ಕಳೆದ ವರ್ಷ "ತುಳಸೀವನ" ಬ್ಲಾಗ್ ನ ಒಡತಿ ಶ್ರೀಮತಿ ತ್ರಿವೇಣಿ ಶ್ರೀನಿವಾಸ ರಾವ್ ಅವರು ವಿಜಯ ಕರ್ನಾಟಕದಲ್ಲಿ "ಮುಪ್ಪು ನಮ್ಮನ್ನೇಕೆ ಹೆದರಿಸುತ್ತದೆ"? ಎಂಬ ಅಂಕಣ ಬರೆದಿದ್ದರು. ಅವರ ಬರಹ ನನ್ನನ್ನು ಆಗಿಂದಾಗ್ಗೆ ಚಿಂತನೆಗೆ ಹಚ್ಚುತ್ತಲೇ ಇರುತ್ತದೆ. ಮಧ್ಯ ವಯಸ್ಸಿನಲ್ಲಿರುವ ನನ್ನಂಥವರೆಲ್ಲರನ್ನೂ ಈ ಚಿಂತೆ ಕಾಡುತ್ತದೆಯೇ...? ಗೊತ್ತಿಲ್ಲ. ಮುಪ್ಪು ಹತ್ತಿರ ಬರುತ್ತಿದೆ ಎಂಬ ಭಯ ನನಗಿಲ್ಲ, ಆದರೆ ಇದೇನು ಆಗಲೇ ಚೌಕಟ್ಟಿಗೆ ಬಂದು ಬಿಟ್ಟೆನೇ.? ಏನನ್ನೂ ಸಾಧಿಸಲೇ ಇಲ್ಲವಲ್ಲ ಎಂಬ ಕಳವಳ ಅಷ್ಟೇ.....
ಕ್ರಿಕೆಟ್ ಮೈದಾನದಲ್ಲಿ ಅರ್ಧ ಶತಕ ಮುಟ್ಟಲು ಕಾದಿರುವ ಆಟಗಾರನ ಮನಸ್ಥಿತಿಯಂತಿರಬಹುದೇ ಈ ಮಧ್ಯ ಮಯಸ್ಕರದು ಎಂದು ಒಂಥರಾ ಕ್ರಿಕೆಟ್ ಆಟಕ್ಕೆ ಸಂಬಂಧ ಕಲ್ಪಿಸಿಕೊಂಡು, ಯೋಚಿಸುತ್ತಿರುತ್ತೇನೆ. ಇನ್ನೇನು ನಾವು ಹೊಸ್ತಿಲ ಬಳಿಯೇ ನಿಂತು ಬಿಟ್ಟಿದ್ದೀವಲ್ಲ ಎಂದುಕೊಂಡು, ಒಮ್ಮೆ ಸುಮ್ಮನೆ ಒಂದು ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆಂದೇ ಹಿಂದೆ ತಿರುಗಿ ನೋಡಿದಾಗ, ಕಳೆದ ಜೀವನ ಎಷ್ಟು ಸಾರ್ಥಕ ಎಂಬ ಗುಣಾಕಾರ, ಭಾಗಾಕಾರದಲ್ಲಿ ಮನಸ್ಸು ತೊಡಗುತ್ತದೆ. ನನ್ನ ಜೀವನ ನಾ ಅಂದುಕೊಂಡಂತೆ ಆಗಿದ್ದು ಬಹಳ ಕಡಿಮೆ... ಅದು ಹೋದ ದಾರಿಗೆ ನಾನು ಹೋಗಿದ್ದೇ ಜಾಸ್ತಿ..... ಆದರೂ ಮದುವೆ, ಸಂಸಾರ, ಕೆಲಸ, ಮಗು, ಜವಾಬ್ದಾರಿ ಎಲ್ಲದರ ಮಧ್ಯೆ ಎಲ್ಲೋ ಕಳೆದು ಹೋಗಿದ್ದ ನನ್ನನ್ನು ನಾನು ಅರಿತುಕೊಳ್ಳುವ, ಎಚ್ಚೆತ್ತುಕೊಳ್ಳುವ ಪ್ರಯತ್ನ ಈಗ ಶುರುವಾಗಿದೆ. ಈ ಮಿಕ್ಕಿದ ವರ್ಷಗಳಲ್ಲಾದರೂ ಏನಾದರೂ ಸಾಧಿಸಬಹುದಾ ಎಂಬ ಯೋಚನೆ ಮಾಡತೊಡಗಿದ್ದೇನೆ...
ಸಾರ್ಥಕ ಜೀವನವೆಂದರೆ ಬರೀ ಮಕ್ಕಳನ್ನು ಬೆಳೆಸಿ, ಸಂಸಾರ ಉಳಿಸುವುದು ಮಾತ್ರವೇನಾ..? ಮುಪ್ಪು ಬರುವ ಮೊದಲು ಇರುವ ತಾರುಣ್ಯದ ಕೆಚ್ಚಿನಲ್ಲಿ ಎಲ್ಲವನ್ನೂ ಧೈರ್ಯವಾಗಿ ಎದುರಿಸಿ, ಹೋರಾಡಿ ಗೆಲ್ಲುತ್ತಿದ್ದ ಮನ ಒಮ್ಮೆಗೇ ಕಡಿವಾಣ ಹಾಕಿದಂತಾಡುವುದೇಕೋ..? ಮಕ್ಕಳು ದೊಡ್ಡವರಾಗಿ ತಮ್ಮ ಜೀವನ ರಥದ ಚುಕ್ಕಾಣಿ ಹಿಡಿದ ನಂತರವಾದರೂ ನಾವು ನಮ್ಮ ರಥವನ್ನು ನಮಗೆ ಬೇಕಾದ ದಾರಿಯಲ್ಲಿ ನಡೆಸಬಹುದಲ್ಲವೇ...?
ಈ ಹಂತವನ್ನು ತೀರಾ ’ಮುಪ್ಪು’ ಎಂದು ಕರೆಯಲಾಗದಿದ್ದರೂ, ಅದಕ್ಕಿನ್ನಾ ಒಂದೆರಡು ಮೆಟ್ಟಿಲು ಹಿಂದಿರುವ..."ಮುಪ್ಪಿನ ತಾರುಣ್ಯ" ಅಥವಾ "ಮಧ್ಯಾವಸ್ಥೆ" ಎನ್ನಬಹುದೇನೋ... ಶ್ರೀಮತಿ ತ್ರಿವೇಣಿಯವರು ಹೇಳಿದಂತೆ ಮುಪ್ಪನ್ನು "ಬಾ ಗೆಳೆಯಾ ನೀ ಬರುವ ನಿರೀಕ್ಷೆ ನನಗೆ ಮೊದಲೇ ಇತ್ತು..." ಎಂದು ಸ್ವಾಗತಿಸುವ ಚಿಂತನೆಯೇನೋ ತುಂಬಾ ಚೆನ್ನಾಗಿದೆ. ಆದರೆ ನಮ್ಮ ಬಾಲ್ಯ, ಯೌವನ, ಗೃಹಸ್ಥ ಎಷ್ಟು ಬೇಗ ಕಳೆದು ಹೋಗುತ್ತದೆಂದರೆ, ನಾವಿನ್ನೂ ಏನನ್ನೂ ಆಲೋಚಿಸಿಯೇ ಇರುವುದಿಲ್ಲ ಅಥವಾ ಅನುಭೂತಿಸಿಯೇ ಇರುವುದಿಲ್ಲ, ಆಗಲೇ ಮುಪ್ಪು ಬಲವಂತದಿಂದ, ನಾವು ಬಾ ಎನ್ನುವುದನ್ನು ಕಾಯದೆಲೇ ಬಂದು ಅಚ್ಚುಕಟ್ಟಾಗಿ ಪದ್ಮಾಸನ ಹಾಕಿಕೊಂಡು ಕುಳಿತಾಗಿರತ್ತೆ. ಅದರಲ್ಲೂ ಒಂದು ಹೆಣ್ಣು ತನ್ನ ಎಲ್ಲಾ ಜವಾಬ್ದಾರಿಗಳನ್ನೂ, ತನ್ನ ಎಲ್ಲಾ ತರಹದ ಪಾತ್ರಗಳನ್ನೂ ಯಶಸ್ವಿಯಾಗಿ ನಿರ್ವಹಿಸಿ, ಅಬ್ಬಾ...! ಇನ್ನಾದರೂ ನನಗೆ ಬೇಕಾದದ್ದೇನಾದರೂ ಸಾಧಿಸಬೇಕೆಂದು, ತುಡಿಯುವಷ್ಟರಲ್ಲಿ, ಮೈಯಲ್ಲಿನ ಶಕ್ತಿ ಎಲ್ಲಾ ಸೋರಿ ಹೋಗಿರುತ್ತೆ. ಮನಸು ತನ್ನ ಇರುವಿಕೆಯನ್ನು ಮನವರಿಕೆ ಮಾಡಿಕೊಡಲು ಸಜ್ಜಾಗುವ ವೇಳೆಗಾಗಲೇ ದೇಹ ಮೊಂಡುಗಟ್ಟಿ, ಕೈಕಟ್ಟಿ ಕುಳಿತುಬಿಟ್ಟಿರುತ್ತೆ...!!!
ಆದರೂ ದೇಹದಲ್ಲಿ ಬಂದು ಪಟ್ಟಾಂಗ ಹೊಡೆಯುತ್ತಾ ಕುಳಿತಿರುವ ಮುಪ್ಪಿನ ದೇವತೆಯನ್ನು ಸಂತುಷ್ಠಗೊಳಿಸಿ, ಮನಸ್ಸು ಸಾಧಿಸಬೇಕೆಂದು ಕಾಣುತ್ತಿರುವ ಕನಸುಗಳಲ್ಲಿ ಕೆಲವನ್ನಾದರೂ ನಾವು ಸಾಕಾರಗೊಳಿಸಿಕೊಂಡರೆ, ಮುನಿದು, ಸೋಮಾರಿಯಾಗಿ ಕುಳಿತಿರುವ ಮುಪ್ಪೂ ಕೂಡ, ಎಚ್ಚೆತ್ತು ಮೈ ಕೊಡವಿ, ಮನಸಿನ ಜೊತೆ ಕೈಗೂಡಿಸಬಹುದು. ತಾನಿನ್ನು ಮೈ ಮುದುರಿ ಮಲಗಿದರೆ ಏನೇನೂ ಪ್ರಯೋಜನವಿಲ್ಲವೆಂದು ಅರ್ಥ ಮಾಡಿಕೊಂಡಾಗ ಮಾತ್ರವೇ ಮುಪ್ಪು ಕೂಡ ಅದ್ಭುತವಾಗಿ, ನಳನಳಿಸುವ ಸೌಂದರ್ಯ ದೇವತೆಯಾಗಬಹುದು...
ಕ್ರಿಯಾಶೀಲತೆ ಎನ್ನುವುದು ಎಲ್ಲಿಯವರೆಗೆ ನಮ್ಮೊಳಗೆ ಜಾಗೃತವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೋ, ಅಲ್ಲಿಯವರೆಗೆ ನಮ್ಮ ತನುವೆಂಬ ಮನೆಗೆ ಬರುವ ಅತಿಥಿಗಳಾದ, ಮುಪ್ಪು, ರೋಗ, ಚಿಂತೆ ಎಲ್ಲರೂ ನಮ್ಮನ್ನು ಬಳಲಿಸದೆ, ಆರಾಮವಾಗಿ ಇದ್ದು, ಅತಿಥಿ ಸತ್ಕಾರವನ್ನು ಮೌನವಾಗಿ, ಸದ್ದಿಲ್ಲದೆ ಸ್ವೀಕರಿಸಿ, ಕಟ್ಟ ಕಡೆಯ ಬೆಂಚಿನ ವಿದ್ಯಾರ್ಥಿಗಳಂತೆ ಕುಳಿತಲ್ಲೇ ತೂಕಡಿಸುತ್ತಾ ಇರುತ್ತಾರೆ. ಇವರೆಲ್ಲರ ಜೊತೆಯೇ ಸಹಬಾಳ್ವೆ ಮಾಡಲೇಬೇಕಾದ ನಾವು, ಜೀವನವನ್ನು ನೋಡುವ ದೃಷ್ಟಿ ಬದಲಾಯಿಸಿಕೊಂಡಷ್ಟೂ ಶಾಂತಿಯುತವಾದ, ನೆಮ್ಮದಿಯ ಜೀವನವನ್ನು ನಡೆಸಬಹುದು.... ಇದು ನನ್ನ ಅನಿಸಿಕೆ.....!!! :-)
ಅಕ್ಕ,
ReplyDeleteತುಂಬಾ ಚೆನ್ನಾಗಿದೆ ಲೇಖನ ಹಾಗೂ ಲೇಖನದೊಳಗಿನ್ ಚಿಂತನೆ. ಅದರಲ್ಲೂ ಕೊನೆಯ ಪ್ಯಾರಾ ಮತ್ತೂ ಇಷ್ಟವಾಯಿತು.
ನನಗನ್ನಿಸುವ ಮಟ್ಟಿಗೆ ಮುಪ್ಪು ಕೇವಲ ಮನಸ್ಸಿಗೆ ಮಾತ್ರ ಬರುತ್ತದೆಯೇ ಹೊರತು ದೇಹಕ್ಕಲ್ಲ
ReplyDeleteನಾವು ಚಟುವಟಿಕೆಯ ಕೆನ್ದ್ರಬಿನ್ದುವಾದರೆ ಮುಪ್ಪು ಬರುವುದೇ ಇಲ್ಲ
ಎಷ್ಟೋ ಯುವಕರು ತಮ್ಮ ಹದಿಹರೆಯದಲ್ಲಿಯೇ ಮುಪ್ಪು ಹಿಡಿದಂತೆ ಇರುತ್ತಾರೆ
ಹಾಗಾಗಿ ಮುಪ್ಪು ವಯಸ್ಸಿಗೆ ಸಂಭಂದಿಸಿದ್ದಲ್ಲ ಎನಿಸುತ್ತದೆ
ಪಾಶ್ಚಾತ್ಯ ದೇಶಗಳಲ್ಲಿ ವಯಸ್ಸು ೯೦ ದಾಟಿದರೂ ಅವರ ಕೆಲಸ ಅವರೇ ಮಾಡಿಕೊಳ್ಳುತ್ತಾರೆ
ಮಕ್ಕಳ ಮೇಲೆ ಅವಲಂಬಿಸುರುವುದೇ ಇಲ್ಲ
ಮುಪ್ಪು ಇವರಿಗೆ ಬಂದಿದೆ ಎಂದು ಹೇಳಲು ಸಾದ್ಯವೇ ಇಲ್ಲ, ಅಷ್ಟರ ಮಟ್ಟಿಗೆ ಅವರು ಚುರುಕಾಗಿರುತ್ತಾರೆ
ನಿಮ್ಮ ಲೇಖನ ಬಹಳ ಸುಂದರವಾಗಿದೆ
ಸಂಸಾರದ ಸಾರಥ್ಯ ವಹಿಸಿಕೊಂಡು ಮಕ್ಕಳನ್ನು ಜವಾಬ್ದಾರಿಯುತ ನಾಗರೀಕರನ್ನಾಗಿ ಮಾಡುವುದು ಕಡಿಮೆ ಸಾಧನೆ ಏನಲ್ಲ ಎನ್ನುವುದು ನನ್ನ ಅನಿಸಿಕೆ.ಹೀಗಾಗಿ ಕೊರಗುವ ಅವಶ್ಯಕತೆ ಇಲ್ಲ.ಇನ್ನು ಜವಾಬ್ದಾರಿಗಳು ಮುಗಿದ ನಂತರ ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಖಂಡಿತಾ ಸಾಧಿಸಬಹುದು.ಇತ್ತೀಚಿಗೆ ಕೆಲ ವರ್ಷಗಳ ಹಿಂದೆ ಕಾಲವಾದ ಹೆಸರಾಂತ ಜಲವರ್ಣ ಚಿತ್ರಕಾರ ರಘೋತ್ತಮ್ ಪುಟ್ಟಿಯವರು ಚಿತ್ರಕಲೆಯ ಅಭ್ಯಾಸವನ್ನು ಅರವತ್ತು ವರ್ಷಕ್ಕೆ ಶುರು ಮಾಡಿ ,ತೊಂಬತ್ತೆರಡು ವರುಷಗಳವರೆಗೆ(ಸಾಯುವ ತನಕ)ಚಿತ್ರ ಬರೆಯುತ್ತಲೇ ಇದ್ದರು.ಉತ್ತಮ ಲೇಕನ.ಅಭಿನಂದನೆಗಳು.
ReplyDeleteಶ್ಯಾಮಲ ಮೇಡಮ್,
ReplyDeleteಕ್ರಿಯಾಶೀಲತೆ ಇದ್ದಲ್ಲಿ ಮುಪ್ಪು ಮಾರುದೂರವೆನ್ನುವುದು ಎಷ್ಟು ಸತ್ಯವಲ್ಲವೇ. ಅದಕ್ಕೆ ಅಬ್ದುಲ್ ಕಲಾಂ ಉದಾಹರಣೆ. ಉತ್ತಮ ಲೇಖನಕ್ಕಾಗಿ ಧನ್ಯವಾದಗಳು.
"ಮುಪ್ಪಿನ ತಾರುಣ್ಯ" ಹೊಸ ಪದದ ಸೇರ್ಪಡೆ. ಎಲ್ಲರ ಜೀವನದಲ್ಲೂ ಮುಪ್ಪು ಅನಪೇಕ್ಷಿತವಾದರೂ ಅನಿವಾರ್ಯದ ಅತಿಥಿ. ವೃದ್ಧಾಶ್ರಮಕ್ಕೆ ಪಾಲಕರನ್ನು ತಲುಪಿಸಿ ನಿಟ್ಟುಸಿರು ಬಿಡುವ ವರ್ತಮಾನ ಸ೦ಸ್ಕೃತಿಯಲ್ಲಿ, ನೆಮ್ಮದಿಯ ಜೀವನ ಅಥವಾ ಇಳಿವಯಸ್ಸಿನಲ್ಲಿ ತಮ್ಮ ಮಕ್ಕಳಿ೦ದ ಅಪೇಕ್ಷಿಸುವ ಪ್ರೀತಿ, ಮಮತೆ ಮರೀಚೆಕೆಯಾಗಯೇ ಉಳಿಯುತ್ತದೇನೋ ಅನ್ನಿಸುತ್ತದೆ. ಇದು ಬದುಕಿನ ಕಹಿ ಸತ್ಯ.
ReplyDeleteಲೇಖಕರು ಇಲ್ಲಿ ಮುಪ್ಪಿನ ತಾರುಣ್ಯದಲ್ಲಿ ಕ್ರಿಯಾಶೀಲತೆಗೆ ಹೆಚ್ಚು ಒತ್ತು ಕೊಡುವುದರಿ೦ದ ನೆಮ್ಮದಿಯ ಜೀವನವನ್ನು ನಡೆಸಬಹುದು ಎನ್ನುವುದು ಒಪ್ಪವಾದ ಮಾತು. ನಮ್ಮ ಉಳಿದ ಜೀವನವನ್ನು ಒ೦ದು ನಿಶ್ಚಿತ ಗುರಿಯ ಸಾಧನೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಉಳಿದ ದಾರಿಯನ್ನು ಸಾರ್ಥಕಗೊಳಿಸಿಕೊಳ್ಳಬಹುದು ಎನ್ನುವುದು ನನ್ನ ಅನಿಸಿಕೆ. ಉತ್ತಮ ಚಿ೦ತನೆಯನ್ನು ನಮ್ಮ ಮು೦ದಿಟ್ಟ ಶ್ಯಾಮಲಾಗೆ ಧನ್ಯವಾದಗಳು.
ಅನ೦ತ್
ಕ್ರಿಯಾಶೀಲತೆಯಲ್ಲಿ ತೊಡಗಿದ ಮನ ಸದಾತಾರುಣ್ಯದಲ್ಲಿರುತ್ತೆ!!
ReplyDeleteಜೀವನದ ಎಲ್ಲಾ ವಿಭಾಗಗಳಲ್ಲೂ ಗುರಿಯಿಟ್ಟು ಸಾಧಿಸುವ ಚಲವಿದ್ದಲ್ಲಿ ವಯಸ್ಸು ಅಡ್ಡವಾಗದು ಎ೦ದು ನನ್ನ ಎಣಿಕೆ.
ಚೆಂದದ ಚಿಂತನಾಸ್ಫೂರ್ತಿಯ ಲೇಖನ!
A powerful slogan :
Whatever you vividly imagine, ardently desire, sincerely believe, enthusiastically act upon must inevitably come to pass-Paul J.Mayer
ತೇಜಸ್ವಿನಿ..
ReplyDeleteಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೌದು ಕೊನೆಯ ಪ್ಯಾರಾ ನನಗೂ ತುಂಬಾ ಇಷ್ಟವಾದದ್ದು ಮತ್ತು ನಾವೂ ಹಾಗೆ ಬದುಕಲು ವಿಚಾರಗಳನ್ನು ಅಳವಡಿಸಿಕೊಳ್ಳಬೇಕು....
ಡಾ.ಗುರು ಸಾರ್...
ಧನ್ಯವಾದಗಳು ನನ್ನ ಅಭಿಪ್ರಾಯವನ್ನು ಸಹಮೋದಿಸಿದ್ದಕ್ಕೆ...
ಶಿವು ಸಾರ್...
ಹೌದು ನಮಗೆ ಕ್ರಿಯಾಶೀಲತೆಯೇ ಬದುಕಿನ ಧ್ಯೇಯ ಎಂದು ಬದುಕುತ್ತಿರುವವರ ಅನೇಕ ಉದಾಹರಣೆಗಳಿವೆ. ಅವರನ್ನು ನೋಡಿ ನಾವು ಕಲಿಯಬೇಕೆಂಬುದೇ ನನ್ನ ಅಭಿಪ್ರಾಯ ಕೂಡ. ಧನ್ಯವಾದಗಳು.
ಡಾ.ಮೂರ್ತಿಯವರೇ...
ReplyDeleteನನ್ನ ಮಾತುಗಳನ್ನೋದಲು ಬಂದ ನಿಮಗೆ ಸ್ವಾಗತ. ನೀವು ಹೇಳಿದ್ದು ಅಪ್ಪಟ ಸತ್ಯವೇ.. ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸಿದ ನಂತರವಾದರು ಹೆಣ್ಣು ಮಕ್ಕಳು ಎಚ್ಚೆತ್ತುಕೊಂಡು, ತಮ್ಮ ಕ್ರಿಯಾಶೀಲತೆಗೆ ಆದ್ಯತೆ ಕೊಡಬೇಕೆಂಬುದೇ ನನ್ನ ಆಶಯ ಕೂಡ. ನಾನೂ ಅದೇ ಹಾದಿಯಲ್ಲೇ ಇದ್ದೀನಾದ್ದರಿಂದ, ಕೊರಗುವ ವಿಷಯವೇ ಇಲ್ಲ. ಎಲ್ಲ ಹೆಣ್ಣು ಮಕ್ಕಳೂ ಏನಾದರೂ ಸಾಧಿಸಲಿ ಎಂಬುದೇ ನನ್ನ ವಿಚಾರ... ಧನ್ಯವಾದಗಳು ಸಾರ್..
"ಮುಪ್ಪಿನ ತಾರುಣ್ಯ".. ಹೊಸ ಪದ ಎಂದಿದ್ದೀರಿ ಅನಂತ್... :-) ಅದೇಕೋ ನನಗೆ ಹಾಗೆ ಹೇಳಬೇಕೆನ್ನಿಸಿತು.. ಮಕ್ಕಳು ವೃದ್ಧಾಪ್ಯದಲ್ಲಿ ನಮ್ಮನ್ನು ಪಾಲಿಸ ಬೇಕೆನ್ನುವುದು ಈಗ ಎಷ್ಟು ಪ್ರಸ್ತುತವೋ ನನಗೆ ತಿಳಿದಿಲ್ಲ.. ಆದರೆ ನಮ್ಮ ಭವಿಷ್ಯವನ್ನು ಭದ್ರ ಮಾಡಿಕೊಳ್ಳುವುದು ನಮ್ಮದೇ ಜವಾಬ್ದಾರಿ ಅಥವಾ ಕರ್ತವ್ಯವೆಂದು ನಾ ತಿಳಿದಿರುವೆ. ಹತ್ತಿರವಿರಲಿ, ದೂರವಿರಲಿ, ಎಲ್ಲಿಯವರೆಗೆ ನಾವು ಕ್ರಿಯಾಶೀಲರಾಗಿ, ಮಕ್ಕಳಿಗೆ ತೊಂದರೆಯಾಗದಂತೆ ಬದುಕುತ್ತೇವೋ, ಅಲ್ಲಿಯವರೆಗೆ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಕ್ರಿಯಾಶೀಲತೆ ಇದ್ದಾಗ ಮನಸ್ಸೂ ಧನ್ಯಾತ್ಮಕ ಚಿಂತನೆಯಲ್ಲೇ ತೊಡಗಿ, ನಮ್ಮ ಹಾಗೂ ನಮ್ಮ ಮಕ್ಕಳ ಜೀವನಗಳೆರಡೂ ಪರಸ್ಪರ ಹೆಚ್ಚು ಆತ್ಮೀಯತೆಯಿಂದ ಕೂಡಿರುತ್ತದೆ ಅಲ್ವಾ ಸಾರ್...? ನನ್ನ ಚಿಂತನೆಯನ್ನು ಅನುಮೋದಿಸಿ, ನಿಮ್ಮ ಅಭಿಪ್ರಾಯವನ್ನೂ ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.....
ReplyDeleteಖಂಡಿತಾ ಸತ್ಯವಾದ ಮಾತು ಸೀತಾರಾಮ್ ಸಾರ್...
ReplyDeleteಜೀವನದ ಎಲ್ಲಾ ಘಟ್ಟಗಳಲ್ಲೂ, ಒಂದು ಗುರಿ ಇರಲೇ ಬೇಕು. ಜೊತೆಗೆ ವಯಸ್ಸು ಹೆಚ್ಚಾದಂತೆ, ಕ್ರಿಯಾಶೀಲತೆಯೂ ಇರಲೇಬೇಕು. ಮನಸ್ಸು ಸದಾ ಏನಾದರೂ ಮಾಡಬೇಕೆಂದು ತುಡಿಯುತ್ತಿದ್ದರೆ... ಬೇರೆಲ್ಲಾ ನಕಾರಾತ್ಮಕ ವಿಚಾರಗಳಿಂದ ಮುಕ್ತಿ ಹೊಂದಿರುತ್ತದೆ ಮತ್ತು ಪ್ರಫುಲ್ಲವಾಗೂ ಇರುತ್ತದೆ. ಸಾಧಿಸಲು ವಯಸ್ಸು ಅಡ್ಡಿಯಲ್ಲವೆಂಬ ನಿಮ್ಮ ಚಿನ್ನದಂತಾ ಮಾತು ಓದಿ ಸಂತೋಷವಾಯಿತು. ಒಳ್ಳೆಯ ಒಂದು ’ನುಡಿಮುತ್ತು’ ಕೂಡ ಕೊಟ್ಟಿದ್ದೀರಿ, ಧನ್ಯವಾದಗಳು......
ಉತ್ತಮ ಚಿಂತನೆಯ ಬರಹ. ಕ್ರಿಯಾಶೀಲತೆ, ಚಟುವಟಿಕೆಗಳಿದ್ದಲ್ಲಿ ಮುಪ್ಪಿನ ಯೋಚನೆಯೆ ಬರಲಾರದೇನೋ !.
ReplyDeleteನೇಮಿಚಂದ್ರ ಕನ್ನಡದ ಅತ್ಯಂತ ಕ್ರಿಯಾಶೀಲ ಬರಹಗಾರ್ತಿ.ಅವರ ಎಲ್ಲಾ ಬರಹಗಳಲ್ಲಿ ಬದುಕಿನ ಬಗ್ಗೆ ಒಂದು ಪಾಸಿಟಿವ್ ಅಪ್ರೋಚ್ ಇದೆ.ಅವರ 'ಬದುಕು ಬದಲಿಸಬಹುದು'ಮತ್ತು 'ಸಮಗ್ರ ಕಥೆಗಳು'ಅದ್ಭುತ ಪುಸ್ತಕಗಳು.
ReplyDeleteಧನ್ಯವಾದಗಳು ಸುಬ್ರಹ್ಮಣ್ಯ ಸಾರ್...
ReplyDeleteಜವಾಬ್ದಾರಿಗಳೆಲ್ಲ ಮುಗಿದ ನಂತರವೇ ನಮಗೆ ಕ್ರಿಯಾಶೀಲ ಚಟುವಟಿಕೆಗಳ ಅವಶ್ಯಕತೆ ಹೆಚ್ಚಿರುತ್ತದೆ. ನಿರಂತರ ಕ್ರಿಯಾಶೀಲತೆಯಲ್ಲಿ ಬೇರೆ ಯಾವ ಯೋಚನೆಗೂ ಸಮಯವೆಲ್ಲಿ ಸಿಗಬೇಕು ಅಲ್ಲವೇ...?
ಡಾ.ಮೂರ್ತಿ ಸಾರ್...
ನೇಮಿಚಂದ್ರ ನನ್ನ ಮೆಚ್ಚಿನ ಲೇಖಕಿ. ನಾನು ಅವರ ಕೆಲವು ಬರಹಗಳನ್ನು ಓದಿದ್ದೇನೆ. ನಾಗೇಶ್ ಹೆಗಡೆಯವರ ಪುಸ್ತಕಗಳು ಬಿಡುಗಡೆಯಾದಾಗ, ನೇಮಿಚಂದ್ರ ಕೂಡ ಒಬ್ಬ ಅತಿಥಿಯಾಗಿದ್ದರು. ಆ ಕಾರ್ಯಕ್ರಮದಲ್ಲಿ ಅವರ ಮಾತು ಕೇಳುವುದೂ ಒಂದು ಮುಖ್ಯ ಆಕರ್ಷಣೆಯಾಗಿತ್ತು ನನಗೆ. ಧನ್ಯವಾದಗಳು ಮತ್ತೆ ಬಂದು ನೇಮಿಚಂದ್ರರನ್ನು ಪ್ರಸ್ತಾಪಿಸಿದ್ದಕ್ಕೆ...
ಶ್ಯಾಮಲಾ,
ReplyDeleteಏನನ್ನಾದರೂ ಸಾಧಿಸಬೇಕೆನ್ನುವ ಭಾವನೆ ಸರಿಯಲ್ಲ ಎನ್ನುವದು ನನ್ನ ಭಾವನೆ. ಮಾನವಜೀವಿಯ ಹೊರತಾಗಿ, ಈ ಪ್ರಪಂಚದಲ್ಲಿಯ ಇತರ ಸಸ್ಯ ಹಾಗು ಜೀವಿಗಳು
‘ಇರು’ತ್ತವೆ ಹಾಗು ‘ಹೋಗು’ತ್ತವೆ. ಅದೇ ರೀತಿ ನಮಗೂ ಸಹ ಸಹಜವಾದದ್ದು!
ಕಾಕಾ....
ReplyDeleteಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....