Saturday, September 27, 2014

ದಾಸಸಾಹಿತ್ಯದಲ್ಲಿ ದೇವಿ ಸರಸ್ವತಿ :

ಸರಳ, ಸುಲಭ ಹಾಗೂ ಕನ್ನಡ ಭಾಷೆಯಲ್ಲಿ ರಚಿತವಾದ ದಾಸಸಾಹಿತ್ಯ ಭಕ್ತ ಸಮುದಾಯಕ್ಕೆ ಲಭ್ಯವಾದ ಅತ್ಯಂತ ಒಳ್ಳೆಯ ಹಾಗೂ ಉತ್ಕೃಷ್ಟವಾದ ಸಾಹಿತ್ಯ.  ದಾಸಪರಂಪರೆಯಲ್ಲಿ ಬಂದ ಶ್ರೇಷ್ಠ ಮಾನವರು ತಾವು ಕಂಡ ಸತ್ಯವು ಪ್ರತಿ ಜೀವಿಗೂ ತಿಳಿಯಲಿ ಮತ್ತು ಪ್ರತಿಯೊಬ್ಬರೂ ಜೀವನದ ಉದ್ದೇಶವನ್ನು ಅರ್ಥಮಾಡಿಕೊಳ್ಳಲಿ ಎಂಬ ಕಳಕಳಿಯಿಂದ ಸಾಹಿತ್ಯ ಸೃಷ್ಟಿ ಮಾಡಿ, ಅದನ್ನು ತಾವೇ ಹಾಡುತ್ತಾ, ಕುಣಿಯುತ್ತಾ ಭಗವಂತನಿಗೆ ಸಮರ್ಪಿಸಿದರು.  ಜೊತೆಯಲ್ಲಿ ಬಂದ ತಮ್ಮ ಶಿಷ್ಯರಿಗೂ ಅದನ್ನು ಕಲಿಸಿಕೊಟ್ಟರು.  ಊರೂರು ಸುತ್ತುತ್ತಾ, ಊಂಛವೃತ್ತಿ ಮಾಡುತ್ತಾ ಆಧ್ಯಾತ್ಮದ ತಿರುಳನ್ನು ಹಂಚಿದರು.  ಜನಸಾಮಾನ್ಯರಿಗೆ ತಿಳಿಯದೇ ಇದ್ದ ಅನೇಕ ವಿಷಯಗಳನ್ನು ಸುಲಭವಾಗಿ ಹಾಡಿನ ಮೂಲಕ ಪ್ರಚಾರ ಮಾಡಿದರು.  ಹೇಗೆ ಬದುಕಬೇಕು, ಏನು ಮಾಡಬೇಕು, ಏನು ಮಾಡಬಾರದು ಎಂಬೆಲ್ಲಾ ಸಂಪ್ರದಾಯಗಳನ್ನೂ ಹಾಡಿನಲ್ಲಿಯೇ   ಅರ್ಥ ಮಾಡಿಸಿದರು.  ದಾಸಸಾಹಿತ್ಯದ ಪ್ರಾರಂಭವು ಶ್ರೀ ಶ್ರೀಪಾದರಾಜರ ಕೃತಿಗಳಿಂದ ಗುರುತಿಸಿಕೊಳ್ಳುತ್ತದೆ.  ದಾಸ ಪರಂಪರೆಯಲ್ಲಿ ಬಂದ ಪ್ರತಿಯೊಬ್ಬ ದಾಸರೂ ಸರಸ್ವತಿ ದೇವಿಯನ್ನು ಸ್ತುತಿ ಮಾಡಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. 

ಶ್ರೀ ವಾದಿರಾಜರು ಸರಸ್ವತಿಯನ್ನು ಕುರಿತು ಬರೆದಿರುವ ಒಂದು ಕೃತಿ "ವಾಣಿ ಪರಮಕಲ್ಯಾಣಿ ನಮೋ ನಮೋ | ಅಜನ ರಾಣಿ ಪಂಕಜರಾಣಿ " ಎಂಬುದರಲ್ಲಿ ಸರಸ್ವತಿ ದೇವಿಯನ್ನು ಅಂಬೆ , ಸ್ಮರಣೆ ಮಾತ್ರವೇ ಸಾಕು ಭಕ್ತರ ಕಾಯ್ವೆ, ಶಾರದಾಂಬೆ, ಪುತ್ಥಳಿಬೊಂಬೆ, ವಾಗ್ದೇವಿ, ಹರಿಣಾಕ್ಷಿ ಎಂದು ಸ್ತುತಿಸಿದ್ದಾರೆ.

ಪುರಂದರ ದಾಸರು "ಒಂದೆ ಮನದಲಿ ಭಜಿಸು ವಾಗ್ದೇವಿಯ | ಇಂದು ಮತಿಕೊಡುವಳು ಶ್ರೀಹರಿಯ ಧ್ಯಾನದೊಳು " ಎಂಬ ಕೃತಿಯಲ್ಲಿ  ಪುರಾಣ ಕಥೆಗಳ ಉಲ್ಲೇಖ ಮಾಡಿದ್ದಾರೆ.  ಮೊದಲನೆಯ ಚರಣದಲ್ಲಿ ಪ್ರಹ್ಲಾದನ ಕಥೆಯನ್ನು ಹೇಳಿದ್ದಾರೆ.  ಪ್ರಹ್ಲಾದನು ಕಮಲಜನ (ಬ್ರಹ್ಮನ) ರಾಣಿಯಾದ ನಿನ್ನನ್ನು ವಂದಿಸಿ ಹರಿ ವಿಶ್ವಮಯನೆಂದು ಹೋರಾಟ ಪ್ರಾರಂಭಿಸಿದ.    ಪುಟ್ಟ ಬಾಲಕನಾದ ಪ್ರಹ್ಲಾದನ ಕ್ಲೇಶ, ವಿಪ್ಲವಗಳನ್ನೆಲ್ಲಾ ಕಳೆದು, ಭಾವಶುದ್ಧಿಯನ್ನು ಪ್ರಸಾದಿಸಿ, ಶ್ರೀಹರಿಯ ಚರಣಗಳನ್ನು ಹೊಂದಿಸಿದೆ ಎಂದು ಸ್ತುತಿಸಿದ್ದಾರೆ.  ಎರಡನೆಯ ಚರಣದಲ್ಲಿ ರಾಮಾಯಣದ ಕಥೆ ಹೇಳುತ್ತಾರೆ.   ದಶಮುಖನಾದ ರಾವಣನ ಅನುಜ ವಾಣಿಯಾದ ನಿನ್ನನ್ನು ವಂದಿಸದೇ ತಪಸ್ಸು ಮಾಡಿದ.   ತಪಸ್ಸು ಫಲಿಸಿ, ವರ ಬೇಡುವ ಸಮಯದಲ್ಲಿ ಅವನ ನಾಲಿಗೆಯಲ್ಲಿ ನೆಲೆಸಿ, ನಿದ್ರೆಯನ್ನು ಬೇಡುವಂತೆ ಮಾಡಿದೆ.  ಮುಂದೆ ಶ್ರೀರಾಮಚಂದ್ರ ಮತ್ತು ದಶಮುಖನ ಯುದ್ಧದಲ್ಲಿ ’ಕುಂಭಕರ್ಣ’ನೆಂದೇ ಕರೆಯಲ್ಪಟ್ಟ ರಾವಣನ ಅನುಜನ ಶಕ್ತಿ ಅವನು ಬೇಡಿದ್ದ ನಿದ್ರೆಯ ವರದಿಂದ ಕುಗ್ಗುವಂತೆ ಮಾಡಿದೆ ಎಂದು ಸರಸ್ವತಿ ದೇವಿಯ ಮಹಿಮೆಯನ್ನು ಸ್ತುತಿಸಿದ್ದಾರೆ.  ಮೂರನೆಯ ಚರಣದಲ್ಲಿ ಅಜನ ಪಟ್ಟದರಾಣಿಯಾದ ನಿನ್ನನ್ನು ನಿರಂತರ ಬಿಡದೇ ಭಜಿಸಿದರೆ ಸದಾ ಉರುತರವಾದ ವಾಕ್ ಶುದ್ಧಿಯನ್ನು ಕೊಡುವೆ ಮತ್ತು ಭಗವಂತನ ಸೇವೆಯನ್ನು ಕೊಟ್ಟು ಪರತತ್ತ್ವದ ಜ್ಞಾನವನ್ನು ಅರುಹುವೆಯೆಂದು ಸ್ತುತಿಸಿದ್ದಾರೆ.
"ಕೊಡು ಬೇಗ ದಿವ್ಯಮತಿ - ಸರಸ್ವತಿ" ಎಂಬ ಕೃತಿಯಲ್ಲಿ ಅಖಿಳ ವಿದ್ಯೆಗಳಿಗೆ ಅಭಿಮಾನಿಯಾದ, ಇಂದಿರಾರಮಣನ ಹಿರಿಯ ಸೊಸೆಯೇ ಸಕಲ ಸುಖವಿತ್ತು ಪಾಲಿಸು ಎಂದು ಪ್ರಾರ್ಥಿಸಿದ್ದಾರೆ.
"ನಲಿದಾಡೆ ಎನ್ನ ನಾಲಿಗೆ ಮೇಲೆ - ಸರಸ್ವತಿ ದೇವಿ | ಕುಣಿದಾಡೆ ಎನ್ನ ನಾಲಿಗೆ ಮೇಲೆ" ಎಂಬ ಕೃತಿಯಲ್ಲಿ ಇಳೆಯೊಳಗೆಲ್ಲ ಅಪ್ರತಿಮ ಗುಣವುಳ್ಳವಳೇ, ಎನ್ನ ನಾಲಿಗೆಯ ಮೇಲೆ ನೆಲೆಸಿ, ನನ್ನಿಂದ ಒಳ್ಳೆಯ ಮಾತುಗಳನ್ನಾಡಿಸಿ, ಸುಜ್ಞಾನ ಕೊಟ್ಟು ಕಾಪಾಡು ಎಂದಿದ್ದಾರೆ.  ದೇವಿಯನ್ನು ಸರ್ವಾಲಂಕಾರ ಭೂಷಿತೆಯಾಗಿ ವರ್ಣಿಸಿದ್ದಾರೆ. 
"ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ"  - ವಾಗಭಿಮಾನಿ, ವರಬ್ರಹ್ಮಾಣಿ, ಸುಂದರವೇಣೀ, ಸುಚರಿತ್ರಾಣಿ ಎಂದೆಲ್ಲಾ ವಿಧ ವಿಧವಾಗಿ ಹೊಗಳಿದ್ದಾರೆ.
"ಪಾಲಿಸೆಮ್ಮ ಮುದ್ದು ಶಾರದೆ - ಎನ್ನ - ನಾಲಿಗೆಯಲಿ ನಿಲ್ಲಬಾರದೆ" ಎಂಬ ಕೃತಿಯಲ್ಲಿ ಸರಸ್ವತಿದೇವಿಯನ್ನು ಶಾರದೆ ಎಂದು ಸ್ತುತಿಸಿದ್ದಾರೆ.  ಅಕ್ಷರಕ್ಷರದ ವಿವೇಕವನ್ನು ಪ್ರಸಾದಿಸು, ಸಾಕ್ಷಾದ್ರೂಪದಿಂದ ಒಲಿದು ರಕ್ಷಿಸು ತಾಯೆ ಎನ್ನುತ್ತಾ ಶೃಂಗಾರಪುರದಲ್ಲಿ ನೆಲೆಸಿರುವವಳು, ಸಂಗೀತ ಗಾನ ವಿಲಾಸಿನಿ, ಬ್ರಹ್ಮನರಾಣಿ ನಿನ್ನನ್ನೇ ನಿರುತವೂ ನಂಬಿರುವೆ, ಪೊರೆದು ಪಾಲಿಸು ಎಂದು ಪ್ರಾರ್ಥಿಸಿದ್ದಾರೆ.

ಕನಕದಾಸರು ತಮ್ಮ "ವರವ ಕೊಡು ಎನಗೆ ವಾಗ್ದೇವಿ - ನಿಮ್ಮ ಚರಣ ಕಮಲಂಗಳ ದಯಮಾಡು ದೇವಿ" ಎಂಬ ಕೃತಿಯಲ್ಲಿ ಅವಿರಳ ಪುರಿಯಲ್ಲಿ ನೆಲೆಸಿರುವ ಕಾಗಿನೆಲೆಯಾದಿಕೇಶವನ ಸುತನಿಗೆ ಸನ್ನುತ ರಾಣಿವಾಸೆ ಎನ್ನುತ್ತಾ ವಾಗ್ದೇವಿಯ ವರ್ಣನೆಯನ್ನು ಓದುವ, ಕೇಳುವ ಎಲ್ಲರಿಗೂ ಮನದಲ್ಲಿ ಮೂಡುವಂತೆ ಸ್ತುತಿಸಿದ್ದಾರೆ.  ಇದು ಕನಕದಾಸರು ಶೃಂಗೇರಿಗೆ ಹೋದಾಗ ರಚಿತವಾದ ಕೃತಿಯೆಂಬ ಮಾತಿದೆ.   ದೇವಿಯ ವರ್ಣನೆ ಮಾಡಲು ಮುದಕೊಡುವಂತಹ ಹಾಗೂ ಅಪರೂಪದ ಪದಪುಂಜಗಳನ್ನು ದಾಸರಾಯರು ಬಳಸಿದ್ದಾರೆ.  "ಜೊಂಪು ಮದನನ ಪೂರ್ಣ ಶಕ್ತಿ ಬೊಂಬೆ - ಒಳ್ಳೆ ಸಂಪಿಗೆ ಮುಡಿಗಿಟ್ಟು ರಾಜಿಪ ಶಾರದಾಂಬೆ" ಎಂದು ವರ್ಣಿಸಿದ್ದಾರೆ.  ಇಲ್ಲಿ ಜೊಂಪು ಮದನನ ಪೂರ್ಣ ಶಕ್ತಿಬೊಂಬೆಯೆಂದರೆ ನೋಡಿದವರಿಗೆ ಮತ್ತೇರಿಸುವ ಸುಂದರ ಮನ್ಮಥನ ಸಂಮೋಹನ ಶಕ್ತಿಯ ಪೂರ್ಣರೂಪದ ಬೊಂಬೆಯಂತಿರುವ, ಘಮಘಮಿಸುವ ಸಂಪಿಗೆಯನ್ನು ಮುಡಿಗಿಟ್ಟಿರುವ ಶಾರದಾಂಬೆ ನೀನು ತೇಜಪ್ರಕಾಶೆ ಹಾಗೂ ಮಹಾಕವಿ ಜನರ ಹೃತ್ಕಮಲದಲ್ಲಿ ವಾಸಿಸುವವಳು ಎಂದು ಸ್ತುತಿಸಿದ್ದಾರೆ.

ಕಾಖಂಡಕಿ ಶ್ರೀ ಮಹಿಪತಿದಾಸರು ತಮ್ಮ ಕೃತಿ "ಜಯ ಜಯ ಸ್ವರಸತಿ ಜಯವರ ಪೂರಣಮತಿ | ತ್ರಯಲೋಕ್ಯದಲಿ ಖ್ಯಾತಿ ಜಯ ಸುಕೀರ್ತಿ" ಯಲ್ಲಿ ಸರಸ್ವತಿದೇವಿಯನ್ನು ವಿದ್ಯಾವರದಾಯಿನಿ, ಸಿದ್ಧಿಗೆ ಶಿಖಾಮಣಿ, ಬುದ್ಧಿ ಪ್ರಕಾಶಿನಿ, ಸದ್ಭೂಷಿಣಿ ಎಂದು ವರ್ಣಿಸುತ್ತಾ ಸದಾಕಾಲವೂ ಸದ್ಗುರು ಸ್ತುತಿ ಒದುಗುವ ಹಾಗೆ ಸ್ಫೂರ್ತಿ ಕೊಡು, ವರವಿದ್ಯದಲಿ ದಾನಿಯಾದ ನೀನು ಸುಪ್ರವೀಣೆ ನಿನಗೆ ಜಯ ಜಯ ಎಂದು ಹಾಡಿದ್ದಾರೆ.

ಗಲಗಲಿ ಅವ್ವನವರೆಂದೇ ಪ್ರಸಿದ್ಧಿಯಾದ, ಹರಿದಾಸಿ ಶ್ರೀಮತಿ ರಮಾ ಅವರು ತಮ್ಮ "ಪಾಲಿಸೆ ಸರಸ್ವತಿ ಪಾಲಿಸೆ | ಪಾಲಿಸೆ ನಿನ್ನಯ ಪಾರಿಗೆ ಬಂದೆನು | ಕಾಲಕಾಲಕೆ ನಿನ್ನಯ ಕಾಲಿಗೆರಗುವೆ ಪಾಲಿಸೆ" ಎಂಬ ಕೃತಿಯಲ್ಲಿ ಆದಿ ಬ್ರಹ್ಮನರಾಣಿಯೆ ವೇದಕ್ಕಭಿಮಾನಿಯೆ, ಮೋದ ಗಾಯನ ಕುಶಲಳೆ ದಯಮಾಡಿ ಮತಿಯ ಕೊಡು  ಎಂದು ಬೇಡುತ್ತಾರೆ.  ಕೃತಿಯನ್ನು ಮುಂದುವರೆಸುತ್ತಾ ಅವ್ವನವರು ಸರಸ್ವತಿ ದೇವಿಯನ್ನು ತುಂಬಾ ಆತ್ಮೀಯವಾದ ಸಂಬೋಧನೆಗಳಿಂದ, ನಮಗೆ ತುಂಬಾ ಹತ್ತಿರವಾದ ಒಬ್ಬ ಸ್ತ್ರೀಯ ಪಾತ್ರವೆಂಬಂತೆ ಚಿತ್ರಿಸುತ್ತಾರೆ.  ಸರಳವಾದ ಭಾವದಿಂದ ಅಕ್ಕರೆಯಿಂದ ಅಂತರಂಗದ ಗೆಳತಿಯನ್ನೋ, ಒಡಹುಟ್ಟಿದ ಸಹೋದರಿಯನ್ನೋ ಕರೆಯುವಂತೆ ರಾಮೇಶನರಮನೆಗೆ ಬಾರೆಂದು ಆಹ್ವಾನಿಸುತ್ತಾರೆ.   ಸರಸ್ವತಿ ದೇವಿಯನ್ನು ಖನಿ, ಮಿತ್ರಿ, ಹರದಿ (ಮುತ್ತೈದೆ)  ಗುಜ್ಜಿ (ಗಿಡ್ಡಿ, ಕುಬ್ಜ ಕನ್ಯೆ) ಎನ್ನುತ್ತಾ ಹೊನ್ನವರೆಯಾದ ಹೆರಳನ್ನು ಬಲಗೈಯಲ್ಲಿ ಹಿಡಿದುಕೊಂಡು ಮುತ್ತಿನ ಉಡಿಯಕ್ಕಿ, ಮಲ್ಲಿಗೆಯ ದಂಡು ಸ್ವೀಕರಿಸಲು ಗೆಜ್ಜೆಯ ಸರಪಳಿಯನ್ನು ಧರಿಸಿ, ಜರಿಯ ಸೀರೆಯನುಟ್ಟು ಘಲ್ ಘಲ್ ಎನ್ನುತ್ತಾ ಸಭೆಯೊಳಗೆ ಪ್ರತ್ಯಕ್ಷಳಾಗು ಎಂದು ಪ್ರಾರ್ಥಿಸುತ್ತಾರೆ.  ಅವ್ವನವರ ಕಾವ್ಯ ಓದುಗರ ಮನದ ಕದವನ್ನು ತಟ್ಟಿ ತೆರೆದು ಅಕ್ಕರೆಯ ಸಿಂಚನವನ್ನು ಮಾಡಿಸುತ್ತದೆ.  ಸರಸ್ವತಿ ದೇವಿಯನ್ನು ಪ್ರತ್ಯಕ್ಷವಾಗಿ ಕಂಡ ನವಿರಾದ ಅನುಭೂತಿಯನ್ನು ಹುಟ್ಟಿಸುತ್ತದೆ.   ಆಹ್ವಾನಿತಳಾದ ದೇವಿಯ ಭಾವದಲ್ಲಿ ಮನಸ್ಸು ಲೀನವಾಗುವಂತೆ ಮಾಡುತ್ತದೆ. ಚಿತ್ರಕೃಪೆ : ಅಂತರ್ಜಾಲ

4 comments:

 1. Thanks for tha beautiful narration.

  ReplyDelete
 2. Vagdevi Saraswatiyannu kuritu "Dasavarenyara" unnata krutigala parichayavannu maadisuttaa, "Hari dasi" yara aparoopada krutigalannu kooda prastutisida nimage Anantha Dhanyavadagalu Shyamala avare...:)

  ReplyDelete
 3. Earn from Ur Website or Blog thr PayOffers.in!

  Hello,

  Nice to e-meet you. A very warm greetings from PayOffers Publisher Team.

  I am Sanaya Publisher Development Manager @ PayOffers Publisher Team.

  I would like to introduce you and invite you to our platform, PayOffers.in which is one of the fastest growing Indian Publisher Network.

  If you're looking for an excellent way to convert your Website / Blog visitors into revenue-generating customers, join the PayOffers.in Publisher Network today!


  Why to join in PayOffers.in Indian Publisher Network?

  * Highest payout Indian Lead, Sale, CPA, CPS, CPI Offers.
  * Only Publisher Network pays Weekly to Publishers.
  * Weekly payments trough Direct Bank Deposit,Paypal.com & Checks.
  * Referral payouts.
  * Best chance to make extra money from your website.

  Join PayOffers.in and earn extra money from your Website / Blog

  http://www.payoffers.in/affiliate_regi.aspx

  If you have any questions in your mind please let us know and you can connect us on the mentioned email ID info@payoffers.in

  I’m looking forward to helping you generate record-breaking profits!

  Thanks for your time, hope to hear from you soon,
  The team at PayOffers.in

  ReplyDelete