ನೆನಪುಗಳು ತುಂಬಾ ಇವೆ. ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಮನೆಯಲ್ಲಿ ಗಣೇಶನ ವಿಗ್ರಹ ತಂದು ಪೂಜಿಸುವ ಪದ್ಧತಿಯನ್ನು ನೋಡಿದ್ದೆವು. ಹಬ್ಬಕ್ಕೆ ಇನ್ನೂ ಒಂದು ತಿಂಗಳಿರುವಾಗಲೇ ಅಮ್ಮ ಹಬ್ಬ ಬರ್ತಿದೆ... ಎಷ್ಟೊಂದು ಕೆಲಸಗಳಿವೆ ಎಂಬ ಹಾಡು ಶುರು ಮಾಡಿರುತ್ತಿದ್ದರು. ಹತ್ತಿ ಬಿಡಿಸುತ್ತಾ, ಹೂಬತ್ತಿಗಳನ್ನು ಮಾಡುತ್ತಾ ನಮಗೂ ಆದೇಶಗಳನ್ನು ಕೊಡುತ್ತಿದ್ದರು. ಒಂದು ಗುಂಡಾದ.. ತಳ ಮಟ್ಟಸವಾಗಿದ್ದ ಸುಮಾರು ದೊಡ್ಡದೂ ಅಲ್ಲದ, ಚಿಕ್ಕದೂ ಅಲ್ಲದ ಒಂದು ಡಬರಿಯಂತಹದ್ದಕ್ಕೆ ಅಮ್ಮ ಬಿಳಿಯ ಬಟ್ಟೆಯನ್ನು ಚಿಕ್ಕದಾದ, ತೆಳುವಾದ ಹೊಸ ಟವೆಲ್ಲು) ಎಳೆದು ಬಿಗಿಯಾಗಿ ಕಟ್ಟಿ ಇಟ್ಟುಕೊಂಡಿರುತ್ತಿದ್ದರು. ಕಾಳು, ಕಸ ಎಲ್ಲಾ ತೆಗೆದು ಬಿಡಿಸಿದ ಶುಭ್ರವಾದ ಹತ್ತಿಯನ್ನು.. ಕೈಗೆ ಹಾಲು ಅಥವಾ ವಿಭೂತಿ ಹಚ್ಚಿಕೊಳ್ಳುತ್ತಾ.. ಎಡಗೈಯಲ್ಲಿ ಸ್ವಲ್ಪ ಮೇಲೆ ಹಿಡಿದುಕೊಂಡು ಬಲಗೈಯಿಂದ ತೆಳುವಾಗಿ, ನಾಜೂಕಾಗಿ ಎಳೆಯುತ್ತಾ, ಸಣ್ಣಗೆ, ಉದ್ದಕ್ಕೆ ಎಳೆ ಎಳೆದು ಸುತ್ತಿ ಇಡುತ್ತಿದ್ದರು. ಅದನ್ನು ಆಮೇಲೆ ತಮ್ಮ ಮನಸ್ಸಿಗೆ ಬಂದ ಹೊಸಾ ಹೊಸಾ ಅದ್ಭುತವಾದ ಚಿತ್ರಗಳಂತೆ ಒಂದನ್ನೊಂದು ಇಲ್ಲಿ - ಅಲ್ಲಿ ಸೇರಿಸಿ ಅದನ್ನು ಹೂವು, ಹಾರ ಎಲ್ಲಾ ಮಾಡುತ್ತಿದ್ದರು. ಅವರು ಹೀಗೆ ಎಳೆದಿಟ್ಟ ಎಳೆಯನ್ನು ವಿಧ ವಿಧವಾದ ಹಾರಗಳಾಗಿ ಪರಿವರ್ತಿಸುವಾಗ, ನನಗೊಂದು ಪುಟ್ಟ ಕೆಲಸ ಕೊಟ್ಟು ಕೂರಿಸುತ್ತಿದ್ದರು. ಅವರು ಹೇಳಿದ ಬಣ್ಣದ ಕಾಗದ (ವರ್ತರೇಕು ಅಂತಿದ್ವಿ)ವನ್ನು ಹೇಳಿದಂತೆ ಚಿಕ್ಕ ಚಿಕ್ಕದಾಗಿ, ಕೇಳಿದಷ್ಟು ಉದ್ದಕ್ಕೆ ಕತ್ತರಿಸಿಕೊಡಬೇಕಿತ್ತು.. ಆ ಕಾಗದ ಎಷ್ಟು ನಾಜೂಕಾಗಿತ್ತೆಂದರೆ... ಸ್ವಲ್ಪ ಜೋರಾಗಿ ಮುಟ್ಟಿದರೂ ಹರಿದು ಹೋಗುತ್ತಿತ್ತು. ಆಗೆಲ್ಲಾ ಅಮ್ಮನ ಕೆಂಗಣ್ಣಿಗೆ ಗುರಿಯಾಗ ಬೇಕಿತ್ತು. ಅಮ್ಮ ಎಳೆದಿಟ್ಟ ಆ ಎಳೆಯನ್ನು ನಾಜೂಕಾಗಿ, ಕ್ರೋಶಾ ಕಡ್ಡಿಯಿಂದ ಒಂದು ಬೆರಳಿನಷ್ಟು ಅಗಲಹೆಣೆದು ಅದರ ಕೆಳಗೆ ಚಿಕ್ಕ ಚಿಕ್ಕ ಗುಂಡಗಿನ ಹತ್ತಿಯ ಪದಕಗಳನ್ನು ಮಾಡಿ ಅಂಟಿಸಿ, ಚಮಕಿಗಳಿಂದ ಅಲಂಕರಿಸಿ, ಕಾಸಿನ ಸರ, ಗೆಜ್ಜೆಯ ಸರ ಎಲ್ಲಾ ಮಾಡುತ್ತಿದ್ದೆವು. ನಾನೂ ನನ್ನಕ್ಕ ಇಬ್ಬರಿಗೂ ಯಾವಾಗಲೂ ಪೂಜೆಗೆ ಎಲ್ಲವನ್ನೂ ರೆಡಿ ಮಾಡುವ ಕೆಲಸ. ಸಂಭ್ರಮವೆಲ್ಲಾ ಹಿಂದಿನ ದಿನವೇ ಶುರುವಾಗಿ ಬಿಟ್ಟಿರುತ್ತಿತ್ತು. ಅಪ್ಪ ಹಿಂದಿನ ರಾತ್ರಿ ೮.೩೦ - ೯ ಘಂಟೆಗೆ ಗಣೇಶನನ್ನು ತರಲು ಹೋಗುತ್ತಿದ್ದರು. ನಾನು ಅಕ್ಕ ಇಬ್ಬರೂ ಸಾಯಂಕಾಲದಿಂದಲೇ ಗಣೇಶ ಇಡುವ ಜಾಗವೆಲ್ಲಾ ಗುಡಿಸಿ, ಒರೆಸಿ, ರಂಗೋಲಿಹಾಕಿರುತ್ತಿದ್ದೆವು. ನಮ್ಮನೆಯಲ್ಲಿ ಒಂದು ತುಂಬಾ ಹಳೆಯ ಮರದ ಕುರ್ಚಿ ಇತ್ತು. ಅದನ್ನೂ ತೊಳೆದು, ಅದಕ್ಕೆ ಬಾಳೆಯ ಕಂಬ ಕಟ್ಟಿ, ಮಾವಿನ ಸೊಪ್ಪಿನ ತೋರಣ ಕಟ್ಟಿರುತ್ತಿದ್ದೆವು. ಅದರ ಮುಂದೆ ಒಂದು ಚಿಕ್ಕ ಮಂದಾಸನ ಹಾಕಿರುತ್ತಿದ್ದೆವು. ಮಂದಾಸನದ ಮೇಲೆಅಮ್ಮ ತಟ್ಟೆ ಇಟ್ಟು, ಕುಂಕುಮಾರ್ಚನೆ ಎಲ್ಲಾ ಮಾಡುತ್ತಿದ್ದರು. ಮಂದಾಸನಕ್ಕೂ, ಕುರ್ಚಿಗೂ ಒಗೆದ, ಕಸೂತಿ ಮಾಡಿದ ಬಟ್ಟೆ ಹಾಸಿ, ಅರಿಸಿನ ಕುಂಕುಮಗಳಿಂದ ಅವು ಕರೆಯಾಗಬಾರದೆಂದು, ಅದರ ಮೇಲೆ ಕಾಗದ ಹಾಸಿ... ಬಾಳೆಕಂಬಕ್ಕೂ ಸೇರಿಸಿ ಸುತ್ತಿ, ಸೀರಿಯಲ್ ಬಲ್ಬುಗಳ ದೀಪಾಲಂಕಾರ ಮಾಡುತ್ತಿದ್ದೆವು. ಕುರ್ಚಿಯ ಅಕ್ಕ ಪಕ್ಕದಲ್ಲಿ ಎತ್ತರದ ದೊಡ್ಡ ದೊಡ್ಡ ದೀಪದ ಕಂಭಗಳನ್ನುಇಟ್ಟು ತುಂಬಾ ಎಣ್ಣೆ ಹಾಕಿ ದೀಪ ಹಚ್ಚುತ್ತಿದ್ದೆವು.
ಮೊದಲು ಗೌರಮ್ಮನ ವಿಗ್ರಹ ತರುವ ಅಭ್ಯಾಸ ಇರಲಿಲ್ಲ. ಆದರೆ ನಾನು ೨ - ೩ನೇ ತರಗತಿಗೆ ಬಂದಾಗಿನಿಂದ ಅಪ್ಪನ ಜೊತೆ ಗಣೇಶನನ್ನು ತರಲು ಹೋಗುತ್ತಿದ್ದೆ. ಕುಂಬಾರ ಕೇರಿಯಲ್ಲಿ ಸಾಲು ಸಾಲು ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಮಾಡುತ್ತಿದ್ದರು. ಜೊತೆಗೆ ವಿಧ ವಿಧದ ಸಣ್ಣ ದೊಡ್ದ ಬಣ್ಣ ಬಣ್ಣದ ಗೌರಮ್ಮನ ವಿಗ್ರಹಗಳೂ ಇರುತ್ತಿದ್ದವು. ನಮಗೆ ಪರಿಚಿತರಾದ ಒಬ್ಬರ ಮನೆಯಿಂದಲೇ ಅಪ್ಪ ಯಾವಾಗಲೂ ತರುತ್ತಿದ್ದದ್ದು. ಅಲ್ಲಿ ಹೋಗಿ ನೋಡಿದಾಗ ಸುಂದರವಾದ, ಮುದ್ದಾದ ಗೌರಮ್ಮನ ವಿಗ್ರಹಗಳು ನನ್ನನ್ನು ತುಂಬಾ ಆಕರ್ಷಿಸುತ್ತಿದ್ದವು. ನಮ್ಮ ಮನೆಯಲ್ಲಿ ತರುವ ಪದ್ಧತಿ ಇಲ್ಲವೆಂದಾಗ ನನ್ನ ಸಪ್ಪೆ ಮುಖ ನೋಡಲಾರದೆ ಅಪ್ಪ ಪುಟ್ಟ ಗೌರಮ್ಮನನ್ನು ನನಗೆ ಆಟವಾಡಲು ಕೊಡಿಸ ತೊಡಗಿದರು. ಆದರೆ ನಾನದನ್ನು ಹಟಮಾಡಿ ಗಣೇಶನ ಜೊತೆಗೇ ಇಟ್ಟು ಪೂಜಿಸುತ್ತಿದ್ದೆ... ಬೆಳ್ಳಿಯ ತಟ್ಟೆಯಲ್ಲಿ ಅಕ್ಕಿ ಹಾಕಿಕೊಂಡು, ಅಪ್ಪ ಗಣೇಶನನ್ನು ಕರೆದುಕೊಂಡು ಬರಲು ಹೊರಡುವುದೇ ಒಂದು ಸೊಗಸಾದ ನೋಟವಾಗಿತ್ತು ನನಗೆ. ವಾಪಸ್ಸು ಬಂದಾಗ ಅಮ್ಮ ಬೀದಿಯ ಬಾಗಿಲಿನಲ್ಲೇ ಅಪ್ಪನಿಗೂ, ಗಣೇಶನಿಗೂ ಸೇರಿಸಿ ಆರತಿ ಮಾಡಿಯೇ ಒಳಗೆ ಕರೆದುಕೊಳ್ಳುತ್ತಿದ್ದರು. ಅಷ್ಟರಲ್ಲಿ ನಾವು ಅಲಂಕರಿಸಿಟ್ಟಿರುತ್ತಿದ್ದ ಖುರ್ಚಿಯಲ್ಲಿ ಗಣೇಶ . ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಹೂವಿನ ಹಾರ ಹಾಕಿ ಎಲ್ಲಾ ಅಲಂಕಾರವೂ ಹಿಂದಿನ ರಾತ್ರಿಯೇ ಮುಗಿದಿರುತ್ತಿತ್ತು. ಬೇರೆ ಬೇರೆ ತಟ್ಟೆಗಳಲ್ಲಿ ವಿಧ ವಿಧದ ಹೂಗಳನ್ನು ಜೋಡಿಸಿಡುತ್ತಿದ್ದೆವು. ನಮ್ಮನೆಯ ಹಿಂದುಗಡೆ ದೊಡ್ಡ ತೋಟವೇ ಇತ್ತು. ಅಪ್ಪ ತುಂಬಾ ಹೂವಿನ ಗಿಡಗಳನ್ನೂ ಬೆಳೆಸಿದ್ದರು. ಹಬ್ಬದ ಹಿಂದಿನ ದಿನ ಸಾಯಂಕಾಲ ೪ -೫ ಘಂಟೆಗೆಲ್ಲಾ ಅಮ್ಮ ಎಲ್ಲಾ ಹೂವಿನ ಗಿಡಗಳಿಂದಲೂ ಎರಡೆರಡು ಎಲೆಗಳನ್ನು ಕಿತ್ತು ತರಲು ಹೇಳುತ್ತಿದ್ದರು. ಜೊತೆಗೆ ಗರಿಕೆಯ ಹುಡುಕಾಟ ಕೂಡ ಆಗಲೇ ಆಗುತ್ತಿತ್ತು. ಕನಿಷ್ಠ ೨೧ ಆದರೂ ಇರಬೇಕು... ಸರಿಯಾಗಿ ಹುಡುಕ್ರೇ... ಅಂತ ಅಮ್ಮ ನನಗೂ ನನ್ನಕ್ಕನಿಗೂ ಬಹಳ strict ಆದೇಶ ಕೊಡುತ್ತಿದ್ದರು.....!
ಗೌರಿ ಹಾಗೂ ಗಣೇಶನ ಪೂಜೆ ಎರಡೂ ಒಂದೇ ದಿನ ಬಂದರಂತೂ ನಮ್ಮಮ್ಮನ ಧಾವಂತಕ್ಕೆ ಕೊನೆಯೇ ಇರುತ್ತಿರಲಿಲ್ಲ. ನಮ್ಮನೆಯಲ್ಲಿ ಗೌರಿಯನ್ನು ಕೂಡಿಸುತ್ತಿರಲಿಲ್ಲವಾಗಿ, ನಾವು ಹತ್ತಿರದಲ್ಲೇ ಇದ್ದ ರಾಮದೇವರ ದೇವಸ್ಥಾನದಲ್ಲಿ ಬೆಳಗಿನ ಮೊದಲ ಪೂಜೆಗೆ ಅಂದರೆ ೪.೩೦ಕ್ಕೆ ಶುರುವಾಗುವ ಪೂಜೆಗೆ ಹೋಗಬೇಕಾಗಿತ್ತು. ಅದಕ್ಕೂ ಅರ್ಧ ಘಂಟೆ ಮೊದಲೇ ಹೋದರೆ ನಮಗೆ ಗೌರಮ್ಮನ ಹತ್ತಿರ, ಪಕ್ಕದಲ್ಲೇ ಕುಳಿತು ಪೂಜಿಸುವ ಅವಕಾಶ ಸಿಕ್ಕುತ್ತಿತ್ತು. ಹಾಗಾಗಿ ೩ ಘಂಟೆಗೆಲ್ಲಾ ಎದ್ದು, ಸ್ನಾನ ಮಾಡಿಕೊಂಡು, ಅಮ್ಮ ಕೊಟ್ಟ ಕಾಫಿ ಕುಡಿದು, ನಾನು, ಅಕ್ಕ ಮತ್ತು ಅಮ್ಮ ಪೂಜೆಗೆ ಬೇಕಾದ ಎಲ್ಲಾ ವಸ್ತುಗಳನ್ನೂ ತಟ್ಟೆಗಳಲ್ಲಿ ಜೋಡಿಸಿಟ್ಟುಕೊಂಡು ಹೊರಡುತ್ತಿದ್ದೆವು. ಅಪ್ಪ ನಾವು ಕರೆದಾಗ ಎದ್ದು ಬಂದು ನಾವು ದೇವಸ್ಥಾನದ ತಿರುವಿನಲ್ಲಿ ಮರೆಯಾಗುವವರೆಗೂ ರಸ್ತೆಯಲ್ಲಿ ನಿಂತುನೋಡುತ್ತಿದ್ದರು. ೭.೩೦ ಹೊತ್ತಿಗೆ ಪೂಜೆ ಮುಗಿಸಿಕೊಂಡು ಬಂದರೆ ಅಪ್ಪನ ಜೊತೆ ಮತ್ತೊಂದು ಸಲ ಕಾಫಿ ಕುಡಿದು, ನಾವು ಅಮ್ಮನ
ಆಜ್ಞೆಗಳನ್ನು ಪಾಲಿಸಲು ರೆಡಿಯಾಗುತ್ತಿದ್ದೆವು. ನಮ್ಮ ಮನೆಗೇ ಭಟ್ಟರು ಬಂದು ಅಪ್ಪನ ಹತ್ತಿರ ಗಣೇಶನ ಪೂಜೆ ಮಾಡಿಸುತ್ತಿದ್ದರು. ಅಪ್ಪ ಅಲ್ಲಿ ಕುಳಿತು ಬಿಟ್ಟರೆ, ಅವರು ಕೇಳಿದ್ದೆಲ್ಲಾ ತೆಗೆದು ಕೊಡುತ್ತಾ, ಅಮ್ಮನ ಆದೇಶಗಳನ್ನೂ ಪಾಲಿಸುತ್ತ ಅಡಿಗೆ ಮನೆ ಹಾಗೂ ಪೂಜೆಯ ಹಾಲ್ ಗೆ ಸಂಭ್ರಮದಿಂದ ಓಡಾಡುತ್ತಿದ್ದೆವು. ಪೂಜೆ ಮುಗಿದು, ಅಮ್ಮ ನೈವೇದ್ಯಕ್ಕೆ ತಂದಿಟ್ಟು, ಮಂಗಳಾರತಿ ಆದ ಮೇಲೆ, ನಮಗೆ ಪೂಜೆ ಮಾಡುವ ಅವಕಾಶ. ಎಲ್ಲಾ ಮುಗಿಸಿ, ಭಕ್ತಿಯಿಂದ ಪ್ರದಕ್ಷಿಣೆ ನಮಸ್ಕಾರ ಹಾಕಿ, ಪಂಚಾಮೃತಕ್ಕೆ ಕೈಯೊಡ್ಡಿದರೆ, ಗಣೇಶನ ಪೂಜೆ ಮುಗಿಸಿದ ಸಮಾಧಾನ. ಭಟ್ಟರು ಆ ದಿನ ತುಂಬಾ ಮನೆಗಳಿಗೆ ಪೂಜೆಗೆ ಹೋಗುತ್ತಿದ್ದರೆಂದು, ಕಥೆಯನ್ನು ನಾನೇ ಓದುತ್ತಿದ್ದೆ. ಕಥೆ ಕೇಳಿದ ನಂತರ, ನಮಗೆ ಅಲ್ಲೆಲ್ಲಾ ಮತ್ತೆ ಶುಚಿಗೊಳಿಸುವ ಕೆಲಸ.
ಅಮ್ಮನ ಅಡಿಗೆ ಆಗಿ, ಹಬ್ಬದೂಟಕ್ಕೆ ಕರೆ ಬರುವಷ್ಟರಲ್ಲಿ, ನಾವು ಅಲ್ಲಿ ಒರೆಸಿ, ಹೊಸದಾಗಿ ದೊಡ್ಡದಾಗಿ ರಂಗವಲ್ಲಿ ಬಿಡಿಸಿ, ಬಣ್ಣತುಂಬಿ ಹೂವಿಟ್ಟು ಅಲಂಕರಿಸುತ್ತಿದ್ದೆವು. ಗಣೇಶನ ಹಬ್ಬಕ್ಕೆಂದೇ ಸುಧಾ ಪತ್ರಿಕೆಯಲ್ಲಿ ಚುಕ್ಕಿ ರಂಗವಲ್ಲಿಯಲ್ಲಿ ಬಂದಿರುತ್ತಿದ್ದ ಹೊಸಾ ವಿಧದ ಗಣೇಶನನ್ನು ಬಿಡಿಸಿ, ಅದಕ್ಕೂ ಬಣ್ಣ ತುಂಬಿ, ದೀಪಗಳಿಗೆ ಎಣ್ಣೆ ಹಾಕಿ ಹಚ್ಚಿಡುತ್ತಿದ್ದೆವು. ಊಟ ಆದ ತಕ್ಷಣವೇ... ಪುರುಸೊತ್ತಿಲ್ಲದಂತೆ "ರೀ ನಿಮ್ಮನೇಲಿ ಗಣೇಶನ್ನ ಕೂಡ್ಸಿದೀರಾ" ಅಂತ ಬರುವ ಹುಡುಗರ ಹಿಂಡನ್ನು ಅಂಕೆಯಲ್ಲಿಡುವುದೇ ದೊಡ್ಡ ಕೆಲಸವಾಗುತ್ತಿತ್ತು. ಏ ಅಲ್ಲಿ ರಂಗೋಲಿ ಹಾಕಿದೀನಿ ತುಳೀಬೇಡ್ರೋ... ಈ ಕಡೆಯಿಂದಾನೆ ಬನ್ರೋ... ಅಂತ ಕೂಗೋದೇ ನನ್ನ ಕೆಲಸವಾಗಿತ್ತು. ೧೦೮ ಗಣೇಶಗಳನ್ನು ನೋಡಲು ಹೊರಟ ಹುಡುಗರು, ರಂಗವಲ್ಲಿಯ ಗಣೇಶನನ್ನೂ ಎಣಿಸಿಕೊಂಡು ಬಿಡುತ್ತಿದ್ದರು...!
ಸಾಯಂಕಾಲ ಗಣೇಶನಿಗೆ ಮತ್ತೆ ಭಟ್ಟರ ಸಹಾಯದಿಂದ ಪುನರ್ ಪೂಜೆ ಮಾಡಿ, ಮೊಸರವಲಕ್ಕಿ ತೆಗೆದುಕೊಂಡು, ಬೀಳ್ಕೊಡುವ ಸಮಾರಂಭ. ದಾರಿಯುದ್ದಕ್ಕೂ ಘಂಟೆಯ ಶಬ್ದ ಮಾಡುತ್ತಾ ಮನೆಯ ಹತ್ತಿರವೇ ಇದ್ದ ಭದ್ರಾ ನದಿಯಲ್ಲಿ ಗಣೇಶನ ಬೀಳ್ಕೊಡುಗೆಗೆ ಹೋಗುತ್ತಿದ್ದೆವು. ನದಿಯ ಮೆಟ್ಟಿಲುಗಳ ಮೇಲೆ ಗಣೇಶನಿಗೆ ಮತ್ತೆ ಪೂಜಿಸಿ, ಮೊಸರವಲಕ್ಕಿಯ ಬುತ್ತಿ ಕೊಟ್ಟ ನಂತರ, ಅಪ್ಪ ನದಿಯಲ್ಲಿ ಇಳಿದು ವಿಸರ್ಜಿಸಲು ಹೊರಡುತ್ತಿದ್ದರೆ, ನಾವು ಅಪ್ಪಾ ತುಂಬಾ ಮುಂದೆ ಹೋಗ್ಬೇಡಿ... ಇಲ್ಲೇ ಬಿಡಿ ಸಾಕು... ಅಂತ ಆತಂಕದಿಂದ ನೋಡುತ್ತಾ ಕಾಯುತ್ತಿದ್ದೆವು. ಅಪ್ಪ ಬಂದ ನಂತರ ಮಿಕ್ಕಿದ್ದ ಮೊಸರವಲಕ್ಕಿ ಎಲ್ಲಾ ತಿಂದು ಮುಗಿದೇ ಹೋಯಿತಲ್ಲಾ ಗೌರಿ ಗಣೇಶನ ಹಬ್ಬ ಎಂದು ಸಪ್ಪೆ ಮುಖದಿಂದ ಮನೆಗೆ ವಾಪಸ್ಸು ಬರುತ್ತಿದ್ದೆವು. ಮತ್ತೆ ಮುಂದಿನ ವರ್ಷದ ಗೌರಿ ಗಣೇಶರ ಆಗಮನಕ್ಕಾಗಿ ಕಾಯುತ್ತಿದ್ದೆವು. ಇದೆಲ್ಲಾ ಸಂಭ್ರಮದಲ್ಲೂ ನಾನು ನನ್ನ ಪುಟ್ಟ ಗೌರಿಯನ್ನು ನೀರಿನಲ್ಲಿ ವಿಸರ್ಜಿಸುತ್ತಿರಲಿಲ್ಲ. ಹಾಗೇ ಎತ್ತಿಟ್ಟುಕೊಂಡಿರುತ್ತಿದ್ದೆ, ಮುಂದಿನ ವರ್ಷ ಹೊಸ ಗೌರಮ್ಮ ಬರುವವರೆಗೂ..... ಈಗ ಆ ನೆನಪುಗಳದೆಷ್ಟು ಮಧುರ, ಸುಂದರ ಮತ್ತು ಆಪ್ತ ಎನ್ನಿಸುತ್ತದೆ.....
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.........
ಚಿತ್ರಕೃಪೆ : ಅಂತರ್ಜಾಲ
ಚಿತ್ರಕೃಪೆ : ಅಂತರ್ಜಾಲ
ನಿಮಗೆ ಹಾಗು ನಿಮ್ಮ ಕುಟುಂಬ ದವರಿಗೆ ಸ್ವರ್ಣ ಗೌರಿ ಹಾಗು ಗಣಪತಿ ಹಬ್ಬದ ಶುಭಾಶಯಗಳು.
ReplyDeleteಹಬ್ಬಕ್ಕೆ ಸೊಗಸಾದ ಬರಹ. ನಿಮಗೂ ಗೌರಿ ಹಾಗು ಗಣಪತಿ ಹಬ್ಬದ ಶುಭಾಶಯಗಳು.
ReplyDeleteA nice description-msh
ReplyDeleteಶಾಮಲಾ ಅವರೆ ಹಬ್ಬದ ಶುಭಾಶಯಗಳು. ಈ ಹಬ್ಬಗಳು ಅದೆಷ್ಟು ನೆನಪನ್ನು ಹೊತ್ತು ತರುತ್ತವೆಯಲ್ಲ
ReplyDeleteನೀವು ಹೇಳಿದ ಬತ್ತಿ ಹೊಸೆಯುವುದು ಇತ್ಯಾದಿ ಮಾತ್ರ ನಮ್ಮ ಪೀಳಿಗೆಗೆ ಮುಗಿದುಹೋದ ಸಂಗತಿ ಇದೇ ನೋವು
ತರುವುದು..
ನಿಮ್ಮ ಮನೆಯಲ್ಲಿ ಗೌರಿ ಪೂಜೆಯನ್ನು ನೀವೇ ಪ್ರಾರಂಭಿಸಿದಿರಿ ಎಂದಾಯ್ತು!
ReplyDeleteಗೌರಿ ಹಾಗು ಗಣೇಶನ ಹಬ್ಬದ ಶುಭಾಶಯಗಳು.
ನಿಮ್ಮ ಅನುಭವಗಳನ್ನು, ಅಭಿಪ್ರಾಯಗಳನ್ನೂ ಹಮ್ಚಿಕೊಂಡಿದ್ದು ಚೆನ್ನಾಗಿತ್ತು. ಮುಂದೆ ಯಾವ ರೀತಿಯ ಆಚರಣೆಗಳು ಮೈದಳೆಯಲಿವೆಯೋ ನೋಡೊಣ !. ಧನ್ಯವಾದಗಳು ನಿಮಗೆ.
ReplyDeleteಬಾಲು ಸಾರ್, ಶಿವು ಸಾರ್ ಧನ್ಯವಾದಗಳು ಹಾಗೂ ನಿಮಗೂ ಹಬ್ಬದ ಶುಭಾಶಯಗಳು.
ReplyDeleteಹೆಬ್ಬಾರ್ ಸಾರ್... ನನ್ನ ಮಾತುಗಳನ್ನೋದಲು ಬಂದ ನಿಮಗೆ ಸ್ವಾಗತ ಹಾಗೂ ಧನ್ಯವಾದಗಳು.
ಉಮೇಶ್ ಸಾರ್...
ಹಬ್ಬದ ನೆನಪುಗಳು ಅಸಂಖ್ಯ, ಒಂದೆರಡು ನೋವಿನ ಹಾಗೂ ತಮಾಷೆಯ ಸಂಗತಿಗಳೂ ಇವೆ... ಇನ್ಯಾವಾಗಾದರೂ ಬರೆಯುವೆ.. ನಿಮಗೂ ಹಬ್ಬದ ಶುಭಾಶಯಗಳು. ಹೂಬತ್ತಿ ಮಾಡುವ ಕೆಲಸ ನಮಗೇ ಬರಲಿಲ್ಲ ಸಾರ್. ನಮ್ಮನೆಯಲ್ಲಂತೂ ಅದು ನಮ್ಮ ತಾಯಿಯ ಜೊತೆಗೇ ಮುಗಿಯಿತು. ಈಗಿನ ಜೀವನ ಶೈಲಿಯಲ್ಲಿ ಅದಕ್ಕೆಲ್ಲಾ ಸಮಯ ಹೊಂದಿಸಿಕೊಳ್ಳುವ ಆಸಕ್ತಿ ಹೆಚ್ಚು ಮಂದಿಗೆ ಇಲ್ಲ. ಹೌದು ಇದು ನೋವಿನ ಸಂಗತಿಯೇ, ಆದರೆ ಅದೊಂದು ಬಿಟ್ಟು, ಬಾಕಿಯ ಹಲವಾರು ಕಲೆ ತಾಯಿಯಿಂದ ನಮಗೆ ಬಂದಿದೆ ಎಂಬುದೇ ಸ್ವಲ್ಪ ಸಮಾಧಾನದ ಸಂಗತಿ. ಧನ್ಯವಾದಗಳು ಸಾರ್.
ಸುನಾತ್ ಕಾಕಾ...
ನಮಸ್ಕಾರಗಳು ಹಾಗೂ ನಿಮಗೂ ಹಬ್ಬದ ಶುಭಾಶಯಗಳು. :-).. ಒಂದು ರೀತಿಯಲ್ಲಿ ಮಣ್ಣಿನ ಗೌರಮ್ಮ ನಮ್ಮನೆಗೆ ನನ್ನಿಂದಲೇ ಬಂದಳು...!!
ಸುಬ್ರಹ್ಮಣ್ಯ ಸಾರ್..
ನನ್ನ ಅನುಭವ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು. ಆಚರಣೆಯಲ್ಲಿ ಬೇಕಾದಷ್ಟು ಬದಲಾವಣೆ ಸಾರ್ವಜನಿಕವಾಗಿ ಆಗಿದ್ದರೂ, ಈಗಲೂ ಶಾಸ್ತ್ರೋಕ್ತವಾಗಿ, ಶ್ರದ್ಧೆಯಿಂದ, ಭಕ್ತಿಯಿಂದ ಆಚರಿಸುವವರೂ ಇದ್ದಾರೆ. ಅದು ಅವರಿಂದ ಮುಂದಿನ ಪೀಳಿಗೆಗೂ ಉಡುಗೊರೆಯಾಗಿ ಕೊಡಲ್ಪಟ್ಟರೆ, ಪರಂಪರೆ ಖಂಡಿತಾ ಉಳಿಯುತ್ತದೆ...ನಿಮಗೂ ಹಬ್ಬದ ಶುಭಾಶಯಗಳು.
ಗೌರಿ-ಗಣೇಶ ಹಬ್ಬದ ಆಚರಣೆಯ ಸವಿ ನೆನಪುಗಳ ಸು೦ದರ ನಿರೂಪಣೆಯನ್ನು ಓದಿ ನಿನ್ನೆ ಮನೆಯಲ್ಲಿ ನಡೆದ ಹಬ್ಬದ ವಾತಾವರಣವು ಮರುಕಳಿಸಿದ೦ತಾಯ್ತು, ಶ್ಯಾಮಲಾ.. ಧನ್ಯವಾದಗಳು ಹಾಗೂ ಗೌರಿ-ಗಣೇಶನ ಹಬ್ಬದ ಶುಭಾಶಯಗಳು. ಹೂಬತ್ತಿ,ಎಳೆ ಬತ್ತಿ ಮಾಡುವುದು ಒ೦ದು ಪೀಳಿಗೆಗೆ ಮುಗಿದ ಸ೦ಗತಿ ಎನ್ನುವುದಕ್ಕೆ ಅಪವಾದಗಳಿವೆ! ಈಗಲೂ ಅದನ್ನು ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲದೇ, ದಿನ-ನಿತ್ಯ ಪೂಜೆಗಳಿಗೆ ಅಣಿಮಾಡುವ ಅನೇಕ ಸ೦ಸಾರಗಳಿವೆ.
ReplyDeleteಶುಭಾಶಯಗಳು
ಅನ೦ತ್
ನನ್ನ ನೆನಪುಗಳು ನಿಮಗೂ ಹಬ್ಬದ ವಾತಾವರಣವನ್ನು ಮತ್ತೆ ನೆನಪಿಸಿತೆಂದು, ಹೇಳಿದ್ದೀರಿ... ಸವಿ ನೆನಪುಗಳಿಂದ ನಿಮಗೂ ಸಂತಸವಾಗಿದ್ದರೆ, ನಾನು ನನ್ನ ನೆನಪುಗಳನ್ನು ಬರೆದು, ನಿಮ್ಮೆಲ್ಲರೊಡನೆ ಹಂಚಿಕೊಂಡಿದ್ದು ಸಾರ್ಥಕವಾಯಿತೆಂದು ಕೊಳ್ಳುವೆ. ನಿಮಗೂ ಹಬ್ಬದ ಶುಭಾಶಯಗಳು ಅನಂತ್ ಸಾರ್. ಹೂಬತ್ತಿ ಮತ್ತು ಹತ್ತಿಯ ಕೆಲಸಗಳು ಮುಂಚಿನಂತೆ ಎಲ್ಲರ ಮನೆಯಲ್ಲೂ ನಡೆಯೋಲ್ಲ ಎಂಬರ್ಥದಲ್ಲಿ ಹೇಳಿದೆ. ಅದನ್ನೇ ಒಂದು ಕಾಯಕವನ್ನಾಗಿ ಮಾಡಿಕೊಂಡಿರುವವರು ತುಂಬಾ ಜನರಿರುವುದರಿಂದಲೇ... ಇವತ್ತು ಎಲ್ಲವೂ ready made ಸಿಕ್ಕುತ್ತಿರವುದು. ಅದೊಂದು ಅದ್ಭುತವಾದ ಕಲೆ. ನಾನು ಕಲಿಯಲಿಲ್ಲವೆಂಬ ನಿರಾಸೆ ನನಗಿದೆ. ನಿಮ್ಮ ಅಭಿಪ್ರಾಯಕ್ಕೆ ನನ್ನ ಧನ್ಯವಾದಗಳು...
ReplyDeleteಶ್ಯಾಮಲಾ,
ReplyDeleteನಿಮ್ಮ ಬಾಲ್ಯದಲ್ಲಿನ ಗೌರಿ-ಗಣೇಶ ಹಬ್ಬದ ನೆನಪುಗಳನ್ನು ಓದುತ್ತಾ ಹೋದಂತೆ, ನಮ್ಮ ಮನೆಗೂ ಗಣೇಶನ ಆಗಮನದ ನೆನಪುಗಳು ಬಂದವು.
ಧನ್ಯವಾದಗಳು.
ಗೌರಿ ಹಾಗು ಗಣೇಶನ ಹಬ್ಬದ ಶುಭಾಶಯಗಳು ತಡವಾಗಿ
ReplyDeleteಗೌರಿಗಣೇಶ ಹಬ್ಬದ ಶುಭಾಶಯಗಳು.
ReplyDeleteತುಂಬಾ ಆಪ್ತತೆಯಿಂದ ಹಬ್ಬದ ಕ್ಷಣಗಳನ್ನ ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದಿರಾ.ಜೊತೆಗೆ ಆಚರಣೆಯ ಸಂಭ್ರಮ ಪದ್ದತಿಗಳು ಸೊಗಸಾಗಿವೆ.
ನಮ್ಮ ಕ್ಲಾಸಿನ ಹುಡುಗಿಯರ ಮನೆ ಹೊಕ್ಕಲು ನಾವು ೧೦೮ ಗಣಪತಿ ದರ್ಶನ ನೆವ ಉಪಯೋಗಿಸುತ್ತಿದ್ದೆವು.ಎಲ್ಲಾ ಗೆಳತಿಯರ ಮನೆ ಆದ ಮೇಲೆ ಮುಗಿಸಿಬಿಡುತ್ತಿದ್ದೆವು :-).
ದೇವರೆದುರು ೧೦ ಸರ್ತಿ ಉಟಾ-ಬೈಟ್ ಮಾಡುತ್ತಿದ್ದೆವು.
ನನಗು ಬಾಲ್ಯದ ದಿನಗಳು ನೆನಪಾದವು. ನಮ್ಮ ಮನೆಯಲ್ಲಿ ಗಣಪತಿ ತಂದಿತ್ತು ಕಲಿಸುವ ಸಂಪ್ರದಾಯವಿಲ್ಲದಿದ್ದರೂ ಮನೆಯ ಬೆಳ್ಳಿ-ಕಂಚಿನ ಮೂರ್ತಿಗೆ ಪಂಚಾಮೃತ ಅಭೆಷೇಕ ಮಾಡಿ, ಮೋದಕ ನೈವೆಧ್ಯಿಸಿ ಸಂಭ್ರಮಿಸುವ ಕ್ಷಣಗಳಿದ್ದವು. ಜೊತೆಗೆ ಗೆಳೆಯ-ಗೆಳತಿಯರ ಮನೆ ತಿರುಗುವದು ಇತ್ತೇ ಇತ್ತು ಗಣಪತಿ ನೋಡಲು.
ಧಾರವಾಡದ ಹಾಸ್ತೆಲ್ಲಿನಲ್ಲಿದ್ದಾಗ ಹುಬ್ಬಳ್ಳಿ ಗೆ ಬಂದು ರಾತ್ರಿ ಇಡಿ ಬೀದಿಯಲ್ಲಿತ್ತ ಸುಂದರ ಗಣಪತಿಗಳನ್ನು ನೋಡುತ್ತಿದ್ದೆವು.
Reminds our younger days. It used to be fun going from home to home for seeing 108 Ganesh's (more for the charpuu !!!!!)
ReplyDeleteThanks and wishes
Hemaprasad
ಚಂದ್ರೂ...
ReplyDeleteನನ್ನ ಮಾತುಗಳು ನಿಮಗೂ ಗಣೇಶನ ಆಗಮನದ ನೆನಪು ಮಾಡಿಸಿತೆಂದು ಕೇಳಿ ಸಂತಸವಾಯಿತು. ಧನ್ಯವಾದಗಳು...
ಗುರು ಸಾರ್...
ಶ್ರಾವಣದಲ್ಲಿ ಶುರುವಾದರೆ ದೀಪಾವಳಿವರೆಗು ಹಬ್ಬಗಳ ಸಾಲೇ ಸಾಲು ಅಲ್ಲವೇ... ಹಬ್ಬದ ಶುಭಾಶಯ ಹೇಳೋಕ್ಕೆ ತಡ ಏನಿಲ್ಲ ಸಾರ್, ಹೇಳೋದು ಮತ್ತು ಅದರ ಹಿಂದಿರುವ ಆತ್ಮೀಯತೆ ಮುಖ್ಯ ಅಷ್ಟೆ. ನಿಮಗೂ ಶುಭಾಶಯಗಳು.
ಸೀತಾರಾಮ್ ಸಾರ್...
ನಿಮ್ಮ ಚಿಕ್ಕ ವಯಸ್ಸಿನ ಹುಡುಗಾಟವನ್ನೆಲ್ಲಾ ಹೇಳಿಕೊಂಡಿದ್ದೀರಿ. ಕೇಳಿ ನಿಜಕ್ಕೂ ಸಂತೋಷವಾಯಿತು. ಆ ವಯಸ್ಸೇ ಹಾಗಲ್ಲವೇ... ಅಂತೂ ಗಣಪನಿಗೆ ಹೆದರಿ ಉಟ್-ಬೈಟ್ ಮಾಡ್ತಿದ್ರಿ ಅನ್ನಿ... :-) ಏನಿದ್ದರೂ ಆ ನೆನಪುಗಳೇ ಚೆನ್ನ. ಈಗ ಬೇಕೆಂದರೂ ಬಾರದ, ಸಿಹಿನೆನಪಿನ ಗಂಟು... ಬಿಚ್ಚಿದಷ್ಟೂ ಕುತೂಹಲ, ಸಂತೋಷ, ಮುದ... ಅಲ್ಲವೇ.. ಧನ್ಯವಾದಗಳು ಸಾರ್.
ನಮಸ್ಕಾರ ಹೇಮಪ್ರಸಾದ್ ರಿಗೆ...
ReplyDeleteನನ್ನ ಮಾತುಗಳನ್ನು ಓದಲು ಬಂದ ನಿಮಗೆ ಆದರದ ಸ್ವಾಗತ. ನಿಮಗೂ ನಿಮ್ಮ ಬಾಲ್ಯ ನೆನಪಾಗಿದೆ...!! ೧೦೮ಕ್ಕಿಂತಲೂ ಇನ್ನೂ ಹೆಚ್ಚು... :-)... ಧನ್ಯವಾದಗಳು ಮತ್ತು ನಿಮಗೂ ಶುಭಾಶಯಗಳು.