Monday, February 17, 2020

ಗಾನ ಯಜ್ಞ

ಕರ್ನಾಟಕ ಗಾನಕಲಾ ಪರಿಷತ್ತಿನ ಸುವರ್ಣ ಮಹೋತ್ಸವ ನರಸಿಂಹರಾಜ ಕಾಲೋನಿ ರಾಮಮಂದಿರದಲ್ಲಿ ಒಂದು ವಾರದಿಂದ ನಡೆಯುತ್ತಿದೆ.  ೫೦ ವರ್ಷಗಳನ್ನು ಪೂರೈಸಿರುವ ಸಂಸ್ಠೆಯು ಈ ವಿಶೇಷ ಸಮಾರಂಭವನ್ನು ಬಹಳ ಅದ್ಧೂರಿಯಿಂದ ಆಚರಿಸಿದೆ.  ಕರ್ನಾಟಕ ಸಂಗೀತದ ಭೂರೀ ಭೋಜನವನ್ನು ಬಡಿಸಿದೆ.  ಅತ್ಯಂತ ಆಸಕ್ತಿಯಿಂದ ಹಮ್ಮಿಕೊಂಡಿರುವ ಅನೇಕ ವಿಧವಾದ ಕಾರ್ಯಕ್ರಮಗಳು ಸಂಗೀತ ಪ್ರಿಯರನ್ನೂ, ಸಂಗೀತ ವಿದ್ಯಾರ್ಥಿಗಳನ್ನೂ, ಆಸಕ್ತರನ್ನೂ ಸೆಳೆದಿದೆ.  ಸುವರ್ಣ ಮಹೋತ್ಸವಕ್ಕೆಂದೇ ವಿಶೇಷವಾಗಿ ಆಹ್ವಾನ ಪತ್ರಿಕೆಯನ್ನು ಪಿಟೀಲಿನಾಕರದಲ್ಲಿ ಮಾಡಿಸಲಾಗಿತ್ತು.  ಸಮ್ಮೇಳನಾಧ್ಯಕ್ಷರ ಭಾವಚಿತ್ರಗಳು, ಸಂಸ್ಥೆಯನ್ನು ಪ್ರಾರಂಭಿಸಿದ ದಿಗ್ಗಜರ ಭಾವಚಿತ್ರಗಳ ಜೊತೆಗೆ ವಿವರವಾಗಿ ಕಾರ್ಯಕ್ರಮಗಳ ಪಟ್ಟಿಯನ್ನೂ ಮುದ್ರಿಸಲಾಗಿತ್ತು.  ವಿವಿಧ ವಿದ್ವತ್ತ್ ಗೋಷ್ಠಿಗಳನ್ನು ಪ್ರತಿದಿನವೂ ನಡೆಸಲಾಯಿತು.  ಯುವ ಪ್ರತಿಭೆಗಳಿಗೆ ಅವಕಾಶಗಳನ್ನೂ, ಹಿರಿಯ ಸಾಧಕರಿಗೆ ಗೌರವವನ್ನೂ, ಪ್ರಚಲಿತದಲ್ಲಿರುವ ಹಿರಿಯ ಕಲಾವಿದರ ಕಛೇರಿಗಳನ್ನೂ ಏರ್ಪಡಿಸಲಾಗಿತ್ತು.

ನಾನು ಪರಿಷತ್ತಿನ ಆಜೀವ ಸದಸ್ಯೆ.  ನನಗೆ ಆಹ್ವಾನ ಪತ್ರಿಕೆ ತಲುಪಿದಾಗಲೇ ತುಂಬಾ ಸಂತೋಷವಾಯಿತು.  ನಿಧಾನವಾಗಿ ತೆರೆದು ನೋಡಿದಾಗ ಮೊದಲ ನೋಟಕ್ಕೇ ನನ್ನನ್ನು ಆಕರ್ಷಿಸಿದ ಕಾರ್ಯಕ್ರಮವೆಂದರೆ ಪ್ರತಿದಿನವೂ ಬೆಳಿಗ್ಗೆ ೯ ರಿಂದ ೧೦ ಗಂಟೆಯವರೆಗೆ ನಡೆಯುವ "ಗಾನಯಜ್ಞ".  ನಾನು ಇದುವರೆಗೂ ಗಾನಯಜ್ಞವೆಂಬ ಕಾರ್ಯಕ್ರಮವನ್ನು ನೋಡಿರಲೂ ಇಲ್ಲ, ಕೇಳಿರಲೂ ಇಲ್ಲ.  ಪ್ರತಿದಿನವೂ ಒಬ್ಬೊಬ್ಬ ವಾಗ್ಗೇಯಕಾರರ ರಚನೆಗಳ ಗಾನಯಜ್ಞ ನಡೆಯಿತು.  ೭ನೆಯ ತಾರೀಖಿನ ಕಾರ್ಯಕ್ರಮ ನಮ್ಮ ಮೈಸೂರು ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ವಡೆಯರ್ ಅವರ ರಚನೆಗಳ ಕುರಿತಾದದ್ದು.  ಮಹಾರಾಜರು ಶ್ರೀವಿದ್ಯ ಉಪಾಸಕರಾಗಿದ್ದರು ಮತ್ತು ಅವರ ರಚನೆಗಳಲ್ಲಿ "ಶ್ರೀವಿದ್ಯಾ" ಎಂಬ ಅಂಕಿತವನ್ನು ಬಳಸುತ್ತಿದ್ದರು.  ಅವರ ಎಲ್ಲಾ ಕೃತಿಗಳೂ ವಿಶೇಷವಾದ ರಾಗಗಳು ಹಾಗೂ ತಾಳಗಳಲ್ಲಿ ರಚಿಸಲ್ಪಟ್ಟಿವೆ.  ಆಹ್ವಾನ ಪತ್ರಿಕೆಯಲ್ಲಿ ಯಾವ ವಾಗ್ಗೇಯಕಾರರ, ಯಾವ ಯಾವ ರಚನೆಗಳನ್ನು ಹಾಡಲ್ಪಡುವುದು ಎಂಬ ಪಟ್ಟಿ ಕೂಡ ಪ್ರಕಟಿಸಲಾಗಿತ್ತು.  ವಿದ್ವತ್ಪೂರ್ಣವಾದ ಮಹಾರಾಜರ ಕೃತಿಗಳು ನನಗೆ ಬಹಳ ಇಷ್ಟವಾಗಿದ್ದರಿಂದ ನಾನು ಮಹಾರಾಜರ ವಿರಚಿತ ಕೃತಿಗಳ ಒಂದು ಪುಸ್ತಕವನ್ನು ಕೊಂಡುಕೊಂಡಿದ್ದೆ.  ಪುಸ್ತಕವನ್ನು ಸಂಗೀತ ಕಲಾರತ್ನ ಎಸ್ ಕೃಷ್ಣಮೂರ್ತಿಯವರು ಸಂಪಾದಿಸಿರುವರು.  ಸ್ವರ ಸಮೇತ ಹೊಂದಿರುವ ಕೃತಿಗಳ ಈ ಪುಸ್ತಕ, ಆಸಕ್ತರಿಗೆ ಕಲಿಯಲು ಅನುಕೂಲಕರವಾಗಿದೆ.  ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಪಟ್ಟಿಯನ್ನು ನೋಡಿ ನಾನು ಪುಸ್ತಕದಲ್ಲಿ ಅಂದು ಹಾಡಲ್ಪಡುವ ಕೃತಿಗಳನ್ನು ಗುರುತಿಸಿಕೊಂಡಿದ್ದೆ.  ಸಮಯಾಭಾವದಿಂದಾಗಿ ಕಾರ್ಯಕ್ರಮವನ್ನು  ಪ್ರಾರಂಭದಿಂದ ವೀಕ್ಷಿಸಲು ಸಾಧ್ಯವಾಗಲಿಲ್ಲ.  ಆದರೆ ನಾನು ಅಲ್ಲಿ ತಲುಪಿದಾಗ ಯದುಕುಲ ಕಾಂಬೋಧಿ ರಾಗದಲ್ಲಿ "ಪದ್ಮನಾಭಂ ಭಜೇಹಂ" ಹಾಡುತ್ತಿದ್ದರು.  ಕೃತಿ ಹಾಡಿ ಮುಗಿದಾಗ ನನಗೊಂದು ಅಚ್ಚರಿ ಕಾದಿತ್ತು.  ಅಲ್ಲಿ ವಿದ್ವಾನ್ ಶ್ರೀ ಆರ್ ಕೆ ಪದ್ಮನಾಭ ಅವರು ತಮ್ಮ ಶಿಷ್ಯರೊಂದಿಕೆ ವೇದಿಕೆಯಲ್ಲಿ ಕುಳಿತು ಹಾಡುತ್ತಿದ್ದರು.  ಅವರ ಎಡ ಪಕ್ಕದಲ್ಲಿ ಅನೇಕ ಕಲಶಗಳ ಸ್ಥಾಪನೆಯಾಗಿತ್ತು.  ಅದಕ್ಕೆ ಎದುರಲ್ಲಿ ೪ - ೫ ಜನ ಋತ್ವಿಕರು ಯಜ್ಞಕುಂಡದಲ್ಲಿ ಅಗ್ನಿದೇವನನ್ನು ಪ್ರಚೋದಿಸುತ್ತಾ ಕುಳಿತಿದ್ದರು.  ಪದ್ಮನಾಭಂ ಭಜೇಹಂ ಕೃತಿ ಹಾಡಿ ಮುಗಿದ ಕೂಡಲೇ ಋತ್ವಿಕರು ಯದುಕುಲ ಕಾಂಬೋಧಿ ರಾಗದ ವಿವರಣೆಯನ್ನು ಹೇಳಲಾರಂಭಿಸಿದರು.  ೨೮ನೆಯ ಮೇಳ ಹರಿಕಾಂಬೋಧಿ ಸಂಜಾತ ಯದುಕುಲ ಕಾಂಬೋಧಿ ರಾಗ..... ಆರೋಹಣ ಹಾಗೂ ಅವರೋಹಣದಲ್ಲಿ ಬರುವ ಸ್ವರ ಸಂಚಾರಗಳ ವಿವರಣೆ ಹೇಳಿ ಸ್ವಾಮಿ ಪದ್ಮನಾಭನನ್ನು ಸ್ತುತಿಸುತ್ತಾ.... ವಾಗ್ಗೇಯಕಾರರಾದ ಮಹಾರಾಜ ಶ್ರೀ ಜಯಚಾಮರಾಜೇಂದ್ರ ವಡೆಯರ್ ಅವರನ್ನು ಸ್ಮರಿಸುತ್ತಾ ಕೊನೆಗೆ ಸ್ವಾಹಾ... ಎಂದು ಯಜ್ಞದ ಕ್ರಿಯೆಯನ್ನು ಪೂರ್ಣಗೊಳಿಸಿದರು.   ನಾನು ಚಕಿತಳಾಗಿ ನೋಡುತ್ತಿದ್ದೆ.

ಮಹಾರಾಜರ ರಚನೆಗಳಲ್ಲಿ ನನಗೆ ನನ್ನ ಗುರುಗಳಿಂದ ಪಾಠವಾಗಿದ್ದು ಎರಡು ಕೃತಿಗಳು.  ಆರ್ ಕೆ ಪಿ ಗುರುಗಳು ಮುಂದಿನ ಕೃತಿ ಹಿಂದೋಳ ರಾಗದ "ಚಿಂತಯಾಮಿ ಜಗದಂಬಾ" ಎಂದು ಪ್ರಕಟಿಸಿದಾಗ ನನಗೆ ಅತ್ಯಂತ ಸಂತಸವಾಯಿತು.  ಏಕೆಂದರೆ ನಾನು ಕಲಿತಿರುವ ಎರಡೇ ಎರಡು ಕೃತಿಗಳಲ್ಲಿ ಇದು ಎರಡನೆಯದು.  ಹಿಂದೋಳ ರಾಗದಲ್ಲಿ, ಮಿಶ್ರ ಝಂಪೆ ತಾಳದಲ್ಲಿ ರಚಿಸಲ್ಪಟ್ಟಿರುವ ಕೃತಿ ತಾಯಿ ಜಗದಂಬೆಯನ್ನು ಸ್ತುತಿಸಿರುವುದು.  ಚಿಕ್ಕದಾಗಿ ಹಿಂದೋಳ ರಾಗದ ಆಲಾಪನೆಯಿಂದ ಪ್ರಾರಂಭಿಸಿ ಗುರುಗಳು ವಿಸ್ತಾರವಾಗಿ ಕೃತಿಯನ್ನುಹಾಡಿದರು.  ಹಾಡುವುದು ಮುಗಿದ ತಕ್ಷಣ ಋತ್ವಿಕರು ಶಂಕರಾಭರಣ ಸಂಜಾತ ಹಿಂದೋಳ ರಾಗವೆಂದೂ, ಆರೋಹಣ ಅವರೋಹಣದ ಸ್ವರಗಳ ವಿವರಣೆಯನ್ನೂ ಕೊಡುತ್ತಾ, ರಚನೆಯಲ್ಲಿ ಬರುವ ಜಗದಂಬಿಕೆಯನ್ನು ಲಲಿತಾ ಸಹಸ್ರನಾಮದ ಕೆಲವು ನಾಮಗಳೊಂದಿಗೆ ಪಠಿಸುತ್ತಾ ..... ಕೊನೆಗೆ ಸ್ವಾಹಾ ಎಂದು ಯಜ್ಞ ಪೂರೈಸಿದರು.  ಮುಂದಿನ ಹಾಗೂ ಕೊನೆಯ ಕೃತಿಯಾಗಿ ಮಾಂಡ್ ರಾಗದ "ಬ್ರಹ್ಮಾಂಡವಲಯೇ ಮಾಯೆ" ಎಂದು ಪ್ರಕಟಿಸಿದಾಗ ನನಗೆ ಅತ್ಯಂತ ಸಂತೋಷ ಹಾಗೂ ರೋಮಾಂಚನವಾಗಿತ್ತು.  ಏಕೆಂದರೆ ನಾನು ಕಲಿತ ಮಹಾರಾಜರ ಮೊದಲ ರಚನೆಯೇ ಬ್ರಹ್ಮಾಂಡವಲಯೇ ಆಗಿತ್ತು.  ಇದನ್ನು ನನಗೆ ನನ್ನ ಗುರುಗಳು ನಾನು ಜೂನಿಯರ್ ಸಂಗೀತ ಪರೀಕ್ಷೆ ಕಟ್ಟಿದ್ದಾಗ ಅಂದರೆ ಸುಮಾರು ೪೫ ವರ್ಷಗಳ ಹಿಂದೆ ಹೇಳಿಕೊಟ್ಟಿದ್ದರು.  ಈ ಕೃತಿ ನನ್ನ ತಂದೆ ತಾಯಿಯವರಿಗೂ ತುಂಬಾ ಪ್ರಿಯವಾಗಿತ್ತು.  ಅದೇ ರಚನೆ ಈಗ ಹಾಡಲ್ಪಡುವುದು ಎಂದು ಕೇಳಿದಾಗ ನನಗೆ ರೋಮಾಂಚನದ ಜೊತೆಗೆ ಹಳೆಯ ಎಲ್ಲಾ ನೆನಪುಗಳೂ, ಅಪ್ಪ ಅಮ್ಮನ ನೆನಪುಗಳೂ ಎಲ್ಲವೂ ಒಟ್ಟಿಗೆ ಧಾವಿಸಿ ಬಂದು ಪುಳಕಗೊಳಿಸಿತು.  ಮಾಂಡ್ ರಾಗದ ಚಿಕ್ಕ ಆಲಾಪನೆ ಕೃತಿಯ ಪ್ರಾರಂಭವನ್ನು ಸೂಚಿಸಿ ಮುದಗೊಳಿಸಿತು.  ಚೊಕ್ಕವಾಗಿ ಹಾಡಲ್ಪಟ್ಟ ಕೀರ್ತನೆ ಸುಶ್ರಾವ್ಯವಾಗಿತ್ತು.  ಕೃತಿ ಮುಗಿದ ನಂತರ ಮತ್ತೆ ಅದೇ ರೀರಿಯಾಗಿ ಶಂಕರಾಭರಣ ಸಂಜಾತ ಎಂದು ಮಾಂಡ್ ರಾಗವನ್ನು ವರ್ಣಿಸಿ, ಆರೋಹಣ ಹಾಗೂ ಅವರೋಹಣದ ಸ್ವರಗಳನ್ನು ಪರಿಚಯಿಸಿ, ಮಹಾರಾಜರನ್ನು ಸ್ಮರಿಸಿ, ಲಲಿತಾ ಸಹಸ್ರನಾಮದಲ್ಲಿಯ ಬ್ರಹ್ಮಾಂಡವಲಯೆಯನ್ನು ಸ್ತುತಿಸಿ ಸ್ವಾಹಾ ಎಂದು ಯಜ್ಞ ಪೂರ್ಣಗೊಳಿಸಲಾಯಿತು.

ಜೀವನದಲ್ಲಿ ಹೀಗೆ ಪ್ರಥಮ ಬಾರಿ ನಾನು "ಗಾನಯಜ್ಞ"ವನ್ನು ನೋಡಿದೆ.  ಇನ್ನೊಂದು ಮುಖ್ಯವಾದ ವಿಷಯವನ್ನು ಆರ್ ಕೆ ಪಿ ಗುರುಗಳು ತಿಳಿಸಿದರು.  ಅಲ್ಲಿ ಈಗಾಗಲೇ ೧೧ / ೧೨ ಕಲಶಗಳ ಸ್ಥಾಪನೆಯಾಗಿತ್ತು.  ಜೊತೆಗೆ ಆ ದಿನವೇ ಮತ್ತೆ ಹನ್ನೆರಡು ಕಲಶಗಳ ಸ್ಥಾಪನೆ ಮಾಡಲಾಗಿತ್ತು ಏಕೆಂದರೆ ಅದಕ್ಕೆ ಅಷ್ತು ಬೇಡಿಕೆ ಬಂದಿತ್ತು.  ಕಲಶಗಳ ವಿಶೇಷತೆ ಏನೆಂದರೆ ಸಂಗೀತದ ಸಪ್ತ ಸ್ವರಗಳ ಶಕ್ತಿಯನ್ನು ಆ ಕಲಶಗಳಲ್ಲಿ ಆವಾಹನೆ ಮಾಡಲಾಗಿತ್ತು.  ಯಜ್ಞದ ಉದ್ದೇಶವೂ, ಕಲಶಗಳ ಸ್ಥಾಪನೆಯ ಉದ್ದೇಶವೂ ಲೋಕದಲ್ಲಿ ಸಪ್ತ ಸ್ವರಗಳ ನಾದ ತುಂಬಿಕೊಳ್ಳಬೇಕು ಎಂಬ ಉನ್ನತವಾದ ವಿಚಾರವಾಗಿತ್ತು.  ಲೋಕ ನಾದಮಯವಾದಲ್ಲಿ ಪರಿಸರ ಶುದ್ಧಿಯಾಗಿ, ಗುಣಾತ್ಮಕ ಭಾವಗಳ ಲಹರಿ ಹಬ್ಬುವುದು ಹಾಗೂ ಲೋಕ ಕಲ್ಯಾಣವಾಗುವುದು ಎಂಬುದು ಪರಿಷತ್ತಿನ ಉದ್ದೇಶವಾಗಿತ್ತು.  ಸಂಗೀತವೂ ಭಗವಂತನ, ಜಗನ್ಮಾತೆಯ ಆರಾಧನೆ ಎಂದು ಸಾರುವುದು ಅತ್ಯಂತ ಉನ್ನತ ಚಿಂತನೆಯಾಗಿರುವುದು.

ತಡವಾಗಿಯಾದರೂ ಕಾರ್ಯಕ್ರಮಕ್ಕೆ ತಲುಪಿ ನನಗೆ ತಿಳಿದಿದ್ದ ಎರಡು ಕೃತಿಗಳನ್ನು ಕೇಳಿದ್ದು ನನ್ನ ಅದೃಷ್ಟವೆಂದೇ ಭಾವಿಸಿರುವೆ..... 

3 comments:

  1. `ಗಾನಯಜ್ಞ’ದ ಬಗೆಗೆ ತಿಳಿದು ಅಚ್ಚರಿಯಾಯಿತು ; ಖುಶಿಯೂ ಆಯಿತು. ಇಂತಹ ಒಂದು ಕಾರ್ಯಕ್ರಮ ಇರಬಹುದು ಎಂದು ಊಹಿಸಲೇ ಆಗದು. ಇದನ್ನು ಕಲ್ಪಿಸಿದವರು, ಪ್ರಯೋಗಿಸಿದವರು ಹಾಗು ಭಾಗವಹಿಸಿದ ನೀವು ಎಲ್ಲರೂ ಪುಣ್ಯವಂತರು, ಧನ್ಯರು!

    ReplyDelete
  2. dhanyavadagalu Sunaath kaaka. Nanagu achchariye aayithu, aadre sangeetha kuda ondu vidhada aaradhane emba mathu kushi thandithu... idu nanna jeevanada apoorva anubhava, mareyalagaddu...

    ReplyDelete
  3. ಗಾನ ಯಜ್ಞ ಮತ್ತು ಕಳಶ ಸ್ಥಾಪನೆಯ ಬಗ್ಗೆ ಸವಿಸ್ತಾರವಾಗಿ ವಿವರಸಿದ್ದು ಓದಿ ಸಂತಸವಾಯಿತು. ನೆನಪುಗಳೇ ಹಾಗೆ ಮತ್ತೆ ಮತ್ತೆ ಅವರ್ಣನೀಯ ಸಂತೋಷ ನೀಡುತ್ತದೆ.

    ReplyDelete