Sunday, October 2, 2011

ಸಂಗೀತದಲ್ಲಿ ದೇವಿಯ ಆರಾಧನೆ..


ಜಗನ್ಮಾತೆಯು ಸಚ್ಚಿದಾನಂದ ರೂಪಿಣಿಯು, ಶುದ್ಧ ಚೈತನ್ಯರೂಪಳು ಮತ್ತು ಪರಾಶಕ್ತಿಯು. ಪರಾಶಕ್ತಿಯಾದ ಜಗನ್ಮಾತೆಯ ಚರಣಗಳಲ್ಲಿ ಶರಣಾದರೆ, ಆಶ್ರಯ ಬಯಸಿದರೆ, ದೇವಿಯು ತಾಯಿಯಂತೆ ಕರುಣೆಯಿಂದ ನಮ್ಮನ್ನು ಕಾಪಾಡುತ್ತಾಳೆ. ಮಾತೆಯು ಭುಕ್ತಿ-ಮುಕ್ತಿಗಳೆರಡೂ ಕೊಡುವವಳು. ಆಕೆ ಅತಿ ಸೌಂದರ್ಯವತಿ, ಮಹಾ ಲಾವಣ್ಯವತಿ, ಮಹಾತ್ರಿಪುರಸುಂದರಿ, ಶ್ರೀ ಲಲಿತಾಂಬಿಕೆ. ತಾಯಿಯ ಅತಿಶಯ ಸೌಂದರ್ಯವನ್ನು ಶ್ರೀ ಶಂಕರರು ತಮ್ಮ ಸೌಂದರ್ಯಲಹರಿಯಲ್ಲಿ ಸುಂದರವಾಗಿ ವಿವರಿಸಿದ್ದಾರೆ. ಶ್ರೀ ಮಹಾತ್ರಿಪುರಸುಂದರಿ ದೇವಿಯ ಸಗುಣರೂಪ, ನಿಷ್ಕಲರೂಪ, ಕುಂಡಲಿನಿ ಶಕ್ತಿರೂಪ, ಮಂತ್ರರೂಪ, ಯಂತ್ರರೂಪ, ಹೀಗೇ ಅತಿ ಸೂಕ್ಷ್ಮ ವಿಷಯಗಳನ್ನು ಮನೋಹರವಾಗಿ, ಮಧುರವಾಗಿ, ಮನಸ್ಸಿಗೆ ಉಲ್ಲಾಸವಾಗುವಂತೆ ವಿವರಿಸುತ್ತಾ ಹೋಗುತ್ತಾರೆ. ಮನಸ್ಸಿಗೆ ಆನಂದವಾಗುವಂತೆ, ಅನರ್ಘ್ಯ ಮುತ್ತುಗಳನ್ನು ಪೋಣಿಸಿರುವಂತೆ ಇರುವ ಸೌಂದರ್ಯಲಹರಿ ಸ್ತೋತ್ರದ ಮೊದಲ ಭಾಗವನ್ನುಆನಂದಲಹರಿಎಂದೇ ಕರೆಯುತ್ತಾರೆ. ಸೌಂದರ್ಯಲಹರಿಯನ್ನು ಶ್ರೀ ಶಂಕರರು.. ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭುವಿತುಂ | ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ || ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚ್ಯಾದಿಭಿರಪಿ | ಪ್ರಣಂತುಂ ಸ್ತೋತುಂ ವಾ ಕಥಮಕೃತ ಪುಣ್ಯಃ ಪ್ರಭವತಿ || ಎನ್ನುತ್ತಾ ಪ್ರಾರಂಭಿಸುತ್ತಾರೆ. ಸೃಷ್ಟಿ, ಸ್ಥಿತಿ, ಲಯಕ್ಕೆ ಕಾರಣರಾದ ತ್ರಿಮೂರ್ತಿಗಳಿಂದಲೂ ಸ್ತುತಿಸಲ್ಪಡುವವಳು ಜಗನ್ಮಾತೆ, ಶ್ರೀಮಾತೆ. ಲಲಿತಾ ಸಹಸ್ರನಾಮದಲ್ಲಿ ಕೂಡ ದೇವಿಯನ್ನು “ಚಿತಿ:, ತತ್ಪದಲಕ್ಷ್ಯಾರ್ಥಾ, ಚಿದೇಕರಸರೂಪಿಣೀ” ಎಂದು ದೇವಿಯನ್ನು ವರ್ಣಿಸುತ್ತಾರೆ. ಅಂತಹ ಆದಿಶಕ್ತಿಯನ್ನು ಆರಾಧಿಸುವ ಸಮಯವೇ ನಮ್ಮ ನವರಾತ್ರಿಯ ಆಚರಣೆ.

ಸಂಗೀತದಲ್ಲಿ ದೇವಿಯ ವರ್ಣನೆ ನಮಗೆ ಅನಾದಿ ಕಾಲದಿಂದಲೂ ಅತ್ಯಂತ ಸುಂದರ ಕೃತಿಗಳ ರಚನೆಗಳ ಮೂಲಕ ನಮ್ಮ ವಾಗ್ಗೇಯಕಾರರು ಮಾಡಿಕೊಟ್ಟಿದ್ದಾರೆ. ಕರ್ನಾಟಕ ಸಂಗೀತದ ಮೂರು ಅನರ್ಘ್ಯ ರತ್ನಗಳಲ್ಲಿ ಒಬ್ಬರಾದ ಶ್ರೀ ಶ್ಯಾಮಾ ಶಾಸ್ತ್ರಿಗಳ ರಚನೆ ಮಧ್ಯಮಾವತಿ ರಾಗದಲ್ಲಿ, ವಿಳಂಬ ಗತಿಯಲ್ಲಿರುವ ಪ್ರಚಲಿತ ಕೀರ್ತನೆ ಪಾಲಿಂಚು ಕಾಮಾಕ್ಷಿ ಪಾವನಿ ಪಾಪಶಮನಿ..” ಎನ್ನುತ್ತಾರೆ. ಇದು ನಾವು ತಾಯಿಯ ಪಾದಕ್ಕೆ ಶರಣಾಗಬೇಕೆಂಬ ಭಾವ. ತಮ್ಮ ಆತ್ಮ ನಿವೇದನೆಯನ್ನು ತಾಯಿಯ ಮುಂದೆ ಮಾಡುತ್ತಾ... ನಿನ್ನನ್ನು ವಿಧ ವಿಧವಾಗಿ ಬೇಡಿಕೊಳ್ಳುತ್ತಿದ್ದೇನೆ, ನನ್ನ ವ್ಯಥೆಯನ್ನೆಲ್ಲಾ ಕಳೆದು ನನ್ನನ್ನು ಕಾಪಾಡು..., ನೀನೇ ಭುವನಕ್ಕೆಲ್ಲಾ ಜನನಿ, ನನ್ನ ದುರಿತಗಳನ್ನೆಲ್ಲಾ ತೀರಿಸಿ, ವರಗಳ ಕೊಟ್ಟು ಕಾಪಾಡು.. ಮನೋರಥಗಳನ್ನೆಲ್ಲಾ ಕೊಡುವ ಕಾರುಣ್ಯ ಮೂರ್ತಿಯೇ.. ನಾನು ಏನೂ ಅರಿಯದ, ನಿನ್ನಲ್ಲೇ ಶರಣಾಗಿರುವ ನಿನ್ನ ಮಗು.. ಕಾಪಾಡು ತಾಯೇ ಎನ್ನುತ್ತಾರೆ. ತಮ್ಮ ಇನ್ನೊಂದು ಕೃತಿ “ಸರೋಜದಳ ನೇತ್ರಿ... ಹಿಮಗಿರಿ ಪುತ್ರಿ.. ನೀ ಪದಾಂಬುಜಮುನೆ.. ಸದಾ ನಮ್ಮಿನಾನಮ್ಮ ಶುಭ ಮಿಮ್ಮಾ.. ಶ್ರೀ ಮೀನಾಕ್ಷಮ್ಮಾ”... ಎಂಬುದರಲ್ಲಿ ನಿನ್ನ ಪಾದಗಳನ್ನೇ ಸದಾ ನಂಬಿಕೊಂಡಿದ್ದೇನೆ, ಮಂಗಳವ ಕರುಣಿಸು ಎನ್ನುತ್ತಾರೆ.

ನವರಾತ್ರಿಯ ಒಂಬತ್ತು ದಿನಗಳು ಲಕ್ಷ್ಮೀ, ಸರಸ್ವತಿ, ದುರ್ಗೆಯ ವಿವಿಧ ರೂಪಗಳನ್ನು ಬಹಳ ಭಕ್ತಿಯಿಂದ, ಶ್ರದ್ಧೆಯಿಂದ ಆರಾಧಿಸುತ್ತೇವೆ. ನವರಾತ್ರಿಯ ಸಂಭ್ರಮ, ಆಚರಣೆ ಯಾವ ಒಂದು ಪ್ರದೇಶಕ್ಕೂ ಸೀಮಿತವಾಗಿಲ್ಲ. ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬೇರೆ ಬೇರೆ ವಿಧದಲ್ಲಿ ಆಚರಣೆ ಜಾರಿಯಲ್ಲಿದೆ. ಪೂಜಿಸುವ ವಿಧಾನ ವಿವಿಧವಾಗಿದೆಯೇ ಹೊರತು ದೇವಿಯ ಆರಾಧನೆಯ ಹಿಂದಿರುವ ಭಾವ ಮಾತ್ರ ಎಲ್ಲ ಕಡೆಯೂ ಒಂದೇ.

ನವರಾತ್ರಿಯನ್ನು ನಾವು ಆಚರಿಸುವುದೇ ಜಗನ್ಮಾತೆಯ ಭಗವತ್ತತ್ವವನ್ನು ತಾಯಿಯಾಗಿ ಆರಾಧಿಸುವುದಕ್ಕಾಗಿ. ಪೃಥ್ವೀ ಸ್ವರೂಪಳಾಗಿರುವ ತಾಯಿಯನ್ನು ಧೀ, ಶ್ರೀ, ಕಾಂತಿ, ಕ್ಷಮಾ, ಶಾಂತಿ, ಶ್ರದ್ಧಾ, ಮೇಧಾ, ಧೃತಿ, ಸ್ಮೃತಿ, ಜಯಾ, ವಿಜಯಾ, ಧಾತ್ರಿ, ಲಜ್ಜಾ, ಕೀರ್ತಿ, ಸ್ಪ್ರುಹಾ, ದಯಾ ಎಂದು ಅನೇಕ ನಾಮಗಳಿಂದ ಪೂಜಿಸುತ್ತೇವೆ. ಅವಳೇ ಮೂಲ ಪ್ರಕೃತಿ, ಭಕ್ತ ಪರಾಧೀನೆ, ವಾತ್ವಲ್ಯಮಯಿ ಮತ್ತು ನಮ್ಮ ಶರೀರದಲ್ಲಿರುವ ಮೂಲಾಧಾರ ಸ್ಥಾನದಲ್ಲಿ ಕುಂಡಲಿನಿ ಶಕ್ತಿಯಾಗಿ ನಿದ್ರಿಸುತ್ತಿದ್ದಾಳೆ ಎಂಬ ನಂಬಿಕೆ. ತಾಯಿಯನ್ನು ತಲುಪಲು ನಾವು ಒಂದೊಂದೇ ಚಕ್ರವನ್ನು ಜಾಗೃತಿಗೊಳಿಸಿಕೊಳ್ಳುತ್ತಾ ಸಾಧನೆ ಮಾಡಬೇಕು. ಈ ಸಾಧನೆಯನ್ನು ನಾವು ಶ್ರೀ ಚಕ್ರದ ಆರಾಧನೆಯಿಂದ ಕೂಡ ಮಾಡಬಹುದಾಗಿದೆ. “ಶ್ರೀಚಕ್ರವು ಒಂಬತ್ತು ಆವರಣಗಳ ಪರಶಿವ ಮತ್ತು ಪರಾಶಕ್ತಿಯ ಐಕ್ಯರೂಪ ಮತ್ತು ಮಧ್ಯದಲ್ಲಿನ ಬಿಂದು ಕೋಣವೇ ತಾಯಿಯ ನೆಲೆ. ಅಲ್ಲಿಗೆ ತಲುಪಲು ನಾವು ಒಂದೊಂದೇ ಆವರಣಗಳಲ್ಲಿನ ತ್ರಿಕೋನಗಳನ್ನು ಮತ್ತು ಪದ್ಮಗಳನ್ನು ಪೂಜಿಸುತ್ತಾ ಹೋಗಬೇಕು. ಒಂದೊಂದು ಆವರಣಕ್ಕೂ ಒಬ್ಬೊಬ್ಬಳು ದೇವತೆ ಅಧಿದೇವತೆ ಇರುತ್ತಾಳೆ. ಪ್ರತೀ ಚಕ್ರಕ್ಕೂ ಚಕ್ರೇಶ್ವರಿ ಮತ್ತು ಪರಿವಾರ ದೇವತೆಗಳೂ ಇದ್ದಾರೆ. ಇವರೆಲ್ಲರ ಪೂಜೆ, ತರ್ಪಣ, ಭಕ್ತಿ, ಧ್ಯಾನ, ಸ್ವಸಮರ್ಪಣೆಗಳ ಮುಖಾಂತರ ತಾಯಿಯ ಸ್ಥಾನವಾದ ಬಿಂದು ತ್ರಿಕೋಣ ತಲುಪಬೇಕು. ನಮ್ಮ ಕರ್ನಾಟಕ ಸಂಗೀತದ ರತ್ನತ್ರಯರಲ್ಲಿ ಒಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ತಮ್ಮ ಕಮಲಾಂಬ ನವಾವರಣಕೃತಿಗಳಲ್ಲಿ ನಮ್ಮ ಆತ್ಮವನ್ನು ಬಿಂದು ಸ್ವರೂಪಿಣಿಯಲ್ಲಿ ಲೀನವಾಗಿಸುವ ಉದ್ದೇಶವನ್ನು ಸಫಲಗೊಳಿಸುವ ಕೆಲಸ ಮಾಡಿದ್ದಾರೆ. ಬ್ರಹ್ಮ ಜ್ಞಾನ ನಾದ ರೂಪದಲ್ಲಿ ಕೂಡ ಆಗಬಹುದು, ಸಂಗೀತವೂ ಸಾಕ್ಷಾತ್ಕಾರಕ್ಕೆ ಸೋಪಾನವೆಂದು ತೋರಿಸಿಕೊಟ್ಟಿದ್ದಾರೆ. ನವರಾತ್ರಿಯ ಒಂಬತ್ತು ದಿನಗಳನ್ನು ನಾವು ದೇವಿಯ ವಿವಿಧ ರೂಪಗಳ ಆರಾಧನೆಯನ್ನು ಈ ಶ್ರೇಷ್ಠ ಕೃತಿಗಳ ಮೂಲಕ ಕೂಡ ಮಾಡಬಹುದಾಗಿದೆ.

ನವಾವರಣ ಕೃತಿಗಳ ಗುಚ್ಚವಲ್ಲದೇ, ದೀಕ್ಷಿತರು ನೀಲೋತ್ಪಲಾಂಬಿಕಾಯಕೃತಿಗಳ ಗುಚ್ಛ ಕೂಡ ಮಾಡಿದ್ದಾರೆ. ಹಾಗೂ ಗುಚ್ಚಗಳ ಹೊರತಾಗಿಯೂ "ಶ್ರೀ ಸರಸ್ವತಿ – ಆರಭಿ ರಾಗದಲ್ಲಿ, ಪರ್ವತರಾಜಕುಮಾರಿ – ಶ್ರೀ ರಂಜನೀ ರಾಗದಲ್ಲೂ, ಹಿರಣ್ಮಯೀಂ ಲಕ್ಷ್ಮೀಂ" ಎಂಬಂತೆ ಅನೇಕ ದೇವಿ ಕೃತಿಗಳನ್ನೂ ರಚಿಸಿದ್ದಾರೆ.

ಸಂಗೀತ ಪಿತಾಮಹ ಶ್ರೀ ತ್ಯಾಗರಾಜರ ತ್ರಿಪುರ ಸುಂದರಿ ಪಂಚರತ್ನ ಕೃತಿಗಳಲ್ಲಿ ದೇವಿ ತ್ರಿಪುರ ಸುಂದರಿಯ ವರ್ಣನೆ ಉಪಮೆಗೆ ಸಾಟಿಯಿಲ್ಲದ್ದು. ಅವರ ಇತರ ಕೃತಿಗಳು.. "ಸುಂದರಿ ನೀ ದಿವ್ಯ ರೂಪಮು (ಕಲ್ಯಾಣಿ), ಸುಂದರಿ ನಿನ್ನು ವರ್ಣಿಂಪ ಬ್ರಹ್ಮಾದಿ ಸುರುಲಕೈನ ತರಮಾ (ಆರಭಿ) ಸುಂದರಿ ನನ್ನಿಂದರಿಲೋ (ಬೇಗಡೆ)" ಬಹು ಜನಪ್ರಿಯ ದೇವಿ ಕೃತಿಗಳು.

ಕರ್ನಾಟಕ ಸಂಗೀತದ ರತ್ನ ತ್ರಯರಾದ ಶ್ರೀ ತ್ಯಾಗರಾಜರು, ಶ್ರೀ ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ರೀ ಶ್ಯಾಮಾಶಾಸ್ತ್ರಿಗಳ ಸಮಕಾಲೀನರೇ ಆದ ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಕೂಡ ತಮ್ಮ ಕೃತಿ ಗುಚ್ಛ ನವರಾತ್ರಿ ಕೃತಿಗಳಲ್ಲಿ ದೇವಿಯ ವಿವಿಧ ರೂಪಗಳನ್ನು ಆರಾಧಿಸಿದ್ದಾರೆ. ಮೈಸೂರು ವಾಸುದೇವಾಚಾರ್ಯರ "ಶೈಲಸುತೇ ಶಿವಸಹಿತೆ.. ದೇವಿ ಕಮಲಾಲಯೇ, ಶ್ರೀಹರಿ ವಲ್ಲಭೆ"... ಎಂಬ ಹಲವಾರು ಕೃತಿಗಳು ದೇವಿಯ ರೂಪಗಳ ವರ್ಣನೆಯನ್ನು ಮಾಡುತ್ತವೆ.

ಮೈಸೂರು ಸಂಸ್ಥಾನದ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಹರಿಕೇಶ ನಲ್ಲೂರ್ ಮುತ್ತಯ್ಯ ಭಾಗವತರು ಚಾಮುಂಡೇಶ್ವರಿಯ ಕುರಿತು ರಚಿಸಿದ ೧೦೮ ಅಷ್ಟೋತ್ತರ ಕೃತಿಗಳು ಬಹು ಉನ್ನತವಾದವು. ದೇವಿಯನ್ನು ೧೦೮ ನಾಮಗಳಿಂದ ಆರಾಧಿಸುವ ಈ ಕೃತಿಗಳು, ಅತ್ಯಂತ ಶ್ಲಾಘನೀಯವಾದದ್ದು. ಇದರಲ್ಲಿ ಕೆಲವು ಜನಪ್ರಿಯ ಕೃತಿಗಳೆಂದರೆ "ಸಂಪತ್ಪ್ರದೆ ಶ್ರೀ ಚಾಮುಂಡೇಶ್ವರಿ (ಕಲ್ಯಾಣಿ), ಭುವನೇಶ್ವರಿಯ ನೆನೆ ಮಾನಸವೇ (ಮೋಹನ ಕಲ್ಯಾಣಿ) ಮತ್ತು ದುರ್ಗಾದೇವಿ ದುರಿತ ನಿವಾರಿಣಿ (ನವರಸ ಕಲ್ಯಾಣಿ)"..

ಮೈಸೂರು ಸಂಸ್ಥಾನದ ಸಿಂಹಾಸನಾಧೀಶ್ವರ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರು ಶ್ರೀ ವಿದ್ಯೆಯ ಉಪಾಸಕರು. ಆದ್ದರಿಂದಲೇ ಅವರು ಶ್ರೀ ವಿದ್ಯಾಎಂಬ ಅಂಕಿತದೊಂದಿಗೆ ತಮ್ಮ ಕೃತಿಗಳಲ್ಲಿ ಶ್ರೀ ವಿದ್ಯೆಯ ಉಪಾಸನೆ ಹಾಗೂ ಶ್ರೀ ಚಕ್ರದ ಆರಾಧನೆಯ ವಿವರಗಳನ್ನು ಕೊಟ್ಟಿದ್ದಾರೆ. ಅಪರೂಪದ ರಾಗಗಳಲ್ಲಿ ಕೃತಿಗಳನ್ನೂ ರಚಿಸಿದ್ದಾರೆ. “ಜಗನ್ಮೋಹಿನಿ” ಎಂದು ಪ್ರಾರಂಭ ವಾಗುವ ಕೃತಿಯನ್ನು ಜಗನ್ಮೋಹಿನಿ ರಾಗದಲ್ಲೇ ರಚಿಸಿದ್ದಾರೆ. ಅವರ ಒಂದು ಕೃತಿ ಮಾಂಡ್ ರಾಗದಲ್ಲಿ “ಬ್ರಹ್ಮಾಂಡ ವಲಯೇ ಮಾಯೆ, ಬ್ರಹ್ಮಾದಿ ವಂದಿತ ಶುಭಾಜಾಯೇ..” ಮತ್ತು ಮಿಶ್ರ ಝಂಪೆ ತಾಳದಲ್ಲಿ ಹಿಂದೋಳ ರಾಗದ “ಚಿಂತಯಾಮಿ ಜಗದಂಬಾ ಚಾಮುಂಡಾಂಬಾಂ.. ಚಿತ್ತ ರಂಜನ ದಿವ್ಯ ಕಾಂತೀ ಚಿತ್ಪ್ರಭಾಂ ” ತುಂಬಾ ವಿದ್ವತ್ಪೂರ್ಣ ಕೃತಿಗಳು. ಈ ಕೃತಿಯಲ್ಲಿ ಜಗದಂಬೆಯನ್ನು ಚಾಮುಂಡೇಶ್ವರಿ ಎಂದು ಕರೆಯುತ್ತಾ ಕೊನೆಗೆ ಲಲಿತೇ ಎನ್ನುತ್ತಾರೆ. ದನುಜ ಮದ ಭಂಜನಿಎಂದು ವರ್ಣಿಸುತ್ತಾ ಒಡೆಯರು ನವಧಾತುಗಳೇ ದನುಜರು ಮತ್ತು ಅವುಗಳನ್ನು ದಮನ ಮಾಡಬೇಕು, ದೇವಿ ಆ ಒಂಭತ್ತನ್ನು ಸಂಹಾರ ಮಾಡುವವಳು ಎಂದು ಸ್ತುತಿಸುತ್ತಾರೆ. ಆ ರೂಪಗಳು ಯಾವುವೆಂದರೆ :

) ಮಧು ಕೈಟಭರನ್ನು ಕೊಂದ ಕಾಳಿ

) ಚಂಡ ಮುಂಡರನ್ನು ಕೊಂದ ಚಾಮುಂಡಿ

) ಮಹಿಷಾಸುರನನ್ನು ಕೊಂದ ಮಹಿಷಾಸುರಮರ್ಧಿನಿ

) ರಕ್ತ ಬೀಜನನ್ನು ಕೊಂದ ಮಹಾಕಾಳಿ

) ಭಿಕ್ಷುಂಕರನ್ನು ಕೊಂದ ರಕ್ತದಂತಿ

) ಕ್ಷಾಮ ನಿವಾರಕಳಾದ ಶಾಕಾಂಬರಿ

) ದುರ್ಗನೆಂಬ ಅಸುರನನ್ನು ಕೊಂದ ದುರ್ಗೆ

) ಅರುಣನೆಂಬ ಅಸುರನನ್ನು ಕೊಂದ ಭ್ರಾಮರಿ (ಭ್ರಮರಾಂಬ)

) ಕಂಸನ ಮರಣದ ಸೂಚನೆಯಿತ್ತ ದುರ್ಗೆ

ಮತ್ತು ರೂಪಗಳನ್ನು ನವರಾತ್ರಿಯಲ್ಲಿ ರಾಜ್ಯದ ಸುಭಿಕ್ಷೆಗಾಗಿ ಸಂಕಲ್ಪ ಮಾಡಿ ಪೂಜಿಸುವುದು ವಾಡಿಕೆಯಾದ್ದರಿಂದ ಒಡೆಯರು ಚಿಂತಿಯಾಮಿ ಜಗದಂಬಾ ಕೃತಿಯಲ್ಲಿ “ದನುಜ ಮದ ಭಂಜನಿ , ಧನ ಧಾನ್ಯ ಸೌಭಾಗ್ಯದಾಯಿನಿ, ಧರ್ಮ ಸಂಸ್ಥಾಪಿನಿ” ಎಂದಿದ್ದಾರೆ.

ಕನ್ನಡ ರಾಗದಲ್ಲಿ ಮಾಡಿರುವ ಇನ್ನೊಂದು ಕೃತಿ “ಶ್ರೀ ಚಾಮುಂಡೇಶ್ವರಿ ದೇವಿ ತವ ಪಾದ ಭಕ್ತಿಂ ದೇಹಿ”... ಯಲ್ಲಿ ಚರಣದಲ್ಲಿ ಶರಣಾಗುವುದನ್ನು ಸುಲಲಿತವಾಗಿ ವಿವರಿಸಿದ್ದಾರೆ.

(ಆಧಾರ ಗ್ರಂಥ ಡಾ.ಸುಕನ್ಯಾ ಪ್ರಭಾಕರ್ ಅವರ ಕರ್ನಾಟಕ ಸಂಗೀತಕ್ಕೆ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕೊಡುಗೆ”)

ನವರಾತ್ರಿಯಲ್ಲಿ ನಾವು ದೇವಿ ಜಗನ್ಮಾತೆಯನ್ನು ದುರ್ಗೆಯ ನವರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿರಾತ್ರಿಯೆಂದು ಪೂಜಿಸುತ್ತೇವೆ. ದಶಮಿಯಂದು ಮಾತೇ ಮಹಿಷಾಸುರಮರ್ಧಿನಿಯಾಗಿ ಪೂಜಿಸಲ್ಪಡುತ್ತಾಳೆ.

ಅಯಿಗಿರಿ ನಂದಿನಿ ನಂದಿತ ಮೇದಿನಿ ವಿಶ್ವನಿನೋದಿನಿ ನಂದನುತೇ |

ಗಿರಿವರ ವಿಂಧ್ಯ ಶಿರೋದಿ ನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣು ನುತೇ ||

ಭಗವತಿ ಹೇ ಶಿತಿಕಂಠ ಕುಟುಂಬಿನೀ ಭೂರಿ ಕುಟುಂಬಿನಿ ಭೂರಿಕೃತೇ |

ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ ||

ವಿಜಯದಶಮಿಯಂದು ದೇವಿ ಚಾಮುಂಡೇಶ್ವರಿಯ ರೂಪದಲ್ಲಿರುತ್ತಾಳೆ ಎಂದಾಗ ಶ್ರೀ ವಾಸುದೇವಾಚಾರ್ಯರ ಬಿಲಹರಿ ರಾಗದ, ಅತ್ಯಂತ ಜನಪ್ರಿಯ ಕೃತಿ “ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ.. ಕೃಪಾಕರಿ ಶಂಕರಿ ಶ್ರುತಜನಪಾಲಿನಿ ಮಹಾಬಲಾದ್ರಿವಾಸಿನಿ ಮಹಿಷಾಸುರಮರ್ಧಿನಿ...” ನೆನಪಾಗದೆ ಇರದು. ತಲೆತಲಾಂತರದಿಂದಲೂ ಹಾಡುತ್ತಾ ಬಂದಿರುವ ಈ ಕೃತಿ ಇಂದಿಗೂ ಎಂದಿಗೂ ಅತಂತ ಪ್ರಸ್ತುತವಾಗಿದೆ. ಸಾಹಿತ್ಯಕ್ಕೆ ಪೂರಕವಾಗಿ ಮಾಡಿರುವ ಸ್ವರ ಜೋಡಣೆ ಈ ಕೃತಿಯಲ್ಲಿ ನಮ್ಮ ತನು ಮನ ಲೀನವಾಗುವಂತೆ ಮಾಡುತ್ತದೆ. ಉಲ್ಲಾಸಭರಿತವಾಗಿ ಮಾಡುತ್ತದೆ.

ದಾಸ ಸಾಹಿತ್ಯದಲ್ಲಿ ನಾವು ದೇವಿ ದುರ್ಗೆಯ ಆರಾಧನೆಯನ್ನು ಶ್ರೀ ವಿಜಯದಾಸರ ರಚನೆಯಾದಶ್ರೀ ದುರ್ಗಾ ಸುಳಾದಿಯಲ್ಲಿ ನೋಡಬಹುದು. "ದುರ್ಗಾ ದುರ್ಗಿಯೇ, ಮಹಾದುಷ್ಟಜನ ಸಂಹಾರಿ, ದುರ್ಗಾಂತರ್ಗತ ದುರ್ಗೆ, ದುರ್ಲಭ ಸುಲಭೆ, ದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮ ಭರ್ಗಾದಿಗಳಿಗೆಲ್ಲ ಗುಣಿಸಿದರು” ಎಂದು ಪ್ರಾರಂಭವಾಗುವ ಸುಳಾದಿ ಅತ್ಯಂತ ನಿರರ್ಗಳವಾಗಿ, ನೀರು ಹರಿದಂತೆ ಪ್ರಾಸ ಬದ್ಧವಾಗಿ, ಲಾಲಿತ್ಯದಿಂದ ಕೂಡಿ ಓದುವವರ ಮನಸ್ಸನ್ನು ಆಕರ್ಷಿಸುತ್ತದೆ. ತಾಯಿ ದುರ್ಗೆ ಶರಣು ಎಂದವರನ್ನು ಯಾವ ರೀತಿಯೆಲ್ಲಾ ಕಾಪಾಡುತ್ತಾಳೆಂದು ದಾಸರು ಸುಲಲಿತವಾಗಿ ಹೇಳುತ್ತಾ ಹೋಗುತ್ತಾರೆ. ಕೊನೆಗೆ ಶ್ರೀಪಾದಾರ್ಚನೆ ಮಾಡುವ ಶ್ರೀ ಭೂ ದುರ್ಗಾವರ್ಣತ್ರಯೇಶ್ರೀ ಹರಿನಾಮಒಂದೇ ನಮ್ಮ ಜಿಹ್ವಾಗ್ರದಲ್ಲಿ ನೆನೆವ ಔಪಾಸನ ಕೊಡು ನಮಗೆ ಎಂದು ಪ್ರಾರ್ಥಿಸುತ್ತಾರೆ.

ಶ್ರೀಗುರು ಗೋಪಾಲದಾಸರು ಕೂಡ ತಮ್ಮ “ಶ್ರೀದುರ್ಗಾದೇವಿಯ ಸ್ತೋತ್ರ”ಗಳಲ್ಲಿ “ದುರ್ಗಮಭಾವದಿಂದ ನಿರ್ಗಮ ಗೈಸು ಹೇ ಭಾರ್ಗವಿ.. ಎನ್ನುತ್ತಾ “ಸುನಿತಂಬೆ ಜಗದಂಬೆ ಶುಭಗುಣನಿಕುರುಂಬೆ”.. ಎಂಬ ವಿವಿಧ ನಾಮಗಳಿಂದ ದಯಮಾಡೆಂದು ಪ್ರಾರ್ಥಿಸುತ್ತಾರೆ. ಇನ್ನೊಂದು ಸ್ತೋತ್ರದಲ್ಲಿ ಶ್ರೀ ವಿಜಯದಾಸರು ಸುಳಾದಿಯಲ್ಲಿ ಹೇಳಿರುವಂತೆಯೇ ಇವರೂ “ಭರ್ಗಬ್ರಹ್ಮಾದ್ಯನಿಮಿಷವರ್ಗಸಂಸೇವಿತದೇವಿ, ಸ್ವರ್ಗಸರ್ವಾಭೀಷ್ಟ ಅಪವರ್ಗಪ್ರದಾತೇ, ದುರ್ಗಮ ಭವಾಬ್ಧಿಯಿಂದ ನಿರ್ಗಮ ಗೈಸು ನಂಬಿದೆ, ಭಾರ್ಗವಿ ಶ್ರೀದುರ್ಗೆ ಜಗತ್ ಸರ್ಗಾದಿಕರ್ತೆ” ಎಂದು ಹೇಳಿದ್ದಾರೆ. ಎಷ್ಟೊಂದು ಸಾಮ್ಯತೆ ಮತ್ತು ಆಪ್ತತೆ ಅನ್ನಿಸುತ್ತದೆ ನಮಗೆ. ಸಾಹಿತ್ಯವನ್ನೆಲ್ಲಾ ಓದುವಾಗ ಮನಸ್ಸು ತಾಯಿಯ ಚರಣದಲ್ಲಿ ಅರ್ಪಿತವಾಗಿಯೇ ಬಿಡುವುದು, ಭಾವ ಜಾಗೃತವಾಗಿಯೇ ಬಿಡುವುದು..

ಹೀಗೆ ಸಂಗೀತ ಪ್ರಪಂಚದಲ್ಲಿ ಜಗನ್ಮಾತೆ ವಿಧ ವಿಧವಾದ ರೂಪಗಳಲ್ಲಿ, ಸ್ತುತಿಸಲ್ಪಡುತ್ತಾಳೆ ಮತ್ತು ಆರಾಧಿಸಲ್ಪಡುತ್ತಾಳೆ.

6 comments:

 1. ಶ್ಯಾಮಲಾ...
  ಒಂದು ಸಂಗ್ರಹಯೋಗ್ಯ ಬರಹ. ನಿಮ್ಮ ಸಂಶೋಧನೆಯ ಈ ಬರಹಕ್ಕೆ ನಮನಗಳು.

  ಸಂಗೀತದಲ್ಲಿ ದೇವಿಯನ್ನು ಸ್ತುತಿಸಿರುವ ಹಾಗೂ ಸ್ತುತಿಸುವ ಈ ಪರಿಯ ಸೊಬಗನ್ನು ನೀಡಿದ್ದಕ್ಕೆ ತುಂಬಾ ಧನ್ಯವಾದಗಳು. ಸಂಗೀತ ಸರಸ್ವತಿಯು ಶುಭವ ತರಲಿ ಎಂದು ಆಶಿಸುತ್ತಾ...

  ReplyDelete
 2. ಶ್ಯಾಮಲಾ,
  ನವರಾತ್ರಿಯ ಶುಭಸಮಯದಲ್ಲಿ ನವದುರ್ಗಾದೇವಿಯರನ್ನು ಸ್ಮರಿಸುವ, ಭಕ್ತಿಯನ್ನು ಪ್ರೇರಿಸುವ ಲೇಖನಕ್ಕೂ ನನ್ನ ನಮನಗಳು.

  ReplyDelete
 3. thank you oLLe mahiti kotti adu sari samayadalli

  ReplyDelete
 4. ಶ್ಯಾಮಲಾವ್ರೇ, ಶಕ್ತಿ-ಜನನಿ ಎರಡಕ್ಕೂ ಎಲ್ಲಾ ಧರ್ಮ ವಿಶೇಷ ಪ್ರಾಧಾನ್ಯತೆ ನೀಡಿದೆ..ಇಸ್ಲಾಂ ನಲ್ಲೂ ದೇವರು ಕೇವಲ ಆರಾಧ್ಯ ಆ ನಂತರದ ಸ್ಥಾನ ತಾಯಿಗೆ ಎನ್ನುತ್ತೆ. ಸನಾತನ ಧರ್ಮ ಶಕ್ತಿಯ ವಿವಿಧ ರೂಪಗಳನ್ನು ಆರಾಧ್ಯವೆಂದು ಬಿಂಬಿಸಿರುವುದೂ ಇದೇ ಕಾರಣಕ್ಕೆ ಅಲ್ಲವೇ..?? ಬಹಳ ಮಾಹಿತಿಪೂರ್ಣ ನಿಮ್ಮ ಲೇಖನ.

  ReplyDelete