Saturday, January 2, 2010

ಚಂದದ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಶ್ರೀವತ್ಸ ಜೋಶಿಯವರ ಖಾಸಗಿ ಅಂಚೆ ನನ್ನ ಅಂಚೆ ಪೆಟ್ಟಿಗೆ ತಲುಪಿದಾಗ, ತುಂಬಾ ಖುಷಿಯಾಗಿತ್ತು. ತಮ್ಮೆಲ್ಲಾ ಅಭಿಮಾನಿಗಳಿಗೂ ಅವರು ಖಾಸಗಿಯಾಗಿ ಹೀಗೆ ಅಂಚೆ ಕಳುಹಿಸಿದ್ದರೆಂದು ತಿಳಿದು ಹರ್ಷವಾಯಿತು. ಅವರ ಲೇಖನಗಳನ್ನು ಒಂದೂ ಬಿಡದೆ ಓದುವ ಅಭಿಮಾನಿ ನಾನು. ಭಾನುವಾರದ ವಿಜಯ ಕರ್ನಾಟಕದ ಆಕರ್ಷಣೆಯೇ ನನ್ನ ಪಾಲಿಗೆ ಅವರ ಲೇಖನ. ಅವರ ಎರಡು ಪುಸ್ತಕಗಳ ಬಿಡುಗಡೆ ಇಲ್ಲೇ ಇಂಡಿಯನ್ ಇನ್ಸ್ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಎಂದು ನೋಡಿ, ನಿಜವಾಗಿ ನಾನು ಈ ದಿನಕ್ಕಾಗಿ ಎದುರು ನೋಡುತ್ತಿದ್ದೆ. ಸಧ್ಯಕ್ಕೆ ಬೇರಾವುದೇ ಅಡಚಣೆಯಾಗದೆ, ನಾನು ೧೦.೩೦ಕ್ಕೆ ಅಲ್ಲಿ ತಲುಪಿದಾಗ, ಆಗತಾನೆ ಕಾರ್ಯಕ್ರಮ ಶುರುವಾಗಿತ್ತು. ಈ ದಿನದ ಕಾರ್ಯಕ್ರಮದಲ್ಲಿ ನಾನು ಶ್ರೀಯುತರಾದ ಮಾಸ್ಟರ್ ಹಿರಣ್ಣಯ್ಯ, ಜಯಂತ್ ಕಾಯ್ಕಿಣಿ ಹಾಗೂ ಮುಖ್ಯವಾಗಿ ಶ್ರೀವತ್ಸ ಜೋಶಿಯವರ ಮಾತುಗಳನ್ನು ಕೇಳಲು ಉತ್ಸುಕಳಾಗಿದ್ದೆ. ಶ್ರೀವತ್ಸ ಜೋಶಿಯವರನ್ನು ನಾನು ಇದೇ ಮೊದಲ ಬಾರಿಗೆ ಭೇಟಿ ಮಾಡುವ ಅವಕಾಶವನ್ನು ತಪ್ಪಿಸಿಕೊಳ್ಳುವ ಇಷ್ಟ ನನಗೆ ಇರಲಿಲ್ಲ..... ಅಂತೂ ಅಲ್ಲಿ ತಲುಪಿ ಜಾಗ ಹುಡುಕಿ ಕುಳಿತಾಗ ನನಗೊಂತರ ಉದ್ವೇಗವಾಗಿತ್ತು....

ಕಾರ್ಯಕ್ರಮ ಪುಸ್ತಕ ಬಿಡುಗಡೆಯಿಂದ ಮೊದಲುಗೊಂಡು, ಅತ್ಯಂತ ಆತ್ಮೀಯವಾಗಿ ಜೋಶಿ ದಂಪತಿಗಳಿಗೆ ಸನ್ಮಾನ ಮೂಲಕ ಮುಂದುವರೆಯಿತು. ಅತಿಥಿಗಳೆಲ್ಲರೂ ಸೇರಿ ದಂಪತಿಗಳನ್ನು ಸನ್ಮಾನಿಸಿದ ರೀತಿ ನಿಜವಾಗಿ ಕಾರ್ಯಕ್ರಮಕ್ಕೆ ಒಂಥರಾ ನಮ್ಮ ಮನೆಯ ಯಾವುದೋ ಒಂದು ಕಾರ್ಯಕ್ರಮ ಎಂಬ ಭಾವನೆ ಬರುವಂತೆ ಮಾಡಿತು....

ಮೊದಲನೆಯದಾಗಿ ಶ್ರೀ ಜಯಂತ ಕಾಯ್ಕಿಣಿಯವರು ಮಾತನಾಡಿ ಎಂದಿನಂತೆ ತಮ್ಮ ಹಾಸ್ಯ ಮಿಶ್ರಿತ ಧಾಟಿಯಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟರು. ಮದುವೆಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೂ ಅಂತರ ಕಡಿಮೆಯಾಗುತ್ತಿದೆ ಎಂದು ನಗಿಸಿದರು... ಶ್ರೀವತ್ಸ ಜೋಶಿಯವರನ್ನು ಪರಿಚಯಿಸುತ್ತಾ "ಇವರನ್ನು ನೋಡಿದರೇ ಸಾಕು ಇವರದು ಸುಭಿಕ್ಷ ಮತ್ತು ಸೌಹಾರ್ದದ ವ್ಯಕ್ತಿತ್ವವೆನ್ನಿಸುತ್ತದೆ" ಎಂದರು. ಸ್ಪಂದನವಿಲ್ಲದ ಅಂಕಣ ಬರಹಗಳು ’ರದ್ದಿ’ಯಾಗುತ್ತದೆಂದೂ, ಜೋಶಿಯವರ ಅಂಕಣಗಳಿಗೆ ಪ್ರಪಂಚದ ಎಲ್ಲೆಡೆ ಅಭಿಮಾನಿಗಳಿದ್ದಾರೆಂದೂ ಹೇಳಿದರು. ಅಂಕಣ ಬರಹಗಳು ಅಹಂಕಾರವಿಲ್ಲದ, ನಿಸ್ವಾರ್ಥ ಆಂತರಿಕ ಮತ್ತು ಅತ್ಯಂತ ಪ್ರಾಮಾಣಿಕ ಬರಹಗಳಾಗಬೇಕು ಮತ್ತು ಜೋಶಿಯವರ ಬರಹಗಳು ಪೂರ್ವಗ್ರಹ ಮುಕ್ತವಾಗಿ, ಅತ್ಯಂತ ಪ್ರಭಾವಿತವಾಗಿರುತ್ತವೆಂದು ಹೇಳಿದರು. ಹೊರನಾಡಿನಲ್ಲಿರುವ ಕನ್ನಡಿಗರಾದ ಜೋಶಿಯವರು, ತಾನೇನೋ ಕಳೆದುಕೊಂಡಿದ್ದೇನೆಂಬ ಭಾವನೆ ಮೀರಿ, ಅತ್ಯಂತ ಸ್ವಾಭಾವಿಕವಾಗಿ ಬರೆಯುತ್ತಾರೆ ಮತ್ತು ಇವರ ಬರಹಗಳು ಡಿಟಿಪಿ ತಂತ್ರದ ಮೆರವಣಿಗೆಯಿಲ್ಲದ, ಅಂದರೆ ತಾಂತ್ರಿಕ ಸಹಾಯದಿಂದ ಸಾಲಂಕೃತಗೊಂಡ ಬರಹದಂತಿರದೆ, ಆತ್ಮೀಯವಾಗಿರುತ್ತದೆಂದರು. ಮಾಹಿತಿ ಎನ್ನುವುದನ್ನು ನಾವು ಹೀರಿಕೊಂಡು, ಅದು ನಮಗೆ ರಕ್ತಗತವಾಗಿ, ನಮ್ಮಿಂದ ನಮ್ಮತನದೊಂದಿಗೆ "ಬರಹ"ವಾಗಿ ಬಂದಾಗ, ಅದು ಪ್ರಾಮಾಣಿಕ ಬರಹವಾಗುತ್ತದೆ ಮತ್ತು ಜೋಶಿಯವರ ಬರಹಗಳು ನಮ್ಮನ್ನು, ಈ ಕಾರಣಕ್ಕೇ ಸೆಳೆಯುತ್ತವೆ ಎಂದರು. ಅಂಕಣಕಾರರಿಗೆ ಪ್ರತಿವಾರವೂ ಯಾವುದಾದರೊಂದು ವಿಷಯವನ್ನು, ಅಂಕಣಕ್ಕಾಗಿ ಹುಡುಕುವ ಆತಂಕವಿರುತ್ತದೆ, ಶ್ರೀ ಜೋಶಿಯವರು ಅಂಕಣ ಬರಹದ ಚೌಕಟ್ಟನ್ನು ಬಳಸಿ, ಇನ್ನೂ ಹೆಚ್ಚು ಸಾಹಿತ್ಯ ಕೃಷಿ ಮಾಡಲಿ ಮತ್ತು ನಾವು ಅವರ ಕಥೆ, ಪುಸ್ತಕಗಳನ್ನು ಓದುವಂತಾಗಲೆಂದು ಹಾರೈಸಿದರು.

ಕಾರ್ಯಕ್ರಮ ಮುಂದುವರೆದು, ಶ್ರೀ ಮಾಸ್ಟರ್ ಹಿರಣ್ಣಯ್ಯನವರ ಮಾತುಗಳು ಎಂದಿನಂತೆ ಅವರ ಪಂಚ್ ಡೈಲಾಗ್ ಗಳ ಸಮೇತ ಅತ್ಯಂತ ಆಕರ್ಷಕವಾಗಿಯೂ, ಅಷ್ಟೇ ಕಾಳಜಿಯುಕ್ತವೂ ಆಗಿತ್ತು. ಅಮೆರಿಕ ಮತ್ತು ಭಾರತ ನಡುವಿನ ಕೆಲವು ಸಾಂಸ್ಕೃತಿಕ ಅಂತರಗಳನ್ನು ಹೇಳುತ್ತಾ ಕಾಳಜಿ ವ್ಯಕ್ತಪಡಿಸಿದರು. ಅಲ್ಲಿಯ ಜನರು ತಮ್ಮ ದೇಣಿಗೆಗಳನ್ನು ಪುಸ್ತಕ ಭಂಡಾರಗಳಿಗೆ ಕೊಡುವುದನ್ನು, ನಾವಿನ್ನೂ ಕಲಿಯಬೇಕೆಂದರು..

ಕನ್ನಡದ ಏಳಿಗೆ, ಉದ್ಧಾರ ನಮ್ಮೆಲ್ಲರ ಭಾವನೆಗಳ ಸಮ್ಮಿಲನದಿಂದ ಆಗಬೇಕು, ಭಾವನಾ ಪ್ರಪಂಚ ಒಂದಾದರೆ, ಜ್ಞಾನದ ಪ್ರಭೆಗಳೆಷ್ಟಾದರೂ, ಎಲ್ಲೆಲ್ಲಿಂದ ಬಂದರೂ, ಎಲ್ಲಾ ಒಟ್ಟುಗೂಡಿ ಒಂದೇ ಒಂದು ಭಾಷೆಯಾಗಿ ಹೊರ ಹಾಕುವ ಮಾಧ್ಯಮವಾದರೆ, ಮಾರ್ಪಟ್ಟರೆ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯವೆಂದು ಹೇಳಿದರು. ನಮ್ಮತನ ಕಾಪಾಡಿಕೊಂಡು ನಾವು ಎಲ್ಲಿ ಬೇಕಾದರೂ ಬದುಕಲು ಕಲಿಯಬೇಕು ಆದರೆ ನಮ್ಮತನ ನಮ್ಮ ಭಾಷೆ, ನಮ್ಮ ಸಂಸ್ಕೃತಿ ಬಿಟ್ಟರೆ, ನಾವು ಎಲ್ಲಿಯೂ ಸಲ್ಲಲಾರೆವೆಂದರು..

ಶ್ರೀವತ್ಸ ಜೋಶಿಯವರು "ನಾನು ಅಂಕಣವನ್ನಾದರೂ ಬರೆದೇನು... ಭಾಷಣ ಕೊರೆಯಲಾರೆನು".. ಎನ್ನುತ್ತಲೇ ತಮ್ಮ ಹಿತ ಮಿತವಾದ ಮಾತುಗಳನ್ನು ಶುರು ಮಾಡಿದರು. ದಟ್ಸ್ ಕನ್ನಡ ಡಾಟ್ ಕಾಮ್ ನ ಶ್ರೀ ಶ್ಯಾಮ್ ಸುಂದರ್ ಮತ್ತು ಶ್ರೀ ವಿಶ್ವೇಶ್ವರ ಭಟ್ಟರು ಎಂಬ ಎರಡು ಮಹಾನ್ ಶಕ್ತಿಗಳು ನನ್ನ ಬರಹಗಳ ಹಿಂದಿದೆ ಎಂದು ಸ್ಮರಿಸಿದರು. ಓದುಗರ ಪ್ರತಿಕ್ರಿಯೆ, ಪ್ರೋತ್ಸಾಹವೇ ತಮ್ಮ ಬರಹಗಳಿಗೆ ಸ್ಫೂರ್ತಿಯೆಂದರು. ಆಂಗ್ಲ ಪದ LISTEN ಬಿಡಿಸಿ ಜೋಡಿಸಿದರೆ SILENT ಆಗುತ್ತದೆಂದೂ ತಾವು ಯಾವಾಗಲೂ ಸೈಲೆಂಟ್ ಆಗಿ ಹೆಚ್ಚು ಕೇಳಿಸಿಕೊಂಡರೆ, ಮುಂದೆ ವಿಷಯಗಳು ಬರಹಗಳ ಮೂಲಕ ಹೊರ ಹೊಮ್ಮುತ್ತದೆಂದು ತಿಳಿದಿರುವವನೆಂದರು. ತಮ್ಮ ಬರಹಗಳ ಮೂಲಕ, ಜೀವನ ಪ್ರೀತಿ ಬಿಂಬಿಸುವುದೇ ತಮ್ಮ ಉದ್ದೇಶವೆಂಬಂತಹ ಮಾತುಗಳನ್ನಾಡಿ, ತಮ್ಮ ಚಿಕ್ಕ ಚೊಕ್ಕ ಭಾಷಣ ಮುಗಿಸಿದರು.

ಕೊನೆಯದಾಗಿ ಮಾತನಾಡಿದವರು ಶ್ರೀ ವಿಶ್ವೇಶ್ವರ ಭಟ್ಟರು. ಶ್ರೀವತ್ಸ ಜೋಶಿಯವರು ತಮ್ಮ ಅಂಕಣ ಬರಹವನ್ನೆಂದೂ ತಪ್ಪಿಸಿಲ್ಲವೆಂದೂ, ಅಮೆರಿಕದಲ್ಲಿದ್ದೇ ಕನ್ನಡ ಬೆಳೆಸಿದವರು ಎಂದರು. ಜೋಶಿಯವರು ಅಮೆರಿಕದಲ್ಲಿ ನಡೆದ ಯಾವುದೋ ಒಂದು ಘಟನೆಯನ್ನು ಕರ್ನಾಟಕದಲ್ಲಿ ನಡೆದ ಒಂದು ಘಟನೆಗೆ ಹೋಲಿಸಿ ಬರೆಯುವ ವಿಶೇಷ ಪ್ರಯತ್ನ ಶ್ಲಾಘನೀಯವೆಂದರು. ವಿಜಯ ಕರ್ನಾಟಕದ breaking newsಗೆ ಪನ್ ಮಾಡುವ, ಕನ್ನಡದ ಎಲ್ಲಾ ಪತ್ರಿಕೆಗಳನ್ನೂ ಓದುವ, ಅಮೆರಿಕದಲ್ಲಿರುವ ಏಕೈಕ ಕನ್ನಡಿಗ ಶ್ರೀವತ್ಸ ಜೋಶಿಯವರೆಂದರು. ಶ್ರೀ ಜೋಶಿಯವರ ಬರಹಗಳಲ್ಲಿ ವೈಯೆನ್ಕೆಯವರ ಪ್ರಭಾವ ಗಾಢವಾಗಿದೆ ಮತ್ತು ಹೊಸ ಹೊಸ ಶೈಲಿಯ, ವಿವಿಧ ಅರ್ಥ ಬರುವ ಆಕರ್ಷಕ ತಲೆ ಬರಹಗಳಿಂದ ತಮ್ಮ ಲೇಖನ ಓದುವಂತೆ ನಮ್ಮನ್ನು ಪ್ರಚೋದಿಸುತ್ತಾರೆಂದರು. ಒಂದು ಸಣ್ಣ ವಿಚಾರ ಅಥವಾ ಎಳೆಯಿಂದ ಆರಂಭವಾದ ಅಂಕಣ ಕೊನೆಗೆ ಮುಗಿಯುವಾಗ ಒಂದು ವಿಶೇಷ ಅನುಭೂತಿ ಕಟ್ಟಿ ಕೊಡುತ್ತದೆಂದರು.

ಬರೆದು ಬರೆದೂ ಸಾಕಾಗಿದೆ ಎಂಬ ಭಾವ ಯಾವ ರೀತಿಯಲ್ಲೂ ಬಿಂಬಿಸದೇ ಬರೆಯುವ ತಾಳ್ಮೆ/ಜಾಣ್ಮೆ ಅಂಕಣಕಾರರಿಗಿರಬೇಕು, ಕನ್ನಡದಲ್ಲಿ ಅಂಕಣಕಾರರನ್ನು ಹುಟ್ಟು ಹಾಕುವುದು ಅತ್ಯಂತ ಪ್ರಯಾಸದ ಕೆಲಸ, ಸಮಯದ ವಿರುದ್ಧ ಹೋರಾಡುತ್ತಿರುವ ನಮ್ಮೆಲ್ಲರ ಮಧ್ಯದಲ್ಲಿ, ತಪ್ಪದೇ, ಪ್ರಾಮಾಣಿಕವಾಗಿ ಬರೆಯುವ ಶ್ರೀವತ್ಸ ಜೋಶಿಯವರು ಅಭಿನಂದನಾರ್ಹರು ಎಂದು ಮಾತು ಮುಗಿಸಿದರು.

ಈ ದಿನದ ಪುಸ್ತಕ ಬಿಡುಗಡೆ ಸಮಾರಂಭ, ನಾನು ಹಿಂದೆ ನೋಡಿದ ಅನೇಕ ಸಮಾರಂಭಗಳಿಗಿಂತ ಭಿನ್ನವಾಗಿತ್ತು. ಇಲ್ಲೊಂದು ಆತ್ಮೀಯತೆಯಿತ್ತು, ಆದರವಿತ್ತು, ಚೊಕ್ಕವಾಗಿತ್ತು. ಪುಸ್ತಕ ಕೊಂಡು, ಶ್ರೀವತ್ಸ ಜೋಶಿಯವರ ಹಸ್ತಾಕ್ಷರ ಹಾಕಿಸಿಕೊಂಡು, ಮನೆಗೆ ಬರುವಾಗ ಮನಸ್ಸೆಲ್ಲಾ ಪ್ರಫುಲ್ಲವಾಗಿತ್ತು. ಶ್ರೀ ಜೋಶಿಯವರನ್ನು ಭೇಟಿಯಾಗುವ ನನ್ನ ಆಸೆ ಇಷ್ಟು ಸುಲಭವಾಗಿ ಮತ್ತು ಇಷ್ಟು ಬೇಗ ನೆರವೇರುತ್ತದೆಂದು ನಾನು ಅಂದುಕೊಂಡಿರಲಿಲ್ಲ. ತಮ್ಮನ್ನು ಮಾತನಾಡಿಸಲು ಕಾದು ನಿಂತಿದ್ದ ಎಲ್ಲರ ಜೊತೆ ಹಸನ್ಮುಖರಾಗಿ ಮಾತನಾಡಿದ ಜೋಶಿಯವರು, ಜಯಂತ ಕಾಯ್ಕಿಣಿಯವರು ಹೇಳಿದಂತೆ ತುಂಬು ವ್ಯಕ್ತಿತ್ವವನ್ನು ಬಿಂಬಿಸಿದರು. ಶನಿವಾರದ ಬೆಳಗಿನ ಕಾರ್ಯಕ್ರಮ ನಿಜಕ್ಕೂ ಮುದಕೊಟ್ಟಿತು.

22 comments:

  1. ಶ್ಯಾಮಲ ಮೇಡಮ್,

    ಶ್ರೀವತ್ಸ ಜೋಶಿಯವರ ಭಾನುವಾರದ ಕಾಲಂ ತಪ್ಪದೇ ಓದುವುದರಲ್ಲಿ ನಾನು ಒಬ್ಬ. ನಾನು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬರಬೇಕೇಂದರೂ ಕೆಲಸ ಒತ್ತಡದಿಂದಾಗಿ ಬರಲಾಗಲ್ಲಿಲ್ಲವೆಂಬ ವಿಶಾಧವಿದೆ. ನೀವು ಭಾಗವಹಿಸಿ ಅಲ್ಲಿನ ಸಂಪೂರ್ಣ ವಿವರಣೆಯನ್ನು ನೀಡಿರುವುದು ನಾನು ಭಾಗವಹಿಸಿದಷ್ಟು ಖುಷಿಯಾಯಿತು...

    ReplyDelete
  2. ಶ್ರೀ ವತ್ಸ ಜೋಶಿಯವರ ಅಭಿಮಾನಿಗಳಲ್ಲಿ ನಾನೂ ಒಬ್ಬಳು.
    ಅವರ ಬಗೆಗಿನ ನಿಮ್ಮ ಬರಹ ಉತ್ತಮವಾಗಿದೆ.
    ವ೦ದನೆಗಳು.

    ReplyDelete
  3. ನಾನೂ ಕಾರ್ಯಕ್ರಮಕ್ಕೆ ಬಂದಿದ್ದೆ, ಕೊನೆವರೆಗೂ ಇದ್ದೆ. ಆದರೆ ನಿಮ್ಮ ಪರಿಚಯ ಇರದ ಕಾರಣ ಗುರುತು ಹಿಡಿಯಲು, ಮಾತನಾಡಿಸಲು ಆಗಲಿಲ್ಲ. ನೀವ೦ದ೦ತೆ ಈ ಪುಸ್ತಕ ಬಿಡುಗಡೆ ಆತ್ಮೀಯ ಮತ್ತು ಹೃದಯಸ್ಪರ್ಶಿ ಆಗಿತ್ತು ಎ೦ಬುದರಲ್ಲಿ ಎರಡು ಮಾತಿಲ್ಲ.

    ReplyDelete
  4. ಶ್ಯಾಮಲಾ ಮೇಡಂ,
    ವಿಜಯ ಕರ್ನಾಟಕದಲ್ಲಿ ತಪ್ಪದೆ ಓದುವ ಕಾಲಂ ಗಳಲ್ಲಿ, ಅವರ ಕಾಲಂ ಸಹ ಒಂದು.... ತುಂಬಾ ಇಂಟರೆಸ್ಟಿಂಗ್ ಆಗಿ ಬರೆಯುತ್ತಾರೆ..... ಅವರ ಪುಸ್ತಕ ಬಿಡುಗಡೆ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆ, ನಿಮ್ಮ ಲೇಖನ ಓದಿ ಭಾಗವಹಿಸಿದ ಅನುಭವವಾಯಿತು....ಧನ್ಯವಾದ......

    ReplyDelete
  5. ಶ್ಯಾಮಲಾರವರೆ...

    ಅಂದು ಬೆಳಗಿನಿಂದಲೇ ಬ್ಲಾಗ್ ಸ್ನೇಹಿತ "ನಮನಾ ಗಣೇಶ್" ಫೋನ್ ಮಾಡಿದ್ದರು..
    "ಕರ್ಯಕ್ರಮಕ್ಕೆ ಬರುತ್ತೀರಲ್ಲಾ..?"
    ಅಂದು ಶನಿವಾರ.. ಕೆಲಸಗಾರರಿಗೆ ಪೇಯ್ಮೆಂಟ್ ಕೊಡುವದಿನ..
    ಒಬ್ಬರ ಮನೆಯ ರೂಫ್ ಕಾಂಕ್ರೀಟ್ ಹಾಕುತ್ತಿದ್ದೆ..

    ಹೋಗಲೇ ಬೇಕಿತ್ತು...

    ಜೋಷಿಯವರನ್ನು, ನಮನಾ ಗಣೇಶ್ ಅವರನ್ನು ಭೇಟಿಯಾಗಲೇ ಬೇಕಿತ್ತು..

    ಅಲ್ಲಿ ಬಂದಾಗ ಹೊರಗಡೆ ನಾಗೇಶ್ ಹೆಗಡೆಯವರಿಂದ ಪ್ರೀತಿಯಿಂದ ಬೈಸಿಕೊಂಡೆ..
    ವಿಶ್ವೇಶ್ವರ್ ಭಟ್ ರವರ ಮಾತು ನಡೆಯುತ್ತಿತ್ತು..

    ಚಕಚಕನೆ ಹಲವರ ಫೋಟೊಗಳನ್ನು ತೆಗೆದು ಕೊಂಡೆ..

    ಅಷ್ಟರಲ್ಲಿ ಕಾರ್ಯಕ್ರಮ ಮುಗಿಯಿತು...
    ಜೋಷಿಯವರನ್ನೂ, ಗಣೇಶರನ್ನೂ ಭೇಟಿಯಾಗಿ ಬಂದೆ..

    ಆರ್ಕುಟ್ ನಲ್ಲಿ ಫೋಟೊ ಹಾಕುವೆ.. ದಯವಿಟ್ಟು ನೋಡಿ...

    ಕಾರ್ಯಕ್ರಮದ ಪೂರ್ತಿ ವಿವರ ಓದಿ ಖುಷಿಯಾಯಿತು..
    ಧನ್ಯವಾದಗಳು..

    ReplyDelete
  6. ಶ್ಯಾಮಲಾ,

    ಈ ಬಾರಿ ನಾನು ಜೋಶಿಯವರ ಪುಸ್ತಕ ಬಿಡುಗಡೆ ಸಮಾರಂಭವನ್ನು ತಪ್ಪಿಸಿಕೊಂಡೆ. ನಾನಂತೂ ಈ ಒಂದು ಅವಕಾಶ ನಿಜಕ್ಕೂ ಕಳೆದುಕೊಂಡೆ. ನಿಮ್ಮನ್ನೂ ಸಹ ಈ ಬಾರಿ ಭೇಟಿಯಾಗಬಹುದಿತ್ತು. ಕಾರಣ ಕಚೇರಿಗೆ ಬಿಡುವಿರದಿರುವುದು. ಅದೂ ಎರಡನೇ ದಿನವೇ ರಜೆ ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಹಾಗಾಗಿ ಕಾರ್ಯಕ್ರಮಕ್ಕೆ ಬರಲಿಲ್ಲ. ಸರಳ ನಿರೂಪಣೆಯಿಂದ ಪುಸ್ತಕ ಬಿಡುಗಡೆಯ ವಿಚಾರ ತಿಳಿಸಿದ್ದೀರಿ. ತುಂಬಾ ಖುಷಿಯಾಯಿತು. ಅವರ ವಿಚಿತ್ರಾನ್ನ ಪುಸ್ತಕದ ಎರಡೂ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ. ಅವರೊ ಜೊತೆ ಮಾತಾಡಿದ್ದೆ. ಅದೆಲ್ಲ ನೆನಪುಗಳೂ ಬಂದಿತು.

    ಈ ಬಾರಿ ನೀವು ಪ್ರಕಾಶ್ ಹೆಗ್ಡೆ, ಮುಂತಾದವರನ್ನು (ನೀವು ಬಲ್ಲ ಬ್ಲಾಗ್‌ ಮಿತ್ರ/ತ್ರೆ) ಯರನ್ನು ಭೇಟಿಯಾಗಿರಬಹುದು ಎಂದು ತಿಳಿಯುತ್ತೇನೆ.

    ಧನ್ಯವಾದಗಳು ಮತ್ತು ಸ್ನೇಹದಿಂದ,

    ಚಂದ್ರು

    ReplyDelete
  7. ಶಿವು ಸಾರ್...
    ನಿಜವಾಗಿ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ಎಲ್ಲರ ಮಾತುಗಳೂ ಪ್ರಭಾವಯುತವಾಗಿತ್ತು. ನಿಮಗೆ ನನ್ನ ವಿವರಣೆ ಇಷ್ಟವಾಗಿದ್ದಕ್ಕೆ ನನ್ನ ಧನ್ಯವಾದಗಳು.

    ReplyDelete
  8. ಚುಕ್ಕಿ ಚಿತ್ತಾರದ ಮೇಡಮ್...
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  9. ಪರಾಂಜಪೆ ಸಾರ್...
    ನಾನು ಶಿವು ಸಾರ್ ಅವರ ಪುಸ್ತಕ ಬಿಡುಗಡೆಗೆ ಬಂದಿದ್ದರೆ, ನಿಮ್ಮ ಪರಿಚಯ ಆಗಿರುತ್ತಿತ್ತು. :-( ಇಲ್ಲಿ ನಾನು ನಿಮ್ಮನ್ನು ನೋಡಿದ್ದರೂ ಗುರುತಿಸಲಾಗುತ್ತಿರಲಿಲ್ಲ... ಧನ್ಯವಾದಗಳು.

    ReplyDelete
  10. ದಿನಕರ್ ಸಾರ್...
    ಹೌದು ಅದೊಂದು ಒಳ್ಳೆಯ ಕಾರ್ಯಕ್ರಮ. ನನ್ನ ಲೇಖನ ನಿಮಗೆ ಭಾಗವಹಿಸಿದ ಅನುಭವ ಕೊಟ್ಟಿದ್ದರೆ, ನಾನು ಬರೆದಿದ್ದೂ ನಿಜಕ್ಕೂ ಸಾರ್ಥಕ. ಧನ್ಯವಾದಗಳು.

    ReplyDelete
  11. ಪ್ರಕಾಶ್ ಸಾರ್...
    ನಿಮ್ಮ ಪುಸ್ತಕ ಬಿಡುಗಡೆಯ ದಿನ ನಾನು ಬಂದಿದ್ದರೆ, ನನಗೆ ನಿಮ್ಮೆಲ್ಲರ ಪರಿಚಯ ಆಗುತ್ತಿತ್ತು. ಅನಿವಾರ್ಯ ಕಾರಣಗಳಿಂದ ನಾನು ಆ ಅವಕಾಶ ಕಳೆದುಕೊಂಡೆ. ನೋಡೋಣ ಮತ್ತೆ ಯಾವಾಗ ಸಿಗತ್ತೆ ಅಂತ? ನಾನು ಪೂರ್ತಿಯಾಗುವವರೆಗು ಇದ್ದೆ. ಸ್ವಲ್ಪ ನಿಧಾನಿಸಿ ನೋಡಿದ್ದರೆ, ಬಹುಶ: ನಿಮ್ಮ ಗುರುತು ಹಿಡಿಯಬಹುದಿತ್ತೇನೋ... :-( ಚಿತ್ರಗಳನ್ನು ಹಾಕಿ ಖಂಡಿತಾ ನೋಡ್ತೀನಿ. ಧನ್ಯವಾದಗಳು.

    ReplyDelete
  12. ಚಂದ್ರು ಅವರೆ...
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಎಂಥಾ ದುರದೃಷ್ಟ ಗೊತ್ತಾ ಚಂದ್ರು ಅವರೆ.. ನಾನು ನನ್ನ ಯಾವುದೇ ಮಿತ್ರರನ್ನು ಭೇಟಿಯಾಗಲಿಲ್ಲ. ಸಂಪದದ ಮಿತ್ರರೂ ಇದ್ದರಂತೆ... ಒಂದೇ ಅವಸರದಲ್ಲಿದ್ದ ನಾನು, ಜೋಶಿಯವರ ಸಹಿ ಪುಸ್ತಕದಲ್ಲಿ ಸಿಕ್ಕ ತಕ್ಷಣ ಹೊರಗೆ ಬಂದುಬಿಟ್ಟೆ. ನಿಜಕ್ಕೂ ಒಂದೊಳ್ಳೆ ಅವಕಾಶ ಕಳೆದುಕೊಂಡೆ. ಇನ್ನೊಮ್ಮೆ ಅವಕಾಶ ಸಿಕ್ಕರೆ ಖಂಡಿತಾ, ಬ್ಲಾಗ್ ಹಾಗೂ ಸಂಪದ ಮಿತ್ರರನ್ನು ಗುರುತಿಸಲು ಪ್ರಯತ್ನಿಸುತ್ತೇನೆ... :-((

    ReplyDelete
  13. ಜೋಷಿಯವರ ಬರಹಗಳು ವಿಚಾರಪೂರ್ಣವಾಗಿ ಹಾಸ್ಯವನ್ನೂ
    ಒಳಗೊಂಡಿರುತ್ತವೆ
    ಅವರ ಕಾರ್ಯಕ್ರಮ ವೀಕ್ಷಿಸಿದ ನೀವೇ ಪುಣ್ಯವಂತರು

    ReplyDelete
  14. ಡಾ.ಗುರು ಅವರೆ..
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಜೋಶಿಯವರ ಬರಹಗಳು ಎಲ್ಲಾ ವರ್ಗಗಳವರನ್ನೂ, ವಯಸ್ಸಿನವರನ್ನೂ ಆಕರ್ಷಿಸುವುದು ಅವರ ಹಾಸ್ಯಭರಿತ ಶೈಲಿಯಿಂದಲೇ.....

    ReplyDelete
  15. ಶ್ರೀಮತಿ ಶ್ಯಾಮಲಾ ರವರೆ,
    ಜೋಶಿ ಯವರ ಅಭಿಮಾನಿಗಳಲ್ಲಿ ನಾನು ಒಬ್ಬ. ಇನ್ನು ವಿಶ್ವೇಶ್ವರ ಭಟ್ಟರು, ಜಯಂತ್ ರವರು, ಮಾಸ್ಟರ್ ರವರು, ಎಲ್ಲರೂ ಸೇರಿದ್ದಾರೆಂದ ಮೇಲೆ ಅದೊಂದು ಸಾಹಿತ್ಯಲೋಕವೇ ಸರಿ...ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಹಾಗೇ ನನ್ನ ತಾಣಕ್ಕೂ ದೃಷ್ಟಿ ಹಾಯಿಸುತ್ತಿರಿ ಅಥವಾ ಹಿಂಬಾಲಿಸುತ್ತಿರಿ. ವಂದನೆಗಳು

    ReplyDelete
  16. ಶ್ಯಾಮಲ ಅವರೆ,

    ನಿಮ್ಮ ಈ ಸುಂದರ ಅನಿಸಿಕೆಯನ್ನು ಶ್ರೀವತ್ಸ ಅವರು ನನ್ನೊಂದಿಗೆ ಮೈಲ್‌ನಲ್ಲೂ ಹಂಚಿಕೊಂಡಿದ್ದರು. ತುಂಬಾ ಇಷ್ಟವಾಗಿತ್ತು. ಅವರ ಈ ಸಮಾರಂಭಕ್ಕೆ ಕಾರಣಾಂತರಗಳಿಂದ ಬರಲಾಗಲಿಲ್ಲ! ಆದರೆ ನಿಮ್ಮ ಈ ಸುಂದರ ವರದಿಯನ್ನೋದಿ ನೋಡಿದಷ್ಟೇ ಸಂತೋಷವಾಯಿತು.

    ಧನ್ಯವಾದಗಳು.

    ReplyDelete
  17. kaarya kramadalina ellara vichaara manthanagalanu chennagi grahisi namage kottiddiri onde hidiyalli dhanyavaadagalu...nimage

    ReplyDelete
  18. ಶ್ಯಾಮಲಾ ಮೇಡಮ್,

    ದಿನಾಂಕ ೧೦-೧-೨೦೧೦ರ ಭಾನುವಾರ ಬೆಳಿಗ್ಗೆ ೧೦-೩೦ ನಿಮಿಷಕ್ಕೆ ಮಣಿಕಾಂತ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ಇದೆ. ಅವತ್ತು ನಾನು ಬೇಗನೆ [ಹತ್ತುಗಂಟೆಗೆ]ಬರುತ್ತೇನೆ. ನೀವು ಬನ್ನಿ. ಅಲ್ಲಿ ನಾವೆಲ್ಲಾ ಬೇಟಿಯಾಗೋಣ...

    ReplyDelete
  19. ಸುಬ್ರಹ್ಮಣ್ಯ ಭಟ್ಟರಿಗೆ ನನ್ನ ಬ್ಲಾಗ್ ಲೋಕಕ್ಕೆ ಸ್ವಾಗತ....
    ಜೋಶಿಯವರು ನಿಜವಾಗಿ ಸಹೃದಯರು. ಅವರು ನಿನ್ನೆ ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಆ ದಿನ ಮಾತನಾಡಲು ಸಾಧ್ಯವಾಗಲಿಲ್ಲವೆಂದು ಹೇಳಿದರು. ನನಗಂತೂ ಅತ್ಯಂತ ಸಂತೋಷವಾಯಿತು. ಅವರ ವಿನಮ್ರತೆಯನ್ನು ಎಷ್ಟು ಹೊಗಳಿದರೂ ಸಾಲದು. ನನಗೆ ನಿನ್ನೆಯ ದಿನ ಮಹತ್ತರವಾದ ದಿನ.
    ನಿಮ್ಮ ತಾಣವನ್ನು ನಾನು ಅನುಸರಿಸುತ್ತಿದ್ದೇನೆ, ಆದರೆ ಗೂಗಲ್ ಖಾತೆ ಇಲ್ಲದಿರುವುದರಿಂದ, ನಿಮ್ಮ ಜಾಲತಾಣದ ವಿಳಾಸ cut and paste ಮಾಡಬೇಕಾಯಿತು.
    ಹೀಗೇ ನೀವು ನನ್ನ ಅಂತರಂಗದ ಮಾತುಗಳನ್ನೋದಲು ಬರುತ್ತಿರಿ...

    ReplyDelete
  20. ತೇಜಸ್ವಿನಿಯವರೆ....
    ಶ್ರೀವತ್ಸ ಜೋಶಿಯವರು ನನ್ನೊಡನೆ ಮಾತನಾಡಿದಾಗ, ಅವರು ತಮ್ಮ ಸ್ನೇಹಿತರೊಡನೆ ಈ ಮೈಲ್ ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದನ್ನು ಹೇಳಿದರು. ಅವರ ಜೊತೆ ಮಾತನಾಡಿ ನನಗೆ ತುಂಬಾ ಸಂತಸವಾಯಿತು. ಶ್ರೀ ಸುಬ್ರಹ್ಮಣ್ಯ ಭಟ್ಟರ ಪ್ರತಿಕ್ರಿಯೆಗೆ ನನ್ನ ಉತ್ತರ ನೋಡಿ.. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ, ನಿಮ್ಮ ಪ್ರತಿಕ್ರಿಯೆಗಳು ನನಗೆ ಬರೆಯುವ ಉತ್ಸಾಹ ಕೊಡುತ್ತದೆ.

    ReplyDelete
  21. ಶಿವು ಸಾರ್....
    ೧೦ನೇ ತಾರೀಖು ನಾನು ಊರಿನಲ್ಲಿರೋಲ್ಲ. ಮತ್ತೆ ಅವಕಾಶ ಕಳೆದು ಹೋಗುತ್ತಿದೆ...:-( ನೋಡೋಣ ನಿಮ್ಮೆಲ್ಲರನ್ನು ಭೇಟಿಯಾಗುವ ಅದೃಷ್ಟ ಯಾವಾಗ ಬರುತ್ತೆ ಅಂತ... ಧನ್ಯವಾದಗಳು...

    ReplyDelete
  22. ಶ್ಯಾಮಲಾವ್ರೇ, ನಾಡಿನಿಂದ ಹೊರಗಿದ್ದೂ ನಿಮ್ಮೆಲ್ಲರ ಬ್ಲಾಗುಗಳ ಮೂಲಕ, ಇಂತಹ ಪುಸ್ತಕ ಬಿಡುಗಡೆ ಸಮಾರಂಭಗಳ ಪ್ರೊಸೀಡಿಂಗ್ಸ್ ಹೀಗೆ ಹತ್ತು ಹಲವು ಗವಾಕ್ಷಿಗಳ ಮೂಲಕ ನಮಗೆ ನಾಡಿನ ನುಡಿ ಸೇವೆಯ ಬಗ್ಗೆ ತಿಳೀತಿರುತ್ತೆ. ಧನ್ಯವಾದ ಒಳ್ಳೆಯ ಪರಿಚಯ.

    ReplyDelete