Thursday, May 31, 2012

ಮೌನ - ಬಂಗಾರ

ಅತಿ ಪ್ರಚಲಿತದಲ್ಲಿರುವ ಒಂದು ಗಾದೆ "ಮಾತು ಬೆಳ್ಳಿ - ಮೌನ ಬಂಗಾರ".  ಮಾತು ನಮ್ಮ ಭಾವನೆಗಳನ್ನು ಪ್ರಸ್ತುತ ಪಡಿಸಲು ನಾವು ಅನಾದಿ ಕಾಲದಿಂದಲೂ ಉಪಯೋಗಿಸುತ್ತಾ ಬಂದಿರುವ ಒಂದು ವಿಧಾನ.  ಮಾತಿಲ್ಲದೆ ಬದುಕೇ ಇಲ್ಲವೆಂಬಂತಹ ಒಂದು ಅವಲಂಬನೆ.  ಈ ಮಾತು ಒಂದು ಸುಂದರ ಉದ್ಯಾನವನ.  ನಳನಳಿಸುತ್ತಿರುವ ಬಣ್ಣ ಬಣ್ಣದ ಹೂವು ತುಂಬಿರುವ ಒಂದು ತೋಟ ಎಂಬ ಕಲ್ಪನೆಯಲ್ಲಿ ನೋಡಿದಾಗ, ನಾವು ಹೂವುಗಳ ಸೊಬಗನ್ನು ಆಸ್ವಾದಿಸುತ್ತಾ ಒಳಗೆ ನಡೆದಾಗ ನಮಗೆ ತುಸುವೇ ನಾಚುತ್ತಾ, ಸಿಂಗಾರಗೊಂಡು ಮಾತಿನ ಹೂ ಗಿಡಗಳ ಎರಡೇ ಎರಡು ಹೆಜ್ಜೆ ಹಿಂದೆ ನಿಂತಿರುವ ಸುಂದರಿ, ಮೌನದ ಬಳ್ಳಿ ಕಾಣುತ್ತಾಳೆ.  ಬಣ್ಣ ಬಣ್ಣದ ಹೂಗಳನ್ನು ತುಂಬಿಕೊಂಡು, ಬೀಸುವ ಗಾಳಿಗೆ ಅತ್ತಿತ್ತ ತುಯ್ಯುತ್ತಾ, ಕಣ್ಣು - ಮನಸ್ಸುಗಳನ್ನು ಸೆಳೆಯುವ ಮಾತಿನಂತಲ್ಲ ಮೌನ.  ತನ್ನ ಇರುವಿಕೆಯನ್ನು ಸ್ವಚ್ಛವಾದ ಶುಭ್ರ ಬಿಳುಪಿನಿಂದ ಮೌನವಾಗಿಯೇ ಸುಗಂಧ ಬೀರುತ್ತಾ, ಬೀಸುವ ಮಂದಾನಿಲಕ್ಕೆ ತಕ್ಕಂತೆ ಮೆಲ್ಲಗೆ ತಲೆದೂಗುತ್ತಾ, ಸಂಗೀತವನ್ನು ಕೇಳುತ್ತಾ ಮೈ ಮರೆತಿರುವಳೇನೋ ಎಂಬಂತೆ ಕಾಣುವವಳು.  ಮಲ್ಲಿಗೆಯಂತೆ ಹಸಿರು ಒಡಲಲ್ಲಿ ಬಿಳಿಯ ಪುಟ್ಟ ಪುಟ್ಟ ಹೂವುಗಳಂತಿರುವವಳು ಮೌನ.  ಶುಭ್ರತೆಯೇ ಮೈವೆತ್ತಂತಿರುವ ಮೌನ ತನ್ನ ಬಣ್ಣದಿಂದಲೇ ತಾನೆಷ್ಟು ಶುದ್ಧ ಮನಸ್ಸಿನವಳು, ಸ್ನೇಹಪರ ಜೀವ ಎಂಬುದನ್ನು ನೋಡಿದೊಡನೆ ಮನವರಿಕೆ ಮಾಡಿಸುವವಳು.  ಉದ್ಯಾನವನದ ತುಂಬಾ ತುಂಬಿರುವ ಎಲ್ಲಾ ಬಣ್ಣದ ಹೂವುಗಳು ನಮ್ಮ ಮನಸ್ಸನ್ನು ಆಕರ್ಷಿಸಿದರೂ ಕೂಡ, ಕೊನೆಗೆ ನಮ್ಮನ್ನು ಆವರಿಸುವವಳು ಶುಭ್ರಳಾದ  ಶ್ವೇತಾಂಬರಿಯೇ.  ಇವಳೇ, ಈ ಮೌನಳೇ ನಮ್ಮ ಅಂತರಂಗದ ಸಾಮ್ರಾಜ್ಞಿ, ನಮ್ಮಿಂದ ಕಡೆಗಣಿಸಲ್ಪಟ್ಟವಳು.   ಮಾತಿಲ್ಲದೇ ಬದುಕೇ ಇಲ್ಲವೆಂದು ತಿಳಿದಿರುವ ನಾವು, "ಮೌನ"ವೇ ಬದುಕು ಎಂಬುದನ್ನು ತಿಳಿಯುವುದೇ ಇಲ್ಲ.  ಬೆಳ್ಳಿಗಿಂತ ಹೆಚ್ಚು ಬೆಲೆಬಾಳುವುದು ಬಂಗಾರ.

ಮಾತು ನಮ್ಮ ವ್ಯಕ್ತಿತ್ವದ ಹೊರ ಮುಖದ ಸೌಂದರ್ಯವನ್ನು ತೆರೆದಿಟ್ಟರೆ, ಮೌನ ನಮ್ಮ ಅಂತರಂಗದ  ಒಳಮುಖದ ಸೌಂದರ್ಯವನ್ನು ತೆರೆದಿಡುತ್ತದೆ.  ಸಾವಿರಾರು ಮಾತುಗಳು ಆಡಿದರೂ ಅರ್ಥವೇ ಆಗದ ಕೆಲವು ಸಂಗತಿಗಳು, ಮಾತೇ ಆಡದೆ ಮೌನ ಪಾಲಿಸುವುದರಿಂದಲೇ ಅರ್ಥವಾಗಿ ಬಿಡುತ್ತವೆ.  ಮಾತು ಅಬ್ಬರದ ಅಲೆಗಳನ್ನು ಸೃಷ್ಟಿಸಿದರೆ, ಮೌನ ಸಂಗೀತದಂತಹ ಅಲೆಗಳನ್ನು ಸೃಷ್ಟಿಸುತ್ತದೆ.  ಅನೇಕ ಸಂದರ್ಭಗಳಲ್ಲಿ ಒಂದೇ ಒಂದು ಸಣ್ಣ ಶಬ್ದವೂ ಕೂಡ ಹೊರಗೆ ಬರದೇ ಮೌನ ತಾನೇ ಮಾತಾಗಿಬಿಡುತ್ತಾಳೆ.  ಮೌನ ಸಂಗೀತದಂತಹ ಅಲೆಗಳನ್ನು  ಸೃಷ್ಟಿಸಿದಾಗ, ಮೆಲ್ಲ ಮೆಲ್ಲನೆ ಮನಕ್ಕೆ ಮುದಕೊಡುವ ತರಂಗಗಳೊಂದಿಗೆ ಮೌನ ಬಂದು ನಮ್ಮನ್ನು ಅಪ್ಪಿದಾಗ ಆಗುವ ರೋಮಾಂಚನವೇ ಅದ್ಭುತ.   ಶ್ರೀ ಗೋಪಾಲಕೃಷ್ಣ ಅಡಿಗರ ಒಂದು ಸುಂದರ ಕವಿತೆ "ಮೌನ... ಮೌನ ತಬ್ಬಿತು ನೆಲವ ಝುಂ ಎನೆ.. ಪುಳಕಗೊಂಡಿತು ಧಾರಿಣಿ"... ಇಲ್ಲಿ ಪ್ರಕೃತಿಯ ಸುಂದರ ವರ್ಣನೆಯಾಗಿದೆ.  ನಮ್ಮ ನಿತ್ಯದ ಬದುಕಿನಲ್ಲೂ ನಾವು ಹೀಗೆ ಕೆಲವು "ಮೌನ"ದ ಘಳಿಗೆಗಳಿಗೆ ಅವಕಾಶ ಮಾಡಿಕೊಟ್ಟಾಗ ಮಾತ್ರವೇ ನಮ್ಮೊಳಗಿನ ನಮ್ಮ ಅಂತರಂಗದ ಮೌನದ ಮಾತು, ಸಂಗೀತ ನಮಗೆ ಕೇಳಿಸುವುದು.

ಉದಯವಾದಾಗಿನಿಂದಲೂ ನಾವೇ ನಮ್ಮ ಸುತ್ತಲೂ, ನಮ್ಮೊಳಗೂ, ಹೊರಗೂ ಸೃಷ್ಟಿಸಿಕೊಳ್ಳುವ "ಶಬ್ದ" ಪ್ರಪಂಚದಿಂದ ಬೇಸತ್ತು, ಶಬ್ದವಿಲ್ಲದ ಜಾಗವನ್ನು ಹುಡುಕುವ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತೇವೆ.  ಆಗಲೂ ನಾವು ಮಾತು - ಶಬ್ದವೆಂಬ ಉದ್ಯಾನವನದ ಮಧ್ಯದಲ್ಲೇ ನಿಂತಿರುತ್ತೇವೆಯೇ ಹೊರತು, ನಾಲ್ಕು ಹೆಜ್ಜೆ ಮುಂದೆ ಹೋಗಿ, ಹಿಂದೆಯೇ ನಾಚುತ್ತಾ ನಿಂತಿರುವ ಮೌನವೆಂಬ ಸುಂದರಿಯನ್ನು ಕಂಡುಕೊಳ್ಳುವುದೇ ಇಲ್ಲ.  ಶಾಂತಿ ಬೇಕೆಂದು ಮತ್ತೆ ಮತ್ತೆ ಶಬ್ದ ಭಂಡಾರದ ಕದವನ್ನೇ ತಟ್ಟುತ್ತಾ, ಮತ್ತಷ್ಟು ಮಗದಷ್ಟು ಮಾತುಗಳನ್ನಾಡುತ್ತಾ ಅಲ್ಲೇ ಸಿಲುಕುತ್ತೇವೆಯೇ ಹೊರತು, ಶಬ್ದ ಭಂಡಾರದ ಕದವನ್ನು ಮುಚ್ಚಿ, ಶಾಂತಿಯನ್ನು ಹುಡುಕಲು ಮೌನವನ್ನು ಆಶ್ರಯಿಸುವುದೇ ಇಲ್ಲ.   ಈ ಮಾತಿನ ಅರ್ಥ ಮೌನವನ್ನು ಹುಡುಕಲು ಶಬ್ದ ರಹಿತವಾಗಿರಬೇಕೆಂದರೆ ತಪ್ಪಾಗುವುದು.  ಏಕೆಂದರೆ ಶಬ್ದ ರಹಿತವೆಂದರೆ ಮೌನವಲ್ಲ.  ಅದು ನಿಶ್ಯಬ್ದ, ಅಂದರೆ ನಮ್ಮ ಬಾಹ್ಯ ಇಂದ್ರಿಯಗಳ ಚಟುವಟಿಕೆ ನಿಲ್ಲಿಸುವುದೆಂಬ ಅರ್ಥ ಅಷ್ಟೆ.  ಶಬ್ದವಿಲ್ಲದಿದ್ದರೂ ಮನಸ್ಸಿನಲ್ಲಿ ಪುಂಖಾನುಪುಂಕವಾಗಿ ಶಬ್ದಗಳು ಉತ್ಪತ್ತಿಯಾಗುತ್ತಲೇ ಇರುತ್ತದೆ.  ಅದು ಮೌನವಲ್ಲ.  ಕವಿ ಮಧುರ ಚೆನ್ನರು..  “ ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಗೆ ಶಬ್ದ – ನಿಶ್ಯಬ್ದವಿದ್ದರೂ ಮೌನವಿಲ್ಲ”  ಎಂದಿದ್ದಾರೆ.  ಎಷ್ಟು ಅರ್ಥಪೂರ್ಣ ಸಾಲುಗಳು.   

ಮೌನವೆಂದರೆ ನಮ್ಮ ಎಲ್ಲಾ ವಿಷಯಾಸಕ್ತಿಗಳನ್ನೂ, ಹತಾಶೆಗಳನ್ನೂ, ಲೌಕಿಕ ಬಂಧನಗಳನ್ನೂ ಹೊರಗೋಡಿಸುವುದು.  ಹೀಗೆ ನಮ್ಮೊಳಗಿನ ಕಲ್ಮಶವನ್ನೆಲ್ಲಾ ಖಾಲಿ ಮಾಡಿ, ಅಂತರಂಗ ಶುದ್ಧ ಮಾಡಿಕೊಂಡಾಗ, ನಮ್ಮೆಲ್ಲಾ ಇಂದ್ರಿಯಗಳೂ ತಟಸ್ಥವಾಗಿರುವಾಗ, ನಮಗೆ ಕೇಳಿಸುವ ನಮ್ಮ ಒಳಕಣ್ಣಿನ, ಅಂತರಂಗದ ಒಂದು ಧ್ವನಿ, ತರಂಗಗಳು ಅಥವಾ ಸಂಗೀತ.  ಈ ಅಂತರಂಗದ ಸಂಗೀತಕ್ಕೆ ತನ್ನದೇ ಆದ ಒಂದು ಆಹ್ಲಾದಕರವಾದ ಸುವಾಸನೆ ಇದೆ, ತನ್ನದೇ ಆದ ಲಯವಿದೆ, ಲಾಲಿತ್ಯವಿದೆ.  ಅತ್ಯಂತ ಶಕ್ತಿಶಾಲಿಯಾದ ಇದು ಧನಾತ್ಮಕ ತರಂಗಗಳನ್ನು ನಮ್ಮೊಳಗೇ ಸೃಷ್ಟಿಸುತ್ತದೆ ಆದರೆ ಅದರ ಅರಿವು ನಮಗಿರುವುದಿಲ್ಲ ಅಷ್ಟೆ.  ದೇಹಕ್ಕೆ ನಿದ್ದೆ ಹೇಗೋ ಹಾಗೆ ಮೌನ ನಮ್ಮ ಬುದ್ಧಿಗೆ ಎನ್ನಬಹುದೇನೋ.  ರಜನೀಶರು ಹೇಳುತ್ತಾರೆ ಈ ಮೌನದ ರಾಗ ಪ್ರತಿಯೊಬ್ಬರಲ್ಲೂ ದೈವದತ್ತವಾಗಿ ಇದ್ದೇ ಇರುತ್ತದೆ ಎಂದು.  ಅವರದೇ ಮಾತುಗಳಲ್ಲಿ  ಹೇಳುವುದಾದರೆ ನಮ್ಮ ಮಿಕ್ಕೆಲ್ಲಾ ಇಂದ್ರಿಯಗಳೂ ಹೊರಗಡೆಗೆ ತೆರೆದುಕೊಳ್ಳುತ್ತವೆ ಆದರೆ ಆರನೆಯ ಇಂದ್ರಿಯವೆಂಬ “ಸುಪ್ತ ಮನಸ್ಸು” ಒಳಗೇ ಇದೆ, ಒಳಗೇ ತೆರೆದುಕೊಳ್ಳುತ್ತದೆ.  ಒಂದು ಹೊಚ್ಚ ಹೊಸಾ ಪ್ರಪಂಚವನ್ನೇ ಅನಾವರಣಗೊಳಿಸುತ್ತದೆ.  ಆದರೆ ನಾವು ಅದನ್ನೆಂದೂ ಅರಿಯುವ ಪ್ರಯತ್ನವನ್ನೇ ಮಾಡುವುದಿಲ್ಲ.  “ಮೌನ”ವೆಂಬುದು ಈ ಸುಪ್ತವಾಗಿ ಮಲಗಿರುವ ಇಂದ್ರಿಯದ ಹೆಬ್ಬಾಗಿಲು.  

ಮೌನ ನಮ್ಮೆಲ್ಲಾ ಒತ್ತಡಗಳನ್ನೂ, ತೊಂದರೆಗಳನ್ನೂ, ಅರ್ಥವಾಗದ ಗೊಂದಲಗಳನ್ನೂ ಸರಿಪಡಿಸುತ್ತದೆನ್ನಬಹುದು.  ಅನೇಕ ಸಲ ಉತ್ತರ ಸಿಕ್ಕದ ಎಷ್ಟೋ ಪ್ರಶ್ನೆಗಳಿಗೂ, ಬಗೆಹರಿಯದ ಸಮಸ್ಯೆಗಳಿಗೂ ಮೌನದಲ್ಲಿ ಸರಿಪಡಿಸಿಕೊಳ್ಳುವ ಮಾರ್ಗ ಕಾಣಿಸುತ್ತದೆ.  ಮೌನ ನಮ್ಮನ್ನು ನಾವೇ ತಿಳಿದುಕೊಳ್ಳಲು, ಪರಿಶುದ್ಧಗೊಳಿಸಿಕೊಳ್ಳಲು ಸಹಾಯ ಮಾಡುತ್ತದೆ.  ಮೌನವು ವಿಷಯಾಸಕ್ತಿಗಳಿಂದ ಖಾಲಿಯಾದ ಜಾಗದಲ್ಲಿ ಪ್ರಕೃತಿಯಲ್ಲಿರುವ ಧನಾತ್ಮಕ ಕಿರಣಗಳು, ಚೈತನ್ಯದಾಯಕ ತರಂಗಗಳು, ವಿಶ್ವ ಚಿಕಿತ್ಸಕ ಶಕ್ತಿಯ ಧಾರೆಯು ನಮ್ಮೊಳಗೆ ಸೇರಲು  ಅನುವು ಮಾಡಿಕೊಡುತ್ತದೆ.  ತುಂಬಾ ಮುಖ್ಯವಾಗಿ ಮೌನ ನಮ್ಮನ್ನು ಭಗವಂತನೆಡೆಗೆ ತಿರುಗುವಂತೆ ಮಾಡುತ್ತದೆ.  ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುವಂತೆ ಮಾಡುತ್ತದೆ.  ಭಗವಂತನ ಜೊತೆ ಮೌನದಲ್ಲಿ ಸಂಭಾಷಿಸುವಂತೆ ಪ್ರೇರೇಪಿಸುತ್ತದೆ ಮತ್ತು ಈ ಧನಾತ್ಮಕ ತರಂಗಗಳು ನಮ್ಮನ್ನು ಹೆಚ್ಚು ಬೆಳೆಯುವಂತೆ ಮಾಡುತ್ತವೆ.  ಜೊತೆಗೇ ಮೌನ ನಮ್ಮನ್ನು ನಾವೇ ನಿಜ ಅರ್ಥದಲ್ಲಿ ಅರಿತಿಕೊಳ್ಳಲು ಸಹಾಯ ಮಾಡುತ್ತದೆ.  ಏಕೆಂದರೆ ಮೌನವಾಗಿದ್ದಾಗಲೇ “ನಾನು ಯಾರು” ಎಂಬ ಪ್ರಶ್ನೆ ಹುಟ್ಟುವುದು ಮತ್ತು ನಾವು ಅದಕ್ಕೆ ಉತ್ತರ ಹುಡುಕುವುದು ಕೂಡ.  ಭಗವದ್ಗೀತೆಯಲ್ಲಿ ಕೂಡ “ನಿಜ ಅರ್ಥದಲ್ಲಿ ನಮ್ಮನ್ನು ನಾವು ಅರಿತುಕೊಳ್ಳಲಾಗುವುದು ಆತ್ಮ ಮೌನದಲ್ಲಿದ್ದಾಗ ಮಾತ್ರ ಸಾಧ್ಯ” ಎಂದಿದ್ದಾರೆ.  “ಮೌನ”ವೆಂದರೆ “ಮನನ” ಮತ್ತು ಮನನವೇ ಭಗವಂತನ ಚಿಂತನೆ.

ಬದುಕಿನಲ್ಲಿದ್ದೂ ಬದುಕುವುದೆಂದರೆ “ಮೌನ”ವೆಂಬ ಹೆಬ್ಬಾಗಿಲನ್ನು ತೆರೆಯುವ ಪ್ರಯತ್ನವಾದರೂ ಮಾಡುವುದು.  ಶಬ್ದಮಯ ಪ್ರಪಂಚದಲ್ಲಿದ್ದರೂ ನಮ್ಮೊಳಗಿನ ನಿಶ್ಯಬ್ದವನ್ನು  ಕಾಣುವುದು, ಆ ಸುಮಧುರ ಶಬ್ದರಹಿತ ಸಂಗೀತಕ್ಕೆ ಕಿವಿಯಾಗುವುದು, ರಮಣೀಯ ತೋಟದಲ್ಲಿ ವಿಹರಿಸುವುದು, ಕೊನೆಗೆ ಅಲೆ ಅಲೆಯಾಗಿ, ಬಳುಕುತ್ತಾ ಮೆಲ್ಲ ಮೆಲ್ಲಗೆ ನಮ್ಮೆಡೆಗೆ ತೇಲಿ ಬರುವ ಅಲೆಗಳೇ ನಾವಾಗಿಬಿಡುವುದು.  ಹೀಗೆ ನಮ್ಮ ಹೃದಯದಲ್ಲಿರುವ ಅರಳಲು ಕಾದಿರುವ ಜೀವ ಕುಸುಮವನ್ನು ವಿಕಸಿಸುವಂತೆ ಮಾಡಿದಾಗ ನಮಗೆ ಅರಿವಾಗುವುದೇ, ಸಿಗುವುದೇ  “ಪ್ರಾಂಜಲ ಸ್ನೇಹ, ಪವಿತ್ರ ಪ್ರೇಮ, ಅನೂಹ್ಯ ಅನುಭಾವ”.  ಇದು ದೈವೀಕವಾದದ್ದು.  ಸುಂದರವಾದ ಶುಭ್ರ ಮಲ್ಲಿಗೆಯ ತೋಟದಲ್ಲಿ ವಿಹರಿಸಿದಾಗ, ನಮಗೆ “ಕುಂದಾಭನಾದ ಶ್ರೀಹರಿ”ಯ ಇರುವಿಕೆಯ ವಿಶೇಷ ಅನುಭಾವವಾಗುವುದು.  ಮೌನ ಬಂಗಾರವಲ್ಲ ಅದಕ್ಕಿಂತಲೂ ಬೆಲೆಬಾಳುವ ವಜ್ರ, ವೈಢೂರ್ಯವೆನ್ನಬಹುದಲ್ಲವೇ...

ಚಿತ್ರಕೃಪೆ : ಅಂತರ್ಜಾಲ

9 comments:

 1. ಮೌನದ ಬಗೆಗೆ ತುಂಬಾ ಸೊಗಸಾದ ಲೇಖನ...

  Thank you....

  ReplyDelete
 2. ಶ್ಯಾಮಲಾ, ನಿಮ್ಮಂತರಂಗದ ಮೃದಂಗ ಮೌನವಾಗಿಯೇ ಶೃತಿ ನುಡಿಸಿದೆ. ಈ ಆಧುನಿಕ ಯುಗದಲ್ಲಿ (??) ಮೌನ ಎಂಬುದು ಎಸ್‌ಎಂಎಸ್‌ ಮೂಲಕ ಎಲ್ಲೆಲ್ಲೂ ಮೂಡಿಬರುತ್ತಿದೆ. ಹಾಗೆಯೇ ಶಬ್ದದಿಂದ ದೂರಾಗಲೂ ಯಾವುದಾದರೂ ಸೈಲೆಂಟ್‌ ಜಾಗಕ್ಕೆ ಹೋಗೋಣ ಎನ್ನಿಸಿದರೂ, ಅಲ್ಲಿಯೂ ಮಾಧ್ಯಮ ಪ್ರಚಾರದಿಂದಾಗಿ ಗದ್ದಲದ ಗೂಡಾಗಿರುತ್ತವೆ. ಆದರೂ ಸಂತೆಯಲ್ಲಿ ಚಿಂತೆಯಿಲ್ಲದೇ ನಿದ್ರಿಸುವವನೇ ಧನ್ಯ... ಮಾತು ಬೆಳ್ಳಿ, ಮೌನ ಬಂಗಾರ... ಸೊಗಸಾದ ಲೇಖನ.
  ಧನ್ಯವಾದಗಳು,
  ಚಂದ್ರು

  ReplyDelete
 3. ಸದಾ ಮಾತು.. ಮಾತು.. ಮಾತು.. ಎನ್ನುವ ಮಾತಿನ ಮಲ್ಲಿಯಾದ ನನಗೆ ನಿಮ್ಮ ಮೌನದ ಬಗೆಗಿನ "ಮೌನ ರಾಗ" ತುಂಬಾ ಹಿಡಿಸಿತು.. :) :)

  ReplyDelete
 4. ವಾವ್.. ಮಾತು ಮೌನಗಳ ವರ್ಣನೆ, ಸುಂದರ ರೂಪಕಗಳಿಂದ ಸಕತ್ತಾಗಿ ಮೂಡಿಬಂದಿದೆ :-)

  ReplyDelete
 5. ಮೌನದ ಬಗೆಗೆ ತುಂಬ ಉದ್ಬೋಧಕ ಲೇಖನ. ಮೌನದ ಶಕ್ತಿ ಅಪಾರ. ಶಂಕರಾಚಾರ್ಯರ ‘ಗುರೋsಸ್ತು ಮೌನ ವ್ಯಾಖ್ಯಾನಂ’ ನೆನಪಾಗುತ್ತದೆ.

  ReplyDelete
 6. "ಮೌನವು ವಿಷಯಾಸಕ್ತಿಗಳಿಂದ ಖಾಲಿಯಾದ ಜಾಗದಲ್ಲಿ ಪ್ರಕೃತಿಯಲ್ಲಿರುವ ಧನಾತ್ಮಕ ಕಿರಣಗಳು, ಚೈತನ್ಯದಾಯಕ ತರಂಗಗಳು, ವಿಶ್ವ ಚಿಕಿತ್ಸಕ ಶಕ್ತಿಯ ಧಾರೆಯು ನಮ್ಮೊಳಗೆ ಸೇರಲು ಅನುವು ಮಾಡಿಕೊಡುತ್ತದೆ."

  ಮೌನದಲ್ಲಿಯೂ ಕಾಡಬಲ್ಲ ಚಿ೦ತೆಗಳನ್ನು ಬ೦ಧಿಸಿ, ಚಿ೦ತನೆಗಳ ಅರಳುವಿಕೆಗೆ ಅನುವು ಮಾಡಿಕೊಡಬಲ್ಲೆವಾದರೆ, ಮೌನದ ಹ೦ತದಿ೦ದ ಧ್ಯಾನದ ಹ೦ತಕ್ಕೆ ತಲುಪಬಲ್ಲೆವಾದರೆ, ಧನಾತ್ಮಕ ಕಿರಣಗಳು, ಚೈತನ್ಯದಾಯಕ ತರಂಗಗಳು, ವಿಶ್ವ ಚಿಕಿತ್ಸಕ ಶಕ್ತಿಯ ಧಾರೆಯು ನಮ್ಮೊಳಗೆ ಹರಿಯತೊಡಗುತ್ತದೆ. ಉತ್ತಮ ಲೇಖನದ ಪ್ರಸ್ತುತಿಗೆ ಶ್ಯಾಮಲಾ ಅವರಿಗೆ ಅಭಿನ೦ದನೆಗಳು.

  ಅನ೦ತ್

  ReplyDelete
 7. ಶ್ಯಾಮಲಾ ಮೇಡಂ;ಮೌನದ ಬಗ್ಗೆ ಅತಿ ಉತ್ತಮ ಲೇಖನ.ನಿಜವಾದ ಮೌನದಲ್ಲಿ,ಧ್ಯಾನದಲ್ಲಿ ಎಂತಹ ಪ್ರಶಾಂತತೆ ಇದೆ ಎನ್ನುವುದು ಅದನ್ನು ಅನುಭವಿಸಿದವರಿಗೇ ಗೊತ್ತು.ಹೊರಗಿನ,ಒಳಗಿನ ಗೌಜು ಗದ್ದಲಗಳಿಂದ ದೂರವಾದಾಗಲೇ ನಿಜವಾದ ಮುಕ್ತಿ,ಆನಂದ!ಧನ್ಯವಾದಗಳು.ನಮಸ್ಕಾರ.

  ReplyDelete
 8. ಪ್ರಕಾಶ್ ಸಾರ್.., ಸಂಧ್ಯಾ ಶ್ರೀಧರ್ ಭಟ್, ಪ್ರಶಸ್ತಿ... ಎಲ್ಲರಿಗೂ ಧನ್ಯವಾದಗಳು.

  ಚಂದ್ರು..
  ಮೌನದಲ್ಲೇ ಎಷ್ಟೊಂದು ಮಾತಿದೆ ಅನ್ನೋ ಸತ್ಯ ನಂಗೆ ಈಗ ತಿಳೀತಿದೆ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು

  ಸುನಾತ್ ಕಾಕಾ..
  ನಿಮ್ಮ ಮಾತು ನಿಜ ಮೌನಕ್ಕೆ ಅಪಾರ ಶಕ್ತಿಯಿದೆ. ಅದು ಅನುಭವಕ್ಕೆ ಬಂದಾಗಲೇ ಅರ್ಥವಾಗೋದು ಅಲ್ವಾ? ಧನ್ಯವಾದಗಳು ಕಾಕಾ

  ಅನಂತ್ ಸಾರ್
  ನಾವು ಯಾವಾಗ ಮೌನವನ್ನು ಆನಂದಿಸುತ್ತೇವೋ ಆಗಲೇ ಅದರ ಅನುಭೂತಿಯಾಗುವುದು ಅಲ್ವಾ? ನಮ್ಮನ್ನು ನಾವು ಮೌನಕ್ಕೆ ಒಪ್ಪಿಸಿಕೊಳ್ಳುವುದೇ ನಮ್ಮ ನಿರಂತರ ಪ್ರಯತ್ನವಾಗಬೇಕು, ಆಗಲೇ ನೀವೆಂದಂತೆ ಚಿಂತೆಗಳಿಂದ ಚಿಂತನೆಗಳ ಕಡೆಗೆ ತಿರುಗಬಹುದು. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು

  ಡಾಕ್ಟರ್ ಕೃಷ್ಣಮೂರ್ತಿ ಸಾರ್
  ನಿಮ್ಮ ಮಾತು ನೂರಕ್ಕೆ ನೂರು ನಿಜ. ನಿಜವಾದ ಮುಕ್ತಿ, ಆನಂದ ನಮಗೆ ಸಿಕ್ಕಿಲ್ಲ, ಅದನ್ನು ಪಡೆಯಬೇಕೆನ್ನುವ ಹಂಬಲ ಜಾಗೃತವಾಗಬೇಕು ಮೊದಲು ಅಲ್ವಾ ಸಾರ್? ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

  ReplyDelete
 9. ಉತ್ತಮ ಮತ್ತು ಚಿಂತನೀಯ ಬರಹ. ಧನ್ಯವಾದಗಳು ನಿಮಗೆ.

  ReplyDelete