Friday, July 9, 2010

ಸ್ತ್ರೀ... ಹೆಣ್ತನ...........

ಸ್ತ್ರೀ....ಎನ್ನುವ ಒಂದೇ ಒಂದು ಅಕ್ಷರಕ್ಕೆ ಅತ್ಯಂತ ನವಿರಾದ, ಭಾವನಾತ್ಮಕ ತಂತುಗಳು ಬೆಸೆದುಕೊಂಡಿವೆ. ಇದರ ಅರ್ಥ, ಆಳ, ವ್ಯಾಪ್ತಿ ಅರಿಯುವ ಸತತ ಪ್ರಯತ್ನ ಮಾಡುತ್ತಲೇ ಬಂದಿದ್ದೇವೆ. ಸ್ತ್ರೀ ನಾನಾರೂಪಗಳನ್ನೊಳಗೊಂಡ, ಒಂದು ಪಾತ್ರ..... ಇಳೆ, ಭೂಮಿ, ವಸುಂಧರೆ.... ಎಂದು ನಾನಾ ಹೆಸರಿನಿಂದ ಕರೆಯಲ್ಪಡುವ, ನಮ್ಮ ಭೂದೇವಿಯಂತೆ.... ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಭೂಮಿಯನ್ನು ತಾಯಿಯಾಗಿ ಪೂಜಿಸುತ್ತೇವೆ ಮತ್ತು ನಮ್ಮ ಮನೆಗಳಲ್ಲಿ ಸ್ತ್ರೀಯರನ್ನು ಭೂದೇವಿಗೆ ಹೋಲಿಸುತ್ತೇವೆ. ಯುಗಯುಗಗಳಿಂದ ನಮ್ಮೆಲ್ಲಾ ದುರಾಚಾರ, ದಬ್ಬಾಳಿಕೆಗಳನ್ನೂ ಸಹಿಸಿಕೊಂಡು, ನಮ್ಮನ್ನು ಕ್ಷಮಿಸುತ್ತಲೇ ಇರುವ ಕ್ಷಮಯಾಧರಿತ್ರಿ ನಮ್ಮ ಭೂತಾಯಿ... ಅಂತೆಯೇ ಸ್ತ್ರೀ... ತಾಯಿಯಾಗಿ, ಸೋದರಿಯಾಗಿ, ಸ್ನೇಹಿತೆಯಾಗಿ.... ಹಲವಾರು ರೂಪಗಳಲ್ಲೂ, ಪಾತ್ರಗಳಲ್ಲೂ... ನಮ್ಮನ್ನು ಪೊರೆಯುತ್ತಾಳೆ, ಸಲಹುತ್ತಾಳೆ, ಕ್ಷಮಿಸುತ್ತಾಳೆ ಮತ್ತು ತನ್ನ ಪ್ರೀತಿಯ ಆಳದ ವ್ಯಾಪ್ತಿಯನ್ನು ದಿಗಂತದಾಚೆಗೂ ಪಸರಿಸಿ ಬಿಡುತ್ತಾಳೆ....

The Lifetime of a boy to man:

I was born, A woman was there to hold me :- My mother
I grew as a child, A woman was there to care for me & play with me:- My sister
I went to school, A woman was there to help me learn :- My teacher
I became depressed whenever I lost, A woman was there to offer me shoulder :- My friend
I needed company, compatibility & love, A great woman was there for me:- My wife
I became tough, A woman was there to melt me :- My daughter
When i die, A woman is there to absorb me in :- My motherland

If you are a Man, Value Every Woman & If you are a Woman, Be proud to be one.

Saluting the free spirit of Women hood.

ಈ ಅಂಚೆ ಕೆಲವು ದಿನಗಳ ಕೆಳಗೆ ನನ್ನ ಅಂಚೆ ಪೆಟ್ಟಿಗೆಯಲ್ಲಿ ಬಂದು ಕುಳಿತಿತ್ತು....... ತೆರೆದು ಓದಿದಾಗ, ನಾನು ಹೆಣ್ಣಿನ ಜೀವನದ ಒಂದೊಂದೇ ಘಟ್ಟವನ್ನು ಮನಸ್ಸಿನಲ್ಲೇ ಚಿತ್ರಿಸಿಕೊಳ್ಳ ತೊಡಗಿದೆ......

ಒಬ್ಬ ಹುಡುಗ ಅಥವಾ ಒಂದು ಗಂಡಿನ ದೃಷ್ಟಿಯಿಂದ ನೋಡುವಾಗ ಹೆಣ್ಣು ಖಂಡಿತಾ ಎಲ್ಲಾ ವಿಧದಲ್ಲೂ, ಪಾತ್ರದಲ್ಲೂ ಗಂಡನ್ನು ಪೋಷಿಸುವವಳಂತೆಯೇ ಕಾಣುತ್ತಾಳೆ. ಸ್ತ್ರೀಯ ಮೊದಲ ರೂಪ ಪುರುಷರ ಜೀವನದಲ್ಲಿ ಮಾತೃ ಸ್ವರೂಪವೇ... ತಾಯಿ ತನ್ನ ಗರ್ಭದಲ್ಲಿ ತಿಂಗಳು ಶಿಶುವನ್ನು ಹೊತ್ತು, ಪೋಷಿಸಿ, ತನ್ನ ಎಲ್ಲಾ ಕಷ್ಟಗಳನ್ನೂ ನಗು ನಗುತ್ತಾ ಸಹಿಸಿ, ಮರುಹುಟ್ಟು ಎನ್ನುವಂಥಹ ನೋವನ್ನೂ ಸಹಿಸಿಕೊಂಡು ಜನ್ಮ ಕೊಡುತ್ತಾಳೆ. ಇಲ್ಲಿ ಒಂದು ಹೆಣ್ಣು ಗರ್ಭ ಧರಿಸಿದಂದೇ... ಪುಟ್ಟ ಇನ್ನೂ ಯಾವ ಆಕಾರ, ರೂಪವನ್ನೂ ಪಡೆಯದೇ ಇದ್ದಾಗಲೇ... ಭಾವನಾತ್ಮಕವಾಗಿ ತನ್ನ ಸಂಬಂಧ ಬೆಳೆಸಿಕೊಂಡು ಬಿಟ್ಟಿರುತ್ತಾಳೆ. ತಾಯಿ ಸೇವಿಸುವ ಆಹಾರವನ್ನು, ತನ್ನ ಬೆಳವಣಿಗೆಗೆ ಉಪಯೋಗಿಸಿಕೊಂಡು, ಮಗು ಗರ್ಭದಲ್ಲಿ ಬೆಳೆಯುತ್ತದೆ. ಇದು ಸುಂದರವಾದ ಪ್ರಕೃತಿ ನಿಯಮ ಮತ್ತು ಸ್ತ್ರೀಯ ದೇಹ ರಚನೆಯೇ ಇದಕ್ಕಾಗಿಯೇ ಮಾಡಲ್ಪಟ್ಟಿದೆ... ಗರ್ಭಧಾರಣೆಯಾದಾಗಿನಿಂದಲೂ ಶಿಶು ಎಲ್ಲಕ್ಕೂ ತಾಯನ್ನೇ ಆಶ್ರಯಿಸಿರುತ್ತದೆ. ಬೆಳೆಯುತ್ತಾ ಬೆಳೆಯುತ್ತಾ, ತಾಯಿಯ ಸತ್ವ ಹೀರಿ, ತನ್ನನ್ನು ತಾನು ಬೆಳೆಸಿಕೊಳ್ಳುತ್ತದೆ ಮತ್ತು ಹೊರಗಿನ ಪ್ರಪಂಚಕ್ಕೆ ಬರಲು ಬೇಕಾದಂತೆ ಸಿದ್ಧತೆ ಮಾಡಿಕೊಳ್ಳುತ್ತದೆ. ಪುರುಷ ಗರ್ಭಧಾರಣೆಗೆ ಕಾರಣವಾಗುತ್ತಾನೆಯೇ ಹೊರತು, ಗರ್ಭದ ಬೆಳವಣಿಗೆಗೆ ಮಾನಸಿಕ ಬೆಂಬಲ ಕೊಡುವುದು ಬಿಟ್ಟರೆ ಬೇರೆ ಯಾವ ರೀತಿಯಲ್ಲೂ ಸಹಾಯ ಮಾಡಲಾರ. ಶಾಸ್ತ್ರೋಕ್ತವಾಗಿ ೭ನೇ ತಿಂಗಳಲ್ಲಿ ಮಾಡುವ ಸೀಮಂತೋನ್ನಯನದಲ್ಲಿ (ಸೀಮಂತೋನ್ನಯನವೆಂದರೆ ತಲೆಯ ಮೇಲಿನ ಕೇಶವನ್ನು ಮಧ್ಯಭಾಗದಿಂದ ವಿಂಗಡಿಸುವುದು ಎಂದು ಅರ್ಥ) ಮಾತೃಪೂಜೆ, ನಾಂದಿ ಶಾಸ್ತ್ರಗಳು ಮುಗಿದ ನಂತರ ಪ್ರಜಾಪತಿಗೆ ಮಂತ್ರಪೂರ್ವಕವಾಗಿ ಹವಿಸ್ಸನ್ನು ನೀಡಿದ ನಂತರವೇ ಮಗುವಿನ ಮೇಲೆ ತಂದೆಗೆ ಅಧಿಕಾರವೆಂಬ ಮಾತು ಓದಿದ್ದೇನೆ. ಇದರ ನಂತರ ಮಗು ತಂದೆಯ ವಂಶಸ್ಥನಾಗುತ್ತಾನೆಂಬ ಅರ್ಥದಲ್ಲಿ... ನವಮಾಸಗಳು ತುಂಬಿದಾಗ, ನೋವು ಸಹಿಸಿ, ಮಗುವಿಗೆ ಜನ್ಮವೀಯುತ್ತಾಳೆ ತಾಯಿ.... ಹುಟ್ಟಿದ ಮಗುವಿನ ಮುಖ ನೋಡಿದೊಡನೆ, ತಾನು ಅದುವರೆಗೂ ಪಟ್ಟ ಕಷ್ಟಗಳೆಲ್ಲವನ್ನೂ ಮರೆತು, ತನ್ನ ಜೀವಸತ್ವ ಹೀರಿ, ತನ್ನೊಳಗೆ ಬೆಳೆದು, ಹೊರ ಪ್ರಪಂಚಕ್ಕೆ ಅಡಿಯಿಟ್ಟ ಮಗುವನ್ನು, ಎಲ್ಲದರಿಂದಲೂ ರಕ್ಷಿಸುವಂತೆ ತನ್ನೆದೆಗೆ ಅವುಚಿಕೊಂಡಾಗ, ಗರ್ಭದಲ್ಲಿನ ಬಿಸುಪು ಮಗುವಿಗೆ ತಾಯ ಅಪ್ಪುಗೆಯಲ್ಲಿ ಸಿಗುತ್ತದೆ.... ಕಂದ ತನ್ನೊಳಗಿದ್ದಾಗಲೂ ತನ್ನದೇ ಆಹಾರದಲ್ಲಿ ಪಾಲು ಕೊಟ್ಟು ಬೆಳೆಸುವ ತಾಯಿ, ಕಂದ ಜನ್ಮಿಸಿದ ನಂತರವೂ ತನ್ನ ಎದೆಹಾಲು - ಅಮೃತವನ್ನು ಉಣಿಸಿ ಬೆಳೆಸುತ್ತಾಳೆ.....

ಹೆಣ್ಣು ಮಕ್ಕಳು ಹುಟ್ಟಿನಿಂದಲೇ ಅಮ್ಮಂದಿರಾಗಿರುತ್ತಾರೆಂದು ಓದಿದ್ದೆ. ಅದು ನೂರಕ್ಕೆ ನೂರರಷ್ಟು ಸತ್ಯವಾದ ಮಾತೆಂದು ನಾವು ಪುಟ್ಟ ಪುಟ್ಟ ಹೆಣ್ಣು ಮಕ್ಕಳನ್ನು ಸ್ವಲ್ಪ ಗಮನವಿರಿಸಿ ನೋಡಿದರೆ ತಿಳಿಯುತ್ತದೆ. ತಾನೇ ಇನ್ನೂ ಪುಟ್ಟವಳು... ಆದರೆ ತನಗೊಬ್ಬ ತಮ್ಮನೋ, ತಂಗಿಯೋ ಇದ್ದರೆ, ಆಗಲೇ ತುಂಬಾ ಜವಾಬ್ದಾರಿಯುತವಾಗಿ, ತಾಯಿ ತನ್ನನ್ನು ಹೇಗೆಲ್ಲಾ ನೋಡಿಕೊಳ್ಳುವಳೋ, ಅದನ್ನೆಲ್ಲಾ ತಾನು ತನ್ನ ತಮ್ಮ, ತಂಗಿಯರಿಗೆ ಮಾಡುತ್ತಾ.... ಆಗಲೇ ತಾಯ್ತನ ಮೆರೆಸುತ್ತಾಳೆ. ತನಗಿಂತ ಚಿಕ್ಕ ಮಗು, ತಮ್ಮನಾದರೆ, ನಿಜ ಅರ್ಥದಲ್ಲಿ ತಾಯಿಯೇ ಆಗಿಬಿಡುತ್ತಾಳೆ.... ಆದರೆ ಒಬ್ಬ ಅಣ್ಣನಿಗೆ ತಂಗಿಯಾದರೆ.. ಇಲ್ಲೂ ತಾಯ್ತನವಿದ್ದೇ ಇರತ್ತೆ. ಆದರೆ ಇಲ್ಲಿ ಅಣ್ಣ ತನಗಿಂತ ದೊಡ್ಡವನು, ತನ್ನನ್ನು ರಕ್ಷಿಸುವವನು, ಎಲ್ಲವನ್ನೂ ತಿಳಿದಿರುವವನು ಎಂಬ ಭಾವ ಒಂದು ಕಡೆಯಾದರೆ, ಇನ್ನೊಂದು ಕಡೆ ಅವಳ ಹೆಣ್ತನ, ವಯಸ್ಸನ್ನು ಲೆಖ್ಕಿಸದೇ ಅಣ್ಣನ ಊಟ-ತಿಂಡಿ, ಆರೋಗ್ಯ, ಎಲ್ಲದರ ಬಗ್ಗೆ ಕಾಳಜಿ ವಹಿಸುತ್ತಾ ತಾಯಿಯ ಸ್ಥಾನವನ್ನು ತುಂಬಿಯೇ ಬಿಡುತ್ತಾಳೆ. ಹೆಣ್ಣು ಅಕ್ಕನಾದರೂ, ತಂಗಿಯಾದರೂ, ಒಂದು ಅರ್ಥದಲ್ಲಿ ಗಂಡು ಮಕ್ಕಳಿಗೆ ತಾಯಿಯ ನಂತರದ ತಾಯಿಯೇ.... ಅಕ್ಕನಾದರೆ ತಮ್ಮನಿಗೆ ಬೆಳವಣಿಗೆಯ ಎಲ್ಲಾ ಹಂತಗಳಲ್ಲೂ ಮಾರ್ಗ ದರ್ಶನ ಮಾಡುತ್ತಾ, ಲಾಲಿಸುತ್ತಾಳೆ. ತಂಗಿಯಾದರೆ ಅಣ್ಣನ ಮಾರ್ಗದರ್ಶನದಲ್ಲಿ ನಡೆದರೂ ಕೂಡ, ತಾನು ಒಬ್ಬ ಸಹೃದಯವಂತ, ಆತ್ಮೀಯ, ಗೆಳತಿಯಾಗಿ, ಅಣ್ಣನ ಯಶಸ್ಸು, ದು: ಎರಡರಲ್ಲೂ ತಾನೂ ಪಾಲು ತೆಗೆದುಕೊಳ್ಳುತ್ತಾ, ಆಪ್ತತೆ ತೋರುತ್ತಾಳೆ... ಆಟವಾಡುತ್ತಾಳೆ, ಜೊತೆಗೆ ನಕ್ಕು ನಗಿಸುತ್ತಾಳೆ... ಯಾವುದೇ ಸಂದರ್ಭದಲ್ಲೂ ನಾನಿದ್ದೇನೆ ನಿನ್ನ ಬೆಂಬಲಕ್ಕೆ ಎಂದು ತೋರಿಸುತ್ತಾಳೆ....

ಶಾಲೆಯಲ್ಲಿ ಪಾಠ ಹೇಳುವ ಉಪಾಧ್ಯಾಯಿನಿಯಾಗಿ ಕೂಡ ಹೆಣ್ಣು ತನ್ನ ಎಲ್ಲಾ ತಾಯ್ತನವನ್ನೂ ಸೇರಿಸಿಯೇ ಮಕ್ಕಳನ್ನು ಬೌದ್ಧಿಕವಾಗಿ ಬೆಳೆಸುತ್ತಾಳೆ... ಗಂಡು ಮಕ್ಕಳೂ ಕೂಡ, ಉಪಾಧ್ಯಾಯಿನಿಯ ಹತ್ತಿರವೇ ಹೆಚ್ಚು, ಸಂಕೋಚವಿಲ್ಲದೆ, ತಾಯಿಯ ರೂಪವೆಂದು ಸಲಿಗೆಯಿಂದ ಪಳಗುತ್ತಾರೆ. ನಮ್ಮ ಪ್ರಾಥಮಿಕ, ಮಾಧ್ಯಮಿಕ ಹಂತದ ತರಗತಿಗಳ ಉಪಾಧ್ಯಾಯಿನಿಯರನ್ನು ನಾವು ಮರೆಯುವುದು ಸಾಧ್ಯವೇ ಇಲ್ಲ. ಮಕ್ಕಳ ಮಾನಸಿಕ ಏರುಪೇರುಗಳನ್ನೂ, ವಿಕಾಸದ ಹಂತಗಳನ್ನೂ ಹೆಣ್ಣು ಅತ್ಯಂತ ಪ್ರಭಾವಯುತವಾಗಿ ನಿರ್ವಹಿಸಿ, ಉತ್ತಮ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾಳೆ..

ಸ್ತ್ರೀ ಒಬ್ಬ ಅತ್ಯುತ್ತಮ ಸ್ನೇಹಿತೆಯೂ ಆಗಬಲ್ಲಳು. ಯಾವುದೇ ರೀತಿಯ ರಕ್ತ ಸಂಬಂಧವಿಲ್ಲದಿದ್ದಾಗಲೂ ಸ್ನೇಹಿತೆಯಾಗಿ, ಸಾಂತ್ವನ ಮಾಡುವ ಪರಿ, ಆತ್ಮೀಯವಾಗಿ ಪಳಗುವ ರೀತಿ, ಭಾವನೆಗಳನ್ನು ಹಂಚಿಕೊಳ್ಳುವ ವೇಗ... ಇದೊಂದು ಅದ್ಭುತವಾದ ಕಲೆ ಸ್ತ್ರೀ ವರವಾಗಿ ಪಡೆದಿದ್ದಾಳೆ. ಹುಟ್ಟಿನಿಂದಲೂ ಗಂಡು ಹೆಣ್ಣಿನ ಮೇಲೆ ಅವಲಂಬಿತನಾಗೇ ಇರುತ್ತಾನೆ. ಎಲ್ಲವನ್ನೂ ಕೊಡುವುದಷ್ಟೇ... ಎಷ್ಟು ಹಿಂತಿರುಗಿ ಪಡೆಯುತ್ತಾಳೆಂಬುದು, ಯುಗಗಳಿಂದಲೂ ಪ್ರಸ್ತುತವಾಗುವುದೇ ಇಲ್ಲ. ಮಡದಿಯಾಗಿ ಗಂಡನ ಜೀವನದಲ್ಲಿ ಎಲ್ಲವನ್ನೂ ಹಂಚಿಕೊಳ್ಳುವ ಹೆಂಡತಿ, ಅಲ್ಲಿಯೂ ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಸ್ನೇಹಿತೆಯಾಗಿ, ಕೊನೆಗೆ ಹೆಂಡತಿಯೂ ಆಗಿರುತ್ತಾಳೆ. ಭಾವನಾತ್ಮಕವಾಗಿ ಹೆಣ್ಣು, ಗಂಡಿಗಿಂತ ಹೆಚ್ಚು ಬಲವುಳ್ಳವಳು. ಅವಳು ಯಾವುದೇ ಸಂದರ್ಭದಲ್ಲೂ ಕೈ ಚೆಲ್ಲಿ, ಕುಸಿಯುವುದಿಲ್ಲ.... ಅವಳ ಮುಂದೆ ಒಂದೇ ಗುರಿ, ತಾನು ಬಿದ್ದಷ್ಟು ಸಲವೂ ಎದ್ದು ಮುಂದೆ ಸಾಗಲೇ ಬೇಕು, ಗಮ್ಯ ತಲುಪಲೇ ಬೇಕು ಎಂಬುದು.
ಇದೇ ಪುರುಷನಿಗೆ ಬಲಕೊಡುವ ಅಂಶ. ಗಂಡು, ಮಗುವಾಗಿದ್ದಾಗಿನಿಂದಲೂ, ಸ್ತ್ರೀಯ ಶಕ್ತಿಯನ್ನು ಅವಲಂಬಿಸಿ ಬೆಳೆಯುತ್ತಾನೆ. ದೈಹಿಕವಾಗಿಯೂ, ಸಾಮಾಜಿಕವಾಗಿಯೂ ಪುರುಷ ಸ್ತ್ರೀಗೆ ಬೆಂಬಲವಾದರೂ, ಮಾನಸಿಕವಾಗಿ ಸ್ತ್ರೀ ಅಗಾಧ ಶಕ್ತಿವಂತಳು ಮತ್ತು ಪುರುಷನ ಆಂತರಿಕ ಸ್ಥೈರ್ಯವನ್ನು ಹೆಚ್ಚಿಸುವವಳು.

ಗಂಡು ಇನ್ನೂ ಒಂದು ಹಂತದಲ್ಲಿ ಹೆಣ್ಣಿನ ಸಹಾಯ ಅಥವಾ ಆಶ್ರಯ ಪಡೆಯುತ್ತಾನೆ, ಅದು ಯಾವಾಗೆಂದರೆ, ತಾನು ಹೆಣ್ಣು ಮಗುವಿನ ತಂದೆಯಾದಾಗ.... ಇದು ಸಾಮಾನ್ಯವಾಗಿ ಪುರುಷರ ಮಧ್ಯ ವಯಸ್ಸಿನ ಪ್ರಾರಂಭದ ಹಂತದಲ್ಲಿ ಆಗುವಂತದ್ದು. ಮುದ್ದು ಮಗಳ ಸಹವಾಸದಲ್ಲಿ, ತನ್ನ ವ್ಯಕ್ತಿತ್ವದಲ್ಲೇ ಬಹಳಷ್ಟು ಮಾರ್ಪಾಡು ತನಗೇ ಅರಿಯದಂತೆ ಮಾಡಿಕೊಂಡಿರುತ್ತಾನೆ. ಜೀವನದಲ್ಲಿ ಮೊದಲ ಸಲ ತಂದೆಯಾಗಿ, ಮಗಳ ಜೊತೆಗೂ ಕಲಿಯುತ್ತಾ, ಬೆಳೆಯುತ್ತಾ, ಒಂದು ಹಂತಕ್ಕೆ ಬರುವಷ್ಟರಲ್ಲಿ, ಸಂಪೂರ್ಣವಾಗಿ ಬದಲಾದ ವ್ಯಕ್ತಿತ್ವದವನಾಗಿರುತ್ತಾನೆ. ಹೆಚ್ಚಿನ ಸಂಯಮ, ಕಾಳಜಿ, ಆಪ್ಯಾಯತೆ, ಎಲ್ಲಕ್ಕಿಂತ ಹೆಚ್ಚಾಗಿ ಬದುಕನ್ನು ತನ್ನ ಮಗಳ ಕಣ್ಗಳಲ್ಲಿ ನೋಡುವ ರೀತಿಯನ್ನು ಕಲಿತಿರುತ್ತಾನೆ. ಮಗಳ ಆಗ್ರಹಕ್ಕೆ, ಪ್ರೀತಿಗೆ ಹೆಜ್ಜೆ ಹೆಜ್ಜೆಗೂ ತನ್ನ ಉಕ್ಕಿನಂತಹ ಅಹಂ ಕರಗುತ್ತಿದ್ದರೂ ಲಕ್ಷಿಸದೆ, ಮೃದುವಾಗಿ ಬೆಣ್ಣೆಯ ಮನಸ್ಸಿನ ಮನುಷ್ಯನಾಗಿ ಪರಿವರ್ತಿತನಾಗಿರುತ್ತಾನೆ.

ಹೀಗೆ ಪ್ರತಿಯೊಂದು ಹಂತದಲ್ಲೂ ಸ್ತ್ರೀ ತನ್ನ ಅಗಾಧ ಪ್ರೀತಿಯಲ್ಲಿ ಗಂಡನ್ನು ತೇಲಿಸುತ್ತಾಳೆ, ಬೆಳೆಸುತ್ತಾಳೆ, ತಾನೂ ಬೆಳೆಯುತ್ತಾಳೆ... ಜಿ ಎಸ್ ಶಿವರುದ್ರಪ್ಪನವರ ಕವನ... ಅಶ್ವಥ್ ಅವರ ಕಂಠದಲ್ಲಿ... "ಆಕಾಶದ ನೀಲಿಯಲ್ಲಿ... ಚಂದ್ರತಾರೆ ತೊಟ್ಟಿಲಲ್ಲಿ.... ಬೆಳಕನಿಟ್ಟು ತೂಗಿದಾಕೆ... ನಿನಗೆ ಬೇರೆ ಹೆಸರು ಬೇಕೆ..... ಸ್ತ್ರೀ...... ಎಂದರೆ ಅಷ್ಟೆ ಸಾಕೆ"..... ಕವನದ ಕೊನೆಯ ಸಾಲುಗಳು... "ಮನೆಮನೆಯಲ್ಲಿ ದೀಪ ಮುಡಿಸಿ.... ಹೊತ್ತು ಹೊತ್ತಿಗೆ ಅನ್ನ ಉಣಿಸಿ... ತಂದೆ ಮಗುವ ತಬ್ಬಿದಾಕೆ... " ಎಂಬ ಸಾಲುಗಳು ಸ್ತ್ರೀಯ ಜೀವನದ ಪೂರ್ಣ ಪರಿಚಯ ಮಾಡಿಕೊಟ್ಟು ಬಿಡುತ್ತದೆ..... ಸಾಲುಗಳುಸ್ತ್ರೀಎಂಬ ಶಕ್ತಿಗೆ ಸಂದ ಗೌರವ.......

ಪ್ರಸ್ತುತ ಪ್ರಪಂಚದಲ್ಲಿ ಸ್ತ್ರೀ ಅನೇಕ ರೀತಿಯಲ್ಲಿ ಮುಂದುವರೆದಿದ್ದಾಳೆ. ತನ್ನ ಹಾಗೂ ತನ್ನ ಪರಿವಾರದ ಪೋಷಣೆಗೆ ಸಮಾನವಾಗಿ ದುಡಿಯುತ್ತಾ ಒಳಗಿನ ಹಾಗೂ ಹೊರಗಿನ ಪ್ರಪಂಚಗಳೆರಡನ್ನೂ ಅತ್ಯಂತ ಯಶಸ್ವಿಯಾಗಿ ತೂಗಿಸಿಕೊಂಡು ಹೋಗುತ್ತಿದ್ದಾಳೆ. ಹಿಂದಿನ ಕಾಲದಲ್ಲಿದ್ದಂತೆ ಈಗ ಹೆಚ್ಚು ಅವಿಭಕ್ತ ಕುಟುಂಬಗಳು ಇಲ್ಲದಿರುವುದರಿಂದ, ಹೊರಗೆ ದುಡಿಯುವ ಮಹಿಳೆಗೆ ತನ್ನ ಅಸಂಖ್ಯ ಜವಾಬ್ದಾರಿಗಳನ್ನು ನಿರ್ವಹಿಸಲು ಪುರುಷನ ಸಹಾಯ, ಸೌಹಾರ್ದತೆ ಖಂಡಿತಾ ಬೇಕು. ಅದೇ ನಿಟ್ಟಿನಲ್ಲಿ ನಾವು ವಸ್ತು ಸ್ಥಿತಿಯನ್ನು ಅವಲೋಕಿಸಿದಾಗ, ನಮ್ಮ ಪುರುಷ ಸಮಾಜದಲ್ಲೂ, ಸಾಮಾಜಿಕವಾಗಿ, ಮಾನಸಿಕವಾಗಿ ಅತ್ಯಂತ ಪ್ರಭಾವೀಯುತವಾಗಿ ಬೆಳವಣಿಗೆ ಕಂಡಿದೆ. ಈಗಿನ ಜನಾಂಗದ ಪತಿ ತನ್ನ ಪತ್ನಿಯನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಾನೆ. ಎಲ್ಲಾ ಮಟ್ಟದಲ್ಲೂ ತನ್ನಷ್ಟೇ ಉನ್ನತ ಸ್ಥಾನದಲ್ಲಿರುವ ಪತ್ನಿಯ ಕರ್ತವ್ಯ, ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಾನೆ. ಸಂಸಾರ ನಿಭಾಯಿಸಲು ಸಹಾಯ ಮಾಡುತ್ತಾನೆ. ಇಲ್ಲಿ ತಂದೆ ಹೆಚ್ಚೋ... ತಾಯಿ ಹೆಚ್ಚೋ.. ಎಂಬ ಮಾತಿಗಿಂತ, ಒಬ್ಬರ ಮೇಲೊಬ್ಬರು ಪರಸ್ಪರ ಅವಲಂಬಿತರಾಗಿ ಕುಟುಂಬ ನಿರ್ವಹಣೆ ಮಾಡುವ ರೀತಿ ಮೆಚ್ಚತಕ್ಕದ್ದು...... ತಾಯಿ ಮಗುವಿನ ಬೆಳವಣಿಗೆಯ ಎಲ್ಲಾ ಹಂತಗಳಲ್ಲೂ ಪ್ರಮುಖ ಪಾತ್ರ ವಹಿಸಿದರೂ ಕೂಡ, ತಂದೆಯೂ ಇಲ್ಲಿ ಅಷ್ಟೇ ಪ್ರಮುಖನಾಗುತ್ತಾನೆ. ಪುರುಷ ಗರ್ಭ ಧರಿಸಲಾರ, ತನ್ನ ಆಹಾರದ ಮೂಲಕ ಆಹಾರ ಒದಗಿಸಿ, ಮಗುವನ್ನು ಬೆಳೆಸಲಾರ, ಮಮತೆಯ ಮಡಿಲಲ್ಲಿ ಬೆಚ್ಚಗೆ ಮುಚ್ಚಿಟ್ಟುಕೊಳ್ಳಲಾರ, ಆದರೆ ಅದೆಲ್ಲವನ್ನೂ ಸ್ತ್ರೀ ಮಾಡುತ್ತಾಳೆ ಮತ್ತು ಅವಳ ಸೃಷ್ಟಿಯೇ ಅದಕ್ಕಾಗಿ, ಅದೇ ರೀತಿ ಆಗಿರುವುದರಿಂದ, ಇಲ್ಲಿ ಭಾವನಾತ್ಮಕ ಎಳೆಗೆ ವಿಶೇಷ ಅರ್ಥ ಮತ್ತು ಪ್ರಾಮುಖ್ಯತೆ ಬರುತ್ತದೆ. ತಾಯ ಪ್ರೀತಿ ಅತ್ಯಂತ ಪ್ರಮುಖವೇ ಹೊರತು, ತಾಯಿ ಪ್ರಮುಖಳೋ, ತಂದೆ ಪ್ರಮುಖನೋ ಅನ್ನುವ ಮಾತಲ್ಲ... ಒಟ್ಟಿನಲ್ಲಿ ಮಗುವನ್ನು ಸತ್ಪ್ರಜೆಯಾಗಿ ಬೆಳೆಸುವ ಹೊಣೆ ಮತ್ತು ಜವಾಬ್ದಾರಿ ತಂದೆ-ತಾಯಿ ಇಬ್ಬರಿಗೂ ಸಮಾನವಾಗಿ ಸೇರಿದ್ದು ಎಂಬುದು ನನ್ನ ಅಭಿಪ್ರಾಯ.

ಕೊನೆಯ ಮಾತು... ಗಂಡು ತನ್ನ ಅಂತ್ಯದಲ್ಲೂ ಸ್ತ್ರೀ ಆಶ್ರಯದಲ್ಲೇ ಇರುತ್ತಾನೆನ್ನುವುದನ್ನು ಸತ್ತ ನಂತರ ದೇಹವನ್ನು ಮಣ್ಣು ಮಾಡುವುದರ ಮೂಲಕ ಸಾಬೀತು ಪಡಿಸಲ್ಪಡುತ್ತದೆ. ನಮ್ಮ ದೇಹ ಪಂಚ ಭೂತಗಳಿಂದ ಮಾಡಲ್ಪಟ್ಟಿದೆ ಮತ್ತು ಜೀವ ದೇಹವನ್ನು ಬಿಟ್ಟಾಗ, ಅದನ್ನು ಮಣ್ಣು ಮಾಡುತ್ತೇವೆ ಇಲ್ಲದಿದ್ದರೆ ಅಗ್ನಿಗಾಹುತಿ ಮಾಡುತ್ತೇವೆ. ನಂತರವಾದರೂ ಬೂದಿಯನ್ನು ಮಣ್ಣಿನಲ್ಲೂ, ನೀರಿನಲ್ಲೋ ಕದಡುತ್ತೇವೆ. ಆಗಲೂ ಪುರುಷ ಲೀನವಾಗುವುದು ಪ್ರಕೃತಿಯೊಳಗೇ.... ಪ್ರಕೃತಿಯ ಗರ್ಭದಲ್ಲೇ.... ಪ್ರಕೃತಿ ಸ್ತ್ರೀ ಎಂದೂ ತಾಯಿಯೆಂದೂ ಪೂಜಿಸಲ್ಪಡುವುದರಿಂದ...... ತಾಯ ಗರ್ಭದಿಂದ ಜನಿಸಿ ಬಂದವನು, ಮತ್ತೆ ಹೋಗಿ ಸೇರುವುದು ತಾಯ ಗರ್ಭಕ್ಕೇ.......ಎನ್ನುವ ಮಾತು ಸಾರ್ವಕಾಲಕ್ಕೂ ಅತ್ಯಂತ ಪ್ರಸ್ತುತ !!!

22 comments:

  1. ಸತ್ಯವಾದ ಮಾತು. ಹೆಣ್ಣು ಎಂದರೆ ಈ ಜಗತ್ತೆಲ್ಲದರ ಪೋಷಕಿ. ಬೇಂದ್ರೆ ತಮ್ಮ
    ಕವನವೊಂದರಲ್ಲಿ ಹೆಣ್ಣಿನ ಅನೇಕ ರೂಪಗಳನ್ನು ಈ ರೀತಿಯಾಗಿ ವರ್ಣಿಸುತ್ತಾರೆ:
    "ತಾಯಿ ಕನಿಮನೆಯೆ, ನೀ ಅಕ್ಕ ಅಕ್ಕರತೆಯೆ,
    ಬಾ ಎನ್ನ ತಂಗಿ ಬಾ, ಮುದ್ದು ಬಂಗಾರವೆ,
    ನೀಯೆನ್ನ ಹೆಂಡತಿಯೊ ಮೈಗೊಂಡ ನನ್ನಿಯೋ
    ಮಗಳೊ ನನ್ನೆದೆಯ ಮುಗುಳೊ?"
    ಉತ್ತಮ ಲೇಖನಕ್ಕಾಗಿ ಅಭಿನಂದನೆಗಳು.

    ReplyDelete
  2. ಬಹಳಷ್ಟು ತಿಳುವಳಿಕೆ ಮೂಡಿಸಿದ ಲೇಖನವಿದು. ಧನ್ಯವಾದಗಳು ನಿಮಗೆ.

    ReplyDelete
  3. ಬಹಳ ಸರಿಯಾಗಿ ಬರೆದಿದ್ದೀರಿ, ಇಂತಹ ಲೇಖನಗಳು ಮತ್ತೆ ಬರಲಿ! ಧನ್ಯವಾದಗಳು

    ReplyDelete
  4. ಶ್ಯಾಮಲಾ ಮೇಡಂ,
    ಅದ್ಭುತವಾದ ಲೇಖನವನ್ನ ಬರೆದಿದ್ದಿರಾ.. ಸ್ತ್ರೀ ಹೇಗೆ ಗಂಡಿನ ಜೀವನದಲ್ಲಿ ಹುಟ್ಟಿನಿಂದ ಸಾವಿನವರೆಗೂ ಮತ್ತು ಸಾವಿನ ನಂತರವೂ ಪ್ರಸ್ತುತ ಎಂಬುದರ ಬಗ್ಗೆ. ಚೆಂದದ ಲೇಖನ. ತಮ್ಮ ಅಂಕಣದಲ್ಲಿ ಪ್ರತಿಕ್ರಿಯೆ ಹಾಕಲಾಗುತ್ತಿಲ್ಲ. ಬಹುಶಃ ತಮ್ಮ ಅ೦ತರ್ಜಾಲದ ಪ್ರತಿಕ್ರಿಯೆಗಳ ಸೆಟ್ಟಿಂಗ್ ಬದಲಾಗಿರಬೇಕು. ಅದನ್ನು ವ್ಯವಸ್ತಿತಗೊಳಿಸಿ.
    ಇಂತಿ
    ಸೀತಾರಾಮ.ಕೆ

    ಸೀತಾರಾಮ್ ಸಾರ್...
    ಅಂಚೆ ಮೂಲಕ ಪ್ರತಿಕ್ರಿಯಿಸಿ, comment block ಆಗಿದೆ ಎಂದು ತಿಳಿಸಿದ್ದಕ್ಕೆ ಧನ್ಯವಾದಗಳು. ನೀವು ಹೇಳಿದಂತೆ ಏಕೋ setting ಬದಲಾಗಿಬಿಟ್ಟಿತ್ತು. ಲೇಖನ ಮೆಚ್ಚಿದ್ದಕ್ಕೂ ಧನ್ಯವಾದಗಳು....

    ReplyDelete
  5. ಸುನಾಥ್ ಕಾಕಾ..
    ಬೇಂದ್ರೆಯವರ ಕವನವನ್ನು ಉಲ್ಲೇಖಿಸಿದ್ದಕ್ಕೂ, ಲೇಖನ ಮೆಚ್ಚಿದ್ದಕ್ಕೂ ಧನ್ಯವಾದಗಳು....

    ಸುಬ್ರಹ್ಮಣ್ಯ ಸಾರ್...
    ಧನ್ಯವಾದಗಳು.

    ವಿ ಆರ್ ಭಟ್ಟ್ ಸಾರ್...
    ನನ್ನ ಮಾತುಗಳನ್ನು ಅನುಮೋದಿಸಿದ್ದಕ್ಕೂ, ಇಂತಹ ಲೇಖನಗಳು ಮತ್ತೆ ಬರಲಿ ಎನ್ನುತ್ತಾ... ನನಗೆ ಬರೆಯಲು ಪ್ರೋತ್ಸಾಹಿಸಿದ್ದಕ್ಕೂ ಹೃತ್ಪೂರ್ವಕ ಧನ್ಯವಾದಗಳು.

    ReplyDelete
  6. satya, sundara maatugalu..... ee maatugalu endigoo satya sir.... tumbaa dhanyavaada idannu barediddakke....

    ReplyDelete
  7. ತುಂಬಾ ಸುಂದರ ಲೇಖನ
    ಬೆಳಿಗ್ಗೆಯಷ್ಟೇ ನನ್ನ ಬ್ಲಾಗಿನಲ್ಲಿ ನೊಂದ ಹೆಣ್ಣಿನ ಬಗೆಗೆ ಬರೆದಿದ್ದೆ
    ಈಗ ನಿಮ್ಮ ಬ್ಲಾಗ್ ಓದಿದೆ
    ತುಂಬಾ ಸುಂದರ ಲೇಖನ

    ReplyDelete
  8. ಶ್ಯಾಮಲ ಮೇಡಮ್,

    ಹೆಣ್ಣಿನ ಬಗ್ಗೆ ಬಹಳ ಅರ್ಥವತ್ತಾಗಿ ಬರೆದಿದ್ದೀರಿ. ನಿಮ್ಮ ಕಳಕಳಿ ಬರಹದಲ್ಲಿ ಕಾಣುತ್ತದೆ.

    ReplyDelete
  9. ದಿನಕರ್ ಸಾರ್...
    ಸುಂದರ ಮಾತುಗಳೆನ್ನುತ್ತಾ... ನನ್ನ ಅಭಿಪ್ರಾಯವನ್ನು ಅನುಮೋದಿಸಿದ್ದಕ್ಕೆ ನಿಮಗೂ ಧನ್ಯವಾದಗಳು.

    ಗುರು ಸಾರ್...
    ನಿಮ್ಮ ಲೇಖನವೂ ಹೆಣ್ಣಿನ ಪಾತ್ರ, ಭಾವನೆಗಳಿಗೆ ಸಂಬಂಧಿಸಿದ್ದೇ... ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ಶಿವು ಸಾರ್...
    ನಿಮ್ಮ ಬ್ಲಾಗ್ ನಲ್ಲಿ ನಿಮಗೆ ಪ್ರಶಸ್ತಿ ತಂದುಕೊಟ್ಟ ಚಿತ್ರಗಳನ್ನು ನೋಡಿ ತುಂಬಾ ಖುಷಿಯಾಯಿತು. ಮತ್ತೊಮ್ಮೆ ಅಭಿನಂದನೆಗಳು. ಬರಹದಲ್ಲಿನ ನನ್ನ ಮನದ ಕಳಕಳಿಯನ್ನು ಗುರುತಿಸಿದ್ದೀರಿ. ಧನ್ಯವಾದಗಳು.

    ReplyDelete
  10. ತು೦ಬಾ ಅರ್ಥವತ್ತಾದ ಲೇಖನ. "ತಾಯ ಗರ್ಭದಿಂದ ಜನಿಸಿ ಬಂದವನು, ಮತ್ತೆ ಹೋಗಿ ಸೇರುವುದು ತಾಯ ಗರ್ಭಕ್ಕೇ.." ಸ್ತ್ರೀ ವ್ಯಾಪ್ತತೆಯನ್ನು ಸಮರ್ಥವಾಗಿ ನಿರೂಪಿಸಿದ್ದೀರಿ..ಶ್ಯಾಮಲಾ..ಧನ್ಯವಾದಗಳು.

    ಅನ೦ತ್

    ReplyDelete
  11. ನನ್ನ ಅಭಿಪ್ರಾಯವನ್ನು ಅನುಮೋದಿಸಿದ್ದಕ್ಕೆ ಧನ್ಯವಾದಗಳು ಅನಂತ್ ಸಾರ್...

    ReplyDelete
  12. ಶ್ಯಾಮಲಾ,
    ಬರಹ ಬಹಳ ಚೆನ್ನಾಗಿದೆ. ನಿಮಗೆ ಬಂದ ಸಂದೇಶವನ್ನಾಧರಿಸಿ ಹೆಣ್ಣಿನ ಸ್ಥಾನವನ್ನು (ಬೇರೆ ಬೇರೆ ಪ್ರಕಾರಗಳಲ್ಲಿ) ಬರೆಯುವಂತೆ ಪ್ರೇರೇಪಿಸಿದವರಿಗೆ ಧನ್ಯವಾದಗಳು. ಹಾಗೆಯೇ ಪ್ರಾರಂಭದಲ್ಲಿನ ಪೀಠಿಕೆಯೂ ಸಹ ಚೆನ್ನಾಗಿ ಮೂಡಿಬಂದಿದೆ.

    ಇಂತಹ ಒಂದು ಉತ್ತಮ ಬರಹ ನೀಡಿರುವುದಕ್ಕೆ ಧನ್ಯವಾದಗಳು.
    ಸ್ನೇಹದಿಂದ,

    ReplyDelete
  13. ಹೆಣ್ಣಿಗೆ ಎಲ್ಲದರಲ್ಲೂ ವಿಶೇಷವಾದ ಜಾಗ ಇದೆ.
    ಅದಕ್ಕೆ ಹಿರಿ ತಲೆಗಳು ಹೇಳೋದು ಪ್ರತಿ ಮನೆಗೆ ಒಂದು ಹೆಣ್ಣು ಬೇಕು ಅಂತ.
    ನಿಮ್ಮವ,
    ರಾಘು.

    ReplyDelete
  14. ಶ್ಯಾಮಲಾ...

    ವಿದ್ವತ್ಪೂರ್ಣ ಲೇಖನ.. !

    ತಾಯಿ ಹೃದಯವನ್ನು ಗಂಡು ಅರ್ಥಮಾಡಿಕೊಳ್ಳಲಾರ..
    ಅದು ಅವನ ಕಲ್ಪನೆಗೆ ಮೀರಿದ್ದು..

    ಹಾಗಾಗಿ ನಮ್ಮಲ್ಲಿ "ಅರ್ಧ ನಾರೀಶ್ವರ"
    ಪರಿಪೂರ್ಣತೆಯ ಕಲ್ಪನೆ ಬಂದಿರ ಬಹುದಾ?

    ಮತ್ತೆ ಮತ್ತೆ ಓದಬೇಕೆನಿಸುವ ಲೇಖನ
    ಅಭಿನಂದನೆಗಳು...

    ReplyDelete
  15. ಓರ್ವ ಸ್ತ್ರೀಯ ಜವಾಬ್ದಾರಿ, ಮಹತ್ವವನ್ನು ತುಂಬಾ ಸುಂದರವಾಗಿ ವಿವರಿಸಿದ್ದೀರಿ ಅಕ್ಕಾ.... ಆದರೆ ಅಂತಹ ಸ್ತ್ರೀಯನ್ನು ಗೌರ್ವಯುತವಾಗಿ ನಡೆಸುಕೊಳ್ಳುವ ಪುರುಷ ಸಮಾಜವೂ ಬೇಕಾಗಿದೆ. ಸ್ತ್ರೀ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇದಕ್ಕೆಂದು ಕೊನೆಯೋ...?!! :(

    ReplyDelete
  16. ಶ್ಯಾಮಲಾವ್ರೇ...ತಾಯಿಗೆ ಎಲ್ಲಾ ಶಾಸ್ತ್ರಗಳಲ್ಲೂ ಅಗ್ರ ಸ್ಥಾನ ...ಇಸ್ಲಾಂ ನಲ್ಲೂ ದೇವರ ನಂತರದ ಸ್ಥಾನ ತಾಯಿಗೆ ಇದೆ.. ಎಲ್ಲರ ಮನದಲ್ಲೂ ಹೆಣ್ಣು ಕಡೆಗೆ ತಾಯಿಯಾಗುತ್ತಳೆ ಎನ್ನುವ ಭಾವ ಬಂದರೆ ಬಹುಶಃ ಹೆಣ್ಣಿನ ಶೋಷಣೆ ಕಡಿಮೆಯಾಗಬಹುದೇನೋ...ಬಹಳ ಚನ್ನಾಗಿ ಹೆಣ್ಣಿನ ವಿವಿಧ ರೂಪಗಳ ದರ್ಶನ ಮಾಡಿಸಿದ್ದೀರಿ....ಇಂಥ ಲೇಖನಗಳು ಇನ್ನೂ ಮೂಡಿ ಬರಲಿ ನಿಮ್ಮ..ಅಂತರಂಗದ ಮಾತುಗಳಲ್ಲಿ

    ReplyDelete
  17. ಮರಿಯಾ....
    ನಿಮಗೆ ಸ್ವಾಗತ. ಖಂಡಿತಾ ನನ್ನ ಮಾತುಗಳನ್ನೋದಲು ಮತ್ತೆ ಮತ್ತೆ ಬನ್ನಿ. ಧನ್ಯವಾದಗಳು...

    ಚಂದ್ರೂ...
    ಬರೆಯಲು ಪ್ರೇರೇಪಿಸಿದವರಿಗೂ ಧನ್ಯವಾದಗಳನ್ನು ಹೇಳಿದ್ದೀರಿ. ಇದು ನಿಮ್ಮ ಸಜ್ಜನಿಕೆ ಚಂದ್ರೂ... ನಿಮ್ಮ ಜೊತೆಗೆ ನನ್ನದೂ ಸೇರಿಸಿ ಅವರಿಗೆ ಅದನ್ನು ತಲುಪಿಸಿದ್ದೇನೆ... ಬರಹ ಮೆಚ್ಚಿದ್ದೀರಿ ಸಂತೋಷ ಆಯಿತು...:-)

    ರಘು...
    ನಿಮ್ಮ ಮನದಲ್ಲೂ ಹೆಣ್ಣಿಗೆ ವಿಶೇಷ ಸ್ಥಾನವಿದೆಯೆಂಬ ಮಾತು ಖುಷಿ ಕೊಡ್ತು.. ಧನ್ಯವಾದಗಳು...

    ReplyDelete
  18. ಪ್ರಕಾಶ್ ಸಾರ್....
    ನಿಮ್ಮ ಮಾತುಗಳು ನಿಜಕ್ಕೂ ಮನ ಮುಟ್ಟುವಂತದ್ದು... ಹೌದು ಸಾರ್... ಗಂಡು ತಾಯಿಯ ವಾತ್ಸಲ್ಯದ ಹೊಳೆಯಲ್ಲಿ ಮಿಂದು ಧನ್ಯನಾಗಬಹುದೇ ಹೊರತು... ಅದರ ಆಳ, ವ್ಯಾಪ್ತಿ ತಿಳಿಯುವುದಾಗುವುದಿಲ್ಲ. ಅಷ್ಟೇಕೆ.. ಅದನ್ನು ಬಹುಶ: ಹೆಣ್ಣಾಗಿ ನಾನೇ ಅಳೆಯಲಾರೆ ಅನ್ನಿಸುತ್ತೆ.... ಮತ್ತೆ ಮತ್ತೆ ಓದಬೇಕೆನ್ನಿಸುತ್ತೆ ಎಂಬ ಮಾತು ಹೇಳಿ ನಿಜಕ್ಕೂ ನನಗೆ ತುಂಬಾ ಪ್ರೋತ್ಸಾಹ ಕೊಟ್ಟಿದ್ದೀರಿ.... ಧನ್ಯವಾದಗಳು ಸಾರ್...

    ReplyDelete
  19. ತೇಜಸ್ವಿನಿ...
    ಹೌದು ನಿಮ್ಮ ಮಾತು ಒಪ್ಪಬೇಕಾದದ್ದೇ..... ಆದರೆ ಸ್ತ್ರೀ ಎಂದರೇ ಗೌರವ ಕೊಡುವ ಪುರುಷರೂ ಇದ್ದಾರಲ್ವಾ..? ಬರೀ ಎಲ್ಲವನ್ನೂ ನಮ್ಮ ನಿಟ್ಟಿನಲ್ಲೇ ಹೇಳುವುದೂ ಕೂಡ ತಪ್ಪಲ್ಲವಾ ತೇಜಸ್ವಿನಿ...? ಹೆಣ್ಣೂ ಗೌರವಯುತವಾಗಿ ತನ್ನ ಎಲ್ಲಾ ಪಾತ್ರಗಳನ್ನೂ ನಿರ್ವಹಿಸಿದಾಗಲೂ ಶೋಷಣೆ ನಡೆದರೆ ನಾವು ಪ್ರತಿಭಟಿಸಲೇಬೇಕು. ಆದರೆ ಎಲ್ಲಾ ಸಂದರ್ಭಗಳೂ ಹಾಗೇ ಆಗಿರಲ್ಲ ಅನ್ನೋದು ಸತ್ಯವೇ ಅಲ್ಲವೇ...? ನಿಮ್ಮ ಅಭಿಪ್ರಾಯ ಹಂಚಿಕೊಂಡು, ನನ್ನ ಮಾತುಗಳನ್ನೂ ಮೆಚ್ಚಿದ್ದಕ್ಕೆ ಧನ್ಯವಾದಗಳು ತಂಗೀ...

    ReplyDelete
  20. ಡಾ. ಆಜಾದ್...
    ಧನ್ಯವಾದಗಳು ಸಾರ್.... ಎಲ್ಲಾ ಧರ್ಮಗಳಲ್ಲೂ ದೇವರ ನಂತರದ ಸ್ಥಾನ ತಾಯಿಗೇ ಮೀಸಲು. ಆದರೆ ಅದನ್ನು ಅರಿತು ನಡೆಯುವುದು ನಮ್ಮ ಕೈಯಲ್ಲೇ ಇದೆಯಲ್ಲವೇ...? ಇಂತಹ ಲೇಖನಗಳು ನನ್ನಿಂದ ಇನ್ನೂ ಮೂಡಿ ಬರಲಿ ಎಂಬ ನಿಮ್ಮ ಮಾತುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಹೀಗೆ ಬರುತ್ತಿರಿ ಸಾರ್ ನನ್ನ ಮಾತುಗಳನ್ನೋದಲು......

    ReplyDelete
  21. ಹೆಣ್ಣು.. ಮಮತೆಯೋ.. ಪ್ರೀತಿಯೋ.. ಪ್ರೇರಣೆಯೋ .. ಇಲ್ಲ ಶಕ್ತಿಯೋ.. ಕೊಟ್ಟಷ್ಟು ಅರ್ಥಗಳು.. ಅಂದುಕೊಂಡಷ್ಟು ಭಾವಗಳು..

    ReplyDelete
  22. ಹೆಣ್ಣು ಗಂಡು ಎಂದು ತಾರತಮ್ಯ ಮಾಡುವ ಜನರಿಗೆ ಈ ನಿಮ್ಮ ಮಾತುಗಳನ್ನು ಓದಿದರೆ ಹೆಣ್ಣು ಎಷ್ಟು ಮಹತ್ವವುಳ್ಳ ವರು ಎಂದು ಖಂಡಿತವಾಗಿಯೂ ಮನವರಿಕೆ ಆಗಲೇಬೇಕು ಆಗುತ್ತದೆ .

    ReplyDelete