Tuesday, November 17, 2009

ದೂರವಾಣಿ...... ಟ್ರೀಣ್.... ಟ್ರೀಣ್...... ೨

ಆ ದಿನ ನಿಮಗೆ ನಮ್ಮ ಮನೆಗೆ ದೂರವಾಣಿಯ ಆಗಮನ ಮತ್ತು ಅದರ ಸಂಭ್ರಮದ ಬಗ್ಗೆ ಹೇಳಿದ್ದೆ... ಈಗ ಅದರಿಂದಾಗುವ ಕಿರಿಕಿರಿಗಳೂ ಮತ್ತು ತೊಂದರೆಗಳ ಬಗ್ಗೆ ಹೇಳ್ತೀನಿ.... ಇದು ನನ್ನ ಸ್ವಂತ ಅನುಭವ... ನಿಮ್ಮ ಅನುಭವಗಳು ಬೇರೆಯೂ ಇರಬಹುದು.... ಈಗ ಸಧ್ಯಕ್ಕೆ ಎಲ್ಲಕ್ಕಿಂತ ಹೆಚ್ಚು ಕಿರಿಕಿರಿ ಮಾಡುತ್ತಿರುವ ಕರೆಗಳು ಎಂದರೆ ಎರಡು ಥರದ್ದು :

೧) ಮೊದಲನೆಯದು ವಿಳಾಸ ಬದಲಾದಾಗ ನಮಗೆ ಹೊಸದಾಗಿ ಸಿಗುವ ದೂರವಾಣಿ ಸಂಖ್ಯೆ ಹೊಚ್ಚ್ ಹೊಸದಲ್ಲದೇ, ಇದಕ್ಕೆ ಮುಂಚೆ ಬೇರೆ ಯಾರ ಹೆಸರಿನಲ್ಲೋ ಇದ್ದದ್ದು... ಅಕಸ್ಮಾತ್ ಆ ವ್ಯಕ್ತಿ ಏನಾದರೂ ಐಸಿಐಸಿಐ ಅಥವಾ ಸಿಟಿ ಬ್ಯಾಂಕ್ ನಂತಹ ಕಡೆ ಸಾಲ ತೆಗೆದುಕೊಂಡಿದ್ದರಂತೂ..., ನಮ್ಮ (ಮನೆಯಲ್ಲಿರುವ ಮಡದಿಯರ) ಪಾಡು ಆ ದೇವರಿಗೇ ಪ್ರೀತಿ !! ನೀವು ಕರೆ ಮಾಡಿದ ವ್ಯಕ್ತಿಯ ದೂರವಾಣಿ ಈಗ ಹೊಸದಾಗಿ ನಮಗೆ ಕೊಡಲ್ಪಟ್ಟಿದೆ.. ಹಿಂದಿನ ಗ್ರಾಹಕರು ಯಾರೆಂದು ನಮಗೆ ಗೊತ್ತಿಲ್ಲವೆಂದು ಎಲ್ಲಾ (ಗೊತ್ತಿರುವ) ಭಾಷೆಗಳಲ್ಲಿ ವಿವರಿಸಿದರೂ.. ಬೆಂಬಿಡದ ಭೂತಗಳಂತೆ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಕರೆ ಮಾಡಿ... ಮಾಡಿ... ಸುಸ್ತು ಮಾಡಿಸಿಬಿಡುವುದು....

೨) ಎರಡನೆಯದು ಸ್ವಲ್ಪ ವಿಭಿನ್ನ ರೂಪ.. ಏನಪ್ಪಾಂದರೆ.. ದೂರವಾಣಿಯ ವಿಳಾಸ ಹಾಗೂ ಸಂಖ್ಯೆಗಳ ಪುಸ್ತಕ ಎದುರಿಗಿಟ್ಟುಕೊಂಡು, ಎಲ್ಲಾ ಮನೆಯ ಸಂಖ್ಯೆಗಳಿಗೂ ಕರೆ ಮಾಡಿ.. ಅತಿ ವಿನಯತೆ ಪ್ರಕಟಿಸುತ್ತ.. "ನಮಸ್ಕಾರ ಮೇಡಮ್... Mr... ಇದ್ದಾರ ಎಂದು ಕೇಳುವುದು... ನಾವು ಮಧ್ಯಾಹ್ನ ೧೨ ಘಂಟೆಗೆ ಅವರು ಕಛೇರಿಯಲ್ಲಿ ಇರ್ತಾರಲ್ವೇನ್ರಿ ಎಂದರೆ... ಹ್ಹೆ ಹ್ಹೆ ಹ್ಹೆ.. ಎಂದು ದೇಶಾವರಿ ನಗೆ ಸಶಬ್ದವಾಗಿ ನಗುತ್ತಾ.. ನಾನು "...." ಫೈನಾನ್ಸ್ ನಿಂದ ಕರೆ ಮಾಡುತ್ತಿದ್ದೇನೆ, ನಿಮಗೆ ಸಾಲ ಏನಾದರೂ ಬೇಕಿತ್ತಾ ಅಂತಾನೋ... ಇಲ್ಲ "....." ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ವಿಭಾಗದಿಂದ.. ನಮ್ಮ ಹೊಸ ಪ್ರಾಡಕ್ಟ್ ಬಂದಿದೆ, ನಿಮಗೇನಾದರೂ ಆಸಕ್ತಿಯಿದೆಯೇ ಎಂದೋ ಕೇಳುತ್ತಾ ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವಾಗ ಆಗುವ ಕಿರಿಕಿರಿ.... ಆಹಾ.... ಅನುಭವಿಸಿದವರಿಗೇ ಗೊತ್ತು...

ಈ ತರಹದ ಕರೆಗಳು ದಿನಕ್ಕೆ ೨ - ೩ ವಿವಿಧ ಕಡೆಗಳಿಂದ ಬರುತ್ತವೆ ಮತ್ತು ನಾಳೆ ಮತ್ತದೇ ಸಮಯಕ್ಕೆ ಸರಿಯಾಗಿ, ಅದೇ ಕಛೇರಿಯಿಂದ, ಆದರೆ ಬೇರೆ ಹುಡುಗನೋ / ಹುಡುಗಿಯೋ ಮಾಡಿದಾಗ... ಸಿಟ್ಟು ತನ್ನೆಲ್ಲಾ ಅಣೆಕಟ್ಟುಗಳನ್ನೂ ಒಡೆದುಕೊಂಡು ಭೋರ್ಗರೆಯುತ್ತೆ..... ಆದರೂ ತಾಳ್ಮೆಯಿಂದ "ನಿನ್ನೆ ತಾನೇ ನಿಮ್ಮಲ್ಲಿಂದ ಯಾರೋ ಹುಡುಗಿ ಮಾಡಿದ್ದರು, ಆಸಕ್ತಿಯಿಲ್ಲ ಎಂದಿದ್ದೆನಲ್ಲಾ"... ಎಂದಿನ್ನೂ ಮಾತು ಪೂರೈಸುವ ಮುನ್ನವೇ ’ದಡ್’ ಎಂದು ನಮ್ಮ ಕಿವಿಯೇ ತೂತಾಗ ಬೇಕು ಹಾಗೆ, ಏನೋ ನಾವೇ ಅವರನ್ನು ಕೆಲಸದ ಮಧ್ಯೆ ಮಾತಾಡಿಸಿ, ತೊಂದರೆ ಉಂಟುಮಾಡಿದೆವೆಂಬಂತೆ... ದೂರವಾಣಿಯನ್ನು ಕುಕ್ಕುವಾಗ... ನಮ್ಮ ಗತಿ ನಿಜವಾಗಲೂ ಆ ಪರಮಾತ್ಮನಿಗೇ ಪ್ರೀತಿಯಾಗಬೇಕು...

ಇನ್ನೊಂದು ಮೂರನೆಯ ಥರದ ಕಿರಿಕಿರಿ ಮೇಲಿನ ಎರಡಲ್ಲದ, ಬೇರೆಯದೇ ರೀತಿಯದು.... ಇದು ಸಂಚಾರಿ ದೂರವಾಣಿಗೆ ಬರುವ ವಿವಿಧ ಸೌಲಭ್ಯಗಳ ಉಚಿತ ಮಾಹಿತಿ ಕರೆಗಳು.... ಸರಿಯಾಗಿ ಮಧ್ಯಾಹ್ನ ೩ ರಿಂದ ೪ ರೊಳಗೆ, ಇಡೀ ಮನೆಯೇ ನಿಶ್ಯಬ್ದವಾಗಿರುವಾಗ, ಅತ್ಯಂತ ಆಸಕ್ತಿಯಿಂದ ಏನನ್ನಾದರೂ ಓದುತ್ತಿರುವಾಗ ಇದ್ದಕ್ಕಿದ್ದಂತೆ ಶುರುವಾಗುವ ಈ ಭಾಜಾ ಭಜಂತ್ರಿ ಬೆಚ್ಚಿ ಬೀಳುವಂತೆ ಮಾಡುವುದಂತೂ ಖಂಡಿತ.... ಈ ರೀತಿ ಗ್ರಾಹಕರಿಗೆ ಕಿರಿಕಿರಿಯಾಗುವಂತಹ ಸಮಯದಲ್ಲಿ, ಅವರ ಅವಶ್ಯಕತೆ ತಿಳಿದುಕೊಳ್ಳದೆ, ಎಲ್ಲಾ ಸಂಖ್ಯೆಗಳಿಗೂ ಮಾಡಲ್ಪಡುವ ಈ ಕರೆಗಳು ನಿಜಕ್ಕೂ ಬೇಕಾ ಅನ್ನಿಸುತ್ತದೆ....

ಎಲ್ಲಕ್ಕಿಂತ ಹೆಚ್ಚಾಗಿ ನನಗಾದ ಒಂದು ಕಹಿ ಅನುಭವ... ೧೯೯೩ ರಲ್ಲಿ ನಾವು ಕಲ್ಕತ್ತಾದಲ್ಲಿದ್ದಾಗ, ನನ್ನವರು ಇದ್ದ ಕೆಲಸ ಬಿಟ್ಟು ಬೇರೊಂದು ಹೊಸ ಕೆಲಸಕ್ಕಾಗಿ... ರಷ್ಯಾಗೆ ಹೋಗಿದ್ದರು. ಅವರು ಹೊರಟ ಮಾರನೇ ದಿನದಿಂದಲೇ ಶುರುವಾಯಿತು ನೋಡಿ ನನಗೆ ಎಲ್ಲಾ ಗ್ರಹಗಳದ್ದೂ ಕಾಟ ಒಟ್ಟಿಗೇ... ದಿನವೂ ನಾನು ಕಛೇರಿಯಿಂದ ಮನೆಗೆ ಬಂದು ಒಳಗೆ ಕಾಲಿಟ್ಟ ಕ್ಷಣ ದೂರವಾಣಿ ಟ್ರೀಣ್........ ಟ್ರೀಣ್....... ಯಾರೆಂದು ಎತ್ತಿದ ತಕ್ಷಣ ಆ ಕಡೆಯಿಂದ ಬರೀ ಅಸಹ್ಯವಾದ... ಅಶ್ಲೀಲವಾದ.... ಅನಾಗರಿಕವಾದ ಮಾತುಗಳು ತೂರಿ ಬರುತ್ತಿದ್ದವು.... ಜೊತೆಗೆ ಕೆಟ್ಟ ಕೊಳಕ ಪೋಲಿ ಹಾಡುಗಳ ಭಜನೆ ಬೇರೆ.... ಎಷ್ಟು ಬೆದರಿಸಿದರೂ, ಉಗಿದರೂ ನಿಲ್ಲದೆ ನನ್ನನ್ನು ತುಂಬಾ ಚಿಂತೆಗೊಳಪಡಿಸಿತ್ತು... ಇದು ನನ್ನ ಪ್ರಕಾರ ಯಾರೋ ಚೆನ್ನಾಗಿ ಪರಿಚಯವಿದ್ದವರದ್ದೇ ಕೆಲಸ... ಆದರೂ ಆ ಕಹಿ ಈಗ ನೆನಪಾದರೂ ಹಿಂಸೆಯಾಗುತ್ತೆ... ನಾನೇನಾದರೂ ಕರೆ ಸ್ವೀಕರಿಸದಿದ್ದರೆ... ಮತ್ತೆ ಮತ್ತೆ ಮಾಡುತ್ತಲೇ ಇರುತ್ತಿದ್ದ ಆ ರಾಕ್ಷಸ. ಆಗ ಇನ್ನೂ ನಮ್ಮ ಹತ್ತಿರ ಕರೆ ಮಾಡಿದವರ ಸಂಖ್ಯೆ ತೋರಿಸುವ ಯಂತ್ರ ಇರಲಿಲ್ಲ..... ಕೊನೆಗೂ ಅಂತೂ ಆ ಕರೆಗಳು ಬರುವುದು ನಿಂತಾಗ ನಾನು ನೆಮ್ಮದಿಯ ನಿಟ್ಟುಸಿರಿಟ್ಟಿದ್ದೆ.....

ಈಗ ಕೆಲವು ದಿನಗಳ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಟೆಲಿವ್ಯಾಪಾರಿಗಳಿಂದ ಪಾರಾಗುವ ದಾರಿಗಳು" ಎಂದು ಕೆಲವು ಕ್ರಿಯೇಟಿವ್ (ಅದು ಅವರಿಗೆ ಮಾತ್ರ ಕ್ರಿಯೇಟಿವ್ ಅನ್ನಿಸಿರಬೇಕು, ನನಗನ್ನಿಸಲಿಲ್ಲ) ಐಡಿಯಾಗಳು ಕೊಟ್ಟಿದ್ದರು... ನೀವೆಲ್ಲಾ ನೋಡಿರಬಹುದು... ಅದನ್ನೆಲ್ಲಾ ಇಲ್ಲಿ ಬರೆಯುವ ತಾಳ್ಮೆ, ಅವಶ್ಯಕತೆ ಎರಡೂ ಇಲ್ಲ ಅನ್ನಿಸ್ತು.... ಈ ಸಲಹೆಗಳನ್ನು ಕೆಲಸವಿಲ್ಲದೆ ಕುಳಿತ ಸೋಮಾರಿ ಹೆಂಗಸರು ಬೇಕಾದರೆ ಪ್ರಯತ್ನಿಸಬಹುದೇನೋ.....

ನನಗೇಕೋ ಈಗೀಗ ಸ್ಥಿರ ಹಾಗೂ ಸಂಚಾರಿ ಎರಡೂ ದೂರವಾಣಿಗಳ ಮೇಲೆ "ಸ್ಮಶಾನ ವೈರಾಗ್ಯ" ಅಂತಾರಲ್ಲ ಅದು ಬಂದಿದೆ.... ತ್ಯಾಗ ಮಾಡಿಬಿಡಲೇ ಅಥವಾ ಕಾಶಿ-ಗಯಾಕ್ಕೆಲ್ಲಾದರೂ ಹೋಗಿ ಬಿಟ್ಟು ಬಂದು ಬಿಡಲೇ ಎಂಬ ಯೋಚನೆಯಲ್ಲಿ ಮುಳುಗಿದ್ದೇನೆ......:-)


ಸಂಪದದಲ್ಲಿ ಪ್ರಕಟವಾಗಿದೆ.. ಕೊಂಡಿ..http://www.sampada.net/article/22553#node-22553

6 comments:

 1. ತುಂಬಾ ಚೆನ್ನಾಗಿದೆ ನಿಮ್ಮ ದೂರ ವಾಣಿ ಕಥೆ
  ದೂರವಾಣಿ ತಲೆ ತಿನ್ನುವುದೇ ಜಾಸ್ತಿ

  ReplyDelete
 2. ಹೌದು. ಈ ಮೊಬೈಲ್ ಯಾರು ಕಂಡು ಹಿಡಿದರೋ, ಯಾಕಾದ್ರೂ ಕಂಡು ಹಿಡಿದರೋ.
  ನಾನು ಕೆಲಸಕ್ಕೆ ಸೇರಿ ೬ ವರುಷದವರೆಗೂ ಮೊಬೈಲ್ ಕರೀದಿಸರಿರಲಿಲ್ಲ. ಆಗ ಜನರು ನನನ್ನು ಯಾರೋ ಏಲಿಯನ್ ಅನ್ನುವ ಹಾಗೆ ನೋಡುತ್ತಿದ್ದರು.
  ಕಾರಣಾಂತರಗಳಿಂದ ಒಂದು ವರುಷದ ಹಿಂದೆ ಕೊಂಡುಕೊಳ್ಳಬೇಕಾಯಿತು. ಈಗ ಕೈಬಿಡುವುದು ಕಷ್ಟ. ಅನುಭವಿಸುತ್ತಿದ್ದೀನಿ.

  << ಐಡಿಯಾಗಳು ಕೊಟ್ಟಿದ್ದರು... ನೀವೆಲ್ಲಾ ನೋಡಿರಬಹುದು >>
  ಗಮನಿಸಲಿಲ್ಲ. ಆದ್ರೆ ಪ್ರಯೋಜನಕರವಾಗಿ ಇರುವುದಿಲ್ಲ ಅಂತ ಗೊತ್ತು.

  ReplyDelete
 3. ನಾ ಕೆಲಸ ಮಾಡೂ ಕಂಪನಿ ಕೆನರಬ್ಯಾಂಕ್ ನ ಪ್ರಾಜೆಕ್ಟ ತಗೊಂಡಿದೆ ಅಲ್ಲಿ ದಿನಕ್ಕೆ ಒಮ್ಮೆಯಾದ್ರೂ ವಿಚಿತ್ರ ಫೋನ್ ಬರ್ತಾವ
  ಹೆಚ್ಚಾಗಿ ಹರಿಯಾಣ,ಪಂಜಾಬ ಕಡೆಯಿಂದ.ಅವರದು ವಿಚಿತ್ರ ಡಿಮಾಂಡ ನಾವು ಹಾಡು ಕೇಳಿಸ್ಬೇಕು ದಿನಾನೂ ಅವರಿಗೆ ಇದು ಅ
  ನಂಬರಲ್ಲ ಅಂತ ಹೇಳಿ ಹೇಳಿ ಸಾಕಾಗೆದ...!

  ReplyDelete
 4. ಧನ್ಯವಾದಗಳು ಡಾ.ಗುರು ಅವರೇ...
  ದೂರವಾಣಿ ದೂರದಿಂದಲೂ... (ಕರೆ ಬಂದೂ ಬಂದೂ) ತಲೆ ತಿನ್ನುತ್ತಲೇ ಇರತ್ತೆ.......

  ReplyDelete
 5. ರಾಜೀವ್ ಅವರೇ....
  ನನ್ನ ಬ್ಲಾಗ್ ಗೆಳೆಯರ ಲೋಕಕ್ಕೆ ನಿಮಗೆ ಆತ್ಮೀಯ ಸ್ವಾಗತ. ಹೌದು ಮೊಬೈಲ್ ಇಲ್ಲದಾಗ ನನ್ನನ್ನೂ ಎಲ್ಲರೂ "ಏನು ಮೊಬೈಲ್ ಇಲ್ವಾ ?" ಅಂತ ವಿಚಿತ್ರವಾಗಿ ನಾನೇನೋ ಅತಿ ಮುಖ್ಯವಾದದ್ದನ್ನು ಜೀವನದಲ್ಲಿ ಇಟ್ಟುಕೊಂಡಿಲ್ಲವೆಂಬಂತೆ ಮಾತಾಡುತ್ತಿದ್ದರು.... ಈಗ ನೀವು ಹೇಳಿದಂತೆ ಬಿಡಲಾರದೆ... ಒದ್ದಾಡುವಂತಾಗಿದೆ.
  ಹೌದು.. ಐಡಿಯಾಗಳು ನನಗಂತೂ ಪ್ರಯೋಜನಕಾರಿ ಅನ್ನಿಸಲಿಲ್ಲ... ಎಲ್ಲಾ ಬರಿ ಬಾಲಿಶ ಹಾಗೂ ಅವಾಸ್ತವಿಕವಾಗಿದ್ದವು. ಧನ್ಯವಾದಗಳು.

  ReplyDelete
 6. ಉಮೇಶ್ ಸಾರ್....
  ಎಲ್ಲರದೂ ಒಂದೇ ತರಹದ ಸಮಸ್ಯೆಯಾಗಿದೆ... ಆದರೆ ಪರಿಹಾರ ಏನು? ಸಾಲ ಕೊಟ್ಟವರು ಅದನ್ನು ವಸೂಲಿ ಮಾಡಲು ಬೇರೆ ಬೇರೆ ಏಜೆನ್ಸೀಗೆ ಗುತ್ತಿಗೆ ಕೊಟ್ಟು ಬಿಡುತ್ತಾರೆ ಮತ್ತು ಬದಲಾದ ದೂರವಾಣಿ ಸಂಖ್ಯೆಗಳನ್ನು ಯಾರೂ ಎಲ್ಲೂ ತಿದ್ದುವುದಿಲ್ಲ..... ನಮ್ಮಗಳ ತಾಳ್ಮೆ ಪರೀಕ್ಷೆ ಆಗ್ತಿದೆ..... ಧನ್ಯವಾದಗಳು..

  ReplyDelete