Monday, March 29, 2010

ಪುಸ್ತಕ ಪರಿಚಯ - ೫

ಮುಕ್ತಿ :

ಕಾದಂಬರಿ ಆರಂಭವೇ... "ನಾನು ಏನೂ ಮಾಡ್ತಿಲ್ಲ, ಮುದುಕಿಯಾಗ್ತಿದೀನಿ..." ಎಂದುಲಿಯುವ ಅಮೃತಾಳ ಮಾತು ಒಮ್ಮೆಲೇ ನನ್ನನ್ನು ದಿಗ್ಭ್ರಮೆಗೊಳಿಸಿತು... ತ್ರಿವೇಣಿಯವರೇನಾದರೂ ನನ್ನ ಮನಸ್ಸಿನ ತಾಕಲಾಟಗಳನ್ನೋದಿ ಬರೆದರಾ ಎಂಬಂತೆ......

ಕಪ್ಪಗಿದ್ದವರಿಗೆ ಚೇಳು ಕಡಿದರೆ ವಿಷವೇರುವುದಿಲ್ಲವೆಂಬ ರತ್ನಳ ಮಾತು ನಮ್ಮ ಸಮಾಜ, ಕಪ್ಪಗಿರುವವರನ್ನೂ, ಕುರೂಪಿಗಳನ್ನೂ ನಡೆಸಿಕೊಳ್ಳುವ ರೀತಿಯನ್ನು ಲೇಖಕಿ ಎಷ್ಟು ಚೆನ್ನಾಗಿ ಬಿಚ್ಚಿಟ್ಟಿದ್ದಾರೆ. ಬದುಕಿನಿಂದ ಏನನ್ನೂ ಬಯಸಬಾರದು. ಬದುಕು ಏನು ಕೊಟ್ಟರೂ ಸ್ವೀಕರಿಸುತ್ತೇನೆ... ಆಸೆಯೇ ಇಲ್ಲದಿದ್ದರೆ ನಿರಾಸೆ ಎಲ್ಲಿಂದ ಬರುವುದು?..... ಎಂಥಹ ಮುತ್ತಿನಂತಹ ಮಾತುಗಳನ್ನೂ ಹೇಳಿದ್ದಾರೆ ಕಥೆಯ ಪಾತ್ರದ ಮೂಲಕ.

ಎಷ್ಟೇ ಹಸಿವಾದರೂ ಉಪವಾಸವಾದರೂ ಸಾಯುತ್ತೇನೆ, ಆದರೆ ಕದ್ದು ಮಾತ್ರ ತಿನ್ನುವುದಿಲ್ಲ ಎಂದು ನಾಯಕಿ ಅಮೃತಾಳ ಹತ್ತಿರ ಹೇಳಿಸುವಾಗ ಲೇಖಕಿ, ನಮಗೆ ಅಮೃತಾಳ ದಿಟ್ಟತನ, ನೇರನುಡಿ, ಸ್ವಚ್ಛ ಮನಸ್ಸನ್ನು ಬಿಂಬಿಸುತ್ತಾರೆ.

ಮುವ್ವತ್ತು ದಾಟಿದರೂ ಮದುವೆಯಾಗದ ಅಮೃತಾ ತಮ್ಮನ ಸಂಸಾರದ ಜೊತೆ ಮುಂಬೈಗೆ ಬಂದು ನೌಕರಿ ಹುಡುಕಿಕೊಂಡು ಅಲ್ಲಿ ಕೇಶವನನ್ನು ಪ್ರೀತಿಸುತ್ತಾಳೆ. ಎಲ್ಲವೂ ಸರಾಗವಾಗಿ ಸಾಗುತ್ತಿರುವಾಗ, ಹಟಾತ್ತಾಗಿ ಕೇಶವ ತನಗೆ ಮದುವೆಯಾಗಿದೆಯೆಂದು ಹೇಳುವುದರ ಮುಖಾಂತರ ಕಥೆಗೊಂದು ತಿರುವು ಬರತ್ತೆ. ಮೋಸದಿಂದ ಕ್ಷಯ ರೋಗಿಯನ್ನು ಮದುವೆ ಮಾಡಿಬಿಟ್ಟು, ತಂದೆ - ಮಗಳಿಬ್ಬರೂ ಕೇಶವನ ಮನಸ್ಸಿಗೆ ಘಾಸಿ ಮಾಡಿರುತ್ತಾರೆ. ಆದರೆ ಕೇಶವನನ್ನು ಪ್ರೀತಿಸಿದ ಅಮೃತಾ ಹೆಂಡತಿ ಬದುಕಿರುವಾಗ, ತಾನು ಕೇಶವನನ್ನು ಮದುವೆಯಾಗುವುದಿಲ್ಲವೆಂದು ಬಿಡುತ್ತಾಳೆ. ಕೊನೆಯಲ್ಲಿ ಅಮೃತಾ ಬಯಸಿದಂತೆಯೇ, ಒಂಟಿಯಾಗಿ (ವಿಧುರನಾಗಿ)ಕೇಶವ ಅವಳ ಬಳಿ ತಿರುಗಿ ಬರುವುದರೊಂದಿಗೆ ಕಥೆ ಸುಖಾಂತ್ಯವಾಗುತ್ತದೆ.

ಕಥೆಯಲ್ಲಿ ಕೇಶವನಿಗೆ ಮೊದಲು ಮದುವೆಯಾಗಿತ್ತೆಂಬ ತಿರುವು ಅವಶ್ಯಕವಿತ್ತೋ ಇಲ್ಲವೋ... ಆದರೆ ಇದೇ ತಿರುವಿನಿಂದ ಅಮೃತ ಮದುವೆಗೆ ನಿರಾಕರಿಸುವುದರ ಮುಖಾಂತರ, ಮತ್ತೊಮ್ಮೆ ಲೇಖಕಿ, ನಾಯಕಿಯ ವ್ಯಕ್ತಿತ್ವವನ್ನು ಗಟ್ಟಿಯಾದ ಮತ್ತು ತುಂಬಾ ಸ್ವಾರ್ಥರಹಿತವೆಂಬಂತೆ ಚಿತ್ರಿಸಿದ್ದಾರೆ.


ಬೆಳ್ಳಿಮೋಡ :

ತ್ರಿವೇಣಿಯವರ ಪುಸ್ತಕಗಳೆಲ್ಲವು ಶ್ರೇಷ್ಠವಾದವುಗಳೇ ಆದರೂ, ಅದರಲ್ಲಿ ಚಲನಚಿತ್ರವಾಗಿ, ನಮ್ಮ ನೆನಪಿನಂಗಳದಲ್ಲಿ ಆಳವಾಗಿ ಬೇರೂರಿರುವ ಕೆಲವು ಕಥೆಗಳಲ್ಲಿ ಬೆಳ್ಳಿಮೋಡವೂ ಒಂದು.

ಇದರ ಕಥಾನಾಯಕಿ ಇಂದಿರಾ ಸಾಮಾನ್ಯ ರೂಪದವಳಾದರೂ, ಉನ್ನತ ವ್ಯಕ್ತಿತ್ವ ಹೊಂದಿದವಳು. ಅಕಸ್ಮಾತ್ತಾಗಿ ತುಂಬಾ ವರ್ಷಗಳ ನಂತರ ಹುಟ್ಟಿದ ತಮ್ಮನಿಗಾಗಿ ತನ್ನ ಜೀವನ ಮುಡಿಪಾಗಿಡ ಬಯಸುವ ಹೆಣ್ಣು. ತಾನು ಮನಸಾರ ಪ್ರೀತಿಸಿದ ಯುವಕನ ದುರ್ಬಲ ವ್ಯಕ್ತಿತ್ವ ಕಂಡು ಮದುವೆಯನ್ನು ನಿಲ್ಲಿಸಲು ತಾನೇ ತಂದೆಯ ಹತ್ತಿರ ಮಾತನಾಡುವ ದಾಷ್ಟೀಕದ ಹೆಣ್ಣು....

ಕಾಲು ಮುರಿದುಕೊಂಡು ಕುಳಿತ ನಾಯಕನ ಸೇವೆ ನಿರ್ವಂಚನೆಯಿಂದ ಮಾಡಿದಾಗ, ನಾಯಕ ಅವಳ ವ್ಯಕ್ತಿತ್ವಕ್ಕೆ ಮನಸೋತರೂ, ಅವನನ್ನು ವರಿಸಲು ಒಲ್ಲೆನೆಂದು ತನ್ನ ಧೃಡ ನಿರ್ಧಾರ, ಆತ್ಮ ಗೌರವ ಮೆರೆಸುವ ಹೆಣ್ಣು... ಸ್ವಾರ್ಥ ಮೆರೆದ ನಾಯಕ ಜೀವನದಲ್ಲಿ ಇಂದಿರಳಂತಹ ಅಪರಂಜಿಯನ್ನು ಕಳೆದುಕೊಂಡು ಬಿಡುತ್ತಾನೆ....

ಎರಡು ಕಥೆಗಳನ್ನೂ ಹೋಲಿಸಿದಾಗ ತ್ರಿವೇಣಿಯವರು ತಮ್ಮ ಕಾಲದಲ್ಲಿಯೇ ಹೆಣ್ಣು ದಿಟ್ಟೆ, ಬದುಕನ್ನು ಎದುರಿಸಬಲ್ಲ ಚಾಣಾಕ್ಷೆ, ಸ್ವತಂತ್ರ್ಯವಾಗಿ ವಿಚಾರ ಮಾಡಬಲ್ಲವಳು, ಸಮರ್ಪಕ ನಿರ್ಧಾರಗಳನ್ನು ತೆಗೆದು ಕೊಳ್ಳಬಲ್ಲವಳು ಎಂಬುದನ್ನು ಕಥಾ ಪಾತ್ರಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ತ್ರಿವೇಣಿಯವರ ಕಾಲ ಘಟ್ಟದಲ್ಲಿ ಈ ಪ್ರಯತ್ನ ಅತ್ಯಂತ ಶ್ಲಾಘನೀಯ........

24 comments:

  1. ಚುಟುಕಾಗಿ, ಸರಳವಾಗಿ, ತ್ರಿವೇಣಿಯವರ ಮುಕ್ತಿ ಹಾಗೂ ಬೆಳ್ಳಿಮೋಡ ಕಾದಂಬರಿಯ ಬಗ್ಗೆ ತಿಳಿಸಿದ್ದೀರಿ. ಧನ್ಯವಾದಗಳು. ನೀವು ಬಹುಶ: ತ್ರಿವೇಣಿಯವರ ಅಭಿಮಾನಿ ಇರಬಹುದೆ?

    ಸ್ನೇಹದಿಂದ,

    ReplyDelete
  2. ಬೆಳ್ಳಿಮೋಡ ಸಿನೆಮಾ ನೋಡಿದ್ದೇನೆ. ಕಾದಂಬರಿ ಇನ್ನೂ ಸೊಗಸಾಗಿರುತ್ತದೆ ಬಿಡಿ. ಎರಡು ಕಾದಂಬರಿಗಳ ಬಗ್ಗೆ ಸಂಕ್ಶಿಪ್ತವಾಗಿ ಅರ್ಥಪೂರ್ಣವಾಗಿ ತಿಳಿಸಿದ್ದಕ್ಕೆ ಧನ್ಯವಾದ.

    ReplyDelete
  3. ನಾನೂ ತ್ರಿವೇಣಿಯವರ ಬರಹ ಅಭಿಮಾನಿ
    ಅವರ ಕಾದಂಬರಿಗಳ ಹುಚ್ಚ
    ನಿಮ್ಮ ಬರಹ ಹಿಡಿಸಿತು

    ReplyDelete
  4. Dear mami,neevu barediruva pustakaparichaya tumba sundaravaagide,hage it gives a lot of food for thought. In this era where every film star male/female is endorsing fairness creams and showing the world that success can be acheived only if u are fair,is an eye opener.Success and happiness does not come with outside beauty but with a strong personality and will to acheive what u want to acheive.Our students should actually study such novels to learn the realtiy of life..

    ReplyDelete
  5. ಶ್ಯಾಮಲ ಅವರೆ,

    ನನ್ನ ಅಚ್ಚುಮೆಚ್ಚಿನ ಲೇಖಕಿಯ ಎರಡು ಉತ್ತಮ ಕಾದಂಬರಿಗಳ ಬಗ್ಗೆ ಬರೆದಿದ್ದೀರಿ. ತುಂಬಾ ಚೆನ್ನಾಗಿದೆ ನಿಮ್ಮ ಅಭಿಪ್ರಾಯಗಳು. ಅಂದಿನ ಕಾಲದಲ್ಲೂ ಹೆಣ್ಣು ದಿಟ್ಟೆಯಾಗಿ ಸೂಕ್ತ ನಿರ್ಧಾರಗಳನ್ನು ನಿರ್ಭಯವಾಗಿ ನಿಸ್ವಾರ್ಥವಾಗಿ ತೆಗೆದುಕೊಳ್ಳುತ್ತಿದ್ದಳೆಂಬುದನ್ನು ತುಂಬಾ ಚೆನ್ನಾಗಿ, ಸುಂದರವಾಗಿ ನಿರೂಪಿಸಿದ್ದಾರೆ ತ್ರಿವೇಣಿಯವರು. ಹಾಗೆ ನೋಡಿದರೆ ಇಂದಿನ ಹೆಣ್ಣಿನ ಮನಃಸ್ಥಿತಿಗಿಂತ ಅಂದಿನ ಹೆಣ್ಣಿನ ಮನಃಸ್ಥಿತಿಯೇ ಹೆಚ್ಚು ಸ್ಥಿರ, ಗಟ್ಟಿ ಹಾಗೂ ನಿಸ್ವಾರ್ಥವಾಗಿತ್ತು ಎಂದೆನಿಸುತ್ತದೆ ಒಮ್ಮೊಮ್ಮೆ... ಮಾನಸಿಕ ತುಮುಲಗಳನ್ನು, ಭಾವಗಳನ್ನು, ಘರ್ಷಣೆಗಳನ್ನು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಈ ಲೇಖಕಿ. ಇವರ ಇನ್ನೊಂದು ಉತ್ತಮ ಕಾದಂಬರಿಯಾದ "ಹಸಿರು ಕಣ್ಣು" ಕೂಡ ತುಂಬಾ ಚೆನ್ನಾಗಿದೆ. (ಹೆಸರು ತಪ್ಪಾಗಿರಬಹುದು... "ಬೆಕ್ಕಿನ ಕಣ್ಣು" ಎಂದೂ ನೆನಪಾಗುತ್ತಿದೆ... ತುಂಬಾ ಹಿಂದೆ ಓದಿದ್ದು. ನಿಮಗೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ..)

    ಧನ್ಯವಾದಗಳು.

    ReplyDelete
  6. ಚಂದ್ರೂ...
    ತ್ರಿವೇಣಿಯವರ ಕಾದಂಬರಿಗಳೇ ಸರಳ ನಿರೂಪಣೆಯುಳ್ಳವು. ಇರಬಹುದೇ ಎಂಬ ಅನುಮಾನವೇ ಬೇಡ ನಿಮಗೆ,ಹೌದು ನಾನು ಅವರ ಅಭಿಮಾನಿಯೇ....
    ಧನ್ಯವಾದಗಳು....

    ಸುಬ್ರಹ್ಮಣ್ಯರೇ...
    ಸಿನೆಮಾ ನೋಡಿದ್ದೇನೆ ಎಂದಿರಿ... ಈಗ ಕಾದಂಬರಿಯನ್ನೂ ಓದಿ... ಖಂಡಿತಾ ಸೊಗಸಾಗಿದೆ. ಧನ್ಯವಾದಗಳು...

    ಡಾ. ಗುರು ಅವರೇ...
    ತ್ರಿವೇಣಿಯವರ ಕಾದಂಬರಿಗಳಿಗೆ ನಿಜವಾಗಿ ಯಾವ ಪರಿಚಯವೂ ಬೇಡ.. ಆದರೆ ಅಕಸ್ಮಾತ್ ಗೊತ್ತಿಲ್ಲದಿದ್ದರೆ, ನಮ್ಮ ಯುವ ಜನಾಂಗ ಸ್ವಲ್ಪ ಅತ್ತಕಡೆ ಕಣ್ಣು ಹಾಯಿಸಲೆಂದು ಈ ಪ್ರಯತ್ನ ಅಷ್ಟೆ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು..

    ReplyDelete
  7. ಕ್ಷಮಾ...
    ಬಹಳ ದಿನಗಳ ನಂತರ ಮತ್ತೆ ಬಂದಿದ್ದೀರಿ...:-) ಹೌದು ಮುಖ್ಯವಾಗಿ ನಮ್ಮ ಯುವ ಜನಾಂಗದವರು ಈ ಪುಸ್ತಕಗಳನ್ನು ಓದಲು ಶುರು ಮಾಡಬೇಕು. ನಮ್ಮ ಜೀವನದಲ್ಲೇ ನಡೆಯುವ, ಸುತ್ತಮುತ್ತಲ, ನೆರೆ ಹೊರೆಯ ಮನೆಗಳಲ್ಲಿ ನಡೆಯುವ ಘಟನೆಗಳ ಸುತ್ತಲೂ ಹೆಣೆಯಲ್ಪಟ್ಟಿದ್ದ ಅಂದಿನ ಈ ಕಾದಂಬರಿಗಳು, ಇಂದಿಗೂ ಮತ್ತು ಎಂದಿಗು ಪ್ರಸ್ತುತ. ಈ ಶತಮಾನದ ಮಾದರಿ ಹೆಣ್ಣು ಹೇಗೆ ತನ್ನ ಗಟ್ಟಿ ವ್ಯಕ್ತಿತ್ವ ಮತ್ತು ದಿಟ್ಟತನದಿಂದ ಎಲ್ಲವನ್ನೂ ಎದುರಿಸಬಲ್ಲಳು ಎಂಬುದೇ ತ್ರಿವೇಣಿಯವರ ಕಾದಂಬರಿಗಳ ವೈಶಿಷ್ಟ್ಯ... ಧನ್ಯವಾದಗಳು.......

    ReplyDelete
  8. ತೇಜಸ್ವಿನಿಯವರೇ...
    ನನ್ನ ಮೆಚ್ಚಿನ ಲೇಖಕಿಯನ್ನು ನೀವೂ ಮೆಚ್ಚುವುದು ನನಗೆ ತುಂಬಾ ಸಂತೋಷ. ಖಂಡಿತಾ ಸರಿ, ಅಂದಿನ ಹೆಣ್ಣಿನ ಗಟ್ಟಿತನದ ಮುಂದೆ ನಾವೆಲ್ಲಾ ಸ್ವಲ್ಪ ಸಪ್ಪೆಯೇನೋ ಅನ್ನಿಸುತ್ತೆ. ಮಾನಸಿಕ ತುಮುಲಗಳನ್ನು ಎದುರಿಸಲು ನಾವುಗಳು ಪಡಬಾರದ ಕಷ್ಟಗಳನ್ನು ಪಡುತ್ತೇವೆ, ಆದರೆ ಆಗಿನ ಅವರ ನಿರ್ಧಾರಗಳು ಸ್ಪಷ್ಟ ಹಾಗೂ ಅಚಲವಾಗಿರುತ್ತಿದ್ದವು. ಬಹುಶ: ಅದಕ್ಕೆ ಕಾಲಘಟ್ಟವೂ ಕಾರಣವಿರಬಹುದು. ಹೆಣ್ಣು ಮಾನಸಿಕವಾಗಿ, ದೈಹಿಕವಾಗಿ ಘರ್ಷಣೆ ಎದುರಿಸುವ ಈಗಿನ ಪರಿ ಬೇರೆಯೇ ರೀತಿಯದಾಗಿದೆ... "ಬೆಕ್ಕಿನ ಕಣ್ಣು" ಪುಸ್ತಕದ ಬಗ್ಗೆ ಮುಂದೆ ಬರೆಯುತ್ತೇನೆ... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.....

    ReplyDelete
  9. ತ್ರಿವೇಣಿಯವರ ಕಾದ೦ಬರಿಗಳು ಚಿ೦ತನೆಯ ಚಿಲುಮೆಗಳು. ಮಡಿವ೦ತಿಗೆಯ ಕಾಲದಲ್ಲಿ ಹೆಣ್ಣಿನ ದನಿಯಾಗಿ-ಅವಳಲ್ಲಿ ವೈಚಾರಿಕ ಮತ್ತು ಸೈಧ್ಧಾ೦ತಿಕ ನಿಲುವಿನಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಅವರು ರೂಪಿಸಿದ ಪಾತ್ರಗಳು ಮಹಿಳಾ ಜಾಗೃತಿಯನ್ನೆ ಉ೦ಟು ಮಾಡಿದ ಕಾಲವದು. ಚೆ೦ದದ ಕಾದ೦ಬರಿಗಳನ್ನು ನೆನಪಿಸಿದ್ದಲ್ಲದೇ ತ್ರಿವೇಣಿಯವರ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  10. ಧನ್ಯವಾದಗಳು ಸೀತಾರಾಮರವರೇ....
    ತ್ರಿವೇಣಿಯವರ ಒಂದೊಂದು ಕೃತಿಯೂ ಆಣಿಮುತ್ತುಗಳು. ನಮ್ಮ ಕನ್ನಡ ಸಿನೆಮಾ ಪ್ರಪಂಚದವರಿಗೆ ಮನೆಯವರೆಲ್ಲಾ ಕುಳಿತು ನೋಡುವಂತಹ ಆರೋಗ್ಯಕರ ಸಿನೆಮಾ ಮಾಡಲು ಕಥೆ ಹುಡುಕಿಕೊಂಡು ಅಲೆಯಬೇಕಿಲ್ಲ. ಆದರೇಕೋ ಕಾದಂಬರಿ ಆಧಾರಿತ ಚಿತ್ರಗಳತ್ತ ಒಲವು ತೋರದೆ ಬರಿಯ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ತರುವತ್ತಲೇ ಹೆಚ್ಚು ಒಲವು ತೋರುತ್ತಾರೆ.

    ReplyDelete
  11. ಹೌದು..

    ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/

    ReplyDelete
  12. ಗುರು-ದೆಸೆಯವರೇ....
    ಧನ್ಯವಾದಗಳು........

    ReplyDelete
  13. haleya nenapante olleya kaadambari,,kate cinemagalu namma manadali uliyuttave hasi hasiraagi...

    ReplyDelete
  14. ನಮಸ್ಕಾರ ಈಶ್...

    ನನ್ನ ಬ್ಲಾಗ್ ಲೋಕಕ್ಕೆ ಸ್ವಾಗತ.... ಒಳ್ಳೆಯ ಕಥೆ, ಸಿನೆಮಾಗಳು ಖಂಡಿತವಾಗಿ ನಮ್ಮ ಮನಸ್ಸಿನಾಳದಲ್ಲಿ ಹಸಿರಾಗೇ ಇರತ್ತೆ.. ಯಾರಾದರೂ ಅದರ ಸುದ್ದಿ ಎತ್ತಿದರೆ ಸಾಕು ಎಲ್ಲವೂ ಮೇಲೆದ್ದು ಬಂದು ಆವರಿಸಿಕೊಂಡು ಬಿಡುತ್ತವೆ. ಎಂದೋ ಓದಿದ ಒಂದು ಕಥೆಯನ್ನೋ, ನೋಡಿದ ಸಿನೆಮಾವನ್ನೋ ಮೆಲುಕು ಹಾಕುವುದು ಎಷ್ಟು ಸುಂದರ ಅನುಭವ ಅಲ್ಲವೇ... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  15. ತ್ರಿವೇಣಿಯವರ ಅನೇಕ ಕಾದಂಬರಿಗಳನ್ನು ವಿದ್ಯಾರ್ಥಿದೆಸೆಯಲ್ಲಿ ಓದುತ್ತಿದ್ದೆ, ಈಗ ಸಮಯವಂಚಿತನಾಗಿ ಸುಮ್ಮನಿರುತ್ತೇನೆ, ಕಾರ್ಯಬಾಹುಳ್ಯಗಳ ನಡುವೆ ಓದಲು ಆಗುತ್ತಲೇ ಇಲ್ಲ, ಒಮ್ಮೆ ಧಾರವಾಡದ ಒಂದು ಪುಸ್ತಕದ ಅಂಗಡಿಗೆ ಹೋಗಿ ತ್ರಿವೇಣಿಯವರು ಅಲ್ಲೇ ಎಲ್ಲೋ ಇರಬೇಕೆಂಬ ಹುಡುಕಾಟ ನಡೆಸಿದ್ದೆ, ಅದಾಗಲೇ ಅವರು ಗತಿಸಿದ್ದರು, ಅವರ ಬೆಕ್ಕಿನ ಕಣ್ಣು ಸ್ವಲ್ಪ ಜಾಸ್ತಿ ಕೆರಳಿಸಿದ ಕಾದಂಬರಿ, ತಮ್ಮ ಮಾಹಿತಿಗೆ-ನೆನಪಿನ ಕೆದಕುವಿಕೆಗೆ ಧನ್ಯವಾದಗಳು.

    ReplyDelete
  16. ಧನ್ಯವಾದಗಳು ಭಟ್ ಸಾರ್...
    ತ್ರಿವೇಣಿಯವರ ಕಾದಂಬರಿಗಳು ಸಿಕ್ಕರೆ, ನಾನು ಹೇಗಾದರು ಸಮಯ ಹೊಂದಿಸಿ ಕೊಂಡು ಬಿಡುತ್ತೇನೆ ಓದಲು.... ’ಬೆಕ್ಕಿನ ಕಣ್ಣು’ ನನಗೂ ಇಷ್ಟವಾದ ಪುಸ್ತಕ. ಸಿಕ್ಕರೆ ಓದಿ, ಅದರ ಬಗ್ಗೆ ನನಗನಿಸಿದ್ದನ್ನು ಬರೆಯುತ್ತೇನೆ... ನಿಮಗೂ ನೆನಪಾಗಬಹುದು ಅದರ ಸನ್ನಿವೇಶಗಳು....

    ReplyDelete
  17. ತ್ರಿವೇಣಿಯವರ ಎರಡು ಕಾದ೦ಬರಿಗಳನ್ನು ಚೊಕ್ಕ ಶಬ್ದಗಳಲ್ಲಿ ಚಿಕ್ಕದಾಗಿ,ಸು೦ದರವಾಗಿ ಪರಿಚಯಿಸಿರುವಿರಿ.. ಧನ್ಯವಾದಗಳು.

    ReplyDelete
  18. ಶ್ಯಾಮಲ ಮೇಡಮ್,

    ಇವತ್ತು ಬಿಡುವು ಮಾಡಿಕೊಂಡು ಎಲ್ಲರ ಬ್ಲಾಗನ್ನು ಓದುತ್ತಿದ್ದೇನೆ. ನೀವು ತ್ರಿವೇಣಿಯವರ ಮುಕ್ತಿ ಮತ್ತು ಬೆಳ್ಳಿಮೋಡ ಕಾದಂಬರಿಗಳ ಪರಿಚಯವನ್ನು ಸರಳವಾಗಿ ಮಾಡಿಕೊಟ್ಟಿದ್ದೀರಿ. ಬೆಳ್ಳಿಮೋಡ ಸಿನಿಮಾ ನೋಡಿದ್ದೇನೆ...
    ಮತ್ತಷ್ಟು ಹೀಗೆ ಹೊಸ ವಿಚಾರಗಳನ್ನು ಕೊಡುತ್ತಿರಿ..

    ReplyDelete
  19. ಮನಮುಕ್ತಾ ಮೇಡಮ್...
    ಪುಸ್ತಕ ಪರಿಚಯವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...


    ಶಿವು ಸಾರ್...
    ಬಿಡುವು ಮಾಡಿಕೊಂಡು ನನ್ನ ಮಾತುಗಳನ್ನೋದಲು ಬಂದಿದ್ದಕ್ಕೆ ಧನ್ಯವಾದಗಳು. ಸಿನೆಮಾ ನೋಡಿದ್ದೀರಾದ್ದರಿಂದ, ಪುಸ್ತಕವನ್ನೂ ಒಮ್ಮೆ ಓದಿ, ಚೆನ್ನಾಗಿರತ್ತೆ...

    ReplyDelete
  20. ಅಂತರಂಗದ ಮಾತುಗಳು...

    ನಾನು ತ್ರಿವೇಣಿಯವರ ಎಲ್ಲ ಕಾದಂಬರಿಗಳನ್ನು ಓದಿರುವೆ..
    ನೀವು ಪರಿಚಯಿಸಿದವೂ ಕೂಡ ನನಗೆ ಇಷ್ಟ...

    ಶರ ಪಂಜರ..
    ಬೆಕ್ಕಿನ ಕಣ್ಣು ಕೂಡ ಇಷ್ಟ...

    ಅವರು "ಮಾನಸಿಕ" ಸಮಸ್ಯೆಯ ಸುತ್ತ ಹೆಚ್ಚಾಗಿ ಬರೆಯುತ್ತಿದ್ದರು...

    ನಿಮ್ಮ ಲೇಖನ ಓದಿ ಮತ್ತೊಮ್ಮೆ ಕಾದಂಬರಿ ಓದುವ ಆಸೆ ಹುಟ್ಟಿದೆ..

    ನಿಮ್ಮ ಬ್ಲಾಗಿಗೆ ಬರದೆ ಬಹಳ ದಿನಗಳಾದವು...
    ದಯವಿಟ್ಟು ಬೇಸರಿಸ ಬೇಡಿ...

    ಇನ್ನೊಮ್ಮೆ ಬಂದು ಉಳಿದ ಲೇಖನಗಳನ್ನೂ ಓದುವೆ...

    ReplyDelete
  21. ಪ್ರಕಾಶ್ ಅವರಿಗೆ ತುಂಬಾ ದಿನಗಳ ನಂತರ ಬಂದಿದ್ದಕ್ಕೆ ಸ್ವಾಗತ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು. ನನ್ನ ಲೇಖನ ಓದಿ ನಿಮಗೆ ಮತ್ತೊಮ್ಮೆ ಪುಸ್ತಕ ಓದುವ ಆಸೆ ಹುಟ್ಟಿರುವುದು, ನನಗೆ ತುಂಬಾ ಸಂತೋಷವಾಗಿದೆ. ಸಮಯ ಮಾಡಿಕೊಂಡು, ಮತ್ತೆ ಬನ್ನಿ ಮತ್ತು ಬೇರೆ ಲೇಖನಗಳನ್ನೂ ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು...

    ReplyDelete
  22. ತ್ರಿವೇಣಿಯವರ ಎರಡು ಕಾದಂಬರಿಗಳನ್ನು ಚಿಕ್ಕ ಚೊಕ್ಕವಾಗಿ ವಿವರಿಸಿದ್ದೀರಿ. ತ್ರಿವೇಣಿ ಒಂದು ಕಾಲದ ಜನಾಂಗಕ್ಕೆ ಹುಚ್ಚು ಹಿಡಿಸಿದ್ದ ಲೇಖಕಿ. ಆ ಕಾಲವೇನು, ಈ ಕಾಲದಲ್ಲಿಯೂ ಇಷ್ಟಪಟ್ಟು ಓದುವಂತೆ ಮಾಡುವ ಬರವಣಿಗೆ ಅವರದ್ದು. ತುಂಬ ಚಿಕ್ಕ ವಯಸ್ಸಿನಲ್ಲೇ ತೀರಿಹೋಗಿ ಕನ್ನಡ ಕಾದಂಬರಿ ಲೋಕ ಬಡವಾಯಿತು

    ReplyDelete
  23. ತ್ರಿವೇಣಿಯವರು ಎಲ್ಲಾ ಕಾಲದ ಜನಾಂಗದವರಿಗೂ ಹುಚ್ಚು ಹಿಡಿಸಬಲ್ಲ ಸಾಹಿತ್ಯ ಸೃಷ್ಟಿ ಮಾಡಿದವರು.... ನಮ್ಮ ಈ ಯುವ ಪೀಳಿಗೆ ಕನ್ನಡದ ಸಮೃದ್ಧ ಮತ್ತು ಶ್ರೀಮಂತ ಸಾಹಿತ್ಯವನ್ನು ಓದುವ ಮನಸ್ಸು ಮಾಡಬೇಕಷ್ಟೆ.... ಕೆಲವು ದಿನಗಳ ಹಿಂದೆ ತ್ರಿವೇಣಿಯವರ ಪತಿಯವರ ಸಂದರ್ಶನ ಓದಿದೆ. ಅವರು ತಮ್ಮ ದಿವಂಗತ ಪತ್ನಿಯನ್ನು ಈಗಲೂ ಎಷ್ಟು ಹೆಮ್ಮೆಯಿಂದ ನೆನೆದು ಭಾವುಕರಾಗುತ್ತಾರೆ.... ತಮ್ಮನ್ನು ತಾವು ಎಂದಿಗೂ ತ್ರಿವೇಣಿಯವರ ಪತಿಯೆಂದೇ ಗುರುತಿಸಿಕೊಳ್ಳಲು ಇಚ್ಛಿಸುತ್ತಾರಂತೆ.... ಈಗ ಅವರು ತ್ರಿವೇಣಿಯವರ ಕಾದಂಬರಿಗಳನ್ನು ಆಂಗ್ಲಕ್ಕೆ ಅನುವಾದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.... ಇದರಿಂದಾಗಿ ಕನ್ನಡೇತರರಿಗೂ, ಕನ್ನಡದವರಾದರೂ ಕನ್ನಡ ಬಾರದ ನಮ್ಮ ಯುವ ಜನಾಂಗದವರಿಗೂ ತ್ರಿವೇಣಿಯವರ ಅತ್ಯಂತ ನವಿರಾದ, ಅಪರೂಪದ ಶೈಲಿಯ ಸಾಹಿತ್ಯ ಲಭಿಸುತ್ತದೆಂಬ ಮಾತು ಎಷ್ಟು ಸಂತೋಷವಾದುದಲ್ಲವೇ... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು........

    ReplyDelete