Friday, February 23, 2018

ನಮಸ್ಕರಿಸು, ಶರಣಾಗು ಮತ್ತು ಅನುಗ್ರಹಿಸಲ್ಪಡು

Prostrate, Surrender and Become Blessed :  An article of His Holiness Jagadguru Sri Abhinava Vidyathreertha Mahaswamigal

ಕನ್ನಡ ಅವತರಣಿಕೆ




ವಿನೀತನಾದ ಭಕ್ತನೊಬ್ಬನು ಭಗವಂತನಲ್ಲಿ ತನ್ನ ಅತಿ ದೊಡ್ಡದಾದ ಎರಡು ಪಾಪಗಳನ್ನು ಮನ್ನಿಸಬೇಕೆಂದು ಕೇಳಿ ಕೊಳ್ಳುತ್ತಿದ್ದನು.  ಯಾವುದಂತಹ ಘೋರ ಪಾಪಗಳು ?

ಭಕ್ತನು ತನ್ನ ಮನದ ವಿಚಾರಗಳನ್ನು ಬಿಡಿಸಿ ಹೇಳತೊಡಗಿದನು.  ಮೊದಲನೆಯ ಪಾಪವೆಂದರೆ ತಾನು ತನ್ನ ಹಿಂದಿನ ಜನ್ಮಗಳಲ್ಲಿ ಒಂದೇ ಒಂದು ಬಾರಿಯಾದರೂ ಭಗವಂತನನ್ನು ಸ್ಮರಿಸಿ ನಮಸ್ಕರಿಸದಿರುವುದು.  ಇದು ಈ ಜನ್ಮದಲ್ಲಿ ಭಕ್ತನಿಗೆ ಹೇಗೆ ತಿಳಿಯಿತೆನ್ನುವುದೇ ವಿಷಯ.  ಭಕ್ತ ತನ್ನ ತಿಳುವಳಿಕೆ ಜ್ಞಾನಗಳಿಂದ ತಾನು ತಿಳಿದಿರುವುದೇನೆಂದರೆ ಭಗವಂತನನ್ನು ಸ್ಮರಿಸಿ, ನಮಿಸುವಂತಹವನಿಗೆ ಪುನರ್ಜನ್ಮ ಖಂಡಿತವಾಗಿಯೂ ಇರುವುದಿಲ್ಲ ಎನ್ನುವುದು.  ತನಗೆ ಮತ್ತೆ ಜನ್ಮವಾಗಿದೆಯೆಂದರೆ, ಅದು ತಾನು ಹಿಂದಿನ ಜನ್ಮಗಳಲ್ಲಿ ಭಗವಂತನಿಗೆ ನಮಸ್ಕರಿಸದಿರುವುದರಿಂದಲೇ ಆಗಿದೆ.  ಸ್ವಾಮಿಯಲ್ಲಿ ಶರಣಾರ್ಥಿಯಾಗಿ, ದೀರ್ಘದಂಡ ನಮಸ್ಕಾರ ಮಾಡದಿದ್ದ ಪಾಪವೇ ತನ್ನ ಈ ಜನ್ಮಕ್ಕೆ ಕಾರಣವಾಗಿದೆ.

ಎರಡನೆಯ ಪಾಪವೆಂದರೆ ಭಕ್ತನು ಈಗ ಪಡೆದಿರುವ ಜನ್ಮದಲ್ಲಿ ಭಗವಂತನಿಗೆ ನಮಸ್ಕರಿಸುತ್ತ, ತನ್ನ ಭಕ್ತಿಯನ್ನು ಸಮರ್ಪಣೆ ಮಾಡಿಕೊಳ್ಳುತ್ತಿರುವುದು.  ಇದು ಹೇಗೆ ಪಾಪವಾಯಿತೆಂದರೆ ಈ ಜನ್ಮದಲ್ಲಿ ಹೀಗೆ ಮಾಡುವುದರಿಂದ, ತನಗೆ ಮುಂದೆ ಜನ್ಮಗಳಿರುವುದಿಲ್ಲವೆಂಬ ನಂಬಿಕೆ.  ಮುಂದೆ ಜನ್ಮಗಳೇ ಇಲ್ಲದಿದ್ದಲ್ಲಿ, ತಾನು ಸ್ವಾಮಿಯನ್ನು ನಮಸ್ಕರಿಸಲು ಆಗುವುದೇ ಇಲ್ಲ.  ಆದ್ದರಿಂದ ಈ ಜನ್ಮದಲ್ಲಿ ತನಗೆ ಪುನರ್ಜನ್ಮ ಬೇಡವೆಂದು ಬಯಸುವುದು ಭಕ್ತನು ಮಾಡುತ್ತಿರುವ ಎರಡನೆಯ ಘೋರ ಪಾಪವಾಗಿದೆ.  ಹೀಗಾಗಿ ಈ ಎರಡೂ ಮಹಾಪರಾಧಗಳು ಅಥವಾ ಪಾಪಗಳನ್ನು ಮನ್ನಿಸುವಂತೆ ಭಕ್ತನು ಭಗವಂತನಲ್ಲಿ ಆರ್ತನಾಗಿ ಬೇಡುತ್ತಿರುವನು.

ಇಲ್ಲಿ ಭಕ್ತನ ಪ್ರಾರ್ಥನೆಯು ನಮ್ಮನ್ನು ಚಿಂತನೆಗೆ ಹಚ್ಚುವುದು.  ಪ್ರಾರ್ಥನೆ/ಬಿನ್ನಪ ಎನ್ನುವುದು ಎಷ್ಟು ಮುಖ್ಯವಾದದ್ದು ಎಂಬುದನ್ನು ತಿಳಿಯಬೇಕಾಗಿದೆ.  ನಮ್ಮಲ್ಲಿ ಅನೇಕರು ಪ್ರತಿದಿನವೂ ಭಗವಂತನಿಗೆ ತನು-ಶಿರ ಬಾಗಿಸಿ ನಮಸ್ಕರಿಸುತ್ತಾರೆ.  ಆದರೆ ಅದೊಂದು ಯಾಂತ್ರಿಕ ಕ್ರಿಯೆಯಾಗಿರುತ್ತದೆ.  ಇದೇ ನಾವು ಮಾಡುವ ಅಪರಾಧವಾಗಿದೆ.  ಈಗ ಸಿಕ್ಕಿರುವ ಮಾನವ ಜನ್ಮದಲ್ಲಿ ಭಗವಂತನಿಗೆ ನಮಸ್ಕರಿಸುವುದು ನಮಗೆ ಸಿಕ್ಕಿರುವ ಮಹಾಪ್ರಸಾದ/ಅವಕಾಶ ಎಂದು ಪರಿಗಣಿಸಿ, ತನು-ಮನ, ಪಂಚೇಂದ್ರಿಯಗಳು, ಪಂಚತನ್ಮಾತ್ರೆಗಳು ಎಲ್ಲವನ್ನೂ ಸಮಷ್ಟಿಯಾಗಿಸಿ, ಸ್ವಾಮಿಯ ಮುಂದೆ ದೀರ್ಘದಂಡ ಪ್ರಣಾಮ ಮಾಡಬೇಕು.  ಪುನರ್ಜನ್ಮ ಪರಮಾತ್ಮನ ಕರುಣೆಯಿಂದಲೇ ನಮಗೆ ಸಿಕ್ಕಿರುವ ಸದವಕಾಶ ಎಂದು ತಿಳಿಯಬೇಕು.  ಸ್ವಾಮಿಯು ನಾವೇನನ್ನೂ ಕೇಳದೆಯೇ ನಮ್ಮನ್ನು ತಾಯಿಯ ಗರ್ಭದಿಂದಲೇ ಪೊರೆದು ರಕ್ಷಿಸುವನು.  ಜನಿಸಿದ ನಂತರ ಕನಿಷ್ಠ ನಾವು ನಮ್ಮ ಕೃತಜ್ಞತೆಯನ್ನು ಹೃದಯ ಪೂರ್ವಕವಾಗಿ, ನಮಸ್ಕಾರ ಮಾಡುವುದರ ಮೂಲಕ ಸಲ್ಲಿಸಬೇಕು.  ಇದಕ್ಕಿಂತ ಹೆಚ್ಚೇನನ್ನೂ ನಾವು ಭಗವಂತನಿಗಾಗಿ ಮಾಡಲಾರೆವು.

ಪರಮೇಶ್ವರನಿಗೆ ಪ್ರಿಯವಾಗುವಂತೆ ನಡೆದುಕೊಳ್ಳದ ನಮ್ಮನ್ನು ಸ್ವಾಮಿ ತಿರಸ್ಕರಿಸುವನೇ ಎಂಬ ಸಂದೇಹ ಕೂಡ ಬರುತ್ತದೆ.  ಸದಾ ಆಹಾರದ ಹುಡುಕಾಟ ಹಾಗೂ ಇಂದ್ರಿಯ ಸುಖಗಳ ವಿಚಾರವನ್ನೇ ಮಾಡುತ್ತ, ಉಳಿದ ಸಮಯದಲ್ಲೆಲ್ಲಾ ನಿದ್ರಿಸುವ ನಮ್ಮ ಈ ಜೀವನ ಪ್ರಾಣಿಗಳಿಗಿಂತ ಯಾವ ರೀತಿಯಲ್ಲಿ ಮೇಲಾಗಿದೆ? ಇಂತಹ ನಮ್ಮನ್ನು ಭಗವಂತ ಸ್ವೀಕರಿಸುವನೇ?

ಶ್ರೀ ಶಂಕರ ಭಗವತ್ಪಾದರು ತಮ್ಮ "ಶಿವಭುಜಂಗ ಸ್ತೋತ್ರ"ದಲ್ಲಿ ನಮ್ಮ ಈ ಸಂದೇಹಕ್ಕೆ ಉತ್ತರ ಕೊಡುತ್ತಾರೆ.  ಭಕ್ತನಾದವನು ಸಂಪೂರ್ಣ ಶರಣಾಗತನಾಗಿ ಪ್ರಭುವನ್ನು ಪ್ರಾರ್ಥಿಸಬೇಕು, ತನ್ನ ನೀಚ ಅಭ್ಯಾಸಗಳನ್ನು ಮುಕ್ತವಾಗಿ ಒಪ್ಪಿಕೊಂಡು, ಸರ್ವ ಸಮರ್ಪಣೆ ಮಾಡುತ್ತಾ ಯಾಚಿಸಬೇಕು.  ಶಿವಭುಜಂಗದ ೧೨ನೆಯ ಶ್ಲೋಕದಲ್ಲಿ "ಪಶುಂ ವೇತ್ಸಿ ಚೋನ್ಮಾಂ ತಮೇವಾಧಿರೂಡಃ....." - ಭಗವತ್ಪಾದರು ಹೇ ಪ್ರಭುವೇ ನೀನು ನನ್ನನ್ನು ಪಶುವೆಂದು ತಿಳಿದಿರುವೆಯಾದರೆ, ನೀನು ಪಶುವಾದ ನಂದಿಯನ್ನೇ ನಿನ್ನ ವಾಹನವಾಗಿಸಿಕೊಂಡಿರುವೆ.  ನನ್ನನ್ನು ಕಲಂಕಿತನು ಎಂದು ತಿಳಿದರೆ ಕಲಂಕಿತನಾದ ಚಂದ್ರನನ್ನು ನಿನ್ನ ಶಿರದಲ್ಲಿ ಧರಿಸಿರುವೆ, ನಾನು ಎರಡು ನಾಲಿಗೆಯವನು ಎಂದು ತಿಳಿದರೆ, ಸರ್ಪವನ್ನು ನಿನ್ನ ಕಂಠಕ್ಕೇ ಆಭರಣವಾಗಿ ಧರಿಸಿರುವೆ, ನಾನೆಂತಹವನಾಗಿದ್ದರೂ, ನನ್ನನ್ನು ಮನ್ನಿಸಿ ಸ್ವೀಕರಿಸಬೇಕೆನ್ನುತ್ತಾರೆ.  ೧೯ನೆಯ ಶ್ಲೋಕದಲ್ಲಿ "ಭವದ್ಗೌರವಂ ಮಲ್ಲಘುತ್ವಂ ವಿದಿತ್ವಾ....." - ಭವ್ಯ ಗೌರವ ಹೊಂದಿರುವ ನೀನು ನನ್ನ ಅಲ್ಪತನವನ್ನೂ, ಪಶುತ್ವವನ್ನೂ ಅರಿತು, ನಿನ್ನ ಕರುಣಾಕಟಾಕ್ಷವನ್ನು ನನ್ನೆಡೆಗೆ ಹರಿಸು.  ನಾನು ದರಿದ್ರನು, ಅಮಂಗಲನು, ತಪ್ಪಿತಸ್ಥನು, ಆದರೆ ಪ್ರಭುವೇ ನೀನು ಸುಮಂಗಲನು, ಅಂತರಾತ್ಮನು.  ನಿನ್ನನ್ನು ಸ್ವಶಕ್ತಿಯಿಂದ ಸ್ತುತಿಸಲೂ ಕೂಡ ಅನರ್ಹನಾಗಿರುವ ನನ್ನನ್ನು ನನ್ನ "ಅಪರಾಧ ಕೋಟಿಗಳನ್ನು" ಮನ್ನಿಸಿ ರಕ್ಷಿಸು ಎನ್ನುತ್ತಾರೆ.

ಭಕ್ತನಾದವನು ಎಂತಹ ಪಶುತ್ವವನ್ನು ಹೊಂದಿದ್ದರೂ, ಕ್ಷುಲ್ಲಕಿಯಾಗಿದ್ದರೂ ಕೂಡ, ಭಗವಂತನೇ ನಿನ್ನ ಕರುಣಾ ಕಟಾಕ್ಷದ ಸ್ಪರ್ಶಮಾತ್ರದಿಂದಲೇ ಅವನು ಸದ್ಗತಿ ಹೊಂದುತ್ತಾನೆ ಎಂದು ಆಚಾರ್ಯರು ಶಿವಭುಜಂಗ ಸ್ತೋತ್ರದಲ್ಲಿ ಸ್ಪಷ್ಟ ಪಡಿಸಿರುವರು.

ಪ್ರಾರ್ಥನೆಯ ಉದ್ದೇಶವೇ ಪರಮೇಶ್ವರನ ಕೃಪಾ ಕಟಾಕ್ಷವನ್ನು ಬಯಸುವುದು.  ಅಪಾರ ಕರುಣಾಮಯಿಯಾದ ಸ್ವಾಮಿಯ ಕರುಣೆಗೆ ಸೀಮೆಯಿಲ್ಲವಾದ್ದರಿಂದಲೇ ಶರಣಾಗತರಾಗಿ ಬಂದ ಭಕ್ತರನ್ನು ಅವನು ಸ್ವೀಕರಿಸುವನು.  ತ್ರಿಕರಣ ಪೂರ್ವಕವಾಗಿ ನಮ್ಮನ್ನು ನಾವು ಭಗವಂತನಿಗೆ ಸಮರ್ಪಿಸಿಕೊಂಡಾಗ, ಸ್ವಾಮಿಯು ಖಂಡಿತವಾಗಿ ನಮ್ಮನ್ನು ರಕ್ಷಿಸುವನು.  ಶರಣಾಗತರಾಗುವುದು ಮಾತ್ರವೇ ನಮ್ಮ ಕರ್ತವ್ಯವಾಗುವುದು ಮತ್ತು ಕರುಣಾಸಿಂಧುವಾದ ಪರಮೇಶ್ವರನು ನಂಬಿದ ಭಕ್ತನನ್ನು ಖಂಡಿತವಾಗಿಯೂ ಪೊರೆಯುವನು.



"ಮಲ್ಲೇಶ್ವರಂ ಹಿರಿಯ ನಾಗರೀಕರ ವೇದಿಕೆ" ಯ ಫೆಬ್ರವರಿ ತಿಂಗಳ ’ಮಲ್ಲೇಶ್ವರಂ ಸೀನಿಯರ್ಸ್ ನ್ಯೂಸ್" ನಲ್ಲಿ ಪ್ರಕಟಗೊಂಡಿದೆ.

1 comment:

  1. ವಿವೇಕದ ಮಾತುಗಳಿಗಾಗಿ ಋಣಿಯಾಗಿದ್ದೇನೆ.

    ReplyDelete