Friday, June 10, 2016

ಪ್ರವಾಸ ಕಥನ - ಅಮೆರಿಕ (ಎರಡನೆಯ ಕಂತು)

ಬೆಂಗಳೂರಿನಲ್ಲಿಯ ಹವಾಮಾನದಿಂದ ಫೀನಿಕ್ಸ್ ನಗರಕ್ಕೆ ಹೋಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ನಮಗೆ ತುಸು ಹೆಚ್ಚಾದ ಸಮಯವೇ ಹಿಡಿಯಿತು.  ಫೀನಿಕ್ಸ್ ನಲ್ಲಿ ಜನರು ರಾತ್ರಿ ೮.೩೦/೯ ಕ್ಕೆಲ್ಲಾ ಮನೆಯ ದೀಪಗಳನ್ನು ಆರಿಸಿಬಿಡುತ್ತಾರೆ.  ನಮ್ಮೂರಲ್ಲಿರುವ ಗಿಜಿಗಿಜಿ ಸಂಜೆಗಳು ಇಲ್ಲಿ ನೋಡಲು ಸಿಗುವುದಿಲ್ಲ.  ಯಾವಾಗಲೂ ಬರಿಯ ವಾಹನಗಳ ಓಡಾಟವಷ್ಟೇ ಕಾಣುವುದು.  ರಸ್ತೆಗಳಲ್ಲಿ ಪಾದಚಾರಿಗಳೂ ಇಲ್ಲ ಮತ್ತು ರಸ್ತೆಯ ದೀಪಗಳೂ ಕೂಡ ನಮ್ಮಲ್ಲಿಯಂತೆ ಪ್ರಜ್ವಲವಾಗಿಲ್ಲ.


ಮಂದವಾದ ಬೆಳಕಿನ ದೀಪಗಳಲ್ಲಿ, ನಿಶ್ಯಬ್ದವಾದ ರಸ್ತೆಗಳನ್ನು ಕಿಟಕಿಗಳ ಮೂಲಕ ನೋಡಿದರೆ ಎಲ್ಲಿ ನೋಡಿದರೂ ಬರೀ ಶಬ್ದರಹಿತವಾಗಿರುವುದು.  ಎಲ್ಲವೂ ಅತೀ ಶುಭ್ರವಾಗಿರುವುದು. ಸ್ವಲ್ಪ ಮಟ್ಟಿಗೆ ಜನಗಳ ಗಿಜಿಬಿಜಿ ನೋಡಬೇಕೆಂದರೆ ’ಮಾಲ್’ ಗಳಿಗೆ ಹೋಗಬೇಕು.  ಅಲ್ಲೂ ಕೂಡ ಅತಿಯಾದ ಗಲಾಟೆ, ಅಬ್ಬರದ ಮಾತುಗಳು, ಸಿನಿಮಾ ಹಾಡಿನ ಕಿರಿಚಾಟ ಯಾವುದೂ ಇಲ್ಲ.  ಎಲ್ಲಾ ಮಾಲ್ ಗಳೂ ನಿಗದಿತ ಸಮಯಕ್ಕೆ ಸರಿಯಾಗಿ ವ್ಯಾಪಾರ ನಿಲ್ಲಿಸಿ, ಬಾಗಿಲು ಹಾಕುತ್ತಾರೆ.   ಬೆಳಿಗ್ಗೆ ೬ ಘಂಟೆಗೆಲ್ಲಾ ಕಸದ ಲಾರಿ ಬಂದು ಎಲ್ಲರ ಮನೆಯ ಹೊರಗಡೆ ಇಟ್ಟಿರುವ ದೊಡ್ಡ ದೊಡ್ಡ ಡಬ್ಬಿಗಳಿಂದ ಕಸವನ್ನು ತೆಗೆದುಕೊಂಡು ಹೋಗುತ್ತದೆ.  ಕಸವನ್ನು ವಿಂಗಡಿಸಿಡಬೇಕು.  ವಾರದಲ್ಲಿ ಒಂದು ದಿನ ಮರುಪಯೋಗಿ ಪರಿಸರ ಸ್ನೇಹಿ ಕಸ ತೆಗೆದುಕೊಂಡು ಹೋಗಲು ಹಸಿರು ಬಣ್ಣದ, ಹಸಿರು ಬಣ್ಣದ ಚಿತ್ರಗಳೇ ತುಂಬಿರುವ ದೊಡ್ಡ ವಾಹನ ಬರುತ್ತದೆ.  ವಾರದ ಮತ್ತೊಂದು ದಿನ ಮಾಮೂಲಿ ಕಸದ ವಿಲೇವಾರಿ.  ದೊಡ್ಡ ಪ್ಲಾಸ್ಟಿಕ್ ಕವರ್ ನಲ್ಲಿ ಕಸವನ್ನು ತುಂಬಿ, ಅದರ ಬಾಯಿಯನ್ನು ಬಿಗಿಯಾಗಿ ಮುಚ್ಚಿ ಕಟ್ಟಿ, ಕಸದ ಡಬ್ಬಿಯಲ್ಲಿಟ್ಟು, ಮನೆಯ ಹೊರಗೆ ರಸ್ತೆಯಲ್ಲಿ ಇಟ್ಟಿರಬೇಕು. ಹೀಗೆ ಹೊರಗಡೆ ಇಡುವ ದೊಡ್ಡ ಕಸದ ಡಬ್ಬಿಗೆ, ಉರುಳಿಸಿಕೊಂಡು ಹೋಗಲು ಗಾಲಿಗಳಿರುತ್ತವೆ.  ಎಲ್ಲವೂ ಅಚ್ಚುಕಟ್ಟಾಗಿ ಮತ್ತು ಸಮಯಕ್ಕೆ ಸರಿಯಾಗಿ ನಡೆಯುತ್ತದೆ.  ರಸ್ತೆ ಗುಡಿಸಲು ಒಂದು ದೊಡ್ಡ ವಾಹನ ಬರುತ್ತದೆ.  ವಾಹನದ ಕೆಳಗೆ ಗುಂಡನೆಯ ಅಗಲವಾದ ದೊಡ್ಡ ಬ್ರಶ್ ಗಳಿರುತ್ತವೆ.  ಗುಂಡಿ ಅದುಮಿದ ಕೂಡಲೆ ಆ ಬ್ರಶ್ ಗಳು ವೇಗವಾಗಿ ರಸ್ತೆಯ ಮೇಲೆ ಸುತ್ತುತ್ತಾ ಕಸವನ್ನು ಒಗ್ಗೂಡಿಸುತ್ತಾ ಗುಡಿಸುತ್ತವೆ.  ಹೀಗೆ ಒಂದೊಂದು ರಸ್ತೆಯನ್ನು ಸುಮಾರು ಅರ್ಧ ಘಂಟೆಯಲ್ಲಿ ಗುಡಿಸಿ, ವಾಹನ ಹೊರಟು ಹೋಗುತ್ತದೆ.

ಮನೆಗಳೂ ಕೂಡ ಮುಂದುಗಡೆಗೆ ಹೆಂಚುಗಳನ್ನು ಹಾಕಿ ವಿನ್ಯಾಯ ಮಾಡಲಾಗಿರುತ್ತದೆ.  ಬೀದಿಬಾಗಿಲ ಪಕ್ಕದಲ್ಲೇ ಮೋಟಾರು ನಿಲ್ಲಿಸುವ ಲಾಯ (garage)ದ ಬಾಗಿಲಿರುತ್ತದೆ.  ಕೆಲವರು ಬೀದಿ ಬಾಗಿಲುಗಳನ್ನು ತಿಂಗಳಾನುಗಟ್ಟಲೆ ತೆಗೆಯುವುದೇ ಇಲ್ಲ. 
ಈ ಜಾಗದಲ್ಲಿ ಸಾರ್ವಜನಿಕರ ಓಡಾಟಕ್ಕೆಂದು ಬಸ್ಸುಗಳಾಗಲಿ, ಸುರಂಗ ರೈಲುಗಳಾಗಲೀ ಏನೂ ಇಲ್ಲ.  ಅರಿಜೋನ ವಿಶ್ವವಿದ್ಯಾಲಯವಿರುವ ಕಡೆಗೆ ರೈಲುಗಳ ಓಡಾಟವಿದೆ.  ಕೆಲವು ಕಡೆ ನಾವು ಓಡಾಡುವಾಗ ಕೆಲವು ಬಸ್ಸುಗಳನ್ನು ನೋಡಿದೆವು ಅಷ್ಟೆ.  ಬಾಕಿಯಂತೆ ಎಲ್ಲರೂ ತಮ್ಮ ತಮ್ಮ ಕಾರುಗಳಲ್ಲೇ ಎಲ್ಲ ಕಡೆಗೂ ಓಡಾಡಬೇಕು.  ಕೆಲವೊಮ್ಮೆ ಕೆಲಸಕ್ಕೆ ಹೋಗುವಾಗ ಒಂದೇ ಕಡೆ ವಾಸವಿರುವ ಕೆಲವರು ಒಂದೊಂದು ದಿನ ಒಬ್ಬೊಬ್ಬರ ಕಾರಿನಲ್ಲಿ ಹೋಗಿ ಇಂಧನ ಉಳಿಸುತ್ತಾರೆ.  ಮೋಟಾರು ಲಾಯದಲ್ಲಿಯೇ ಚಪ್ಪಲಿಗಳನ್ನು ಬಿಡುವ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರಾದ್ದರಿಂದ, ಯಾವಾಗ ಮನೆಯಿಂದ ಹೊರಗೆ ಹೋಗಬೇಕಾದರೂ ಮೋಟಾರು ಲಾಯದ ಬಾಗಿಲನ್ನೇ ಉಪಯೋಗಿಸುತ್ತಾರೆ.  ನಮ್ಮ ಸಂಪ್ರದಾಯಕ್ಕೆ ವಿರುದ್ಧವಾಗ ಈ ಆಚರಣೆಗಳು ಮನಸ್ಸಿಗೆ ಸ್ವಲ್ಪ ಕಸಿವಿಸಿ ಮಾಡುವುದು. 
  
ಬಾಡಿಗೆ ಮನೆಗಳಲ್ಲಿ  ವಿದ್ಯುತ್ ಒಲೆಗಳು, ಪಾತ್ರೆ ತೊಳೆಯುವ ಯಂತ್ರ, ಬಟ್ಟೆ ಒಗೆಯುವ ಯಂತ್ರ, ನೀರು ಶುದ್ಧೀಕರಿಸುವ ಯಂತ್ರ (ಫೀನಿಕ್ಸ್ ನಲ್ಲಿ ಒರಟು ನೀರು ಸಿಕ್ಕುವುದರಿಂದ ಅದನ್ನು ಪರಿಷ್ಕರಿಸಿ ಉಪಯೋಗಿಸಬೇಕಾಗುವುದು) ಎಂದು ಎಲ್ಲವನ್ನೂ ಅಳವಡಿಸಿಯೇ ಬಾಡಿಗೆಗೆ ಕೊಡುತ್ತಾರೆ.  ನನ್ನ ಮಗ ಬಾಡಿಗೆಗೆ ಇದ್ದ ಮನೆಯಲ್ಲಿ ನಾವು ಹೋದಾಗ ಪಾತ್ರೆ ತೊಳೆಯುವ ಯಂತ್ರ ಕೆಟ್ಟಿತ್ತು.  ಅದನ್ನು ಬದಲಾಯಿಸಲು ಒಬ್ಬರನ್ನು ಮನೆಯ ಒಡತಿ ಕಳುಹಿಸಿದ್ದಳು.  ಆ ಭಾರೀ ಗಾತ್ರದ, ಕುಳ್ಳಗಿನ ಮನುಷ್ಯ ಯಾರ ಸಹಾಯವೂ ಇಲ್ಲದೆ ಮಣ ತೂಕದ ಯಂತ್ರವನ್ನು ಒಂದು ಗಾಡಿಯಲ್ಲಿ ತಂದಿದ್ದನು.  ಅದನ್ನು ಗಾಲಿಯಿರುವ ಪುಟ್ಟ ಕಬ್ಬಿಣದ ಸರಳುಗಳ ಸಹಾಯದಿಂದ ಮನೆಯ ಒಳಗಡೆ ತಂದನು.  ತಾನೊಬ್ಬನೇ ಬಗ್ಗಿ, ಎದ್ದು, ಕುಳಿತು, ಮಲಗಿ, ಎಲ್ಲಾ ತರಹದ ಕಸರತ್ತನ್ನೂ ಮಾಡಿ, ಹಳೆಯ ಯಂತ್ರವನ್ನು ಹೊರಗೆ ತೆಗೆದು, ಹೊಸತನ್ನು ಅಳವಡಿಸಿ, ಅಲ್ಲಿ ಚೆಲ್ಲಿದ್ದ ನೀರನ್ನೆಲ್ಲಾ ಒರೆಸಿ, ನೆಲದ ಹಂಚಿನ ಮೇಲಾಗಿದ್ದ ಕಲೆಯನ್ನೆಲ್ಲಾ ಉಜ್ಜಿ, ಶುಚಿಗೊಳಿಸಿ (ಅದಕ್ಕೂ ಏನೋ ಒಂದು ಲೋಷನ್ ತಂದಿದ್ದ), ಓಕೆ ಬಾಯ್ ಎಂದು ಅರ್ಧಗಂಟೆಯಲ್ಲಿ ಹೊರಟೇ ಹೋದನು.  ನಾವು ನೋಡುತ್ತಾ ಕುಳಿತವರು, ಅವನಿಗೆ ಏನಾದರೂ ಸಹಾಯ ಬೇಕೆ ಎಂದು ಕೇಳಿ ಪೆಚ್ಚಾದೆವು ಅಷ್ಟೆ.  

ಮನೆಯ ಮುಂದುಗಡೆ ಬೆಳೆದ ಹುಲ್ಲನ್ನು ಕತ್ತರಿಸಲು ಕೂಡ ಜನಗಳು ಸಿಗುತ್ತಾರೆ.  ಅವರ ಜಂಗಮ ದೂರವಾಣಿಗೆ ಕರೆ ಮಾಡಿದರೆ ಬಂದು ಎಲ್ಲವನ್ನೂ ಕತ್ತರಿಸಿ, ಗುಡಿಸಿ ಹೋಗುತ್ತಾರೆ.  ನನ್ನ ಮಗ ಬಾಡಿಗೆಗೆ ಇದ್ದ ಮನೆಯ ಹುಲ್ಲು ಕತ್ತರಿಸಲು ಒಬ್ಬ ದಂಪತಿಗಳು ತಮ್ಮ ವಾಹನದಲ್ಲಿ ಬಂದಿದ್ದರು.  ಗಂಡ ಹೆಂಡತಿ ಇಬ್ಬರೂ ಅದೆಷ್ಟು ಚಾಕಚಕ್ಯತೆಯಿಂದ ಒಬ್ಬೊಬ್ಬರು ಒಂದೊಂದು ಕಡೆಯಿಂದ ಪ್ರಾರಂಭಿಸಿ ಕೇವಲ ಅರ್ಧ ಗಂಟೆಯಲ್ಲಿ ಕೆಲಸ ಮಾಡಿ ಮುಗಿಸಿದರು.  ಎಲ್ಲದಕ್ಕೂ ಬೇಕಾದಂತಹ ತರಹೇವಾರಿ ಉಪಕರಣಗಳು ಇರುತ್ತವೆ.  ನಮ್ಮ ದೇಶದಂತೆ ಇಲ್ಲಿ ಎಲ್ಲ ಕೆಲಸವನ್ನೂ ಕೈಯಲ್ಲಿ ಮಾಡಿ ಶ್ರಮ ಪಡಬೇಕಾಗಿಲ್ಲ.  ಉಪಕರಣಗಳ ಸಹಾಯದಿಂದ ಪ್ರತೀ ಕೆಲಸವನ್ನೂ ಅತಿ ಕಡಿಮೆ ಸಮಯದಲ್ಲಿ, ಅಚ್ಚುಕಟ್ಟಾಗಿ ಮಾಡಿಬಿಟ್ಟು, ಕಸವನ್ನೂ ತೆಗೆದು ಸ್ವಚ್ಛ ಮಾಡಿ,  ತಮ್ಮ ಹಣ ಪಡೆದು "ಶುಭದಿನ" ಎಂದು ಹಾರೈಸಿ ಹೊರಟುಹೋಗುವರು. 

 
ಮನೆಯ ಹಿತ್ತಲಲ್ಲಿ ಮಡಿಲ ತುಂಬಾ ಮಕ್ಕಳನ್ನೇ ಹೊತ್ತು ನಿಂತಿರುವ ಕಿತ್ತಳೆ ಹಣ್ಣಿನ ಗಿಡ, ನಮ್ಮ ಊರಿನ ನಿಂಬೆ ಹಣ್ಣಿಗಿಂತ ದೊಡ್ಡ ಗಾತ್ರದ ನಿಂಬೆ ಹಣ್ಣುಗಳನ್ನು ಹೊತ್ತು ನಿಂತಿರುವ ನಿಂಬೆಗಿಡ ನಮ್ಮ ಗಮನವನ್ನು ಸೆಳೆಯುತ್ತದೆ.  ಆದರೆ ಯಾರೊಬ್ಬರೂ ಒಂದೇ ಒಂದು ಹಣ್ಣನ್ನೂ ಕೀಳುವುದೂ ಇಲ್ಲ, ಉಪಯೋಗಿಸುವುದೂ ಇಲ್ಲ.  ಮಗನ ಮನೆಯ ಪಕ್ಕದ ಮನೆಯಲ್ಲಿ ನಿಂಬೆ ಗಿಡವಿರುವುದು.  ಕೆಲವು ರೆಂಬೆಗಳು ಅವರ ಮನೆಯ ಗೋಡೆಯಿಂದಾಚೆ ಈ ಮನೆಯ ಕಡೆ ಬಗ್ಗಿ ಮೈತುಂಬಾ ಕಡು ಹಳದಿ ಬಣ್ಣದ ಹಣ್ಣುಗಳನ್ನು ಹೊತ್ತು, ಗಾಳಿಯಲ್ಲಿ ಈ ಕಡೆ ಆ ಕಡೆ ತೂಗುತ್ತಾ ಕೈಬೀಸಿ ಕರೆಯುವುದು.  ಗಿಡ ಅವರ ಮನೆಯಲ್ಲಿ ಇದ್ದರೂ, ಗೋಡೆಯಿಂದೀಚೆಗೆ ಬಾಗಿರುವ ಕೊಂಬೆಗಳಿಂದ ನಾವು ಹಣ್ಣುಗಳನ್ನು ತೆಗೆದುಕೊಳ್ಳಬಹುದೆಂದು ತಿಳಿಯಿತು.  ನಾನು ಕೆಲವು ಹಣ್ಣುಗಳನ್ನು ತಂದು ಉಪಯೋಗಿಸಿದೆ.  


 ದಪ್ಪನಾದ ಹೊರಕವಚವಿರುವುದರಿಂದ ರಸ ತೆಗೆಯಲು ಸ್ವಲ್ಪ ಶ್ರಮ ಪಡಬೇಕಾದರೂ ಕೂಡ, ಹಣ್ಣಿನ ತುಂಬಾ ರಸ ಹೊತ್ತ ನಿಂಬೆ ರುಚಿಯಾಗಿತ್ತು.  ಮಾತು ಮಾತಿಗೂ ಕಾಯ್ದೆ ಕಾನೂನುಗಳನ್ನು ಅನುಸರಿಸಬೇಕಾದಂತಹ ಅತಿ ಶಿಸ್ತು ಕೆಲವೊಮ್ಮೆ ನಮ್ಮನ್ನು ಪೇಚಿಗೆ ಸಿಲುಕಿಸುವುದು.   ಎಲ್ಲವೂ ಮುಕ್ತವಾಗಿ, ಯಾರ ಅಂಕೆಯೂ ಇಲ್ಲದೆ ಇರುವ ನಮ್ಮ ಊರು, ದೇಶ ಎಷ್ಟು ಹಿತ ಎನ್ನುವುದು ಹೊರಗೆ ಹೋದಾಗ ಮಾತ್ರವೇ ತಿಳಿಯುವುದು.  ಪ್ರಕೃತಿದತ್ತವಾದ ಸಕಲ ಸೌಲಭ್ಯಗಳಿಗೂ ನಾವೇ ಒಡೆಯರು, ಎಲ್ಲವೂ ನಮಗಾಗಿಯೇ, ನಮ್ಮದೇ ಎನ್ನುವ ಭಾವದಲ್ಲಿ ಬದುಕುವ ನಾವು ಎಲ್ಲದಕ್ಕೂ ಅದರದೇ ಆದ ಒಂದು ಬೆಲೆಯಿದೆಯೆಂಬ ಸತ್ಯ ನಮಗೆ ತಿಳಿಯುವುದು ನಾವು ನಮ್ಮ ದೇಶದಿಂದ ಹೊರಗಡೆ ಹೋದಾಗ ಮಾತ್ರ.

ಫೀನಿಕ್ಸ್ ನಗರವು ತುಂಬಾ ಆಸ್ತೆಯಿಂದ ನಕ್ಷೆ, ನಕಾಶೆಗಳ ಸಹಾಯದಿಂದ ಕಟ್ಟಲ್ಪಟ್ಟಿದೆ.  ನೈಸರ್ಗಿಕ ಸೌಂದರ್ಯ ಹಾಳಾಗದಂತೆ ಕಾಪಾಡಲಾಗಿದೆ.  ತುಂಬಾ ಹೆಚ್ಚೆನಿಸುವ ಬಹು ಮಹಡಿ ಕಟ್ಟಡಗಳು ಕಾಣಸಿಗುವುದಿಲ್ಲ.    ಅರಿಜೋನ ವಿಶ್ವವಿದ್ಯಾಲಯದಲ್ಲಿಯೇ ನನ್ನ ಮಗ ತನ್ನ MS ಪದವಿ ಮಾಡಿದ್ದು.  ಒಳಗೆಲ್ಲಾ ನಮ್ಮನ್ನು ಕಾರಿನಲ್ಲಿಯೇ ಕರೆದುಕೊಂಡು ಹೋಗಿ ತೋರಿಸಿದಾಗ ಅಲ್ಲಿ ಓದಲು ಬರುವ ವಿದ್ಯಾರ್ಥಿಗಳ ಸಂಕಷ್ಟಗಳು ನಮಗೆ ಅರ್ಥವಾಯಿತು.  ವಿಸ್ತಾರವಾಗಿ ಹಬ್ಬಿರುವ ವಿಶ್ವವಿದ್ಯಾಲಯದಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಪ್ರತಿ ವರ್ಷವೂ ಇರುತ್ತಾರಂತೆ.  ವಿದ್ಯಾರ್ಥಿಗಳಿಗೆ ಬರಿಯ ತಂಗುವ ಮನೆಗಳು ಸಿಗುತ್ತವೆ.  ಅಲ್ಲಿಯೇ ಸುಮಾರು ೪-೫ರ ಗುಂಪು ಅಥವಾ ಮನೆ ದೊಡ್ಡದಿದ್ದರೆ ಇನ್ನೂ ಕೆಲವು ಜನ ಸೇರಿಕೊಂಡು ಊಟದ ಖರ್ಚನ್ನು ಎಲ್ಲರೂ ಹಂಚಿಕೊಳ್ಳುತ್ತಾ ವಿದ್ಯಾಭ್ಯಾಸ ಮಾಡುತ್ತಾರೆ.  ಹೀಗೆ ವಿದ್ಯಾರ್ಥಿಗಳಾಗಿರುವವರ ಅನುಕೂಲಕ್ಕಾಗಿ ಬಟ್ಟೆ ಒಗೆಯುವ  ಯಂತ್ರಗಳನ್ನು ಅನೇಕ ಕಡೆ ಇರಿಸಲಾಗಿದೆ.  ಇವು ವಿದ್ಯಾರ್ಥಿಗಳಿಗಾಗಿಯೇ ಮಾಡಿಕೊಟ್ಟಿರುವ ಅನುಕೂಲ.  ಅಲ್ಲಿ ಬಟ್ಟೆ ಒಗೆಯುವ ಯಂತ್ರದಲ್ಲಿ ಬಟ್ಟೆಗಳನ್ನು ಹಾಕಿ ಅದಕ್ಕೆಷ್ಟು ದುಡ್ಡು ಕಟ್ಟಬೇಕೋ ಅದನ್ನು ಹಾಕಿದರೆ ಮಾತ್ರ ಯಂತ್ರ ಕೆಲಸ ಮಾಡುತ್ತದೆ.  ಸುಮಾರು ಮುಕ್ಕಾಲು ಗಂಟೆ ಬಟ್ಟೆ ಒಗೆದ ನಂತರ ಅದನ್ನು ತೆಗೆದು ಒಣಗಿಸುವ ಯಂತ್ರದಲ್ಲಿ ಹಾಕಬೇಕು.  ಕೆಲಸ ಆದ ನಂತರ ತೆಗೆದುಕೊಂಡು ಹೋಗಬೇಕು.  ಇದು ವಾರದಲ್ಲಿ ಒಂದು ಸಲ ಮಾಡುವ ವಾರಾಂತ್ಯದ ಕಾರ್ಯಕ್ರಮ.  ಕೈಯಲ್ಲಿ ಹೆಚ್ಚು ದುಡ್ಡಿಲ್ಲದೆ, ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಂಡು ಓದಲು ಬರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.  ಆದ್ದರಿಂದ ಖರ್ಚು ಮಾಡುವ ಒಂದೊಂದು ಡಾಲರ್ ಕೂಡ ಯೋಚಿಸಿಯೇ ಮಾಡಬೇಕು.  ಕೆಲವು ಅದೃಷ್ಟವಂತ ಹುಡುಗರಿಗೆ ಓದುವಾಗಲೇ ಸಂಜೆ ಸಮಯ ಕೆಲಸ ಮಾಡಲು ಸಿಕ್ಕುತ್ತದೆ.  ಅಂತಹ ಸಮಯದಲ್ಲಿ ಹಣದ ಅಡಚಣೆ ಸ್ವಲ್ಪ ಕಡಿಮೆಯಾಗುವುದು.  ಆದರೆ ಕೆಲವು ಮಕ್ಕಳಿಗೆ ಓದು ಮುಗಿದರೂ ಕೆಲಸ ಸಿಕ್ಕಿರುವುದಿಲ್ಲ.  ನಮ್ಮ ದೇಶದಿಂದ ದೂರ ದೇಶಕ್ಕೆ ಓದಲು ಹೋದಾಗ ಒಬ್ಬರಿಗೊಬ್ಬರು ತುಂಬಾ ಸಹಾಯ ಮಾಡಿಕೊಳ್ಳುತ್ತಾರೆ.  ಕೆಲಸ ಸಿಗುವವರೆಗೂ ಊಟ, ತಿಂಡಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ.  ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ಅಲ್ಲಿ ಈಗಾಗಲೇ ಓದುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕೂಡ ತುಂಬಾ ಸಹಾಯ ಮಾಡುತ್ತಾರೆ.  ವಾರಾಂತ್ಯಗಳಲ್ಲಿ ಊಟಕ್ಕೆ ಕರೆಯುವುದು, ಹೊಸದಾಗಿ ಹೋದಾಗ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡುವುದು, ವಿಶ್ವವಿದ್ಯಾಲಯದಲ್ಲಿ ಎಲ್ಲೆಲ್ಲಿ ಏನೇನಿದೆ ಎಂದು ಪರಿಚಯಿಸುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಗುಂಪಿನಲ್ಲಿರುವ ಇತರ ಭಾರತೀಯರನ್ನು ಪರಿಚಯಿಸುವುದನ್ನು ತುಂಬಾ ಕಾಳಜಿಯಿಂದ ಮಾಡುತ್ತಾರೆ.   ವಿಶ್ವವಿದ್ಯಾಲಯದ ಸುತ್ತಮುತ್ತಲಲ್ಲೇ ಮನೆಗಳು ಬಾಡಿಗೆಗೆ ಸಿಗುತ್ತವೆಯಾದ್ದರಿಂದ ವಿದ್ಯಾರ್ಥಿಗಳು ಓದು ಮುಗಿಯುವವರೆಗೂ ಅಲ್ಲಿಯೇ ಇರುತ್ತಾರೆ.  ಕೆಲಸ ಸಿಕ್ಕ ಕೂಡಲೆ ಸ್ವಲ್ಪ ಅನುಕೂಲಕರವಾದ ಮನೆ ನೋಡಿಕೊಂಡು ಹೊರಡುತ್ತಾರೆ.
 

Wednesday, June 1, 2016

ಪ್ರವಾಸ ಕಥನ - ಅಮೆರಿಕ

ರಷ್ಯಾ ದೇಶಕ್ಕೆ ಹೋಗಿ ಬಂದು ಸುಮಾರು ೨೩ ವರ್ಷಗಳ ನಂತರ ಮತ್ತೆ ಸಮುದ್ರಲಂಘನ ಮಾಡಿ ಅಮೆರಿಕಾಗೆ ಹೋಗುವ ಅವಕಾಶ, ಸಮಯ ಬಂದಾಗ ಮನಸ್ಸು ಅಷ್ಟೇನೂ ಸಂಭ್ರಮಿಸಿರಲಿಲ್ಲ.  ಅತ್ತೆಯವರ ದೀರ್ಘ ಅನಾರೋಗ್ಯ, ಹೊರಡುವ ಮುಂಚಿನ ತಯ್ಯಾರಿ, ಮನೆದೇವರ ದರ್ಶನ, ಚಾಮುಂಡಿ ಬೆಟ್ಟದ ಪ್ರಯಾಣ ಎಲ್ಲವೂ ಸಿಕ್ಕಾಪಟ್ಟೆ ಸುಸ್ತು ಮಾಡಿಯಾಗಿತ್ತು.  ಇನ್ನು ವಿಮಾನ ಏರಿ ಕುಳಿತಾಗಲೇ ನೆಮ್ಮದಿ ಹಾಗೂ ವಿಶ್ರಾಂತಿ ಎನ್ನುವ ಮಟ್ಟಿಗೆ ತಲುಪಿದ್ದೆವು.  ಫೆಬ್ರುವರಿ ೧೩ನೆಯ ತಾರೀಖು ಬೆಳಗಿನ ಜಾವ ೩ ಗಂಟೆಗೆ ಜಂಗಮ ದೂರವಾಣಿ ಹಾಡಲಾರಂಭಿಸಿದಾಗ, ಆಗ ತಾನೆ ಇನ್ನೂ ನಿದ್ದೆಯ ಮಂಪರು ಶುರುವಾಗಿತ್ತು.  ದಡಬಡಿಸಿ ಎದ್ದು ಹೊರಟೆವು.  ಎಲ್ಲಾ ತರಹದ ತಡೆಗಳನ್ನೂ ಯಶಸ್ವಿಯಾಗಿ ದಾಟಿ ನಾವು ವಿಮಾನ ನಿಲ್ದಾಣದಲ್ಲಿ ಮಹಡಿಯ ಮೇಲೆ ನಿಂತಿದ್ದೆವು.  ಅಲ್ಲಿಯೇ ತಿಂಡಿ ತಿಂದು, ಕಾಯುತ್ತಾ ಕುಳಿತೆವು.  ಬೆಳಗಿನ ೬ ಗಂಟೆಗೆ ವಿಮಾನವೇರಲು ಕರೆ ಬಂದಿತು.  ಏರುವಾಗ ತಿಳಿಯಿತು ನಮ್ಮ ಟಿಕೇಟುಗಳನ್ನು ಜನೂ ಮೇಲ್ದರ್ಜೆಗೆ ವರ್ಗಾಯಿಸಿದ್ದಾರೆ ಎಂದು.  ಮೊದಲನೆಯ ಸಾಲಿನಲ್ಲಿಯೇ ಕಾಯ್ದಿರಿಸಲಾಗಿದ್ದ ಜಾಗದಲ್ಲಿ ಕುಳಿತಾಗ ಮುಂದೆ ಯಾರೂ ಕುಳಿತಿಲ್ಲದೆ, ಕಾಲುಗಳನ್ನು ಉದ್ದವಾಗಿ ನೀಟಿಕೊಳ್ಳಲು ಜಾಗವಿರುವುದು ಖುಷಿಯಾಯಿತು.  ಎಲ್ಲಾ ತಪಾಸಣೆಗಳೂ, ನಿರ್ದೇಶನಗಳೂ ಮುಗಿದು, ಕೊನೆಗೂ ವಿಮಾನ ಮೇಲಕ್ಕೇರಿತು.  ನೆಮ್ಮದಿಯ ನಿದ್ದೆಗೆ ಜಾರಿದ್ದೆ.  ಆದರೆ ಎಲ್ಲಿ ನೆಮ್ಮದಿ..? ಸ್ವಲ್ಪ ಹೊತ್ತಿನಲ್ಲೇ ಬೆಳಗಿನ ಉಪಹಾರಕ್ಕೆಂದು ಕರೆದು ಎಬ್ಬಿಸಲಾಯಿತು.   ಹೇಗೋ ಕುಳಿತೂ ಕುಳಿತೂ ಬೇಸರವಾಗುವ ಹೊತ್ತಿಗೆ ನಾವು ಲಂಡನ್ ತಲುಪಿದ್ದೆವು.  ೧೧ ಘಂಟೆಗಳ ಕಾಲ ಸುಮ್ಮನೆ ಕೂರುವ ಪ್ರಥಮ ಹಂತದ ಶಿಕ್ಷೆ ಮುಗಿದಿತ್ತು.  ಹೀತ್ರೂ ವಿಮಾನ ನಿಲ್ದಾಣದ ವಿಷಯ ಅನೇಕರು ಅನೇಕ ರೀತಿಯಲ್ಲಿ ತಿಳಿಸಿ ನಮಗೆ ಒಂದು ತರಹದ ಆತಂಕ ಸೃಷ್ಟಿಯಾಗಿತ್ತು.  ಅತೀ ದೊಡ್ಡದಾದರೂ ಎಲ್ಲವೂ ಸಂಪೂರ್ಣವಾಗಿ ಮಾಹಿತಿ ಭರಿತ ನಿಲ್ದಾಣವಾಗಿದೆ.  ಮುಂದಕ್ಕೆ ಪಯಣಿಸಬೇಕಾಗಿರುವವರು ಯಾವ ಸಾಲಿನಲ್ಲಿ ಹೋಗಬೇಕು ಎಂಬ ವಿವರಗಳು ಹೆಜ್ಜೆ ಹೆಜ್ಜೆಗೂ ತುಂಬಿವೆ.  ನಮಗೆ ಫೀನಿಕ್ಸ್ ವಿಮಾನವನ್ನು ಏರಲು ಕೇವಲ ೨ ಘಂಟೆಗಳ ಸಮಯವಿತ್ತು.  ಆತಂಕದಿಂದಲೇ ನಮ್ಮ ಸಾಮಾನಿನ ಗಾಡಿಯನ್ನು ತಳ್ಳುತ್ತಾ, ಫಲಕಗಳನ್ನು ಓದಿಕೊಳ್ಳುತ್ತಾ ಒಂದೇ ಉಸಿರಿಗೆ ಓಡಿದಂತೆ ನಡೆಯಲಾರಂಭಿಸಿದೆವು.  ಸುಮಾರು ಅರ್ಧ ಘಂಟೆ ಹಾಗೆ ನಡೆದು,  ಚಲಿಸುವ ಸೋಪಾನಗಳ  ಸಹಾಯದಿಂದ ಹತ್ತಿ, ಇಳಿದು, ನಡೆದು ಸುಸ್ತಾಗುವ ಹೊತ್ತಿಗೆ  ಒಂದು ಬಾಗಿಲ ಹತ್ತಿರ ಬಂದಿದ್ದೆವು.  ಅಲ್ಲಿ ಐದು ನಿಮಿಷಗಳು ಕಾಯುವಷ್ಟರಲ್ಲಿ ದೊಡ್ಡದೊಂದು  ಬಸ್ ಬಂದಿತು.  ಅದರ ಚಾಲಕ ಇಳಿದು ಬಂದು ತಾನು ಕತ್ತಿನಲ್ಲಿ ಧರಿಸಿದ್ದ ಉದ್ದನೆಯ ಹಗ್ಗದ ಕೊನೆಗೆ ತೂಗಾಡುತ್ತಿದ್ದ ತನ್ನ ಗುರುತಿನ ಚೀಟಿಯನ್ನು ಬಾಗಿಲಿನ ಹೊರಗಡೆ ಇದ್ದ ಬೀಗಕ್ಕೆ ತೋರಿಸಿದಾಗ, ಬಾಗಿಲು ತೆರೆದುಕೊಂಡಿತು.  ನಾವು ಆ ಬಸ್ಸಿನಲ್ಲಿ ಹತ್ತಿಕೊಂಡು ಅಲ್ಲಿಂದ ಹೊರಟೆವು.  ಬಸ್ಸು ಕೂಡ ಅನೇಕ ಕಡೆ ತಿರುಗುತ್ತಾ ಸುರಂಗದಲ್ಲೆಲ್ಲಾ ಚಲಿಸುತ್ತಾ ಸುಮಾರು ೧೫ ನಿಮಿಷಗಳ ನಂತರ ಒಂದು ಕಡೆ ನಿಂತಾಗ ನಾವು ಇಳಿದು ಮತ್ತೆ ಸ್ವಲ್ಪ ದೂರ ಒಳಗಡೆಗೆ ನಡೆದು ಹೋದೆವು.  ಕೊನೆಗೂ ನಾವು ನಮ್ಮ ಪ್ರಯಾಣ ಮುಂದುವರೆಸಬೇಕಾಗಿದ್ದ ಫೀನಿಕ್ಸ್ ವಿಮಾನ ಏರುವ ಮುಂಚೆ ಆಗುವ ತಪಾಸಣೆಯ ಜಾಗಕ್ಕೆ ಬಂದಿದ್ದೆವು.  ಭದ್ರತಾ ತಪಾಸಣೆಯಲ್ಲಿ ಕೈಯಲ್ಲಿರುವ ಬಳೆಗಳು, ಗಡಿಯಾರ, ಉಂಗುರ ಎಲ್ಲವನ್ನೂ ತೆಗೆದು ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಇಡಬೇಕು.  ಚಪ್ಪಲಿ ಕಳಚಿ ಇನ್ನೊಂದು ಬುಟ್ಟಿಯಲ್ಲಿಡಬೇಕು.  ಇಷ್ಟೆಲ್ಲಾ ಸಂಭ್ರಮದಲ್ಲಿ ನಮ್ಮ ಬ್ಯಾಗ್, ಅದರಲ್ಲಿನ ಜಂಗಮ ದೂರವಾಣಿ, ಇನ್ನೂ ಏನೇನು ಎಲೆಕ್ಟ್ರಾನಿಕ್ಸ್ ವಸ್ತುಗಳು ಇವೆಯೋ ಅವೆಲ್ಲವನ್ನೂ ಬಿಡಿಬಿಡಿಯಾಗಿ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಟ್ಟಂತೆ ಇಟ್ಟು, ನಮ್ಮ ದೈಹಿಕ ತಪಾಸಣೆಗೆ ಸಾಲಿನಲ್ಲಿ ನಿಲ್ಲಬೇಕು.  ಎಲ್ಲವೂ ಮುಗಿಯುವ ಹೊತ್ತಿಗೆ ನಿಜಕ್ಕೂ ಸುಸ್ತಾಗಿಬಿಡುವುದು.  ನಂತರ ಅಲ್ಲಿ ಸುಮಾರು ಅರ್ಧ ಘಂಟೆ ಕುಳಿತ ನಂತರ  ವಿಮಾನ ಏರುವ ಪ್ರಕ್ರಿಯೆ ಪ್ರಾರಂಭವಾಯಿತು.  ಯಾವ ಯಾವ ಸಾಲಿನ ಸಂಖ್ಯೆಗಳು ಘೋಷಣೆ ಆಗುವುದೋ ಆ ಸಾಲಿನವರು ಹೋಗಲು ಪ್ರಾರಂಭಿಸಿದರು.  ಇಷ್ಟು ಹೊತ್ತಿಗೆ ಸಾಕಷ್ಟು ದಣಿದಿದ್ದ ನಾವು ನಮ್ಮ ಸರತಿ ಬಂದಾಗ ವಿಮಾನವೇರಿ ಕುಳಿತೆವು.  ಮತ್ತೆ ೧೧ - ೧೨ ಘಂಟೆಗಳ ದೀರ್ಘ ಪ್ರಯಾಣ.  ಮಾಡಲು ಏನೂ ಇಲ್ಲದೇ ಸುಮ್ಮನೆ ಕೂಡಿಸಿದರೂ ನಾವು ನೆಮ್ಮದಿಯಾಗಿ ಇರಲಾರೆವೆಂಬ ಅನುಭವವಾಯಿತು.  ಒಂದೇ ಸಮನೆ ಅಲ್ಲಾಡಲೂ ಜಾಗವಿರದೆ ಕುರ್ಚಿಯ ಪಟ್ಟಿಯನ್ನು ಬಿಗಿದುಕೊಂಡು ಕುಳಿತಿರುವುದು ಕೂಡ ಒಂದು ರೀತಿಯ ಶಿಕ್ಷೆ ಎಂಬುದು ಅರಿವಾಯಿತು.  ಸ್ವಲ್ಪ ನಿದ್ದೆ, ಸ್ವಲ್ಪ ಎಚ್ಚರ ಹೀಗೆ ಸಮಯ ಕಳೆದಾಗ ಫೀನಿಕ್ಸ್ ಹತ್ತಿರ ಬಂದಿದ್ದೆವು.  ಸಾಯಂಕಾರ ಸೂರ್ಯ ಅಸ್ತಮಿಸಲು ಸಜ್ಜಾಗಿರುವ ಸಮಯದಲ್ಲಿ ವಿಮಾನ ಪ್ರಯಾಣ ಅತ್ಯಂತ ರೋಮಾಂಚನಕರವಾಗಿರುತ್ತದೆ.  ಕೆಂಪು, ಹಳದಿ, ಹಸಿರು, ನೀಲಿ ಎಂಬ ಬಣ್ಣಗಳ ಮಿಶ್ರಣದಲ್ಲಿ ಬಂಗಾರದ ತಟ್ಟೆಯಂತೆ ಕಂಗೊಳಿಸುವ ಸೂರ್ಯ ನಮ್ಮನ್ನು ಬೇರೆಯೇ ಲೋಕಕ್ಕೆ ಸೆಳೆದೊಯ್ಯುತ್ತಾನೆ.  



ಫೀನಿಕ್ಸ್ ನ ಬೆಟ್ಟ ಗುಡ್ಡಗಳು, ಕೆಲವು ಎತ್ತರದ ಕಟ್ಟಡಗಳು ಎಂದು ನೋಡುತ್ತಾ ನೋಡುತ್ತಾ ನಾವು ಇಳಿಯುವ ಸಮಯವಾಯಿತು.  ಕೊನೆಗೂ ದೀ....ರ್ಘ ಪ್ರಯಾಣ ಮುಗಿಯುವ ನೆಮ್ಮದಿ ಸಿಕ್ಕಹಾಗಾಯಿತು.  ಅಂತೂ ಇಂತೂ ನಾವು ಶನಿವಾರ  ಬೆಳಗ್ಗೆ ೭ ಘಂಟೆಗೆ ಇಲ್ಲಿಂದ ಹೊರಟು ಶನಿವಾರ ಸಾಯಂಕಾಲ ೭.೧೫ಕ್ಕೆ ಫೀನಿಕ್ಸ್ ತಲುಪಿದೆವು.  ಫೀನಿಕ್ಸ್ ಸಮಯ ನಮ್ಮ ಸಮಯಕ್ಕಿಂತ ಅಂದಾಜು ೧೧.೩೦ ಘಂಟೆಗಳಷ್ಟು ಹಿಂದಿದೆ.  ನಾವು ಪಯಣಿಸುವಾಗ ನಮಗೆ ೧೨ ಘಂಟೆಗಳ ಕಾಲದಷ್ಟು ಸಮಯ ಲಾಭವಾಗಿತ್ತು.  ಹಾಗಾಗಿ ನಾವು ಶನಿವಾರ ಹೊರಟು ಅಲ್ಲಿ ಶನಿವಾರವೇ ತಲುಪಿದ್ದೆವು.    ಫೀನಿಕ್ಸ್ ಸುಂದರವಾದ ಪ್ರದೇಶ.  ತುಂಬಾ ಆಸಕ್ತಿಯಿಂದ ಕಟ್ಟಲ್ಪಟ್ಟಿರುವ ಜಾಗ.  ಪ್ರತಿಯೊಂದು ರಸ್ತೆಗಳೂ ನಯವಾಗಿ, ಅಗಲವಾಗಿ, ಜಾರುವಂತೆ ಸಾಗುತ್ತಿರುವಾಗ ರಸ್ತೆಗಳ ಅಕ್ಕ ಪಕ್ಕದ ಗೋಡೆಗಳಲ್ಲಿ ಮರುಭೂಮಿಯಲ್ಲಿ ವಾಸಿಸುವಂತಹ ಪ್ರಾಣಿಗಳ ಚಿತ್ರಗಳು, ನಮ್ಮ ಜೊತೆಗೇ ಪ್ರಯಾಣಿಸುತ್ತಿರುವುವೋ ಎಂಬ ಭಾವನೆ ಕೊಡುವಂತಿರುವುದು.  ಗೋಡೆಯಿಂದ ರಸ್ತೆಯ ಕಡೆಗೆ ಇಳಿಜಾರು ಪ್ರದೇಶವನ್ನಾಗಿ ಮಾಡಿ, ಪುಟ್ಟ ಪುಟ್ಟ ಪಾತಿಗಳಲ್ಲಿ ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳನ್ನು ಬೆಳೆಸಿರುವರು.  ನಾವು ಅಲ್ಲಿದ್ದ ಸಮಯ ಚಳಿ ಮುಗಿದು, ಬೇಸಿಗೆ ಕಾಲ ಪ್ರಾರಂಭವಾಗುವ ಮೊದಲ ಸಂಧಿಯ ಸಮಯವಾಗಿತ್ತು.  ಎಳೆ ಬಿಸಿಲಿನ ಸಂಪರ್ಕದಿಂದಾಗಿ ಗಿಡಗಳು ಚಿಗುರಿ, ಹಸಿರು ಬಣ್ಣಗಳಲ್ಲೇ, ನಾನಾ ವಿಧದ ರಂಗುಗಳನ್ನು ಸೃಷ್ಟಿಸಿರುವುದು.  ಮಂದ ಕೆಂಪು ಬಣ್ಣವು  ಪ್ರಧಾನವಾಗಿ ಬಳಸಲ್ಪಟ್ಟು, ಮರಳು ಹಾಗೂ ಸಣ್ಣ ಸಣ್ಣ ನುಣ್ಣನೆಯ ಕಲ್ಲುಗಳ ರಾಶಿಯ ಹಿಂಭಾಗದಲ್ಲಿ ನಾವಿರುವುದು ಮರುಭೂಮಿ ಪ್ರದೇಶ ಎನ್ನುವುದನ್ನು ನೆನಪಿಸುವಂತಿರುವುದು.

ರಸ್ತೆಗಳಲ್ಲಿ  ದೊಡ್ಡ ದೊಡ್ಡ ಫಲಕಗಳ ಮೂಲಕ ಯಾವ ರಸ್ತೆ ಎಲ್ಲಿಗೆ, ಯಾವ ದಿಕ್ಕಿಗೆ, ಯಾವ ಮುಖ್ಯ ರಸ್ತೆಗೆ ಕೊಂಡಿ ಕೊಡುವುದು, ಎಷ್ಟು ದೂರದಲ್ಲಿ ಮುಖ್ಯ ರಸ್ತೆ ಇದೆ ಎನ್ನುವುದನ್ನೆಲ್ಲಾ ತಿಳಿಸಲಾಗಿದೆ.  ಬೋಗನ್ವಿಲ್ಲಾ ಹೂವಿನಂತಹ ಅನೇಕ ಬಣ್ಣಗಳ ಹೂ ಗಿಡಗಳು ರಸ್ತೆಗಳ ಮಧ್ಯದಲ್ಲಿಯೂ ಎರಡೂ ಪಕ್ಕಗಳಲ್ಲಿಯೂ ಸುಂದರವಾಗಿ ಅರಳಿಕೊಂಡು ನಮ್ಮೂರ ವಸಂತ ಮಾಸವನ್ನು ನೆನಪಿಸುತ್ತಿರುವಂತಿವೆ....  



ಕಣ್ಣು ಹಾಯಿಸಿದಷ್ಟೂ ದೂರ ಸಾಗುವ ರಸ್ತೆಗಳು ದೂರದಲ್ಲಿ ಹೆಚ್ಚೇನೂ ಎತ್ತರವಿಲ್ಲವೇನೋ ಎಂಬಂತಿರುವ ಕೆಂಪು, ಕಪ್ಪು ಮಿಶ್ರಿತ ಮಣ್ಣಿನ ಗುಡ್ಡಗಳು, ಚೊಕ್ಕವಾದ ಆಗಸ, ಶುಭ್ರವಾದ ಬೆಳಕು ಎಲ್ಲವೂ ನಮ್ಮ ರಾಷ್ಟ್ರಕವಿ ಕುವೆಂಪು ಅವರ  "ದೂರ ಬಹುದೂರ ಹೋಗುವ ಬಾರಾ...." ಎಂಬ ಒಂದು ಕವನವನ್ನು ನೆನಪಿಸುವುದು.  ದಿವಂಗತ ಮೈಸೂರು ಅನಂತಸ್ವಾಮಿಯವರು ಸಂಗೀತ ನಿರ್ದೇಶನ ಮಾಡಿರುವ ಹಾಡಿನ ಕೊಂಡಿ https://www.youtube.com/watch?v=j9Fnzd6kVcw ....  ಈಗ ತಾನೆ ಚುರುಕಾಗುತ್ತಿರುವ ಬಿಸಿಲಿಗೆ ಮಂಜೆಲ್ಲಾ ಕರಗಿ ಗುಡ್ಡಗಳು ತಮ್ಮ ನಿಜ ಸ್ವರೂಪ ಅನಾವರಣಗೊಳಿಸುತ್ತಿವೆ.  ಶಿರದಲ್ಲಿ ಮಾತ್ರ ಸ್ವಲ್ಪ ಸ್ವಲ್ಪ ಹಿಮದ ಟೊಪ್ಪಿಗೆಯನ್ನಿಟ್ಟುಕೊಂಡು ನೋಡುಗರನ್ನು ಆಕರ್ಷಿಸುತ್ತಿರುವಂತಿವೆ.



ಚಿತ್ರಕೃಪೆ : ಶ್ರೀ ಜನಾರ್ದನನ್

Friday, April 15, 2016

ಶ್ರೀರಾಮ ನವಮಿ...


ಮತ್ತೆ ಯುಗಾದಿ ಬಂದಾಯಿತು.  ಹೊಸ ವರುಷ "ದುರ್ಮುಖ" ನಾಮದ ಸಂವತ್ಸರ ಪ್ರಾರಂಭವಾಗಿದೆ.  ವಸಂತ ಋತುವಿನ ಚೈತ್ರ ಮಾಸದ ಮೊದಲ ದಿನದಿಂದಲೇ ಎಲ್ಲರ ಮನದಲ್ಲಿ ಒಂದು ಹೊಸ ಹುರುಪು, ಸಂಭ್ರಮ ಅರಳುವುದು.  ಪಾಡ್ಯದಿಂದಲೇ ಕಾತುರದಿಂದ ಎದುರು ನೋಡುವ ದಿನವೇ ’ನವಮಿ’ಯಾಗಿದೆ.  ನವಮಿ ದಿನ ಬಂದೀತೇ, ರಾಮ ಬಂದಾನೇ ಎನ್ನುವ ಸುಖ-ಸಂಭ್ರಮ ಮಿಶ್ರಿತ ಕಾತುರ  ದಿನಗಳನ್ನೂ, ಕ್ಷಣಗಳನ್ನೂ, ಘಳಿಗೆಗಳನ್ನೂ ಎಣಿಸುವಂತೆ ಮಾಡುವುದು.

ವಸಂತ ಋತುವಿನ ರಾಜನ ಆಗಮನಕ್ಕಾಗಿ ವಸುಂದರೆಯು ತನ್ನ ಹಳೆಯ ಎಲೆಗಳನ್ನುದುರಿಸಿ, ಮೈ ಕೊಡವಿಕೊಂಡು ಹಸಿರು ಹೊದೆಯುತ್ತಾಳೆ.  ಹೂ ಮುಡಿದು ಚಿಕ್ಕ-ಪುಟ್ಟ-ದೊಡ್ಡ ಮಕ್ಕಳನ್ನು ಮಡಿಲ ತುಂಬಾ ತುಂಬಿಸಿಕೊಂಡು ಕಾಯುವಳು.  ನವಮಿ ದಿನದಲ್ಲಿ ರಾಮನ ಆಗಮನಕ್ಕಾಗಿ ಅವನಿದೇವಿ ಸಿಂಗರಿಕೊಳ್ಳುವಳು.  ನವವಧುವಿನಂತೆ ಆಕರ್ಷಕವಾಗಿ ಅಲಂಕರಿಸಿಕೊಂಡಿರುವ ಅವನಿ ದೇವಿಯ ಚೆಲುವಿಗೆ ಸೊಬಗನ್ನು ತರುವವನು, ನವಮಿ ದಿನದಲ್ಲಿ ಧರೆಗಿಳಿಯುವ ಶ್ರೀರಾಮಚಂದ್ರನಾಗಿರುವನು.  ಯುಗಾದಿಯ ದಿನದಿಂದಲೇ ಮನೆಮನೆಗಳಲ್ಲೂ ಪ್ರಾರಂಭವಾಗುವ ಸಂಭ್ರಮ, ಉತ್ಸಾಹ ನವಮಿ ದಿನದಂದು ಶ್ರೀರಾಮನ ಆಗಮನದ ಸಂಕೇತವಾದ ಆಚರಣೆಯಾಗುವುದು.  ರಾಮನ ಆಗಮನ ಕವಿ ಮನಸ್ಸಿನಲ್ಲಿ ಹೊಸಹೊಸ ಕವಿತೆಯ ಸಾಲುಗಳನ್ನು ಮೂಡಿಸುವುದು.  ಶ್ರೀರಾಮನ ಆಗಮನವನ್ನು ಕವಿಯೊಬ್ಬರು ಅತೀ ಸುಂದರವಾಗಿ ಬಿಚ್ಚಿದ ಕುಸುಮದ ಒಂದೊಂದು ಎಸಳಿನಲ್ಲೂ, ಹಚ್ಚ ಹಸಿರು ಬಣ್ಣ ಹೊದ್ದಿರುವ, ಆಗತಾನೆ ಚಿಗುರಿರುವ ಎಳಸಾದ ಎಲೆಎಲೆಯಲ್ಲೂ ಚೆಲುವಿಕೆಯನ್ನು ತುಂಬಿಸುತ್ತಾ ರಾಮನು ಬರುವನೆಂದು ವರ್ಣಿಸುವರು.    ನಲಿನಲಿದು ಉಲಿಯುವ ಇಂಪು ಗಾನವು ಮಂದಮಂದವಾಗಿ ಬರುವ ಮರುತನ ತಂಪಾದ ಸ್ಪರ್ಶವು, ಮಂದ್ರ ರಾಗದಲ್ಲಿ ಭಾವದ  ಅಲೆಗಳನ್ನೆಬ್ಬಿಸುವುದು ಎಂದಿದ್ದಾರೆ.  ವಸುಂಧರೆಯ ಸೊಬಗನ್ನೂ ಸೌಂದರ್ಯವನ್ನೂ ವರ್ಣಿಸುತ್ತಾ ಹಸಿರು ಶಾಲನ್ನು ಹರಡಿಕೊಂಡಿರುವಳು, ತನ್ನ ಗೆಳೆಯನಾದ ಗಗನವು ತಿಳಿ ನೀಲಿ ಬಣ್ಣದ ಸ್ವಚ್ಛ ಹೊದಿಕೆಯನ್ನು ಹೊದ್ದಿರುವ ಸಮಯದಲ್ಲಿ, ತಂಪು ತರುವ ಮಳೆಯ ಮೇಘವು ಬಾನಂಗಳವನ್ನು ಪ್ರೇಮದಿಂದ ಚುಂಬಿಸಿದಾಗ, ರಾಮ ಬರುವನು, ’ಅವನಿ’ಗೆ ಚೆಲುವನ್ನು ತರುವನು ಎಂದಿದ್ದಾರೆ.  ಕೊನೆಯ ಚರಣದಲ್ಲಿ ಗಿರಿಯ ಸಾಲುಗಳ ನಡುವೆ ಹರಿಯುವ ತೊರೆಯೂ ಕೂಡ ಮುದಗೊಂಡು ಬಳುಕುತ್ತಾ, ಹರುಷ ಉಕ್ಕಿಸುತ್ತಾ, ವಸುಂಧರೆಯ ಒಡಲಿನ ತುಂಬೆಲ್ಲಾ ಬಿಡದೇ ಬಳಸುತ್ತಾ ಹರಿಯುವ ಸಮಯದಲ್ಲಿ ಶ್ರೀರಾಮಚಂದ್ರನು ಧರೆಗಿಳಿಯುವನು ಎಂದಿದ್ದಾರೆ.  ಸಮಸ್ತ ಭೂಮಂಡಲವೇ ಹರುಷದಿಂದ, ಸಂಭ್ರಮದಿಂದ ನಲಿಯುತ್ತಾ ಭಗವಂತನು ರಾಮಚಂದ್ರನಾಗಿ ಬರುವ ಕಾಲವನ್ನು ಎದುರು ನೋಡುವುದೆಂಬ ಭಾವನೆಯಲ್ಲಿ ಮೈ ಮನಗಳನ್ನು ತೇಲಿಸುವ ಸಮಯವೇ ವಸಂತ ಋತು, ಚೈತ್ರ ಶುದ್ಧ ನವಮಿಯ ದಿನವಾಗಿದೆ.   ಸುಲಲಿತವಾದ ಸುಂದರ, ಸರಳ ಪದಗಳಿಂದ ಮೋಡಿ ಮಾಡುವ ಕವನದ ಸಾಲುಗಳು :

ನವಮಿ ದಿನದಲಿ ರಾಮ ಬಂದನು | ಅವನಿಗೆಲ್ಲಾ ಚೆಲುವ ತಂದನು...||

ಬಿಚ್ಚಿ ಕುಸುಮದ ಎಸಳು ಎಸಳಲಿ | ಹಚ್ಚ ಹಸುರಿನ ಚಿಗುರು ಎಲೆಯಲಿ |
ಸ್ವಚ್ಛ ತರುವಿನ ದಟ್ಟ ನೆರಳಲಿ | ಅವನಿಗೆಲ್ಲಾ ಚೆಲುವ ತಂದನು... ||

ನಲಿದು ಉಲಿಯುವ ಇಂಪು ಗಾನದಿ | ಮಂದ ಮರುತನ ತಂಪು ಸ್ಪರ್ಶದಿ |
ಮಂದ್ರ ರಾಗದ ಭಾವ ಅಲೆಯಲಿ | ಅವನಿಗೆಲ್ಲಾ ಚೆಲುವ ತಂದನು... ||

ಚಂದ್ರ ಶೀತಲ ತನುವು ಕೋಮಲ | ಸಾಂದ್ರ ಚೆಲುವಿಗೆ ಮೆರುಗು ಅಸದಳ |
ನಲಿದ ಭೃಂಗದ ಒಲವ ಒಸಗೆಲಿ | ಅವನಿಗೆಲ್ಲಾ ಚೆಲುವ ತಂದನು... ||

ಇಳೆಯು ಹರಡಿದ ಹಸಿರು ಶಾಲಿಗೆ | ಗೆಳೆಯ ಗಗನಕೆ ನೀಲ ಹೊದ್ದಿಕೆ |
ಮಳೆಯ ಮೇಘವು ಬಾನ ಚುಂಬಿಸೆ | ಅವನಿಗೆಲ್ಲಾ ಚೆಲುವ ತಂದನು... ||

ಗಿರಿಯ ಸಾಲಿನ ನಡುವೆ ಬಳುಕುತ | ತೊರೆಯು ಹರಿಯಿತು ಹರುಷ ಉಕ್ಕುತ |
ಧರೆಯ ಒಡಲನು ಬಿಡದೆ ಬಳಸುತ | ಅವನಿಗೆಲ್ಲಾ ಚೆಲುವ ತಂದನು... ||
(ಅನಂತರಾಜ್ ನಾಯಕ್)
https://soundcloud.com/shyamalarao/navamidinadali

ಅಯೋಧ್ಯೆಯ ಮಹಾರಾಜನಾದ ಇಕ್ಷ್ವಾಕು ವಂಶದ ದಶರಥನು ಪುತ್ರ ಸಂತಾನಕ್ಕಾಗಿ ಹಂಬಲಿಸುತ್ತಿರುವನು.  ಸಂತಾನಾಪೇಕ್ಷೆಯಿಂದ ಸಂಕಲ್ಪ ಮಾಡಿ ಅಶ್ವಮೇಧಯಾಗವನ್ನು ಮಾಡಬೇಕೆಂಬ ಆಲೋಚನೆಯು ಮನಸ್ಸಿನಲ್ಲಿ ಮೂಡಿದಾಗ ಮಂತ್ರಿಗಳಾದ ಸುಮಂತ್ರನ ಮೂಲಕ ತನ್ನ ಗುರುಗಳಾದ ವಸಿಷ್ಠರು ಹಾಗೂ ವಾಮದೇವಾದಿ ಪುರೋಹಿತರನ್ನು ಕರೆಸುವನು.  ಅಶ್ವಮೇಧಯಾಗವನ್ನು ಮಾಡುವುದೆಂದು ನಿಶ್ಚಯಿಸಲಾಗುವುದು.  ಸರ್ವ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಾ ದಶರಥ ಮಹಾರಾಜನು ವಸಿಷ್ಠರನ್ನು ಅಶ್ವಮೇಧ ಯಾಗವನ್ನು ಮಾಡಿಸುವಂತೆ ಪ್ರಾರ್ಥಿಸುವನು.  ವಸಿಷ್ಠರು ಭರದಿಂದ ಯಾಗವನ್ನು ಮಾಡಿಸುವರು.  ಇಷ್ಟರಿಂದಲೇ ಪುತ್ರೋತ್ಪತ್ತಿಯಾಗುವುದಿಲ್ಲವೆಂದೂ,  ಋಷ್ಯಶೃಂಗರ ವರಪ್ರಸಾದದಿಂದಲೇ ಅದು ನೆರವೇರಬೇಕೆಂದೂ ತಿಳಿದಿದ್ದ  ದಶರಥ ಮಹಾರಾಜನು ಋಷ್ಯಶೃಂಗರನ್ನು ಅನುಗ್ರಹಿಸಬೇಕೆಂದು ಕೇಳಿಕೊಳ್ಳುವನು.  ವಿಭಂಡಕ ಮಹರ್ಷಿಗಳ ಔರಸ ಪುತ್ರರಾದ ಋಷ್ಯಶೃಂಗರು ಸಂತೋಷದಿಂದಲೇ ದಶರಥ ಮಹಾರಾಜನಿಂದ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸುವರು.  ಯಜ್ಞ ಕುಂಡದಿಂದ ಆವಿರ್ಭವಿಸಿದ ಅತ್ಯಂತ ತೇಜೋಪೂರ್ಣನಾದ ಪ್ರಾಜಾಪತ್ಯ ಪುರುಷನಿಂದ ಪಡೆದ ಪಾಯಸದ ಸೇವನೆಯಿಂದ ದಶರಥ ಮಹಾರಾಜನ ಪತ್ನಿಯರಾದ ಕೌಸಲ್ಯ, ಸುಮಿತ್ರ ಹಾಗೂ ಕೈಕೇಯಿಯರಿಗೆ ನಾಲ್ವರು ಪುತ್ರರು ಜನಿಸುವರು. 

ದುಷ್ಟನಾದ ರಾವಣನ  ಸಂಹಾರಕ್ಕಾಗಿ ದೇವತೆಗಳ  ಪ್ರಾರ್ಥನೆಯನ್ನು  ಆಲಿಸಿ  ಭಗವಂತನು  ವೇದಿಕೆಯನ್ನು    ಸಿದ್ಧಪಡಿಸಿರುವನು.  ದೇವಾನು ದೇವತೆಗಳೆಲ್ಲರೂ ಸ್ವಾಮಿಯ ಲೀಲಾ ವಿನೋದದಲ್ಲಿ ಪಾಲ್ಗೊಳ್ಳಲು ಆಗಲೇ ಅನೇಕ ರೂಪಗಳಲ್ಲಿ ಭೂಮಿಯಲ್ಲಿ ಜನಿಸಿರುವರು.  ಭಗವಂತನು ಮಾನವ ರೂಪದಲ್ಲಿ ಶ್ರೀರಾಮನಾಗಿ ಅವತರಿಸಲು ವಸುಂಧರೆಯ ಸಹಿತ ಸಮಸ್ತ ದೇವತೆಗಳೂ ಸಿದ್ಧರಾಗಿರುವರು.  ಪರಮಾತ್ಮನ ಲೀಲೆಯಲ್ಲಿ ಕಿಂಚಿತ್ ಪಾತ್ರ ಧರಿಸುವ, ಸೇವೆ ಮಾಡುವ ಅವಕಾಶಕ್ಕಾಗಿ, ಕಾತುರ, ಸಂಭ್ರಮಗಳಿಂದ ಕಾಯುವರು. 

ಅಶ್ವಮೇಧ ಯಾಗ ಸಮಾಪ್ತಿಗೊಂಡು ಒಂದು ವರ್ಷದ ನಂತರ ಚೈತ್ರಮಾಸ, ಶುಕ್ಲನವಮಿಯ ದಿನದಂದು ಪುನರ್ವಸು ನಕ್ಷತ್ರದಲ್ಲಿ ರವಿ, ಕುಜ, ಶನಿ, ಗುರು ಮತ್ತು ಶುಕ್ರ ಎಂಬ ಐದು ಗ್ರಹಗಳು ಉಚ್ಚರಾಶಿಗಳಲ್ಲಿರುವಾಗ, ಕರ್ಕಾಟಕ ಲಗ್ನವು ಚಂದ್ರ - ಬೃಹಸ್ಪತಿಗಳೊಡನೆ ವಿಜೃಂಭಿಸುತ್ತಿರುವಾಗ, ಸರ್ವಲೋಕ ನಮಸೃತನಾದ ಭಗವಂತನು ಕೌಸಲ್ಯಾ ದೇವಿಯ ಗರ್ಭಸಂಜಾತನಾಗಿ ಅವತರಿಸುವನು.  ಭಗವಂತನ ಆಗಮನದ ಸೂಚಕವಾಗಿ ಪುಷ್ಪವೃಷ್ಟಿಯಾಗುವುದು, ಗಂಧರ್ವರು ಮಧುರಗಾಯನ ಮಾಡುವರು.  ಸಾಲಂಕೃತೆಯಾದ ವಸುಂಧರೆಯು ಕಂಗೊಳಿಸುವಳು.  ಇಕ್ಷ್ವಾಕು ವಂಶದ ಕುಲತಿಲಕನ ಉದಯವಾಗುವುದು.

ಸಂಗೀತ ಪ್ರಪಂಚದಲ್ಲಿ ಶ್ರೀರಾಮಚಂದ್ರನನ್ನು ಸ್ತುತಿಸುವ ಸಾವಿರಾರು ಕೃತಿಗಳಿವೆ.  ಪ್ರತಿಯೊಬ್ಬ ವಾಗ್ಗೇಯಕಾರರೂ ಶ್ರೀರಾಮಚಂದ್ರನ ಕುರಿತಾದ ಕೃತಿಗಳನ್ನು ರಚಿಸಿದ್ದಾರೆ.  ಶ್ರೀರಾಮನು ಎಲ್ಲರಿಗೂ ಇಷ್ಟದೈವ ಹಾಗೂ ಆರಾಧ್ಯದೈವನಾಗಿರುವನು.  ರಾಮನ ಬಾಲ್ಯವನ್ನು ವರ್ಣಿಸುವ, ಷೋಡಶೋಪಚಾರಗಳನ್ನು ಮಾಡುವ, ಲಾಲಿ ಹಾಡಿ ಶಯನೋತ್ಸವವನ್ನು ಮಾಡಿಸುವಂತಹ ಮಧುರವಾದ ರಚನೆಗಳನ್ನು ರಚಿಸಲಾಗಿದೆ.  ಶ್ರೀ ಪ್ರಯಾಗ ರಂಗದಾಸ ಎಂಬ ರಚನೆಕಾರರು (ಇವರು ಶ್ರೀ ಎಂ ಬಾಲಮುರಳೀಕೃಷ್ಣ ರವರ ತಾತಯ್ಯನವರು) ತೆಲುಗಿನಲ್ಲಿ ಸುಂದರವಾದ ರಚನೆಯನ್ನು ಮಾಡಿದ್ದಾರೆ.  "ರಾಮುಡುದ್ಭವಿಂಚಿನಾಡು ರಘುಕುಲಂಬುನಾ" ಎಂಬ ಕೃತಿಯಲ್ಲಿ ತಾಮಸರನ್ನು ನಿಗ್ರಹಿಸಿ ಸ್ತೋಮ ಜನರ ಕ್ಷೇಮಾಭಿವೃದ್ಧಿಗಾಗಿ ರಘುಕುಲದಲ್ಲಿ ಕೋಮಲೆಯಾದ ಕೌಸಲ್ಯೆಯಲ್ಲಿ ಶ್ರೀರಾಮನು ಉದ್ಭವಿಸಿರುವನು ಎನ್ನುತ್ತಾರೆ.  ಮುಂದುವರೆಯುತ್ತಾ ವಸುಮತಿಯ ದುರ್ಭರವನ್ನು ಕಡಿಮೆಗೊಳಿಸಲು ರಾಮನು ಉದ್ಭವಿಸಿರುವನು ಎಂದಿದ್ದಾರೆ.  ಕಿಲಕಿಲನೆ ನಗುತ್ತಾ ಆಣಿಮುತ್ತಿನಂತಹ ಮುದ್ದು ಕುವರನು ಮಿಂಚಿನ ಕಾಂತಿಯಿಂದ ಮಿನುಗುತ್ತಾ ರಾಮನು ಉದ್ಭವಿಸಿರುವನು, ಭಕ್ತಾಗ್ರೇಸರರು ಕೋರಿದ ವರಗಳನ್ನೆಲ್ಲಾ ಕೊಡುವುದಕ್ಕಾಗಿ ರಾಮನು ಉದ್ಭವಿಸಿರುವನು ಎನ್ನುತ್ತಾ ಶ್ರೀರಾಮಚಂದ್ರನ ಆಗಮನವನ್ನು ಸರಳ ಹಾಗೂ ಸುಂದರವಾಗಿ ವಿವರಿಸುತ್ತಾರೆ.

ಎಲ್ಲರಿಗೂ ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು..




ಚಿ ತ್ರ ಕೃ ಪೆ  : ಅಂ ತ ರ್ಜಾ ಲ
http://ananthadimdigantha.blogspot.in/2012/03/blog-post_22.html
 https://soundcloud.com/shyamalarao/navamidinadali

Sunday, September 6, 2015

ಶ್ರೀಕೃಷ್ಣನ ಲೀಲೆಗಳು - ನಲಕೂಬ ಮತ್ತು ಮಣಿಗ್ರೀವರ ಶಾಪ ವಿಮೋಚನೆ

ಭಗವಂತನಾದ ಶ್ರೀಕೃಷ್ಣನ ಬಾಲ್ಯ ಲೀಲೆಗಳು ಅತ್ಯಂತ ರೋಚಕವೆನಿಸುವುದು.  ತನ್ನ ಲೀಲಾ ವಿನೋದಗಳ ಮೂಲಕ ಸಮಸ್ತ ಜೀವಿಗಳನ್ನೂ ತನ್ನತ್ತ ಕರ್ಷಿಸುವ ಕೃಷ್ಣ ಒಂದು ಸುಂದರವಾದ ಭಾವ.  ಪುಟ್ಟ ಶಿಶುವಾಗಿ ತನ್ನ ತುಂಟಾಟಗಳನ್ನು ಪ್ರದರ್ಶಿಸುತ್ತಾ, ಅನೇಕ ದುಷ್ಟ ದಾನವರನ್ನು ಸಂಹರಿಸುತ್ತಾನೆ.  ಶಾಪಗ್ರಸ್ತರಾದ ದೇವ, ಗಂಧರ್ವರನ್ನು ಉದ್ಧರಿಸುತ್ತಾನೆ.  ಭಾಗವತದ ದಶಮಸ್ಕಂಧದಲ್ಲಿ ಮುದ್ದು ಕೃಷ್ಣನ ಇಂತಹ ತುಂಟಾಟಗಳ ದೃಷ್ಟಾಂತಗಳೂ, ವಿವರಣೆಗಳೂ ವರ್ಣರಂಜಿತವಾಗಿ ವಿವರಿಸಲ್ಪಟ್ಟಿವೆ.  ಕೃಷ್ಣನು ಕೇವಲ ಭಕ್ತರನ್ನು ಮಾತ್ರ ಸೆಳೆಯುವವನಲ್ಲ.  ಪ್ರತೀ ಜೀವಿಯನ್ನೂ ತನ್ನತ್ತ ಸೆಳೆಯುವಂತಹ ಅದ್ಭುತ ಶಕ್ತಿ.  ಬಾಲ ಕೃಷ್ಣನ ಆಟಗಳ ರಂಜನೀಯ ಕಥೆಗಳನ್ನು ಕೇಳುತ್ತಾ, ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿನಲ್ಲಿ ಕೃಷ್ಣನನ್ನೇ ಕಾಣುವಳು.  ಕೇಳುವ ತಾಯಿಯರಿಗೇ ಇಷ್ಟು ಮುದ್ದು ಬರಿಸುವ ಪುಟ್ಟ ಕೃಷ್ಣ ತನ್ನ ತಾಯಿ ಯಶೋದೆಗೆ ಅದಿನ್ನೆಷ್ಟು ಪ್ರಿಯನಾಗಿರುವನೆಂಬುದು ನಮ್ಮ ಊಹೆಗೂ ನಿಲುಕದ ಭಾವವಾಗುವುದು. 

ಒಮ್ಮೆ ಯಶೋದೆಯು ಶ್ರೀಕೃಷ್ಣನ ಬಾಲಲೀಲೆಗಳನ್ನು ಹೇಳುತ್ತಾ ಮೊಸರು ಕಡೆಯುತ್ತಾ ಕುಳಿತಿರುವಳು.   ಪುಟ್ಟ ಕೃಷ್ಣನು ತಾಯಿಯ ಸ್ತನ್ಯಪಾನ ಮಾಡಬೇಕೆಂಬ ಇಚ್ಛೆಯಿಂದ, ಆ ತಾಯಿಯ ಹೃದಯದಲ್ಲಿ ಮಾತೃಪ್ರೇಮವನ್ನು ಉಕ್ಕಿಸುವಂತೆ, ಮೋಹಕ ನಗು ನಗುತ್ತಾ ಬರುವನು.  ಮುದ್ದು ಮುಖದ ಕಂದನ ಮುಖವನ್ನೇ ನೋಡುತ್ತಾ ಮೈಮರೆತಿದ್ದ ಯಶೋದೆಗೆ ಒಲೆಯ ಮೇಲೆ ಕಾಯಿಸಲಿಟ್ಟಿದ್ದ ಹಾಲುಕ್ಕಿ ವಾಸನೆಯು ಬಂದಾಗ, ಮಗುವನ್ನು ಕೆಳಗಿಳಿಸಿ, ಒಳಗೆ ಹೊರಟು ಹೋಗುವಳು.  ತಾಯಿಯ ಮಡಿಲಿನಿಂದ ಕೆಳಗಿಳಿಸಲ್ಪಟ್ಟ ಮಗುವಿಗೆ ಕೋಪ ಬರುವುದು.  ಹತ್ತಿರದಲ್ಲಿಯೇ ಇದ್ದ ಮೊಸರಿನ ಮಡಿಕೆಯನ್ನು ಒಡೆದು, ಕಳ್ಳ ಅಳು ಅಳುತ್ತಾ, ಅಬ್ಬರ ಮಾಡುವನು.  ತಾಯಿ ಬಾರದಿರುವುದರಿಂದ ಮೆಲ್ಲಗೆ ಒಳಮನೆಗೆ ನುಸುಳಿ ಬೆಣ್ಣೆಯನ್ನು ತಿನ್ನಲಾರಂಭಿಸುವನು.  ಹೊರಗೆ ಬಂದ ಯಶೋದೆ ಗಡಿಗೆ ಒಡೆದು, ಮೊಸರು ಚೆಲ್ಲಿರುವುದನ್ನು ಕಂಡು, ಕೃಷ್ಣನ ತುಂಟಾಟದಿಂದ ಹುಸಿನಗುತ್ತಾ ಮಗುವನ್ನು ಹುಡುಕುವಳು.  ಇನ್ನೊಂದು ಕೊಠಡಿಯಲ್ಲಿ  ಶಬ್ದವೇ ಇಲ್ಲದಂತೆ ಮೌನವಾಗಿ ಪುಟ್ಟ ಕೃಷ್ಣನು ಬೆಣ್ಣೆ ಮೆಲ್ಲುತ್ತಾ ನಿಂತಿರುವನು.  ಅಲ್ಲಿದ್ದ ಒರಳು ಕಲ್ಲನ್ನು ಬೋರಲು ಹಾಕಿ ಅದರ ಮೇಲೆ ಹತ್ತಿ ನಿಂತು ಬೆಣ್ಣೆಯನ್ನು ಎಟುಕಿಸಿಕೊಂಡು, ತಾನು ತಿನ್ನುವುದಲ್ಲದೇ ಸುತ್ತಲೂ ನಿಂತಿದ್ದ ಕೋತಿಗಳಿಗೂ ಯಥೇಚ್ಛವಾಗಿ ತಿನ್ನಿಸುತ್ತಿರುವನು.  ತಾಯಿ ಕೈಯಲ್ಲಿ ಕೋಲು ಹಿಡಿದುಕೊಂಡು, ತನ್ನ ಕಡೆಯೇ ಬರುತ್ತಿರುವುದನ್ನು ಕಂಡು, ಹೆದರಿದಂತೆ ನಟಿಸುತ್ತಾ ಒರಳುಕಲ್ಲಿನ ಮೇಲಿಂದ ಧುಮುಕಿ ಪುಟ್ಟ ಕೃಷ್ಣನು ಓಡುವನು.  ಜಗನ್ನಿಯಾಮಕನಾದ ಪರಮಾತ್ಮನು ತನ್ನ ತಾಯಿಗೆ ಹೆದರಿದಂತೆ ನಟಿಸುತ್ತಾ ಓಡುವನು.  ಓಡಲು ಆಗದಿದ್ದರೂ, ಕಷ್ಟಪಟ್ಟು ಮಗುವಿನ ಹಿಂದೆ ಓಡಿ ಆಯಾಸಗೊಳ್ಳುತ್ತಿದ್ದ ತಾಯಿಯ ಕೈಗೆ, ಕೊನೆಗೂ ಮಗ ಸಿಕ್ಕಿ ಬಿಡುವನು.  ತಾಯಿಯ ಕಷ್ಟ ನೋಡಲಾರದೆ, ಕರುಣೆಯಿಂದ ಭಗವಂತನೇ ತನ್ನನ್ನು ತಾನು ಒಪ್ಪಿಸಿಕೊಂಡನೆಂದು ತಿಳಿಯಬಹುದು.   ಕೈಗೆ ಸಿಕ್ಕಿದ ತುಂಟ ಮಗುವನ್ನು ಯಶೋದೆ ತಾಯಿಯು ತೋಳು ಹಿಡಿದು ಗದರಿಸಿದರೆ, ಎಲ್ಲಿ ತಾಯಿ ಹೊಡೆಯುವಳೋ ಎಂದು ಬಿಕ್ಕಿ ಬಿಕ್ಕಿ ಅಳುತ್ತಾ, ಕಣ್ಣಿನ ಕಾಡಿಗೆಯನ್ನೆಲ್ಲಾ ಕೆನ್ನೆಗೆ ಒರೆಸಿಕೊಳ್ಳುವನು.  ಭಯಗೊಂಡ ಮಗುವನ್ನು ಕಂಡು ಯಶೋದೆ ಕೋಲನ್ನು ದೂರ ಬಿಸಾಡುವಳು.  ಪಕಪಕನೆ ನಗುವ ಮುದ್ದು ಮಗನನ್ನು ಓಡಿ ಹೋಗದಂತೆ ತಡೆಯಬೇಕೆಂದು ತಾಯಿಯು ಮಗನನ್ನು ಒರಳು ಕಲ್ಲಿಗೆ ಕಟ್ಟಿ ಹಾಕುವ ಪ್ರಯತ್ನ ಮಾಡುವಳು.  ಎಷ್ಟು ಹಗ್ಗಗಳನ್ನು ಜೋಡಿಸಿದರೂ ಪುಟ್ಟ ಕೃಷ್ಣನ ಸೊಂಟಕ್ಕೆ ಹಗ್ಗ ಬಿಗಿಯಲಾಗುವುದಿಲ್ಲ.  ಆಶ್ಚರ್ಯ, ಆಯಾಸದಿಂದ ಕಂಗೆಟ್ಟಿದ್ದ ಯಶೋದೆಯ ಮುಖವನ್ನು ಕಂಡು ಭಗವಂತನು ಕರುಣೆಯಿಂದ ತನ್ನನ್ನು ತಾನೇ ಕಟ್ಟಿ ಹಾಕಿಸಿಕೊಳ್ಳುವನು.   ಒರಳು ಕಲ್ಲಿಗೆ ಕಟ್ಟಿಹಾಕಿರುವುದರಿಂದ ಇನ್ನು ಕಂದನ ತಂಟೆಯಿರುವುದಿಲ್ಲವೆಂದು ತಿಳಿದು ಗೃಹಕೃತ್ಯದಲ್ಲಿ ತೊಡಗುವಳು. 

ತಾಯಿಯ ಗಮನ ತನ್ನ ಕಡೆ ಇಲ್ಲದಿರುವುದನ್ನು ಕಂಡು ಶ್ರೀಕೃಷ್ಣನು ಶಾಪದಿಂದ ವ್ರಜಭೂಮಿಯಲ್ಲಿಯೇ ಜೋಡಿ ಮತ್ತಿಯ ಮರಗಳಾಗಿ  ಹುಟ್ಟಿ ಬೆಳೆದಿರುವ ಯಕ್ಷರಾಜನಾದ ಕುಬೇರನ ಪುತ್ರರಿಗೆ ಶಾಪ ವಿಮೋಚನೆಯನ್ನು ಮಾಡಬೇಕು ಎಂದು ಸಂಕಲ್ಪಿಸುವನು.  ನಲಕೂಬ ಮತ್ತು ಮಣಿಗ್ರೀವ ಎಂಬ ಕುಬೇರನ ಮಕ್ಕಳು ಅಪಾರವಾದ ಐಶ್ವರ್ಯ, ಸೌಂದರ್ಯ ಹಾಗೂ ಅಹಂಕಾರಗಳಿಂದ ನಾರದ ಮಹರ್ಷಿಗಳಿಂದ ಶಾಪಕ್ಕೆ ಒಳಗಾಗಿರುವರು.




ನಲಕೂಬ ಮತ್ತು ಮಣಿಗ್ರೀವರಿಬ್ಬರೂ ಈಶ್ವರನ ಅನುಚರರಾಗಿದ್ದರೂ ಕೂಡ ಅತ್ಯಂತ ದರ್ಪಿಷ್ಠರಾಗಿದ್ದರು.  ಒಮ್ಮೆ ಮಂದಾಕಿನೀ ನದಿಯ ತೀರದಲ್ಲಿ ಕೈಲಾಸದ ರಮಣೀಯವಾದ ಉಪವನದಲ್ಲಿ ’ವಾರುಣೀ’ ಎಂಬ ಮದಿರೆಯನ್ನು ಕುಡಿದು, ಮತ್ತರಾಗಿ ಗಂಗಾನದಿಯಲ್ಲಿ ಅನೇಕ ಸ್ತ್ರೀಯರೊಡನೆ ಜಲಕ್ರೀಡೆಯಾಡುವರು.  ಆ ಸಮಯದಲ್ಲಿ, ಅದೇ ಮಾರ್ಗವಾಗಿ ನಾರದ ಮಹರ್ಷಿಗಳು ಬರುವರು.  ಮಹರ್ಷಿಗಳನ್ನು ಕಂಡು, ನಾಚಿಕೆ ಮತ್ತು ಭಯದಿಂದ ಸ್ತ್ರೀಯರೆಲ್ಲಾ ವಸ್ತ್ರ ಧರಿಸಿದರೆ, ಕುಬೇರ ಪುತ್ರರು ಮಾತ್ರ ವಿಚಲಿತರಾಗದೆ, ನಗ್ನವಾಗಿಯೇ ಇರುವರು.  ಧನಮದದಿಂದ ಕುರುಡರಾಗಿರುವ ಕುಬೇರ ಪುತ್ರರು, ಇಂದ್ರಿಯಗಳ ಚಾಪಲ್ಯಕ್ಕೆ ಸಿಲುಕಿ ಮದ್ಯಪಾನವನ್ನು ಮಾಡಿರುವರು, ಸ್ತ್ರೀಲಂಪಟರಾಗಿರುವರು, ಬುದ್ಧಿಕೆಟ್ಟಿರುವರು.  ಪರರ ಎದುರಲ್ಲಿ ತಾವು ನಗ್ನರಾಗಿರುವೆವೆಂಬ ಅರಿವೂ ಇಲ್ಲದ ಇವರುಗಳು ವೃಕ್ಷಯೋನಿಯನ್ನು ಹೊಂದಲು ಯೋಗ್ಯರಾಗಿರುವರು.  ವೃಕ್ಷಗಳಾಗಿ ಹುಟ್ಟುವುದರಿಂದ ಯಾವ ದುರಭಿಮಾನವೂ ಇರುವುದಿಲ್ಲ ಮತ್ತು ನನ್ನ ಅನುಗ್ರಹದಿಂದ ಇವರಿಗೆ ಭಗವಂತನ ವಿಸ್ಮರಣೆಯಾಗುವುದಿಲ್ಲ.  ನನ್ನ ಅನುಗ್ರಹದಿಂದಲೇ ದೇವಮಾನದ ೧೦೦ ವರ್ಷಗಳು ಕಳೆದ ನಂತರ ಭಗವಾನ್ ಶ್ರೀಕೃಷ್ಣನ ಸಾನಿಧ್ಯವು ಪ್ರಾಪ್ತವಾಗಿ, ಶಾಪ ಮುಕ್ತರಾಗುವರು.  ಭಗವಂತನಲ್ಲಿ ಪರಮ ಭಕ್ತಿಯುಳ್ಳವರಾಗಿ ಪುನಃ ಸ್ವರ್ಗಕ್ಕೆ ತೆರಳುವರು ಎಂದು ಯೋಚಿಸಿ, ಕುಬೇರ ಪುತ್ರರಿಗೆ ಶಾಪ ಕೊಟ್ಟು ಬದರಿಕಾಶ್ರಮಕ್ಕೆ ಹೊರಟುಹೋಗುವರು.  ಕುಬೇರ ಪುತ್ರರಾದ ನಲಕೂಬ ಮತ್ತು ಮಣಿಗ್ರೀವರು ಒಡನೆಯೇ ಮತ್ತಿ ಮರಗಳಾಗಿ ಹುಟ್ಟಿ "ಯಮಾರ್ಜುನ ವೃಕ್ಷ"ಗಳೆಂಬ ಹೆಸರಿನಿಂದ ಪ್ರಸಿದ್ಧರಾಗುವರು.  ಪರಮ ಭಕ್ತರಾದ ನಾರದ ಮಹರ್ಷಿಗಳ ಮಾತುಗಳನ್ನು ಸತ್ಯವಾಗಿಸುವುದಕ್ಕಾಗಿಯೇ ಭಗವಂತನಾದ ಪುಟ್ಟ ಕೃಷ್ಣನು ಇಷ್ಟೆಲ್ಲಾ ನಾಟಕವಾಡಿ, ತನ್ನನ್ನು ಕಟ್ಟಿ ಹಾಕಿದ್ದ ಒರಳು ಕಲ್ಲನ್ನು ಎಳೆಯುತ್ತಾ ಮತ್ತಿ ಮರಗಳ ಮಧ್ಯದಲ್ಲಿ ನುಸುಳುವನು.  ಎರಡು ವೃಕ್ಷಗಳ ಮಧ್ಯದಲ್ಲಿ ತೂರಲು ಸಾಧ್ಯವಾಗದೆ ನಿಂತಿದ್ದ ಒರಳು ಕಲ್ಲಿನ ಹಗ್ಗವನ್ನು ಶ್ರೀಕೃಷ್ಣನು ಬಲಪೂರ್ವಕವಾಗಿ ಸೆಳೆಯುವನು.  ದೊಡ್ಡ, ಚಿಕ್ಕ ರೆಂಬೆಗಳು, ಎಲೆಗಳು, ಚಿಗುರುಗಳು ಎಲ್ಲವೂ ಕಂಪಿಸುತ್ತಾ ಎರಡೂ ಮಹಾವೃಕ್ಷಗಳು ಬುಡ ಸಮೇತವಾಗಿ ಸಿಡಿಲಿನಂತೆ ಆರ್ಭಟಿಸುತ್ತಾ ಕೆಳಗುರುಳುವುವು.  ಧರೆಗುರುಳಿದ ವೃಕ್ಷಗಳಿಂದ ಅಗ್ನಿಗೆ ಸಮಾನ ತೇಜಸ್ಸಿನಿಂದ ಕೂಡಿರುವ ಇಬ್ಬರು ಪುರುಷರು ಹೊರಬಂದು ಭಗವಂತನ ಪಾದಗಳಲ್ಲಿ ತಮ್ಮ ತಲೆಯಿರಿಸಿ ನಮಸ್ಕರಿಸಿ ಪ್ರಾರ್ಥಿಸುವರು.  ತಮ್ಮೆಲ್ಲಾ ತಪ್ಪುಗಳನ್ನೂ ಮನ್ನಿಸಿ ಸದಾ ಭಗವಂತನಲ್ಲಿ ಪರಮ ಪ್ರೇಮಯುಕ್ತವಾದ ಭಕ್ತಿಭಾವವು ತಮ್ಮ ಮನಸ್ಸಿನಲ್ಲಿ ನೆಲೆಸುವಂತೆ ಅನುಗ್ರಹಿಸೆಂದು ಕೇಳಿಕೊಳ್ಳುವರು.  ಸುಪ್ರೀತನಾದ ಭಗವಂತನು ಅನನ್ಯವಾದ ಭಕ್ತಿ ಭಾವದಿಂದ ನನ್ನನ್ನೇ ಪರಮಾಶ್ರಯನನ್ನಾಗಿ ಭಾವಿಸಿಕೊಂಡು ನಿಮ್ಮ ಲೋಕಗಳಿಗೆ ತೆರಳಿ ಎಂದು ಆದೇಶಿಸುವನು.  ಭಗವಂತನ ಮಾತುಗಳನ್ನು ಕೇಳಿ ಸಹೋದರರು ಶ್ರೀಕೃಷ್ಣನಿಗೆ ಪುನಃ ಪುನಃ ಪ್ರದಕ್ಷಿಣೆ ಬಂದು ನಮಸ್ಕರಿಸುತ್ತಾ ಹೊರಡುವರು.

ಶ್ರೀಕೃಷ್ಣನ ಅವತಾರವು ಭೂ ಭಾರ ಹರಣಕ್ಕಾಗಿಯೇ ಆಗಿರುವುದೆಂಬುದು ಈ ತರಹದ ನಾನಾ ದೃಷ್ಟಾಂತಗಳಿಂದ ತಿಳಿಯಬಹುದಾಗಿದೆ.  ವಸುದೇವ-ದೇವಕಿಯರ ಪುತ್ರನಾಗಿ ಅವತರಿಸಿದಾಗಿನಿಂದಲೂ, ದುಷ್ಟರನ್ನು ಶಿಕ್ಷಿಸುತ್ತಾ, ಶಿಷ್ಟರನ್ನು ರಕ್ಷಿಸುತ್ತಾ, ಅನೇಕ ಶಾಪಗ್ರಸ್ತರನ್ನು ಉದ್ಧರಿಸುತ್ತಾ, ಪ್ರತಿ ಹೆಜ್ಜೆಯಲ್ಲೂ ತಾನು ಭಗವಂತನೆಂಬುದನ್ನು ತೋರಿಸಿಕೊಡುವನು.  ಇದು ಶ್ರೀಕೃಷ್ಣನ ಲೀಲಾ ವಿನೋದವಾಗಿದೆ.



 

ಚಿತ್ರಕೃಪೆ : ಅಂತರ್ಜಾಲ

Saturday, September 27, 2014

ದಾಸಸಾಹಿತ್ಯದಲ್ಲಿ ದೇವಿ ಸರಸ್ವತಿ :

ಸರಳ, ಸುಲಭ ಹಾಗೂ ಕನ್ನಡ ಭಾಷೆಯಲ್ಲಿ ರಚಿತವಾದ ದಾಸಸಾಹಿತ್ಯ ಭಕ್ತ ಸಮುದಾಯಕ್ಕೆ ಲಭ್ಯವಾದ ಅತ್ಯಂತ ಒಳ್ಳೆಯ ಹಾಗೂ ಉತ್ಕೃಷ್ಟವಾದ ಸಾಹಿತ್ಯ.  ದಾಸಪರಂಪರೆಯಲ್ಲಿ ಬಂದ ಶ್ರೇಷ್ಠ ಮಾನವರು ತಾವು ಕಂಡ ಸತ್ಯವು ಪ್ರತಿ ಜೀವಿಗೂ ತಿಳಿಯಲಿ ಮತ್ತು ಪ್ರತಿಯೊಬ್ಬರೂ ಜೀವನದ ಉದ್ದೇಶವನ್ನು ಅರ್ಥಮಾಡಿಕೊಳ್ಳಲಿ ಎಂಬ ಕಳಕಳಿಯಿಂದ ಸಾಹಿತ್ಯ ಸೃಷ್ಟಿ ಮಾಡಿ, ಅದನ್ನು ತಾವೇ ಹಾಡುತ್ತಾ, ಕುಣಿಯುತ್ತಾ ಭಗವಂತನಿಗೆ ಸಮರ್ಪಿಸಿದರು.  ಜೊತೆಯಲ್ಲಿ ಬಂದ ತಮ್ಮ ಶಿಷ್ಯರಿಗೂ ಅದನ್ನು ಕಲಿಸಿಕೊಟ್ಟರು.  ಊರೂರು ಸುತ್ತುತ್ತಾ, ಊಂಛವೃತ್ತಿ ಮಾಡುತ್ತಾ ಆಧ್ಯಾತ್ಮದ ತಿರುಳನ್ನು ಹಂಚಿದರು.  ಜನಸಾಮಾನ್ಯರಿಗೆ ತಿಳಿಯದೇ ಇದ್ದ ಅನೇಕ ವಿಷಯಗಳನ್ನು ಸುಲಭವಾಗಿ ಹಾಡಿನ ಮೂಲಕ ಪ್ರಚಾರ ಮಾಡಿದರು.  ಹೇಗೆ ಬದುಕಬೇಕು, ಏನು ಮಾಡಬೇಕು, ಏನು ಮಾಡಬಾರದು ಎಂಬೆಲ್ಲಾ ಸಂಪ್ರದಾಯಗಳನ್ನೂ ಹಾಡಿನಲ್ಲಿಯೇ   ಅರ್ಥ ಮಾಡಿಸಿದರು.  ದಾಸಸಾಹಿತ್ಯದ ಪ್ರಾರಂಭವು ಶ್ರೀ ಶ್ರೀಪಾದರಾಜರ ಕೃತಿಗಳಿಂದ ಗುರುತಿಸಿಕೊಳ್ಳುತ್ತದೆ.  ದಾಸ ಪರಂಪರೆಯಲ್ಲಿ ಬಂದ ಪ್ರತಿಯೊಬ್ಬ ದಾಸರೂ ಸರಸ್ವತಿ ದೇವಿಯನ್ನು ಸ್ತುತಿ ಮಾಡಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. 

ಶ್ರೀ ವಾದಿರಾಜರು ಸರಸ್ವತಿಯನ್ನು ಕುರಿತು ಬರೆದಿರುವ ಒಂದು ಕೃತಿ "ವಾಣಿ ಪರಮಕಲ್ಯಾಣಿ ನಮೋ ನಮೋ | ಅಜನ ರಾಣಿ ಪಂಕಜರಾಣಿ " ಎಂಬುದರಲ್ಲಿ ಸರಸ್ವತಿ ದೇವಿಯನ್ನು ಅಂಬೆ , ಸ್ಮರಣೆ ಮಾತ್ರವೇ ಸಾಕು ಭಕ್ತರ ಕಾಯ್ವೆ, ಶಾರದಾಂಬೆ, ಪುತ್ಥಳಿಬೊಂಬೆ, ವಾಗ್ದೇವಿ, ಹರಿಣಾಕ್ಷಿ ಎಂದು ಸ್ತುತಿಸಿದ್ದಾರೆ.

ಪುರಂದರ ದಾಸರು "ಒಂದೆ ಮನದಲಿ ಭಜಿಸು ವಾಗ್ದೇವಿಯ | ಇಂದು ಮತಿಕೊಡುವಳು ಶ್ರೀಹರಿಯ ಧ್ಯಾನದೊಳು " ಎಂಬ ಕೃತಿಯಲ್ಲಿ  ಪುರಾಣ ಕಥೆಗಳ ಉಲ್ಲೇಖ ಮಾಡಿದ್ದಾರೆ.  ಮೊದಲನೆಯ ಚರಣದಲ್ಲಿ ಪ್ರಹ್ಲಾದನ ಕಥೆಯನ್ನು ಹೇಳಿದ್ದಾರೆ.  ಪ್ರಹ್ಲಾದನು ಕಮಲಜನ (ಬ್ರಹ್ಮನ) ರಾಣಿಯಾದ ನಿನ್ನನ್ನು ವಂದಿಸಿ ಹರಿ ವಿಶ್ವಮಯನೆಂದು ಹೋರಾಟ ಪ್ರಾರಂಭಿಸಿದ.    ಪುಟ್ಟ ಬಾಲಕನಾದ ಪ್ರಹ್ಲಾದನ ಕ್ಲೇಶ, ವಿಪ್ಲವಗಳನ್ನೆಲ್ಲಾ ಕಳೆದು, ಭಾವಶುದ್ಧಿಯನ್ನು ಪ್ರಸಾದಿಸಿ, ಶ್ರೀಹರಿಯ ಚರಣಗಳನ್ನು ಹೊಂದಿಸಿದೆ ಎಂದು ಸ್ತುತಿಸಿದ್ದಾರೆ.  ಎರಡನೆಯ ಚರಣದಲ್ಲಿ ರಾಮಾಯಣದ ಕಥೆ ಹೇಳುತ್ತಾರೆ.   ದಶಮುಖನಾದ ರಾವಣನ ಅನುಜ ವಾಣಿಯಾದ ನಿನ್ನನ್ನು ವಂದಿಸದೇ ತಪಸ್ಸು ಮಾಡಿದ.   ತಪಸ್ಸು ಫಲಿಸಿ, ವರ ಬೇಡುವ ಸಮಯದಲ್ಲಿ ಅವನ ನಾಲಿಗೆಯಲ್ಲಿ ನೆಲೆಸಿ, ನಿದ್ರೆಯನ್ನು ಬೇಡುವಂತೆ ಮಾಡಿದೆ.  ಮುಂದೆ ಶ್ರೀರಾಮಚಂದ್ರ ಮತ್ತು ದಶಮುಖನ ಯುದ್ಧದಲ್ಲಿ ’ಕುಂಭಕರ್ಣ’ನೆಂದೇ ಕರೆಯಲ್ಪಟ್ಟ ರಾವಣನ ಅನುಜನ ಶಕ್ತಿ ಅವನು ಬೇಡಿದ್ದ ನಿದ್ರೆಯ ವರದಿಂದ ಕುಗ್ಗುವಂತೆ ಮಾಡಿದೆ ಎಂದು ಸರಸ್ವತಿ ದೇವಿಯ ಮಹಿಮೆಯನ್ನು ಸ್ತುತಿಸಿದ್ದಾರೆ.  ಮೂರನೆಯ ಚರಣದಲ್ಲಿ ಅಜನ ಪಟ್ಟದರಾಣಿಯಾದ ನಿನ್ನನ್ನು ನಿರಂತರ ಬಿಡದೇ ಭಜಿಸಿದರೆ ಸದಾ ಉರುತರವಾದ ವಾಕ್ ಶುದ್ಧಿಯನ್ನು ಕೊಡುವೆ ಮತ್ತು ಭಗವಂತನ ಸೇವೆಯನ್ನು ಕೊಟ್ಟು ಪರತತ್ತ್ವದ ಜ್ಞಾನವನ್ನು ಅರುಹುವೆಯೆಂದು ಸ್ತುತಿಸಿದ್ದಾರೆ.
"ಕೊಡು ಬೇಗ ದಿವ್ಯಮತಿ - ಸರಸ್ವತಿ" ಎಂಬ ಕೃತಿಯಲ್ಲಿ ಅಖಿಳ ವಿದ್ಯೆಗಳಿಗೆ ಅಭಿಮಾನಿಯಾದ, ಇಂದಿರಾರಮಣನ ಹಿರಿಯ ಸೊಸೆಯೇ ಸಕಲ ಸುಖವಿತ್ತು ಪಾಲಿಸು ಎಂದು ಪ್ರಾರ್ಥಿಸಿದ್ದಾರೆ.
"ನಲಿದಾಡೆ ಎನ್ನ ನಾಲಿಗೆ ಮೇಲೆ - ಸರಸ್ವತಿ ದೇವಿ | ಕುಣಿದಾಡೆ ಎನ್ನ ನಾಲಿಗೆ ಮೇಲೆ" ಎಂಬ ಕೃತಿಯಲ್ಲಿ ಇಳೆಯೊಳಗೆಲ್ಲ ಅಪ್ರತಿಮ ಗುಣವುಳ್ಳವಳೇ, ಎನ್ನ ನಾಲಿಗೆಯ ಮೇಲೆ ನೆಲೆಸಿ, ನನ್ನಿಂದ ಒಳ್ಳೆಯ ಮಾತುಗಳನ್ನಾಡಿಸಿ, ಸುಜ್ಞಾನ ಕೊಟ್ಟು ಕಾಪಾಡು ಎಂದಿದ್ದಾರೆ.  ದೇವಿಯನ್ನು ಸರ್ವಾಲಂಕಾರ ಭೂಷಿತೆಯಾಗಿ ವರ್ಣಿಸಿದ್ದಾರೆ. 
"ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ"  - ವಾಗಭಿಮಾನಿ, ವರಬ್ರಹ್ಮಾಣಿ, ಸುಂದರವೇಣೀ, ಸುಚರಿತ್ರಾಣಿ ಎಂದೆಲ್ಲಾ ವಿಧ ವಿಧವಾಗಿ ಹೊಗಳಿದ್ದಾರೆ.
"ಪಾಲಿಸೆಮ್ಮ ಮುದ್ದು ಶಾರದೆ - ಎನ್ನ - ನಾಲಿಗೆಯಲಿ ನಿಲ್ಲಬಾರದೆ" ಎಂಬ ಕೃತಿಯಲ್ಲಿ ಸರಸ್ವತಿದೇವಿಯನ್ನು ಶಾರದೆ ಎಂದು ಸ್ತುತಿಸಿದ್ದಾರೆ.  ಅಕ್ಷರಕ್ಷರದ ವಿವೇಕವನ್ನು ಪ್ರಸಾದಿಸು, ಸಾಕ್ಷಾದ್ರೂಪದಿಂದ ಒಲಿದು ರಕ್ಷಿಸು ತಾಯೆ ಎನ್ನುತ್ತಾ ಶೃಂಗಾರಪುರದಲ್ಲಿ ನೆಲೆಸಿರುವವಳು, ಸಂಗೀತ ಗಾನ ವಿಲಾಸಿನಿ, ಬ್ರಹ್ಮನರಾಣಿ ನಿನ್ನನ್ನೇ ನಿರುತವೂ ನಂಬಿರುವೆ, ಪೊರೆದು ಪಾಲಿಸು ಎಂದು ಪ್ರಾರ್ಥಿಸಿದ್ದಾರೆ.

ಕನಕದಾಸರು ತಮ್ಮ "ವರವ ಕೊಡು ಎನಗೆ ವಾಗ್ದೇವಿ - ನಿಮ್ಮ ಚರಣ ಕಮಲಂಗಳ ದಯಮಾಡು ದೇವಿ" ಎಂಬ ಕೃತಿಯಲ್ಲಿ ಅವಿರಳ ಪುರಿಯಲ್ಲಿ ನೆಲೆಸಿರುವ ಕಾಗಿನೆಲೆಯಾದಿಕೇಶವನ ಸುತನಿಗೆ ಸನ್ನುತ ರಾಣಿವಾಸೆ ಎನ್ನುತ್ತಾ ವಾಗ್ದೇವಿಯ ವರ್ಣನೆಯನ್ನು ಓದುವ, ಕೇಳುವ ಎಲ್ಲರಿಗೂ ಮನದಲ್ಲಿ ಮೂಡುವಂತೆ ಸ್ತುತಿಸಿದ್ದಾರೆ.  ಇದು ಕನಕದಾಸರು ಶೃಂಗೇರಿಗೆ ಹೋದಾಗ ರಚಿತವಾದ ಕೃತಿಯೆಂಬ ಮಾತಿದೆ.   ದೇವಿಯ ವರ್ಣನೆ ಮಾಡಲು ಮುದಕೊಡುವಂತಹ ಹಾಗೂ ಅಪರೂಪದ ಪದಪುಂಜಗಳನ್ನು ದಾಸರಾಯರು ಬಳಸಿದ್ದಾರೆ.  "ಜೊಂಪು ಮದನನ ಪೂರ್ಣ ಶಕ್ತಿ ಬೊಂಬೆ - ಒಳ್ಳೆ ಸಂಪಿಗೆ ಮುಡಿಗಿಟ್ಟು ರಾಜಿಪ ಶಾರದಾಂಬೆ" ಎಂದು ವರ್ಣಿಸಿದ್ದಾರೆ.  ಇಲ್ಲಿ ಜೊಂಪು ಮದನನ ಪೂರ್ಣ ಶಕ್ತಿಬೊಂಬೆಯೆಂದರೆ ನೋಡಿದವರಿಗೆ ಮತ್ತೇರಿಸುವ ಸುಂದರ ಮನ್ಮಥನ ಸಂಮೋಹನ ಶಕ್ತಿಯ ಪೂರ್ಣರೂಪದ ಬೊಂಬೆಯಂತಿರುವ, ಘಮಘಮಿಸುವ ಸಂಪಿಗೆಯನ್ನು ಮುಡಿಗಿಟ್ಟಿರುವ ಶಾರದಾಂಬೆ ನೀನು ತೇಜಪ್ರಕಾಶೆ ಹಾಗೂ ಮಹಾಕವಿ ಜನರ ಹೃತ್ಕಮಲದಲ್ಲಿ ವಾಸಿಸುವವಳು ಎಂದು ಸ್ತುತಿಸಿದ್ದಾರೆ.

ಕಾಖಂಡಕಿ ಶ್ರೀ ಮಹಿಪತಿದಾಸರು ತಮ್ಮ ಕೃತಿ "ಜಯ ಜಯ ಸ್ವರಸತಿ ಜಯವರ ಪೂರಣಮತಿ | ತ್ರಯಲೋಕ್ಯದಲಿ ಖ್ಯಾತಿ ಜಯ ಸುಕೀರ್ತಿ" ಯಲ್ಲಿ ಸರಸ್ವತಿದೇವಿಯನ್ನು ವಿದ್ಯಾವರದಾಯಿನಿ, ಸಿದ್ಧಿಗೆ ಶಿಖಾಮಣಿ, ಬುದ್ಧಿ ಪ್ರಕಾಶಿನಿ, ಸದ್ಭೂಷಿಣಿ ಎಂದು ವರ್ಣಿಸುತ್ತಾ ಸದಾಕಾಲವೂ ಸದ್ಗುರು ಸ್ತುತಿ ಒದುಗುವ ಹಾಗೆ ಸ್ಫೂರ್ತಿ ಕೊಡು, ವರವಿದ್ಯದಲಿ ದಾನಿಯಾದ ನೀನು ಸುಪ್ರವೀಣೆ ನಿನಗೆ ಜಯ ಜಯ ಎಂದು ಹಾಡಿದ್ದಾರೆ.

ಗಲಗಲಿ ಅವ್ವನವರೆಂದೇ ಪ್ರಸಿದ್ಧಿಯಾದ, ಹರಿದಾಸಿ ಶ್ರೀಮತಿ ರಮಾ ಅವರು ತಮ್ಮ "ಪಾಲಿಸೆ ಸರಸ್ವತಿ ಪಾಲಿಸೆ | ಪಾಲಿಸೆ ನಿನ್ನಯ ಪಾರಿಗೆ ಬಂದೆನು | ಕಾಲಕಾಲಕೆ ನಿನ್ನಯ ಕಾಲಿಗೆರಗುವೆ ಪಾಲಿಸೆ" ಎಂಬ ಕೃತಿಯಲ್ಲಿ ಆದಿ ಬ್ರಹ್ಮನರಾಣಿಯೆ ವೇದಕ್ಕಭಿಮಾನಿಯೆ, ಮೋದ ಗಾಯನ ಕುಶಲಳೆ ದಯಮಾಡಿ ಮತಿಯ ಕೊಡು  ಎಂದು ಬೇಡುತ್ತಾರೆ.  ಕೃತಿಯನ್ನು ಮುಂದುವರೆಸುತ್ತಾ ಅವ್ವನವರು ಸರಸ್ವತಿ ದೇವಿಯನ್ನು ತುಂಬಾ ಆತ್ಮೀಯವಾದ ಸಂಬೋಧನೆಗಳಿಂದ, ನಮಗೆ ತುಂಬಾ ಹತ್ತಿರವಾದ ಒಬ್ಬ ಸ್ತ್ರೀಯ ಪಾತ್ರವೆಂಬಂತೆ ಚಿತ್ರಿಸುತ್ತಾರೆ.  ಸರಳವಾದ ಭಾವದಿಂದ ಅಕ್ಕರೆಯಿಂದ ಅಂತರಂಗದ ಗೆಳತಿಯನ್ನೋ, ಒಡಹುಟ್ಟಿದ ಸಹೋದರಿಯನ್ನೋ ಕರೆಯುವಂತೆ ರಾಮೇಶನರಮನೆಗೆ ಬಾರೆಂದು ಆಹ್ವಾನಿಸುತ್ತಾರೆ.   ಸರಸ್ವತಿ ದೇವಿಯನ್ನು ಖನಿ, ಮಿತ್ರಿ, ಹರದಿ (ಮುತ್ತೈದೆ)  ಗುಜ್ಜಿ (ಗಿಡ್ಡಿ, ಕುಬ್ಜ ಕನ್ಯೆ) ಎನ್ನುತ್ತಾ ಹೊನ್ನವರೆಯಾದ ಹೆರಳನ್ನು ಬಲಗೈಯಲ್ಲಿ ಹಿಡಿದುಕೊಂಡು ಮುತ್ತಿನ ಉಡಿಯಕ್ಕಿ, ಮಲ್ಲಿಗೆಯ ದಂಡು ಸ್ವೀಕರಿಸಲು ಗೆಜ್ಜೆಯ ಸರಪಳಿಯನ್ನು ಧರಿಸಿ, ಜರಿಯ ಸೀರೆಯನುಟ್ಟು ಘಲ್ ಘಲ್ ಎನ್ನುತ್ತಾ ಸಭೆಯೊಳಗೆ ಪ್ರತ್ಯಕ್ಷಳಾಗು ಎಂದು ಪ್ರಾರ್ಥಿಸುತ್ತಾರೆ.  ಅವ್ವನವರ ಕಾವ್ಯ ಓದುಗರ ಮನದ ಕದವನ್ನು ತಟ್ಟಿ ತೆರೆದು ಅಕ್ಕರೆಯ ಸಿಂಚನವನ್ನು ಮಾಡಿಸುತ್ತದೆ.  ಸರಸ್ವತಿ ದೇವಿಯನ್ನು ಪ್ರತ್ಯಕ್ಷವಾಗಿ ಕಂಡ ನವಿರಾದ ಅನುಭೂತಿಯನ್ನು ಹುಟ್ಟಿಸುತ್ತದೆ.   ಆಹ್ವಾನಿತಳಾದ ದೇವಿಯ ಭಾವದಲ್ಲಿ ಮನಸ್ಸು ಲೀನವಾಗುವಂತೆ ಮಾಡುತ್ತದೆ.



 ಚಿತ್ರಕೃಪೆ : ಅಂತರ್ಜಾಲ

Tuesday, December 31, 2013

ಸರಸ್ವತಿ ದೇವಿಯಾಗಿ..

ಪ್ರಣೋ ದೇವೀ ಸರಸ್ವತೀ, ವಾಜೇಭಿರ್ವಾಜಿನೀವತೀ | ಧೀನಾಮವಿತ್ರ್ಯವತು |
ಆ ನೋ ದಿವೋ ಬೃಹತಃ ಪರ್ವತಾದಾ ಸರಸ್ವತೀ ಯಜತಾ ಗಂತು ಯಜ್ಞಮ್ |
ವಾಗ್ದೇವ್ಯೈ ನಮಃ ||
ಸರಸ್ವತಿ ದೇವೀ ಸರ್ವರಕ್ಷಕಳು, ಸಾಮರ್ಥ್ಯಸಂಪನ್ನೆಯೂ ಆಗಿರುವಳು ಮತ್ತು ಲೋಕಕ್ಕೆ ಅನ್ನ ನೀರು ಪೂರೈಸುವವಳು.  ದಾನ ಮಾಡುವವರಿಗೆ ಉತ್ತಮವಾಗಿ ವರದಾನ ಮಾಡುವವಳು, ಯಜ್ಞ ಕರ್ಮದಲ್ಲಿ ವಿಪುಲ ಧನ ಧಾನ್ಯ ಕೊಡುವವಳು ಎಂದು ಋಗ್ವೇದವು ಗುಣಗಾನ ಮಾಡಿದೆ.  ಋಗ್ವೇದ, ಯಜುರ್ವೇದ, ಸಾಮವೇದಗಳಲ್ಲೂ,  ಉಪನಿಷತ್ತುಗಳಲ್ಲೂ ಸರಸ್ವತೀದೇವಿಯನ್ನು "ವಾಕ್" ಎಂದು ಸ್ತುತಿಸಲ್ಪಟ್ಟಿದೆ.  ಓಂ ವಾಜ್ಮೇಮನಸಿ ಪ್ರತಿಷ್ಠಿತಾ - ಮನೋ ಮೇ ವಾಚಿ ಪ್ರತಿಷ್ಠಿತಂ - ನನ್ನ ವಾಕ್ಕು ನಿರಂತರವಾಗಿ ಮನಸ್ಸಿನಲ್ಲಿ ಸ್ಥಿರವಾಗುವಂತಾಗಲೀ, ನನ್ನ ಮನಸ್ಸು ವಾಕ್ಕಿನಲ್ಲಿ ನೆಲೆಸುವಂತಾಗಲೀ ಎಂದು ಐತರೇಯಾದಿ ಉಪನಿಷತ್ತಿನಲ್ಲಿ ಪ್ರಾರ್ಥಿಸಲಾಗಿದೆ.

ಕೃಷ್ಣ ಯಜುರ್ವೇದಾಂತರ್ಗತವಾಗಿರುವ ಸರಸ್ವತೀ ರಹಸ್ಯೋಪನಿಷತ್ ನ  ಸರಸ್ವತೀ ದಶ ಶ್ಲೋಕದಲ್ಲಿ ದೇವಿಯನ್ನು "ಶ್ರೀ ವಾಗೀಶ್ವರೀ ದೇವತಾ.... ಶ್ರದ್ಧಾ, ಮೇಧಾ, ಪ್ರಜ್ಞಾ, ಧಾರಣಾ ವಾಗ್ದೇವತಾ ಮಹಾ ಸರಸ್ವತೀ ತ್ಯೇತೈ ರಂಗನ್ಯಾಸಃ ನಿಹಾರ ಹಾರ ಘನಸಾರ ಸುಧಾಕರಾಭಾಂ ಕಲ್ಯಾಣದಾಂ ಕನಕ ಚಂಪಕ ದಾಮ ಭೂಷಾಮ್, ಉತ್ತುಂಗ ಪೀನಕುಚ ಕುಂಭಮನೋಹರಾಂಗೀಂ ವಾಣೀಂ ನಮಾಮಿ ಮನಸಾ ವಚನಾಂ ವಿಭೂತ್ತೈ" - ಶ್ರೀ ವಾಗೀಶ್ವರೀ ದೇವತಾ ಪ್ರೀತಿಗಾಗಿ, ಶ್ರದ್ಧಾ, ಮೇಧಾ, ಪ್ರಜ್ಞಾ, ಧಾರಣ, ವಾಗ್ದೇವತೇ ಮಹಾಸರಸ್ವತೀ ಬಂಗಾರದ ಸಂಪಂಗೀ ಮಾಲೆಯಿಂದ ಅಲಂಕರಿಸಿಕೊಂಡಿರುವವಳು, ಉತ್ತುಂಗ ಪೀನವಾದ ಕುಚಕುಂಭಗಳಿಂದ ಮನೋಹರವಾದ ಶರೀರವುಳ್ಳವಳಾದ ವಾಣಿಯನ್ನು ವಾಕ್ಕಿನ ವಿಭೂತಿಗಾಗಿ ಮನಸಾ ನಮಸ್ಕರಿಸುತ್ತೇನೆ ಎಂದು ವಿವರಿಸಿದ್ದಾರೆ.  ಮುಂದುವರೆಯುತ್ತಾ "ನಮಸ್ತೇ ಶಾರದಾ ದೇವೀ ಕಾಶ್ಮೀರಪುರವಾಸಿನಿ, ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿಮೇ, ಅಕ್ಷಸೂತ್ರಾಂ ಕುಶಧರಾ ಪಾಶಪುಸ್ತಕ ಧಾರಿಣೀ, ಮುಕ್ತಾಹಾರ ಸಮಾಯುಕ್ತಾ ವಾಚಿ ತಿಷ್ಠತು ಮೇ ಸದಾ, ಕಂಬುಕಂಠೀ ಸುತಾ ಮ್ರೋಷ್ಠೀ, ಸರ್ವಾಭರಣಭೂಷಿತಾ, ಮಹಾಸರಸ್ವತೀ ದೇವೀ ಜಿಹ್ವಾಗ್ರೇ ಸನ್ನಿವೇಶ್ಯತಾಮ್ - ಜಪಮಾಲೆಯನ್ನೂ, ಅಂಕುಶವನ್ನೂ ಧರಿಸಿರುವಂತಹವಳು, ಮುತ್ತಿನ ಹಾರವನ್ನು ಧರಿಸಿರುವವಳಾದ ಸರಸ್ವತೀ ದೇವಿಯೇ ಸದಾ ನನ್ನ ಜಿಹ್ವಾಗ್ರಗಳಲ್ಲಿ ಸನ್ನಿಧಾನವನ್ನು ಹೊಂದಿರು ಎಂದು ಪ್ರಾರ್ಥಿಸಲಾಗಿದೆ.

ಪದ್ಮ ಪುರಾಣದಲ್ಲಿ ಬರುವ ವಾಗೀಶ್ವರಿ ಸ್ತೋತ್ರದಲ್ಲಿ ಸರಸ್ವತಿಯನ್ನು ಜಗದ್ಧಾತ್ರೀ ಸರಸ್ವತೀಂ, ಸರ್ವಾ ವಿದ್ಯಾಂ ಲಭಂತೇ ತೇ, ಅಮಲ ಕಮಲಾದಿ ವಾಸಿನಿ, ಮನಸೋ ವೈಮಲ್ಯದಾಯಿನಿ, ಮನೋಜ್ಞೆ, ಚರಣಾಂಭೋರುಹಂ, ನಮಾಮಿ ಸದಾ ಎಂದು ಸ್ತುತಿಸಲ್ಪಟ್ಟಿದೆ. 

ಬ್ರಹ್ಮ ವೈವರ್ತಮಹಾಪುರಾಣದಲ್ಲಿ ಸರಸ್ವತೀ ದೇವಿಯ ಅವತಾರದ ಕಥೆ ಹೇಳಲ್ಪಟ್ಟಿದೆ.  ಇದು ನಾರಾಯಣ ಮಹರ್ಷಿ ಮತ್ತು ನಾರದರ ಸಂವಾದ ರೂಪದಲ್ಲಿದೆ.  ನಾರಾಯಣ ಮಹರ್ಷಿಗಳು ಹೇಳಿದ ವಿಶ್ವಬ್ರಹ್ಮಾಂಡದ ಕಥೆಯನ್ನು ಕೇಳಿ ನಾರದರು ಪ್ರಕೃತಿಯ ಚರಿತ್ರೆಯನ್ನು ತಿಳಿಸುವಂತೆ ಪ್ರಾರ್ಥಿಸುತ್ತಾರೆ.  ಆಗ ಮಹರ್ಷಿಗಳು ಸೃಷ್ಟಿಯ ಪ್ರಾರಂಭದಲ್ಲಿ ಪ್ರಕೃತಿಯು ಪಾರ್ವತಿ, ರಾಧೆ, ಲಕ್ಷ್ಮೀ, ಸರಸ್ವತಿ ಮತ್ತು ಸಾವಿತ್ರಿ ಎಂಬ ಐದು ರೂಪಗಳನ್ನು ಧರಿಸಿದಳೆಂದು ತಿಳಿಸುತ್ತಾರೆ.  ಪ್ರಕೃತಿಯ ಅಂಶದಿಂದ ಉದಿಸಿದ ಈ ದೇವಿಯರ ಚರಿತ್ರೆಯನ್ನೂ ಮಹರ್ಷಿಗಳು ನಾರದರಿಗೆ ವಿವರಿಸುತ್ತಾರೆ.  ಇಲ್ಲಿ ಬರುವ ಕಥೆಯ ಪ್ರಕಾರ ಮೊದಲಿಗೆ ಶ್ರೀಕೃಷ್ಣನು ಸರಸ್ವತಿಯನ್ನು ಪೂಜಿಸಿ, ಅನ್ಯ ದೇವತೆಗಳಿಗೆ ಪೂಜಿಸುವ ವಿಧಿಯನ್ನು ವಿಧಿಸುತ್ತಾನೆ.  ಸರಸ್ವತೀ ದೇವಿಯ ಅನುಗ್ರಹದಿಂದ ಮೂರ್ಖನೂ ಕೂಡ ಪಂಡಿತನಾಗುತ್ತಾನೆಂದು ಸಾರುತ್ತಾನೆ.  ಮಾಘ ಶುದ್ಧ ಪಂಚಮಿಯ ದಿನದಲ್ಲೂ, ವಿದ್ಯಾರಂಭದಲ್ಲಿಯೂ ಮಾನವರು, ದೇವತೆಗಳು, ಋಷಿಗಳು, ಸಿದ್ಧರು, ನಾಗರು, ಗಂಧರ್ಮರು, ಕಿಂನರರು ಮುಂತಾದವರೆಲ್ಲರೂ ಭಕ್ತಿಯಿಂದ ಸರಸ್ವತೀದೇವಿಯನ್ನು ಪೂಜಿಸಬೇಕೆಂದೂ, ಷೋಡಶೋಪಚಾರಗಳನ್ನು ಸಮರ್ಪಿಸಬೇಕೆಂದೂ, ಧ್ಯಾನ, ಸ್ತೋತ್ರಗಳನ್ನು ಅರ್ಪಿಸಬೇಕೆಂದೂ ತಿಳಿಸುತ್ತಾನೆ.  ಪುಸ್ತಕ, ಕಲಶಗಳಲ್ಲಿ ದೇವಿಯನ್ನು ಆಹ್ವಾನಿಸಿ ಪೂಜಿಸುವರೆಂದು ತಿಳಿಸುತ್ತಾನೆ.  ಸರಸ್ವತಿ ದೇವಿಯ ಕವಚವನ್ನು ಚಂದನಲಿಪ್ತವಾದ ಚಿನ್ನದ ತಾಯಿತದಲ್ಲಿಟ್ಟು ಕಂಠದಲ್ಲಿ ಅಥವಾ ಬಲತೋಳಲ್ಲಿ ಧರಿಸುವರು ಮತ್ತು ಸರಸ್ವತಿ ದೇವಿಯ ಕವಚವನ್ನು ವಿದ್ವಾಂಸರು ಪಠಿಸುತ್ತಾರೆಂದು ತಿಳಿಸುತ್ತಾನೆ.  ಶ್ರೀಕೃಷ್ಣನು ಹೀಗೆ ಪೂಜಿಸಿದನಂತರ ಬ್ರಹ್ಮ, ವಿಷ್ಣು, ಮಹೇಶ್ವರರು, ಅನ್ಯ ದೇವತೆಗಳೂ, ಮನುಗಳೂ, ಚಕ್ರವರ್ತಿಗಳೂ, ಮಾನವಾದಿಗಳೂ ಪೂಜಿಸಲಾರಂಭಿಸಿದರು.  ಸರಸ್ವತೀ ಕವಚದಲ್ಲಿ ನಮ್ಮ ದೇಹದ ಪ್ರತೀ ಅಂಗಗಳಿಗೂ ಉದ್ದೇಶಿತವಾಗಿ ದೇವಿಯ ಒಂದೊಂದು ಮಂತ್ರವಿದೆ.  ಅದನ್ನು ಜಪಿಸುತ್ತಾ ದೇಹದ ಆ ಅಂಗವನ್ನು ಸರಸ್ವತೀದೇವಿ ರಕ್ಷಿಸಲೆಂದು ಪ್ರಾರ್ಥಿಸುವ ವಿಧಾನವಿದೆ.  ’ವಿಶ್ವಜಯ’ವೆಂದು ಪ್ರಸಿದ್ಧವಾದ ಸರ್ವಮಂತ್ರ ಸಮೂಹಯುಕ್ತವಾದ ಕವಚ ಮಂತ್ರ ಮತ್ತು ಕಾಣ್ವಶಾಖೆಯಲ್ಲಿ ಉಕ್ತವಾದ ಕವಚಮಂತ್ರ, ಸ್ತೋತ್ರ, ಪೂಜಾವಿಧಾನ, ಧ್ಯಾನ ಮತ್ತು ವಂದನೆಗಳು.
 
ಬ್ರಹ್ಮವೈವರ್ತ ಮಹಾಪುರಾಣದಲ್ಲಿಯೇ ಮಹರ್ಷಿ ಯಾಜ್ಞವಲ್ಕ್ಯರ ಕಥೆಯೂ ತಿಳಿಸಲ್ಪಟ್ಟಿದೆ.  ಮಹರ್ಷಿಗಳು ಗುರುಶಾಪದಿಂದ ತಾವು ಕಲಿತ ವಿದ್ಯೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ದುಃಖಿತರಾಗಿ, ಸೂರ್ಯನನ್ನು ಕುರಿತು ತಪಸ್ಸು ಮಾಡುತ್ತಾರೆ.  ಸೂರ್ಯದೇವನ ದರ್ಶನವಾದಾಗ ದೈನ್ಯತೆಯಿಂದ, ದುಃಖದಿಂದ ಪ್ರಾರ್ಥಿಸಿಕೊಂಡಾಗ, ಸೂರ್ಯ ದೇವನು ಮಹರ್ಷಿಗಳಿಗೆ ವೇದ ವೇದಾಂಗಗಳನ್ನು ಉಪದೇಶಿಸುತ್ತಾನೆ.  ಮಹರ್ಷಿಗಳು ಕಳೆದುಕೊಂಡ ಸ್ಮರಣ ಶಕ್ತಿಗಾಗಿ ವಾಗ್ದೇವಿಯನ್ನು ಸ್ತುತಿಸಬೇಕೆಂದು ತಿಳಿಸುತ್ತಾನೆ. ಯಾಜ್ಞವಲ್ಕ್ಯರು ಸರಸ್ವತೀದೇವಿಯನ್ನು ಭಕ್ತಿಯಿಂದ ಪೂಜಿಸಿ, ಸರಸ್ವತೀ ಸ್ತೋತ್ರ ರಚಿಸುತ್ತಾರೆ.  

| ಬ್ರಹ್ಮ ಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ, ಸರ್ವ ವಿದ್ಯಾಧಿದೇವಿ ಯಾ ತಸ್ಮೈ ವಾಣ್ಯೈ ನಮೋ ನಮಃ, |
| ಜ್ಞಾನಂ ದೇಹಿ ಸ್ಮೃತಿಂ ದೇಹಿ ವಿದ್ಯಾಂ ದೇಹಿ.. ಸ್ಮೃತಿ ಶಕ್ತಿಃ, ಜ್ಞಾನಶಕ್ತಿಃ, ಬುದ್ಧಿ ಶಕ್ತಿ ಸ್ವರೂಪಿಣಿ.. ನಮೋ ನಮಸ್ತೇ ||
ಎನ್ನುತ್ತಾ ಸ್ತುತಿಸುತ್ತಾರೆ.  ಗುರುಶಾಪದಿಂದ ನಷ್ಟವಾಗಿದ್ದ ತಮ್ಮ ಸ್ಮರಣಶಕ್ತಿಯನ್ನೂ, ವಿದ್ಯೆಯನ್ನೂ, ಕವಿತ್ವಶಕ್ತಿಯನ್ನೂ, ಗ್ರಂಥ ನಿರ್ಮಾಣಶಕ್ತಿಯನ್ನೂ, ಶಿಷ್ಯಬೋಧನ ಶಕ್ತಿಗಳನ್ನೂ ನೀಡೆಂದು ಬೇಡಿಕೊಳ್ಳುತ್ತಾರೆ.  ಭಕ್ತಿ ಪರವಶರಾಗಿ ನಮಿಸುತ್ತಾರೆ.  ಜ್ಯೋತಿ ಸ್ವರೂಪಳಾದ ಸರಸ್ವತೀದೇವಿಯ ಅನುಗ್ರಹ ಪಡೆಯುತ್ತಾರೆ.  ಹೀಗೆ  ಯಾಜ್ಞವಲ್ಕ್ಯರಿಂದ ರಚಿತವಾಗಿರುವ ಸರಸ್ವತೀದೇವಿಯ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವವರು ಶ್ರೇಷ್ಠ ವಾಗ್ಮಿಗಳಾಗುತ್ತಾರೆಂಬ ನಂಬಿಕೆಯಿದೆ.

ಶ್ರೀ ಜಗನ್ನಾಥದಾಸರು ತಮ್ಮ ಹರಿಕಥಾಮೃತಸಾರವೆಂಬ ಮೇರು ಕೃತಿಯಲ್ಲಿ ಸರಸ್ವತಿಯನ್ನು ಚತುರವದನನ ರಾಣಿ ಎಂದು ಕರೆದು ವರ್ಣಿಸಿದ್ದಾರೆ.
ಚತುರವದನನ ರಾಣಿ ಅತಿರೋ
ಹಿತ ವಿಮಲವಿಜ್ಞಾನಿ ನಿಗಮ ಪ್ರ
ತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ |
ನುತಿಸಿ ಬೇಡುವೆ ಜನನಿ ಲಕುಮೀ
ಪತಿಯ ಗುಣಗಳ ತುತಿಪುದಕೆ ಸ
ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನಸದನದಲಿ ||
ಸರಸ್ವತಿ ದೇವಿಯು ವೇದಗಳ ಅಭಿಮಾನಿ.  ಚತುರ್ಮುಖ ಬ್ರಹ್ಮನ ನೀತಪತ್ನಿ ಹಾಗೂ ಪ್ರದ್ಯುಮ್ನ – ಕೃತೀ ದೇವಿಯವರ ಪುತ್ರಿ. ಅತಿರೋಹಿತಳು ಮರೆವೆಯೇ ಎಲ್ಲದವಳು ತಡೆಯಿಲ್ಲದೇ ಪರಮಾತ್ಮನ ಸ್ತುತಿ ಮಾಡುತ್ತಲೇ ಇರುವವಳು, ಬ್ರಹ್ಮಾಣಿ – ತತ್ವಜ್ಞಾನಿ.  ಬ್ರಹ್ಮ ಮತ್ತು ಸರಸ್ವತಿ ಮಹತ್ತತ್ವಕ್ಕೆ ಸೇರಿದವರು. ಪರಮಾತ್ಮನ ಬಗ್ಗೆ ಶುದ್ಧವಾದ ವಿಮಲ ಜ್ಞಾನವು ನಿರಂತರವಾಗಿ ಹರಿಯುತ್ತಲೇ ಇರುತ್ತದೆ.  ಇವಳು ಪರಶುಕ್ಲತ್ರಯರಲ್ಲಿ ಒಬ್ಬಳು ಹಾಗೂ ಗಾನಲೋಲಳೂ ಅಹುದು.  ಇವಳ ಹಸ್ತದಲ್ಲಿ ಸದಾ ಕಚ್ಛಪಿ ಎಂಬ ವೀಣೆ ಇರುವುದರಿಂದ, ಇವಳು ವೀಣಾಪಾಣಿ ಮತ್ತು ಇವಳು ತತ್ವಜ್ಞಾನಿ, ಚಿತ್ತಾಭಿಮಾನಿ, ಸರ್ವರಿಗೂ ಬುದ್ಧಿಯನ್ನು ಕೊಡುವ ಬುದ್ಧ್ಯಾಭಿಮಾನಿ ದೇವತೆಯೂ ಹೌದು.  ಬ್ರಹ್ಮ ದೇವರಿಗಿಂತ ೧೦೦ ಗುಣಗಳಲ್ಲಿ ಕಡಿಮೆ.  ಇವಳೂ ಋಜುಗಣಕ್ಕೆ ಸೇರಿದವಳಾದ್ದರಿಂದ ೩೨ ಲಕ್ಷಣಗಳು ಉಳ್ಳವಳು.  ೧೯೯ ಕಲ್ಪ ಸಾಧನೆಯಾದ ಮೇಲೆ ವಾಣೀ ಪದವಿಗೆ ಬರುವವಳು.  ವೇದಾಭಿಮಾನಿ, ವೇದದ್ವಾರ ಭಗವಂತನಲ್ಲಿ ಉಪಸಂಹಾರ ಮಾಡುವ ಚಿತ್ತಕ್ಕೆ ಅಭಿಮಾನಿ ಸರಸ್ವತಿ.  ನಾಲಿಗೆಗೂ ಅಭಿಮಾನಿ,    ಕ್ಷೀರಕ್ಕೂ ಅಭಿಮಾನಿ.  ಕ್ಷೀರದ ಬಣ್ಣ ಬಿಳುಪು ಮತ್ತು ಬಿಳುಪು ಎಂದರೆ ಜ್ಞಾನ.  ಜೀವರುಗಳಿಗೆ ಜ್ಞಾನ ಕ್ಷೀರ ಉಣಿಸುವವಳು ಸರಸ್ವತಿ ದೇವಿ. ಇಂತಹ ಅಭಿಮಾನಿ ದೇವತೆ ಸದ್ಗುಣಿ ಸರಸ್ವತಿಯು ನಮ್ಮ ವದನದಲ್ಲಿ ಇದ್ದು ಪರಮಾತ್ಮನ ಗುಣಗಳನ್ನು ನುಡಿಸಲಿ  ಎಂದು ದಾಸರು ಕೇಳಿಕೊಂಡಿದ್ದಾರೆ.   ಉಪನಿಷತ್ತುಗಳಲ್ಲಿರುವ ಉಲ್ಲೇಖಗಳ ಆಧಾರದ ಮೇಲೆಯೇ ದಾಸರಾಯರು ಕನ್ನಡ ಭಾಷೆಯಲ್ಲಿ ಸುಲಭವಾಗಿ ಅರ್ಥವಾಗುವಂತೆ ಹರಿಕಥಾಮೃತಸಾರವನ್ನು ರಚಿಸಿದ್ದಾರೆ.
 
ಸರಸ್ವತಿಯ ಜೊತೆಗಿರುವ ಹಂಸವು ತಪ್ಪು-ಸರಿ, ಸತ್ಯ-ಅಸತ್ಯಗಳ ಮಧ್ಯೆಯಿರುವ ವ್ಯತ್ಯಾಸವನ್ನು ಗುರುತಿಸುವ ಶಕ್ತಿಯ ಸಂಕೇತವಾಗಿದೆ.  ಹಂಸವು ಈ ಪ್ರಪಂಚದಲ್ಲಿ ಇರು ಆದರೆ ಯಾವುದಕ್ಕೂ ಅಂಟಿಕೊಳ್ಳಬೇಡ, ಕಮಲದ ಎಲೆಯ ಮೇಲೆ ಹೇಗೆ ನೀರಿನ ಹನಿ ಅಂಟಿಕೊಳ್ಳದೇ ಇರುವುದೋ ಹಾಗೆ ಇರು ಎಂದು ತಿಳಿಸುತ್ತದೆ.    ಹಂಸಜಪ (ಉಸಿರಾಟ) ಜೀವಿ ಹಾಗೂ ಪ್ರಾಣದ ಇರುವಿಕೆಯನ್ನು ಸಂಕೇತಿಸುತ್ತದೆ.  ಹಂಸ ನೀರಿನ ಮೇಲೆ ಧ್ಯಾನಿಸುತ್ತಾ ತೇಲುತ್ತಿರುತ್ತದೆ, ಇದೂ ಕೂಡ ನಾವು ಭವಸಾಗರದಲ್ಲಿ ಭಗವಂತನನ್ನು ಧ್ಯಾನಿಸುತ್ತಿರಬೇಕೆಂಬ ಸೂಚನೆ ನೀಡುತ್ತದೆ.  ಸರಸ್ವತಿಯ ಬಲಗಡೆಗೆ ನವಿಲು, ಅಖಂಡ ಜ್ಞಾನದ ಸಂಕೇತವೂ ಆಗಿದೆ ಮತ್ತು ಪ್ರಾಪಂಚಿಕ ವಿಷಯಾಸಕ್ತಿಗಳೆಡೆಗೆ ಆಕರ್ಷಣೆಯೂ ಆಗಿದೆ.  ಮಾನವನ ಅಜ್ಞಾನ ಅಥವಾ ಅಹಂಕಾರಗಳಿಗೆ ಒಳಪಟ್ಟು ವಿಷಯಾಸಕ್ತಿಗಳಲ್ಲಿ ಮುಳುಗಬಹುದೆನ್ನುವುದನ್ನು ಸಂಕೇತಿಸುತ್ತದೆ.  ಸರಸ್ವತಿ ದೇವಿ ಹಂಸ ಹಾಗೂ ನವಿಲುಗಳ ಮಧ್ಯದಲ್ಲಿ ವಿರಾಜಮಾನಳಾಗಿ ಈ ಎರಡರ ಮಧ್ಯೆ ಸಮತೋಲನ ಕಾಪಾಡಿಕೊಳ್ಳಬೇಕೆಂಬುದನ್ನು ಸೂಚಿಸುತ್ತಾಳೆ.  ಸರಸ್ವತಿ ದೇವಿ ಕುಳಿತಿರುವ ತಾವರೆ ಹೂವು ನೀರಿನಿಂದ ಮೇಲಕ್ಕೆ ಚಾಚಿರುವುದು, ಭವಸಾಗರದಲ್ಲಿ ನಾವು ಅದರಂತೆ ತಲೆ ಎತ್ತಬೇಕು ಎಂದು ತಿಳಿಸುತ್ತದೆ.  ಅಂತರಂಗದ ಕದವನ್ನು ತೆರೆದು ಒಳಗಡೆಗೆ ನೋಟ ಹರಿಸಬೇಕೆಂಬುದರ ಸಂಕೇತವಾಗಿದೆ.  ಬಲಗೈಯಲ್ಲಿ ಜಪಮಾಲೆ, ವ್ಯಾಖ್ಯಾನ ಮುದ್ರೆ ಹಾಗೂ ಎಡಗೈಯಲ್ಲಿ ಪುಸ್ತಕ ಇರುವವಳು.  ಚಂದ್ರಮುಖಿ, ಚತುರ್ಭುಜೆ ಎಂದು ಸರಸ್ವತಿಯ ವರ್ಣನೆ ವಿಷ್ಣು ಧರ್ಮೋತ್ತರದಲ್ಲಿದೆ.  ಸರಸ್ವತಿ ದೇವಿಯು ಕೈಯಲ್ಲಿ ಹಿಡಿದಿರುವ ವೀಣೆ ನಾದದ ಸಂಕೇತ.  ನಮ್ಮೆಲ್ಲಾ ಚಿಂತನೆಗಳು ಮತ್ತು ಕೆಲಸಗಳು ಈ ಶಬ್ದ ಅಥವಾ ನಾದದಿಂದಲೇ ಉತ್ಪತ್ತಿಯಾಗುವುದು.  ಬ್ರಹ್ಮಾಂಡದಲ್ಲಿ ಹುದುಗಿರುವ ದೈವೀಕ ಸಂಗೀತದ ನಾದಕ್ಕೆ ನಮ್ಮ ಇಂದ್ರಿಯಗಳನ್ನು ಒಳಮುಖವಾಗಿ ತಿರುಗಿಸಿಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ.  ಹೃದಯಕ್ಕೆ ಹತ್ತಿರವಾಗಿ ವೀಣೆಯ ಮೇಲೆ ನಾಟ್ಯವಾಡುವ ಎಡಗೈ ಬೆರಳುಗಳು ಸದಾ ಸದ್ವಿಷಯಗಳ ಚಿಂತನೆ ಮಾಡುತ್ತಾ, ನಿಷ್ಕಾಮ ಪ್ರೇಮವನ್ನು ಹಂಚಬೇಕೆಂಬುದನ್ನೂ,  ವೀಣೆಯ ಬುಡದಲ್ಲಿ ಆಧಾರವಾಗುವ ಬಲಗೈಯಿಂದ ಋಣಾತ್ಮಕ ಭಾವಗಳನ್ನು ಹಾಗೆಯೇ ಅದುಮಿ, ಮೆಟ್ಟಬೇಕೆಂದುದನ್ನೂ ಸೂಚಿಸುತ್ತದೆ.

ಸರಸ್ವತಿ ದೇವಿ ಶಾರದೆ ಎಂದೂ ಪೂಜಿಸಲ್ಪಡುತ್ತಾಳೆ.  ನವರಾತ್ರಿಯ ಏಳನೆಯ ದಿನ ಶಾರದಾ ಮಾತೆಯನ್ನು ವಿಶೇಷವಾಗಿ ಆರಾಧಿಸಿ ಬ್ರಹ್ಮಿಣಿ, ಅಗ್ನಿದಾತೆ, ವಿದ್ಯಾದಾತೆ ಶಾರದೆ, ಅಭಯದಾತೆ ಕಾಶ್ಮೀರ ಪುರವಾಸಿನಿಯೇ ನಮಗೆ ವಿದ್ಯಾ ಸಂಪತ್ತನ್ನು ನೀಡಿ ಉದ್ಧರಿಸೆಂದು  ಪ್ರಾರ್ಥಿಸಲಾಗುತ್ತದೆ.   ಮನೆಯಲ್ಲಿ ಇರುವ ವೀಣೆ, ತಂಬೂರಿ ಮುಂತಾದ ಸಂಗೀತ ವಾದ್ಯಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.  ಶ್ರೀ ಶಂಕರಾಚಾರ್ಯರು ತಮ್ಮ ಶಾರದಾಭುಜಂಗ ಪ್ರಯಾತಾಷ್ಟಕಂನಲ್ಲಿ ಶಾರದೆಯನ್ನು ಸ್ತುತಿಸಿದ್ದಾರೆ:
| ಸುವಕ್ಷೋಜಕುಂಭಾಂ ಸುಧಾಪೂರ್ಣಕುಂಭಾಂ | ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಂ || - ವಕ್ಷ ಸ್ಥಳದಲ್ಲಿ ತುಂಬಿದ ಅಮೃತ ಕಳಶವನ್ನೇ ಹೊಂದಿರುವ, ಪ್ರಸಾದ ಪುಣ್ಯಗಳಿಗೆ ಅವಲಂಬಿತಳಾದ ಚಂದ್ರನಂತೆ ಅರಳಿದ ತುಟಿಯಿಂದ ಹಸನ್ಮುಖಳಾದ ನನ್ನ ಶಾರದಾಂಬೆಯನ್ನು ಭಜಿಸುತ್ತೇನೆ.
| ಕಟಾಕ್ಷೇ ದಯಾರ್ದ್ರಾಂ ಕರೇ ಜ್ಞಾನ ಮುದ್ರಾಂ | ಕಲಾಭಿರ್ವಿನಿದ್ರಾಂ ಕಲಾಪೈಃ  ಸುಭಾದ್ರಾಂ || - ದಯಾಮಯ ನೋಟವುಳ್ಳವಳು , ಕೈಯಲ್ಲಿ ಜ್ಞಾನಮುದ್ರೆ ಇರುವವಳು, ಕಲಾಸಕ್ತಳು, ಶಾಂತಳೂ, ಸೌಂದರ್ಯವತಿಯು, ಜಲಚರ ಪಕ್ಷಿ ಮೃಗ ಹಂಸವಾಹಿನಿಯೂ, ಮಹತ್ತಾದವಳೂ, ನವಗುಣ ಸಂಪನ್ನಳೂ, ಸದಾ ಸೌಮ್ಯರೂಪಳಾದ ಶಾರದೆ ತಾಯಿಯನ್ನು ಭಜಿಸುತ್ತೇನೆ.
| ಜ್ವಲತ್ಕಾಂತಿವಹ್ನಿಂ ಜಗನ್ಮೋಹನಾಂಗೀಂ | ಭಜೇ ಮಾನಸಾಂಭೋಜ ಸುಭ್ರಾಂತ ಭೃಂಗೀಮ್ |
ನಿಜ ಸ್ತೋತ್ರ ಸಂಗೀತ್ಯ ನೃತ್ಯ ಪ್ರಭಾಂಗೀಂ | ಭಜೇ ಶಾರದಾಂಬಾಮಜಸ್ರಂ ಮದಂಬಾಮ್ || - ಪ್ರಜ್ವಲಿಸುವ ಅಗ್ನಿಯಂತೆ ಕಾಂತಿಯುತಳಾದ, ಜಗತ್ತಿಗೆ ಮೋಹನ ರೂಪಳಾದ ಮನಸ್ಸಿನ ಸರೋವರದಲ್ಲಿ ದುಂಬಿಯಂತೆ ವಿಹರಿಸುತ್ತಿರುವ, ಸ್ತೋತ್ರ ಸಂಗೀತ ನೃತ್ಯಗಳಿಗೆ ಒಡೆಯಳಾದ ತಾಯಿ ಶಾರದಾಂಬೆಯನ್ನು ಭಜಿಸುತ್ತೇನೆ.

ಹಿಂದೂ ಸಂಸ್ಕೃತಿಯಲ್ಲಿ ಸರಸ್ವತೀದೇವಿಯು ವಾಣಿ, ಶಾರದೆ, ವೀಣಾಪಾಣಿ, ವಾಗ್ದೇವಿ, ಬ್ರಹ್ಮನರಾಣಿ ಎಂದು ಅನೇಕ ನಾಮಗಳಿಂದ ಪೂಜಿಸಲ್ಪಡುತ್ತಾಳೆ.



 ಚಿತ್ರಕೃಪೆ : ಅಂತರ್ಜಾಲ


Tuesday, October 15, 2013

ಸರಸ್ವತೀ ನದಿಯಾಗಿ...


 ಯಾಕುಂದೇಂದು ತುಷಾರ ಹಾರ ಧವಲಾ | ಯಾ ಶುಭ್ರ ವಸ್ತ್ರಾನ್ವಿತಾ |
ಯಾ ವೀಣಾ ವರದಂಡ ಮಂಡಿತಕರಾ | ಯಾ ಶ್ವೇತ ಪದ್ಮಾಸನಾ ||
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್ದೇವೈಃ  ಸದಾ ಪೂಜಿತಾ |
ಸಾ ಮಾಂ ಪಾತು ಸರಸ್ವತೀಂ ಭಗವತೀಂ ನಿಃಶೇಷ ಜಾಡ್ಯಾಪಹಾ ||
http://www.youtube.com/watch?v=3gNd2dTCCaM&list=PL0D3CF5D04328C190
ಶ್ರೀ ಅಗಸ್ತ್ಯ ಮಹಾ ಋಷಿಗಳ ರಚನೆಯಲ್ಲಿ ಸರಸ್ವತೀ ದೇವಿಯ ವರ್ಣನೆ ಸುಂದರವಾಗಿ ಮೂಡಿಬಂದಿದೆ.  ದೇವಿ ಸರಸ್ವತಿಯನ್ನು ಕುಬೇರನ ನವನಿಧಿಗಳಲ್ಲೊಂದಾದ ’ಕುಂದ’, ಮಲ್ಲಿಗೆ, ಕಮಲ, ಜ್ಞಾನ, ಶೋಭೆ, ಹಿಮಕಿರಣ, ಶೀತಲಕಿರಣಗಳನ್ನು ಹೊಂದಿದ ಚಂದ್ರನಂತೆ, ನಿರ್ಮಲವಾದ, ಸುಂದರವಾದ, ಬಿಳುಪಾದ ಹಸುವಿನಂತೆ, ಅತಿಯಾಗಿ ಶೋಭಿಸುವ ದೇಹಕಾಂತಿಯುಳ್ಳವಳು, ಸ್ವತಃ ಸರಸ್ವತೀ ದೇವಿಯೇ ಬುದ್ಧಿ, ಮೇಧಾ ಎಂದೆಲ್ಲಾ ಅನುಪಮವಾದ ಉಪಮೆಗಳಿಂದ ಸ್ತುತಿಸುತ್ತಾರೆ.  ವೀಣೆ, ವರದಂಡಗಳಿಂದ ಶೋಭಿತಳಾಗಿ, ಶುಭ್ರ-ಶ್ವೇತ ಪದ್ಮದಲ್ಲಿ ಆಸೀನಳಾಗಿರುವವಳು, ಬ್ರಹ್ಮ-ಅಚ್ಯುತ-ಶಂಕರರಿಂದ ಮೊದಲುಗೊಂಡು ಎಲ್ಲಾ ದೇವಾನು ದೇವತೆಗಳಿಂದಲೂ ಪೂಜಿಸಲ್ಪಡುವವಳಾದ, ನನ್ನ ತಾಯಿಯೇ, ಚಳಿ, ದಡ್ಡತನ, ಸೋಮಾರಿತನ, ಮಂಕುತನಗಳನ್ನು ಸಂಪೂರ್ಣವಾಗಿ, ಶೇಷವಿಲ್ಲದಂತೆ ನಾಶಪಡಿಸು ಮತ್ತು ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸುತ್ತಾರೆ.  ಸರ್ವ ಪಾಪಗಳನ್ನೂ ಕಳೆದು, ಅಜ್ಞಾನವನ್ನು ತೊಡೆದು, ಉದ್ಧರಿಸುವ ಸರಸ್ವತೀ ದೇವಿ  ನದೀ ರೂಪದಲ್ಲಿಯೂ ಈ ಎಲ್ಲಾ ವಿಶಿಷ್ಟ ಗುಣಗಳಿಂದಲೂ ಶೋಭಿಸುತ್ತಾ ಮುಕ್ತಿಯನ್ನು ಬಯಸಿ ಬರುವ ಭಕ್ತರಿಗೆ ವರದಾಯಕಳಾಗಿದ್ದಾಳೆ.

ಸನಾತನ ಕಾಲದಿಂದಲೂ ಭಾರತದಲ್ಲಿ ಸರಸ್ವತಿಯನ್ನು ವಿದ್ಯಾದೇವತೆಯಾಗಿಯೂ ಮತ್ತು ನದಿಯಾಗಿಯೂ ನಾವು ಪೂಜಿಸುತ್ತಾ ಬಂದಿದ್ದೇವೆ.   ಋಗ್ವೇದವು ಸರಸ್ವತಿಯನ್ನು ಅತ್ಯುತ್ತಮ ತಾಯಿ, ದೈವ ಮತ್ತು ನದಿಯೆಂದು ಕೊಂಡಾಡುವುದಲ್ಲದೇ, ಋಗ್, ಯಜು, ಸಾಮವೇದಗಳು ಸರಸ್ವತಿಯನ್ನು "ವಾಕ್" ಎಂದೂ ವಿವರಿಸಿವೆ.  ಸರಸ್ವತಿ ದೇವಿಯು ವೇದಗಳಿಗೆ, ಪುರಾಣಗಳಿಗೆ, ಲಲಿತಕಲೆಗಳಾದ ಸಂಗೀತ ಮತ್ತು ನೃತ್ಯಕ್ಕೆ ಅಭಿಮಾನಿ ದೇವತೆಯಾಗಿರುವಳು.  ಭಾಷೆ, ಲಿಪಿ, ಜ್ಞಾನ, ಮಾತು, ಚಿಂತನೆ, ವಿಚಾರಗಳು ಎಂಬ ದ್ರವ್ಯ ಪ್ರಾಕಾರದ ಆಸಕ್ತಿಗಳನ್ನು ಬೆಳೆಸುವವಳು ಹಾಗೂ ಕರುಣಿಸುವವಳಾದ್ದರಿಂದ ಅವಳು ನದಿಯಾಗಿ ತನ್ನ ದ್ರವ್ಯ ರೂಪವನ್ನು ಪ್ರಕಟಿಸಿಕೊಂಡವಳು.   ಪವಿತ್ರವಾದ ಮತ್ತು ಸ್ಫಟಿಕದಂತೆ ಶುಭ್ರವಾದ ಜಲವನ್ನು ಹೊಂದಿದವಳು.  ಆದ್ದರಿಂದಲೇ ಸರಸ್ವತಿ ದೇವಿಯು ಶುಭ್ರ ವರ್ಣಿಯು, ಬಿಳಿ ಬಟ್ಟೆಯನ್ನು ಧರಿಸಿದವಳು, ಚತುರ್ಭುಜೆ, ಬಲಗೈಯಲ್ಲಿ ಜಪಮಾಲೆ, ವ್ಯಾಖ್ಯಾನ ಮುದ್ರೆ ಹಾಗೂ ಎಡಗೈಯಲ್ಲಿ ಪುಸ್ತಕ, ತಾವರೆ ಹಿಡಿದಿರುವವಳು ಎಂಬ ವಿವರಣೆಯಿದೆ.  ಋಗ್ವೇದದಲ್ಲಿ ಬರುವ ನದಿಸ್ತುತಿ ಭಾಗವು ಸರಸ್ವತಿ ನದಿಯ ಪೂರ್ವಕ್ಕೆ ಯಮುನೆಯೂ, ಪಶ್ಚಿಮಕ್ಕೆ ಶುತಾದ್ರಿಯೂ ಹರಿಯುತ್ತದೆ ಎಂದು ತಿಳಿಸುತ್ತದೆ.  ದೇವೀ ಭಾಗವತದಲ್ಲಿ ಉಲ್ಲೇಖವಾಗಿರುವಂತೆ ಸರಸ್ವತಿ ದೇವಿಯು ವೈಕುಂಠದಲ್ಲಿ ಹರಿಯುವಾಗ ಗಂಗಾದೇವಿಯು ಕೊಟ್ಟ ಶಾಪದಿಂದಾಗಿ ಭಾರತ ವರ್ಷದಲ್ಲಿ ನದಿಯಾಗಿ ಅವತರಣ ಮಾಡಿದಳು.  ನದಿಯಾಗಿ ಸರಸ್ವತಿಯು ಪುಣ್ಯಸ್ವರೂಪಿಣಿಯೂ ಮತ್ತು ಪಾವನಕರಳೂ ಆಗಿರುವಳು.  ಸರಸ್ವತಿ ನದಿಗೆ ಈ ಹೆಸರು, ಅವಳು ಹೊಂದಿದ್ದ ಅನೇಕ ಸರೋವರ(ಸರಸ್ಸು)ಗಳಿಂದಾಗಿ ಬಂದಿತ್ತು.  ಶಿವಾಲಿಕ್ ಪರ್ವತದಲ್ಲಿ ಹುಟ್ಟಿ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ತೆಳ್ಳಗೆ ಹರಿದು ಮಾಯವಾಗುತ್ತಿರುವ ಗಗ್ಗರ್-ಹಕ್ಕರ್ ಎಂಬ ನದಿಯನ್ನು  ಕಳೆದುಹೋದ ಸರಸ್ವತಿಯ ಪೂರ್ವಾರ್ಧವೆಂದು ಉಲ್ಲೇಖಿಸುತ್ತಾರೆ.  ಪುಣ್ಯಸ್ವರೂಪಿಣಿಯೂ ಮತ್ತು ಪಾವನಕರಳೂ ಆಗಿರುವ ಸರಸ್ವತಿ ನದಿಯು ಈಗ "ಗುಪ್ತಗಾಮಿನಿ"ಯಾಗಿ ತ್ರಿವೇಣಿ ಸಂಗಮದಲ್ಲಿ ಯಮುನೆ ಮತ್ತು ಗಂಗೆಯನ್ನು ಕೂಡಿಕೊಳ್ಳುತ್ತಾಳೆ.

ಸರಸ್ವತಿ ಈಗ ನದಿಯಾಗಿ ಇಲ್ಲದೇ ಇದ್ದರೂ ಕೂಡ, ದೇವತೆಯಾಗಿ ಮತ್ತು ಶುಭ್ರತೆಯ ಪ್ರತೀಕವಾಗಿ ನಮ್ಮ ಜೊತೆ ಸದಾ ಇದ್ದಾಳೆ.  ನಮ್ಮ ಮನಸ್ಸಿನಲ್ಲಿನ ಕಲ್ಮಶಗಳನ್ನು ತೊಳೆಯುತ್ತಾ ಶುಭ್ರತೆಯ ಕಡೆ ನಡೆಯುವುದರಿಂದ ನಾವು ಸರಸ್ವತಿ ದೇವಿಯನ್ನು ನಮ್ಮೊಳಗೆ ಸದಾ ಹರಿಯುವ ತರಂಗಿಣಿಯಂತೆ ಜೀವಂತವಾಗಿಟ್ಟುಕೊಳ್ಳಬಹುದು.  ನದಿಯಾಗಿ ಹರಿದ ಸರಸ್ವತಿಯ ಶಕ್ತಿಯನ್ನು ನಮ್ಮೊಳಗೆ ಸದಾ ಜಾಗೃತವಾಗಿರಿಸಿಕೊಳ್ಳುವ ಪ್ರಯತ್ನ ಮಾಡಬೇಕು.  ಸುಮಧುರವಾದ, ಉನ್ನತ ಅರ್ಥ ಬರುವ ಪದಗಳನ್ನು ಪ್ರಯೋಗಿಸಿ ಮಾತನಾಡುವ ಮೂಲಕ ನಮ್ಮ ’ತಾಯಿ’ ’ವಾಕ್ ದೇವಿ’ಗೆ ಗೌರವ ಸೂಚಿಸಬಹುದು.  ಋಗ್ವೇದವು ಸರಸ್ವತಿ ನದಿಯನ್ನು ಹಾಲು ತುಪ್ಪ ಕೊಡುವ ನದಿ ಎಂದೂ ಹೇಳಿದೆ.  ನಾವು ನಮ್ಮ ವಾಕ್ ಶುದ್ಧಿಯನ್ನು ಸದಾ ಪಾಲಿಸುವುದರಿಂದ ಹಾಲು ಕೊಟ್ಟ ತಾಯಿಯ ಶುದ್ಧ ಪ್ರೇಮಕ್ಕೆ ಪ್ರಾಶಸ್ತ್ಯ ಕೊಟ್ಟಂತಾಗುತ್ತದೆ.

ಬದರಿ ಕ್ಷೇತ್ರದ ವ್ಯಾಸಗುಹೆಯ ಬಳಿ ನಮಗೆ ಸರಸ್ವತಿ ನದಿಯ ಉಗಮ ಸ್ಥಾನವು ಕಾಣಸಿಗುತ್ತದೆ.  ಭೋರ್ಗರೆಯುತ್ತಾ ನಾದವನ್ನು ಹೊಮ್ಮಿಸುವ ಸರಸ್ವತಿ ನಂತರದಲ್ಲಿ ಕ್ಷೀಣವಾಗಿ ಹರಿಯುತ್ತಾಳೆ.  ವೇದವ್ಯಾಸರು ಗಣಪತಿಗೆ ಮಹಾಭಾರತದ ಉಕ್ತಲೇಖನ ಮಾಡುತ್ತಿದ್ದಾಗ, ಸರಸ್ವತಿ ದೇವಿಯು ತುಂಬು ಸಂಭ್ರಮದಿಂದ ಅಬ್ಬರಿಸುತ್ತಾ  ಶಬ್ದ ಮಾಡುತ್ತಿದ್ದಳೆಂದೂ, ವ್ಯಾಸರು ಕುಪಿತಗೊಂಡು ಅಂತರ್ಗಾಮಿಯಾಗುವಂತೆ ಶಾಪವಿತ್ತರೆಂದೂ ಸ್ಥಳೀಯರು ಕಥೆ ಹೇಳುತ್ತಾರೆ.  ಇಲ್ಲಿಂದ ಮುಂದುವರೆದು ಸರಸ್ವತೀ ನದಿಯು ಪ್ರಯಾಗದಲ್ಲಿ ಗುಪ್ತಗಾಮಿನಿಯಾಗಿ ಗಂಗೆ ಮತ್ತು ಯಮುನೆಯರನ್ನು ಕೂಡಿಕೊಳ್ಳುವುದರಿಂದ "ತ್ರಿವೇಣಿ ಸಂಗಮ"ವಾಗಿದೆ.

ಬ್ರಹ್ಮ ಪುರಾಣದಲ್ಲಿನ  ಶ್ರೀ ವೇಂಕಟೇಶ ಮಹಿಮೆಯ ಕಥೆಯಲ್ಲಿ ಶೇಷ ದೇವರ ವಿಚಾರ ಬರುತ್ತದೆ.  ಭಗವಂತ ಸದಾ ಶೇಷಶಾಯಿಯೇ ಆಗಿದ್ದರೂ ಕೂಡ, ಶೇಷನಿಗೆ ತೃಪ್ತಿಯೆನ್ನುವುದಿಲ್ಲ.  ಭಗವಂತನನ್ನು ಇನ್ನೂ ಅಧಿಕವಾಗಿ ಸೇವಿಸಬೇಕು ಎಂಬ ಬಯಕೆಯಿಂದ ತಪಸ್ಸು ಮಾಡಿದಾಗ ಭಗವಂತ ಶೇಷನನ್ನು ಕುರಿತು ಕೇಳುತ್ತಾನೆ.  ಸದಾ ಕಾಲವೂ  ನಿನ್ನ ಮೇಲೆಯೇ ಪವಡಿಸಿರುವ ನನ್ನನ್ನು ಇನ್ನೂ ಹೆಚ್ಚು ಸೇವಿಸಬೇಕೆಂಬ ಬಯಕೆ ಏಕೆ ಬಂತು? ಎಂದು.   ಆಗ ಶೇಷದೇವರು ಭಗವಂತನಿಗೆ ಉತ್ತರಿಸುತ್ತಾನೆ "ನೀನು ಅವತಾರವೆತ್ತಿ ಭೂಮಿಯಲ್ಲಿ ಪ್ರಕಟವಾದಾಗಲೂ ಕೂಡ ನಾನು ನಿನ್ನ ಜೊತೆಗೇ ಇರಬೇಕು.  ನೀನು ವೇಂಕಟೇಶನಾಗಿ, ಶಿಲೆಯಲ್ಲಿ ಪ್ರಕಟಗೊಂಡಾಗ, ನಾನೂ ಶಿಲೆಯಾಗಿ ಪರ್ವತ ರೂಪದಲ್ಲಿರುತ್ತೇನೆ, ನೀನು ಸದಾ ನನ್ನ ಮೇಲೆಯೇ ಭೂಮಿಯಲ್ಲೂ ಪವಡಿಸಿರಬೇಕು ಎಂದು ಕೇಳಿಕೊಳ್ಳುತ್ತಾನೆ" ಹಾಗೂ  ಭಗವಂತನ ಕೃಪೆಗೊಳಗಾಗುತ್ತಾನೆ.  ಶೇಷದೇವರು ಸಕಲ ಸತ್ಶಾಸ್ತ್ರಗಳ ಅಭಿಮಾನಿ ದೇವರು.  ಎಲ್ಲ ಜೀವಿಗಳಿಗೂ, ಜೀವಿಗಳ ಮನಸ್ಸಿಗೂ ಅಭಿಮಾನಿ ದೇವರಾದ ಶೇಷದೇವರ ಸಂಕೇತವೇ ತಿರುಪತಿಯ ಬೆಟ್ಟ ಮತ್ತು ಅದರ ಮೇಲೆ ಕುಳಿತಿರುವ ಭಗವಂತನು ಸರ್ವ ಶಾಸ್ತ್ರಗಳಿಗೆ ಒಡೆಯನಾಗಿರುತ್ತಾನೆ.  ಆದ್ದರಿಂದ ತಿರುಪತಿಯಲ್ಲಿ ಭಗವಂತನ ದರ್ಶನ ವಿಶೇಷವಾಗಿದೆ.  ಶೇಷ ದೇವರಂತೆಯೇ ದೇವತೆಗಳಲ್ಲೆಲ್ಲಾ ಉತ್ತಮಳಾದ ಸರಸ್ವತೀ ದೇವಿಯು, ಭಗವಂತನನ್ನು ಸದಾ ನೆನೆಯುತ್ತಾ, ಶರಣಾಗುವ ಭಕ್ತರು ಬಂದು ಮಿಂದಾಗ, ಅವರ ಪಾಪಗಳನ್ನೆಲ್ಲಾ ತೊಳೆದು, ಅವರಿಗೆ ಸತ್ಶಾಸ್ತ್ರದಲ್ಲಿ ಆಸಕ್ತಿ ಹುಟ್ಟಿಸಿ, ಮುಕ್ತಿ ಮಾರ್ಗದಲ್ಲಿ ತನ್ನ ಅಳಿಲು ಸೇವೆ ಸಲ್ಲಿಸಲು ಶ್ರೇಷ್ಠ ನದಿಯಾಗಬೇಕು ಎಂಬ ಮಹತ್ತರವಾದ ಆಸೆಯಿಂದ ತಪಸ್ಸು ಮಾಡುತ್ತಿರುತ್ತಾಳೆ.  ಇದೇ ಸಮಯದಲ್ಲಿ ಪುಲಸ್ತ್ಯ ಋಷಿಗಳು ಅಲ್ಲಿಗೆ ಬರುತ್ತಾರೆ.  ಸರಸ್ವತಿ ದೇವಿ ಗಮನಿಸುವುದಿಲ್ಲ ಮತ್ತು ಎದ್ದು ನಿಂತು ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುವುದಿಲ್ಲ.  ಇದರಿಂದ ಮನಸ್ಸಿಗೆ ನೋವಾದ ಪುಲಸ್ತ್ಯರು ನೀನು ಯಾವ ಕಾರಣಕ್ಕೆ ತಪಸ್ಸು ಮಾಡುತ್ತಿರುವೆಯೋ ಅದು ನೆರವೇರದೇ ಹೋಗಲಿ, ಸಕಲ ನದಿಗಳಲ್ಲಿ ಶ್ರೇಷ್ಠಳೆಂದು ಗಂಗೆಯೇ ಗುರುತಿಸಲ್ಪಡುವಳು ಎಂದು ಶಪಿಸಿಬಿಡುತ್ತಾರೆ.  ಕುಪಿತಗೊಂಡ ಸರಸ್ವತೀ ದೇವಿ ಕೂಡ ನಿನ್ನ ಕುಲದಲ್ಲಿ ರಾಕ್ಷಸರೇ (ಪುಲಸ್ತ್ಯರ ವಂಶಜರೇ ರಾವಣ ಹಾಗೂ ಕುಂಭಕರ್ಣರು) ಹುಟ್ಟಲಿ ಎಂದು ಮರುಶಾಪ ಕೊಟ್ಟುಬಿಡುತ್ತಾಳೆ.  ಪುಲಸ್ತ್ಯರು   ಪಶ್ಚಾತ್ತಾಪದಿಂದ ಸರಸ್ವತಿದೇವಿಗೆ ಶರಣಾಗುತ್ತಾರೆ.  ಆಗ ಸರಸ್ವತಿ ದೇವಿ ಪುಲಸ್ತ್ಯರಿಗೆ ನಿನ್ನ ವಂಶದ ಕೊನೆಯ ಮಗುವು (ವಿಭೀಷಣ) ವಿಷ್ಣು ಭಕ್ತನಾಗಿ ಹುಟ್ಟುವನು ಎಂದು ತಿಳಿಸುತ್ತಾಳೆ.  ಬ್ರಹ್ಮ ದೇವರಲ್ಲಿ ಸರಸ್ವತಿ ದೇವಿ ತನ್ನ ಅಳಲು ತೋಡಿಕೊಳ್ಳುತ್ತಾಳೆ.  ಅದಕ್ಕೆ ಬ್ರಹ್ಮ ದೇವರು, ಅದು ಬ್ರಾಹ್ಮಣ ಶಾಪ, ನೀನು ಅನುಭವಿಸಲೇ ಬೇಕು.  ಪುಲಸ್ತ್ಯರು ನೀನು ಶ್ರೇಷ್ಠ ನದಿಯಾಗಲಾರೆ ಎಂದಿದ್ದಾರೆಯೇ ಹೊರತು ಶ್ರೇಷ್ಠ ಪುಷ್ಕರಣಿ/ ತೀರ್ಥವಾಗಲಾಗದು ಎಂದಿಲ್ಲ.  ಆದ್ದರಿಂದ ನಿನ್ನ ತಪಸ್ಸು ಮುಂದುವರೆಸು ಎನ್ನುತ್ತಾರೆ.  ಸರಸ್ವತಿ ದೇವಿ ತಪಸ್ಸು ಮುಂದುವರೆಸಿ, ಶ್ರೇಷ್ಠ ಸರೋವರ/ ಪುಷ್ಕರಣಿ / ತೀರ್ಥಳಾಗಲು ವರ ಪಡೆಯುತ್ತಾಳೆ ಮತ್ತು ತಿರುಪತಿಯಲ್ಲಿ  "ಸ್ವಾಮಿ ಪುಷ್ಕರಣಿ"ಯೆಂದು ಕರೆಸಿಕೊಳ್ಳುತ್ತಾಳೆ.  ಕೃಷ್ಣನಿಗೆ ತಾಯಿಯಾದ ಯಶೋದೆಯೇ ಬಕುಳಾದೇವಿಯಾಗಿ, ತಿರುಪತಿಯ ಸ್ವಾಮಿ ಪುಷ್ಕರಿಣಿಯಲ್ಲಿ ಸರಸ್ವತೀ ನದಿಯ ನೀರು ನಿಲ್ಲಲು ಆಸರೆಯಾಗುತ್ತಾಳೆ.   ಹೀಗೆ ಶ್ರೇಷ್ಠವಾದ "ಸ್ವಾಮಿ ಪುಷ್ಕರಿಣಿ"ಯೆಂದು ಕರೆಸಿಕೊಂಡ ತಾಯಿ ಸರಸ್ವತಿ ನದಿಯಾಗಿ ಹರಿಯುವಾಗಲೂ ತನ್ನ ಮಡಿಲಲ್ಲಿ ಅನೇಕ ತೀರ್ಥಗಳನ್ನು ಹೊಂದಿದ್ದಳು ಎಂಬ ಅಂಶ ತಿಳಿಯುತ್ತದೆ.

 
ಮಹಾಭಾರತದ ಶಲ್ಯಪರ್ವದಲ್ಲಿ ಬಲರಾಮ ಕುರುಕ್ಷೇತ್ರ ಯುದ್ಧಕ್ಕೆ ಮೊದಲು ತೀರ್ಥಯಾತ್ರೆ ಹೊರಟುಬಿಡುತ್ತಾನೆ.  ತಾನು ಕೌರವರಿಗಾಗಲೀ ಪಾಂಡವರಿಗಾಗಲೀ ಯುದ್ಧದಲ್ಲಿ ಸಹಾಯ ಮಾಡುವುದಿಲ್ಲವೆಂದು ತಿಳಿಸಿರುತ್ತಾನೆ.  ಶ್ರೀಕೃಷ್ಣನು ಪಾಂಡವರಿಗೆ ಮಾತ್ರವಲ್ಲದೇ ಕೌರವರಿಗೂ ಸಹಾಯ ಮಾಡಬೇಕೆಂದು ಬಲರಾಮ ಸೂಚಿಸಿದಾಗ ಕೃಷ್ಣ ಆ ಮಾತನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ.  ಬಲರಾಮ ತೀರ್ಥಯಾತ್ರೆಗೆ "ಸರಸ್ವತಿ" ನದಿಯ ತೀರಕ್ಕೆ ಹೊರಟು ಬಿಡುತ್ತಾನೆ.  ಆ ಕಾಲದಲ್ಲಿ ನದಿಯು ತುಂಬಿ ಹರಿಯುತ್ತಾ ಬಹು ವಿಸ್ತಾರವಾಗಿ ಪಸರಿಸಿದ್ದಳು ಎಂಬುದು ಬಲರಾಮನ ತೀರ್ಥಯಾತ್ರೆಯ ವಿವರಗಳನ್ನು ಓದಿದಾಗ ತಿಳಿಯುತ್ತದೆ.   ತೀರ್ಥಯಾತ್ರೆಯಲ್ಲಿ ಬ್ರಾಹ್ಮಣರಿಗೆ ಕೊಡಬೇಕಾದ ದಾನಕ್ಕಾಗಿ ಪದಾರ್ಥಗಳನ್ನು ಯಥೇಚ್ಛವಾಗಿ ತೆಗೆದುಕೊಂಡು ಬಲರಾಮನು ಪುಣ್ಯಪ್ರದವಾದ ’ಪ್ರಭಾಸ’ ಕ್ಷೇತ್ರಕ್ಕೆ ಬರುತ್ತಾನೆ.  ಈ ಕ್ಷೇತ್ರ ಶಾಪಗ್ರಸ್ತನಾಗಿದ್ದ ಚಂದ್ರನು ಸರಸ್ವತಿ ನದಿಯ ಪ್ರಭಾಸತೀರ್ಥದಲ್ಲಿ ಸ್ನಾನ ಮಾಡಿ ಕಳೆದುಕೊಂಡಿದ್ದ ತನ್ನ ಕಾಂತಿಯನ್ನು ಮರಳಿ ಪಡೆದ ಕ್ಷೇತ್ರವಾಗಿದೆ.  ಹೀಗೆ ಬಲರಾಮನು ನದೀತೀರದಲ್ಲಿ ಮುಂದುವರೆಯುತ್ತಾ ಅನೇಕ ತೀರ್ಥಗಳಲ್ಲಿ ಮಿಂದು, ದಾನ, ಧರ್ಮಾದಿಗಳನ್ನು ಮಾಡುತ್ತಾ ಮುಂದೆ ಸಾಗುತ್ತಾನೆ.  ಸರಸ್ವತೀ ನದಿಯು ಪ್ರಭಾಸತೀರ್ಥ, ಉದಪಾನತೀರ್ಥ, ವಿನಶನತೀರ್ಥ ಸುಭೂಮಿಕಾತೀರ್ಥ, ಗರ್ಗಸ್ರೋತತೀರ್ಥ ಹೀಗೆ ಇನ್ನೂ ಅನೇಕ ತೀರ್ಥಗಳನ್ನು ತನ್ನ ಮಡಿಲಿನಲ್ಲಿ ಸೇರಿಸಿಕೊಂಡಿದೆ.  ಒಂದೊಂದು ತೀರ್ಥಕ್ಕೂ ಅದರದೇ ಆದ ಮಹಿಮೆ ಮತ್ತು ಕಥೆಯ ನಂಟು ಕೂಡ ಇದೆ.  ಸರಸ್ವತೀ ನದಿಯು ಅದೆಷ್ಟು ಕರುಣಾಮಯಿ ಮತ್ತು ಪವಿತ್ರಳು ಎಂದರೆ, ಒಮ್ಮೆ ತನ್ನ ತೀರ ನೈಮಿಷಾರಣ್ಯದಲ್ಲಿ ಸೇರಿದ್ದ ಅಸಂಖ್ಯಾತ ಋಷಿಗಳು ಸ್ನಾನಮಾಡಲಾಗದೇ ಪರಿತಪಿಸಿದಾಗ ತಾನು ಹರಿಯುವ ತನ್ನ ದಿಕ್ಕನ್ನೇ ಬದಲಾಯಿಸಿಕೊಂಡು ಹಿಂತಿರುಗಿ ಪೂರ್ವಕ್ಕೆ ಹರಿದು ಬಂದು ಋಷಿಗಳ ಅಭೀಷ್ಟವನ್ನು ನೆರವೇರಿಸಿದಳಂತೆ.  ಎಲ್ಲರೂ ಸಂತೃಪ್ತರಾದ ನಂತರ ಮತ್ತೆ  ದಿಕ್ಕನ್ನು ಬದಲಿಸಿಕೊಂಡು ಪಶ್ಚಿಮ ದಿಕ್ಕಿನಲ್ಲಿ ಹರಿದು ಹೋದಳೆಂಬ ಉಲ್ಲೇಖ ಮಹಾಭಾರತದಲ್ಲೇ ಬಂದಿದೆ.  ಇದರಿಂದ ನಮಗೆ ಸರಸ್ವತೀ ನದಿಯು ಪಡೆದಿದ್ದ ಪ್ರಾಮುಖ್ಯತೆ, ಅವಳ ವ್ಯಾಪ್ತಿಯ ಅರಿವು ಕೊಂಚ ಸಿಕ್ಕುತ್ತದೆ.  ಹೀಗೆ ತುಂಬಿ ಹರಿಯುತ್ತಿದ್ದ ನದಿಯು ಕಾಲ ಕಳೆದಂತೆ ತನ್ನೆಲ್ಲಾ ಸರಸು (ತೀರ್ಥಗಳು)ಗಳನ್ನೂ, ತನ್ನ ಮಡಿಲಿಗೆ ಬಂದು ಸೇರುತ್ತಿದ್ದ ಯಮುನೆ ಮತ್ತು ಶುತಾದ್ರಿ ನದಿಗಳನ್ನೂ ಕಳೆದುಕೊಂಡು ಸರಸ್ವತಿ ಕೃಶಳಾಗುತ್ತಾ ನೇಪತ್ಯಕ್ಕೆ ಸರಿದುಬಿಡುತ್ತಾಳೆ.  ಪ್ರಮುಖ ನದಿಗಳಾಗಿ ಗಂಗೆ ಯಮುನೆಯರಿಗೆ ಜಾಗ ಬಿಟ್ಟುಕೊಟ್ಟು ತಾನು ಗುಪ್ತಗಾಮಿನಿಯಾಗಿಬಿಡುತ್ತಾಳೆ.

ಸರಸ್ವತಿ ನದಿ ಏಳು ಭಾಗಗಳಾಗಿ ಇಡೀ ಜಗತ್ತನ್ನೇ ವ್ಯಾಪಿಸಿದ್ದಳು ಎಂಬ ಅಂಶ ಮಹಾಭಾರತದಲ್ಲಿ ಬಂದಿದೆ.  ತಪೋಬಲ ಸಂಪನ್ನರಾದ ಋಷಿಗಳು ಸರಸ್ವತಿಯನ್ನು ಎಲ್ಲೆಲ್ಲಿಗೆ ಆಹ್ವಾನಿಸಿದರೋ ಅಲ್ಲೆಲ್ಲಾ  ಬಂದು ಮಹರ್ಷಿಗಳ ಪೂಜೆಗೆ, ಯಜ್ಞ ಯಾಗಾದಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾಳೆ.  ಈ ಏಳು ನಾಮಧೇಯಗಳು ಹೀಗಿವೆ -
ಸುಪ್ರಭಾ ಕಾಂಚನಾಕ್ಷೀ ಚ ವಿಶಾಲಾ ಚ ಮನೋರಮಾ |
ಸರಸ್ವತೀ ಚೌಘವತೀ ಸುರೇಣುರ್ವಿಮಲೋದಕಾ || - ಸುಪ್ರಭಾ, ಕಾಂಚನಾಕ್ಷಿ, ವಿಶಾಲಾ, ಮನೋರಮಾ, ಸರಸ್ವತೀ, ಓಘವತೀ, ಸುರೇಣು ಮತ್ತು ವಿಮಲೋದಕಾ.

ಸರಸ್ವತಿಯ ಒಂದೊಂದು ಕವಲಿಗೂ ಒಂದೊಂದು ಕಥೆ ಮತ್ತು ಹೆಸರು ಬಂದಿದೆ.  ಮೊದಲನೆಯದಾಗಿ  ಪುಷ್ಕರತೀರ್ಥದಲ್ಲಿ ಬ್ರಹ್ಮದೇವನು ಮಹಾಯಜ್ಞವೊಂದನ್ನು ಮಾಡಿದಾಗ ಎಲ್ಲ ಸರಿತ್ತುಗಳಿಗೂ ಶ್ರೇಷ್ಠಳಾದ ಸರಸ್ವತಿಯನ್ನು ಮಂತ್ರಪೂರ್ವಕವಾಗಿ ಆಹ್ವಾನಿಸುತ್ತಾನೆ.  ಆ ಸಮಯದಲ್ಲಿ ಸರಸ್ವತಿಯು ’ಸುಪ್ರಭಾ’ ಎಂಬ ಹೆಸರಿನಲ್ಲಿ ಆವಿರ್ಭೂತಳಾಗುತ್ತಾಳೆ.  ಎರಡನೆಯದಾಗಿ ನೈಮಿಷಾರಣ್ಯದಲ್ಲಿ ಅನೇಕ ಮಹರ್ಷಿಗಳು ಒಟ್ಟಿಗೇ ಸೇರಿ ಸತ್ರಯಾಗ ಮಾಡುವ ಸಮಯದಲ್ಲಿ, ಮುನಿಗಳ ನಡುವೆ ವೇದಗಳ ವಿಷಯವಾಗಿ ವಿಚಿತ್ರ ಕಥೆಗಳಿಂದ ಕೂಡಿದ ಸಂಭಾಷಣೆ ನಡೆಯುತ್ತದೆ.  ಅಲ್ಲಿ ನೆರೆದಿದ್ದ ಮುನಿಗಳೆಲ್ಲರೂ ಕೂಡಿ ಸರಸ್ವತಿಯನ್ನು ಸ್ಮರಿಸುತ್ತಾರೆ.  ಸಮಾವೇಶಗೊಂಡಿದ್ದ ಮಹಾತ್ಮರ ಸಹಾಯಾರ್ಥವಾಗಿ ನೈಮಿಷಾರಣ್ಯದಲ್ಲಿ ’ಕಾಂಚನಾಕ್ಷೀ’ ಎಂಬ ಹೆಸರಿನಲ್ಲಿ ಪ್ರಕಟಗೊಳ್ಳುತ್ತಾಳೆ.  ಮೂರನೆಯದಾಗಿ ಗಯಾದೇಶದಲ್ಲಿ ಗಯಾರಾಜನು ಮಹಾಯಜ್ಞ ಮಾಡಿದಾಗ ಸರಿತ್ತುಗಳಲ್ಲಿ ಶ್ರೇಷ್ಠಳೆಂದು ಮಂತ್ರಪೂರ್ವಕವಾಗಿ ಸರಸ್ವತಿಯನ್ನು ಆಹ್ವಾನಿಸುತ್ತಾನೆ.  ಯಜ್ಞದ ಸಮಯದಲ್ಲಿ ಆಹೂತೆಯಾಗಿ ಬಂದ ಸರಸ್ವತಿಯನ್ನು ಮಹರ್ಷಿಗಳು ’ವಿಶಾಲಾ’ ಎಂದು ಕರೆದಿದ್ದಾರೆ.  ನಾಲ್ಕನೆಯದಾಗಿ ಉತ್ತರಕೋಸಲ ಪ್ರದೇಶದಲ್ಲಿ ಉದ್ದಾಲಕ ಮಹರ್ಷಿಯು ಯಜ್ಞವನ್ನು ಮಾಡಿ, ಸರಸ್ವತೀ ನದಿಯನ್ನು ಸ್ಮರಿಸುತ್ತಾನೆ.  ಋಷಿಗಳು ಸರಸ್ವತಿಯ ಮನೋಹರವಾದ ರೂಪವನ್ನು ಕಲ್ಪಿಸಿಕೊಂಡು ಚಿಂತಿಸಿದುದರಿಂದ ಅಲ್ಲಿ ಸರಸ್ವತಿ ’ಮನೋರಮಾ’ ಎಂದು ಪೂಜಿಸಿಕೊಂಡಳು.  ಐದನೆಯದಾಗಿ  ಮಹಾತ್ಮನಾದ ಕುರುರಾಜನು ಕುರುಕ್ಷೇತ್ರದಲ್ಲಿ ಯಜ್ಞಮಾಡಿದಾಗ ಅಲ್ಲಿಯೇ ಹರಿಯುತ್ತಿದ್ದ ಸರಸ್ವತಿಯನ್ನು ಋಷಿಗಳು ’ಸುರೇಣು’ ಎಂದು ಕರೆದರು ಹಾಗೂ ದಕ್ಷನು ಗಂಗಾದ್ವಾರದಲ್ಲಿ ಯಾಗ ಮಾಡಿ, ಸರಸ್ವತಿಯನ್ನು ಆಹ್ವಾನಿಸಿದಾಗ ಯಾಗದ ಸ್ಥಳಕ್ಕೆ ಶೀಘ್ರವಾಗಿ ಹರಿದು ಬಂದ ಸರಸ್ವತಿಯು ’ಸುರೇಣು’ವಾದಳು.  .  ಆರನೆಯದಾಗಿ ಮಹಾತ್ಮರಾದ ವಸಿಷ್ಠರು ಕುರುಕ್ಷೇತ್ರದಲ್ಲಿ ಯಜ್ಞಮಾಡಿ ಸರಸ್ವತಿಯನ್ನು ಆಮಂತ್ರಿಸಿದಾಗ ಮಹರ್ಷಿಯ ಮೇಲಿನ ಪ್ರೀತಿಯಿಂದ ಯಜ್ಞಶಾಲೆಗೆ ಆಗಮಿಸಿದ ಸರಸ್ವತಿಯನ್ನು ಅಲ್ಲಿದ್ದ ಬ್ರಾಹ್ಮಣ ಶ್ರೇಷ್ಠರು ’ಓಘವತೀ’ ಎಂದು ಕರೆದರು.  ಕೊನೆಯ ಹಾಗೂ ಏಳನೆಯ ಕವಲಾಗಿ ಪಿತಾಮಹನು ಹಿಮವತ್ಪರ್ವತದಲ್ಲಿ ಪುನಃ ಯಜ್ಞ ಮಾಡಿ ಸರಸ್ವತಿಯನ್ನು ಆವಾಹಿಸಿದಾಗ ಬ್ರಹ್ಮನ ಆವಾಹನವನ್ನು ಗೌರವಿಸಿ ಆಗಮಿಸಿದ ಸರಸ್ವತಿಯನ್ನು ’ವಿಮಲೋದಾ’ ಎಂದು ಕರೆದರು.

ಶ್ರೀವಾದಿರಾಜ ಸ್ವಾಮಿಗಳ "ತೀರ್ಥ ಪ್ರಬಂಧ" ಕೃತಿಯಲ್ಲಿ ಸೌರಾಷ್ಟ್ರದ "ಪ್ರಭಾಸಕ್ಷೇತ್ರ"ದಲ್ಲಿ ಕಪಿಲಾ ನದಿಯು ಸರಸ್ವತೀ ನದಿಯನ್ನೂ, ಸರಸ್ವತೀ ನದಿ ಹಿರಣ್ಯೆಯನ್ನೂ, ಹಿರಣ್ಯಾನದಿಯು ಸಮುದ್ರವನ್ನೂ ಸೇರುತ್ತದೆ ಎಂದಿದ್ದಾರೆ.  ಆದ್ದರಿಂದ ಇದೂ ಕೂಡ ತ್ರಿವೇಣೀ ಸಂಗಮ ಮತ್ತು ಇದಕ್ಕೆ "ಪ್ರಾಚೀತ್ರಿವೇಣೀ" ಎಂಬ ಹೆಸರಿದೆ ಎಂದಿದ್ದಾರೆ.   ಈ ಕ್ಷೇತ್ರವನ್ನೂ, ನದಿಗಳ ಸಂಗಮವನ್ನೂ ವರ್ಣಿಸುತ್ತಾ ವಾದಿರಾಜ ಗುರುಗಳು "ಸರಸ್ವತೀ ಹಿರಣ್ಯಾಭ್ಯಾಂ ಸಗೋ ಯತ್ರಪರಾಂಬುಧೇಃ | ಪ್ರಭಾಸಾಖ್ಯಂ ತದಾಭಾತಿ ಪ್ರಭಾಸ ಹಿ ಯತೋ ಭುವಃ" || - ಯಾವ ಪ್ರಭಾಸ ಕ್ಷೇತ್ರದಲ್ಲಿ ಪಶ್ಚಿಮ ಸಮುದ್ರಕ್ಕೆ ಸರಸ್ವತೀ ಮತ್ತು ಹಿರಣ್ಯಾನದಿಗಳ ಸಂಗಮವು ಉಂಟಾಗುತ್ತದೆಯೋ ಅಂತಹ ಪ್ರಾಭಾಸವೆಂಬ ಕ್ಷೇತ್ರವು ಶೋಭಿಸುತ್ತದೆ ಎಂದಿದ್ದಾರೆ. ಶ್ರೀ ರಾಘವೇಂದ್ರ ಸ್ವಾಮಿಗಳು ರಚಿಸಿರುವ "ನದಿ ತಾರತಮ್ಯ" ಸ್ತೋತ್ರದಲ್ಲಿ ಕೂಡಾ "ಸ್ವಾಮಿ ಚಂದ್ರಾ ಪುಷ್ಕರಿಣ್ಯೌ ಮಾನಸಂ ಚ ಸರೋವರಂ |  ಕೃಷ್ಣವೇಣ್ಯಾಃ ಸಮಸ್ತಾಭ್ಯಃ ಕಾವೇರೀ ಚ ಸರಸ್ವತೀ" || ಎಂಬ ಉಲ್ಲೇಖವಿದೆ. 

ನಮ್ಮ ಸಂಸ್ಕೃತಿಯಲ್ಲಿ ನದಿಗಳನ್ನು ಸ್ತ್ರೀಯರಿಗೆ ಹೋಲಿಸಲಾಗಿದೆ.  ಸ್ತ್ರೀ ಶಕ್ತಿಯೇ ಸೃಷ್ಟಿಗೆ, ಸಂಸಾರಕ್ಕೆ, ವ್ಯುತ್ಪತ್ತಿಗೆ ಎಲ್ಲದಕ್ಕೂ ಮೂಲ.  ಪ್ರಳಯ ಕಾಲದಲ್ಲಿ ವಟಪತ್ರಶಾಯಿಯಾಗಿ ಮಲಗಿದ್ದ ಶ್ರಿಮನ್ನಾರಾಯಣನು ಸೃಷ್ಟಿಗಾಗಿ ಎಚ್ಚರಗೊಂಡಾಗ ಅಂಭ್ರಣೀ ದೇವಿಯಾಗಿ ಲಕ್ಷ್ಮೀದೇವಿಯು ಭಗವಂತನನ್ನು ವೇದಾದಿಗಳಿಂದ ಸ್ತುತಿಸುತ್ತಾಳೆ.  ಹೀಗೆ ಅಂಭ್ರಣೀದೇವಿಯನ್ನು ಪ್ರೇರಿಸಿದ ಭಗವಂತ ಮೊಟ್ಟ ಮೊದಲು ವೇದಗಳನ್ನು ಅಭಿವ್ಯಕ್ತಗೊಳಿಸುತ್ತಾನೆ.   ಸೃಷ್ಟಿಯ ಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಭಗವಂತ ಅಂಭ್ರಣೀ ದೇವಿಯು ತನ್ನನ್ನು ಸ್ತುತಿಸುವಂತೆ ಮಾಡಿ, ಪ್ರೇರಕ ಶಕ್ತಿಯಾಗಿ ಸ್ತ್ರೀಶಕ್ತಿಗೆ ಪ್ರಾಧಾನ್ಯತೆ ಕೊಡುತ್ತಾನೆ.  ಶ್ರೀಮದ್ಭಾಗವತದಲ್ಲಿ ಬರುವ ಮೈತ್ರೇಯ ಹಾಗೂ ವಿದುರರ ಸಂವಾದದಿಂದ ತಿಳಿಯುವುದೇನೆಂದರೆ ಭಗವಂತನಾದ ಶ್ರೀಹರಿಯು ಜಡಪ್ರಕೃತಿಯನ್ನೂ ಮತ್ತು ಅದರ ಅಭಿಮಾನಿನಿ ಚೇತನಪ್ರಕೃತಿಯನ್ನೂ ಉಪಯೋಗಿಸಿಕೊಂಡು ಜಗತ್ತನ್ನು ಸೃಷ್ಟಿಸಿದನು. ಪ್ರಳಯ ಕಾಲದಲ್ಲಿ ಶ್ರೀಹರಿಯ ಪತ್ನಿಯಾದ ಚಿತ್ಪ್ರಕೃತಿ (ಜಡ ಹಾಗೂ ಚೇತನ)ದೇವಿಯಾಗಿ ಲಕ್ಷ್ಮಿಯು ಸುಪ್ತಳಾಗಿರುವಳು.  ಸೃಷ್ಟಿಯ ಕಾಲದಲ್ಲಿ  ಹರಿಯೇ ಪ್ರಧಾನನಾದುದರಿಂದ ’ಮಯ’ನೆನಿಸುವನು ಮತ್ತು ಚೇತನ-ಜಡ ಪ್ರಕೃತಿಗಳೆರಡೂ ’ಮಾಯಾ’ ಎನಿಸುವುವು.  ಈ ಉಭಯ ಪ್ರಕೃತಿಗಳಲ್ಲೂ ಶ್ರೀಹರಿಯು ತನ್ನ ವೀರ್ಯವನ್ನಿಟ್ಟು, ಸಾಕ್ಷಾತ್ ಲಕ್ಷ್ಮೀದೇವಿಯಲ್ಲಿ ಪ್ರಳಯ ಕಾಲದಲ್ಲಿ ಸುಪ್ತವಾಗಿದ್ದ ’ಜಗತ್ಸೃಷ್ಟಿ’ಯ ಶಕ್ತಿಯನ್ನು ಉದ್ರೇಕಗೊಳಿಸುವನು.  ಪರಿಣಾಮವಾಗಿ ’ಮಹತ್ತತ್ವ’ವೂ, ಬ್ರಹ್ಮದೇವರೂ  ಹುಟ್ಟಿ, ಸೃಷ್ಟಿಯ ಕಾರ್ಯವು ಮುಂದುವರೆಯಿತು.  ಹೀಗೆ ಭಗವಂತನು ಸ್ತ್ರೀಶಕ್ತಿಯ ಅಭಿವ್ಯಕ್ತತೆಯನ್ನು ಸೃಷ್ಟಿಯ ಕಾಲದಲ್ಲಿಯೇ ಪ್ರಕಟಪಡಿಸಿದ್ದಾನೆ.  ನಿತ್ಯ ಸಂಸಾರಿಗಳನ್ನು ಸೃಷ್ಟಿಸಿ, ಸ್ತ್ರೀಯನ್ನು ಕೇಂದ್ರ ಬಿಂದುವಾಗಿಸಿ ಸಂಸಾರದ ಎಳೆಗಳನ್ನು ಜೋಡಿಸಿ ಹಿಡಿದುಕೊಂಡು, ದಿಕ್ಕು ತಪ್ಪದಂತೆ ಸಂಸಾರ ರಥವನ್ನು ನಡೆಸುವ ಶಕ್ತಿಯನ್ನಾಗಿಸಿದ್ದಾನೆ.  


ಸರಸ್ವತಿ ನದಿಯು ಕೂಡ ಸ್ತ್ರೀಯ ವ್ಯಕ್ತಿತ್ವಕ್ಕೆ ಕನ್ನಡಿಯಂತಿದ್ದವಳು.  ತನ್ನ ಮಡಿಲ ತುಂಬಾ ಅನೇಕ ಸರಸ್ಸುಗಳನ್ನು ಹೊಂದಿದ್ದ ಸರಸ್ವತಿ ಹಲವಾರು ಮಕ್ಕಳನ್ನು ಹೆತ್ತ ತಾಯಿಯಂತಿದ್ದಳು.  ತಾಯಿಯು ತನ್ನ ಮಡಿಲು ತುಂಬಿರುವ ಮಕ್ಕಳನ್ನು ಎಂದಿಗೂ ಭಾರವೆಂದು ತಿಳಿಯುವುದೇ ಇಲ್ಲ.  ಎಲ್ಲರ ಜವಾಬ್ದಾರಿಯನ್ನೂ, ಭಾರವನ್ನೂ ತಾನೇ ಹೊತ್ತು ಸಂತೋಷದಿಂದ, ಅಗಾಧವಾದ ಅಕ್ಕರೆಯನ್ನು ಎಲ್ಲ ಮಕ್ಕಳಿಗೂ ಸಮೃದ್ಧವಾಗಿ ಉಣಬಡಿಸಿ, ಮಕ್ಕಳ ಪವಿತ್ರತೆ, ಪ್ರವರ್ಧಮಾನ ಮತ್ತು ಪ್ರಾಮುಖ್ಯತೆಯನ್ನು ನೋಡಿ ಮನದಲ್ಲೇ ತೃಪ್ತಿ - ಸಂತೋಷವನ್ನು ಅನುಭವಿಸುತ್ತಾಳೆ.  ಸರಸ್ವತಿ ನದಿಯೂ ಕೂಡ ಹೀಗೇ ತನ್ನ ಸರಸ್ಸುಗಳೆಂಬ ಮಕ್ಕಳನ್ನು ಧರಿಸಿ ಗಂಭೀರವಾಗಿ ಪ್ರವಹಿಸುತ್ತಿದ್ದವಳು.  ಸ್ತ್ರೀಯ ಅತಿ ಮುಖ್ಯ ಗುಣವಾದ ಕರುಣೆಯನ್ನೂ ಅಕ್ಕರೆಯನ್ನೂ ತನ್ನ ಒಡಲಿನಲ್ಲಿ ತುಂಬಿಸಿಕೊಂಡಿದ್ದವಳು. ಎಲ್ಲಿ ಋಷಿ ಮುನಿಗಳು ತಮ್ಮ ಸ್ನಾನ-ಪಾನಾದಿಗಳಿಗಾಗಿ ಕರೆಯುತ್ತಿದ್ದರೋ, ಅಲ್ಲಿಗೆ ತಾನು ಹರಿಯುವ ದಿಕ್ಕನ್ನೇ ಬದಲಾಯಿಸಿಕೊಂಡು ಧಾವಿಸಿ ಬಂದೊದಗುತ್ತಿದ್ದವಳು.  ಸದಾ ಸರ್ವದಾ ತನ್ನ ಸಂಸಾರ ಹಾಗೂ ಪರರ ಹಿತಚಿಂತನೆಯನ್ನೇ ಮಾಡುತ್ತಾ, ಪ್ರತಿ ನಿಮಿಷವೂ ಕರೆಗೆ ಓಗೊಟ್ಟು ನಿಲ್ಲುವ ತಾಯಿಯಂತೆ, ಸರಸ್ವತಿ ನದಿ ತನ್ನನ್ನು ಆಹ್ವಾನಿಸಿದಲ್ಲೆಲ್ಲಾ ಕವಲುಗಳಾಗಿ ಆವಿರ್ಭವಿಸಿದಳು.  ಎಲ್ಲೆಲ್ಲಿ ದೇವತಾ ಕಾರ್ಯಗಳು, ಯಾಗ ಯಜ್ಞಗಳು ನಡೆಯುತ್ತಿದ್ದವೋ, ಅಲ್ಲಿಗೆಲ್ಲಾ ಒದಗಿ ಬಂದು ಭಗವತ್ಪೂಜೆಗೆ ಅನುಕೂಲ ಮಾಡಿಕೊಟ್ಟವಳು.  ತನ್ನ ಮಡಿಲಿಗೆ ಬಂದ ಯಾವುದೇ ಮಗುವಾದರೂ ಅದನ್ನು ಬರಸೆಳೆದು, ಅಕ್ಕರೆಯ ಧಾರೆಯನ್ನೇ ಹರಿಸುವ ಅಮ್ಮನಂತೆ, ಸರಸ್ವತಿ ನದಿಯು ತನ್ನನ್ನು ಸೇರಲು ಬಂದ ಶ್ರುತಾದ್ರಿ ಹಾಗೂ ಯಮುನೆಯರನ್ನು ಅಕ್ಕರೆಯಿಂದ ಮೈದುಂಬಿಸಿಕೊಂಡವಳು.  ತಾನು ಅಮೃತವನ್ನೇ ಉಣಬಡಿಸಿದ್ದರೂ, ತನ್ನನ್ನು ಮರೆತು ತೊರೆದು ಹೋದ ಮಕ್ಕಳನ್ನಾಗಲೀ, ಇತರರನ್ನಾಗಲೀ ಎಂದಿಗೂ ಶಪಿಸದೆ, ತನ್ನೊಳಗೇ ಕೊರಗಿ, ಕರಗಿ ಕ್ಷೀಣವಾಗುವ ನಿಷ್ಕಲ್ಮಷ ಭಾವದ ತುಂಬು ಮನಸ್ಸಿನ ತಾಯಿಯಂತೇ ಸರಸ್ವತಿ ನದಿಯು ಕೂಡ ಉದಾತ್ತ ಭಾವವನ್ನು ತೋರಿದ್ದವಳು.  ತನ್ನನ್ನು ತೊರೆದು ಹೋದ ಯಮುನೆಯನ್ನೂ, ಶ್ರುತಾದ್ರಿಯನ್ನೂ ಕಳೆದುಕೊಂಡು, ತಾನು ಕ್ಷೀಣಳಾಗಿ, ಕರಗಿ, ಕೊರಗಿ, ಮೌನದಿಂದಲೇ ಗುಪ್ತಗಾಮಿನಿಯಾಗಿ ಮರೆಯಾಗಿರುವ  ಸರಸ್ವತಿ ನದಿಯು ಮಾತೆಯ ಶ್ರೇಷ್ಠತೆಯ ಪ್ರತೀಕವಾಗುತ್ತಾಳೆ.  ನೆನಪಿಸಿಕೊಂಡಾಗಲೆಲ್ಲಾ ಒಂದು ಮಧುರ ಹಾಗೂ ಗೌರವಯುತವಾದ ತಂಗಾಳಿಯಂತೆ ಸುಳಿದು ಮಾತೃ ಸ್ಥಾನದಲ್ಲಿ ಸರಸ್ವತಿ ನದಿಯು ತಂಪೆರೆಯುತ್ತಾಳೆ. 


ಚಿತ್ರಕೃಪ್ತೆ : ಅಂತರ್ಜಾಲ