Thursday, March 31, 2011

ಬೆಳಕಿನ ಮಿಂಚು :ಅರಳಿದ್ದ ಸುಮವೊಂದು

ಬಾಡಿ ಮುದುಡಿತ್ತು....

ಮಲ್ಲಿಗೆಯ ಹಾರವು

ಬತ್ತಿ ಕಂದಾಗಿತ್ತು

ಅತ್ತು ಬಸವಳಿದ ಕೂಸು

ನನ್ನಪ್ಪಿ ಮಲಗಿತ್ತು

ಕೆಂದುಟಿಯ ಮೇಲಿದ್ದ

ಕೆಂಪು ಮಾಸಿತ್ತು...

ನಲುಗಿದ್ದ ನಾಸಿಕವು

ಕೆಂಡ ಸಂಪಿಗೆಯಾಗಿತ್ತು

ಪುಟ್ಟ ತೋಳುಗಳಲ್ಲಿ

ಕೊರಳನ್ನು ಬಳಸಿತ್ತು...

ಕೋಮಲ ಕೈಗಳ ಸ್ಪರ್ಶ

ಕುಡಿಯಂತೆ ಮೆದುವಿತ್ತು

ನಿದಿರೆಯಲಿ ಕನಸಿನಲಿ

ಉಮ್ಮಳಿಸಿ ಬಿಕ್ಕಿತ್ತು

ಮುಚ್ಚಿದ ಕಣ್ಣಾಲಿಯಲ್ಲಿ

ಹನಿಯು ಜಿನುಗುತಲಿತ್ತು

ಬೆಚ್ಚಿತ್ತು ಬೆದರಿತ್ತು

ಮಡಿಲಲ್ಲಿ ಹುದುಗಿತ್ತು

ಮೊಗದಲ್ಲಿ ಭಯವಿತ್ತು

ನನ್ನತ್ತ ನೋಡಿತ್ತು..

ತೋಳಿಂದ ಬಳಸುತ್ತ

ಕದಪುಗಳ ಚುಂಬಿಸುತ

ಅಕ್ಕರೆಯ ತೆಕ್ಕೆಯಲಿ

ಮೈಮನವ ಅರಳಿಸುತ

ಮುದುಡಿದ್ದ ಭಾವದಲಿ

ಮುದವನ್ನು ತುಂಬುತ್ತ

ಅಮೃತದ ಧಾರೆಯಲಿ

ಕಂದನಾ ಮೀಯಿಸಲು

ಹಸುಗೂಸ ಕಂಗಳಲಿ

ಬೆಳಕೊಂದು ಮಿಂಚಿತ್ತು

ವದನಾರವಿಂದದಲಿ

ಸಿಹಿ ನಗೆಯು ಚಿಮ್ಮಿತ್ತು

ತಬ್ಬುತ್ತ ಹಬ್ಬುತ್ತ

ಅನುರಾಗ ಹರಡುತ್ತ

ಸಾರ್ಥಕ್ಯ ಭಾವದಲಿ

ಜೀವಗಳು ಬೆರೆತಿತ್ತು...

ಪುಟ್ಟ ಕಂದ... ಅದೇನೋ ನೋಡಿ.. ಬೆದರಿ ತನ್ನ ಅಮ್ಮನನ್ನು ಹುಡುಕಿಕೊಂಡು ಅಡ್ಡಾ ದಿಡ್ಡಿಯಾಗಿ... ಏಳುತ್ತಾ... ಬೀಳುತ್ತಾ.... ಮೈ ಕೈಯೆಲ್ಲಾ ತರಚಿ ಗಾಯ ಮಾಡಿಕೊಂಡು ಓಡೋಡಿ ಬಂದಿದೆ... ತಾಯಿಯನ್ನು ಕಾಣದೆ.. ಕಂಗಾಲಾಗಿದೆ. ಕಣ್ಣಿಂದ ಧಾರೆಯಾಗಿ ಹರಿದ ನೀರು ಮುದ್ದು ಕಂದನ ಕೆನ್ನೆಯ ಮೇಲೆ ಕರೆಗಟ್ಟಿದೆ. ಮುದ್ದಾದ ಸುಂದರ ಮೊಗವು ಕಳೆಗುಂದಿ ಅರಳಿ ನಳನಳಿಸುತ್ತಿದ್ದ ಹೂವೊಂದು ಬಾಡಿ ಮುದುಡಿ ಸೊಪ್ಪಾಗಿ ಹೋದಂತಾಗಿದೆ. ಅಮ್ಮನಿಗಾಗಿ ಅತ್ತು ಅತ್ತು ಸುಸ್ತಾಗಿ ಬಸವಳಿದು.... ತಾಯಿಯನ್ನು ಕಂಡಾಕ್ಷಣ ನುಗ್ಗಿ ಬಂದು... ಬಿಗಿದಪ್ಪಿದೆ. ಕಂದನ ಅವಸ್ಥೆ ಕಂಡ ತಾಯಿ... ತುಂಬಾ ಕಳಕಳಿಯಿಂದ ಮಗುವನ್ನು ತೋಳಲ್ಲಿ ಮೃದುವಾಗಿ ಅಪ್ಪಿಕೊಂಡು... ತಲೆ ನೇವರಿಸಿ, ಕೈ ಕಾಲಿಗೆ ಅಂಟಿದ್ದ ಮಣ್ಣು.. ಧೂಳನ್ನೆಲ್ಲಾ ಉಟ್ಟಿದ್ದ ಸೀರೆಯಲ್ಲೇ ಒರೆಸಿ... ಕಂದನನ್ನು ತನ್ನ ಸೆರಗಿನಲ್ಲಿ ಮುಚ್ಚಿಕೊಂಡಾಗ... ಮಗು ಸೋತು ಹಾಗೆ ಅಮ್ಮನ ಕೊರಳು ಬಳಸಿ ನಿದ್ದೆ ಮಾಡಿತ್ತು. ಮಲಗಿದ್ದ ಮಗುವಿನ ಮುಖವನ್ನೇ ದಿಟ್ಟಿಸುತ್ತಾ ಆ ವಾತ್ಸಲ್ಯಮಯಿ ತಾಯಿ ಅಕ್ಕರೆಯಿಂದ ನಲುಗಿದ್ದ ಪುಟ್ಟ ಕೆಂಡ ಸಂಪಿಗೆಯಂತಹ ಮೂಗನ್ನೂ, ಬೆದರಿದಾಗ ಬಿಳುಚಿಕೊಂಡು ತನ್ನ ಸಹಜ ಕೆಂಪು ಬಣ್ಣ ಕಳೆದುಕೊಂಡ ಪುಟ್ಟ ತುಟಿಗಳನ್ನೂ, ಮುಖವನ್ನೂ... ತಣ್ಣನೆಯ ನೀರಿನಲ್ಲಿ ಅದ್ದಿದ್ದ ತನ್ನ ಸೀರೆಯ ಸೆರಗಿನಿಂದ ಒರೆಸಿದಳು. ಕೊರಳನ್ನು ಬಳಸಿದ್ದ ಮಲ್ಲಿಗೆಯ ಹಾರದಂತಿದ್ದ ಪುಟ್ಟ ತೋಳುಗಳನ್ನು ಮೆದುವಾಗಿ ನೇವರಿಸುತ್ತಾ... ಹಿತವಾಗಿ ಅಮುಕಿದಾಗ ... ತಾಯಿಯ ಅಕ್ಕರೆಯ ಸ್ಪರ್ಶ ಗುರುತಿಸಿತೋ ಎಂಬಂತೆ ಮಗು... ಮತ್ತಷ್ಟು ಒತ್ತಿಕೊಂಡು... ನಿದ್ದೆಯಲ್ಲೂ ಬಿಕ್ಕುತಲಿತ್ತು. ಮುಚ್ಚಿದ ನೀಳ ರೆಪ್ಪೆಗಳಡಿಯಿಂದ ಪನ್ನೀರ ಹನಿ ಜಿನುಗಿತ್ತು. ಉಕ್ಕಿ ಬಂದ ಮಮತೆಯಿಂದ ತಾಯಿ ಕಂದನನ್ನು ತನ್ನೊಳಗೇ ಹುದುಗಿಸಿಕೊಂಡು... ರಕ್ಷಿಸುವಂತೆ... ಕದಪುಗಳ ಮುದ್ದಿಸಿದಾಗ... ಕಂದನ ಮೊಗದಲ್ಲಿದ್ದ ಭಯ ನಿಧಾನವಾಗಿ ಕರಗಿ... ಅಮ್ಮನ ಅಕ್ಕರೆಯ ಆರೈಕೆಯಲ್ಲಿ ಮಗುವಿನ ಕೋಮಲ ಮೈ ಮನ ಅರಳಿ... ಅಮೃತದ ಧಾರೆಯಲಿ ಮಿಂದು ಹೊಸ ಜೀವ ಪಡೆದಂತೆ.. ಹೊಚ್ಚ ಹೊಸ ಹೂವಿನಂತೆ ಅರಳಿ... ಬೊಗಸೆ ಕಂಗಳ ತೆರೆದು ತಾಯ ತೆಕ್ಕೆಯಲಿರುವುದ ಕಂಡು ಹಿಗ್ಗಿ... ತನಗಿನ್ನೇನು ಭಯವಿಲ್ಲ... ತನ್ನಮ್ಮ ರಕ್ಷಿಸುವಳು ಎಂಬ ಅಗಾಧ ನಂಬಿಕೆಯಲ್ಲಿ.. ಮಗುವಿನ ಕಣ್ಣಲ್ಲಿನ ಭಯ ಕಳೆದು... ಬೆಳಕಿನ ಮಿಂಚು ಮೂಡಿತ್ತು.. ತಾವರೆಯಂತೆ ಅರಳಿದ ಮುಖವು .. ಸಿಹಿ ನಗೆಯ ಬುಗ್ಗೆಯನ್ನು ಚಿಮ್ಮಿಸುತ್ತಾ ಕಿಲಕಿಲನೆ ನಗುತ್ತಾ... ಅಮ್ಮಾ... ಮ್ಮಾ... ಎನ್ನುತ್ತಾ.. ಮತ್ತೆ ತಾಯಿಯನ್ನು ಗಟ್ಟಿಯಾಗಿ ತಬ್ಬುತ್ತಾ.. ತೆಕ್ಕೆಯಲ್ಲೇ ಜಿಗಿಯುತ್ತಾ... ಮುದ್ದು ಉಕ್ಕುವಂತೆ ಅನುರಾಗ ಹರಡುತ್ತಾ.... ತಾಯ ಮೈ ನವಿರೇಳಿಸುತ್ತಾ... ತನ್ನಮ್ಮ ತನ್ನದೇ... ಎನ್ನುವ ಒಡೆತನ ತೋರಿಸುತ್ತಾ..... ಪುಟ್ಟ ಕೈಗಳಿಂದ ಅಮ್ಮನ ಕೆನ್ನೆ ತಟ್ಟುತ್ತಾ... ಮುಖವೆಲ್ಲಾ ಮುದ್ದಿಸುತ್ತಾ.... ಅಮ್ಮನ ಭಾವದೊಳಗೆ ಸೇರಿ ಹೋಯಿತು. ಕಂದನ ನಿಷ್ಕಲ್ಮಶ ಪ್ರೀತಿಯಿಂದ ಕರಗಿ ಹೋದ ತಾಯಿ... ತಾನೂ ಮಗುವನ್ನು ಮುದ್ದಿಸುತ್ತಾ... ತನ್ನಲ್ಲೇ ಸೇರಿ ಒಂದಾದ ತನ್ನ ಕಂದನ ಪ್ರೇಮದಲ್ಲಿ ಕೊಚ್ಚಿ ಹೋಗುತ್ತಾ.... ತಾಯ್ತನದ... ತನ್ನ ಜೀವನದ... ಸಾರ್ಥಕ್ಯ ಪಡೆದಳು.


ಸುಂದರವಾದ ಕವನ ಬರೆದು ಕೊಟ್ಟ ಅನಂತ್ ಸರ್... ಹೃದಯಪೂರ್ವಕ ಧನ್ಯವಾದಗಳು.. :-).. ನಿಮ್ಮ ಕವನ ನನ್ನನ್ನು ತುಂಬಾ ಭಾವುಕಳನ್ನಾಗಿಸಿತು. ತಾಯಿ-ಮಗುವಿನ ಪ್ರೇಮದ ಪರಿಯೇ ಅತ್ಯಂತ ಶ್ರೇಷ್ಠವಾದ ಭಾವವೆಂಬುದು ನಮ್ಮ ಮಾತುಗಳಲ್ಲಿ ಹಿಡಿದಿಡಲಾಗದ್ದು... ಯಶೋದೆ – ಕೃಷ್ಣನಲ್ಲದೆ ಬೇರಾವ ಹೋಲಿಕೆಯೂ ಇಲ್ಲವೇ ಇಲ್ಲ ಎಂಬುದೇ ನನ್ನ ಅಭಿಪ್ರಾಯ.....

ಚಿತ್ರಕೃಪೆ : ಅಂತರ್ಜಾಲ

5 comments:

 1. ಶ್ಯಾಮಲಾಜೀ, ಅನಂತ್‌ ಸರ್‌ ಅವರ ಕವನ ಮತ್ತು ಅದನ್ನು ಕಲ್ಪಿಸಿಕೊಂಡು ಬರೆದ ಬರಹ ಎರಡೂ ಚೆನ್ನಾಗಿದೆ.
  ಚಂದ್ರು

  ReplyDelete
 2. ಶ್ಯಾಮಲಾ,
  ಅನಂತರಾಜರ ಕವನ ಮತ್ತು ನಿಮ್ಮ ವ್ಯಾಖ್ಯಾನ ತುಂಬ ಚೆನ್ನಾಗಿವೆ. ತಾಯಿಯ ವಾತ್ಸಲ್ಯ ತುಂಬಿ ಹೊರಸೂಸಿದೆ! ಚಿತ್ರಗಳು ISCON ಚಿತ್ರಗಳಲ್ಲವೆ? ಕೃಷ್ಣ ಮುದ್ದಾಗಿ ಕಾಣುತ್ತಾನೆ.

  ReplyDelete
 3. ಶ್ಯಮಲ ಮೇಡಂ, ಬ್ಲಾಗಿಗರಲ್ಲೇ ಜುಗಲಬಂದಿಗೆ ನಾಂದಿ ಹಾಡಿದ್ದೀರಿ, ಕವನವೂ ವ್ಯಾಖ್ಯಾನವೂ ಅರ್ಥಪೂರಿತ, ಧನ್ಯವಾದಗಳು

  ReplyDelete
 4. ಶ್ಯಾಮಲ ಮೇಡಮ್,
  ಸೊಗಸಾದ ಕವನಕ್ಕೆ ನಿಮ್ಮ ಬರಹ ತುಂಬಾ ಚೆನ್ನಾಗಿದೆ...

  ReplyDelete