Wednesday, August 18, 2010

ದೃಶ್ಯ ವೈಭವ.

ಅನಂತ ಮುತ್ತುಗಳೊಂದಾಗಿ
ಧರೆಗೆ ಮುತ್ತಿಕ್ಕೆ ಧಾವಿಸುತಿರೆ..
ಮುತ್ತುಗಳ ಲಾಸ್ಯಕ್ಕೆ
ಒನಪು ವಯ್ಯಾರಕೆ...
ಮನಸೋತ ತುಂಟ
ಸುಳಿಗಾಳಿ....
ಎಲ್ಲಿಂದಲೋ ಭರೆಂದು
ಬೀಸುತ್ತಾ...
ಮುತ್ತುಗಳ ಬೆನ್ನಟ್ಟುತ್ತಾ...
ಆಟವಾಡುತ್ತಿರೆ
ಎತ್ತರದ ತರುಗಳೂ
ದಟ್ಟ ಹಸಿರು ಗರಿಗಳೂ
ತೂಗುತ್ತಾ ಜೊತೆಗೂಡುತಿರೆ
ಪದ್ಮ ಸರೋವರದಲ್ಲಿ
ಸಂಚಲನ ಮೂಡುತಿರೆ
ಮಾಯದ ಮುಸುಕೊಂದು
ವಸುಂಧರೆಯ ಮರೆಮಾಡಿತ್ತು...

ನಾಚಿ ಮೋಡಗಳಲಿ
ಮರೆಯಾಗಿದ್ದ ರವಿ...
ಚಿನ್ನಾಟವ ಕಾಣಲು
ಮುದದಿಂದ ಇಣುಕೆ...


ಮುಸುಕು ಸರಿದು....

ಮಿಂದು ಶುಭ್ರವಾದ
ಖಾಲಿ ರಸ್ತೆ ಕಣ್ಣಮುಂದಿತ್ತು....

ಮಳೆ ಬಂದಾಗ ಪ್ರಕೃತಿಯ ಸೊಬಗು, ಬಿನ್ನಾಣವನ್ನು ವರ್ಣಿಸಲು ಪದಗಳು ಸಾಲದೇನೋ ಅನ್ನಿಸುವ ಆತಂಕ... ಆ ದಿನ ಮಧ್ಯಾಹ್ನ ಮೋಡ ಕವಿದ ವಾತಾವರಣವಿದ್ದರೂ... ಮಳೆಯಾಗದೇನೋ ಎಂಬ ಉದಾಸ ಭಾವವಿದ್ದಾಗ, ಇದ್ದಕ್ಕಿದ್ದಂತೆ ಒಂದೇ ಸಮನೆ ಶುರುವಾದ ಮುತ್ತಿನ ಹನಿಗಳ ಧಾರೆ ನನ್ನನ್ನು ಹೊರಗೆ ಎಳೆ ತಂದಿತ್ತು. ಯಡಿಯೂರು ಕೆರೆ ಬೀಸುತ್ತಿದ್ದ ಸುಳಿಗಾಳಿಗೆ ಎಬ್ಬಿಸುತ್ತಿದ್ದ ತರಂಗಗಳು ವರ್ಣಿಸಲಸಾಧ್ಯವಾಗಿತ್ತು... ಯಾರಾದರೂ ವಾದ್ಯ ನುಡಿಸಿ ತರಂಗಗಳ ತೇಲಿ ಬಿಡುತ್ತಿರುವರೇನೋ ಅನ್ನುವ ಭ್ರಮೆ ಉಂಟುಮಾಡುತ್ತಿತ್ತು. ಬೆರಗಾಗಿ ನೋಡುತ್ತಾ ನಿಂತಿದ್ದ ನನಗೆ, ಅತ್ಯದ್ಭುತವಾದ ದೃಶ್ಯ ವೈಭೋಗವಿನ್ನೂ ಕಾದಿತ್ತು.....ಭರ್ರ್ ಎಂದು ಬೀಸುತ್ತಿದ್ದ ಸುಳಿಗಾಳಿ ಮುತ್ತಿನ ಧಾರೆಯನ್ನು ಅನಾಮತ್ತು ಎತ್ತಿ ಎತ್ತಲೋ ಕೊಂಡೊಯ್ಯುತಿದೆಯೇನೋ ಅನ್ನಿಸುವಂತಿತ್ತು.... ಜೊತೆಗೆ ಕೆರೆಯ ಪಕ್ಕದಲ್ಲೂ, ನಮ್ಮ ಬಹು ಮಹಡಿ ಕಟ್ಟಡಗಳಲ್ಲೂ ಇರುವ ಎತ್ತರದ ತೆಂಗಿನ ಮರಗಳ ಗರಿಗಳೂ ಬೀಸುವ ಸುಳಿಗಾಳಿಗೆ ತೂಗುತ್ತ, ಮುತ್ತಿನ ಧಾರೆಯ ಸಂಗೀತಕ್ಕೆ ತಲೆದೂಗುತ್ತಿರುವಂತೆ, ತಾನೇನೂ ಎತ್ತರದ ತರುಗಳಿಗಿಂದ ಕಡಿಮೆಯಿಲ್ಲವೆಂದು ಬೀಗುತ್ತಾ, ವೈಯಾರದಿ ಬಳುಕುತ್ತಾ ಲಾಸ್ಯವಾಡುತ್ತಿದ್ದ ಚಿಕ್ಕ ಚಿಕ್ಕ ತರುಗಳೂ.... ಮೋಡದ ಮರೆಯಲ್ಲಿ ಅವಿತಿಟ್ಟು ಕೊಂಡು ವಸುಂಧರೆಯ ಅಪ್ರತಿಮ ಸೌಂದರ್ಯವನ್ನು ಕದ್ದು ನೋಡುತ್ತಿದ್ದ ಸೂರ್ಯ.... ತೇಲುತ್ತಿದ್ದ ಮೋಡಗಳು, ಕೆರೆಯಲ್ಲಿ ಅರಳಿರುವ ಸುಂದರ ಪದ್ಮಗಳನ್ನು ನೋಡಿ, ಮೋಹಗೊಂಡಿರುವರೇನೋ ಎಂಬಂತೆ ಸ್ಥಬ್ದವಾಗಿ, ಮುಸುಕು ಬೀರಿ, ವಸುಂಧರೆಯನ್ನು ಮರೆ ಮಾಡಿದ್ದ ಕೆಲವು ಘಳಿಗೆಗಳು...... ಅಬ್ಬಾ...... ನನ್ನ ಕಣ್ಣ ಮುಂದೆ ಪ್ರಕೃತಿ ಮಾತೆ ಆಡಿದ ಆಟ, ನೋಡಲೆರಡು ಕಣ್ಣುಗಳು ಸಾಲದಂತಾಗಿತ್ತು.

ಹಾಗೇ ಕೆಲವು ಕ್ಷಣಗಳಲ್ಲೇ... ವಸುಂಧರೆಯ ಸೌಂದರ್ಯ ನೋಡದೆ ತಾನಿನ್ನು ಅವಿತಿರಲಾರೆನೆಂದು ಹೊರಗೆ ಬಂದ ಸೂರ್ಯ ಕಿರಣಗಳು ಅತ್ಯಂತ ಮನೋಹರ ದೃಶ್ಯವಾಗಿತ್ತು. ಇವೆಲ್ಲಾ ಅನುಭೂತಿಗಳು ಕೇವಲ ಕೆಲವೇ ಘಳಿಗೆಗಳಲ್ಲಿ ಮುಗಿದಿತ್ತು. ಎಚ್ಚೆತ್ತ ನನಗೆ ಒಮ್ಮೆಲೇ ಆದ ಅನುಭವವೆಂದರೆ ನನ್ನ ಕಣ್ಣಿಗೆ ರಾಚಿದ ಖಾಲಿ ರಸ್ತೆ..... ನನ್ನ ಗಡಿಯಾರದಲ್ಲಿ ಕೆಲವು ಕ್ಷಣಗಳು ಕಳೆದು ಹೋಗಿದ್ದವು.....

15 comments:

  1. ತು೦ಟ ಸುಳಿಗಾಳಿ ಮುತ್ತಿನ ಮಳೆ ಹನಿಗಳಿಗೆ ಆಟವಾಡಿಸುತ್ತಿದ೦ತೆ, ಮಾಯೆಯ ಮುಸುಕು ಹೊದ್ದ ವಸು೦ಧರೆಗೆ.. ನಾಚುತ್ತ ನಾಚುತ್ತಾ ಚಿನ್ನಾಟವಾಡಲು ಮುಸುಕು ಸರಿಸಿದ ರವಿ, ಅಧ್ಭುತ ಕಲ್ಪನೆ ಶ್ಯಾಮಲಾ... ಪದ್ಮ ಸರೋವರದಲ್ಲಿ ಸಂಚಲನ ಮೂಡಿದ೦ತೆ...!

    ಶುಭಾಶಯಗಳು
    ಅನ೦ತ್

    ReplyDelete
  2. ಪ್ರಕೃತಿಯ ರಮ್ಯತೆಯ ಮುಸಲಧಾರೆಯಲ್ಲಿ ಮಿ೦ದ ಮನ ಅರಳಿದ ಪರಿಯ ತುಂಬಾ ಕಾವ್ಯಾತ್ಮಕವಾಗಿ ಹಿಡಿದಿಟ್ಟಿದ್ದಿರಾ...ಕವನ ಹಾಗೂ ಕಾವ್ಯಾತ್ಮಕ ಪೂರಕ ಲೇಖನ ಮನವನ್ನೂ ನಾವೇ ಅನುಭವಿಸಿದ್ದಷ್ಟು ಸಂತೋಷವನ್ನುಂಟು ಮಾಡಿದವು.

    ReplyDelete
  3. ಶ್ಯಾಮಲ ಅವರೆ;ಅದ್ಭುತ ಕವನ!ನನ್ನ ಬ್ಲಾಗಿಗೂ ಬನ್ನಿ.ನಮಸ್ಕಾರ.

    ReplyDelete
  4. ಅದ್ಭುತ ವರ್ಣನೆ...
    ಮಳೆಗಾಲದ ದೃಶ್ಯ ವೈಭವ...
    ಬರಹಕ್ಕೆ ಪುಟವಿಟ್ಟಂತೆ "ಸುಂದರ ಸಾಲುಗಳು.."

    ಸೊಗಸಾದ ಕಾವ್ಯಲೇಖನಕ್ಕೆ ಅಭಿನಂದನೆಗಳು...

    ReplyDelete
  5. ತು೦ಬಾ ಚೆನ್ನಾಗಿದೆ.

    ReplyDelete
  6. ಶ್ಯಾಮಲಾ ಅವರೆ... ಸರಳವಾದ ನುಡಿಗಳಲ್ಲಿ ಮಳೆಯ ದೃಶ್ಯ ವೈಭವ ಅದರ ಜೊತೆಗೆ ನಿಮ್ಮ ಭಾವನೆಗಳ ಗದ್ಯರೂಪ. ಸೂಪರ್‌ ಆಗಿದೆ. ಮತ್ತಷ್ಟು ಕವನಗಳು ಮೂಡಿಬರಲಿ. ಅಭಿನಂದನೆಗಳು.

    ಚಂದ್ರು

    ReplyDelete
  7. en akko ,yavaga gadya dinda padyadedege horalodu shuruvaayitu ;)
    chennagide kavana mattu baraha ;)

    ReplyDelete
  8. ತುಂಬಾ ಚೆನ್ನಾಗಿದೆ ಅಕ್ಕ.... ಯಡಿಯೂರು ಕೆರೆಯೊಳಗೆ ತಾವೆರೆಗಳು ಅರಳಿವೆಯೇ? ಬರಬೇಕಾಯ್ತು ಒಮ್ಮೆ ನೋಡಲು...

    ReplyDelete
  9. sundara kavana... soopar kalpane.... tumbaa chennaagide... ishta aaytu....

    ReplyDelete
  10. ಪ್ರಕೃತಿ ತನ್ನ ಸಿರಿಯನ್ನು ತೋರಿಸುವ ಕ್ಷಣಗಳನ್ನು ತುಂಬ ಸುಂದರವಾಗಿ, ಕಣ್ಣಿಗೆ ಕಟ್ಟುವಂತ ವರ್ಣಿಸಿದ್ದೀರಿ. ಓದುತ್ತಿದ್ದಂತೆ, ನಾನೂ ಸಹ ಈ ದೃಶ್ಯವನ್ನು ನೋಡುತ್ತಿರುವೆನೇನೊ ಎಂದು ಭಾಸವಾಯಿತು.

    ReplyDelete
  11. ಪದ್ಮ ಸರೋವರದಲ್ಲಿ ಸಂಚಲನ ಮೂಡಿದಷ್ಟೇ ಅದ್ಭುತವಾಗಿದೆ ನನ್ನ ಕಲ್ಪನೆಯೆಂದು ಮೊದಲು ಪ್ರತಿಕ್ರಿಯಿಸಿ, ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು ಅನಂತ್ ಸಾರ್..

    ಪ್ರಕೃತಿ ಸೌಂದರ್ಯದ ವರ್ಣನೆ ಓದಿ, ನೀವೇ ಅನುಭವಿಸಿದಂತಾಯಿತು ಎಂದು ಪ್ರಶಂಸಿಸಿ, ಬರೆದಿದ್ದಕ್ಕೆ, ಧನ್ಯವಾದಗಳು ಸೀತಾರಾಮ್ ಸಾರ್....

    ಬರಹ ಮತ್ತು ಕವನ ಎರಡೂ ಸುಂದರ ಎಂದು ಮೆಚ್ಚಿದ್ದಕ್ಕೆ ಧನ್ಯವಾದಗಳು ಗುರು ಸಾರ್...

    ಧನ್ಯವಾದಗಳು ಪರಾಂಜಪೆ ಸಾರ್...

    ಕವನ ಹಾಗೂ ನನ್ನ ಭಾವನೆಗಳ ಗದ್ಯ ರೂಪವನ್ನು ಮೆಚ್ಚಿ, ಇನ್ನಷ್ಟು ಕವನಗಳು ನನ್ನಿಂದ ಬರಲಿ ಎಂದು ಶುಭ ಹಾರೈಸಿದ ಚಂದ್ರೂಗೆ ಧನ್ಯವಾದಗಳು...

    ಸೂಪರ್ ಕಲ್ಪನೆ ಎಂದ ದಿನಕರ ಸಾರ್.. ಧನ್ಯವಾದಗಳು

    ನೀವೇ ದೃಶ್ಯ ಕಂಡಂತಾಯಿತೆಂದು ಮೆಚ್ಚಿದ ಸುನಾಥ್ ಕಾಕಾರಿಗೆ ವಂದನೆಗಳು..

    ReplyDelete
  12. ತಮ್ಮಾ ವಿನಯ್...
    ಹೀಗೇ ಅಪರೂಪಕ್ಕೊಮ್ಮೆ ನಾನು ಗದ್ಯದಿಂದ ಪದ್ಯದ ಕಡೆ ಹೊರಳಿದ್ದೇನೆ. ಅಂದಿನ ಆ ದೃಶ್ಯ ವೈಭವ ನನ್ನಿಂದ ಕೂಡ ಒಂದು ಕವನ ಬರೆಯಿಸಿತೆಂದರೆ ನಿಜಕ್ಕೂ ಅದಿನ್ನೆಷ್ಟು ಸುಂದರವಾಗಿತ್ತು ಊಹಿಸಿಕೋ... ಮೆಚ್ಚಿದ್ದಕ್ಕೆ ಧನ್ಯವಾದಗಳು ತಮ್ಮಾ....

    ತೇಜಸ್ವಿನಿ...
    ಈಗ ಯಡಿಯೂರು ಕೆರೆಯಲ್ಲಿ ತಾವರೆ ಹೂಗಳಿಲ್ಲ... ಬರಿಯ ಬಳ್ಳಿ ಹರಡಿದೆ. ಆದಿನ ಆ ಸುಂದರ ವಾತಾವರಣದಲ್ಲಿ ಅದು ನನ್ನ ಕಲ್ಪನೆಯಲ್ಲಿ ಅರಳಿತ್ತು... :-) ತಾವರೆಗಳಿಲ್ಲದಿದ್ದರೂ ಪರಿಸರ ಸುಂದರವಾಗಿದೆ... ಬನ್ನಿ ತಂಗೀ ಒಮ್ಮೆ ನೋಡಲು.... ಧನ್ಯವಾದಗಳು...

    ReplyDelete
  13. too good. Olleya kavana.
    Nimmava,
    Raaghu.

    ReplyDelete
  14. ಧನ್ಯವಾದಗಳು ರಾಘು....

    ReplyDelete