Wednesday, November 23, 2016

ಪ್ರವಾಸ ಕಥನ - ಅಮೆರಿಕ ( ಐದನೆಯ ಕಂತು)

ಗ್ರ್ಯಾಂಡ್ ಕ್ಯಾನ್ಯನ್ ಸುಮಾರು ೪೪೬ ಕಿಲೋಮೀಟರ್ ಅಥವಾ ೨೭೭ ಮೈಲಿಗಳಷ್ಟು ವಿಸ್ತಾರವಾಗಿದೆ.  ಇದರ ಮೇಲ್ಭಾಗದ ೯೬ ಕಿಲೋಮೀಟರ್ ಅಥವಾ ೬೦ ಮೈಲಿಗಳಷ್ಟು ಹಾಲುಗಲ್ಲಿನಿಂದ (ಮಾರ್ಬಲ್ ಕಲ್ಲು) ರಚಿತವಾಗಿರುವ ಭಾಗವಾಗಿದೆ.  ಗ್ರ್ಯಾಡ್ ಕ್ಯಾನ್ಯನ್ ಸುಮಾರು ೧೮೬೯ರಲ್ಲಿ ಭೂಗರ್ಭ ಶಾಸ್ತ್ರಜ್ಞನಾದ ಜಾನ್ ವೆಸ್ಲಿ ಪೋವೆಲ್ ನ ಮೊಟ್ಟ ಮೊದಲ ಸಾಹಸಪ್ರಿಯವಾದ ಕೊಲರಾಡೋ ನದಿಯ ಪಾತ್ರವನ್ನನುಸರಿಸಿ ಮಾಡಿದ ಸಂಚಾರದಿಂದಾಗಿ ಬೆಳಕಿಗೆ ಬಂದ  ಪ್ರಕೃತಿ ನಿರ್ಮಿತ ಉತ್ಕೃಷ್ಠ  ಕಲೆಯಾಗಿದೆ.   ಅಲ್ಲಿಂದ ಇಲ್ಲಿಯವರೆಗೆ ಬಂದ ಅನೇಕ ಭೂಗರ್ಭ ಶಾಸ್ತ್ರಜ್ಞರನ್ನು ಆಕರ್ಷಿಸುತ್ತಲೇ ಇದೆ.  ಸಾವಿರಾರು ಭೂಗರ್ಭ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ.  ಹೊಸ ಹೊಸ ಆಯಾಮಗಳನ್ನು ಕಂಡು ಹಿಡಿಯುತ್ತಲೇ ಇದ್ದಾರೆ.
ಅರಿಜೋನ ಪ್ರದೇಶದ ಉತ್ತರದ ಕಡೆ ಇರುವ ಈ ಕ್ಯಾನ್ಯನ್ ಎಂಬ ಪ್ರಕೃತಿಯ ಪವಾಡ ಕೊಲರಾಡೋ ನದಿಯ ದಕ್ಷಿಣ ತಪ್ಪಲು ಪ್ರದೇಶದ ಕಡೆಯಿಂದ ರಚಿತವಾಗಿದೆ.  ಗ್ರ್ಯಾಂಡ್ ಕ್ಯಾನ್ಯನ್ ಎಂಬ ಅದ್ಭುತವು ಯಾವ ರಾಸಾಯನಿಕ ಕ್ರಿಯೆಗಳಿಂದ ರಚಿಸಲ್ಪಟ್ಟಿದೆ ಎಂಬುದು ಕುತೂಹಲಕರ ವಿಷಯವಾಗಿದೆ.  ಮಳಲು ಕಲ್ಲು (sand stone), ಸುಣ್ಣದ ಕಲ್ಲು (lime stone) ಮುಂತಾದವುಗಳ ಗಷ್ಟು ಅಥವಾ ಚರಟಗಳ ಪದರಗಳಿಂದಲೂ, ಬೆಂಕಿ ಹತ್ತಿಕೊಳ್ಳಬಲ್ಲ ಗ್ರಾನೈಟ್ ಕಲ್ಲುಗಳಿಂದಲೂ ರಚಿತವಾಗಿದೆ.  ನಿರಂತರವಾಗಿ ನೀರಿನೊಂದಿಗೆ ಸಂಭವಿಸಿದ ಘರ್ಷಣೆಯಿಂದಾಗಿ ಪ್ರಕೃತಿಯ ಕುಶಲತೆಯು ಮೆರೆದಿದೆ.  ಅಪಾರವಾದ ’ಜಲಶಕ್ತಿ’ಯ ಪ್ರದರ್ಶನ ಸುಂದರವಾದ ಕಲೆಯಾಗಿ ಅರಳಿದೆ.
 

ಸಾವಿರಾರು ಮೈಲುಗಳಿಂದ ನೀರಿನೊಂದಿಗೆ ಅಲೆಗಳ/ಪ್ರವಾಹದ ಮೂಲಕ ಹರಿದು ಬಂದ ರಾಸಾಯನಿಕ ವಸ್ತುಗಳು ಸಂಗ್ರಹಿಸಲ್ಪಟ್ಟು, ಅಡಿಪಾಯವಾಗಿರುವ ಕ್ಯಾನನ್ ನಲ್ಲಿ ನೀರಿನ ಘರ್ಷಣೆಯಿಂದ ರಾಸಾಯನಿಕ ಬದಲಾವಣೆಗಳು ಉಂಟಾದಾಗ ಹೀಗೆ ಚಿತ್ರ-ವಿಚಿತ್ರ ಹಾಗೂ ಅತ್ಯಂತ ಕುತೂಹಲಕಾರಕ ಕ್ಯಾನ್ಯನ್ ರಚಿತವಾಗಿದೆ.  ಇಲ್ಲಿ ಕೆಂಪು ಬಣ್ಣದ ಛಾಯೆ ಹೆಚ್ಚು ದಟ್ಟವಾಗಿದೆ.  ಕೊಲರಾಡೋ ನದಿಯ ಅದ್ಭುತವು ಕೊಲರಾಡೋ ತಪ್ಪಲು ಪ್ರಾಂತದ ನಾಲ್ಕು ಭಾಗಗಳಾಗಿ ರಚಿತವಾಗಿದೆ.  ಸರಿ ಸುಮಾರು ೪೦ ತರಹದ, ಗುರುತಿಸಲ್ಪಟ್ಟ ಕಲ್ಲುಗಳ ಪದರಗಳು ಇಲ್ಲಿ ಅಡಕವಾಗಿವೆ ಎಂಬ ಮಾಹಿತಿಯಿದೆ.  ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆ ನಡೆಸುತ್ತಲೇ ಇದ್ದಾರೆ ಮತ್ತು ಹೊಸ ಹೊಸ ಪದರಗಳನ್ನು ಕಂಡು ಹಿಡಿಯುತ್ತಲೇ ಇದ್ದಾರೆ.

ಕ್ಯಾನ್ಯನ್  ಅಡಿಯಲ್ಲಿ ಮರುಭೂಮಿಯ ಬೋಗುಣಿಯಾಗಿರುವಂತಿದೆ.  ಮೇಲು ಮೇಲೆ ಅರಣ್ಯದ ಭಾಗವೂ ಇರುವಂತಿದೆ.  ನದಿಯು ತನ್ನ ಪ್ರಯಾಣವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಮುಂದುವರೆಸಿದ್ದರೂ ಕೂಡ "ಗ್ರ್ಯಾಂಡ್ ಕ್ಯಾನ್ಯನ್ ನ್ಯಾಷನಲ್ ಪಾರ್ಕ್" ಅರಿಜೋನ ರಾಜ್ಯದಲ್ಲಿದೆ.  ಅಂಕಿ - ಸಂಖ್ಯೆಗಳ ಪ್ರಕಾರ ಸುಮಾರು ೧೫೦೦-೨೦೦೦ ವೃಕ್ಷ ಸಮೂಹವೂ ಅನೇಕ ತರಹದ ಪಕ್ಷಿ, ಪ್ರಾಣಿ, ಭೂಜಲಚರ ಪ್ರಾಣಿಗಳು ಹಾಗೂ ಅನೇಕ ಜಾತಿಯ ಮೀನುಗಳನ್ನು ಇಲ್ಲಿ ನೋಡಬಹುದಾಗಿದೆ.  ಈ ಉದ್ಯಾನವನಕ್ಕೆ ವರ್ಷಕ್ಕೆ ಸರಿ ಸುಮಾರು ೫೦ ಲಕ್ಷ ಜನರು ಬರುತ್ತಾರೆಂಬ ಅಂದಾಜು ಮಾಡಲಾಗಿದೆ.   ಕ್ಯಾನ್ಯನ್ ಉತ್ತರ ಹಾಗೂ ದಕ್ಷಿಣ ಅಂಚುಕಟ್ಟು (rim) ಎಂದು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿದೆ.  ಉತ್ತರ ಅಂಚುಕಟ್ಟು ಉಠಾ (Utah) ಎಂಬ ಜಾಗಕ್ಕೆ ಹತ್ತಿರವಾಗಿದೆ ಮತ್ತು ಇಲ್ಲಿ ಉಸಿರು ಬಿಗಿ ಹಿಡಿದು ನೋಡಿ ರೋಮಾಂಚನವಾಗುವಂತಹ ದೃಶ್ಯಗಳಿವೆಯಂತೆ.  ಆದರೆ ದಕ್ಷಿಣ ಅಂಚುಕಟ್ಟಿನಲ್ಲಿರುವಷ್ಟು ಸುಲಭ ಪ್ರವೇಶ ಇಲ್ಲವೆಂಬ ಉಲ್ಲೇಖವಿದೆ.  ಎರಡನ್ನೂ ಸೇರಿಸುವ ಒಂದು ಸೇತುವೆ ಕೂಡ ಇದೆ.  ಇದು ಚಾರಣಿಗರಿಗೆ ನಿಜವಾದ ಸವಾಲಾಗಿದೆ.  ಸವಾಲನ್ನು ಸ್ವೀಕರಿಸುವ ಉತ್ಸಾಹೀ ಚಾರಣಿಗರಿಗೇನೂ ಕಡಿಮೆಯಿಲ್ಲ.

ಗ್ರ್ಯಾಂಡ್ ಕ್ಯಾನ್ಯನ್ ನ ಪಶ್ಚಿಮ ಅಂಚುಕಟ್ಟು "ಲಾಸ್ ವೇಗಾಸ್" ಎಂಬ ನಗರಕ್ಕೆ ಹತ್ತಿರವಾಗಿದೆ.  ಈ ನಗರ ಪಕ್ಕದ "ನೇವಡ ರಾಜ್ಯ"ದಲ್ಲಿದೆ.  ಲಾಸ್ ವೇಗಾಸ್ ಊರಿನಿಂದ ಸುಮಾರು ೩ ೧/೨ ಘಂಟೆಗಳ ಪಯಣದಲ್ಲಿ ನಾವು ಗ್ರ್ಯಾಂಡ್ ಕ್ಯಾನ್ಯನ್ ನ ಪಶ್ಚಿಮ ಅಂಚು (West Rim) ತಲುಪಲು ಹೋಗಬೇಕಾದ ರಸ್ತೆಗೆ ತಲುಪುತ್ತೇವೆ.  ಮುಖ್ಯ ರಸ್ತೆಯಿಂದ ನಾವು ಅತಿಕ್ರಮಿಸಿ ಕ್ಯಾನ್ಯನ್ ರಸ್ತೆಗೆ ಹೊರಳಬೇಕು.  ಇಲ್ಲಿಂದ ನಾವು ಕ್ಯಾನ್ಯನ್ ನ ಪಶ್ಚಿಮ ಅಂಚಿನ ಪ್ರವೇಶ ದ್ವಾರಕ್ಕೆ ಬರುತ್ತೇವೆ.  ಇಲ್ಲಿ Haulapai Indians ನಡೆಸುವ ಬಸ್ಸುಗಳಲ್ಲಿ ಮುಂದಿನ ಪ್ರಯಾಣ ಮಾಡಬೇಕು.  
 
ಬಸ್ಸಿಗಾಗಿ ಪಾಸ್ ತೆಗೆದುಕೊಂಡು ಏರಿದರೆ ನಮ್ಮನ್ನು ಪ್ರಸಿದ್ಧವಾದ "Eagle Point" ಅಥವಾ "ಗರುಡ ನೋಟ (ದೃಷ್ಟಿ)"ಗೆ ತಲುಪಿಸುತ್ತದೆ.  ಇಲ್ಲಿ ಬಸ್ಸಿನಿಂದಿಳಿದು ನಿಧಾನವಾಗಿ ಸುತ್ತಾಡುತ್ತಾ ಅದ್ಭುತ ದೃಶ್ಯಗಳನ್ನು ನೋಡುವಾಗ ಒಂದು ಕಡೆ ಕ್ಯಾನ್ಯನ್ ಗರುಡ ಪಕ್ಷಿಯಂತೆ ರಚಿತವಾಗಿರುವುದು ಕಾಣುತ್ತದೆ.  ರೆಕ್ಕೆಗಳನ್ನು ಅಗಲಿಸಿರುವ ಗರುಡ ಪಕ್ಷಿಯಂತೆ ಕಾಣುತ್ತದೆ.
 
 
ಮುಖದ ರಚನೆ, ಮೂಗು ಕೂಡ ತುಂಬಾ ಆಕಾರವಾಗಿದೆ.  ಇಲ್ಲಿಯೂ ಕೂಡ ಉಸಿರು ಬಿಗಿಹಿಡಿದು ನೋಡುವಂತಹ ಪ್ರಕೃತಿ ನಿರ್ಮಿತ ದೃಶ್ಯಾವಳಿಗಳು ಮನಸ್ಸಿಗೆ ಮುದ ಕೊಡುತ್ತವೆ.  ಇಲ್ಲಿಂದ ಇನ್ನೂ ಒಳಗೆ ಹೋದರೆ ನಮಗೆ ಗಾಜಿನ "ಸ್ಕೈ ವಾಕ್" ಸಿಗುತ್ತದೆ.  ಇಲ್ಲಿಗೆ ಹೋಗಲು ನಾವು ನಮ್ಮ ಚಪ್ಪಲಿಗಳ ಮೇಲೆ ಮೃದುವಾದ ವಿನಿಯೋಗ ಮಾಡುವಂತಹ ಕಾಲುಚೀಲದಂತಹ ಹೊದಿಕೆಯನ್ನು ಧರಿಸಬೇಕಾಗುವುದು.  ಈ ಗಾಜು ಅಶ್ವಪಾದ ಅಥವಾ ಆಂಗ್ಲ ಅಕ್ಷರ "U" ನಂತಿದೆ.  ಸುಮಾರು ೫೦೦-೮೦೦ ಅಡಿಗಳಷ್ಟು ಎತ್ತರದಲ್ಲಿದೆ.  ಮಾರ್ಚ್ ತಿಂಗಳು ೨೦೦೭ರಲ್ಲಿ ಅನಾವರಣಗೊಂಡಿತ್ತು.  ಈ ಗಾಜಿನ ಮೇಲೆ ಉದ್ದಕ್ಕೂ ನಡೆಯುತ್ತಾ ಹೋದರೆ ಅನೇಕ ಕಡೆಗಳಿಂದ ಕ್ಯಾನ್ಯನ್ ಸೌಂದರ್ಯವನ್ನು ನೋಡಬಹುದು.  ಕೆಳಗಡೆ ಗಾಜಿನ ಮೂಲಕವೂ ಕಾಣುವ ಕ್ಯಾನ್ಯನ್ ನ ಆಳವಾದ ಕಣಿವೆಗಳು ಒಂಥರಾ ಸಣ್ಣ ಭಯ ಹಾಗೂ ಅಚ್ಚರಿಯನ್ನುಂಟು ಮಾಡುವುದು.  ಎಲ್ಲೆಲ್ಲಿ ನೋಡಿದರೂ ಪ್ರಕೃತಿಯ ವಿಸ್ಮಯ ಅಷ್ಟೇ...!!!!
ಚಿ ತ್ರ ಕೃ ಪೆ  : ಅಂ ತ ರ್ಜಾ ಲ 

ಸುಂದರ ಚಿತ್ರಗಳಿಗಾಗಿ ಈ ಕೊಂಡಿ : https://www.google.co.in/search?q=grand+canyon+eagle+point+photo&client=firefox-b-ab&tbm=isch&imgil=o1LP3hSht0_OYM%253A%253BRTd0zWu5OW9iLM%253Bhttp%25253A%25252F%25252Fwww.gokingman.com%25252Fday-trip-Grand-Canyon-West-Home-of-the-Skywalk&source=iu&pf=m&fir=o1LP3hSht0_OYM%253A%252CRTd0zWu5OW9iLM%252C_&usg=__MQjz-rRey8f2SrsMiPhN-P8V5Lw%3D&biw=1118&bih=566&dpr=1.25&ved=0ahUKEwiu37XVq7_QAhXBro8KHcinBqsQyjcIMw&ei=jck1WO7kBsHdvgTIz5rYCg#imgdii=ObiP1HitmSpW6M%3A%3BObiP1HitmSpW6M%3A%3Bo1LP3hSht0_OYM%3A&imgrc=ObiP1HitmSpW6M%3A


No comments:

Post a Comment