Saturday, June 25, 2011

ದೇಹ ದೇವಾಲಯ - ೨

ದೇಹವನ್ನೇ ದೇವಾಲಯವಾಗಿಸದೇ ಇದ್ದಲ್ಲಿ ನಮಗೆ ಮುಕ್ತಿಯ ಅನುಭವವಾಗದು ಎಂದ ಶಿವಶರಣರ ವಚನಗಳನ್ನು ನೋಡಿದಾಗ, ನನಗೆ ನಮ್ಮ ದಾಸವರೇಣ್ಯರ ಸಾಹಿತ್ಯದಲ್ಲೂ ಇದೇ ಅರ್ಥದ ಸ್ವಲ್ಪ ಬೇರೆ ಪ್ರಾಕಾರದಲ್ಲಿ ಹೇಳಲ್ಪಟ್ಟಿರುವ ಪದಗಳು ನೆನಪಾದವು. ಅವುಗಳನ್ನು ಪರಿಚಯಿಸುವ ಚಿಕ್ಕ ಪ್ರಯತ್ನ ಇಲ್ಲಿ...

ವಿಜಯದಾಸರು "ಲಿಂಗ.. ರಾಮಲಿಂಗ ಎನ್ನಂತರಂಗ" ಎನ್ನುತ್ತಾ.. "ಚಿತ್ತ ನಿನ್ನಯ ಚಿಂತೆಯೊಳಿರಲಿ.. ಅಂತರಂಗದಲ್ಲಾನಂದಿಸಲಿ" ಎಂದು ಹೇಳುತ್ತಾ, ನಮ್ಮ ಚಿತ್ತವನ್ನು ಸದಾ ಭಗವಂತನ ಧ್ಯಾನದಲ್ಲಿಡಬೇಕು ಎನ್ನುತ್ತಾರೆ. ನಕದಾಸರು "ತನು ನಿನ್ನದು.. ಜೀವನ ನಿನ್ನದೂ ರಂಗ.." ಎನ್ನುತ್ತಾ ತಮ್ಮ ತನುವೂ ಶ್ರೀ ಹರಿಯದೇ ಮತ್ತು ಜೀವನವೂ ಶ್ರೀಹರಿಯದೇ ಎಂದು ತಮ್ಮನ್ನೇ ಸಮರ್ಪಿಸಿಕೊಂಡು ಬಿಡುತ್ತಾರೆ. ಹೀಗೆ ದಾಸ ಶ್ರೇಷ್ಠರೆಲ್ಲರೂ ಕೂಡ ನಾವು ನಮ್ಮ ತನುವನ್ನೂ, ಮನವನ್ನೂ ಪರಮಾತ್ಮನಿಗೇ ಮೀಸಲಾಗಿಡಬೇಕೆಂದೂ ಅವನಲ್ಲಿ ಲೀನವಾಗುವುದೇ ನಮ್ಮ ಬದುಕಿನ ಗುರಿಯಾಗಬೇಕೆಂದೂ ಹೇಳುತ್ತಾರೆ.

ಕನ್ನಡದಲ್ಲಿ ದೇವರನಾಮಗಳನ್ನು ರಚಿಸಿ ಭಾಗವತ ಧರ್ಮ ಪ್ರಚಾರವನ್ನು ಪ್ರಾರಂಭಿಸಿದವರಲ್ಲಿ ಶ್ರೀಪಾದರಾಯರು ಮೊದಲಿಗರಾದ್ದರಿಂದ ಹರಿದಾಸ ಪೀಳಿಗೆಯವರು ಮೊದಲುನಮಃ ಶ್ರೀಪಾದರಾಜಾಯಎಂದು ರಾಯರಿಗೆ ವಂದಿಸುವ ಸಂಪ್ರದಾಯವಿದೆ. ಶ್ರೀಪಾದರಾಜರು “ರಂಗವಿಠಲಮತ್ತುಶ್ರೀರಂಗಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳು, ಸುಳಾದಿಗಳನ್ನು ಸರಳವಾಗಿ ಹೃದಯಂಗಮವಾಗಿ ರಚಿಸಿದ್ದಾರೆ. ಇವರ ನಾ ನಿನಗೇನೂ ಬೇಡುವುದಿಲ್ಲ ಎನ್ನ..... ಹೃದಯ ಕಮಲದೊಳು ನಿಂದಿರು ಹರಿಯೇ ಎಂಬ ಪದದಲ್ಲಿ

ಶಿರ ನಿನ್ನ ಚರಣದಲ್ಲೆರಗಲಿ ಎನ್ನ

ಚಕ್ಷುಗಳು ನಿನ್ನ ನೋಡಲಿ ಹರಿಯೇ

ಕರ್ಣ ಗೀತಂಗಳ ಕೇಳಲಿ ಎನ್ನ

ನಾಸಿಕ ನಿರ್ಮಾಲ್ಯ ಘ್ರಾಣಿಸಲಿ ಹರಿಯೆ ||

ನಾಲಿಗೆ ನಿನ್ನ ಕೊಂಡಾಡಲಿ ಎನ್ನ

ಕರಗಳೆರಡು ನಿನಗೆ ಮುಗಿಯಲಿ ಹರಿಯೆ

ಪಾದ ತೀರ್ಥಯಾತ್ರೆ ಹೋಗಲಿ ನಿನ್ನ

ಧ್ಯಾನ ಎನಗೊಂದು ಕೊಡು ಕಂಡ್ಯ ಹರಿಯೆ ||

ಬುದ್ಧಿ ನಿನ್ನೊಳು ಬೆರೆತ್ಹೋಗಲಿ ಎನ್ನ

ಚಿತ್ತ ನಿನ್ನಲಿ ನಲಿದಾಡಲಿ ಹರಿಯೆ

ಭಕ್ತ ಜನರ ಸಂಗವು ದೊರಕಲಿ ರಂಗ

ವಿಠಲ ನಿನ್ನ ದಯವಾಗಲಿ ಹರಿಯೆ |೩|

ಎನ್ನುತ್ತಾ ನಮ್ಮ ದೇಹದ ಒಂದೊಂದು ಅಂಗವೂ ಕೂಡ ಹೇಗೆ ನಿರುತ ಹರಿಯ ಧ್ಯಾನದಲ್ಲೇ, ಸ್ಮರಣೆಯಲ್ಲೇ, ನಮಿಸುವುದರಲ್ಲೇ ಮಗ್ನವಾಗಿರಬೇಕು, ಹರಿ ನಮಗೆ ಪ್ರಸಾದಿಸಿದ ದೇಹವನ್ನು ಸದುಪಯೋಗ ಪಡಿಸಿಕೊಳ್ಳ ಬೇಕೆಂದು ವಿವರಿಸುತ್ತಾರೆ.


ಕ್ರಿ.ಶ. ೧೪೪೭ರಲ್ಲಿ ಜನಿಸಿ, ಬ್ರಹ್ಮಣ್ಯ ತೀರ್ಥರ ಶಿಷ್ಯರೂ ಹಾಗೂ ಶ್ರೀಪಾದರಾಯರ ಶಿಷ್ಯರೂ ಆದ ಶ್ರೀ ವ್ಯಾಸತೀರ್ಥರು “ಶ್ರೀಕೃಷ್ಣ” ಎಂಬ ಅಂಕಿತದಿಂದ ಅನೇಕ ಸುಳಾದಿಗಳನ್ನೂ, ವೃತ್ತನಾಮಗಳು ಮತ್ತು ದೇವರನಾಮಗಳನ್ನು ರಚಿಸಿದರು. ಅವರ ಒಂದು ಪದ

ಅಂತರಂಗದಲಿ ಹರಿಯ ಕಾಣದವ ಹುಟ್ಟು ಕುರುಡನೋ

ಸಂತತ ಸಿರಿಕೃಷ್ಣ ಚರಿತೆ ಕೇಳದವ ಜಡಮತಿ ಕಿವುಡನೋ ಎಂದೆಂದಿಗೂ ||

ಹರುಷದಿಂದಲಿ ನರಹರಿಯ ಪೂಜೆಯ | ಮಾಡದವನೆ ಕೈ ಮುರಿದವನೋ |

ಕುರುವರಸೂತನ ಮುಂದೆ ಕೃಷ್ಣಾ ಎಂದು | ಕುಣಿಯದವನೆ ಕುಂಟನೋ ||

ಶ್ರೀ ವ್ಯಾಸತೀರ್ಥರು ನಮ್ಮ ಶ್ರೀಹರಿಯ ಪೂಜೆಯ ಮಾಡದ ಕೈಗಳು ಇದ್ದರೂ ಅದು ಮುರಿದ, ಉಪಯೋಗಕ್ಕೆ ಬಾರದ ಮೊಂಡು ಕೈನಂತೆ, ಕುರುಗಳಲ್ಲಿ ಶ್ರೇಷ್ಠನಾದ ಅರ್ಜುನನ ರಥ ನಡೆಸುವವನಾದ ಕೃಷ್ಣನನ್ನು ಕಂಡು, ಆನಂದದಿಂದ ಕುಣಿಯಲಾರದ ಕಾಲುಗಳು ಇದ್ದರೂ ಉಪಯೋಗವಿಲ್ಲದೆ, ಅವನು ಕುಂಟನಿಗೆ ಸಮನಾದವನು ಎಂದೂ, ನಿರಂತರವಾಗಿ ಹರಿಯ ಲೀಲೆಗಳನ್ನು ಕೇಳದ ಕಿವಿಗಳು ಇದ್ದರೂ ಆ ಮನುಷ್ಯ ಕಿವುಡನಿಗೆ ಸಮನಾದವನು ಮತ್ತು ತನ್ನೊಳಗೇ ನೆಲೆಸಿರುವ ಕರುಣಾ ಮೂರುತಿ ಪರಮಾತ್ಮ ಶ್ರೀ ಹರಿಯ ಕಾಣದ ಕಣ್ಣುಗಳು ಇದ್ದರೂ ಕುರುಡನೇ ಎಂದು ನಮ್ಮ ಇಂದ್ರಿಯಗಳ ಉಪಯೋಗದ ರೀತಿ ವಿವರಿಸುತ್ತಾರೆ.

ಶ್ರೀ ವ್ಯಾಸತೀರ್ಥರು ತಮ್ಮ ಸೇರಿದೆನು ಸೇರಿದೆನು ಜಗದೀಶನ | ನರಕ ಜನ್ಮದ ಭಯವು ಎನಗೆ ಇನಿತಿಲ್ಲ|| ಎಂಬ ಪದದಲ್ಲಿ

ನೇತ್ರಗಳು ಕೃಷ್ಣನ ಮೂರ್ತಿಯನು ನೋಡುತಿವೆ |

ಶ್ರೋತೃಗಳು ಹರಿಕಥೆಯ ಕೇಳುತಲಿವೆ |

ರಾತ್ರಿ ಹಗಲು ಎನ್ನ ಮನಸು ಶ್ರೀರಂಗನಲಿ|

ಪಾತ್ರವಾಡುತಿದೆನ್ನ ಗಾತ್ರ ಕೃಷ್ಣನ ಮುಂದೆ |೧|

ಹಸ್ತಗಳು ಮಂಟಪದ ಮಾರ್ಜನೆಯ ಮಾಡುತಿವೆ | ಮಸ್ತಕವು ಶ್ರೀ ಹರಿಯ ಚರಣಕೆರಗುತಿವೆ |

ವಿಸ್ತಾರವಾಗಿ ಪದ ಪ್ರದಕ್ಷಿಣೆಯ ಮಾಡುತಿದೆ | ಕಸ್ತೂರಿ ಗಂಧವಾಘ್ರಾಣಿಸುತಿದೆ ನಾಸಿಕವು |೨|

ಹರಿನಾಮ ಕೀರ್ತನೆಯ ಮಾಡುತಿದೆ ಎನಜಿಹ್ವೆ | ಹರಿನಾಮಜನ್ಯ ಪಾವನತೆಯಿಂದ |

ಹರಿಪ್ರೀತಿಯಾಗಿದೆ ನೋಡಿದರೆ ಎನದೇಹ | ಸಿರಿಕೃಷ್ಣ ನೆಲಸಯ್ಯ ಎನ್ನ ಮನಮಂದಿರದಿ |೩|

ನಿರಂತರ ಅಂತರಂಗದಿ ಹರಿ ಧ್ಯಾನ ಮಾಡುತ್ತಾ, ದೇಹವೆಂಬ ಈ ಶರೀರ ಜೀವನದ ನಾಟಕದಲ್ಲಿ ಪಾತ್ರ ಮಾಡುತ್ತಿರ ಬೇಕು. ನಮ್ಮೆರಡು ಕೈಗಳು ಶ್ರೀಹರಿಯು ಆಸೀನನಾಗಿರುವ ಮಂಟಪವನ್ನು ಸದಾ ಶುಚಿಗೊಳಿಸುತ್ತಿರಬೇಕು. ಶಿರವು ಸದಾ ಚರಣಾರವಿಂದಗಳಲ್ಲಿ ಎರಗಿರಬೇಕು. ನಾಲಿಗೆಯು ಸದಾ ಹರಿನಾಮ ಜಪ ಮಾಡುತ್ತಿರಬೇಕು. ಹರಿನಾಮ ಜಪದಿಂದ ಪಾವನವಾಗಿಹ, ಹರಿಪ್ರೀತಿಯಿಂದ ಶುದ್ಧವಾಗಿಹ ಈ ನನ್ನ ದೇಹದಲ್ಲಿರುವ ಮನವೆಂಬ ಮಂದಿರದಲ್ಲಿ ಬಂದು ನೆಲೆಸಯ್ಯಾ ಎನ್ನೊಡೆಯ ಶ್ರೀ ಕೃಷ್ಣ ಎನ್ನುತ್ತಾರೆ. ಹೀಗೆ ಶ್ರೀಹರಿಯೇ ನೆಲೆಸಿರುವ ನನ್ನ ಈ ಆತ್ಮಕ್ಕೆ, ಶ್ರೀಹರಿಯ ನಿರಂತರ ಧ್ಯಾನದಲ್ಲೇ ಮುಳುಗಿರುವ ನನಗೆ ಯಾವ ಭಯಾನಕ ನರಕದ ಭಯವೂ ಇಲ್ಲ ನಾನು ಕಾಯಾ, ವಾಚಾ, ಮನಸಾ ನನ್ನ ಆರಾಧ್ಯ ದೈವ ಜಗದೀಶನನ್ನು ಸೇರಿಬಿಟ್ಟಿರುವೆ ಎನ್ನುತ್ತಾರೆ.

ಶ್ರೀವ್ಯಾಸತೀರ್ಥರ ಇನ್ನೊಂದು ಪದ ಅತ್ಯಂತ ಶ್ರೇಷ್ಠವಾದ ಭಾವವನ್ನು ಹೊಂದಿದೆ ಎಂದು ನನ್ನ ಅನಿಸಿಕೆ. ಅದು ಯಾವುದೆಂದರೆ

ಎನ್ನ ಬಿಂಬ ಮೂರುತಿಯ ಪೂಜಿಸುವೆ ನಾನು | ಮನಮುಟ್ಟಿ ಅನುದಿನದಿ ಮರೆಯದೆ ಜನರೇ ||

ಈ ಪದ್ಯದಲ್ಲಿ ದಾಸರು ಭಗವಂತನನ್ನು “ಬಿಂಬ” ಮೂರುತಿ ಎಂದಿದ್ದಾರೆ. ಅಂದರೆ ಶ್ರೀಹರಿ ಬಿಂಬ ಮತ್ತು ಭಕ್ತರು ಅವನ ಪ್ರತಿಬಿಂಬ ಎನ್ನುವ ಮಾತು ಇಲ್ಲಿ ಸ್ಪಷ್ಟೀಕರಣ ಮಾಡಿದ್ದಾರೆ.

ಗಾತ್ರವೇ ಮಂದಿರ ಹೃದಯವೇ ಮಂಟಪ | ನೇತ್ರವೇ ಮಹದ್ದೀಪ ಹಸ್ತ ಚಾಮರವು ||

ಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರ | ಶಾಸ್ತ್ರ ಮಾತುಗಳೆಲ್ಲ ಮಂತ್ರಗಳು |೧|

ಇಲ್ಲಿ ದೇಹ ದೇವಾಲಯವಾಗಿಸುವ ಮಾತು ತುಂಬಾ ಸಮರ್ಥವಾಗಿ ಬಂದಿದೆ. ಗಾತ್ರವೆಂಬುದೇ ದೇಹ ಮತ್ತು ದೇವಾಲಯವೆಂದಾಗ, ನಮ್ಮ ಅಂತರಂಗ ಅಥವಾ ಹೃದಯ ಭಗವಂತ ನೆಲೆಸುವ ಗರ್ಭಗುಡಿ ಅಥವಾ ಮಂಟಪವಾಗುತ್ತದೆ. ದೇದೀಪ್ಯಮಾನವಾಗಿ ಬೆಳಗುವ ಎರಡು ನೇತ್ರಗಳು ದೇವರ ಮುಂದೆ ಬೆಳಗುವ ಜೋಡಿ ದೀಪಗಳು. ಮೇಲೆ ಕೆಳಗೆ ಆಡುವ ಎರಡು ಹಸ್ತಗಳು ಚಾಮರವಾಗುತ್ತವೆ. ನಾವು ಮಾಡುವ ಎಲ್ಲಾ ತೀರ್ಥ ಯಾತ್ರೆಗಳೂ ನಾವು ಭಗವಂತನಿಗೆ ಮಾಡುವ ವಿಸ್ತಾರವಾದ ಪ್ರದಕ್ಷಿಣೆಯಾಗುತ್ತದೆ. ನಮ್ಮ ದೇಹ ಹರಿ ಚಿಂತನೆಯನ್ನೇ ಮಾಡುತ್ತಾ ಮಲಗಿದಾಗ ಅದು ಭಗವಂತನಿಗೆ ಅರ್ಪಿಸುವ ನಮಸ್ಕಾರ ಮತ್ತು ನಾವು ಆಡುವ ಎಲ್ಲ ಮಾತುಗಳೂ ಅವನಿಗೆ ಅರ್ಪಿಸುವ ಮಂತ್ರಗಳು.

ಎನ್ನ ಸ್ವರೂಪವೆಂಬುದೇ ರನ್ನಗನ್ನಡಿ | ಎನ್ನ ಮನೋವೃತ್ತಿಎಂಬುದೇ ಛತ್ರಿಕೆ |

ಇನ್ನು ನುಡಿವ ಹರಿನಾಮಾಮೃತವೇ ತೀರ್ಥ | ಎನ್ನ ಮನವೆಂಬುದೇ ಸಿಂಹಾಸನ |೨|

ಅನ್ಯ ದೇವತೆ ಯಾಕೆ ? ಅನ್ಯ ಪ್ರತಿಮೆ ಯಾಕೆ ? | ಅನ್ಯವಾದ ಮಂತ್ರ ತಂತ್ರವೇಕೆ ಎನ್ನಲಿ |

ಭರಿತ ಸಾಧನೆಗಳು ಇರುತಿರಲು | ಚೆನ್ನಾಗಿ ಶ್ರೀ ಕೃಷ್ಣ ಸ್ವಾಮಿಯ ಪೂಜಿಸುವೆ |೩|

ನನ್ನದಾದ ಸ್ವರೂಪವೇ ನನ್ನ ಭಗವಂತನ ಪ್ರತಿಬಿಂಬ (ನನ್ನನ್ನೇ) ತೋರಿಸುವ ಅತಿಶಯವಾದ ಹೊನ್ನಿನ, ರತ್ನದ ಕನ್ನಡಿ. ಹರಿನಾಮ ಸ್ಮರಣೆಯ ಅಮೃತವೇ ತೀರ್ಥ. ಹೀಗೆ ಈ ನನ್ನ ದೇಹವೆಂಬುದು ಶ್ರೀಹರಿಯ ಪೂಜೆಗೆ ಬೇಕಾಗುವ ಎಲ್ಲ ಸಾಧನ ಸಲಕರಣೆಗಳನ್ನು ಹೊಂದಿರುವಾಗ, ಪರಮಾತ್ಮ ನನ್ನೊಳಗೇ ಬಿಂಬರೂಪಿಯಾಗಿದ್ದು, ನಾನವನ ಪ್ರತಿಬಿಂಬವಾಗಿರುವಾಗ ನನಗೆ ಬೇರೆ ಮಂತ್ರಗಳಾಗಲಿ, ಪ್ರತಿಮೆಯಾಗಲಿ ಬೇಕಿಲ್ಲ. ನನ್ನ ಕಾಯವನ್ನೇ ಮಂದಿರವಾಗಿಸಿಕೊಂಡು, ಶ್ರೀಹರಿಯ, ಮುದ್ದು ಮೊಗದ ಶ್ರೀ ಕೃಷ್ಣನ ಸೇವಿಸುವೆ, ಪೂಜಿಸುವೆ, ಆರಾಧಿಸುವೆ, ಮುಕ್ತಿಯನ್ನು ಪಡೆಯುವೆ ಎನ್ನುತ್ತಾರೆ ಶ್ರೀ ವ್ಯಾಸರಾಯರು.

ನಮ್ಮ ನಮ್ಮ ಅಂತರಂಗದೊಳಗಿರುವ ದೇವನ ಕಾಣುವ ಪರಿಯನ್ನು ಸುಲಭ ಹಾಗೂ ಸರಳ ಮಾತುಗಳಲ್ಲಿ ವಿವರಿಸುತ್ತಾರೆ ನಮ್ಮ ದಾಸವರೇಣ್ಯರು.ದಾಸರ ಪದಗಳನ್ನು ಆರಿಸಿ ಕೊಟ್ಟ ಸತ್ಯವತಿ ಅಕ್ಕನಿಗೆ ವಿಶೇಷ ಧನ್ಯವಾದಗಳು.
ಚಿತ್ರಕೃಪೆ : ಅಂತರ್ಜಾಲ


9 comments:

 1. ಶ್ಯಾಮಲಾ,
  ಶ್ರೀಪಾದರಾಯರ ಹಾಗು ವ್ಯಾಸರಾಯರ ಅತ್ಯುತ್ತಮ ಕೀರ್ತನೆಗಳನ್ನು ಆರಿಸಿ ಕೊಟ್ಟ ನಿಮ್ಮ ಅಕ್ಕ ಸತ್ಯವತಿಯವರಿಗೆ ಹಾಗು ವಿವರಣೆ ಸಹಿತವಾಗಿ ನಮಗೆ ನೀಡಿದ ನಿಮಗೆ ವಂದನೆಗಳು. ದಾಸರ ಅಂತರಂಗವನ್ನು (ಅಲ್ಲಿ ಬೆಳಗುತ್ತಿರುವ ಚಿನ್ಮಯಮೂರ್ತಿಯನ್ನು)
  ತೆರೆದು ತೋರಿಸಿದ್ದೀರಿ. ದಾಸರ ಇನ್ನಿಷ್ಟು ಕೀರ್ತನೆಗಳನ್ನು ವಿವರಣೆಯೊಂದಿಗೆ ನೀಡಲು ವಿನಂತಿ.

  ReplyDelete
 2. ದೇಹವನ್ನು ದೇವಾಲಯ ಅನ್ನುವ ಚಿ೦ತನೆಯೇ ಒ೦ದು ರೋಚಕ ವಿಚಾರ. ಅ೦ತರ೦ಗ ಶುಧ್ಧಿಗೆ ಈ ಭಾವವೇ ಒ೦ದು ನಾ೦ದಿಯಾಗಬಲ್ಲದು. ಸ೦ತರ/ದಾಸರ ಆಧ್ಯಾತ್ಮ ಚಿ೦ತನೆಗಳ ಹೂರಣವನ್ನು ಬಡಿಸುತ್ತಿರುವ ಶ್ಯಾಮಲಾ ಅವರಿಗೆ ಅಭಿನ೦ದನೆಗಳು. ಸಾತ್ವಿಕಭಾವಗಳನ್ನು ಉದ್ದೀಪನಗೊಳಿಸಬಲ್ಲ ಇ೦ತಹ ಮತ್ತಷ್ಟು ವಿಚಾರಧಾರೆಗಳು ನಿಮ್ಮಿ೦ದ ಹರಿದು ಬರಲಿ.

  ಧನ್ಯವಾದಗಳು
  ಅನ೦ತ್

  ReplyDelete
 3. ದಾಸರ ಪದಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ನಿಮ್ಮ ಅಕ್ಕನವರಿಗೂ ಧನ್ಯವಾದಗಳು.

  ReplyDelete
 4. ಕಾಕಾ...
  ಬರಹ ಮೆಚ್ಚಿ ಪ್ರೋತ್ಸಾಹಿಸಿದ್ದೀರಿ. ಧನ್ಯವಾದಗಳು ಕಾಕಾ. ದಾಸರ ಕೀರ್ತನೆಗಳನ್ನು ನನಗೆ ತಿಳಿದ ಮಟ್ಟಿಗೆ ವಿವರಿಸುವ ಪ್ರಯತ್ನ ಖಂಡಿತಾ ಮಾಡುವೆ.

  ReplyDelete
 5. ಅನಂತ್ ಸಾರ್
  ನಿಮ್ಮ ಮಾತು ನಿಜ ಅಂತರಂಗ ಶುದ್ಧಿಗೆ ಇದು ಮೊದಲ ಸೋಪಾನ ಆಗ ಬೇಕು ಅಲ್ಲವೇ..? ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು ಸಾರ್.... :-)

  ReplyDelete
 6. ಮನಸು ತಾಣದವರಿಗೆ... ಬರಹ ಮೆಚ್ಚಿದ್ದಕ್ಕೆ ನನ್ನ ಹಾಗೂ ನನ್ನಕ್ಕ ಇಬ್ಬರ ಕಡೆಯಿಂದಲೂ ಧನ್ಯವಾದಗಳು.... :-)

  ReplyDelete
 7. ಶ್ಯಾಮಲಾಜೀ... ದಾಸರ ಪದಗಳೊಂದಿಗೆ ಸೇರಿಸಿ, ಹದವಾಗಿ ಬರೆದ ಬರಹ ಹಿಡಿಸಿತು. ನಿಮ್ಮಂತರಂಗದ ಮಾತುಗಳನ್ನು (ನಿಮ್ಮ ಬ್ಲಾಗಿನ ಶೀರ್ಷಿಕೆಯನ್ನೊಳಗೊಂಡಂತೆ)ಈ ಮೂಲಕ ತಿಳಿಸಿದ್ದೀರಿ ಎಂದು ನನ್ನ ಅನಿಸಿಕೆ....

  ಧನ್ಯವಾದಗಳು.

  ಚಂದ್ರು

  ReplyDelete
 8. ಬಹಳ ಅರ್ಥಪೂರ್ಣವಾಗಿ ಬರೆದಿದ್ದೀರಿ. ಇದು ಮುಂದುವರಿಯಲಿ ಎಂದು ಆಶಿಸುತ್ತೇನೆ.

  ReplyDelete
 9. ಚಂದ್ರೂ...
  ಸರಿಯಾಗಿ ಹೇಳಿದಿರಿ, ನಿಜ ಇದು ನನ್ನಂತರಂಗದ ಮಾತುಗಳೂ ಕೂಡ. ಅರಿವು ಎನ್ನುವುದು ಜೀವನದ ಯಾವುದೋ ಒಂದು ಘಟ್ಟದಲ್ಲಿ ಬರಲೇ ಬೇಕಲ್ಲವೇ. ಅರಿತಿದ್ದನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಾವೆಲ್ಲರೂ ಮಾಡಲೇ ಬೇಕು. ಮೆಚ್ಚಿದ್ದಕ್ಕೆ ಧನ್ಯವಾದಗಳು ತಮ್ಮಾ..

  ನಮಸ್ಕಾರ ಸುಬ್ರಹ್ಮಣ್ಯ ಅವ್ರಿಗೆ
  ಬಹಳ ದಿನಗಳ ನಂತರ ಈ ಕಡೆ ಬಂದಿದ್ದೀರಿ. ಖಂಡಿತಾ ಇದನ್ನು ಮುಂದುವರೆಸುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

  ReplyDelete