Monday, August 31, 2009

ಸಂಬಂಧಗಳ ಸುಳಿಯಲ್ಲಿ.........

ಮದುವೆಯೆಂದರೆ ಎರಡು ಜೀವಗಳ, ಎರಡು ಆತ್ಮಗಳ ಮಿಲನವೆಂದೇ ನಂಬಿಕೆ. ಪತಿ-ಪತ್ನಿಯರ ಸಂಬಂಧ ಎಲ್ಲಾ ಸಂಬಂಧಗಳಿಗಿಂತಲೂ ಅತ್ಯಂತ ನವಿರಾದ, ಸೂಕ್ಷ್ಮವಾದ, ಭಾವನೆಗಳ ಸಂಗಮ. ಇಚ್ಛೆಯರಿತು ನಡೆಯುವ ಸತಿ ಇರುವಾಗ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಅರಿತು ನಡೆಯುವ, ಪ್ರೀತಿಸುವ, ಹೆಂಡತಿಯನ್ನೂ ಒಂದು ಜೀವ, ಭಾವನೆಗಳ ಮಹಾಪೂರವೆಂದು ಓಲೈಸುವ ಪತಿಯಿರುವಾಗ, ಸತಿಯೂ ಖಂಡಿತಾ ಸ್ವರ್ಗಕ್ಕೆ ಕಿಚ್ಚು ಹಚ್ಚಬಲ್ಲಳು. ಒಬ್ಬರನ್ನೊಬ್ಬರು ಅರಿತು ನಡೆಯುವ ಪತಿ-ಪತ್ನಿಯರಿಂದ ಮನೆ ಮನೆಯಾಗಿರುತ್ತದೆ, ದೇಗುಲವಾಗಿರುತ್ತದೆ. ದುಡಿದು ಬರುವ ಪತಿಗೆ ಅಕ್ಕರೆ ತೋರುವ ಪತ್ನಿ, ಆದರಿಸುವ ತಾಯಿ-ತಂದೆ, ಮುದ್ದಿನ ಮಕ್ಕಳು ಇದ್ದರೆ ಮನೆ ಸ್ವರ್ಗವೇ !!!!!

ಋಣಾನುಬಂಧ ರೂಪೇಣ ಪತಿ, ಪತ್ನಿ, ಸುತಾ, ಆಲಯ: ಎಂಬುದು ಎಷ್ಟು ಸತ್ಯವಾದದ್ದು. ಒಳ್ಳೆಯ ಪತಿ ಸಿಗಲೂ ಅಥವಾ ಪತ್ನಿ ಸಿಗಲೂ ಕೂಡ ನಾವು ಪುಣ್ಯ ಸಂಪಾದಿಸಿರಲೇ ಬೇಕು. ಈ ಮದುವೆ ಎಂಬುದು ಒಂದು ರೀತಿಯ ಜೂಜೇ ಸರಿ. ಕೆಲವರಿಗೆ ಎಲ್ಲವೂ ಒಳ್ಳೆಯದಾಗಿ ಅರಿತು ನಡೆಯುವ, ಗೃಹಿಣೀ ಗೃಹಮುಚ್ಯತೇ ಎಂಬಂತೆ ಪತ್ನಿ ಸಿಕ್ಕರೆ, ಕೆಲವರ ಅದೃಷ್ಟದಲ್ಲಿ ಅದು ಇರುವುದಿಲ್ಲ. ಪತಿಯ ಮನಸ್ಸನ್ನು ಅರ್ಥವೇ ಮಾಡಿಕೊಳ್ಳದ, ಕೆಟ್ಟ ಪತ್ನಿಯರು ತಮ್ಮ ಜೀವನವನ್ನು ನರಕವಾಗಿಸಿಕೊಳ್ಳುವುದಲ್ಲದೇ, ಬಾಂಧವ್ಯ ಬೆಸೆದುಕೊಂಡ ಪತಿಯ ಜೀವನವನ್ನೂ ನರಕವಾಗಿಸಿಬಿಟ್ಟಿರುತ್ತಾರೆ. ಅದೇ ರೀತಿ ಪತ್ನಿಯೆಂದರೆ ಕೇವಲ ಭೋಗದ ವಸ್ತು ಮತ್ತು ತನ್ನ ಮನೆಯನ್ನು-ಮಕ್ಕಳನ್ನು ನೋಡಿಕೊಳ್ಳುವ ಒಬ್ಬ ಸಂಬಳವಿಲ್ಲದೇ ದುಡಿಯುವ ಯಂತ್ರವೆಂದು ತಿಳಿದಿರುವ ಪತಿಗಳೂ ನಮಗೆ ಹೇರಳವಾಗಿ ಸಿಗುತ್ತಾರೆ. ಒಟ್ಟಿನಲ್ಲಿ ಜೀವನದಲ್ಲಿ ಪರಸ್ಪರ ಅರಿತು ನಡೆಯುವುದರಲ್ಲೇ ಸ್ವಾರಸ್ಯ ಇದೆಯೆಂದು ಗಂಡ-ಹೆಂಡಿರಿಬ್ಬರೂ ಅರ್ಥ ಮಾಡಿಕೊಂಡಾಗ ಮಾತ್ರವೇ ಮದುವೆ ಎಂಬ ಸಂಬಂಧಕ್ಕೆ ಒಂದು ಅರ್ಥ ಬರುವುದು.

ನಮ್ಮ ಸಂಸ್ಕೃತಿಯಲ್ಲಿ ಬೇಕೆಂದಾಗ ಬಿಟ್ಟು ಬೇರೊಬ್ಬರನ್ನು ಅರಸಿ ಹೋಗುವುದು ಇಲ್ಲವಾದ್ದರಿಂದ ಕೆಲವು ಸಲ ಮದುವೆ ಎಂಬ ವ್ಯವಸ್ಥೆ ಪಕ್ಕಾ ಜೂಜಾಗಿ ಬಿಡುತ್ತದೆ. ಗುರು-ಹಿರಿಯರು ನೋಡಿ, ಒಪ್ಪಿ ಸಾಂಪ್ರದಾಯಿಕವಾಗಿ ಜಾತಕ ಹೊಂದಿಸಿ ಮಾಡಿದ ಎಷ್ಟೋ ಮದುವೆಗಳೂ ವಿಫಲವಾಗಿವೆ. ಒಟ್ಟಿನಲ್ಲಿ ನಮಗೆ ಇಂತಹ ಉದಾಹರಣೆಗಳಿಂದ ಪರಸ್ಪರ ಗೌರವಿಸುವುದು, ಅರಿತು ನಡೆಯುವುದು ಅತ್ಯಂತ ಮುಖ್ಯವಾದ ವಿಚಾರ ಎಂಬುದು ಮನದಟ್ಟಾಗುತ್ತದೆ. ವಿಭಿನ್ನ ಹವ್ಯಾಸಗಳುಳ್ಳ, ವಿಭಿನ್ನ ಪರಿಸರದಲ್ಲಿ ಬೆಳೆದ ಇಬ್ಬರು ವ್ಯಕ್ತಿಗಳು, ಒಂದಾಗಿ ಜೀವನದ ರಥಕ್ಕೆ ಎರಡು ಗಾಲಿಗಳಾದಾಗ, ಪಯಣ ಸುಖಕರವಾಗಿರಬೇಕೆಂದರೆ ರಥದ ಚುಕ್ಕಾಣಿ ಇಬ್ಬರ ಕೈಯಲ್ಲೂ ಒಟ್ಟಿಗೇ ಇರಬೇಕು ಮತ್ತು ರಥ ನಡೆಸುವ ಕಲೆಯನ್ನು ಇಬ್ಬರೂ ಖಡ್ಡಾಯವಾಗಿ ಕಲಿಯಲೇಬೇಕು. ಪರಸ್ಪರರ ಹವ್ಯಾಸಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣವಿರಬೇಕು. ಒಬ್ಬರು ಇನ್ನೊಬ್ಬರ "ಟೈಮ್ ಪಾಸ್" ಆಗಿಬಿಟ್ಟರೆ, ವೈಯುಕ್ತಿಕ ಬೆಳವಣಿಗೆಯೇ ಇಲ್ಲದೆ ರಥ ಮುಗ್ಗರಿಸುತ್ತದೆ. ಸಂಗೀತ-ಸಾಹಿತ್ಯದ ಗಂಧವೇ ಇಲ್ಲದ ವ್ಯಕ್ತಿಯ ಜೊತೆ, ಅದನ್ನೇ ಉಸಿರು ಎನ್ನುವಷ್ಟರ ಮಟ್ಟಿಗೆ ಪ್ರೀತಿಸುವ ಸಂಗಾತಿ ಬಾಳುವುದು ಕಷ್ಟ. ಸಂಗೀತ ಗೊತ್ತಿಲ್ಲದಿದ್ದರೂ, ಹಾಡಲು ಬರದಿದ್ದರೂ, ಕೇಳುವ ತಾಳ್ಮೆಯಾದರೂ ಇರಬೇಕು. ಹಾಗೇ ಸಾಹಿತ್ಯ ಗೊತ್ತಿಲ್ಲದಿದ್ದರೂ, ಪ್ರೋತ್ಸಾಹಿಸುವ, ಪೋಷಿಸುವ ಗುಣವಾದರೂ ಇರಬೇಕು. ಇಷ್ಟೆಲ್ಲಾ ಪರಸ್ಪರ ಅರಿಯುವ ಗುಣವಿದ್ದರೂ ಕೂಡ ದಾಂಪತ್ಯವೆಂಬ ಸಂಬಂಧದ ಕೊಂಡಿ ಅತ್ಯಂತ ನವಿರಾದ ಹಗ್ಗದ ಮೇಲಿನ ನಡಿಗೆಯಂತೆ, ಹರಿತವಾದ ಖಡ್ಗದ ಮೇಲಿನ ನಡಿಗೆಯಂತೆ. ಬೀಳುವುದು, ಏಳುವುದು ಎಲ್ಲಾ ಸರ್ವೇ ಸಾಮಾನ್ಯ. ಆದರೆ ಏನೇ ಆದರೂ ಜೊತೆ ಬಿಡದಂತೆ ಸಾಗುವ ಧೈರ್ಯ-ಕೆಚ್ಚು ಇರಲೇಬೇಕು.

ಯೌವನದ ಹುರುಪಿನಲ್ಲಿ ತೆಗೆದುಕೊಂಡ ಅಪಕ್ವ ಮನಸ್ಸಿನ ನಿರ್ಧಾರಗಳನ್ನು, ಪಕ್ವವಾಗಿಸಿಕೊಂಡು, ಹಾವು ಬಂದಾಗ ಬುದ್ಧಿವಂತಿಕೆಯಿಂದ ತಪ್ಪಿಸಿಕೊಳ್ಳುತ್ತಾ, ಏಣಿ ಸಿಕ್ಕಾಗ ಏರುತ್ತಾ, ಹಿಗ್ಗದೇ - ಕುಗ್ಗದೇ ಜೀವನ ಪರ್ಯಂತ ಆಡಬೇಕಾದ ಆಟ "ಮದುವೆ". ಆದರ್ಶಗಳ ಬೆನ್ನು ಹತ್ತಿ ಪ್ರೀತಿಸಿ ಮದುವೆಯಾಗಿ, ಬಿಸಿ ಆರಿದ ನಂತರ ಹತಾಶರಾಗುವ ಜೋಡಿಗಳು, ಸಾವಿರಾರು ಉದಾಹರಣೆಗಳಾಗಿ ನಮ್ಮ ಮಧ್ಯದಲ್ಲೇ ಇವೆ. ಆದರ್ಶಗಳನ್ನು ಬೆಳೆಸಿಕೊಳ್ಳುವುದು ತಪ್ಪಲ್ಲ, ಅದನ್ನು ಪೋಷಿಸಿಕೊಂಡು, ಕೊನೆತನಕ ಉಳಿಸಿಕೊಳ್ಳುವ ಛಲವನ್ನೂ ಜೊತೆಗೆ ಬೆಳೆಸಿಕೊಂಡಾಗ ಮಾತ್ರವೇ ಮದುವೆ ಯಶಸ್ವಿಯಾಗುವುದು. ಆಂಗ್ಲದಲ್ಲಿ ಹೇಳಿದಂತೆ.. Marriage is an institution........ ಅಂದರೆ ಮದುವೆ ಬರಿಯ ಇಬ್ಬರು ವ್ಯಕ್ತಿಗಳ ಮಧ್ಯೆ ನಡೆಯುವ ಒಂದು ಸಂಬಂಧ ಅಲ್ಲ, ಇಬ್ಬರ ಸಂಸಾರಗಳೂ ಒಟ್ಟುಗೂಡುವ, ಒಂದೇ ಪರಿವಾರ ಆಗಿಬಿಡುವ ಒಂದು ಅತ್ಯಂತ ಮಧುರವಾದ ಬೆಸುಗೆ. ಈ ಬೆಸುಗೆ ನವಿರಾದ ಭಾವನೆಗಳನ್ನು ಸುಂದರವಾಗಿ ಹೆಣೆಯಲ್ಪಟ್ಟ ಒಂದು ಚಿತ್ತಾರವಾಗಬೇಕೇ ಹೊರತು, ಚುಕ್ಕೆ ತಪ್ಪಾದ, ಆಕಾರವಿಲ್ಲದ ರಂಗೋಲಿಯಾಗಬಾರದು.

12 comments:

  1. ಮದುವೆ ಎನ್ನುವ ಪದದ ಚುಂಗನ್ನು ಹಿಡಿದು ಎಷ್ಟೊಂದು ವಿಚಾರಗಳನ್ನು ಅವಲೋಕಿಸಿದ್ದೀರಿ...ಮತ್ತು ಇದನ್ನು ಮದುವೆ ಬರಹವೆನ್ನುವುದಕ್ಕಿಂತ ಬದುಕಿನ ಬರಹವೆನ್ನಬಹುದು...ಚೆನ್ನಾಗಿದೆ.

    ReplyDelete
  2. ಮದುವೆ ಎಂಬ ಬಂಧನದಲ್ಲಿ ಪರಸ್ಪರ ನಂಬಿಕೆ ಮುಖ್ಯ. ಗೌರವ, ನಂಬಿಕೆ, ತಾಳ್ಮೆ, ಹೊಂದಾಣಿಕೆ, compromise ಇಲ್ಲದಿದ್ದರೆ ಈ ಸಂಬಂಧದಲ್ಲಿ ಅರ್ಥವೇ ಇಲ್ಲ. ಚೆನ್ನಾಗಿದೆ ಲೇಖನ

    ReplyDelete
  3. ನಮಸ್ಕಾರ ಶಿವು ಅವರಿಗೆ......

    ನನ್ನ ಬ್ಲಾಗ್ ಗೆ ಸುಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೇ ಬರುತ್ತಿರಿ....

    ಶ್ಯಾಮಲ

    ReplyDelete
  4. ನಮಸ್ಕಾರ ಸಾರ್...
    ನಿಮಗೂ ನನ್ನ ಬ್ಲಾಗ್ ಗೆ ಸುಸ್ವಾಗತ. ಹೌದು ಸಾರ್ ಎಲ್ಲಕ್ಕಿಂತ ಹೆಚ್ಚಿಗೆ "ಹೊಂದಾಣಿಕೆ" ಅತಿ ಮುಖ್ಯ ಮದುವೆಯ ಯಶಸ್ಸಿಗೆ... ಧನ್ಯವಾದಗಳು ಪ್ರತಿಕ್ರಿಯಿಸಿದ್ದಕ್ಕೆ. ಹೀಗೇ ಭೇಟಿ ಮಾಡಿತ್ತಿರಿ...

    ಶ್ಯಾಮಲ

    ReplyDelete
  5. nimma blogige bheti kotte lekhana chennaagide

    ReplyDelete
  6. ನಮಸ್ಕಾರ ಉಮೇಶ್ ವಶಿಸ್ಟ್ ರಿಗೆ...
    ಸ್ವಾಗತ ನನ್ನ ಲೋಕಕ್ಕೆ... ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ...ನಾನೂ ನಿಮ್ಮ ಬ್ಲಾಗ್ ನೋಡಿದೆ... ಬರಹ ತಂತ್ರಾಂಶ ಇಳಿಸಿಕೊಳ್ಳಿ... ಕನ್ನಡದಲ್ಲಿ ಬರೆಯುವುದು ಸುಲಭ ಆಗತ್ತೆ....

    ಶ್ಯಾಮಲ

    ReplyDelete
  7. ಮದುವೆ- ವಿಶ್ಲೇಷಣೆಗೆ ಅಭಿನಂದನೆಗಳು ಶ್ಯಾಮಲ ಅವರೇ. ಪರಸ್ಪರ ಹೊಂದಾಣಿಕೆಯ ಇನ್ನೊಂದು ಹೆಸರೇ ಮದುವೆ, ಇಲ್ಲದಿರೆ - ವಿಚ್ಛೇದನ. ದಂಪತಿಗಳಲ್ಲಿ ಒಬ್ಬರು ಹೆಚ್ಚು ಒಬ್ಬರು ಕಡಿಮೆ ಎನ್ನುವವರು ಬಹುಶಃ ಆಯಾ ಪಾತ್ರದ ಪೂರ್ಣ ಪರಿಕಲ್ಪನೆಮಾಡಿ ಈ ಮಾತನ್ನು ಹೇಳಿರುವುದಿಲ್ಲ. ಒಂದೆರಡು ದಿನ ನನ್ನಾK.. (ಜಯ್ ಪ್ರಭುರಾಜ್) ಊರಿಗೆ ಹೋದರೆ ನನ್ನ ಪಾಡು ಬಣ್ಣಿಸಲಾಗದು...ಅಂದರೆ ಆ ಪಾತ್ರ ಎಷ್ಟು ಮಹತ್ವದ್ದು..??? ಅಲ್ಲವೇ..?? ಹಾಗೇ...ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ ಬೇಕು-ಬೇಡಗಳನ್ನು ಅರಿವ ಜಾಣ್ಮೆ ಮನೆಯಾKಗೇ ಸಾಧ್ಯ. ಇನ್ನು ಮನೆಗೆ ಬರುವ ಅತಿಥಿಗಳ ಸತ್ಕಾರ.. ಇನ್ನು ದುಡಿವ ಮಹಿಳೆಯಾದರೆ ಇದು ದುಪ್ಪಟ್ಟು.. ಚನ್ನಾಗಿದೆ ನಿಮ್ಮ ಲೇಖನ.

    ReplyDelete
  8. ಚೆನ್ನಾಗಿದೆ ಅಕ್ಕ ನಿಮ್ಮಿ ಲೇಖನ
    ಇಂತಿ
    ವಿನಯ

    ReplyDelete
  9. ತುಂಬಾ ಚೆನ್ನಾಗಿ ಬರೆದಿದ್ದೀರಿ.
    "ಮನೆಯೇ ಮಂತ್ರಾಲಯ ಮನಸೇ ದೇವಾಲಯ " ಆಗ ಬೇಕಾದರೆ ನೀವು ಹೇಳಿದ ಹಾಗೆ ಇಚ್ಛೆ ಅರಿವ ಹೆಂಡತಿ ಇದ್ದಾರೆ ಮಾತ್ರ ಸಾಧ್ಯ. ಅದಕ್ಕೆ ಇರಬೇಕು ನಮ್ಮ ಕನ್ನಡದ ಹೆಮ್ಮೆಯ ಕವಿ ಕೆ. ಎಸ್. ನರಸಿಂಹ ಸ್ವಾಮಿ ಯವರು " ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ
    ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ " ಎಂದು ಹೇಳಿದ್ದು.

    ReplyDelete
  10. ನಮಸ್ಕಾರ ಸಾರ್ (ಜಲನಯನ)

    ನನ್ನ ಬ್ಲಾಗ್ ಗೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಸಾರ್... ಹೀಗೇ ಬರತ್ತಿರಿ...ನೀವು ಬರೆದ "ಮನೆಯೇ ಮಂತ್ರಾಲಯ".... ಸಾಲು ನನಗೆ "ಮನೆಯೇ ಬೃಂದಾವನ, ಮನಸೇ ಸುಖ ಸಾಧನ".... ಹಾಡನ್ನು ನೆನಪಿಸಿತು.

    ಶ್ಯಾಮಲ

    ReplyDelete
  11. ನಮಸ್ಕಾರ ಜಲನಯನ ಸಾರ್...
    ಗೋಪಾಲ್ ರವರಿಗೆ ಬರೆದ ಉತ್ತರಕ್ಕೆ ನಿಮ್ಮ ಹೆಸರು ಬಂದುಬಿಟ್ಟಿದೆ. ಪ್ರತಿಕ್ರಿಯೆ ಎಡಿಟ್ ಮಾಡಲು ಬರಲಿಲ್ಲ. ಕ್ಷಮಿಸಿ.....ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ ಹಾಗೂ ನಿಮ್ಮ ಅನಿಸಿಕೆ ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ಶ್ಯಾಮಲ



    ಗೋಪಾಲ್ ಸಾರ್..
    ನಿಮ್ಮ ಪ್ರತಿಕ್ರಿಯೆಗೆ ಉತ್ತರ ಮೇಲಿದೆ. ಕ್ಷಮಿಸಿ.. ಅಚಾತುರ್ಯದಿಂದ ನಿಮ್ಮ ಹೆಸರು ಹಾಕುವಲ್ಲಿ ತಪ್ಪು ಮಾಡಿಬಿಟ್ಟೆ. ಹೀಗೇ ಬರುತ್ತಿರಿ... ಧನ್ಯವಾದಗಳು.......

    ಶ್ಯಾಮಲ

    ReplyDelete
  12. ಹಾಯ್ ವಿನಯ್........
    ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಳು.......... ಲೇಖನದ ಓದು ನಿನಗೆ ಮುಂದೆ ಉಪಯೋಗಕ್ಕೆ ಬರುತ್ತೆ... :-)

    ಅಕ್ಕ
    ಶ್ಯಾಮಲ

    ReplyDelete