Wednesday, November 11, 2009

ಪುಸ್ತಕ ಪರಿಚಯ...... ೧

ದಿವಂಗತ ತ್ರಿವೇಣಿಯವರು ಬದುಕಿ - ಬಾಳಿದ ಕಾಲ ಅಲ್ಪವಾದರೂ, ಅವರು ಈ ದಿನಕ್ಕೂ ನಮ್ಮೊಳಗೆ ತಮ್ಮ ಕೃತಿಗಳ ಮೂಲಕ ಜೀವಂತವಾಗಿದ್ದಾರೆ. ಅವರ ಒಂದೊಂದು ಕಾದಂಬರಿಯೂ ಸಂಗ್ರಹ ಯೋಗ್ಯವಾಗಿದೆ. ಕಥಾ ಸಂಕಲನದ ಪ್ರತಿಯೊಂದು ಸಣ್ಣ ಕಥೆಯೂ ಅತ್ಯಂತ ನಿಪುಣತೆಯಿಂದ ಹೆಣೆದು ನಮ್ಮೆದುರಿಗಿಟ್ಟ ಶ್ರೇಷ್ಠ ಕಥೆಯಾಗಿದೆ. ಆ ದಿನದಲ್ಲೇ ಅವರಿಗಿದ್ದ ಮುನ್ನೋಟ, ವಿಷಯ ನಿರೂಪಣೆಯ ನೈಪುಣ್ಯ, ಇಂದಿಗೂ ನಮ್ಮನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.

ಈ ಕಥಾ ಸಂಕಲನ "ಸಮಸ್ಯೆಯ ಮಗು" ಬಹಳ ಹಿಂದೆ ಓದಿದ್ದೆ. ಈಗ ಮತ್ತೆ ನನ್ನ ಕೈಗೆ ಸಿಕ್ಕ ಪುಸ್ತಕ ಪ್ರತಿಯೊಂದು ಕಥೆಯನ್ನೂ ಹೊಸ ಆಯಾಮದಿಂದ ನೋಡುವಂತೆ ಮಾಡಿದೆ. ಮೊದಲನೆ ಸಲ ನಾನು ಓದಿದಾಗ ವಯಸ್ಸಿನ ಪ್ರಭಾವ ಇರಬಹುದು, ಇಷ್ಟೊಂದು ಗಂಭೀರ ಪರಿಣಾಮ ಬೀರಿರಲಿಲ್ಲ. ಸುಮ್ಮನೆ ಕಥೆ ಎಂಬಂತೆ ಓದಿದ್ದೆ ಅಷ್ಟೆ. ಆದರೆ ಈಗ ಓದುತ್ತಿದ್ದಾಗ ಪ್ರತಿಯೊಂದು ಕಥೆಯ ಜೊತೆಗೂ ನನ್ನನ್ನು ನಾನು ಗುರುತಿಸಿಕೊಳ್ಳಲಾಗುತ್ತಿದೆ. ಚಿಂತಿಸುವ ರೀತಿ ಬದಲಾಗಿದೆ. ಆದರೆ ತ್ರಿವೇಣಿಯವರ ದೂರದೃಷ್ಟಿ ನನ್ನನ್ನು ಅಚ್ಚರಿಪಡಿಸಿದೆ. ನನಗನ್ನಿಸಿದ ಕೆಲವು ಸಂಗತಿಗಳು ನಿಮಗಾಗಿ :..............

೧. ಮೊದಲನೆಯ ಕಥೆಯೇ ಪುಸ್ತಕದ ಶೀರ್ಷಿಕೆ "ಸಮಸ್ಯೆಯ ಮಗು". ಹಿಂದಿನ ಕಾಲದಲ್ಲಿ ಮನೆ ತುಂಬಾ ಮಕ್ಕಳಿದ್ದರೂ ಒಬ್ಬರಿಂದೊಬ್ಬರಿಗೆ ನೋವಾಗುವುದಾಗಲೀ, ವ್ಯಕ್ತಿತ್ವಕ್ಕೆ ಧಕ್ಕೆ ಬರುವುದಾಗಲೀ ಆಗುತ್ತಿರಲಿಲ್ಲ. ಆದರೆ ಈಗ ಮೊದಲ ಮಗುವಿನ ನಂತರ ಎರಡನೆಯ ಮಗು ಹುಟ್ಟಿದಾಗ, ಮೊದಲ ಮಗುವಿಗೆ ತನ್ನನ್ನು ಅಪ್ಪ-ಅಮ್ಮ ಕಡೆಗಣಿಸುತ್ತಿದ್ದಾರೆಂಬ ಭಾವನೆ ಸಹಜವಾಗಿ ಬಂದು ಸಮಸ್ಯೆ ಉಂಟು ಮಾಡುತ್ತದೆ. ಈ ಕಥೆಯಲ್ಲಿ ತ್ರಿವೇಣಿಯವರು ಆಗಿನ ದಿನಗಳಲ್ಲೇ ಈ ಸಮಸ್ಯೆಯನ್ನು ತಮ್ಮ ದೂರ ದೃಷ್ಟಿಯ ಚಿಂತನೆಗಳಿಂದ ನೋಡಬಲ್ಲವರಾಗಿದ್ದರು.

ಇಲ್ಲಿ ಕಥಾನಾಯಕ ನಮ್ಮ ಪುಟ್ಟ ನಾಗೇಂದ್ರ ಅದೇ ರೀತಿಯ ಮನೋ ವೇದನೆಗೊಳಪಡುತ್ತಾನೆ. ತನ್ನನ್ನು ಇನ್ನೂ ಹೆಚ್ಚಾಗಿ ಪ್ರೀತಿಸಲಿ, ತನ್ನ ಕಡೆ ಗಮನ ಕೊಡಲಿ ಎಂಬ ಒಂದೇ ಕಾರಣಕ್ಕಾಗಿ ಮನೆ ಬಿಟ್ಟು ಓಡಿ ಹೋಗುತ್ತಾನೆ. ಆದರೆ ಅದೃಷ್ಟವಶಾತ್ ಒಬ್ಬ ಸಹೃದಯರ ಮೂಲಕ ಮನೆ ತಲುಪುತ್ತಾನೆ. ಅಲ್ಲಿಯ ವಿದ್ಯಾಮಾನಗಳನ್ನೂ, ಆ ಹುಡುಗನ ತಂದೆ ತಾಯಿಯರನ್ನೂ ಭೇಟಿ ಮಾಡಿದ ನಂತರ, ಸಮಸ್ಯೆ ಏನೆಂದು ಅರ್ಥ ಮಾಡಿಕೊಂಡು, ತಂದೆ ತಾಯಿಗೆ ತಿಳಿ ಹೇಳುತ್ತಾರೆ. ಇಲ್ಲಿ ತಾಯ್ತಂದೆಯರ ಎಲ್ಲಾ ಪ್ರೀತಿಗೂ ಹಕ್ಕುದಾರನಾಗಿ, ಸರ್ವಾಧಿಕಾರಿಯಂತಿದ್ದ ನಾಗೇಂದ್ರ, ತಮ್ಮನ ಆಗಮನದಿಂದ ಕಡೆಗಣಿಸಲ್ಪಡುತ್ತಾನೆ. ಇದರಿಂದ ನೊಂದ ನಾಗೇಂದ್ರ ತನ್ನ ಸಿಟ್ಟು, ವೇದನೆಯೆಲ್ಲವನ್ನೂ ಏನೂ ಅರಿಯದ ಹಸುಳೆಯನ್ನು ಹಿಂಸಿಸುವುದರಿಂದಲೋ, ಮನೆ ಬಿಟ್ಟು ಹೋಗಿ ತಾಯ್ತಂದೆಯರನ್ನು ಆತಂಕಪಡಿಸುವುದರಿಂದಲೋ ವ್ಯಕ್ತ ಪಡಿಸುತ್ತಿರುತ್ತಾನೆ.

ಕೊನೆಗೆ ಎರಡು ತಿಂಗಳ ನಂತರ ನಾಗೇಂದ್ರನನ್ನು ಕಾಣಲು ಹೋದ ಆ ಸಹೃದಯರಿಗೆ ಅಚ್ಚರಿಯಾಗುವಂತೆ, ಮಗುವನ್ನು ಆಡಿಸುತ್ತಿರುವ ನಾಗೇಂದ್ರ ಕಾಣಸಿಗುತ್ತಾನೆ. ತಂದೆ ತಾಯಿಯರ ಪ್ರೀತಿ ಪಡೆದು ನಾಗೇಂದ್ರ ಸಂತೃಪ್ತನಾಗಿ, ತನ್ನ ಪ್ರೀತಿಯನ್ನು ಮಗುವಿಗೆ ಧಾರೆಯೆರೆಯ ತೊಡಗಿರುತ್ತಾನೆ. ಸಮಸ್ಯೆ ಮಗುವಿನದಲ್ಲ, ಪಿತೃಗಳದ್ದು ಎಂಬುದು ಇಲ್ಲಿ ಹೃದಯಂಗಮವಾಗಿ ಹೇಳಲ್ಪಟ್ಟಿದೆ. ಕಥೆಯ ಜೊತೆ ಲೇಖಕಿ ತುಂಬಾ ಸರಳವಾಗಿ ತಾಯ್ತಂದೆಯರಿಗೆ ತಿಳುವಳಿಕೆ ಹೇಳಿದ್ದಾರೆ ಮತ್ತು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

೨. ತುಂಬಿದ ಕೊಡ ಮತ್ತು ಮಗುವಿನ ಕರೆ :

ಮಗುವನ್ನು ಕಳೆದುಕೊಂಡ ತಾಯಿ - ತಾಯಿಯನ್ನು ಕಳೆದು ಕೊಂಡ ಮಗು, ಎರಡು ಜೀವಗಳ ಸುತ್ತ ಸುತ್ತುವ ತೀವ್ರ ಭಾವನೆಗಳನ್ನೊಳಗೊಂಡ ಕಥೆ. ಪಾಪದ ಕೂಸು, ಅಸಹ್ಯ ಎಂದೆಲ್ಲಾ ಜರಿದಿದ್ದ ಮನಸ್ಸನ್ನೂ ಮಾತೃ ಪ್ರೇಮ ಜಯಿಸಿ, ಕೊನೆಗೆ ಹಾಲು ಇಂಗದೆ, ಮಗುವಿನ ಪಾಲಿಗೆ ಅಮೃತವಾಗುತ್ತದೆ. ಒಂದು ಪುಟ್ಟ ಜೀವ ಬದುಕಲು ಬೇಕಾದ ಜೀವಧಾರೆಯಾಗತ್ತೆ. ಎಲ್ಲಕ್ಕಿಂತಲೂ ಅತ್ಯಂತ ಹಿರಿದಾದದ್ದು ಮಾತೃ ಪ್ರೇಮ ಮತ್ತು ತಾಯಿ ಕರುಳು ಎಂಬುದು ಈ ಕಥೆಯ ಸಾರಾಂಶ. ಮನ ಕಲಕುವಂಥ ನಿರೂಪಣೆ.

ತನ್ನ ಭವಿಷ್ಯ ಹಾಳಾದರೂ ಪರವಾಗಿಲ್ಲ ಮಗುವನ್ನು ತಾನೇ ಸಾಕುವುದಾಗಿ ನಿರ್ಧರಿಸುವ ನಾಗಮ್ಮ ತಾಯಿಯ ಮಮತೆಯನ್ನು ಮೆರೆಸುತ್ತಾಳೆ. ವೀರಪ್ಪ ಕೊಟ್ಟ ಪೊಳ್ಳು ಆಶ್ವಾಸನೆಯಿಂದ, ತಾಯಿಯಾಗುವ ನಾಗಮ್ಮ, ತನ್ನ ಕರುಳ ಬಳ್ಳಿಯನ್ನು ಹೊಸಕಲಾರದೆ, ಎಲ್ಲರಿಂದಲೂ ದೂರ ಹೋಗಿ, ಹೊಸ ಬದುಕು ಕಂಡುಕೊಳ್ಳುವ ಉತ್ತಮ ನಿರ್ಧಾರಕ್ಕೆ ಬರುತ್ತಾಳೆ.

೩. ಮಗಳ ಮನಸ್ಸು :

ತೀರ ಬಡವನಾದ ತಂದೆ ತನ್ನ ಮೂರನೆಯ ಮಗಳ ಮದುವೆ, ಸಾಲ ತೀರಿಸಲು ತನಗೆ ದುಡ್ಡು ಕೊಟ್ಟ, ಶ್ರೀಮಂತ ಮುದುಕನ ಜೊತೆ ಮಾಡಿಬಿಟ್ಟಾಗ, ಮನಸ್ಸು ಮುರಿದು, ಎಲ್ಲಾ ಸಂಬಂಧಗಳನ್ನೂ ತೊರೆದುಕೊಂಡು ಹೊರಟು ಹೋಗುತ್ತಾಳೆ ಚಂದ್ರ. ನಾಲ್ಕು ವರ್ಷಗಳ ನಂತರ ಸಹಾಯ ಕೇಳಲು ಬಂದ ತಂದೆಯನ್ನು ನಿಂದಿಸಿ, ಅಟ್ಟಿ ಬಿಡುತ್ತಾಳೆ. ಆದರೆ ತಾಯಿ ಮತ್ತು ಚಿಕ್ಕ ತಮ್ಮನ ಅನಾರೋಗ್ಯದ ವಾರ್ತೆ ಅವಳಲ್ಲಿನ ಪ್ರೀತಿಯನ್ನು ತಟ್ಟಿ ಎಬ್ಬಿಸಿ, ತಂದೆಯ ಹಿಂದೆ ಓಡಿ ಬಂದು ತನ್ನ ಕೈಲಿದ್ದ ಎರಡು ಚಿನ್ನದ ಬಳೆಗಳನ್ನು ಕೊಟ್ಟು ಹೋಗುತ್ತಾಳೆ. ಮುಂದೆಯೂ ಸಹಾಯ ಬೇಕಾದರೆ ಮತ್ತೆ ಬರುವಂತೆ ವಿನಂತಿಸಿಕೊಂಡು, ತಂದೆಯ ಕ್ಷಮೆಯಾಚಿಸಿ, ಆಶೀರ್ವಾದ ಪಡೆದು ಹೋಗುತ್ತಾಳೆ. ಇಲ್ಲಿ ಹೆಣ್ಣು ಮಕ್ಕಳ ಅಂತ:ಕರಣ ಎಷ್ಟು ಮೃದು ತನ್ನ ಜೀವನವನ್ನೇ ಹಾಳು ಮಾಡಿದನೆಂದು ದ್ವೇಷಿಸುತ್ತಿದ್ದ ತಂದೆಯ ಸಹಾಯಕ್ಕೆ ಎಲ್ಲವನ್ನೂ ಮರೆತು ಹೇಗೆ ಧಾವಿಸಿದಳೆಂಬುದು ಚಿತ್ರಿತವಾಗಿದೆ. ಒಳ್ಳೆಯ ಕಥೆ..

೪. ಪ್ರೇಮದ ಬೆಳಕು :

ಪ್ರೇಮ ಅನುರಾಗವೆಂಬುದು ಬಾಹ್ಯ ಸೌಂದರ್ಯದಲ್ಲಲ್ಲ, ಆಂತರಿಕ ಸೌಂದರ್ಯದಲ್ಲಿದೆ ಎನ್ನುವುದನ್ನು ಬಿಂಬಿಸುವ ಕಥೆ. ಕಲಾವಿದನಾದವನು ಎಂತಹ ಕುರೂಪಿಯನ್ನು ನೋಡಿದರೂ, ಅದರಲ್ಲಿರುವ ಕಲೆಯ ಸೌಂದರ್ಯ ಹುಡುಕುತ್ತಾನೇ ಹೊರತು, ಅಶಾಶ್ವತವಾದ ದೈಹಿಕ ಸೌಂದರ್ಯವನ್ನಲ್ಲ. ಕಥಾನಾಯಕ ಸಂಜಯ ಕೊನೆಗೆ ಸಹನೆ, ಭಕ್ತಿ, ಪ್ರೀತಿ, ಅನುರಾಗದಿಂದ ಹೊಳೆಯುತ್ತಿದ್ದ ಮಂಜುವಿನ ಕಣ್ಣುಗಳ ಭಾಷೆಯನ್ನು ಅರಿಯುತ್ತಾನೆ.

೫. ಆ ಸಂಜೆ :

ತನ್ನನ್ನೇ ಬಸ್ ನಿಲ್ದಾಣದಿಂದಲೂ ಹಿಂಬಾಲಿಸಿ ಬಂದ ಯುವಕನ ಮೇಲೆ ಸಿಟ್ಟು ಮಾಡಿಕೊಂಡು, ಅಸಹ್ಯಿಸಿಕೊಂಡು, ಅವಸರದಲ್ಲಿ ಕಾಶ್ಮೀರ್ ಸಿಲ್ಕ್ ಸೀರೆ ಕೊಂಡು, ಅಂಗಡಿಯಿಂದ ಹೊರಗೋಡಿ ಬಿಡುತ್ತಾಳೆ ಕಥಾನಾಯಕಿ. ಆದರೆ ಅವಳು ಕೊಂಡ ಅಂತಹುದೇ ಸೀರೆಕೊಂಡು, ಮೊದಲ ದೀಪಾವಳಿಯನ್ನು ಹೆಂಡತಿಯೊಡನೆ ಆಚರಿಸಲು, ಸಿಹಿ ಕನಸೊಂದನ್ನು ಕಾಣುತ್ತಾ ಹೋಗುತ್ತಾನೆ, ಅವಳನ್ನು ಹಿಂಬಾಲಿಸಿ ಬಂದಿದ್ದ "ವಿಲನ್". ಇಲ್ಲಿ ಕಥಾನಾಯಕ ಹಿಂಬಾಲಿಸಿ ಬಂದಿದ್ದ ಹುಡುಗಿ ನೋಡಲು ತನ್ನ ಹೆಂಡತಿಯಂತೆಯೇ ಇದ್ದದ್ದು ಮತ್ತು ತನ್ನನ್ನು ಅವನು ಹಿಂಬಾಲಿಸಿದ ಉದ್ದೇಶ ಎರಡೂ ತಿಳಿಯದೆ ಹೆದರುತ್ತಾಳೆ. ಆದರೆ ಅಂತ್ಯ ನವಿರಾದ ಹಾಸ್ಯದಿಂದ ಕೂಡಿದ್ದು, ಮನಸ್ಸು ಮುದಗೊಳ್ಳುತ್ತದೆ.

೬. ಕೊನೆಯ ನಿರ್ಧಾರ :

೨೨ ವರ್ಷಗಳ ಹಿಂದೆ ವೆಂಕಟೇಶಮೂರ್ತಿ ಅನುಮಾನಿಸಿ ಬಿಟ್ಟು ಬಿಟ್ಟಿದ್ದ ತಮ್ಮ ಹೆಂಡತಿಯನ್ನು ಮತ್ತೆ ಕರೆಯಲು ಬಂದಾಗ, ಸ್ವಾಭಾವಿಕವಾಗಿಯೇ ಕ್ಷಮಯಾ ಧರಿತ್ರಿಯಾದ ಲಲಿತಾ ಸ್ವಲ್ಪ ಸ್ವಲ್ಪ ಕರಗುತ್ತಾಳೆ. ಆದರೆ ತನ್ನ ಗಂಡನ ಎರಡನೆಯ ಹೆಂಡತಿ ಸತ್ತು, ಮನೆಯಲ್ಲಿ ಐದು ಮಕ್ಕಳಿರುವ ವಿಷಯ ತಿಳಿದಾಗ, ಕರಗಿದ ಮನಸ್ಸು ಕಲ್ಲಿನಂತಾಗಿ, ಕಾಳಿಯಾಗುತ್ತಾಳೆ. ಇದು ನಿಜವಾದ ಪ್ರೀತಿ ಅಲ್ಲ, ತನ್ನ ಅನುಕೂಲಕ್ಕಾಗಿ ವೆಂಕಟೇಶಮೂರ್ತಿ ಮಾಡಿಕೊಳ್ಳುತ್ತಿರುವ ಸಂಧಾನ ಎಂದು ಅರಿತುಕೊಂಡು, ಅವರನ್ನು ತನ್ನ ಜೀವನದಿಂದ ಎರಡನೇ ಸಲ ಹೊರ ಹಾಕುತ್ತಾಳೆ ಮತ್ತು ಇನ್ನೆಂದೂ ಪುನ: ಬರಬಾರದೆಂದು ಹೇಳುತ್ತಾಳೆ. ಇಲ್ಲಿ ಲಲಿತಾ ತಾನು ಮಾಡಿಲ್ಲದ ತಪ್ಪಿಗಾಗಿ, ತನ್ನ ಸ್ವಮರ್ಯಾದೆ ಬಿಟ್ಟು ಕೊಡದೆ, ಸ್ವಾಭಿಮಾನ ಮೆರೆಸುವುದು, ಸಮಾಧಾನಕರವಾಗಿದೆ.

೭. ಮೂರನೆಯ ಕಣ್ಣು ಕೂಡ ತಾಯ ಮಮತೆಯನ್ನು ಬಿಂಬಿಸುತ್ತದೆ. ಹೆಣ್ಣು ಹೇಗೆ ಎಲ್ಲರನ್ನೂ ತಾಯಿಯಂತೆ ಕಾಣಬಲ್ಲಳೆಂಬುದಕ್ಕೆ ಈ ಕಥೆ ಸಾಕ್ಷಿ.

೮. ನರಬಲಿ : ಇದರಲ್ಲಿ ಲೇಖಕಿ ಕಥಾ ನಾಯಕಿ ರತ್ನ ಯಾರಿಂದಲೋ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದಾಗ ಪಡುವ ಮಾನಸಿಕ ಹಿಂಸೆಯನ್ನು ಚಿತ್ರಿಸಲಾಗಿದೆ. ತಾನು ಅತಿಯಾಗಿ ಪ್ರೀತಿಸಿದ ತನ್ನ ಗಂಡನ ಹೋಲಿಕೆಯದೇ ಮಗು ಹುಟ್ಟಿದಾಗ ಅದು ತಮ್ಮಿಬ್ಬರದೇ ಎಂದು ಉದ್ವೇಗದಿಂದು ಕಿರುಚಿ ಅಪ್ಪಿ ಹಿಡಿಯುತ್ತಾಳೆ, ಹಾಗೇ ಕೊನೆಯುಸಿರೆಳೆಯುತ್ತಾಳೆ.

ಈ ಕಥಾ ಸಂಕಲದ ಕೆಲವು ಕಥೆಗಳ ಬಗ್ಗೆ ನಾನು ಏನನ್ನೂ ಬರೆದಿಲ್ಲ. ಸೌಂದರ್ಯ ನೋಡಿ ಮೋಹಿಸಿ ಮದುವೆಯಾಗಲಿಚ್ಛಿಸುವ ಇಬ್ಬರು ಹುಡುಗರು, ಅವಳು ಬಾಲ ವಿಧವೆಯೆಂದು ತಿಳಿದೊಡನೆ ಹಿಂತೆಗೆಯುವ ಕಥೆ ಈಗಿನ ಕಾಲಕ್ಕೆ ಪ್ರಸ್ತುತವೆಂದು ನನಗನ್ನಿಸಲಿಲ್ಲ. ವಯಸ್ಸಾದ ಸಿನಿಮಾ ನಟಿ ಸಾಯುವವರೆಗೂ ನಾಯಕಿಯ ಪಾತ್ರವನ್ನೇ ಮಾಡಬೇಕೆಂದು ಆಶಿಸುವುದು ಮತ್ತು ಸಿಗಲಿಲ್ಲವೆಂದ ಆತ್ಮಹತ್ಯೆ ಮಾಡಿಕೊಳ್ಳುವುದು, ಎಲ್ಲಾ ಕಾಲಕ್ಕೂ ಸಲ್ಲುತ್ತದಾದರೂ, ಓದಿದ ನನ್ನ ಮನಸ್ಸನ್ನೇನು ಸೆಳೆಯಲಿಲ್ಲವಾದ್ದರಿಂದ ಇಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸಿಲ್ಲ.

ಒಟ್ಟು ೧೫ ಕಥೆಗಳನ್ನೊಳಗೊಂಡ ಈ ಕಥಾ ಸಂಕಲನ, ಅದ್ಭುತವಾಗಿ ಓದಿಸಿಕೊಂಡು ಹೋಗುತ್ತದೆ. ವಿಷಯವನ್ನು ಮನಮುಟ್ಟುವಂತೆ ಸರಳ ಶಬ್ದಗಳನ್ನುಪಯೋಗಿಸಿ, ಎತ್ತಿಕಟ್ಟುವ ತ್ರಿವೇಣಿಯವರ ಕಲೆ ಅದ್ಭುತ. ಅವರ ಶೈಲಿ, ಲೀಲಾಜಾಲ ಬರವಣಿಗೆ ನಮ್ಮನ್ನು ಸುಖಾಸನದಲ್ಲಿ ಕುಳಿತು, ಅನುಭವಿಸುತ್ತಾ, ಓದುವಂತೆ ಪ್ರೇರೇಪಿಸುತ್ತದೆ.

ಎರಡು ದಶಕಗಳ ನಂತರ ಮತ್ತೆ ಓದಿದ ಈ ಪುಸ್ತಕ, ಹಲವು ಒಳ್ಳೆಯ ವಿಷಯಗಳಾಧಾರಿತ ಕಥೆಗಳನ್ನು ಹೊಂದಿದೆ. ಒಟ್ಟಿನಲ್ಲಿ ಒಂದು ಸಂಜೆ ಸುಖವಾಗಿ ಒಳ್ಳೆಯ ಓದಿನಿಂದ ಕಾಲ ಕಳೆಯಬಹುದಾದ ಪುಸ್ತಕ. ಕೆಲವು ಕಥೆಗಳನ್ನು ಸುಲಭದಲ್ಲಿ ಮರೆಯಲಾಗುವುದಿಲ್ಲ, ಕಾಡುತ್ತವೆ, ಕಾಡುತ್ತಲೇ ಇರುತ್ತವೆ........ ಮತ್ತೆ.......... ಮತ್ತೆ...........

11 comments:

  1. ತುಂಬಾ ಉತ್ತಮವಾಗಿ ಕಥೆಗಳ ಎಳೆಯನ್ನು ವಿವರಿಸಿದ್ದೀರಿ. ನಿಮ್ಮೀ ಲೇಖನವನ್ನೋದಿದಮೇಲೆ ಕಥಾಸಂಕಲನವನ್ನು ಓದಲೇ ಬೇಕೆನಿಸುತ್ತಿದೆ. ತಪ್ಪದೇ ಓದುವೆ ಕೂಡ. ಧನ್ಯವಾದಗಳು.

    ನಿಮ್ಮಿ ಈ ಅಂಕಣ(ಪುಸ್ತಕ ಪರಿಚಯ) ನಿಲ್ಲದೇ ಮುಂದುವರಿಯುತ್ತಿರಲಿ. :)

    ReplyDelete
  2. ಕಥೆಗಳ ಬಗೆಗೆ ತಿಳಿಸಿದ್ದಕ್ಕೆ ಧನ್ಯವಾದ
    ಇದನ್ನು ಓದಲೇಬೇಕು ಎನಿಸುತ್ತಿದೆ

    ReplyDelete
  3. ತೇಜಸ್ವಿನಿಯವರೇ... ಧನ್ಯವಾದಗಳು. ಖಂಡಿತಾ ಓದಿ. ನಾನೀಗ ತ್ರಿವೇಣಿಯವರ ಎಲ್ಲಾ ಪುಸ್ತಕಗಳನ್ನು ಮತ್ತೆ ಓದಲು ಶುರುವಿಟ್ಟುಕೊಂಡಿದ್ದೇನೆ. ಓದಿ ನನ್ನ ಮನಸ್ಸಿನ ಮೇಲೆ ಆದ ಪರಿಣಾಮಗಳನ್ನೂ ಮತ್ತು ಅನಿಸಿಕೆಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ.

    ಸಾಗರದಾಚೆಯ ಇಂಚರದ ಡಾ ಗುರು ಅವರೇ...
    ಧನ್ಯವಾದಗಳು. ಹಳೆಯ ಲೇಖಕರ ಪುಸ್ತಕಗಳನ್ನೋದುವ ಖುಷಿಯೇ ಬೇರೆ, ಓದಿ....

    ಶ್ಯಾಮಲ

    ReplyDelete
  4. ತ್ರಿವೇಣಿ ನಮ್ಮ ಲೇಖಕಿಯರಲ್ಲಿ ಇಂದೂ ಎವರ್ ಗ್ರೀನ್ ಹೆಸರು ಅವರ ಅನೇಕ ಕಾದಂಬರಿ ಓದಿರುವೆ ಈ ಕತೆಗಳನ್ನು ಓದಿದ ನೆನಪು ನೀವು ನೆನಪು ತಾಜಾ ಮಾಡಿದ್ರಿ.....

    ReplyDelete
  5. ಉಮೇಶ್ ಸಾರ್...
    ಧನ್ಯವಾದಗಳು... ಹೌದು ತ್ರಿವೇಣಿಯವರ ಸ್ಥಾನಕ್ಕೆ ಬೇರಾರೂ ಬರುವುದು ಅಸಾಧ್ಯ. ನನಗೂ ಮರೆತು ಹೋಗಿತ್ತು... ಇನ್ನು ಮರೆಯೋಲ್ಲ ಅನ್ಸತ್ತೆ...

    ಶ್ಯಾಮಲ

    ReplyDelete
  6. ನಾನೂ ಸಹ ತ್ರಿವೇಣಿಯವರ ಕೆಲವೊಂದು ಕಾದಂಬರಿ ಓದಿದ್ದೇನೆ.... ಆದರೆ ಇಷ್ಟೊಂದು ಇದೆ ಅಂತಾನೆ ಗೊತ್ತಿರಲಿಲ್ಲ..... ಓದಬೇಕು ಅಂತ ತುಂಬಾ ಮನಸ್ಸಾಗುತ್ತಿದೆ....

    ReplyDelete
  7. ಶ್ಯಾಮಲ ಮೇಡಮ್,

    ಪುಸ್ತಕ ಬಿಡುಗಡೆ ವಿಚಾರದಲ್ಲಿ ಬ್ಯುಸಿಯಾಗ ಬ್ಲಾಗಿಗೆ ಬರಲಾಗುತ್ತಿಲ್ಲ.ಆದ್ರೂ ಈಗೊಮ್ಮೆ ಇಣುಕಿದೆ. ತ್ರಿವೇಣಿಯವರ ಸಮಸ್ಯೆಯ ಮಗು ಪುಸ್ತಕದ ಎಲ್ಲಾ ಕತೆಗಳ ಸೂಕ್ಷತೆಯನ್ನು ಚೆನ್ನಾಗಿ ವಿವರಸಿದ್ದೀರಿ. ಬಿಡುವು ಮಾಡಿಕೊಂಡು ಓದಬೇಕೆನಿಸುತ್ತಿದ್ದೆ...ಖಂಡಿತ ಓದುತ್ತೇನೆ..

    ReplyDelete
  8. ದಿನಕರ ಮೊಗೇರ ಸಾರ್..
    ನಾನು ಒಂದೇ ಒಂದು ’ಕಥಾ ಸಂಕಲನ’ ದ ಬಗ್ಗೆ ಮಾತ್ರ ಬರೆದಿದ್ದೇನೆ ಅಷ್ಟೆ. ಅವರ ಎಲ್ಲಾ ಪುಸ್ತಕಗಳೂ ತುಂಬಾ ಚೆನ್ನಾಗಿವೆ. ನಾನು ಮತ್ತೆ ಈಗ ಓದುವ ಪುಸ್ತಕಗಳ ಬಗ್ಗೆ ನನಗನಿಸಿದ್ದನ್ನು ಬರೆಯುತ್ತೇನೆ. ನೀವೂ ಖಂಡಿತಾ ಪುಸ್ತಕಗಳು ಸಿಕ್ಕರೆ ಓದಿ.....

    ReplyDelete
  9. ಶಿವು ಸಾರ್
    ನಿಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ನನ್ನ ಮನೆಯಂಗಳದಲ್ಲಿ ಇಣುಕಿದ್ದೀರಿ. ಧನ್ಯವಾದಗಳು. ಬಿಡುವು ಮಾಡಿಕೊಂಡು ಖಂಡಿತಾ ಓದಿ, ನಿಮ್ಮ ಅನಿಸಿಕೆಗಳನು ನಮ್ಮೊಡನೆ ಹಂಚಿಕೊಳ್ಳಿ.

    ReplyDelete
  10. ಶ್ಯಾಮಲ, ತ್ರಿವೇಣಿಯವರ ಕಾದಂಬರಿಗಳಲ್ಲಿ ಯಾವುದೋ ವಿಷಯದಾಳಕ್ಕೆ ಹೋಗುವ ಬದಲು ಹೆಣ್ಣಾಗಿ ಹೆಣ್ಣಿನ ಮನದ ದುಗುಡ ದುಮ್ಮಾನಗಳನ್ನು ಬಿಂಬಿಸಲು ಹೆಚ್ಚು ಶ್ರಮ ಪಟ್ಟಂತಿವೆ ಅವರ ಕೃತಿಗಳು. ಅವರ ಬಗ್ಗೆ ಬರೆದು ತಿಳಿಸಿದ್ದೀರ. ಹೆಣ್ಣಿನ ವಿವಿಧ ಮನೋಭಾವದ ಆಳಕ್ಕೆ ಹೊಕ್ಕು ವಿಷಯ ಮಂದಿಸುವ ಅವರ ಶೈಲಿ ಇಷ್ಟವಾಗುವಂತಹುದು,

    ReplyDelete
  11. ಆಜಾದ್ ಸಾರ್...
    ನೀವು ಹೇಳಿದ್ದು ಸರಿ.. ತ್ರಿವೇಣಿಯವರು ಹೆಣ್ಣಿನ ಮನಸ್ಸನ್ನು ಸ್ಪಷ್ಟವಾಗಿ ತೆರೆದಿಡಲು... ಅವಳ ಅಂತರಂಗದ ಭಾವನೆಗಳನ್ನು ನವಿರಾಗಿ ಬಿಂಬಿಸಲು ತಮ್ಮ ಕೃತಿಗಳಲ್ಲಿ ವಿಶೇಷ ಒತ್ತು ಕೊಟ್ಟಿದ್ದಾರೆ. ಆದರೆ ಎಲ್ಲೂ ಅತಿರೇಕವಿಲ್ಲದೆ.. ವಾಸ್ತವಿಕತೆಯ ಪರಿಧಿಗೇ ಅಂಟಿಕೊಂಡಿದ್ದಾರೆ. ಧನ್ಯವಾದಗಳು.

    ReplyDelete