ಮೊದಲು ಓದೇ ಇರಲಿಲ್ಲವೇನೋ ಎಂಬಂತೆ ಒಂದೇ ಉಸಿರಿಗೆ ಓದಿಸಿಕೊಂಡು ಹೋಗಿದ್ದು ತ್ರಿವೇಣಿಯವರ ಕಾದಂಬರಿ .."ಶರಪಂಜರ". ಭಾವನೆಗಳ ಏರು-ಪೇರು, ತಿಕ್ಕಾಟ-ತಿಣುಕಾಟಗಳು.... ಒಮ್ಮೆ ಕರುಣೆ-ಕನಿಕರ, ಒಮ್ಮೊಮ್ಮೆ ಸಿಟ್ಟು-ಅಸಹ್ಯ, ಮೊತ್ತೊಮ್ಮೆ ಅಸಹಾಯಕತೆ.... ನಮ್ಮ ಮನಸ್ಸೂ ಪುಸ್ತಕದ ಉದ್ದಕ್ಕೂ ಭಾವಾವೇಶಕ್ಕೊಳಗಾಗುತ್ತಲೇ ಇರುತ್ತದೆ. ಕರುಳು ಕತ್ತರಿಸುವಂತೆ ಅಳುತ್ತಾ, ಚೀರುತ್ತಾ, ಬದುಕಲು ಒಂದೇ ಒಂದು ಅವಕಾಶ ಬೇಕೆಂದು ಅಂಗಲಾಚುವ ಕಾವೇರಿ ನಮ್ಮನ್ನು ಕಾಡಿ ಬಿಡುತ್ತಾಳೆ. ಭೂತಕಾಲವನ್ನು ಮರೆತು ಬದುಕಲು ಪ್ರಯತ್ನಿಸುವ ಕಾವೇರಿಗೆ ತನ್ನ ಸಂಸಾರ ಮತ್ತು ಸಮಾಜದಿಂದ ಕೊಂಚವೇ ಕೊಂಚ ಕರುಣೆ-ಪ್ರೀತಿ ಸಿಕ್ಕಿದ್ದರೆ, ಜೀವನದ ನದಿಯಲ್ಲಿ ಬಾಳ ನೌಕೆ ತೇಲ ಬಹುದಾಗಿತ್ತು.... ಆದರೆ ಅಂತ್ಯ ಹಾಗಾಗುವುದಿಲ್ಲ...
ಇದನ್ನೊಂದು ಕಥೆ ಎನ್ನುವುದಕ್ಕಿಂತ ನಮ್ಮ ನಡುವೆ ನಡೆದಿರಬಹುದಾದ ಒಂದ ಸತ್ಯ ಘಟನೆ ಎನ್ನಬಹುದೇನೋ..... ಯಾವುದೇ ಕಾರಣಕ್ಕೇ ಆಗಲಿ ಯಾರಿಗಾದರೂ ಮನೋವಿಕಲ್ಪವಾಗಿದ್ದರೆ, ಅವರು ಸುಧಾರಿಸಿದ ನಂತರವೂ ನಮ್ಮ ಸಮಾಜ (ಅಥವಾ ನಾವು) ನೆಮ್ಮದಿಯ ಜೀವನ ಸಾಗಿಸಲು ಬಿಡೋಲ್ಲ. ಈ ಕಥೆ ಎಲ್ಲಾ ಕಾಲಕ್ಕೂ ಸಲ್ಲುವಂತಹುದು.
ತ್ರಿವೇಣಿಯವರು ಮನೋವಿಕಲ್ಪಕ್ಕೆ ಸಂಬಂಧ ಪಟ್ಟ ಕಥೆಗಳನ್ನು ಅತ್ಯಂತ ಶ್ಲಾಘನೀಯ ರೀತಿಯಲ್ಲಿ ಬರೆದಿದ್ದಾರೆ. ಎಲ್ಲೂ ಅತಿ ಎನ್ನಿಸಿಕೊಳ್ಳದೆ ಸಾಗುವ ಕಥೆ ನಮ್ಮನ್ನು ಸುಳಿಯೊಳಗೆ ಪೂರ್ಣವಾಗಿ ಸೆಳೆದುಕೊಂಡು ಬಿಡತ್ತೆ. ಪುಸ್ತಕ ಓದಿಯಾದ ಮೇಲೂ ಎಷ್ಟೋ ಹೊತ್ತು ನಾವು ಆ ಕಥೆಯಲ್ಲೇ ಜೀವಿಸುತ್ತಿರುತ್ತೇವೆ. ಕೆಲವೊಮ್ಮೆ "ಶರಪಂಜರ" ದಂತಹ ಕಾದಂಬರಿಗಳು ಮರೆಯಲು ಅಸಾಧ್ಯವೇ ಆಗಿಬಿಡುತ್ತದೆ. ಈ ಕಥೆ ಅದರಲ್ಲೂ ನಮಗೆ ದಿವಂಗತ ಕಲ್ಪನಾರ ಅದ್ಭುತ ನಟನೆಯಿಂದಾಗಿ, ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದೆ. ಈ ಪುಸ್ತಕಕ್ಕೆ ಮತ್ತು ಕಲ್ಪನಾರ ಅಭಿನಯಕ್ಕೆ, ಎರಡಕ್ಕೂ ಅವೇ ಸಾಟಿ - ಬೇರೆ ಹೋಲಿಕೆಯೇ ಇಲ್ಲ....
ನನಗೆ ಈ ಕಥೆ ಹಾಗೂ ಚಿತ್ರದ ಜೊತೆ ಇನ್ನೊಂದು ಹಿಂದಿ ಸಿನೆಮಾ ಕೂಡ ನೆನಪಾಗುತ್ತಿದೆ. "ಬಸೇರಾ" ಅಂತ... ರಾಖಿ ಹಾಗೂ ರೇಖಾ ಇಬ್ಬರೂ ನಟಿಸಿದ್ದರು. ತಂಗಿ ರೇಖಾಳ ಮದುವೆಯಾದ ತಕ್ಷಣವೇ ಅವಳ ಪತಿಯ ಮರಣವಾದದ್ದು ಕೇಳಿ, ಅಕ್ಕ ರಾಖಿಯ ಬುದ್ಧಿ ಸ್ಥಿಮಿತ ತಪ್ಪಿ ಹೋಗುತ್ತದೆ. ಸುಮಾರು ೧೨ ವರ್ಷಗಳ ನಂತರ ಅವಳು ಆಸ್ಪತ್ರೆಯಿಂದ ಮನೆಗೆ ಬರುವಷ್ಟರಲ್ಲಿ, ರೇಖಾಳ ಮದುವೆ ತನ್ನ ಪತಿಯ ಜೊತೆಗೇ ಆಗಿ, ಒಂದು ಮಗುವೂ ಇರುತ್ತದೆ. ಅದು ಅವಳಿಗೆ ಗೊತ್ತಾದಾಗ, ಪತಿಗೆ ಇನ್ನು ತನ್ನ ಅವಶ್ಯಕತೆಯಿಲ್ಲವೆಂದು ಅರಿತುಕೊಂಡು, ಮತ್ತೊಮ್ಮೆ ಹುಚ್ಚಿಯಾಗಿ ಬಿಡುತ್ತಾಳೆ (ಹುಚ್ಚಿಯಂತೆ ನಟಿಸುತ್ತಾಳೆ). ಆಸ್ಪತ್ರೆಗೆ ವಾಪಸ್ಸು ಹೋಗಿ ಬಿಡುತ್ತಾಳೆ. ತನ್ನ ಮಗನಿಗೆ ನಿಷ್ಕರ್ಷೆಯಾಗಿದ್ದ ಹುಡುಗಿಗೆ ಮಾತ್ರ ಈ ಸತ್ಯ ತಿಳಿಯುತ್ತದೆ ಅಥವಾ ನಿಜ ಏನೆಂದು ತಿಳಿದುಕೊಳ್ಳುವ ಅವಶ್ಯಕತೆಯಾಗಲೀ ಅಥವಾ ತಾಳ್ಮೆಯಾಗಲೀ ಕುಟುಂಬದ ಬೇರೆಯವರಿಗೆ ಇರುವುದಿಲ್ಲ.... ಮುಂದೆಂದೂ ರಾಖಿ ತನ್ನ ಕುಟುಂಬದವರನ್ನು ಭೇಟಿ ಮಾಡುವುದೇ ಇಲ್ಲ. ಆಸ್ಪತ್ರೆಯಲ್ಲೇ ರೋಗಿಗಳ ಸೇವೆ ಮಾಡುತ್ತಾ ಇದ್ದು ಬಿಡುತ್ತಾಳೆ. ಇದರಲ್ಲಿ ಎಲ್ಲರ ಅಭಿನಯವೂ ತುಂಬಾ ಚೆನ್ನಾಗಿತ್ತು. ಅದರಲ್ಲೂ ರಾಖಿಯನ್ನು ಮರೆಯುವುದಸಾಧ್ಯವೇ ಆಗಿ ಬಿಡುತ್ತೆ... ಒಂದು ಹಾಡು... ’ಜಹಾ ಭಿ ಸವೇರಾ ಹೈ... ವಹೀ ತೋ ಬಸೇರಾ ಹೈ...’ ಮನದಲ್ಲಿ ಅನುರಣಿಸುತ್ತಲೇ ಇರತ್ತೆ.... ಭಾವನೆಗಳ ತೀವ್ರವನ್ನು ತುಂಬಾ ಸುಂದರವಾಗಿ ಚಿತ್ರಿಸಲ್ಪಟ್ಟಿದೆ. ಎಲ್ಲವನ್ನೂ ಕಳೆದುಕೊಂಡು, ನೋವಿನಲ್ಲಿ ತುಡಿಯುವ ಪಾತ್ರಗಳು ನಮ್ಮ ಮನದಾಳದಲ್ಲಿ ಬೇರು ಬಿಡುತ್ತವೆ.
ತ್ರಿವೇಣಿಯವರ ಕಾದಂಬರಿ ನಾನು ಓದಿಲ್ಲ
ReplyDeleteಆದರೆ ಅದರ ಬಗೆಗೆ ಚುಟುಕಾಗಿ ತಿಳಿಸಿದ್ದಿರಿ
ಖಂಡಿತ ತೆಗೆದುಕೊಂಡು ಓದುತ್ತೇನೆ
ತಿಳಿಸಿದ್ದಕ್ಕೆ ಧನ್ಯವಾದಗಳು
ಡಾ.ಗುರು ಸಾರ್..
ReplyDeleteತ್ರಿವೇಣಿಯವರ ಒಂದು ಪುಸ್ತಕ ಓದಿದರೆ, ಎಲ್ಲವನ್ನೂ ಒಂದೊಂದಾಗಿ ಓದಲು ತೊಡಗುತ್ತೇವೆ... ನನಗೀಗ ಹಾಗೇ ಆಗಿದೆ. ಹೊಸ ಪ್ರಿಂಟ್ ಬಂದಿದೆ ಎಂದು ಲೈಬ್ರರಿಯಲ್ಲಿ ನನಗೆ ತೋರಿಸಿದ್ದೇ... ನಾನು ಎಲ್ಲವನ್ನೂ ಓದ ತೊಡಗಿದ್ದೇನೆ. ಹಾಗಾಗಿ ನಾನಲ್ಲಿರುವುದನ್ನೆಲ್ಲಾ ಓದಿ ಮುಗಿಸುವ ತನಕ ನಿಮಗೆ ಬರೀ ತ್ರಿವೇಣಿಯವರ ಪುಸ್ತಕಗಳ ಪರಿಚಯವೇ ಆಗುತ್ತೇನೋ.. :-) ಧನ್ಯವಾದಗಳು....
ಶರಪಂಜರ ನಾನು ಮೊದಲು ಸನಿಮಾ ನೋಡಿದ್ದೆ. ಅದೂ ಎಂಟನೇ ಕ್ಲಾಸಿನಲ್ಲಿದ್ದಾಗ! ನಂತರ ಮಯೂರದಲ್ಲಿ ಧಾರಾವಾಹಿಯಾಗಿ ಬಂದಾಗ ಅದನ್ನು ಓದಿದ್ದೆ. ನನ್ನ ಲೈಬ್ರರಿ ಸಂಗ್ರಹಕ್ಕೆ ಅದು ಬಂದ ಮೇಲೆ ಒಂದೇ ಸಿಟ್ಟಿಂಗಿನಲ್ಲಿ ಓದಿ ಮುಗಿಸಿದೆ. ಕನ್ನಡದಲ್ಲಿ ಬಂದಿರುವ ಮನೋವಿಜ್ಞಾನಕ್ಕೆ ಸಂಬಂಧಪಟ್ಟ ಅತ್ಯುತ್ತಮ ಕಾದಂಬರಿಗಳಲ್ಲಿ ಅದೂ ಒಂದು ಎಂದು ನನ್ನ ಅಭಿಪ್ರಾಯ. ಮಹಿಳಾ ಸಾಹಿತಿಗಳು ಅಂದರೆ ಅಡುಗೆ ಮನೆ ಸಾಹಿತ್ಯ ಮಾತ್ರ ಬರೆಯುವವರು ಎನ್ನುತ್ತಿದ್ದ ಕಾಲದಲ್ಲಿ ಯಾವ ಪುರುಷರಿಗೂ ಕಡಿಮೆಯಿಲ್ಲದ ಈ ಬಗೆಯ ಮನೋವಿಜ್ಞಾನ ಸಂಬಂಧಿ ಕಾದಂಬರಿಗಳನ್ನು ತ್ರಿವೇಣಿ ಬರೆದಿರುವುದೇ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಮೈಲಿಗಲ್ಲು.
ReplyDeleteಮತ್ತೊಮ್ಮೆ ಅದರ ನೆನಪು ಮಾಡಿಕೊಟ್ಟಿತು ನಿಮ್ಮ ಈ ಪುಸ್ತಕ ಪರಿಚಯ, ಧನ್ಯವಾದಗಳು
ಶರಪಂಜರ ಚಿತ್ರ ಮೊನ್ನೆ ಮೊನ್ನೆ ತಾನೇ ಮತ್ತೆ ನೋಡಿದೆ. ಪುಸ್ತಕವನ್ನು ಎಷ್ಟೋ ಸಲ ಓದಿರುವೆ - ಬಹಳ ವರ್ಷಗಳ ಹಿಂದೆ.
ReplyDeleteತ್ರಿವೇಣಿ ತಮ್ಮ ಕಾಲಕ್ಕಿಂತ ತುಂಬಾ ಮುಂದಿದ್ದುಬಿಟ್ಟಿದ್ದರು!
ಡಾ.ಸತ್ಯ ಸಾರ್...
ReplyDeleteನಾನೂ ಸಿನಿಮಾ ಮೊದಲು ನೋಡಿ ಆಮೇಲೆ ಪುಸ್ತಕ ಓದಿದ್ದೆ... ಪಾತ್ರಗಳ ಹಾಗೂ ಕಥೆಯ ಆಳ ಆಗಿಗಿಂತ ಈಗ ಓದಿದಾಗ ಹೆಚ್ಚು ಪರಿಣಾಮ- ಕಾರಿಯಾಗಿತ್ತು. ಹೌದು ತ್ರಿವೇಣಿಯವರ ಕಾದಂಬರಿಗಳು ಒಂದು ಹೊಸ ಅಲೆಯನ್ನೇ ಹುಟ್ಟು ಹಾಕಿದ್ದವು. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಹಂಸಾನಂದಿ ಸಾರ್...
ReplyDeleteತ್ರಿವೇಣಿಯವರ ಸಾಹಿತ್ಯ ಹಾಗೂ ಅವರ ಶೈಲಿ ನಮ್ಮನ್ನು ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸುವಷ್ಟು ಪರಿಣಾಮಕಾರಿಯಾಗಿರುತ್ತದೆ. ಹೌದು ಅವರು ತಮ್ಮ ಕಾಲಕ್ಕಿಂತ ತುಂಬಾ ಮುಂದೆ ಯೋಚಿಸುತ್ತಿದ್ದರು. ನಾವು ನಿಜವಾಗಲೂ ದುರಾದೃಷ್ಟವಂತರು, ಅವರು ನಮ್ಮನ್ನು ಬಹುಬೇಗ ಅಗಲಿದರು.... ಧನ್ಯವಾದಗಳು....
ಶ್ಯಾಮಲಾ ಅವರೆ, ಪುಸ್ತಕ ಪರಿಚಯ ಓದಿದೆ. ಸರಳವಾಗಿ ನಿರೂಪಿಸಿದ್ದೀರಿ. ತ್ರಿವೇಣಿಯವರ ಕಾದಂಬರಿ/ಗಳನ್ನು ನಾನು ಓದಿರುವುದಿಲ್ಲ. ನಿಮ್ಮ ಪುಸ್ತಕ ಪರಿಚಯ ಓದಿದ ಮೇಲೆ 'ಓದಬೇಕು' ಅನಿಸಿತು. ಸಾಮಾಜಿಕ ಬದುಕಿನ ಒಳತೋಟಿಗಳಲ್ಲಿಯೇ ಅವರ ಕಾದಂಬರಿಗಳು ಇರಬೇಕು ಎನಿಸಿದೆ.
ReplyDeleteಧನ್ಯವಾದಗಳು.
ಹೌದು ಚಂದ್ರು ಅವರೇ...
ReplyDeleteಎಲ್ಲಾ ಸಾಮಾಜಿಕ ಸಮಸ್ಯೆಗಳ ಸುತ್ತಲೇ ಇರುವ... ಹೆಣ್ಣಿನ ಮನಸ್ಸಿನ ಆಂದೋಲನ ಬಿಂಬಿಸುವ... ಅತ್ಯಂತ ನವಿರಾದ ಸಾಹಿತ್ಯ ’ತ್ರಿವೇಣಿ’ಯವರದು. ತಮ್ಮ ಕಾಲಕ್ಕಿಂತ ಕಡಿಮೆಯೆಂದರೂ ೨೦-೩೦ ವರ್ಷಗಳ ಮುಂದಿನ ಬದುಕು, ಪ್ರಪಂಚವನ್ನು ಮನೋದೃಷ್ಟಿಯಿಂದ ನೋಡಿದ್ದ ಅಪರೂಪದ ಲೇಖಕಿ. ಖಂಡಿತಾ ಎಲ್ಲರು ಓದಲೇಬೇಕಾದ ಪುಸ್ತಕಗಳು.....
ಶ್ಯಾಮಲಾ...ನನ್ನ ಕಾಲೇಜು ದಿನಗಳಲ್ಲಿ...ವರ್ಷದ ಮೊದಲೆರಡು ತಿಂಗಳು...(ನಮ್ಮದು ತ್ರೈಮಿಸ್ಟರ್ ಸಿಸ್ಟಮ್..ಮೂರನೇ ತಿಂಗಳು ಪರೀಕ್ಷೆಗಳು)...ಕಾದಂಬರಿ..ಸಿನಿಮಾ ಹೀಗೇ..ಆಗ ಮೊದಲು ..ಏಯ್..ಗೋಳು ಕಣೋ..ಅದೇನೋತ್ತೀಯಾ.....ಟಿ.ಕೆ.ರಾಮರಾವ್, ಉಷಾ ನವರತ್ನರಾಂ, ಅ.ನ.ಕೃ. ಇವನ್ನ ಓದು..ಅಂದಿದ್ದ ಫ್ರೆಂಡ್ಸ್ ಮಾತನ್ನ ಮೀರಿ..‘ಶರಪಂಜರ‘ ಓದಿದ್ದೆ..ಅಲ್ಲಿಗೆ ಅವರ ಫ್ಯಾನ್ ಅಗ್ಬಿಟ್ಟೆ...
ReplyDeleteಹೌದು..ಹೆಣ್ಣಿನ ಜೀವನದ ವಿವಿಧ ಆಯಾಮಗಳನ್ನು ಅಚ್ಚುಕಟ್ಟಾಗಿ ನಿರೂಪಿಸುವಲ್ಲಿ ಅವರದು ಎತ್ತಿದ ಕೈ...ಅಷ್ಟಲ್ಲದೇ..ಪುಟ್ಟಣ್ಣ ತಮ್ಮ ಸಿನಿಮಾಗಳಿಗೆ ಇವರ ಕಾದಂಬರಿಗಳನ್ನು ಲೈಕ್ ಮಾಡ್ತಿದ್ದರಾ..?
ಹೌದು ಡಾ.ಆಜಾದ್...
ReplyDeleteಪುಟ್ಟಣ್ಣನವರು ಮಾಡಿದ ಚಿತ್ರಗಳನ್ನು ನೋಡಿದ್ದು, ಈಗ ಆ ಪುಸ್ತಕಗಳನ್ನು ಮತ್ತೆ ಓದಿದರೆ, ಇಷ್ಟು ವರ್ಷಗಳ ನಂತರ ಬೇರೆಯದೇ ಭಾವನೆಗಳು ಉಂಟಾಗತ್ತೆ... ಚಿತ್ರ ಅಥವಾ ಅದರಲ್ಲಿ ಅಭಿನಯಿಸಿದ ಕಲಾವಿದರನ್ನು ನಮ್ಮ ಮನಸ್ಸು ಪುಸ್ತಕದಲ್ಲಿನ ವ್ಯಕ್ತಿಗಳಿಗೆ ಜೋಡಿಸಿ, ಒಂಥರಾ ಖುಷಿ ಕೊಡತ್ತೆ, ಅದರಲ್ಲೂ ನಮ್ಮ ನೆಚ್ಚಿನ ನಟ ನಟಿಯರಿದ್ದರಂತೂ... ತುಂಬಾನೇ ಇಷ್ಟ ಆಗತ್ತೆ. ಧನ್ಯವಾದಗಳು...