Monday, April 4, 2011

"ಖರ"ನಾಮ ಸಂವತ್ಸರ - ಯುಗಾದಿ ಒಂದು ನೆನಪು...


"ಯುಗಾದಿ" ಬರುವ.. ಹೊಸ ಸಂವತ್ಸರ ಆರಂಭವಾಗುವ ಹಲವಾರು ದಿನಗಳ ಮೊದಲೇ ನಮಗೆ ವಸಂತನಾಗಮನದ ಅರಿವು ಮಾಡಿಸಿಕೊಡುವುದು ನಮ್ಮ ಪ್ರಿಯ ಪಕ್ಷಿ "ಕೋಗಿಲೆ"..... !! ತನ್ನೆಲ್ಲಾ ಎಲೆಗಳೂ ಉದುರಿ... ಹೊಸ ಹಚ್ಚ ಹಸುರಿನ ಎಲೆಗಳ ಬಟ್ಟೆ ಧರಿಸುವ ಮರ ಗಿಡಗಳು... ಮೊದಲ ಮಳೆಯ ಸಿಂಚನ... ಹಸಿ ಮಣ್ಣಿನ ಘಮ... ಹಿನ್ನೆಲೆಯಲ್ಲಿ ಕೋಗಿಲೆಗಳ "ಕುಹೂ ಕುಹೂ" ಗಾನ, ಎಲ್ಲವೂ ನಮ್ಮನ್ನು ಉಲ್ಲಾಸಗೊಳಿಸುತ್ತಾ... ಹೊಸ ವರ್ಷದ, ಹೊಸ ಚಿಗುರಿನ, ವಸಂತನಾಗಮನವನ್ನ ಎದುರು ನೋಡುವಂತೆ ಮಾಡುತ್ತದೆ. ಯುಗಾದಿಯ ಬೆಳಿಗ್ಗೆ ರೇಡಿಯೋನಲ್ಲಿ ಬರುವ ಅದೇ.. ಹಳೇ ಹಾಡು (ಹಾಡು ಎಷ್ಟು ಹಳೆಯದಾದರೇನು.. ಅದರ ಭಾವ ನವನವೀನ...) ಬೇಂದ್ರೆ ಅಜ್ಜನ ಅತ್ಯಂತ ಸುಂದರ ಹಾಗೂ ಅಂದಿಗೂ.. ಇಂದಿಗೂ.. ಮುಂದಿಗೂ.. ಎಂದಿಗೂ ಸಲ್ಲುವ ಅದೇ "ಯುಗಯುಗಾದಿ ಕಳೆದರೂ... ಯುಗಾದಿ ಮರಳಿ ಬರುತಿದೆ... ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ"...... ನಮ್ಮನ್ನು ಮುದಗೊಳಿಸುತ್ತದೆ. ನನ್ನ ಬಾಲ್ಯದಿಂದಲೂ ಕೇಳುತ್ತಲೇ ಬಂದಿರುವ ಹಾಡು... ನನ್ನ ಮನದಲ್ಲಿ ವಸಂತನಾಗಮನದ ಹುರುಪನ್ನು, ನವೋಲ್ಲಾಸವನ್ನು ಇಷ್ಟು ವರ್ಷಗಳ ನಂತರವೂ ಒಂದಿನಿತೂ ಕಮ್ಮಿಯಾಗದೇ ತುಂಬುತ್ತಲೇ ಇದೆ. ಹಾಡು ನನ್ನ ಜೀವನದಲ್ಲಿ ಹೇಗೆ ಹಾಸು ಹೊಕ್ಕಾಗಿ ಬಿಟ್ಟಿದೆಯೆಂದರೆ.. ಇವತ್ತು ಯುಗಾದಿಯ ದಿನ ಹಾಡು ಕೇಳದಿದ್ದರೆ, ನನಗೆ ಯುಗಾದಿ ಹಬ್ಬವೆಂದೇ ಅನಿಸುವುದಿಲ್ಲ. ಹಾಗೇ.. ಯುಗಾದಿಯಲ್ಲದೆ ವರ್ಷದಲ್ಲಿ ಬೇರೆಂದಾದರೂ ಹಾಡು ಕಿವಿಗೆ ಬಿದ್ದರೆ ಸಾಕು ತಕ್ಷಣ ನನ್ನ ಮನಸ್ಸು ಅನಾಯಾಸವಾಗಿ ಅದೇ ಭಾವಕ್ಕೆ ಒಮ್ಮೆಲೇ ತೆರಳಿಬಿಡುತ್ತದೆ. ಮತ್ತೆ ಮನ ಅದೇ ಕೋಗಿಲೆಗಳ ಕುಹೂ ಕುಹೂ ಕೇಳತೊಡಗುತ್ತದೆ... ಅದೇ ಮಳೆ ತುಂತುರಿನ ಸಿಂಚನ ಅನುಭೂತಿಸತೊಡಗುತ್ತದೆ... ಅದೇ ಹೊಸ ಮಳೆಯಿಂದ ತೊಯ್ದು ಘಮಘಮಿಸುವ ಮಣ್ವಾಸನೆ... ಮೈತುಂಬ ಹಸಿರುಟ್ಟು ನಳ ನಳಿಸುವ ಪ್ರಕೃತಿ.... ಅಬ್ಬಾ... ಬೇಂದ್ರೆಯವರ ಸಾಹಿತ್ಯ ನಮ್ಮ ಭಾವನೆಗಳ ಜೊತೆ ಬೆಸೆಯುವ ಶಕ್ತಿ ಅದ್ಭುತ ಎನಿಸಿಬಿಡುತ್ತದೆ.

ಹೊಸ ಸಂವತ್ಸರವೆಂದರೆ ಬರಿಯ ಒಂದು ವರುಷದ ಅಂತ್ಯ ಮತ್ತು ಇನ್ನೊಂದು ವರುಷದ ಆದಿ ಎಂಬ ಅರ್ಥವೇ...? ಪ್ರಕೃತಿ ಹೇಗೆ ತನ್ನ ಕೆಲಸವನ್ನು ಎಷ್ಟು ಅಚ್ಚುಕಟ್ಟಾಗಿ, ಕರಾರುವಾಕ್ಕಾಗಿ ಮಾಡುತ್ತಲಿದೆಯೆಂಬ ಅಚ್ಚರಿ ನನಗೆ... ಎಲ್ಲವೂ ಪ್ರಾಣಿ ಸಂಕುಲವೂ ಸೇರಿದಂತೆ ಅದೆಷ್ಟು ನಿಷ್ಠೆಯಿಂದ ತಮ್ಮ ಪಾಲಿನ ಕೆಲಸಗಳನ್ನು ಅತ್ಯಂತ ಕಾಳಜಿಯಿಂದ, ನಿರ್ವಂಚನೆಯಿಂದ ನಿರ್ವಹಿಸುವಂತೆ ಸೃಷ್ಟಿ ಮಾಡಿದ್ದಾನಲ್ಲವೇ ಭಗವಂತ. ಯಾರಿಗೂ ಕಾಯದೆ, ಯಾರಿಂದಲೂ ಹೇಳಿಸಿಕೊಳ್ಳದೇ, ಯಾರ ಸಹಾಯವೂ ಇಲ್ಲದೆ ನಮ್ಮ ಸುತ್ತಲೂ ಎಲ್ಲವೂ ನಡೆಯುತ್ತಿದ್ದರೂ... ನಾವು ಮಾತ್ರ ಅದೇಕೆ ನಮ್ಮ ಜೀವನವನ್ನು ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ರೂಪಿಸಿಕೊಳ್ಳುವಲ್ಲಿ ಸೋಲುತ್ತಿದ್ದೇವೆ ? ಪ್ರಕೃತಿ ಮಾತೆ ಹೇಗೆ ತನ್ನ ಹಳೆಯ ರೂಪವನ್ನು ಕೊಡವಿಕೊಂಡು.. ಹೊಸ ದಿರಿಸು ಧರಿಸಿ ವಸಂತನಾಗಮನಕ್ಕೆ ನವ ವಧುವಿನಂತೆ ಸಜ್ಜಾಗಿ ಬಿಡುತ್ತಾಳಲ್ಲವೇ! ಯುಗಾದಿ ಬಂತೆಂದರೆ ಬರಿಯ ಹೊಸ ಸಂವತ್ಸರದ ಆರಂಭವೊಂದೇ ಅಲ್ಲ... ನಾವು ಆಚರಿಸುವ ಮೊತ್ತ ಮೊದಲ ಹಬ್ಬವೂ ಹೌದು. ಇಲ್ಲಿಂದ ಮುಂದೆ ಒಂದೊಂದು ಋತುವಿನಲ್ಲೂ, ಒಂದೊಂದು ಮಾಸದಲ್ಲೂ ನಾವು ಅನೇಕ ಪೂಜೆ, ವ್ರತ ಎಂದು ಧಾರ್ಮಿಕ ಆಚರಣೆಗಳನ್ನು ಮಾಡುತ್ತೇವೆ. ಪ್ರಕೃತಿ ಮಾತೆ ಹೇಗೆ ತನ್ನನ್ನು ತಾನು ಸಜ್ಜುಗೊಳಿಸಿಕೊಂಡು ಸಿಂಗರಿಸಿಕೊಳ್ಳುತ್ತಾಳೋ ಹಾಗೆ ನಾವೂ ಕೂಡ ನಮ್ಮ ಭಾವನೆಗಳನ್ನು ಒಂದು ಸುಂದರವಾದ ಚೌಕಟ್ಟಿನಲ್ಲಿ ಜೋಡಿಸಿಕೊಂಡು, ಅದಕ್ಕೊಂದು ಹೊಸ ರೂಪ ಕೊಡುವುದರ ಮೂಲಕ ಹೊಸ ರೀತಿಯ ಬದುಕು, ಹೊಸ ಧಾಟಿಯ ಚಿಂತನೆಯನ್ನು ಅಳವಡಿಸಿಕೊಳ್ಳುವ ಅಭ್ಯಾ ಮಾಡಿಕೊಳ್ಳ ಬೇಕೆಂದು ನನ್ನ ಮನಸ್ಸು ಯೋಚಿಸುತ್ತಿದೆ. ಪ್ರತಿ ವರ್ಷವೂ... ಅದೇನೋ ಒಂದು ಹಬ್ಬ ಎಂಬ ಭಾವವೇ ಇರುತ್ತಿತ್ತೇ ಹೊರತು... ನವಿರಾದ ಸೂಕ್ಷ್ಮ ಭಾವಗಳು ನನ್ನೊಳಗೆ ಉದಯಿಸಿರಲೇ ಇಲ್ಲ.

ಬೇಂದ್ರೆಯವರು "ತನುವೆಂಬ ವನದಲ್ಲಿ.... ಮನವೆಂಬ ಮರದಲ್ಲಿ... ಕೊನೆ ಎಲೆಯಲ್ಲಿ ಕುಳಿತ ಕೋಗಿಲೇ..." ಎಂಬ ಹಾಡಿನಲ್ಲಿ "ಹುಂಬನಿ ಹಾಡು ಸ್ವಯಂಭು ಸ್ಫೂರ್ತಿಯು ನಿನಗೇ.. ಇಂಬುಕೊಟ್ಟಂತಾಡು ಕೋಗಿಲೇ".... ಎನ್ನುತ್ತಾರೆ. ಮಾತು ಅದೆಷ್ಟು ಮಧುರ ಹಾಗೂ ಸತ್ಯವಾಗಿದೆ. ನಿಜಕ್ಕೂ ಕೋಗಿಲೆಗಳಿಗೆ ಯಾರಾದರೂ ಹೇಳಿ ಕೊಡುತ್ತಾರೆಯೇ.. ಯಾರಾದರೂ ಸ್ಫೂರ್ತಿ ಉಕ್ಕಿಸುತ್ತಾರೆಯೇ... ಅದ್ಯಾವುದೂ ಲ್ಲದೇ ತಮ್ಮ ಪಾಡಿಗೆ ತಾವು.. ಯಾವ ಹಮ್ಮೂ-ಬಿಮ್ಮೂ ಇಲ್ಲದೆ, ಯಾರ ಹಂಗೂ ಇಲ್ಲದೆ ವಸಂತನಾಗಮನದ ಅರಿವು ಮೂಡಿಸುತ್ತವೆ. ಪ್ರಕೃತಿಯಿಂದ ನಾವು ಕಲಿಯ ಬೇಕಾದ ಮೊದಲನೇ ಪಾಠವಿದಲ್ಲವೇ..? ನಾವೂ ಕೂಡ ಬೇಂದ್ರೆಯವರ ಮಾತಿನಂತೆ ಪ್ರತಿ ಯುಗಾದಿಗೊಮ್ಮೆಯಾದರೂ... "ಇನ್ನು ನಿದ್ದೆಯ ತಳೆದು... ತನ್ನ ತಾನವನೊಲಿದು... ಭಿನ್ನ ಭಾವವ ಬಿಟ್ಟು.." ಹೊಸ ಹೊಸ ಚಿಂತನೆಗಳನ್ನು ಹುಟ್ಟು ಹಾಕುವುದನ್ನು ಪ್ರಾರಂಭಿಸಬೇಕಾಗಿದೆ.

ಹೊಸ ಸಂವತ್ಸರದ ಜೊತೆಗೇ... ಶ್ರೀ ರಾಮ ನವಮಿಯ ಆಚರಣೆಯೂ ಇದೆಯಲ್ಲವೇ. ಹೊಲದಲ್ಲಿ ಉಳುವಾಗ ನೇಗಿಲಿನ ತುತ್ತ ತುದಿಯಲ್ಲಿರುವ ಉದ್ದನೆಯ ಕಬ್ಬಿಣದ ಒಂದು ಮೊಳೆಗೆ "ಸೀತ" ಎಂದು ಹೆಸರಂತೆ. ಅದೇ ಮೊದಲು ಭೂಮಿ ಸ್ಪರ್ಶ ಮಾಡುವುದಂತೆ. ಆದ್ದರಿಂದಲೇ.. ಸೀತಾಮಾತೆಗೆ ಅಷ್ಟು ಸಂಯಮವಿತ್ತೆಂಬುದು ನಂಬಿಕೆಯ ಮಾತು. ತಾನು ಕಷ್ಟ ಸಹಿಸಿದ್ದರಿಂದಲೇ.. ಭೂಮಿಯ ಉತ್ತುವಿಕೆಯಾಗಿ, ಬೆಳೆಯಾಗಿ, ನಮಗೆ ಆಹಾರ ಸಿಗುವಂತಾಯಿತು. ಯುಗಾದಿಯ ಬೆಳಿಗ್ಗೆ ನನ್ನ ಮನಸ್ಸಿಗೇಕೋ ವಿಷಯ ತುಂಬಾ ಆಳವಾಗಿ ಬಂದು ಕೂತಿತ್ತು. ಭೂಮಿಯ ಉತ್ತುವಿಕೆಯಂತೆಯೇ... ನಾವೂ ನಮ್ಮ ಮನಸ್ಸನ್ನೂ ಉತ್ತಿ... ಒಳ್ಳೆಯ ವಿಚಾರಗಳನ್ನು, ಒಳ್ಳೊಳ್ಳೆಯ ಚಿಂತನೆಗಳನ್ನು ಬಿತ್ತಿದರೆ... ನಿಜಕ್ಕೂ ನಮ್ಮ ಭಾವನೆಗಳಲ್ಲಿ ಬದಲಾವಣೆಯನ್ನು ತರಬಹುದಲ್ಲವೇ.. ಒಂದು ಪಕ್ವವಾದ, ಸಂತೋಷಕರವಾದ, ಬಲಯುಕ್ತವಾದ ವಿಚಾರ ಧಾರೆಯನ್ನು ಒಳಹರಿಯ ಬಿಟ್ಟು.. ನಮ್ಮ ಬದುಕಿನ ದಾರಿಯನ್ನು ಸುಗಮವಾಗಿಸಿಕೊಳ್ಳಬಹುದಲ್ಲವೇ..?

ನನಗೆ ಬಾಲ್ಯದ ಯುಗಾದಿ ಆಚರಣೆ ಇಂದು ತುಂಬಾ ನೆನಪಾಗುತ್ತಿದೆ. ಅದೇನು ಸಂಭ್ರಮ, ಸಂತೋಷವಿರುತ್ತಿತ್ತು. ಬೆಳಿಗ್ಗೆ ಮನೆ ಮಂದಿಯೆಲ್ಲಾ ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಬಂದಾಗ... ಅಮ್ಮ ಪೂಜೆ ಮುಗಿಸಿ ಮಂಗಳಾರತಿ ಮಾಡಲು ಕಾಯುತ್ತಿರುತ್ತಿದ್ದರು. ನಂತರ ನಾವು ಮಕ್ಕಳು ಅಪ್ಪ ಅಮ್ಮನಿಗೆ ನಮಸ್ಕರಿಸಿದಾಗ, ಅಮ್ಮ ಆಶೀರ್ವಾದದ ಜೊತೆಗೆ ಬೇವು-ಬೆಲ್ಲವನ್ನೂ ಕೈಲಿಡುತ್ತಿದ್ದರು. ನಾನೂ ನನ್ನ ಅಣ್ಣನೂ ನಮಗೆ ಬೆಲ್ಲವೇ ಹೆಚ್ಚು ಬೇಕೆಂದು ಕಾಡಿದಾಗ, ಅಮ್ಮ... ಹಾಗೆಲ್ಲಾ ಆರಿಸಿ ಬೇವು ತೆಗೆಯಬಾರದು. ಜೀವನವೆಂದರೆ ಅದೇ... ಸಿಹಿ-ಕಹಿ ಎರಡೂ ಇರುತ್ತದೆ. ಸಮಾನ ಚಿತ್ತದಿಂದ ಬದುಕು ಹಸನಾಗಿಸಿಕೊಳ್ಳಬೇಕೆಂಬ ಮಾತು ಹೇಳುತ್ತಿದ್ದರು. ಆದರೆ ಅದರ ಅರ್ಥ, ವ್ಯಾಪ್ತಿ ಒಂದೂ ತಿಳಿಯದಾಗಿತ್ತು ನಮಗೆ. ಮನೆಯಲ್ಲಿ ಪೂಜೆ ಮುಗಿಸಿಕೊಂಡು ಎಲ್ಲರೂ ನಮ್ಮ ಊರಿನ ಶ್ರೀ ರಾಮದೇವರ ದೇವಸ್ಥಾನಕ್ಕೆ ಹೋಗುತ್ತಿದ್ದೆವು. ಅಲ್ಲಿ ಯುಗಾದಿಯ ವಿಶೇಷ ಪೂಜೆ ಇರುತ್ತಿತ್ತು. ಅಪ್ಪ ಕಮಿಟಿಯ ಅಧ್ಯಕ್ಷರು.. ಹಾಗಾಗಿ ಸ್ವಲ್ಪ ವಿಶೇಷವೇ ಎನ್ನುವಂತಹ ಗಮನ ನಮಗೆ. ತುಂಬಾ ಹೂವುಗಳಿಂದ ಅಲಂಕರಿಸಿಕೊಂಡು ದಿವ್ಯವಾಗಿರುತ್ತಿದ್ದ ಶ್ರೀ ರಾಮಚಂದ್ರ ಸೀತಾ ಲಕ್ಷ್ಮಣರ ಸಮೇತ.. ಜೊತೆಗೆ ಈಶ್ವರ.. ಉತ್ಸಾಹ ಉಕ್ಕಿಸುವ ವಾತಾವರಣ, ದುಬತ್ತಿಯ ಸುಗಂಧ ಅದೇನೋ ಆಪ್ಯಾಯವಾಗಿರುತ್ತಿತ್ತು. ದೇವಸ್ಥಾನಕ್ಕೆ ಬಂದಿದ್ದ ಎಲ್ಲಾ ಪರಿಚಿತರೂ ಒಬ್ಬರಿಗೊಬ್ಬರು ಹೊಸ ವರ್ಷದ ಶುಭಾಶಯಗಳ ವಿನಿಮಯ ಮಾಡಿಕೊಳ್ಳುವುದು... ದೊನ್ನೆಗಳಲ್ಲಿ ಪ್ರಸಾದದ ರೂಪದಲ್ಲಿ ಹಂಚುತ್ತಿದ್ದ ರಸಾಯನ, ಕೋಸಂಬರಿ..!! ದೇವಸ್ಥಾನದಿಂದ ಹೊರ ಬಂದೊಡನೆಯೇ ಅರ್ಚಕರ ಮನೆ. ಅವರ ಮನೆಯಲ್ಲಿ ಪಾನಕ ಸೇವಿಸಿ... ಪಕ್ಕದಲ್ಲೇ ದ್ದ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಮಸ್ಕರಿಸಿ ಮನೆಗ ವಾಪಸ್ಸು ಬರುತ್ತಿದ್ದೆವು. ಸಾಯಂಕಾಲ ಚಂದ್ರ ದರ್ಶನಕ್ಕಾಗಿ ಕಾಯುತ್ತಿದ್ದ ಪರಿಯಂತೂ ತುಂಬಾ ನೆನಪಾಗುತ್ತದೆ. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಜನರೆಲ್ಲಾ ಒಟ್ಟಿಗೇ.... ಹೋ ಎಂದು ಅರಚಿದಾಕ್ಷಣ ಅಮ್ಮ..... ನೋಡ್ರೇ.. ಚಂದ್ರ ಕಾಣಿಸಿರಬೇಕು.. ಬೇಗ ಬನ್ರೇ... ಅಂತ ದಡಬಡಿಸಿ ಆಚೆ ಹೋಗಿ.. ರಸ್ತೆಯಲ್ಲಾಗಲೇ ನಿಂತು ಗುಲ್ಲೆಬ್ಬಿಸುತ್ತಿದ್ದ ಜನರನ್ನು ಕಂಡು... "ಎಲ್ಲಿ... ಎಲ್ಲಿ..." ಎಂದಾಗ. ಅವರುಗಳು ಕೈ ತೋರಿಸಿ... "ಅಗೋ.. ಅಲ್ಲಿ... ಸಣ್ಣದಾಗಿ... ಕಾಣಿಸ್ತಾ..."? ಎಂದು ಪ್ರಶ್ನೆ ಮಾಡುವ ಪರಿ..... ನಿಜವಾಗಿ... ನಮ್ಮೂರಿನ.. ನನ್ನ ಬಾಲ್ಯದ ದಿನಗಳ ವಿಶೇಷಗಳು ಎಲ್ಲೋ ಕಳೆದುಹೋಗಿವೆ ಎನಿಸುತ್ತದೆ. ಆಚರಣೆಗಳೆಲ್ಲಾ ಸುಂದರ ನೆನಪಿನ ಬುತ್ತಿಯಾಗಿ ಮನದಲ್ಲಿ ಉಳಿದಿವೆ. ಪ್ರತಿಯೊಂದು ಹಬ್ಬದಲ್ಲೂ... ಮನಸ್ಸು ಮತ್ತೆ ಮತ್ತೆ ಅದೇ ಹಳೆಯ ಪುಸ್ತಕದ ಹಾಳೆಗಳನ್ನು ತೆರೆದು... ಮತ್ತದೇ ಚಿತ್ರಗಳನ್ನು... ಹೊಸದೇನೋ ಎಂಬಂತೆ ಬಲು ಪ್ರೀತಿಯಿಂದ ನೋಡುವಾಗ... ನೆನಪುಗಳು ಒಂದರ ಹಿಂದೆ ಒಂದು ಸಾಲುಗಟ್ಟುತ್ತವೆ....

ನಿನ್ನೆಯ ದಿನ ನಾನೊಂದು ಪ್ರವಚನ ಕೇಳಲು ಹೋಗಿದ್ದೆ. ಅಲ್ಲಿ ಪ್ರವಚನಕಾರರು... "ಯುಗಾದಿ" ಪದವನ್ನು ಬಿಡಿಸಿ ಅರ್ಥ ಹೇಳುತ್ತಿದ್ದರು. "ಯುಗ" ಎಂದರೆ ಜೋಡಿ.. "ಆದಿ" ಎಂದರೆ ಶುರು ಅಥವಾ ಮೊಟ್ಟ ಮೊದಲು. ಅಂದರೆ... ಇಡೀ ಬ್ರಹ್ಮಾಂಡದಲ್ಲೇ... ಮೊಟ್ಟ ಮೊದಲ ಜೋಡಿ... ನಮ್ಮೆಲ್ಲರ ಆರಾಧ್ಯ ದೈವ.. "ಲಕ್ಷ್ಮೀ ನಾರಾಯಣ". ಯುಗಾದಿ ಎಂದರೆ... ಜೋಡಿ "ಲಕ್ಷ್ಮೀ ನಾರಾಯಣ"ರನ್ನು ಪೂಜಿಸುವ, ಆರಾಧಿಸುವ, ನೆನಪಿಸಿಕೊಳ್ಳುವ ದಿನವನ್ನಾಗಿ ಆಚರಿಸಬೇಕೆಂದು ಹೇಳುತ್ತಿದ್ದರು. ಅದೇಕೋ ವಿಶ್ಲೇಷಣೆ ನನಗೆ ತುಂಬಾ ಇಷ್ಟವಾಯಿತು. ಪ್ರಕೃತಿಯಲ್ಲಿ ಬದಲಾವಣೆ... ವಸಂತನಾಗಮನ ಎಲ್ಲವೂ ಇದೇ ಅರ್ಥವನ್ನೇ ಹೇಳುತ್ತದಲ್ಲವೇ... ಪ್ರಕೃತಿ-ಪುರುಷ.... !!

ನಿಮಗೆಲ್ಲರಿಗೂ "ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು........

5 comments:

  1. ಶ್ಯಾಮಲಾ,
    ಉಗಾದಿ ಹಬ್ಬದ ಬಗೆಗಿನ ವಿವರಣೆ, ಜೊತೆಗೆ ನಿಮ್ಮ ಬಾಲ್ಯದ ನೆನಪುಗಳು ಅಷ್ಟೇ ಅಲ್ಲದೆ, ನಮಗೆ ತಿಳಿಯದಿದ್ದ (ನೇಗಿಲ ಮುಂಭಾಗದ ಚಾಚುವಿಗೆ) 'ಸೀತಾ' ಎಂಬ ಹೆಸರು, ಬೇಂದ್ರೆಯವರ ಹಾಡಿನ ಸಾಲುಗಳು, ಒಟ್ಟಿನಲ್ಲಿ ಹೊಸತನ್ನೇ ನೀಡಿದ್ದೀರಿ. ನಿಮಗೂ ನಿಮ್ಮ ಕುಟುಂಬದವರೆಲ್ಲರಿಗೂ ಖರ ನಾಮ ಸಂವತ್ಸರದ ಶುಭಾಶಯಗಳು.

    ಚಂದ್ರು

    ReplyDelete
  2. "ಭೂಮಿಯ ಉತ್ತುವಿಕೆಯಂತೆಯೇ... ನಾವೂ ನಮ್ಮ ಮನಸ್ಸನ್ನೂ ಉತ್ತಿ... ಒಳ್ಳೆಯ ವಿಚಾರಗಳನ್ನು, ಒಳ್ಳೊಳ್ಳೆಯ ಚಿಂತನೆಗಳನ್ನು ಬಿತ್ತಿದರೆ..." ಅತ್ತ್ಯುತ್ತಮ ವಿಚಾರ ಲಹರಿಯನ್ನು ಹರಿಸಿ ಬಿಟ್ಟಿದ್ದೀರಿ ಶ್ಯಾಮಲಾ. ಭೂಮಿಯು ಫಲವತ್ತಾಗಿರುವ೦ತೆ, ನಮ್ಮ ಮನಸ್ಸೂ ಕೂಡ ಉತ್ತಮ ಭಾವಗಳನ್ನೊಳಗೊ೦ಡ ಸ೦ಪದ್ಭರಿತ ತಾಣವೇ ಆಗಿದೆ. ಉತ್ತಮ ಚಿ೦ತನೆಯನ್ನು ಕೊಟ್ಟಿದ್ದೀರಿ. ಧನ್ಯವಾದಗಳು ಮತ್ತು ತಮಗೆ ಯುಗಾದಿಯ ಶುಭಾಶಯಗಳು.

    ಅನ೦ತ್

    ReplyDelete
  3. ಯುಗಾದಿ ಹಬ್ಬದ ಬಗೆಗೆ ಬಹಳ ವಿವರವಾಗಿ ಬರೆದಿದ್ದೀರಿ..
    ನಮ್ಮ ಹಬ್ಬಗಳೇ ಹಾಗೆ ಪ್ರತಿ ಆಚರಣೆಗಳ ಹಿಂದೆ ಸೊಗಸಾದ ಉದ್ದೇಶವಿದ್ದಿರುತ್ತದೆ..

    ನಮ್ಮ ಹೊಸ ವರ್ಷವೆಂದರೆ ಪ್ರಕೃತಿಗೂ ಹೊಸ ಚಿಗುರು..
    ಹೂ ಮೊಗ್ಗು ಅರಳಿರುತ್ತದೆ...

    ಕೋಗಿಲೆ ವಸಂತಾಗಮನದ ಹಾಡು ಹಾಡಿರುತ್ತದೆ..

    ಸೊಗಸಾಗಿದೆ ನಿಮ್ಮ ಲೇಖನ

    ನಿಮಗೂ ...
    ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು..

    ReplyDelete
  4. Dhanyavaadagalu...ibbaniya saviya saviyabandiddakke&tamma amulya salahegalannu neediddakke...taavu nannannu~neevu'endu kareyuvudu ashtondu sooktavalla,yaakandre naanu nimaginta tumbaa chikkavanu...heege salahegalannu needta nanna hatasi...
    vandanegalu,
    shree,
    talageri

    ReplyDelete