ಪುಸ್ತಕಗಳ ಪರಿಚಯದ ಸರಣಿಯಲ್ಲಿ ನನ್ನ ಮೂರನೆಯ ಪುಸ್ತಕ ಕೂಡ ದಿ.ತ್ರಿವೇಣಿಯವರದೇ ಮತ್ತು ಕಥಾ ಸಂಕಲನವೇ......"ಹೆಂಡತಿಯ ಹೆಸರು". ಈ ಕಥಾ ಸಂಕಲನದ ಮೊದಲನೆಯ ಕಥೆಯೇ ಪುಸ್ತಕದ ಶೀರ್ಷಿಕೆ, ಹೆಂಡತಿಯ ಹೆಸರು. ಈ ಸಂಕಲನದಲ್ಲಿ ಒಟ್ಟು ೧೪ ಕಥೆಗಳಿವೆ.
ಹೆಂಡತಿಯ ಹೆಸರು ಕಥೆಯ ಆರಂಭದ ಸಾಲುಗಳು "ಹತ್ತು ಬಿಳಿಯ ಹಾಳೆಗಳು ಬರಿದಾದ ಒಡಲಿನಿಂದಾಗಿ ಹಸಿವಿನಿಂದ ಕಂಗೆಟ್ಟು ನನ್ನ ಕಡೆಯೇ ನೋಡುತ್ತಿದ್ದವು. ನಾನು ಪೆನ್ನಿನ ತುಂಬಾ ಶಾಯಿ ತುಂಬಿ ಬರಿದಾದ ಒಡಲನ್ನು ತುಂಬಲು ಕುಳಿತೆ"...... ನನ್ನನ್ನು ಸೆಳೆದವು. ಏನಾದರೂ ಬರೆಯಬೇಕೆಂಬ ಹಂಬಲದ ಮನಸ್ಸಿನವರ ನಿಜ ಸ್ಥಿತಿ ಯಾವಾಗಲೂ ಇದೇ ಆಗಿರುತ್ತದಲ್ಲವೇ..... ಆದರೆ ಈ ಕಥೆಯಲ್ಲಿ ನಾಯಕ ಪ್ರೇಮ ಪತ್ರ ಬರೆಯುವ ಹುನ್ನಾರದಲ್ಲಿರುತ್ತಾನೆ...... ಆದರೆ ಅವಳನ್ನು (ಹೆಂಡತಿಯನ್ನು) ಏನೆಂದು ಸಂಬೋಧಿಸಬೇಕೆಂದು ತಿಳಿಯದೇ... ಬಿಳಿಯ ಹಾಳೆಗಳು ಹಸಿವಿನಿಂದ, ತಮ್ಮೊಡಲ ಹಸಿವು ಇಂಗಿಸೆಂಬಂತೆ ತನ್ನನ್ನೇ ನೋಡುತ್ತಿದ್ದವು ಎನ್ನುತ್ತಾನೆ... ಇದೊಂದು ಅತ್ಯಂತ ಉತ್ತಮ ಉಪಮೆ ಎನ್ನಿಸಿತು ನನಗೆ. ಮದುವೆಯಾಗಿ ಹೆಂಡತಿಯನ್ನು ಬಿಟ್ಟು ಬಂದಿರುವ ಇವನೂ, ಬಿಳಿ ಹಾಳೆಗಳಂತೆ ಪ್ರೇಮಕ್ಕಾಗಿ ಹಸಿದಿದ್ದಾನೆ... ಪ್ರೇಮ ಪತ್ರ ಬರೆಯಲು ಕುಳಿತಿದ್ದಾನೆ... ತಮಾಷೆಯೆಂದರೆ ಅವನಿಗೆ ಹೆಂಡತಿಯ ಹೆಸರೇ ನೆನಪಿಲ್ಲದಿರುವುದು... ಕೊನೆಗೆ ಸ್ನೇಹಿತನ ಸಹಾಯದಿಂದ ತನ್ನನ್ನು ಪ್ರೀತಿಸುವ ನಾಟಕವಾಡಿ, ಬೇರೊಬ್ಬರನ್ನು ಮದುವೆಯಾಗಿ ಹೋದವಳ ಹೆಸರೇ ಹೆಂಡತಿಯದೆಂದೂ ತಿಳಿಯುತ್ತಾನೆ. ಮನೆಗೆ ಬಂದ ಸೊಸೆಗೆ ಹೊಸ ಹೆಸರಿಡಬೇಕೆಂಬ ಸಂಪ್ರದಾಯದಂತೆ, ತನ್ನ ತಾಯಿಯ ಸಲಹೆಯಂತೆ, ತಾನು ಈಶ್ವರಮೂರ್ತಿಯಾದ್ದರಿಂದ ಹೆಂಡತಿಯನ್ನು "ಗಂಗಾ" ಎಂದು ಕರೆಯುತ್ತಾನೆ. ಈ ಕಥೆಯಲ್ಲಿ ಮನಸ್ಸಿಗೆ ನೋವುಂಟು ಮಾಡಿದ ವಿಷಯಗಳನ್ನು ಮರೆಯಬೇಕು, ಬೇರು ಸಹಿತ ನೆನಪುಗಳನ್ನು ತೆಗೆದುಹಾಕಬೇಕೆಂಬ ಒಂದು ತತ್ವ ಕೂಡ ಹೇಳುತ್ತಾರೆ ಲೇಖಕಿ.
೨) ನಾ ಮೆಚ್ಚಿದ ಹುಡುಗಿ :
ಯಾರು ಹಿತವರು ನಿನಗೆ ಈ ಮೂವರೊಳಗೆ... ಕುಮುದಿನಿ.... ಸೌದಾಮಿನಿ.... ವಿಲಾಸಿನಿ.... ನಾಯಕ ತನಗೆ ಬೇಕಾದ ಹುಡುಗಿಯನ್ನು ಕೊನೆಗೂ ಆರಿಸಿಕೊಳ್ಳುತ್ತಾನೆ. ಒಂದು ಕನಸಿನ ನಂತರ.... ಸಂಗೀತದ ರಾಗಗಳಿಗೆ ಮೂವರು ಹುಡುಗಿಯರನ್ನೂ ಹೋಲಿಸಿ, ಅವರ ಸೌಂದರ್ಯ ವರ್ಣನೆ ಮಾಡಿರುವ ರೀತಿ ಚೆನ್ನಾಗಿದೆ.
೩) ಚಿನ್ನದ ಸರ :
ಶ್ರೀಮಂತಳಾದ ಕನಕ, ಬಡವಳಾದ ಕಾವೇರಿ ಇಬ್ಬರೂ ಶಾಂತಳಿಗೆ ಸ್ನೇಹಿತೆಯರೇ ಆದರೂ, ಪಾಪುವಿನ ಸರ ಕಾಣದಾದಾಗ, ಶಾಂತ ಕಾವೇರಿಯನ್ನೇ ಅನುಮಾನಿಸುತ್ತಾಳೆ. ಕಣ್ಣೆದುರೇ ಕನಕ ಆ ಸರವನ್ನು ಮಾರಲು ಹೊರಟರೂ ಶಾಂತಾ ಕೊಂಡುಕೊಳ್ಳುವುದೇ ಇಲ್ಲ. ಇಲ್ಲಿ ಸ್ನೇಹ ಹೇಗೆ ಅನುಮಾನದಿಂದಾಗಿಯೂ, ಬಡತನದಿಂದಾಗಿಯೂ ಸೋಲುವ ಸ್ಥಿತಿಗೆ ಹೋಯಿತೆಂಬುದು ಚೆನ್ನಾಗಿ ಚಿತ್ರಣವಾಗಿದೆ.
೪) ಅವನ ಆಯ್ಕೆ :
ಕುಂಟ ಪಾರಿವಾಳವನ್ನು ಸಾಕಲು ಆಯ್ಕೆ ಮಾಡಿಕೊಂಡು ಹುಡುಗ ಯಾವಾಗಲೂ ಅದನ್ನು ರಕ್ಷಿಸುವ ಮಾತಾಡಿ, ಅಂತ:ಕರಣ ಪ್ರದರ್ಶಿಸುತ್ತಾನೆ. ಕುಂಟಿಯೇ ತನ್ನ ಪಾಲಿಗೆ ರಾಣಿ ಎಂದು, ಆ ಪಾರಿವಾಳವನ್ನು "ರಾಣಿ" ಎಂದು ಕರೆಯುತ್ತಾನೆ.
೫) ಬೆಡ್ ನಂಬರ್ ಏಳು :
ಕ್ಷಯದಾಸ್ಪತ್ರೆಯಲ್ಲಿ ಬೆಡ್ ನಂಬರ್ ೬ - ೭ರ ನಡುವೆ ನಡೆಯುವ ಮಾತುಕತೆ.... ೬ನೇ ನಂಬರಿನ ಬೆಡ್ ಬರೀ ರೋಗಿಗಳ ಸಹವಾಸ ಸಾಕಾಗಿದೆ, ಸುಂದರಿಯೊಬ್ಬಳ ಜೊತೆ ಸಿಕ್ಕರೆ ಎಂದು ಕನಸು ಕಾಣುತ್ತಾ, ರೋಗಿಗಳಿಗಾಗಿ ಮಿಡಿಯುವ ಹೃದಯದ ೭ನೇ ನಂಬರ್ ಬೆಡ್ಡನ್ನು ಟೀಕಿಸುತ್ತಾ, ೭ನೇ ಬೆಡ್ ಗೆ ಬರುವ ವಿಶ್ವನಾಥನ ಹೆಂಡತಿ ಉಮಾಳ ಸೌಂದರ್ಯ ಆಸ್ವಾದಿಸುತ್ತೆ. ತನ್ನ ಜೀವ ಪಣಕ್ಕಿಟ್ಟು, ಕೆಲಸ ಹಿಡಿದು, ಸಂಸಾರ ತೂಗಿಸಿ, ಗಂಡನನ್ನು ರಕ್ಷಿಸುವ ಉಮಾಳೇ ಮುಂದೆ ರೋಗಿಯಾದಾಗ, ಗಂಡನಿಂದ ನಿರ್ಲಕ್ಷಿಸಲ್ಪಟ್ಟು, ತ್ಯಜಿಸಲ್ಪಡುತ್ತಾಳೆ. ಅವಳ ಮೂಕ ರೋದನಕ್ಕೆ ಈ ಬೆಡ್ಗಳೂ ರೋದಿಸುತ್ತಾ ಜೊತೆಗೂಡುತ್ತವೆ. ಮನ ಮಿಡಿಯುವ ಕಥೆ.
೬) ಚಂಪಿ :
ಲಲಿತಳಿಗೆ ಮೂರನೆಯ ಮಗಳಾಗಿ ಮುದ್ದಾದ ಚಂಪಿ ಹುಟ್ಟುವಾಗಲೇ ಬಲಗೈ ಇಲ್ಲದೆ, ಒಂದೇ ಕೈಯಿನ ಕೂಸಾಗಿತ್ತು. ದೊಡ್ಡವರು ಮಗುವನ್ನು ಬಂದವರಿಗೆ ತೋರಿಸದೆ ಮುಚ್ಚಿಡುವುದನ್ನು ಕಂಡು ಚಂಪಿಯ ಅಕ್ಕ ರಾಜಿ ಅವಳನ್ನು ತೆಂಗಿನ ಗರಿಗಳ ಮರೆಯಲ್ಲಿ ಮುಚ್ಚಿಟ್ಟು, ಸಮಾಜದಲ್ಲಿದ್ದ ಅಕ್ಕನನ್ನು ಕರೆತರಲು ಹೋಗುತ್ತಾಳೆ. ಮನೆಗೆ ಬಂದ ಮೇಲೆ ಎಲ್ಲರೂ ರಾಜಿಯ ಮೇಲೆ ಕೋಪಿಸಿಕೊಂಡರೂ, ಚಂಪಿ ಮಾತ್ರ ಇದ್ದ ತನ್ನ ಎಡಗೈ ಚಾಚಿ ಮುದ್ದಾಗಿ ರಾಜಿ ಎಂದು ಕರೆಯುತ್ತಾಳೆ. ಏನೂ ಕಪಟವರಿಯದ ಪುಟ್ಟ ತಂಗಿಯ ಪ್ರೀತಿ ಸುಂದರವಾಗಿ ಹೇಳಲ್ಪಟ್ಟಿದೆ.
೭) ಹಸಿರು ಪೀತಾಂಬರ :
ಗರ್ಭಿಣಿ ಹೆಂಡತಿ ಆಸೆ ಪಟ್ಟಿದ್ದ ಹಸಿರು ಪೀತಾಂಬರವನ್ನು ಶಿವು ಕಷ್ಟಪಟ್ಟು ತಂದಾಗ, ಕೌಸಲ್ಯ ಆಗಲೇ ಮುಂದೆ ಹುಟ್ಟಲಿರುವ ಮಗುವಿಗೆ ತಾಯಾಗಿ ಹೋಗಿದ್ದಳು. ಇದು ಹೆಣ್ತನದಿಂದ ತಾಯ್ತನಕ್ಕೇರುವ ಸ್ತ್ರೀಯ ಒಂದು ರೂಪ ತೋರಿಸುವ ಕತೆ. ಚೆನ್ನಾಗಿದೆ.
೮) ಎರಡು ಜೀವ :
ಗಾಡಿ ಎಳೆಯುವ ಕುದುರೆಯ ಭಾವನೆಗಳನ್ನು ನವಿರಾಗಿ ಚಿತ್ರಿಸಿದ್ದಾರೆ ಲೇಖಕಿ. ದುಷ್ಟ ಮಾನವನಿಗಾಗಿ ಕಷ್ಟಪಟ್ಟು ದುಡಿಯುವ ತನ್ನ ಪರಿಸ್ಥಿತಿಯನ್ನು ಮಾನಸಿಕವಾಗಿ ಮೆಟ್ಟಲು ಪ್ರತ್ನಿಸುತ್ತೆ ಲತೀಫ್.. ಹೆಂಡತಿ ಸತ್ತ ಆರೇ ತಿಂಗಳಿಗೆ ಮರು ಮದುವೆಯಾಗಿ ಬಂದ ಚಂದ್ರುವನ್ನು ಕಂಡು ಹೀನ ಮಾನವ ಎಂದು ಕೆರಳಿದ ಲತೀಫ್, ಭಾವನೆಗಳ ತೀವ್ರತೆಗೆ ಸಿಕ್ಕಿ, ಮನಸ್ಸಿನ ಬಿರುಗಾಳಿ ಸಹಿಸಲಾಗದೆ, ಮಾನವ ಕುಲವನ್ನೇ ದ್ವೇಷಿಸುತ್ತಾ ದೊಡ್ಡ ಮರಕ್ಕೆ ಅಪ್ಪಳಿಸಿಬಿಡತ್ತೆ. ಗಾಡಿಯಲ್ಲಿದ್ದವರೆಲ್ಲಾ ಪ್ರಾಣಾಪಾಯದಿಂದ ಪಾರಾದರೂ, ಮುಂಗಾಲು ಮುರಿದು ಬಿದ್ದಿದ್ದ ಲತೀಫ್ ನನ್ನು ನಿಷ್ಪ್ರಯೋಜಕನೆಂದು, ಗುಂಡಿಟ್ಟು ಕೊಲ್ಲುತ್ತಾರೆ ಮತ್ತು ಸುತ್ತಲಿದ್ದ ದುಷ್ಟ ಮನುಜರು ರೋಮಾಂಚಕಾರಿ ದೃಶ್ಯವೆಂಬಂತೆ ನೋಡುತ್ತಾ ನಿಲ್ಲುತ್ತಾರೆ. ಮನುಷ್ಯ ಎಷ್ಟು ಸ್ವಾರ್ಥಿ ಮತ್ತು ಕ್ರೂರಿ ಎಂಬುದು ಇಲ್ಲಿ ತೋರಿಸಲ್ಪಟ್ಟಿದೆ. ಒಳ್ಳೆಯ ಕಥೆ.
೯) ತಾಯಿ :
ಎಷ್ಟೇ ಐಶ್ವರ್ಯ, ಸುಖ ಸಂಪತ್ತುಗಳಿದ್ದರೂ ತಾಯಿ ಕೊನೆಗೆ ಒಲಿಯುವುದು ಶುದ್ಧ ಪ್ರೀತಿಗಾಗಿ ಎಂದು ತಾಯ ಮಮತೆ ಬಿಂಬಿಸುವ ಕಥೆ. ಬಡತನದಲ್ಲಿ ಸಣ್ಣ ವಠಾರದ ಮನೆಯಲ್ಲಿ ಬದುಕಿನೊಡನೆ ಹೋರಾಡಲು ಹೊರಟ ಮಗ ಕೇಶವನ ಜೊತೆ ಹೊರಟು ಬಿಡುತ್ತಾಳೆ ಜಾನಮ್ಮ. ಶುದ್ಧ ಮನಸ್ಸಿನ ತಾಯಿ, ಮಗನ ಮೇಲಿನ ಪ್ರೀತಿಗಾಗಿ ಕಷ್ಟ ಪಡಲೂ ತಯಾರಾಗಿ ಬಿಡುವ ಭಾವುಕ ಸನ್ನಿವೇಶ.
ಇನ್ನುಳಿದ ಕಥೆಗಳಲ್ಲಿ ಹೆಣ್ಣಿನ ಸೌಂದರ್ಯ ಕಂಡು ಮೋಹಿತನಾಗಿ ೧೫ ವರ್ಷದ ಕಠಿಣ ಬ್ರಹ್ಮಚರ್ಯದ ತಪಸ್ಸನ್ನು ಗಾಳಿಗೆ ತೂರಿ ಬಿಡುವ ಸಂನ್ಯಾಸಿ, ಬಾಯಿಗೆ ಬಂದ ಸುಳ್ಳು ಕಥೆ ಹೇಳಿ ಭಿಕ್ಷೆ ಬೇಡುವ ಹುಡುಗ, ಪ್ರೀತಿಸಿದ ಹುಡುಗಿ ಆಕಸ್ಮಿಕ ಬೆಂಕಿ ಅಪಘಾತದಲ್ಲಿ ಮರಣ ಹೊಂದಿದಾಗ, ಕಿಡಿಗೇಡಿಗಳು ಅವಳ ಚಾರಿತ್ರ್ಯ ವಧೆ ಮಾಡುವುದು, ೩೦ ವರ್ಷ ತನಗಿಂತ ಹಿರಿಯನಾದ, ತನ್ನನ್ನು ಎತ್ತಾಡಿಸಿ ಸಾಕಿದ ಸೋದರ ಮಾವನನ್ನೇ ಪ್ರೀತಿಸುವ ತಾರಾ.... ಹೊಟ್ಟೆಯಲ್ಲಿ ಪುಂಡಾಟ ನಡೆಸುತ್ತಿದ್ದ ಪೋರ ಇದ್ದಕ್ಕಿದ್ದಂತೆ ತಟಸ್ಥನಾದಾಗ ಮಗು ಹೊರಗೆ ಬರುವ ಮೊದಲೇ ಇಹಲೋಕ ತ್ಯಜಿಸಿದೆ ಎಂದರಿಯುವ ತಾಯಿ, ಕೊನೆಗೆ ಒಂದು ಜೀವಂತ ಶಿಶುವಿಗೆ ಜನ್ಮ ಕೊಡಲಾಗದ ಹೆಣ್ಣೂ ಒಂದು ಹೆಣ್ಣಾ ಎಂದು ಮತ್ತೊಮ್ಮೆ ಇನ್ನೊಬ್ಬ ಅತಿಥಿಯನ್ನು ಎದುರುಗೊಳ್ಳಲು "ಪ್ರಸವ ವೈರಾಗ್ಯ" ಮರೆಯುವ ತಾಯಿ....
ಹೀಗೆ ಪ್ರತಿಯೊಂದು ಕಥೆಯೂ ವಿಭಿನ್ನವಾಗಿವೆ. ಒಟ್ಟಿಗೆ ಒಂದರ ನಂತರ ಒಂದರಂತೆ ಇಡೀ ಪುಸ್ತಕ ಓದಿದರೂ, ಎಲ್ಲ ರೀತಿಯಲ್ಲೂ ಭಿನ್ನವಾಗಿಯೇ ಕಾಣುವುವು ಕಥೆಗಳು. ಇದು ಲೇಖಕಿ ದಿ.ತ್ರಿವೇಣಿಯವರ ಅಪರೂಪದ ಶೈಲಿ... ಎಲ್ಲ ಕಥೆಗಳಿಗಿಂತಲೂ ನನ್ನನ್ನು ಹಿಡಿದಿಟ್ಟು, ಮರೆಯಲಾಗದಂತೆ ಮನಸ್ಸಿನಲ್ಲಿ ಅಚ್ಚೊತ್ತಿದ್ದು "ಎರಡು ಜೀವ". ಮಾತು ಬಾರದ ಮೂಕ ಪ್ರಾಣಿಗಳೇ ಮನುಷ್ಯರಿಗಿಂತ ಹೆಚ್ಚು ಭಾವ ಜೀವಿಗಳು ಎಂಬುನ್ನು ಸಾಬೀತು ಪಡಿಸಿದೆ........
ಚಿನ್ನದ ಸರ ಹಾಗೂ ಹಸಿರು ಪೀತಾಂಬರ ನನ್ನ ಮೆಚ್ಚಿನ ಕತೆಗಳು.
ReplyDeleteಓದಿ ವರ್ಷಗಳೇ ಕಳೆದಿದ್ದರೂ ಮರೆಯದ ಕತೆಗಳು.ಚಿನ್ನದ ಸರದಲ್ಲಿ ಮಾನವ ಸ್ವಭಾವದ ಚಿತ್ರಣವಿದ್ದರೆ, ಹಸಿರು ಪೀತಾಂಬರದಲ್ಲಿ ತಾಯ್ತನದ ಅವಕಾಶದಿಂದ ಹೆಣ್ಣಿನ ಆದ್ಯತೆಗಳು ಬದಲಾಗುವ ನವಿರು ವರ್ಣನೆಯಿದೆ.
ತ್ರಿವೇಣಿಯವರು ನನ್ನ ಅಚ್ಚುಮೆಚ್ಚಿನ ಲೇಖಕಿಯಲ್ಲೊಬ್ಬರು. ಅವರ ಬೆಕ್ಕಿನಕಣ್ಣು, ಶರಪ೦ಜರ ಮತ್ತು ಆ ಅವಳು ಅನ್ನುವ ಕಾದ೦ಬರಿಗಳು ನಾನೋದಿದ೦ತವು. ಇರುವಷ್ಟೇ ದಿನಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೊಟ್ಟಿದ್ದಾರೆ. ಚಿಕ್ಕ೦ದಿನಲ್ಲಿ ಓದಿದ೦ತವು. ಸ೦ಪೂರ್ಣ ನೆನಪಿನಲ್ಲಿಲ್ಲದೇ ಹೋದರೂ ಅದರ ಘಮವಿದೆ. ಅವರ ಕ್ರುತಿಗಳ ಪರಿಚಯ ಮಾಡಿಕೊಡುತ್ತಿರುವ ನಿಮಗೆ ವ೦ದನೆಗಳು.
ReplyDeleteಉಷಾರವರಿಗೆ ನನ್ನ ಬ್ಲಾಗ್ ಗೆ ಸ್ವಾಗತ.....
ReplyDeleteತ್ರಿವೇಣಿಯವರು ತಮ್ಮ ಎಲ್ಲಾ ಪುಸ್ತಕಗಳಲ್ಲೂ ಹೆಣ್ಣಿನ ಆದ್ಯತೆಗಳು ಮತ್ತು ಭಾವನೆಗಳನ್ನು ಅತ್ಯಂತ ನವಿರಾಗಿ ಚಿತ್ರಿಸಿದ್ದಾರೆ. ನಿಮ್ಮ ’ವನಸುಮ’ ಮುದ್ದಾಗಿದೆ. ಅಮ್ಮ ದಿನವೂ ’ವನಸುಮದೊಳೆನ್ನ ಜೀವನವು...’ ಹಾಡುತ್ತಿದ್ದರು. ನನಗೆ ಆ ದಿನಗಳ ನೆನಪಾಯಿತು......... ಧನ್ಯವಾದಗಳು.
ವಿಜಯಶ್ರೀ ಮೇಡಮ್...
ReplyDeleteನನ್ನ ಬ್ಲಾಗ್ ಗೆಳೆಯರ ಲೋಕಕ್ಕೆ ಸ್ವಾಗತ. ತ್ರಿವೇಣಿಯವರು ಮತ್ತು ಅವರ ಕಥೆಗಳು ಮರೆಯಲಾರದಂತಹವು. ನನ್ನ ಕೃತಿ ಪರಿಚಯದಿಂದ ನಿಮ್ಮ ನೆನಪಿನ ದೋಣಿ ತೇಲಿದ್ದರೆ.. ನನಗೆ ಸಂತೋಷ. ಹೀಗೇ ಬರುತ್ತಿರಿ.......
ಧನ್ಯವಾದಗಳು.
ಶ್ಯಾಮಲ ಮೇಡಮ್,
ReplyDeleteತ್ರಿವೇಣಿಯವರ ಪುಸ್ತಕಗಳನ್ನು ನಾನು ಓದಿಲ್ಲ. ನಿಮ್ಮ ಪುಸ್ತಕ ಪರಿಚಯ ತುಂಬಾ ಚೆನ್ನಾಗಿದೆ. ನನಗೂ ಅವರ ಪುಸ್ತಕಗಳನ್ನು ಓದಬೇಕೆನಿಸಿದೆ...
ಧನ್ಯವಾದಗಳು.
ಶಿವು ಸಾರ್..
ReplyDeleteನನ್ನ ಬರಹದಿಂದ ನಿಮಗೆ ತ್ರಿವೇಣಿಯವರ ಪುಸ್ತಕ ಓದಬೇಕೆನಿಸಿದೆ ಎಂದಿದ್ದೀರಿ. ಖಂಡಿತಾ ಓದಲು ಶುರು ಮಾಡಿ. ಒಂದು ಓದಿದರೆ ಸಾಕು, ನೀವೇ ಒಂದಾದ ಮೇಲೊಂದರಂತೆ ಎಲ್ಲವನ್ನೂ ಓದಲು ತೊಡಗುತ್ತೀರಿ. ಬಿಡುವು ಮಾಡಿಕೊಂಡು ನನ್ನ ಮಾತು ಕೇಳಲು ಬಂದಿದ್ದಕ್ಕೆ ಧನ್ಯವಾದಗಳು......
ಶಾಮಲಾ ನೀವ್ಯಾಕೋ ತ್ರಿವೇಣೀನ ಬಿಡೋಹಾಗೆ ಕಾಣೆ...ನಿಜ ಅವರ ಕಾದಂಬರಿಯ ರುಚಿಹತ್ತಿದವರು ಮತ್ತೆ ಮತ್ತೆ ಅವರ ಕಾದಂಬರಿಯನ್ನ ಓದೋದು ಖಂಡಿತ. ಚನ್ನಾಗಿವೆ ನಿಮ್ಮ ವಿಶ್ಲೇಷಣೆಗಳು.
ReplyDeleteಡಾ.ಆಜಾದ್..
ReplyDeleteನಾನು ಮುಂಚೆನೇ ಹೇಳಿದ್ದೆ, ಸಧ್ಯಕ್ಕೆ ತ್ರಿವೇಣಿಯವರನ್ನೇ ಓದುತ್ತಿರುತ್ತೇನೆಂದು. ಸ್ವಲ್ಪ ಇರಿ ಇನ್ನೂ ಮೂರು ಪುಸ್ತಕಗಳ ಬಗ್ಗೆ ಒಟ್ಟಿಗೇ ಬರೀತೀನಿ. ಆಮೇಲೆ ಬೇಕಾದರೆ ನಿಮಗೆ ಚಿಕ್ಕ ವಿರಾಮ !! :-) ವಿಶ್ಲೇಷಣೆ ಮೆಚ್ಚಿದ್ದಕ್ಕೆ ಧನ್ಯವಾದಗಳು.