Friday, July 8, 2011

ದೇಹ ದೇವಾಲಯ - ೩


ದೇಹ ದೇವಾಲಯವಾಗಿಸಬೇಕೆಂಬ ವಿಚಾರ ಚಿಂತಿಸಿದಷ್ಟೂ ಆಳವಾಗುತ್ತಾ ಹೋಗುವ ಅತ್ಯಂತ ಗಹನವಾದ ವಿಷಯವಾಗಿದೆ. ನಮ್ಮ ವೇದ, ಶಾಸ್ತ್ರ, ಪುರಾಣ, ನಮ್ಮ ಆಚಾರ್ಯರುಗಳು, ದಾಸರುಗಳು, ಶಿವಶರಣ-ಶರಣೆಯರು ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಅದನ್ನೇ ಹೇಳುತ್ತಾ ಬಂದಿದ್ದರೂ, ಎಷ್ಟೆಷ್ಟು ಸರಳವಾಗಿ ಸಾಧ್ಯವೋ ಅಷ್ಟು ಹೇಳಿದ್ದರೂ ಕೂಡ, ನಾವು ಈ ಪ್ರಪಂಚಕ್ಕೆ ಬಂದಾಗಿನಿಂದಲೂ ಹೋಗುವ ತನಕವೂ ಆಂತರಿಕ ಬೆಳವಣಿಗೆಗಾಗಿಯೇ ಭಗವಂತ ನಮಗೆ ಕರುಣಿಸಿರುವ ಇಷ್ಟು ಚಂದದ, ಉತ್ಕೃಷ್ಟವಾದ ದೇಹವನ್ನು ಸದುಪಯೋಗ ಮಾಡಿಕೊಳ್ಳದೇ, ಬರಿಯ ವಿಷಯಾಂಕಾಂಕ್ಷಿಗಳಾಗಿ ಬೇಡದ ವ್ಯರ್ಥ ಬದುಕು ಬದುಕುತ್ತೇವೆ. ಕೊನೆಗೊಮ್ಮೆ ನಮ್ಮ ದೇಹದಲ್ಲಿ ಎಲ್ಲಾ ಶಕ್ತಿಗಳೂ ಕುಂದಿಹೋದಾಗ, ಪರಮಾತ್ಮನ ನೆನೆಯುವ ಪ್ರಯತ್ನ ಮಾಡತೊಡಗುತ್ತೇವೆ. ಕೆಲವರು ಆಗಲೂ ಕೂಡ ಮಾಡದೆ, ಲ್ಲವೂ ತಮ್ಮಿಂದಲೇ ಸಾಧ್ಯವಾಯಿತು, ತಾವೇ ಗಳಿಸಿದೆವೆಂದು ಚಿಂತಿಸುತ್ತಾ, ಹಿಂದೆ ತಿರುತಿರುಗಿ ಬಾಳಿದ ಬರಿಯ ಬರಡು ಬದುಕನ್ನೇ ಶ್ರೇಷ್ಠವಾಗಿ ಬದುಕಿದೆವೆಂದುಕೊಂಡು ನೋಡುತ್ತಾ, ತಾವು ಗಳಿಸಿದ ಆಸ್ತಿ, ನಗ-ನಾಣ್ಯ, ಮಕ್ಕಳು, ಮೊಮ್ಮಕ್ಕಳು... ಹೀಗೇ ಇದೇ ವಿಷಯ, ವಾಸನೆಗಳ ಸುತ್ತಲೇ ಗಿರಿಗಿಟ್ಟೆ ತಿರುಗುತ್ತಾ, ಕೈಯಿಂದ ಜಾರಿಹೋದ ಸಮಯದ ಬಗ್ಗೆ, ತಾವು ಭಗವಂತನ ಧ್ಯಾನ ಮಾಡದೆ ವ್ಯರ್ಥವಾಗಿಸಿದ ಒಂದು ಜನ್ಮದ ಬಗ್ಗೆ ಚಿಂತಿಸದೆಯೇ ಹೊರಟೇ ಹೋಗುತ್ತಾರೆ. ಆದರೆ ನಾವು ಯಾವಾಗ ಈ ವಿಷಯಾಸಕ್ತಿಗಳ ಪರಿಧಿಯಿಂದ ಒಂದು ಹೆಜ್ಜೆ ಮುಂದೆ ಹೋಗಿ ನೋಡುತ್ತೇವೆಯೋ ಆಗ ನಮ್ಮ ಈ ದೇಹವೆಂಬ ಆಸ್ತಿಯನ್ನು ಭಗವಂತ ನಮಗೆ ಅದೆಷ್ಟು ಕರುಣೆಯಿಂ, ಅವನ ಪೂಜೆಗಾಗಿ, ಆರಾಧನೆಗಾಗಿ, ನಮ್ಮ ಆತ್ಮೋನ್ನತಿಗಾಗಿ ಉಪಯೋಗಿಸಲೆಂದು ಕೊಟ್ಟಿದ್ದಾನೆಂಬ ಸತ್ಯದ ಅರಿವಾಗುತ್ತದೆ.

ಕೈವಾರ ತಾತಯ್ಯನವರು ಕೂಡ ತಮ್ಮ ನಾದಬ್ರಹ್ಮಾನಂದ ನಾರೇಯಣ ಕವಿ ಶತಕದಲ್ಲಿ ನಮಗೆ ದೇಹದ ಸದುಪಯೋಗದ ಬಗ್ಗೆ ಅತ್ಯಂತ ಕಾಳಜಿಯಿಂದ ವಿವರಿಸುತ್ತಾರೆ. ನಮಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ. ಅವರು ಯೋಗಶಾಸ್ತ್ರಕ್ಕೆ ಅತ್ಯಂತ ಪ್ರಾಮುಖ್ಯತೆ ಕೊಡುತ್ತಾ, ನಮ್ಮ ದೇಹದಲ್ಲಿರುವ ಆರು ಚಕ್ರಗಳು, ಮೂರು ನಾಡಿಗಳು, ನಮ್ಮ ಉಚ್ಛ್ವಾಸ-ನಿಚ್ಛ್ವಾಸಗಳು, ಆಸನಗಳು, ಧ್ಯಾನ ಮುಂತಾದ ಹಲವಾರು ಪ್ರಕ್ರಿಯೆಗಳ ಮೂಲಕ ಭಗವಂತನ ಸಾಕ್ಷಾತ್ಕಾರ ಪಡೆಯಲು ನಮ್ಮ ದೇಹವನ್ನು ಸಾಧನವನ್ನಾಗಿ ಮಾಡಿಕೊಳ್ಳಬೇಕೆಂಬ ಮಾತನ್ನು ತಿಳಿಸುತ್ತಾರೆ. ತಾತಯ್ಯನವರ ಶತಕಗಳನ್ನು ಬಹಳ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹೀಗೆ ಶ್ರೀ ಕೈಪು ಲಕ್ಷ್ಮೀ ನರಸಿಂಹಶಾಸ್ತ್ರೀಗಳು ನಮಗೆ ವಿವರಿಸುತ್ತಾರೆ:

ದೇಹಮು ದೇವಳಮಾಯೆನು

ಜೀವುಡು ಬ್ರಹ್ಮಸ್ವರೂಪ ದೇವುಂಡಾಯೆನ್ |

ಅನುದಿನಮು ಆತ್ಮರಾಮುನಿ

ಮಂದಿರಮುನ ಚೇರಿ ಸೇತು ಮಾನಸ ಪೂಜ || ಅಂದರೆ ದೇಹವೇ ದೇವಾಲಯವು. ನಮ್ಮ ಹೃದಯದಲ್ಲಿಯೇ ನೆಲೆಸಿರುವ ಆತ್ಮರಾಮನಿಗೆ ನಾವು ಕ್ಷಣ ಕ್ಷಣವೂ, ಅನುದಿನವೂ ಮಾನಸ ಪೂಜೆಯನ್ನು ಸಲ್ಲಿಸುತ್ತಲೇ ಇರಬೇಕು. ಶ್ರೀ ಯೋಗಿನಾರೇಯಣ ತಾತಯ್ಯನವರು ಸಿದ್ಧಿಯೋಗಿಗಳು. ಅವರು ಸಮಸ್ತ ಇಂದ್ರಿಯಗಳು, ಮನಸ್ಸು, ಎಲ್ಲವನ್ನೂ ಭಗವಂತನ ಪಾದಾರವಿಂದಕ್ಕೆ ಸಮರ್ಪಿಸಿಬಿಟ್ಟವರು. ಪರಮಾತ್ಮನ ಧ್ಯಾನವನ್ನೇ ಮಂತ್ರವನ್ನಾಗಿಸಿಕೊಂಡವರು, ಮತ್ತು ತಮ್ಮ ಈ ಮಾನಸಿಕ ಪೂಜೆಯಿಂದ ಅವರು ನಿರೀಕ್ಷಿಸಿದ್ದ ಫಲವೆಂದರೆ ಬ್ರಹ್ಮಾನಂದ ಪ್ರಾಪ್ತಿಯನ್ನು ಪಡೆದವರು. ದೇಹ ದೇವಾಲಯವಾದಾಗ ಬಾಹ್ಯ ಪ್ರಪಂಚದ ವಿಷಯಾಸಕ್ತಿಗಳನ್ನು ನಾವು ತ್ಯಾಗ ಮಾಡಿದರೆ ಅದುವೇ ಅಜ್ಞಾನದ ನಿರ್ಮಾಲ್ಯ ತ್ಯಾಗವಾಗುತ್ತದೆ. ನಮ್ಮ ಹೃದಯ ಕಮಲದಲ್ಲೇ ನೆಲೆಸಿರುವ, ನಮ್ಮ ಕಣ ಕಣದಲ್ಲೂ ಅಣೋರಣೀಯನಾಗಿರುವ, ಪರಮಾತ್ಮನನ್ನು ಮಾನಸ ಪೂಜೆಯಿಂದ ಸಂತುಷ್ಟಗೊಳಿಸಿ, ಸಾಕ್ಷಾತ್ಕಾರ ಮಾಡಿಕೊಳ್ಳಬೇಕು.

ತಲಕಾಯಂತ ಕೊಂಡ - ಯಾವದಿ ಲೇದು |

ಕೊಂಡಲೋ ವುನ್ನದಿ - ಕೋಟಿ ಧನಮು |

ವೆಳ್ಳ ತೀಸಿನವಾಡು ಯೆವ್ವರು ಲೇರುರಾ |

ನಾದಬ್ರಹ್ಮಾನಂದ - ನಾರೇಯಣ ಕವಿ ||

ದೇಹವೆಂಬ ದೇಗುಲಕ್ಕೆ ಶಿಖರವಾಗಿರುವ ತಲೆಗೆ ಸಮಾನವಾದ ಬೇರೆ ಯಾವುದೇ ಬೆಟ್ಟವಿಲ್ಲ. ಈ ತಲೆಯೆಂಬ ಶಿಖರದಲ್ಲಿ ಕೋಟಿಗಟ್ಟಲೆ ಸಂಪತ್ತು ಇದೆ. ಇದನ್ನು ಹೊರಗೆ ತೆಗೆದವರು ಯಾರೆಂದರೆ ಯಾರೂ ಇಲ್ಲ ಎನ್ನುತ್ತಾರೆ ತಾತಯ್ಯ. ಮುಂದುವರೆಯುತ್ತಾ ತಾತಯ್ಯನವರು ದೇಹವನ್ನು ಬ್ರಹ್ಮಾಂಡಪುರವೆಂದು ಕರೆಯುತ್ತಾರೆ. ಹದಿನಾಲ್ಕು ಲೋಕಗಳುಳ್ಳ ಬ್ರಹ್ಮಾಂಡದಲ್ಲಿ ನೆಲೆಸಿರುವ ಆ ಭಗವಂತನೇ ಈ ಬ್ರಹ್ಮಾಂಡಪುರದಲ್ಲೂ (ನಮ್ಮ ದೇಹದಲ್ಲೂ) ನೆಲೆಸಿರುವವನು. ಬ್ರಹ್ಮಾಂಡವು ಹೇಗೆ ಪಂಚಭೂತಗಳಿಂದ ಕೂಡಿದೆಯೋ ಹಾಗೆ ನಮ್ಮ ದೇಹವೂ ಪಂಚಭೂತಗಳಿಂದಲೇ ಮಾಡಲ್ಪಟ್ಟಿದೆ. ಆದ್ದರಿಂದ ಬ್ರಹ್ಮಾಂಡದಲ್ಲಿರುವ ಸಮಸ್ತವೂ ನಮ್ಮ ದೇಹವಾದ ಬ್ರಹ್ಮಾಂಡಪುರದಲ್ಲೂ ಇದೆ, ನವದ್ವಾರೇ ಪುರೇ ದೇಹಿ ಎಂಬಂತೆ ತಾತಯ್ಯನವರು ದ್ವಾರಾಲು ತೊಮ್ಮಿದಿ ದೊಡ್ಡದಿ ಮಾವೂರು ಎನ್ನುತ್ತಾ ನಾವು ಶರೀರವನ್ನು ನಮ್ಮ ಹೃತ್ಕಮಲದಲ್ಲಿ ಗೋಚರವಾಗದೇ ಕುಳಿತಿರುವ ಆ ಭಗವಂತನನ್ನು ಅರಿಯುವ ಸಾಧನವಾಗಿ ಉಪಯೋಗಿಸಬೇಕು ಎಂದು ಹೇಳುತ್ತಾರೆ.

ವಿಷ್ಣು ಸಹಸ್ರನಾಮದಲ್ಲಿ ಯೋಗಿಹೃದ್ಧ್ಯಾನಗಮ್ಯಂ - ಯೋಗಿಗಳು ಧ್ಯಾನದ ಮೂಲಕ ಅರಿತುಕೊಳ್ಳಬಲ್ಲ ಭಗವಂತ ನಮ್ಮ ಹೃದಯದಲ್ಲೇ ನೆಲೆಸಿದ್ದಾನೆ ಎಂಬ ಮಾತು ಬರುತ್ತದೆ.

ನಮ್ಮ ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಕೂಡ ಇದೇ ವಿಚಾರವನ್ನು ಪ್ರಸ್ತುತ ಪಡಿಸುತ್ತಾರೆ :

ದೇಹವೆಂಬುದು ಕುದುರೆಯಾತ್ಮನದರಾರೋಹಿ |

ವಾಹನವನುಪವಾಸವಿರಿಸೆ ನಡೆದೀತೆ ? ||

ರೋಹಿ ಜಾಗ್ರತೆದಪ್ಪೆ ಯಾತ್ರೆ ಸುಖ ಸಾಗೀತೆ ? |

ಸ್ನೇಹವೆರಡಕಮುಚಿತ - ಮಂಕುತಿಮ್ಮ ||

ದೇಹವೆಂಬುದು ತಾನೇ ಕೆಲಸ ಮಾಡಲಾರದು. ನಾವು ಅದನ್ನು ಉಪಯೋಗಿಸಿಕೊಂಡು ನಮ್ಮ ಇಂದ್ರಿಯಗಳು, ಬುದ್ಧಿ ಮತ್ತು ಮನಸ್ಸಿನಿಂದ ಕೆಲಸ ಮಾಡಿಸಬೇಕು. ಇಂದ್ರಿಯಗಳು ತಮಗೊಪ್ಪಿಸಿದ ಕೆಲಸವನ್ನು ಮಾಡಿದಾಗ, ಅವು ಕಳುಹಿಸಿ ಕೊಡುವ ಎಲ್ಲಾ ವಿಚಾರಗಳನ್ನೂ ಗಮನಿಸಿ, ನಮಗೆ ಯಾವುದು ಉಪಯುಕ್ತ, ಯಾವುದು ಅನುಪಯುಕ್ತ ಎಂದು ವಿಂಗಡಿಸಿ, ಬೇಕಾದ್ದನ್ನು ಮಾತ್ರ ಬುದ್ಧಿ ತನ್ನ ಒಳಗಿನ ಪದರಗಳಲ್ಲಿ ಶೇಖರಿಸಿಟ್ಟುಕೊಳ್ಳುತ್ತದೆ. ಆದರೆ ಇಂದ್ರಿಯಗಳಿಗೆ ಭೋಗ ಲಾಲಸೆ ಹೆಚ್ಚು. ಅವುಗಳನ್ನು ನಾವು ಹತೋಟಿಯಲ್ಲಿಟ್ಟು ಕೊಂಡಾಗಷ್ಟೇ, ನಮ್ಮ ಸುಪ್ತ ಮನಸ್ಸು ಮತ್ತು ಅಂತರಾತ್ಮ ತಮಗೆ ಬೇಕಾದ ಅತಿ ಅವಶ್ಯಕವಾದ ಆಧ್ಯಾತ್ಮ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಇಲ್ಲಿ ಡಿವಿಜಿಯವರು ನಮ್ಮ ದೇಹವನ್ನು ಒಂದು ರಥಕ್ಕೆ ಹೋಲಿಸಿದ್ದಾರೆ. ಇಂದ್ರಿಯಗಳು ರಥವನ್ನೆಳೆಯುವ ಕುದುರೆಗಳು. ಮನಸ್ಸು, ಬುದ್ಧಿಗಳು ಕುದುರೆಗಳ ಹಗ್ಗವನ್ನು ಹಿಡಿದೆಳೆದು ನಡೆಸುವ ಸಾರಥಿಗಳು. ರಥವನ್ನು ಸರಿಯಾದ ಹಾದಿಯಲ್ಲಿ ನಡೆಸುತ್ತಾ, ನಾವು ನಮ್ಮ ಅಂತರಾಳದಲ್ಲಿ ಕುಳಿತಿರುವ ಚೇತನಾ ಸ್ವರೂಪನಾದ ಭಗವಂತನನ್ನು ತಿಳಿಯುವ ಪ್ರಯತ್ನ ಮಾಡಬಹುದು ಎನ್ನುತ್ತಾರೆ.

ಶ್ರೀ ಕನಕದಾಸರು ಕೂಡ ತಮ್ಮ ಒಂದು ಕೀರ್ತನೆಯಲ್ಲಿ ....

ಎಲ್ಲಿ ನೋಡಿದರಲ್ಲಿ ರಾಮ - ಇದ ಬಲ್ಲ ಜಾಣರ ದೇಹದಲ್ಲಿ ನೋಡಣ್ಣ ||

ಕಣ್ಣಿ ಕಾಮನ ಬೀಜ | ಕಣ್ಣಿನಿಂದಲೆ ನೋಡು ಮೋಕ್ಷ ಸಾಮ್ರಾಜ್ಯ |

ಕಣ್ಣಿನ ಮೂರುತಿ ಬಿಗಿದು | ಒಳಗಣ್ಣಿನಿಂದಲೆ ದೇವರ ನೋಡಣ್ಣ || 1 ||

ಮೂಗೆ ಶ್ವಾಸ ನಿಶ್ವಾಸ | ಈ ಮೂಗಿನಿಂದಲೆ ಕಾಣೋ ಯೋಗ ಸನ್ಯಾಸ |

ಮೂಗನಾದರೆ ವಿಶೇಷ | ಒಳ ಮೂಗಿನಿಂದ ನೋಡಣ್ಣ ಲೀಲಾ ವಿಲಾಸ ||2||

ಕಿವಿಯೆ ಕರ್ಮಕ್ಕೆ ದ್ವಾರ | ಈ ಕಿವಿಯಿಂದಲೆ ಕೇಳೋ ಮೋಕ್ಷಸಾರ |

ಕಿವಿಯ ಕರ್ಮಕುಠಾರ | ಒಳಗಿವಿಯಲ್ಲಿ ಕಾಣೋ ನಾದದ ಬೇರ ||3||

ಇಂದ್ರಿಯಗಳು ಬಾಹ್ಯಾಡಂಬರಗಳಲ್ಲಿ ಆಸಕ್ತರಾಗಿ ಬದುಕು ವ್ಯರ್ಥ ಮಾಡಿಕೊಳ್ಳದೆ ವಾಸನೆಗಳನ್ನು ಬಿಟ್ಟು, ಕಣ್ಣು, ಕಿವಿ, ಮೂಗುಗಳನ್ನು ನಮ್ಮ ದೇಹದೊಳಗಿನ ಅಂತರಂಗದ ಪ್ರಪಂಚಕ್ಕೆ ನೆಟ್ಟರೆ, ಆ ಕರುಣಾಮಯಿ ಶ್ರೀ ರಾಮಚಂದ್ರ ಎಲ್ಲೆಲ್ಲೂ ಕಾಣತೊಡಗುತ್ತಾನೆ ಎನ್ನುತ್ತಾರೆ.


ಚಿತ್ರಕೃಪೆ : ಅಂತರ್ಜಾಲ

11 comments:

 1. ಶ್ಯಾಮಲಾ,

  ದೇಹ-ದೇವಾಲಯದ ಮೂರನೆಯ ಕ೦ತಿನಲ್ಲಿ, ದೇಹವೆ೦ಬ ಆಸ್ತಿಯನ್ನು ಭಗವ೦ತನ ಕರುಣೆಯಿ೦ದ ನಾವು ದೊರಕಿಸಿಕೊ೦ಡಿದ್ದೇವೆ ಎನ್ನುವ ವಿಚಾರವನ್ನು ತಿಳಿಸಿದ್ದೀರಿ. ತಾತಯ್ಯನವರ ಬ್ರಹ್ಮಾ೦ಡಪುರ, ದಿವಿಜಿಯವರ ರಥ, ಕನಕದಾಸರ ಅ೦ತರ೦ಗ ಪ್ರಪ೦ಚ, ಇವೆಲ್ಲವೂ ಸಾಧಕರಿಗೆ ಸ೦ಗ್ರಹಯೋಗ್ಯ ವಿಚಾರಗಳಾಗಿವೆ. ನಿಮ್ಮ ವಿಷಯ ಮ೦ಡನೆಗೆ ಹಾಗೂ ಅದರ ಹಿ೦ದೆ ಇರುವ ಪರಿಶ್ರಮಕ್ಕೆ, ಅಭಿನ೦ದನೆಗಳು.

  ಅನ೦ತ್

  ReplyDelete
 2. ತಾತಯ್ಯನವರ ಅಮೂಲ್ಯವಾದ ಮಾತುಗಳನ್ನು ತಿಳಿಸುತ್ತಾ 'ದೇಹ'ದ ಸದುಪಯೋಗದ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದೀರಿ. ಸ೦ಗ್ರಹ ಯೋಗ್ಯ ಲೇಖನ. ಧನ್ಯವಾದಗಳು

  ReplyDelete
 3. ಶ್ಯಾಮಲಾ,
  ಗಹನ ವಿಚಾರಗಳನ್ನು ತಿಳಿಯಾಗಿ ತಿಳಿಸಿದ್ದೀರಿ. ತಾತಯ್ಯನವರ,ಡಿವಿಜಿಯವರ ಪದಗಳು ಹಾಗು ಕನಕದಾಸರ ಕೀರ್ತನೆ ತುಂಬ ಇಷ್ಟವಾದವು. ಧನ್ಯವಾದಗಳು.

  ReplyDelete
 4. ನಮಸ್ತೆ ಅನಂತ್ ಸಾರ್..
  ಎಲ್ಲರಿಗಿಂತ ಮೊದಲು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ಧನ್ಯವಾದಗಳು. ಇಡೀ ಲೇಖನದಲ್ಲಿ ನೀವು ಹೇಳಿರುವ ಮೂರು ಹೋಲಿಕೆಗಳೇ ಪ್ರಧಾನವಾದವು. ಒಮ್ಮೆ ನಾವು ದೇಹವನ್ನು ಬ್ರಹ್ಮಾಂಡಪುರವೆಂದು ಕೊಂಡರೆ, ನಿಜಕ್ಕೂ ಅಲ್ಲಿ ಎಲ್ಲವೂ ಇವೆ. ಒಂದು ಪುಟ್ಟ ಪುರದಲ್ಲಿ ಇರಬೇಕಾದ ಎಲ್ಲಾ ವ್ಯವಸ್ಥೆಗಳೂ ಅಲ್ಲಿವೆ ! ಅದೇ ದೇಹವನ್ನು ರಥವೆಂದುಕೊಂಡರೆ, ಅಲ್ಲಿಯೂ ರಥಕ್ಕೆ ಬೇಕಾದ್ದೆಲ್ಲವೂ ಇವೆ ! ಹಾಗೇ ದೇಹದ ಒಳಗಿನ ಅಂತರಂಗ ಪ್ರಪಂಚದಲ್ಲಿ ಇಣುಕಿದರೆ ಆಲ್ಲೂ ಪ್ರಪಂಚದ ಎಲ್ಲವೂ ಇವೆ. ಅದ್ಭುತ ಅನ್ನಿಸುತ್ತದೆ ಅಲ್ಲವೇ.. ವಿಷಯ ಸಂಗ್ರಹಣೆಯ ಹಿಂದೆ ಇರುವ ಪರಿಶ್ರಮವನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು. :-)

  ReplyDelete
 5. ಪ್ರಭಾಮಣಿ ಮೇಡಂ
  ನನ್ನ ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮಗೆ ತಾತಯ್ಯನವರ ಮಾತುಗಳು ತುಂಬಾ ಇಷ್ಟ ಹಾಗೂ ಪ್ರಭಾವ ಬೀರಿರುವ ಹಾಗೇ ಕಾಣುತ್ತೆ ಅಲ್ಲವೇ..?

  ReplyDelete
 6. ಕಾಕಾ..
  ಸಂಗ್ರಹ ಮಾಡಿ, ಆಧಾರ ತೆಗೆದುಕೊಂಡು ಬರೆದದ್ದು ನಿಮಗೆ ಇಷ್ಟವಾಯಿತೆಂದು ತಿಳಿದು ತುಂಬಾ ಸಂತೋಷವಾಯಿತು. ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು ಕಾಕಾ...

  ReplyDelete
 7. ಶ್ಯಾಮಲಾವ್ರೆ, ತಾತಯ್ಯನವರ ಭಜನೆಗಳನ್ನು ವಯೋವೃದ್ಧರ ತಂಡ ನಮ್ಮ ಮನೆಯ ಹಿಂಭಾಗದ ಬೀದಿಯ ಅಟ್ಟಿಯಲ್ಲಿ ರಾತ್ರಿ ಊಟದ ನಂತರ (೭-೮ ಗಂಟೆ ಸುಮಾರಿಗೆ) ಕೂತು ಸುಮಾರು ೧೦-೧೧ ರ ವರೆಗೆ ಹಾಡುತ್ತಿದ್ದುದು ನನಗಿನ್ನೂ ಚನ್ನಾಗಿ ನೆನಪಿದೆ....(ನಮ್ಮ ಊರು ಕೈವಾರದಿಂದ ಕೇವಲ ೧೫ ಕಿ.ಮೀ. ದೂರವಿದ್ದು ತಾತಯ್ಯನವರ ಭಜನೆಗಳ ಪ್ರಭಾವ ಹೆಚ್ಚಾಗೇ ಇತ್ತು ಎನ್ನಬಹುದು..) ತಂಬೂರಿ ಮತ್ತು ಚಿಟಿಕೆ ಎರಡೇ, ಆಗ ನಮಗೆ ಭಜನೆ ಮತ್ತು ಅದರ ಅರ್ಥಕ್ಕಿಂತ ರಾಗವಾಗಿ ತಾಳಕ್ಕೆ ಹಾಡುತ್ತಿದ್ದುದು ಇಷ್ಟ ಆಗ್ತಿತ್ತು.. ನಿಮ್ಮ ಈ ಲೇಖನ ಆ ದಿನಗಳ ನೆನಪನ್ನು ಮರುಕಳಿಸಿದರೆ ಅರ್ಥ ವಿವರಣೆ ಅಂದಿನ ಜನಮಾನಸದ ವಿಚಾರಗಳತ್ತ ನಮ್ಮನ್ನು ಕೊಂಡೊಯ್ಯುತ್ತದೆ...

  ReplyDelete
 8. ಅಜಾದ್ ಸಾರ್..
  ತುಂಬಾ ದಿನಗಳ ನಂತರ ಬಂದಿದ್ದೀರಿ. ನಿಮಗೆ ಬಾಲ್ಯದಿಂದಲೇ ತಾತಯ್ಯನವರ ಸಾಹಿತ್ಯದ ಪರಿಚಯವಿತ್ತೇ.. ತುಂಬಾ ಸಂತೋಷವಾಯಿತು ನಿಮ್ಮ ಮಾತು ಓದಿ. ತಾತಯ್ಯನವರ ವಿಚಾರಗಳನ್ನು ಶ್ರೀ ಕೈಪು ಲಕ್ಷ್ಮೀನರಸಿಂಹ ಶಾಸ್ತ್ರಿಗಳು ತುಂಬಾ ಸರಳವಾಗಿ ಹಾಗೂ ಸುಂದರವಾಗಿ ವಿವರಿಸಿದ್ದಾರೆ. ತಾತಯ್ಯನವರು ತಮ್ಮ ವಿಚಾರಗಳನ್ನು ಸುಮಾರು ೧೮೦-೨೦೦ ವರ್ಷಗಳ ಹಿಂದೆ ಮಂಡಿಸಿದ್ದರೂ ಅವುಗಳು ಇವತ್ತಿಗೂ ತುಂಬಾ ಪ್ರಸ್ತುತವಾಗಿದೆ. ಧನ್ಯವಾದಗಳು ನಿಮಗೆ.

  ReplyDelete
 9. ಹಿರಿಯರ ಕವನಗಳ ಆಯ್ದ ಭಾಗಗಳ ಜೊತೆಗೆ ಷಟ್ಚಕ್ರಗಳ ಬಗ್ಗೆ ಸೊಗಸಾಗಿ ಹೇಳಿದಿರಿ, ಸಪ್ತ ಚಕ್ರಗಳು ಇವೆಯೆಂಬುದು ಅನುಭವಿಕರ ಮಾತು, ಯಾವುದೂ ನಮ್ಮ ಅನುಭವಕ್ಕೆ ನಿಲುಕಿದ್ದಲ್ಲ ಅಲ್ಲವೇ? ಲೇಖನ ಪರಾವಿದ್ಯೆಯ ವಿಷಯವನ್ನು ಒಳಗೊಂಡಿದೆ!ಚೆನ್ನಾಗಿದೆ, ಧನ್ಯವಾದಗಳು

  ReplyDelete
 10. ಹೌದು ಭಟ್ ಸಾರ್..
  ಅಲೌಕಿಕ ವಿಷಯಗಳು ಅವರವರ ಅನುಭವ ಹಾಗೂ ನಂಬಿಕೆಗೆ ಬಿಟ್ಟಿದ್ದು. ಲೇಖನ ಮೆಚ್ಚಿದ್ದಕ್ಕೆ ಧ್ಯನ್ಯವಾದಗಳು.

  ReplyDelete
 11. “ನಾನು ಯಾರು ವಿಚಾರ ಮಾಡಿದರೆ ಆತ್ಮ ವಿಚಾರವನ್ನು, ಅಂದರೆ ನಾನು ಯಾರು ಎಂಬ ಆತ್ಮಾನ್ವೇಷಣಾ ವಿಧಾನವನ್ನು ಆತ್ಮಜ್ಞಾನ ಪ್ರಾಪ್ತಿಗೆ ಮುಖ್ಯ ಸಾಧನವೆಂದು ಬೋಧಿಸಿದರು.

  “ನಾನು ಯಾರು ಎಂಬ ವಿಚಾರದ ಕುರಿತು ಹೇಳುತ್ತಾ… ಮನಸ್ಸನ್ನು ಶಮನಗೊಳಿಸಲು ಬೇರಾವುದೇ ಮಾರ್ಗವಿಲ್ಲ. ಉಳಿದ ಮಾರ್ಗಗಳಿಂದ ಹಿಡಿತ ಸಾಧಿಸಲು ಪ್ರಯತ್ನಿಸಿದರೆ ಮನಸ್ಸು ಶಮನಗೊಂಡಿರುವಂತೆ ಕಂಡುಬಂದರೂ ಮತ್ತೊಮ್ಮೆ ಮೇಲೇಳುವುದು ಎನ್ನುವರು.
  ತನ್ನ ತಾನೇ ವಿಚಾರದ ಕುರಿತು
  "ನಾನು ಭೌತಿಕ ಶರೀರ ಮಾತ್ರವೇ ಅಲ್ಲ,ಆತ್ಮವೂ ಸಹ" ಎಂದು ತಿಳಿದುಕೊಳ್ಳುವುದು;"ನಾನು ಮೂಲ ಚೈತನ್ಯ" ಎಂದು ತಿಳಿದುಕೊಳ್ಳುವುದು.
  ಆತ್ಮಜ್ಞಾನಿ. ಅವನಿಗೆ ಮಾತ್ರ ಬ್ರಹ್ಮತತ್ತ್ವ ಗೊತ್ತು. ತಿಳಿದವನು ಮಾತ್ರ 'ಜ್ಞಾನದ ಬೀಜ'ವನ್ನು ಬಿತ್ತುತ್ತ ಹೋಗುತ್ತಾನೆ. ಆಗ ಜನ ಬಿರುನುಡಿಯನ್ನು ಆಡಬಹುದು. 'ತತ್ತ್ವದ ಜ್ಞಾನಿ' ಇದಕ್ಕೆಲ್ಲ ಅಂಜಬೇಕಿಲ್ಲ. ಅವನ ಮಾತಿನಲ್ಲೆ ಹೇಳಬೇಕೆಂದರೆ: 'ಅರಿವವನಿಗೇತರ ವೈರ?' ತನ್ನ ತಾನೇ ಶಿವನು, ತನ್ನ ಶರೀರವೆ ಭೂತ ತನ್ನ ತಾನು ತಿಳಿದೊಡೆ ಪರಬೊಮ್ಮ ತನ್ನ ತಾನಕ್ಕು-ಸರ್ವಜ್ಞ. ನಾವು ಈ ಮಾತನ್ನು ಧೇನಿಸಬೇಕಾಗಿದೆ. ಇಂಥ ಜ್ಞಾನಿಗೆ ಕತ್ತಲೆಯೇ ಇಲ್ಲ. ಅವನು ಬೆಳಗಿನೊಳಗಿನ ಬೆಳಗನ್ನು ಪಡೆದವನೇ ಆಗಿರುತ್ತಾನೆ.

  ReplyDelete