Tuesday, October 23, 2012

ವೀಣೆ..

ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವುದು ತಂತಿವಾದ್ಯವಾದ ವೀಣೆ.  ವೀಣೆ ಎಂದೊಡನೆ ನಮಗೆ ನೆನಪಾಗುವುದೇ ದೇವಿ ಸರಸ್ವತಿ.  ಸರಸ್ವತಿ ದೇವಿಯು ಸಂಗೀತದ ಅಧಿದೇವತೆ.  ಅವಳು ವೀಣಾಪಾಣಿ.  ಸರಸ್ವತಿ ದೇವಿಯು ವೇದಗಳ ಅಭಿಮಾನಿ. ಬ್ರಹ್ಮ ದೇವರ, ಚತುರವದನನ ರಾಣಿ ಎಂದರೆ ಚತುರ್ಮುಖ ಬ್ರಹ್ಮನ ನೀತಪತ್ನಿ ಹಾಗೂ ಪ್ರದ್ಯುಮ್ನ ಕೃತೀ ದೇವಿಯವರ ಪುತ್ರಿ. ಇವಳು ಮರೆವೆಯೇ ಇಲ್ಲದ ಹಾಗೂ ಅನವರತವೂ ಪರಮಾತ್ಮನ ಸ್ತುತಿ ಮಾಡುವವಳು, ಬ್ರಹ್ಮಾಣಿ ತತ್ವಜ್ಞಾನಿ ಹಾಗೂ ಗಾನಲೋಲಳೂ ಅಹುದು.  ಇವಳ ಹಸ್ತದಲ್ಲಿ ಸದಾ ಕಚ್ಛಪಿ ಎಂಬ ವೀಣೆ ಇರುವುದರಿಂದ, ಇವಳು ವೀಣಾಪಾಣಿ ಮತ್ತು ಇವಳು ಚಿತ್ತಾಭಿಮಾನಿ, ಸರ್ವರಿಗೂ ಬುದ್ಧಿಯನ್ನು ಕೊಡುವ ಬುದ್ಧ್ಯಾಭಿಮಾನಿ ದೇವತೆಯೂ ಹೌದು.

ನಮ್ಮ ದೇಶದಲ್ಲಿ ಇರುವಷ್ಟು ಸಂಗೀತ ವಾದ್ಯಗಳು ಬೇರೆಲ್ಲೂ ಇಲ್ಲವೆನ್ನಬಹುದೇನೋ.. ಪ್ರತಿಯೊಂದು ವಾದ್ಯವೂ ತನ್ನದೇ ಆದ ಒಂದು ಆಕಾರ, ರಚನೆ ಮತ್ತು ಧ್ವನಿಯನ್ನು ಹೊಂದಿದೆ ಮತ್ತು ವಿಶಿಷ್ಟವಾಗಿದೆ.  ಶಾಸ್ತ್ರದಲ್ಲಿ ಈ ವಾದ್ಯಗಳನ್ನು ನಾಲ್ಕು ವಿಧವಾಗಿ ವಿಂಗಡಿಸಿದ್ದಾರೆ.  ಅವುಗಳು :
೧) ತತ (ತಂತೀವಾದ್ಯಗಳು)
೨) ಸುಷಿರ (ಗಾಳಿ ವಾದ್ಯಗಳು)
೩) ಅವನದ್ಧ (ತಾಡನ ವಾದ್ಯಗಳು)
೪) ಘನ (ಲೋಹ, ಮಣ್ಣು ಅಥವಾ ಮರದ ವಾದ್ಯಗಳು)

 ವೀಣೆ ತತ ಅಂದರೆ ತಂತೀವಾದ್ಯಗಳ ಗುಂಪಿಗೆ ಸೇರುತ್ತದೆ.    ತಂತಿಗಳ ಮೂಲಕ ನಾದೋತ್ಪತ್ತಿಯಾಗುವ ವಾದ್ಯಗಳೇ ತತವಾದ್ಯಗಳು.  ತಂತೀ ವಾದ್ಯಗಳನ್ನು ಶ್ರುತಿ ವಾದ್ಯ ಮತ್ತು ಸಂಗೀತಾವಾದ್ಯಗಳೆಂದು ವಿಂಗಡಿಸಲಾಗಿದೆ.  ಗಾಯನ ಅಥವಾ ವಾದನಗಳಲ್ಲಿ ಶ್ರುತಿಗಾಗಿ ಉಪಯೋಗಿಸಲ್ಪಡುವುದು  "ತಂಬೂರಿ" ಮತ್ತು ಸಂಗೀತವನ್ನು ಗಾಯನಕ್ಕೆ ಬದಲಾಗಿ ವಾದ್ಯದಲ್ಲಿ ಹೊಮ್ಮಿಸಲು ಉಪಯೋಗಿಸಲ್ಪಡುವುದು "ವೀಣೆ".  ವೀಣೆ ಋಗ್ವೇದದಲ್ಲಿ ಮತ್ತು ಯಜುರ್ವೇದದಲ್ಲಿ ಕೂಡ  ಪ್ರಸ್ತಾಪಿಸಲ್ಪಟ್ಟಿದೆಯಂತೆ.   ವೀಣೆಯ ಉತ್ಪತ್ತಿಗೆ ನಾದಪ್ರಿಯನಾದ ಶಂಕರನು ಕಾರಣವಿರಬಹುದು ಏಕೆಂದರೆ "ರುದ್ರವೀಣೆ" ಎಂದು ಕೂಡ ವಿಶಿಷ್ಟವಾದ ಒಂದು ವೀಣೆ ಇದೆ.  ದೇವಿ ಸರಸ್ವತಿಯಲ್ಲದೆ ವಿಶ್ವಾವಸು, ತುಂಬುರು ಮತ್ತು ನಾರದರು ಕೂಡ ವೈಣಿಕರೇ ಮತ್ತು ತುಂಬುರರ ವೀಣೆಯ ಹೆಸರು "ಕಲಾವತೀ" ಎಂದೂ, ವಿಶ್ವಾವಸುವಿನ ವೀಣೆಯ ಹೆಸರು "ಬೃಹತೀ" ಎಂದೂ ಮತ್ತು ನಾರದರ ವೀಣೆಯ ಹೆಸರು "ಮಹತಿ" ಎಂದೂ ನಮಗೆ ಪುರಾಣಗಳಿಂದ ತಿಳಿದುಬರುತ್ತದೆ.  ವೀಣೆ ಮೋಕ್ಷ ಸಾಧನೆಗೆ ಸುಲಭವಾದ ಹಾದಿ ಎಂದು ಯಾಜ್ಞವಲ್ಕ್ಯರು ತಮ್ಮ ಸ್ಮೃತಿಯಲ್ಲಿ ಹೇಳಿದ್ದಾರೆ.  ನಾವು ರಾವಣನ ಕಥೆಯಲ್ಲಿ ಕೂಡ ಕೇಳಿದ್ದೇವೆ - ವೀಣೆಯ ತಂತಿಯೊಂದು ಕಿತ್ತು ಹೋದಾಗ ತನ್ನ ದೇಹದ ಒಂದು ನರವನ್ನೇ ಕಿತ್ತು ತಂತಿಯಾಗಿಸಿ, ವೀಣೆಯ ವಾದನವನ್ನು ಮುಂದುವರೆಸಿದನೆಂದು.

ವೀಣೆ ಈಗಿರುವ ಸ್ವರೂಪಕ್ಕೆ ಬರುವ ಮೊದಲು ಅನೇಕ ಬದಲಾವಣೆಗಳನ್ನು ಹೊಂದಿದ್ದಾಗಿರಬಹುದು.  ಕಾಳಿದಾಸನ ’ಶ್ಯಾಮಲಾ ದಂಡಕ’ದಲ್ಲಿ  "ಮಾಣಿಕ್ಯವೀಣಾಂ ಉಪಲಾಲಯಂತೀಂ " ಎನ್ನುತ್ತಾ ಶ್ಯಾಮಲೆಯಾದ ಶಾರದಾಂಬೆಯು ಮಾಣಿಕ್ಯ ಮಯವಾದ ವೀಣೆಯನ್ನು ನುಡಿಸುತ್ತಿದ್ದಳು ಎಂದಿದ್ದಾರೆ.  ಹಾಗೇ ಪ್ರತಿಜ್ಞಾ ಯೌಗಂಧರಾಯಣ ನಾಟಕದಲ್ಲಿ ರಾಜಾ ಉದಯನು "ಘೋಷವತೀ" ಎಂಬ ವೀಣೆಯನ್ನು ನುಡಿಸಿದ್ದನೆಂದು ಕೂಡ ಉಲ್ಲೇಖವಿದೆ.  ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ನಾದಜ್ಯೋತಿ ಶ್ರೀ ಮುತ್ತುಸ್ವಾಮಿ ದೀಕ್ಷಿತರಿಗೆ ಗುರು ಚಿದಂಬರನಾಥ ಯೋಗಿಯ ಅನುಗ್ರಹದಿಂದ ಕಾಶಿಕ್ಷೇತ್ರದಲ್ಲಿ ಗಂಗೆಯಲ್ಲಿ ದೊರೆತ ವೀಣೆಯ ಮೇಲೆ ದೇವನಾಗರಿಯಲ್ಲಿ "ರಾಮ" ಎಂದು ಕೆತ್ತಲ್ಪಟ್ಟಿದೆಯಂತೆ.  ಹೀಗೆ ವೀಣೆಯ ಇತಿಹಾಸ ತುಂಬಾ ಹಿಂದಿನದೆಂಬ ಮಾತು ನಮಗೆ ಅರ್ಥವಾಗುತ್ತದೆ.

ವೀಣೆಯ ವಿವರಣೆಯೆಂದರೆ ಒಂದು ಚಿಕ್ಕ ಹಾಗೂ ಒಂದು ದೊಡ್ಡ ಬುರುಡೆಗಳಿರುತ್ತವೆ.  ದೊಡ್ಡ ಬುರುಡೆಯನ್ನು  ಕೊಡ  ಎಂದು ಕರೆಯುತ್ತಾರೆ.  ಬಲಗಡೆಗೆ ಇರುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಹಲಸಿನ ಮರದಿಂದ ಮಾಡುತ್ತಾರೆ.  ಇದರ ತಯಾರಿ ಕೂಡ ಅನೇಕ ತಿಂಗಳುಗಳ ಕೆಲಸವಾಗುತ್ತದೆ.  ಹಲಸಿನ ಮರವನ್ನು ನೀರಿನಲ್ಲಿ ನೆನೆಸಿಟ್ಟು ಬೇಕಾದ ಆಕಾರಕ್ಕೆ ಕೊರೆದು, ಕತ್ತರಿಸಿ ಹಗುರ ಮಾಡಿ ಕೊಡವನ್ನು ತಯಾರಿಸುತ್ತಾರೆ.  ಕೊಡ ಹಗುರವಾಗಿದ್ದಷ್ಟೂ ನಾದ ಚೆನ್ನಾಗಿ ತುಂಬುತ್ತದೆಂಬ ನಂಬಿಕೆಯಿದೆ.  ಹೀಗೆ ತಯಾರಿಸಿದ ಕೊಡವನ್ನು ಇನ್ನೊಂದು ಮರದ ಹಾಳೆಯಿಂದ ಮುಚ್ಚಿರುತ್ತಾರೆ. ಅದಕ್ಕೆ ದಂಡಿಯನ್ನು ಜೋಡಿಸುತ್ತಾರೆ.  ಅದರ ಎಡತುದಿ ಭೂಮಿಯ ಕಡೆಗೆ ಬಗ್ಗಿರುತ್ತದೆ ಮತ್ತು ಇದಕ್ಕೆ ಇನ್ನೊಂದು ಪುಟ್ಟ ಕೊಡದಂತಹ ಬುರುಡೆಯನ್ನು ಜೋಡಿಸಿರುತ್ತಾರೆ.  ಈ ರೀತಿಯ ವೀಣೆ ಮೊಟ್ಟ ಮೊದಲು ತಂಜಾವೂರಿನಲ್ಲಿ ತಯಾರಾದುದರಿಂದ ಇಂತಹ ವೀಣೆಗೆ "ತಂಜಾವೂರು ವೀಣೆ" ಎನ್ನುತ್ತಾರೆ.  ಎಡಗಡೆಗೆ ಜೋಡಿಸಿರುವ ಪುಟ್ಟ ಕೊಡದಂತಹದು ಸೋರೆಬುರುಡೆ ಅಥವಾ ಕಾಗದದ ಬುರುಡೆ, ಪಿತ್ ಅಥವಾ ರಾಳದ ಬುರುಡೆ, ತಗಡಿನ ಬುರುಡೆಯೂ ಆಗಿರಬಹುದು.  ದಂಡಿಯ ಮೇಲ್ಭಾಗಕ್ಕೆ ದೋಣಿ ಪಟ್ಟಿಯನ್ನು ಅಂಟಿಸಿರುತ್ತಾರೆ ಮತ್ತು ಈ ದೋಣಿ ಪಟ್ಟಿಯ ಮೇಲೆ ಉದ್ದಕ್ಕೂ ಎರಡೂ ಕಡೆಗಳಲ್ಲೂ ಹದ ಮಾಡಿದ ಮೇಣದಿಂದ ಜಗಲಿಗಳನ್ನು ಕಟ್ಟಿ ಅವುಗಳ ಮೇಲೆ ೨೪ ಎರಕದ ಮೆಟ್ಟಿಲುಗಳನ್ನು ಆಯಾಯಾ ಸ್ವರ ಸ್ಥಾನಗಳಿಗೆ ಅನುಗುಣವಾಗಿ ನೆಡುತ್ತಾರೆ.  ಮೇಣಕ್ಕೆ ಇದ್ದಿಲನ್ನು ನುಣ್ಣಗೆ ಪುಡಿಮಾಡಿ ಬೆರೆಸಿ, ಕಲಸಿ, ಬೆಂಕಿಯಲ್ಲಿ ಕಾಯಿಸಿ ಗೊತ್ತಾದ ಹದಕ್ಕೆ ತಂದು ಕಟ್ಟಬೇಕು.  ಇದರ ಮೇಲೆ ಮೆಟ್ಟಿಲುಗಳನ್ನು ನೆಡುವಾಗ ನಿಶ್ಯಬ್ದತೆ ಇರಬೇಕು.  ಕೂದಲೆಳೆಯಷ್ಟು ವ್ಯತ್ಯಾಸವಾದರೂ ಅಪಸ್ವರ ಬರುತ್ತದೆ.  ಇದಕ್ಕೆ ವೀಣೆಮೇಳ ಕಟ್ಟುವುದು ಎಂದೇ ಕರೆಯುತ್ತಾರೆ.  ಈ ಮೆಟ್ಟಿಲುಗಳ ಮೇಲೆ ವೀಣೆಯ ಕೊಡದ ಮೇಲೆ ಅಂಟಿಸಿದ "ಕುದುರೆ" (ಮರದ ತುಂಡು) ಮೂಲಕ ಹಾದು ನಾಲ್ಕು ತಂತಿಗಳು ಬರುತ್ತವೆ.  ಕುದುರೆಯ ಎತ್ತರ ಮತ್ತು ಮೇಣದ ಎತ್ತರ ಎರಡೂ ಸಮವಾಗಿದ್ದಾಗ ಮಾತ್ರ ಸುಲಲಿತವಾದ ನಾದ ಹೊರಹೊಮ್ಮುತ್ತದೆ.  ನಾಲ್ಕು ತಂತಿಗಳಲ್ಲಿ ಮೊದಲನೆಯದು "ಸಾರಣಿ", ಎರಡನೆಯದು "ಪಂಚಮ", ಮೂರನೆಯದು "ಮಂದ್ರ", ನಾಲ್ಕನೆಯದು "ಅನುಮಂದ್ರ" ಎಂದು ಕರೆಯುತ್ತಾರೆ.  ಇದಲ್ಲದೆ ಕುದುರೆಯ ಪಕ್ಕದಲ್ಲಿ ಬಾಗಿದ ಒಂದು ಹಿತ್ತಾಳೆಯ ರೇಕು ಜೋಡಿಸಿರುತ್ತಾರೆ.  ಇದರ ಮೂಲಕ ಮೂರು ತಾಳದ ತಂತಿಗಳು ಹಾದು ಹೋಗುತ್ತವೆ.  ಅವುಗಳು ಕ್ರಮವಾಗಿ ಮಧ್ಯ ಷಡ್ಜ, ಮಧ್ಯ ಪಂಚಮ ಮತ್ತು ತಾರ ಷಡ್ಜಗಳು.  ವೀಣೆಯ ಎಲ್ಲಾ ಏಳು ತಂತಿಗಳೂ ಎಡಗಡೆಯ ಪುಟ್ಟ ಬುರುಡೆಯ ಕಡೆಗೆ ಹಾದು ಬರುತ್ತವೆ ಮತ್ತು ಒಂದೊಂದು ತಂತಿಯೂ ಒಂದೊಂದು ಬಿರಟೆಯಿಂದ ಕಟ್ಟಲ್ಪಟ್ಟು, ಹೆಚ್ಚಿಗೆ ಇರುವ ತಂತಿ ಅದಕ್ಕೆ ಸುತ್ತಿ ಭದ್ರಪಡಿಸಲ್ಪಟ್ಟಿರುತ್ತದೆ.  ವೀಣೆ ಶ್ರುತಿ ಮಾಡುವಾಗ ಈ ಬಿರಟೆಗಳನ್ನು ಬಿಗಿ ಮತ್ತು ಸಡಿಲು ಮಾಡುವ ಮುಖಾಂತರ ಬೇಕಾದ ಬಿಂದುವಿನಲ್ಲಿ ಸ್ವರ ಕೂಡಿಸಲು ಅನುಕೂಲವಾಗುತ್ತದೆ.

ಮೂರು ಪ್ರತ್ಯೇಕ ಭಾಗಗಳಾದ ಕಾಯಿ, ದಂಡಿ ಮತ್ತು ತಲೆ ಉಳ್ಳ ವೀಣೆಗೆ ’ಖಂಡ ವೀಣೆ’ ಎಂದು ಹೆಸರು.  ಮೂರೂ ಭಾಗಗಳೂ ಏಕವಾಗಿ ಒಂದೇ ಮರದಲ್ಲಿ ಮಾಡಲ್ಪಡುವ ವೀಣೆಗೆ ’ಅಖಂಡ ವೀಣೆ’ ಎಂದು ಹೆಸರು.  ಅಖಂಡ ವೀಣೆಯ ನಾದ ಹೆಚ್ಚು ಮಧುರವಾಗಿರುತ್ತದೆನ್ನುತ್ತಾರೆ.  ವೆಂಕಟಮುಖಿಯವರು  ಉಲ್ಲೇಖಿಸಿರುವ ಮೂರು ವಿಧ ವೀಣೆಗಳಾದ ’ಶುದ್ಧ ಮೇಳ ವೀಣೆ’, ’ಮಧ್ಯಮ ಮೇಳ ವೀಣೆ’ ಮತ್ತು ’ರಘುನಾಥ ಮೇಳ ವೀಣೆ’ ಗಳಲ್ಲಿ ತಂತಿಗಳು ಮೇಲೆ ಹೇಳಿದಂತಿಲ್ಲದೆ ಬೇರೆಯೇ ಕ್ರಮದಲ್ಲಿವೆ ಮತ್ತು ಅವುಗಳನ್ನು ಶ್ರುತಿ ಮಾಡುವ ರೀತಿಯೂ ಬೇರೆಯೇ ಆಗಿವೆ.  ಮೆಟ್ಟಿಲುಗಳ ಜೋಡಣೆಯ ಕ್ರಮದಲ್ಲೂ ಸ್ವಲ್ಪ ವ್ಯತ್ಯಾಸ ಬರುತ್ತದೆ.

ವೀಣೆಯ ಪುಟ್ಟ ಸೋರೆಯ ಬುರುಡೆಯನ್ನು ನುಡಿಸುವವರ ಎಡ ತೊಡೆಯ ಮೇಲಿಟ್ಟುಕೊಳ್ಳುತ್ತಾರೆ, ದೊಡ್ಡ ಕೊಡ ಅಥವಾ ಬುರುಡೆಯನ್ನು ಬಲತೊಡೆಗೆ ತಗುಲುವಂತೆ ಇಟ್ಟುಕೊಂಡು ಕುಳಿತು, ಬಲಗೈನಿಂದ ಮೊದಲನೆಯ ತಂತಿ ಸಾರಣಿಯನ್ನು ತರ್ಜನಿ ಹಾಗೂ ಮಧ್ಯದ ಬೆರಳುಗಳಿಂದ ಮೀಟುತ್ತಾ, ಎಡಗೈಯನ್ನು ಮೇಣದಲ್ಲಿ ಕಟ್ಟಿರುವ ಮೆಟ್ಟಿಲುಗಳ ಮೇಲೆ ಒತ್ತುತ್ತಾ ನಾದ ಹೊಮ್ಮಿಸುತ್ತಾರೆ.  ಬಲಗೈನ ಕಿರು ಬೆರಳಿನಿಂದ ತಾಳದ ತಂತಿಗಳನ್ನು ಬೇಕಾದ ಕಡೆ ತಾಳ ಹಾಕಲು ಉಪಯೋಗಿಸುತ್ತಾರೆ.  ವೀಣೆ ಗಮಕಕ್ಕೆ ತುಂಬಾ ಸೂಕ್ತವಾದ ವಾದ್ಯ.  ಗಾಯನದಲ್ಲಿ ಸಾಧ್ಯವಾಗದೇ ಇರುವ ಸ್ವರಪ್ರಕ್ತಿಯು ಸಹಜವಾಗಿ ತಂತೀವಾದ್ಯವಾದ ವೀಣೆಯಲ್ಲಿ ಅತ್ಯದ್ಭುತವಾಗಿ ಉತ್ಪತ್ತಿ ಮಾಡಬಹುದು.  ವೀಣೆಯ ಮೆಟ್ಟುಗಳ ಮೇಲೆ ಹಾಯುವ ತಂತಿಗಳಲ್ಲಿ ಪ್ರಧಾನ ತಂತಿಯಾದ ಸಾರಣಿ, ಮಂದ್ರ ಪಂಚಮ ಮತ್ತು ಮಂದ್ರ ಷಡ್ಜ ತಂತಿಗಳ ಮೇಲೆ ಸಂವಾದಿ, ಅನುವಾದಿ ಸ್ವರ ರಂಜನೆಗೆ ಆಸ್ಪದವೀಯುವ ಸ್ವರಗಳ ಮೆಟ್ಟಿಲುಗಳನ್ನು ಎಡಗೈ ಬೆರಳುಗನ್ನದುಮಿ ಬಲಗೈ ಬೆರಳಿನ ಒಂದೇ ಒಂದು ಮೀಟಿನಿಂದ ಮೂರೂ ಸ್ವರಗಳನ್ನೂ ಉತ್ಪತ್ತಿ ಮಾಡುವುದೇ ಈ "ಗಮಕ"ದ ತಂತ್ರ.

ಐತರೇಯೋಪನಿಷತ್ತಿನಲ್ಲಿ ನಮ್ಮ ದೇಹವನ್ನು ವೀಣೆಯೆಂದು ಉಲ್ಲೇಖಿಸಿದ್ದಾರೆ....

ಅಥ ಖಲ್ವಿಯಂ ದೈವೀವೀಣಾ ಭವತಿ |  ತದನುಕೃತಿರಸೌ ಮಾನುಷೀ ವೀಣಾ ಭವತಿ |   
ಯಥಾಸ್ಯಾ: ಶಿರ ಏವಮಮುಷ್ಯಾ: ಶಿರ: |
ಯಥಾಸ್ಯಾ ಉದರಮೇವಮಮುಷ್ಯಾ ಅಂಭಣಮ್ | ಯಥಾಸ್ಯೈ ಜಿಹ್ವಾ - ಏವಮಮುಷ್ಯೈ ವಾದನಮ್ |
ಯಥಾಸ್ಯಾಸ್ತಂತ್ರಯ ಏವಮಮುಷ್ಯಾ ಅಂಗುಲಯ: | ಯಥಾಸ್ಯಾ: ಸ್ವರಾ ಏವಮಮುಷ್ಯಾ: ಸ್ವರಾ: ||
 
ಈ ದೇಹವೊಂದು ದೈವೀವೀಣೆ.  ಮನುಷ್ಯರು ನಿರ್ಮಿಸಿದ ಮರದ ವೀಣೆ ದೇವರು ನಿರ್ಮಿಸಿದ ಈ ದೇಹವೀಣೆಯದೇ ಅನುಕರಣೆ.  ದೇಹಕ್ಕೆ ತಲೆಯಿದ್ದಂತೆ ಮರದ ವೀಣೆಗೆ ಪುಟ್ಟ ಬುರುಡೆ ಇದೆ, ದೇಹದ ಉದರ ಹಾಗೂ ಪೀಠವಿದ್ದಂತೆ ವೀಣೆಗೆ ಕೊಡ ಅಥವಾ ದೊಡ್ಡ ಬುರುಡೆಯಿದೆ.  ಬೆನ್ನುಹುರಿಯು ಉದ್ದಕ್ಕೆ ದೇಹದಲ್ಲಿ  ಪೀಠದಿಂದ ಕಂಠದವರೆಗೆ ಪಸರಿಸಿ ಪೀಠವನ್ನು ಮತ್ತು ದೇಹದ ಕೆಳಗಿನ ಭಾಗದ ಸಂಪರ್ಕವನ್ನು ತಲೆಗೆ ಮುಟ್ಟಿಸಿದೆಯೋ ಹಾಗೆ ವೀಣೆಯಲ್ಲಿ ಮರದ ದೋಣಿ ಕೊಡವನ್ನು ಪುಟ್ಟ ಬುರುಡೆಗೆ ಸೇರಿಸಿದೆ.  ಬೆನ್ನುಹುರಿಯಲ್ಲಿರುವಂತೆಯೇ ಈ ದೋಣಿಯ ಮೇಲೆ ಮೇಣವನ್ನು ಕಟ್ಟಿ ಅವುಗಳ ಮೇಲೆ ೨೪ ಎರಕದ ಮೆಟ್ಟಿಲುಗಳನ್ನು ಸ್ವರಸ್ಥಾನಗಳಾಗಿ ಜೋಡಿಸಿರುತ್ತಾರೆ.  ದೇಹದ ವೀಣೆಗೆ ನಾಲಿಗೆ ಹೇಗೆ ಸ್ವರ / ನಾದವನ್ನು ಉತ್ಪತ್ತಿ ಮಾಡುವುದೋ ಹಾಗೆ ವೀಣೆಯ ಮೇಲೆ ವಾದಕನ ಬೆರಳುಗಳು ನಾದವನ್ನು ಸೃಷ್ಟಿಸುತ್ತವೆ.  ದೇಹಕ್ಕೆ ನರಗಳೇ ತಂತಿಗಳು.  ನಾದ ಮೈತುಂಬಿದಾಗ, ನರ ನರವೂ ನಾದದ ಅಲೆಯಲ್ಲಿ ತೇಲಿಹೋಗುವುದು.  ಹಾಗೇ ವೀಣೆಯ ತಂತಿಗಳೂ, ವಾದಕನ ಬೆರಳುಗಳು ತಂತಿಯ ಮೇಲೆ ಆಟವಾಡಿದಾಗ, ಅಲೆ ಅಲೆಯಾಗಿ ನಾದ ವೀಣೆಯ ಕೊಡದಿಂದ ಚಿಮ್ಮುತ್ತದೆ.  ದೇಹವೆಂಬ ದೈವೀವೀಣೆ ದೇವರ ಗುಣಗಾನಕ್ಕೇ ಮೀಸಲಾದ ವೀಣೆ.  ಈ ದೇಹ ವೀಣೆಗೆ ನಮ್ಮ ಕೈಗಳೇ ತಾಳವಾದ್ಯ.  ಕೈ ತಟ್ಟಿನ ತಾಳ ತಟ್ಟಿ ದೇಹವೆಂಬ ದಂಡಿಗೆಯಿಂದ ಭಗವಂತನ ಸ್ಮರಣೆಯನ್ನು ನುಡಿಸಬೇಕು. 

ವೀಣೆ ದೈವೀಕವಾದರೂ ನಮ್ಮ ಜೀವನದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿದೆ.  ಬೇರೆ ಎಲ್ಲಾ ವಾದ್ಯಗಳಿಗಿಂತಲೂ ವೀಣೆ ವಾದಕನ ಮನಸ್ಸಿನ ಭಾವಗಳನ್ನು ಅತ್ಯಂತ ನವಿರಾಗಿ ಬಿಂಬಿಸುತ್ತದೆ ಎನಿಸುತ್ತದೆ.  ವೀಣೆ ಅಭ್ಯಾಸ ಮಾಡುವಾಗ ಮನಸ್ಸು ಪ್ರಶಾಂತವಾಗುತ್ತದೆ.  ತಂತಿಗಳ ಮೇಲೆ ಮೆಲ್ಲಗೆ ಬೆರಳಾಡಿಸಿದಾಗ ಝುಮ್ಮೆನ್ನುವ ನಾದ ನಮ್ಮ ನರನಾಡಿಗಳಲ್ಲೂ ಪ್ರವಹಿಸಲಾರಂಭಿಸುತ್ತದೆ.  ವಾದಕನ ಹೃದಯಕ್ಕೆ ಹತ್ತಿರವಾಗಿ ನಾದ ಮಿಡಿಯುವ ವೀಣೆ ಅತ್ಯಂತ ಆಪ್ತವಾಗುತ್ತದೆ.  ಅದೊಂದು ವಾದ್ಯವೆಂಬ ಅಂಶ ಮರೆತುಹೋಗಿ ಜೀವದ ಗೆಳತಿಯಾಗಿಬಿಡುತ್ತದೆ.  ನಮ್ಮ ಭಾವನೆಗಳನ್ನು ಅರಳಿಸ ತೊಡಗುತ್ತದೆ.  ಹೊರ ಹೊಮ್ಮುವ ನಾದ ನಮ್ಮೊಡನೆ ಮಾತನಾಡಾಲಾರಂಭಿಸುತ್ತದೆ.  ಎಡಕೈ ಬೆರಳುಗಳು ತಂತಿಯ ಮೇಲೆ ಸ್ವಲ್ಪವೇ ಒತ್ತಡದಿಂದ ಚಲಿಸಲಾರಂಭಿಸಿದೊಡನೇ ನಮ್ಮೊಳಗಿನ ಭಾವನೆಗಳ ಪ್ರಪಂಚ ಅನಾವರಣಗೊಳ್ಳುತ್ತಾ ಎಲ್ಲೆಲ್ಲೂ ನಾದವೇ ತುಂಬಿರುವ ಅನುಭವ ಕೊಡುತ್ತದೆ.  ನಡುನಡುವೆ ತಾಳದ ತಂತಿಗಳನ್ನು ಮೀಟುವಾಗ ಮಂದ್ರ ಹಾಗೂ ತಾರದಲ್ಲಿ ’ಸ’ ಮತ್ತು ಮಧ್ಯಮದಲ್ಲಿ ’ಪ’ ಮಿಶ್ರವಾಗಿ ಗೆಜ್ಜೆಯ ಘಲ್ ಘಲ್ ಶಬ್ದ ಕೇಳಿಸುವಂತಾಗುತ್ತದೆ.  ವೀಣೆಯ ಪುಟ್ಟ ಬುರುಡೆಯನ್ನು ವಾದಕ ತನ್ನ ಎಡ ತೊಡೆಯ ಮೇಲಿಟ್ಟುಕೊಂಡು ನುಡಿಸುವಾಗ, ಕಂಪನದಿಂದುಂಟಾಗುವ ನಾದ ನಮ್ಮ ಶರೀರದಲ್ಲೂ ದಿವ್ಯ ಕಂಪನದ ಅನುಭವ ಕೊಡುತ್ತದೆ.   ವಿಜಯಭಾಸ್ಕರ ಸಂಗೀತ ನೀಡಿರುವ, ಶ್ರೀಮತಿ ಬಿ ಕೆ ಸುಮಿತ್ರ ಅವರು ಹಾಡಿರುವ  ’ಕಲ್ಯಾಣಿ’ ಚಿತ್ರದ  "ವೀಣಾ.. ನಿನಗೇಕೋ ಈ ಕಂಪನ | ಮೃದುವಾಗಿ ನುಡಿ ಮುದವಾಗಿ ನುಡಿ | ರಾಗ ಸಂಮೋಹನ ||" ಹಾಡು ನುಡಿಸುವವರ ಮನದ ಭಾವನೆಗಳ ಜೊತೆ ಎಷ್ಟು ಸುಂದರವಾಗಿ ವೀಣೆಯ ತರಂಗಗಳು ಬೆಸೆದುಕೊಳ್ಳುತ್ತವೆನ್ನುವುದಕ್ಕೆ ಉತ್ತಮ ಉದಾಹರಣೆಯಾಗುತ್ತದೆ.  
http://www.raaga.com/play/?id=191059

ಒಮ್ಮೆ ಮೀಟಿದರೆ ಸಾಕು ನಾದಕ್ಕೆ ಮನಸೋಲುವಂತೆ ಮಾಡುವುದು ವೀಣೆ ಎಂಬ ಮಾತನ್ನು ಈ ಹಾಡಿನಲ್ಲಿ "ನಿನ್ನಯ ನಾದಕೆ ಮೈಮನ ಒಲಿಸಿ" ಎಂದೂ,  ಭಾವನೆಗಳ ಹೊಸ ಪ್ರಪಂಚದ ಅನಾವರಣವಾಗುತ್ತದೆ ಎಂಬ ಮಾತನ್ನು "ಭಾವತರಂಗದಿ ಲೋಕವ ಮರೆಸಿ" ಎಂದೂ ಹೇಳಿದ್ದಾರೆ.  ನಾದದೊಂದಿಗೆ ಮೈಮನ ತೇಲಿದಾಗಲೇ ನಡೆಯುವುದು ಸ್ವಚ್ಛ ಮನದಿಂದ ಭಗವಂತನ ಆರಾಧನೆ.

ಸರಸ್ವತಿ ದೇವಿಯನ್ನು ವೀಣಾಪಾಣಿ ವಿಶ್ವ ಕಲ್ಯಾಣಿ, ಗಾಯನ, ನರ್ತನ ನಂದ ಪ್ರದಾಯಿನಿ ಎನ್ನುತ್ತಾ,  ಅವಳದು ಎಂತಹ ಗಾಯನವೆಂದರೆ ಮೌನದ ಗಾಯನ, ಎಂತಹ ನರ್ತನವೆಂದರೆ ಕಾಣದ ನರ್ತನ, ಧ್ಯಾನದ ಕಿವಿ ಕಣ್ಗಳಿಗೆ ಅಮೃತದ ಸ್ವಾದನ ಎನ್ನುತ್ತಾರೆ ಡಿವಿಜಿಯವರು.  ಸಂಗೀತ ಶಾಸ್ತ್ರದಲ್ಲಿ ಬರುವ ಆಹತ ಅನಾಹತದ ನೆನಪು ಮಾಡಿಕೊಡುತ್ತದೆ - ಆಹತವೆಂದರೆ ಕೇಳಿಸಿಕೊಳ್ಳುವ ಶಬ್ದ, ಅನಾಹತವೆಂದರೆ ಕೇಳಲು ಸಾಧ್ಯವಿಲ್ಲದಂತಹ ಶಬ್ದ.  ಇಂತಹ ಮೌನದ ಗಾಯನ, ಕಾಣದ ನರ್ತನವನ್ನು ಸರಸ್ವತಿ ದೇವಿ ಪರಮಾತ್ಮ ಚನ್ನಕೇಶವ ಸ್ವಾಮಿಗೆ ಅರ್ಪಿಸುತ್ತಾಳೆ.  ಯಾರು ಸದಾ ಸರಸ್ವತಿ ದೇವಿಯ ಧ್ಯಾನದಲ್ಲಿ ಇರುವರೋ ಅವರಿಗೆ ಈ ಗಾಯನ ಮತ್ತು ನರ್ತನ ಅಮೃತದ ಸ್ವಾದನದಂತೆ ಇರುತ್ತದೆ ಎಂದು ಸುಂದರವಾಗಿ ವರ್ಣಿಸಿದ್ದಾರೆ ಡಿವಿಜಿಯವರು ತಮ್ಮ ಅಂತಃಪುರ ಗೀತೆ  ಸಂಕಲನದಲ್ಲಿರುವ "ವೀಣಾಪಾಣಿ ವಿಶ್ವ ಕಲ್ಯಾಣಿ ಗಾಯನ ನರ್ತನ ನಂದ ಪ್ರದಾಯಿನಿ".. ಎಂಬ ರಚನೆಯಲ್ಲಿ.  
ಶೃಂಗಾರ ರಸದ ಪ್ರಚೋದನೆಗೆ ಕೂಡ ವೀಣೆಯನ್ನು ಅತ್ಯಂತ ಸಮರ್ಥವಾಗಿ ಬಿಂಬಿಸಿದ್ದಾರೆ ಕವಿ ಶ್ರೀ ಸಾ ಶಿ ಮರುಳಯ್ಯ.  ಅವರು ತಮ್ಮ  "ಶ್ರುತಿ ಸುಖ್ಹ ನಿನದೆ ಕಲರವ ವರದೇ.... ಓ ಗೆಳತಿ.. ಘೋಷವತಿ... || ಎಂಬ ರಚನೆಯಲ್ಲಿ ಉದಯನ ನುಡಿಸುತ್ತಿದ್ದನೆನ್ನಲಾದ ಘೋಷವತಿ ಎಂಬ ವೀಣೆಯನ್ನು ಕುರಿತು ಪ್ರಸ್ತಾಪಿಸಿದ್ದಾರೆ.

ಉದಯನ ಹೃದಯ ಮೋದ ತರಂಗಿಣಿ | ವಾಸವದತ್ತಾ ಪ್ರಣಯ ಪ್ರಚೋದಿನಿ |


ಕುಂಜರ ಭಂಜನಿ ಕುಮುದ ನಿರಂಜನಿ | ಮಂಗಳ ಪತಗಳ ಮಧುರ ಸುಭಾಷಿಣಿ ||


ಚಿಗುರಿನ ಬೆರಳಲಿ ತಂತಿಯ ಮೀಟಲು | ಷಡಜದ ಸವಿದನಿ ಜಿನುಗಿಸುವೆ |


ಪಂಚಮದಂಚಿಗೆ ನಾದದ ಬ್ರಹ್ಮಕೆ | ವೀಣಾಮಣಿ ನೀ ಕುಣಿಯಿಸುವೆ ||


ಪ್ರದ್ಯೋತ್ತೋನ್ನತ ಪ್ರಥಮ ಪ್ರಭಾತಕೆ | ಧೃತಗತಿಯಲಿ ನೀ ಸಂಚಲಿಸಿ |


ರಾಗಿಣಿ ಭಾಮಿನಿ ಪ್ರೇಮೋನ್ಮಾದಿನಿ | ಮಧುಕರ ಮಿಲನಕೆ ನೆರವಾಗೇ ||  
ನುಡಿಸುವ ಉದಯನನ ಹೃದಯದ ತರಂಗಿಣಿ, ರಾಗಿಣಿ, ಭಾಮಿನಿ, ಪ್ರೇಮೋನ್ಮಾದಿನಿ ಎಂದೆಲ್ಲಾ ವರ್ಣಿಸುತ್ತಾ ಚಿಗುರಿನ ಬೆರಳುಗಳು ತಂತಿಯ ಮೀಟಿದಾಗ ಷಡ್ಜದ ಸವಿದನಿಯಿಂದ ಪಂಚಮದ ಪ್ರೇಮನಾದವನ್ನು ಹೊರಡಿಸುತ್ತಾ,  ಹೃದಯದಲ್ಲಿ ಸುಖದ ಕಲ್ಪನೆಯ ತರಂಗಗಳನ್ನು ಮೀಟಿ ಎಚ್ಚರಿಸುತ್ತಾ ಮಧುಕರ ಮಿಲನಕ್ಕೆ ನೆರವಾಗೇ ಎಂದು ನುಡಿದಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ 


ಆಧಾರ ಪುಸ್ತಕಗಳು : ಕರ್ನಾಟಕ ಸಂಗೀತದ ಪಠ್ಯ ಪುಸ್ತಕ  
"ವೀಣೆ" - ರಾಜಶ್ರೀ (ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಾಶನ)


2 comments:

  1. ವೀಣೆಯ ಬಗೆಗೆ ತುಂಬ ವಿವರವಾಗಿ ಬರೆದಿದ್ದೀರಿ. ಓದಿ ಮನಸ್ಸು ಅರಳಿತು. ಧನ್ಯವಾದಗಳು.

    ReplyDelete
  2. ಶ್ಯಾಮಲಾರವರೆ, ಸಂಗೀತ ವಾದ್ಯಗಳಲ್ಲಿ ಮುಖ್ಯವಾದ ತಂತಿವಾದ್ಯವಾದ 'ವೀಣೆ' ಯ ಬಗೆಗೆಇನ ವಿವರಣೆ, ವೇದೇತಿಹಾಸಕಾಲದ ವಿವರಣೆಗಳೊಂದಿಗೆ ಚೆನ್ನಾಗಿ ಮೇಳೈಸಿ ಬರೆದಿರುವಿರಿ. ಶಾರದೆ/ಸರಸ್ವತಿ ಎಂದಾಕ್ಷಣ ವೀಣೆ ಇಲ್ಲದಿರುವ ದೇವತೆಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ... ಅದಕ್ಕೇ ಇವಳೇ ವೀಣಾಪಾಣಿ, ವಾಣಿ... ಎಂಬ ಹಾಡೊಂದು ನೆನಪಾಯಿತು....

    ಧನ್ಯವಾದಗಳು...

    ReplyDelete