Friday, January 29, 2010

ಮೆಗಾ ಮದುವೆ....

ಮದುವೆಗಳಲಿ ಆಕರ್ಷಣೆಯೇ.... "ಮಂಟಪಗಳು"
ವೇದಿಕೆ ಮೇಲೆ ಬಣ್ಣ ಬಣ್ಣದ ಚೌಕಟ್ಟುಗಳು
ಸ್ಯಾಟಿನ ಹೊದಿಕೆಯಲಿ ಸಿಂಗಾರಗೊಂಡ ಪುಷ್ಪಗಳು
ನಡುವೆ ಮದುಮಕ್ಕಳಿಗೆರಡು ರಾಜಾ ಸೀಟುಗಳು......

ಪೈಪೋಟಿಯ ವೈಭವಗಳೂ...
ಲಕ್ಷ, ಕೋಟಿ ರೂಪಾಯಿಗಳೂ...
ಮಿಂಚಿದ ಬಾಗಿದ ಬಳುಕಿದ ದೌಲತ್ತುಗಳೂ...
ನಡುವೆ ಎಲ್ಲೋ ಮುಚ್ಚಿಹೋಯ್ತು ನವಿರಾದ ಸಂಬಂಧಗಳೂ...

ಅಂದು ಮದುವೆಗಳು ನಿಶ್ಚಿತಗೊಳ್ಳುತ್ತಿದ್ದವು ಸ್ವರ್ಗದಲ್ಲೆಂದು..
ಇಂದು ಐಷಾರಾಮಿ ಮದುವೆಗಳಲಿ ಸ್ವರ್ಗವೇ ಧರೆಗಿಳಿದಿದೆಯೆಂದು...

ಜಗತ್ತೇ ದಂಗು ಬಡಿಯುವ ವೈಭಗದ ಗುಂಗು
ಮೆಗಾ ಮದುವೆಗಳ ಮಾಯಾ ಲೋಕದ ಡೋಂಗು...

ಚಿನ್ನ ಬೆಳ್ಳಿಗಳ, ವಜ್ರ ವೈಢೂರ್ಯಗಳ ಅತೀ ಆರ್ಭಟ
ಆಮಂತ್ರಣ ಪತ್ರಿಕೆಯಿಂದಲೇ ಆರಂಭವಾಗುವ ಅಂತಸ್ಥಿನ ಆಟ....

ಹಾಹಾಕಾರ ಮಾಡುತ್ತಾ ತುತ್ತು ಅನ್ನಕ್ಕೂ ಗೋಳಿಡುವ ಬಡವ
ಕೋಟಿಗಟ್ಟಲೇ ದೋಚುತ್ತಾ ಮಹಾರಾಜರ ವೈಭವ ಮೆರೆಸುವ ಧನ ದಾನವ...

ಕಡಿಮೆ ಖರ್ಚಿನ ಸರಳ ವಿವಾಹಗಳು
ಬೆಸೆಯುವುದು ಗಟ್ಟಿಯಾದ ಸಂಬಂಧಗಳು...

ಎರಡು ಸಂಸಾರಗಳು ಒಟ್ಟಾದಾಗ
ವಧುವರರ ಅಂತರಂಗಗಳು ಒಂದಾದಾಗ
ಬೇಕೇ.... ಈ...... ಭೋಗ..... ವೈಭೋಗ.......

16 comments:

  1. ಮದುವೆಯ ಅಬ್ಬರದ, ಆಡಂಬರದ ಬಗೆಗಿನ ನಿಮ್ಮ ಕವನ ಮಾರ್ಮಿಕವಾಗಿದೆ.

    ReplyDelete
  2. ತುಂಬಾ ಚೆನ್ನಾಗಿದೆ....ತುಂಬಾ ವಿರೋಧ ಕಟ್ಟಿಕೊಂಡು ನಾನು ಸರಳ ಮದುವೆಯಾದೆ...ಆದರೆ ಸಂಜೆ Reception ನಲ್ಲಿ ಆಡಂಬರ ನೆಡೆದೇಹೊಯ್ತು...ಎನ್ಮಾಡೋದು ವಧುಗಳ ಅಭಾವವಿರುವ ಈ ಕಾಲದಲ್ಲಿ ಕೆಲವೊಂದು compromise ಮಾಡ್ಕೊಬೇಕಾಗುತ್ತೆ. ನೀವೆಂದಂತೆ ವಿವಾಹಗಳಲ್ಲಿ ಪ್ರೀತಿಯ ಬದಲು ಇಂದು ಆಡಂಬರವೇ ಹೆಚ್ಚಾಗಿದೆ....ಉತ್ತಮ ಕವನ..ಧನ್ಯವಾದಗಳು

    ReplyDelete
  3. ವಿವಾಹಗಳಲ್ಲಿ ಪ್ರೀತಿಯ ಬದಲು ಇಂದು ಆಡಂಬರವೇ ಹೆಚ್ಚಾಗಿದೆ.ಚೆ೦ದದ ಕವನ.

    ReplyDelete
  4. ಸೆರಿಯಾಗಿ ಹೀಳಿದ್ದೀರಿ. ಇತ್ತೀಚಿಗೆ ಮದುವೆಯ ಆಡಂಬರ ನೋಡಿದರೆ ಅರ್ಥವೇ ಇಲ್ಲ ಅನ್ಸತ್ತೆ.
    ಚೊಕ್ಕವಾಗಿ, ಕಾಶಿಯಾತ್ರೆಗೆ ಹೋಗಬೇಕೆಂದವನನ್ನು ಮಾವ ಸಮಾದಾನ ಮಾಡಿ, ಕರೆದು, ಶಾಸ್ತ್ರೋತ್ತವಾಗಿ ಮದುವೆ ಮಾಡಿ, ತಲೆಮೇಲೆ ಅಪ್ಪಳ ಒಡೆದು, ತೆಂಗಿನಕಾಯಿ ಉರುಳಿಸಿ ಆಟವಾಡಿ, ಗೃಹಪ್ರವೇಶದ ಸಮಯದಲ್ಲಿ ಒಬ್ಬರನೊಬ್ಬರ ಹೆಸರನ್ನು ಹೇಳುವಾಗ ವರವಧುರರ ಮುಖದಲ್ಲಿ ಕಾಣುವ ಸಂಕೋಚ, ನಾಚಿಕೆ ನೋಡುವುದೇ ಚಂದ. ಈಗಿನ ಆಡಂಬರದಲ್ಲಿ ಅದೆಲ್ಲ ಕಾಣುವುದೇ ಕಡಿಮೆ.

    ReplyDelete
  5. ಶ್ಯಾಮಲಾ ಮೇಡಮ್, ಮದುವೆಯ ಆಡಂಬರದ ಕೊನೆಯಲ್ಲಿನ ಒಂದು ಸಾಲು ಬಹಳ ಚೆನ್ನಾಗಿವೆ. ಇದನ್ನು ವಿಚಾರ ಮಾಡಬೇಕೇ ಹೊರತು ಆಡಂಬರವನ್ನಲ್ಲ ಎಂಬುದು ಎಷ್ಟು ಮಂದಿಗೆ ಮನವರಿಕೆಯಾಗುತ್ತದೆ???
    ಸ್ನೇಹದಿಂದ,

    ReplyDelete
  6. ಆಡಂಬರವನ್ನ ವಿಡಂಬನೆ ಮಾಡುವ ಕವನ ಚೆನ್ನಾಗಿದೆ.......

    ReplyDelete
  7. ಕವನ ಚೆನ್ನಾಗಿದೆ ಅಕ್ಕ .
    ಬರಹಗಳಲ್ಲಿ ಕಾಣುವ ಈ ನಮ್ಮ ಉತ್ಸಾಹ , ವಾಸ್ತವಕ್ಕೆ ಬಂದಾಗ ಮರೆಯಾಗುತ್ತೇನೋ ಅನ್ನಿಸುತ್ತೆ .
    ನೂರು ಮಾತನಾಡುವ ನಾವು ಅದರಲ್ಲಿ ಚೂರನ್ನಾದರು ವಾಸ್ತವಿಕರಿಸಿದರೆ ಬದಲಾವಣೆ ಸಾಧ್ಯ ಅನ್ನಿಸುತ್ತೆ.
    ಇಲ್ಲವೆಂದರೆ ಅದು ಬೊಗಳೆ ಆಗೇ ಉಳಿದುಬಿಡುತ್ತೆ , ನಮ್ಮ ರಾಜಕಾರಣಿಗಳ ಮಾತಿನ ತರ , ಅಲ್ವೇ ಅಕ್ಕ.

    ReplyDelete
  8. ಶ್ಯಾಮಲಾ ಮೇಡಮ್,
    ಆಡಂಬರದ ಮದುವೆಯ ಬಗ್ಗೆ ಬರೆದಿರುವ ಕವನ ತುಂಬ ಚೆನ್ನಾಗಿ ಮೂಡಿ ಬಂದಿದೆ..."ಕಡಿಮೆ ಖರ್ಚಿನ ಸರಳ ವಿವಾಹಗಳು
    ಬೆಸೆಯುವುದು ಗಟ್ಟಿಯಾದ ಸಂಬಂಧಗಳು..." ಹೌದು ಇದಂತು ನಿಜ,,, ಆದರೆ ಈ ತರ ಆಗಲಿಕ್ಕೆ ಬಿಡಬೇಕಲ್ವ.... ನನಗೂ ಸರಳ ವಾಗಿ ಮದುವೆ ಮಾಡಿಕೊಳ್ಳಬೇಕು ಅಂತ ಅಸ್ಸೆ,,, ನೋಡೋಣ ಹೇಗೆ ಆಗುತ್ತೋ.. ಇನ್ನು ಹುಡುಗಿ ಹುಡುಕುವುದರಲ್ಲೇ ಕಾಲ ಕಳೆದು ಹೋಗ್ತಾ ಇದೆ..... :-)

    ReplyDelete
  9. kavana channagide... simple aagi maduveyaakabeku anta ansutte... adre maneyavaru kelabekalla ;)

    ReplyDelete
  10. ಶ್ಯಾಮಲಾವ್ರೆ, ಮದುವೆಯ ಆಡಂಬರ ಬೇಡ ಅನ್ನೋರು, ದೇವಸ್ಥಾನಾನೋ, ರೆಜಿಸ್ಟರ್ಡ್ ಮದ್ವೇಂತಾಲೋ ..ಮಾಡಿಕೊಂಡು ಮತ್ತೆ ...ರಿಸೆಪ್ಷನ್ ಗೆ ಲಕ್ಷಾಂತರ ಖರ್ಚುಮಾಡೋದು ಇಲ್ಲದಿಲ್ಲ...ಚನ್ನಾಗಿದೆ..ನಿಮ್ಮ ಕವನ

    ReplyDelete
  11. ಉದಯ್ ಸಾರ್... ಸೀತಾರಾಮ ಸಾರ್.... ದಿನಕರ್ ಸಾರ್...
    ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು..

    ಸುಬ್ರಹ್ಮಣ್ಯ ಸಾರ್..
    ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು. ನೀವು ಹೇಳಿದ್ದು ಖಂಡಿತಾ ಸರಿ, ವಧುಗಳ ಅಭಾವವಿದೆ... ಭ್ರೂಣ ಹತ್ಯ್ ಸತತವಾಗಿ ನಡೆಯುತ್ತಲೇ ಇರುವಾಗ ಹೆಣ್ಣು ಮಕ್ಕಳ ಸಂತತಿ ಕಡಿಮೆಯಾಗದಿರಲು ಹೇಗೆ ಸಾಧ್ಯ..

    ರಾಜೀವ ಸಾರ್...
    ಸಂಪ್ರದಾಯದ ರೀತಿ, ಸರಳವಾಗಿ ಮಾಡುವ ಮದುವೆಗಳೇ ಚೆನ್ನ ಅಲ್ವಾ? ಎಲ್ಲ ಶಾಸ್ತ್ರಕ್ಕೂ ಒಂದೊಂದು ಅರ್ಥ ಖಂಡಿತಾ ಇದೆ, ಆದರೆ ಅರ್ಥಮಾಡಿಕೊಳ್ಳುವವರೆಷ್ಟು ಮಂದಿ ಇದ್ದಾರೆ? ಈಗ ಎಲ್ಲವೂ Fast ಯುಗ.. ಈಗಿನ ಯುವಕ ಯುವತಿಯರು ಸಂಪ್ರದಾಯವನ್ನು ಗೌರವಿಸಿದರೇ ಅದು ಉಳಿಯುವುದಲ್ಲವಾ? ಕವನ ಮೆಚ್ಚಿ, ನಿಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..

    ReplyDelete
  12. ಚಂದ್ರು ಸಾರ್...
    ಧನ್ಯವಾದಗಳು. ಹೌದು ಎಲ್ಲರೂ ಚಿಂತಿಸಿ, ತಿಳಿದುಕೊಳ್ಳಬೇಕಾದ ವಿಷಯವೇ..


    ಗುರು ಸಾರ್..
    ಸರಳವಾಗಿ ವಿವಾಹವಾಗಬೇಕೆಂಬ ನಿಮ್ಮ ಆಸೆಗೆ ಹೃತ್ಪೂರ್ವಕ ಸ್ವಾಗತ. ಬೇಗ ಹುಡುಕಿ ಹುಡುಗಿಯನ್ನು... ನನಗೂ ನಿಮ್ಮ ಸರಳ ವಿವಾಹ ನೋಡುವ ಆಸೆ..(ನೀವು ಕರೆದರೆ)... ಧನ್ಯವಾದಗಳು.

    ಶಿವಪ್ರಕಾಶ್ ಸಾರ್...
    ಮನೆಯಲ್ಲಿ ಒಪ್ಪಿಸಿ, ಸರಳವಾಗೇ ಆದರೆ ಸಂಪ್ರದಾಯಬದ್ಧವಾಗಿ ವಿವಾಹವಾಗುವ ಪ್ರಯತ್ನ ಮಾಡಿ. ನಮ್ಮನ್ನೆಲ್ಲಾ ಕರೆಯಲು ಮರೆಯಬೇಡಿ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ಆಜಾದ್ ಸಾರ್..
    ನೀವು ಹೇಳಿದ್ದು ೧೦೦% ಸರಿ. ವಿವಾಹ ತಾನೆ ಸರಳವಾಗಿ ಆಗಲು ಹೇಳಿದ್ದು.. Reception ಅಲ್ಲವಲ್ಲಾ ಅಂತಾರೇನೋ? :-) ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  13. ತಮ್ಮಾ ವಿನಯ್...
    ನಿನ್ನ ಮಾತು ಅಕ್ಷರಶ: ಸತ್ಯ. ಆದರೆ ಇದನ್ನೆಲ್ಲಾ ಬೊಗಳೆ ಆಗಲು ಬಿಡದೆ ಆಚರಿಸುವುದು ನಿಮ್ಮ ಪೀಳಿಗೆಯ ಹುಡುಗ ಹುಡುಗಿಯರ ಕೈಯಲ್ಲೇ ಇದೆ ಅಲ್ಲಾ? ನಮ್ಮ ವಿವಾಹ ಅತ್ಯಂತ ಸರಳವಾಗಿ ರಾಯರ ಮಠದಲ್ಲಿ ಆಗಿತ್ತು.. ನಮ್ಮ ಅವಕಾಶ ಮುಗಿದಿದೆ ಕಣೋ ತಮ್ಮಾ... ಈಗ ನೀವು ಹೊಸ ಅಲೆ ಹುಟ್ಟು ಹಾಕಬೇಕು... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    :-)

    ReplyDelete
  14. ಪುರೋಹಿತರನ್ನು ಅಟಕಾಯಿಸುವ
    ಫೋಟೋಗ್ರಾಫರ್ ಗಳು
    ದೃಶ್ಯಗಳನ್ನೇ ನು೦ಗಿಬಿಡುವ
    ವಿಡಿಯೋಗ್ರಾಫರ್ ಗಳು
    ಹೋಮಕು೦ಡದ ಸುತ್ತಲೂ
    ಬೂಟಿನ ಗುರುತುಗಳು
    ಮದುವಣಿಗ-ಗಿತ್ತಿಯರ ಕೈ ಹಿಸುಕುವ
    ಹಾಯ್ ಹಾಯ್ ಗಳು..
    ..ಹೀಗೆ...ಮು೦ದುವರಿಸಬಹುದು
    ನಿಮ್ಮ ಅ೦ತರ೦ಗದ ಮಾತುಗಳಿಗೆ
    ನನ್ನ ಸ೦ಪೂರ್ಣ ಅನುಮೋದನೆ..

    ಅನ೦ತ್

    ReplyDelete
  15. ಅಣ್ಣಾ... ನಿಮ್ಮ ಪ್ರತಿಕ್ರಿಯೆ ರೂಪದ ಕವನ ಚೆನ್ನಾಗಿದೆ.... ನೀವು ಚೆನ್ನಾಗಿ ಬರೆಯುತ್ತೀರಿ.. ನಾನು ಸಂಪದದಲ್ಲಿ ನಿಮ್ಮ ಎಲ್ಲಾ ಕವನಗಳನ್ನೂ ಓದಿದೆ.. ಸೂಪರ್... ನೀವೇಕೆ ನಿಮ್ಮ ಬ್ಲಾಗ್ ತೆರೆದಿಲ್ಲ, ಶುರುಮಾಡಿ ಅಣ್ಣಾ ಚೆನ್ನಾಗಿರತ್ತೆ... ನಾವು ಓದಿದ ಪುಸ್ತಕಗಳು.. ಆಧ್ಯಾತ್ಮ ಎಲ್ಲವನ್ನೂ ಚರ್ಚೆ ಮಾಡಬಹುದು.... ಧನ್ಯವಾದಗಳು.

    ReplyDelete
  16. ಧನ್ಯವಾದಗಳು...ಸಿಸ್
    ಸಮಯದ ಅಭಾವ
    ಚಟುವಟಿಕೆಗಳ ಅಹ೦ಭಾವ!
    ತಯಾರಿ..ನಡೆಸುವ
    ಭಾವ-ಉದ್ಭವ..

    ವ೦ದನೆಗಳು...

    ReplyDelete