Monday, November 16, 2009

ದೂರವಾಣಿ...... ಟ್ರೀಣ್.... ಟ್ರೀಣ್...... ೧

ಈಚಿನ ದಿನಗಳಲ್ಲಿ ಸಂಚಾರಿ ದೂರವಾಣಿ ಹಾಗೂ ಮನೆಯ ಸ್ಥಿರ ದೂರವಾಣಿ ಎರಡೂ ಏಕೋ ತುಂಬಾ ತಲೆನೋವು ಕೊಡುತ್ತಿವೆ. ಮೊದ ಮೊದಲು ನಾನು ಚಿಕ್ಕವಳಿದ್ದಾಗ, ಅಪ್ಪ ಮನೆಗೆ ದೂರವಾಣಿ ಸಂಪರ್ಕ ತೆಗೆದುಕೊಂಡಾಗ, ಅದು ಅವರಿಗೆ ಅವರ ಪತ್ರಿಕೋದ್ಯಮದ ವೃತ್ತಿಗೆ ಪೂರಕವಾಗಿ ಅತ್ಯಂತ ಅವಶ್ಯಕತೆಯಾಗಿತ್ತು. ಎಲ್ಲಾ ತುರ್ತು ವರದಿಗಳನ್ನೂ ಟೆಲಿಗ್ರಾಂ ಮೂಲಕವೇ ಕಳುಹಿಸಲಾಗುವುದಿಲ್ಲ ಮತ್ತು ಸುತ್ತ ಮುತ್ತಲ ಹಳ್ಳಿಯವರು ತಂದೆಯವರನ್ನು ಅಂಚೆ ಕಛೇರಿಯ ಮೂಲಕವಾದರೂ ತಲುಪಬಹುದೆನ್ನುವ ಮುಖ್ಯ ಉದ್ದೇಶ, ನಮ್ಮನೆಗೆ ದೂರವಾಣಿಯ ಆಗಮನಕ್ಕೆ ನಾಂದಿ ಹಾಡಿತ್ತು. ಆ ದಿನ, ನಾನು ಬಹುಶ: ೬ - ೭ ನೇ ತರಗತಿಯಲ್ಲಿದ್ದೆ..... ನಮ್ಮ ಮನೆಗೆ ದೂರವಾಣಿ ಕೇಂದ್ರದವರು ಬಂದು ಆ ಹಳೆಯ ದಪ್ಪಗೆ-ಕಪ್ಪಗೆ, ಭಾರವಾಗಿ ಇದ್ದ ಒಂದು ಅಪರೂಪದ (ನಮಗೆ ಮಾತ್ರ) ವಸ್ತು ತಂದಾಗ ಮನೆಯಲ್ಲಿ ನಮ್ಮ ಸಂಭ್ರಮ ನೋಡಬೇಕಿತ್ತು....!!!

ನಡುಮನೆಯಲ್ಲಿ ಒಳಬಂದಾಗ ಎಡಗಡೆಗೆ ಬಾಗಿಲ ಪಕ್ಕ ಖಾಲಿಯಿದ್ದ ಮೂಲೆಗೆ ಒಂದು ಎತ್ತರವಾದ ಚೌಕಾಕಾರದ ಟೇಬಲ್ ಬಂದು ಕುಳಿತಿತ್ತು. ಅದು ದಶಕಗಳ ನಂತರ ಮಿಂದು ಮಡಿಯುಟ್ಟು ಕಂಗೊಳಿಸುತ್ತಿತ್ತು. ಅದರ ಮೇಲೆ ಶೋಭೆ ಹೆಚ್ಚಿಸಲು ಅಮ್ಮ ತಾನೇ ಬಣ್ಣ ಬಣ್ಣದ ದಾರಗಳಿಂದ ಕಸೂತಿ ಮಾಡಿದ್ದ ಹಾಸು ಹಾಕಲಾಗಿತ್ತು.... ಬರಲಿರುವ ಈ ದೂರವಾಣಿ ಎಂಬ ಮಹಾರಾಜನಿಗೆ ಸಿಂಹಾಸನ ಸಿದ್ಧವಾಗಿ, ನಾವೆಲ್ಲಾ ತಾಳ್ಮೆಗೆಟ್ಟು ಚಡಪಡಿಸುವಂತಾಗಿತ್ತು.... ಕೊನೆಗೂ ಆ ವ್ಯಕ್ತಿ ನಮ್ಮ "ಕಡು ಕಪ್ಪು" ಮಹಾರಾಜನನ್ನು ಎತ್ತಿ ತಂದು ಸಿಂಹಾಸನದಲ್ಲಿ ಕೂರಿಸಿದಾಗ ನಮಗೆಲ್ಲೋ ಏನೋ ಹೆಮ್ಮೆ... ಕೋಡು, ಕಿರೀಟ ಎಲ್ಲಾ ಬಂದಿತ್ತು.... ಜೊತೆಗೆ ಜಂಭ... ದೊಡ್ಡಸ್ತಿಕೆ ಕೂಡ... ಏಕೆಂದರೆ ನಮ್ಮ ಶಾಲೆಯಲ್ಲಿ ನಮ್ಮ ಮನೆಗೇ ಮೊದಲು ದೂರವಾಣಿ ಎಂಬ ಗೋಚರ (ಅಗೋಚರ ಅಲ್ಲ) ಮಾಂತ್ರಿಕ ವಸ್ತು ಬಂದಿದ್ದು.... ಮೊದಲ ಕರೆ ದೂರವಾಣಿ ಕಛೇರಿಯಿಂದ ಬರುವುದೆಂದೂ... ಮಕ್ಕಳು (ನಾನೊಬ್ಬಳೇ ಚಿಕ್ಕವಳು) ತಲೆಹರಟೆಗಳಂತೆ ವರ್ತಿಸದೆ ಸುಮ್ಮನಿರಬೇಕೆಂಬ ಅಪ್ಪನ ತಾಕೀತು ಬೇರೆ..... ಅಂತೂ ನಾವೆಲ್ಲರೂ ’ಬೇಚೈನೀಸೆ’ ಕಾಯುತ್ತಿದ್ದ ಕ್ಷಣ ಕಳೆದು, ನಮ್ಮ ದೂರವಾಣಿ "ಟ್ರೀಣ್... ಟ್ರೀಣ್..." ಎಂಬ ಶಬ್ದ ಮಾಡಲಾರಂಭಿಸಿದಾಗ, ಅಪ್ಪನ ತಾಕೀತು, ಅಮ್ಮನ ಸುಡುನೋಟ ಎಲ್ಲಾ ಗಾಳಿಗೆ ತೂರಿ ಓಡಿದ್ದೆವು.

ಆಷ್ಟರಲ್ಲಾಗಲೇ ಅಪ್ಪ ಆ ಮಾಂತ್ರಿಕ ಮಹಾರಾಜನ ಮುಂಡದಿಂದ ರುಂಡವನ್ನು ಬೇರ್ಪಡಿಸಿ, ತಮ್ಮ ಕಿವಿಗೆ ಹಿಡಿದಿದ್ದರು ಮತ್ತು ತುಂಬಾ ಗತ್ತಿನಿಂದ "ಹಲೋ"... ಎಂದಿದ್ದರು. ಇಷ್ಟು ಹೊತ್ತಿಗಾಗಲೇ ಒಂದು ಕೈನಲ್ಲಿ ಕಾಗದ ಮತ್ತು ಪೆನ್ ರೆಡಿಯಾಗೆ ಇಟ್ಟುಕೊಂಡಿದ್ದರಿಂದ, ಅಪ್ಪ ಏನೋ ಬರೆದುಕೊಂಡರು ಮತ್ತು ಹಾಂ.. ಸರಿ ಸರಿ... ಥ್ಯಾಂಕ್ಸ್ ಎಂದು ಮತ್ತೆ ಬೇರ್ಪಟ್ಟಿದ್ದ ರುಂಡ ಮುಂಡಗಳನ್ನು ಜೋಡಿಸಿಟ್ಟರು. ಅಮ್ಮ ಮತ್ತು ನಮ್ಮನ್ನೆಲ್ಲಾ (ಕುತೂಹಲದಿಂದ ಕಣ್ಣು ಪಿಳಿಪಿಳಿ ಬಿಡುತ್ತಾ ನಿಂತಿದ್ದೆವಲ್ಲಾ) ಕರೆದು ಇನ್ನು ಮೇಲೆ ಇದು ನಮ್ಮ ದೂರವಾಣಿ ಸಂಖ್ಯೆ... ಯಾರಾದರೂ ಕೇಳಿದರೆ ಹೇಳಿ ಎಂದರು.... ನಮ್ಮ ಕತ್ತುಗಳು ಸುಮ್ಮನೆ ’ಸರಿ’ ಎಂಬಂತೆ ಆಡಿದ್ದವು. ನಾವು ನಮ್ಮದೇ ಸಂಖ್ಯೆ ಮರೆತು ಬಿಡಬಹುದೆಂದು, ಅಪ್ಪ ಮುಂದಾಲೋಚಿಸಿ ಅದನ್ನು ಸಣ್ಣ ಚೀಟಿಯಲ್ಲಿ ಬರೆದು ದೂರವಾಣಿ ಯಂತ್ರದ ಮೇಲೆ ಅಂಟಿಸಿ ಬಿಟ್ಟರು. ಆಗ ಎರಡೇ ಸಂಖ್ಯೆಗಳಿದ್ದವು. ಅಪ್ಪ ಹೊರಗೆ ಹೊರಟ ನಂತರ, ನಾವೆಲ್ಲಾ ರುಂಡ-ಮುಂಡಗಳನ್ನು ಬೇರ್ಪಡಿಸಿ, ಕಿವಿಗಿಟ್ಟು ನೋಡಿದ್ದೇ.. ನೋಡಿದ್ದು.. ಕಿವಿಯಲ್ಲಿ ಕೇಳುವ ಟರ್.... ಶಬ್ದ ನಮ್ಮನ್ನು ರೋಮಾಂಚನಗೊಳಿಸಿದ್ದಂತೂ ನಿಜ.... ಅಮ್ಮ ತಾನೇ ಹಾಕಿದ ಸ್ವಲ್ಪ ಚಿಕ್ಕದಾದ ಕಸೂತಿಯ ಇನ್ನೊಂದು ಹಾಸು ತಂದು, ಆ ಮಾಯಾ ಯಂತ್ರದ ಧೂಳೆಲ್ಲಾ ಒರೆಸಿ ಮುಚ್ಚಿಬಿಟ್ಟು, ನಮ್ಮೆಡೆ ’ಉರಿನೋಟ’ ರವಾನಿಸಿದಾಗಷ್ಟೇ ನಾವು ಅಲ್ಲಿಂದ ಕಾಲ್ಕಿತ್ತಿದ್ದು....

ಅಲ್ಲಿಂದ ಪ್ರತೀ ಸಾರಿ ದೂರವಾಣಿಯ ಘಂಟೆ ಬಾರಿಸಿದಾಗಲೂ, ಅದೇನು ಸಂಭ್ರಮ, ಅದೇನು ಕಾತುರ... ಅಬ್ಬಾ ! ನಮಗೆ ಅದೊಂದು ಹಬ್ಬದ ಸಡಗರವೇ ಆಗಿಹೋಗಿತ್ತು..... ಪರಿಚಿತರು, ನೆಂಟರೂ ಎಲ್ಲರೂ ಬಂದು ಅಪ್ಪನನ್ನು ನೋಡಿ ಇವರೇ ಸ್ವಲ್ಪ ಎಡವಟ್ಟಾಗಿಬಿಟ್ಟಿದೆ... ಈ ಇಂಥವರಿಗೆ ಒಂದು ಫೋನ್ ಮಾಡಿಕೊಡೀಪ್ಪ... ಮಾತಾಡಬೇಕು... ಇದಕ್ಕೆಲ್ಲಾ ನೀವೇ ಸರಿ ನೋಡಿ ಎಂದು ಅಪ್ಪನನ್ನು ಅಟ್ಟ ಹತ್ತಿಸಿ ಬಿಟ್ಟಿ ಕರೆಯೂ ಮಾಡಿ, ಅಮ್ಮನ ಕೈಯ ಕಾಫಿಯೂ ಕುಡಿದು ಹೋದವರೆಷ್ಟು ಜನರೋ.....

ದೂರದೂರುಗಳಿಗೆ ಮತ್ತು ವಿದೇಶಗಳಿಗೆ ಕರೆಗಳನ್ನು ನೋಂದಣಿ ಮಾಡಿಸಿ, ರಾತ್ರಿ ೧೨ ಘಂಟೆಯಾದರೂ, ತೂಕಡಿಸುತ್ತಾ ಕಾಯುತ್ತಿದ್ದೆವು... ಅದೆಲ್ಲಾ ನಮಗೆಂದೂ ’ಕಾಟ’ ಎಂದಾಗಲೀ ಅಥವಾ ತೊಂದರೆಯೆಂದಾಗಲೀ ಅನ್ನಿಸಿರಲೇ ಇಲ್ಲ... ಇದೆಲ್ಲಾ ಸಂಭ್ರಮ, ಸಡಗರ, ಅನುಕೂಲ ಅಂದು.....

ಆದರೆ ಇಂದು ದೂರವಾಣಿ ಜಗತ್ತಲ್ಲಿ ಅತ್ಯಂತ ನವೀನ ಆವಿಷ್ಕಾಗಳಾಗಿವೆ.... ಸಂಚಾರಿ ದೂರವಾಣಿ, ಬೇಕೆಂದ ಕಡೆ ಎತ್ತಿಕೊಂಡು ಹೋಗಿ ಕುಳಿತು ಮಾತಾಡ ಬಲ್ಲ ದೂರವಾಣಿ ಎಲ್ಲಾ ಬಂದು ಹಳೆಯದಾಗಿಹೋಗಿವೆ.... ಆ ದಿನಗಳಲ್ಲಿ ತಪ್ಪಿ ಒಮ್ಮೊಮ್ಮೆ ಬರುತ್ತಿದ್ದ "ತಪ್ಪು ಸಂಖ್ಯೆ"ಗಳ ಕರೆ ಕೂಡ ಒಂಥರಾ ಖುಷಿನೇ ಕೊಡ್ತಿತ್ತು... ಆದರೆ ಈಗ ಸಂಚಾರಿ ದೂರವಾಣಿಯಲ್ಲೂ ಬರುವ ತಪ್ಪು ಸಂಖ್ಯೆಗಳ ಕರೆಗಳು ಒಮ್ಮೊಮ್ಮೆ ನೆಮ್ಮದೆ ಕೆಡಿಸುವುದಂತೂ ನಿಜ.

ನಮ್ಮ ಮನೆಗೆ ದೂರವಾಣಿ ಬಂದ ಹೊಸತು... ಮೊದಲ ರಾಂಗ್ ನಂಬರ್ ಕರೆ ಬಂದಾಗ... ಕರೆ ಮಾಡಿದವನು ಯಾವುದೋ ಹೋಟೆಲ್ ಎಂದು ಸ್ನಾನಕ್ಕೆ ಬಿಸಿನೀರು ಬೇಕಿತ್ತು ಎಂದಾಗ ನನ್ನ ಅಕ್ಕ ಹೆದರಿ ಇಟ್ಟುಬಿಟ್ಟಿದ್ದಳು... ಆದರೆ ಅದೇ ಕರೆ ೨ - ೩ ನೇ ಸಲ ಬಂದಾಗ... ಧೈರ್ಯದಿಂದ ’ನಮ್ಮನೆ ಹಂಡೇಲಿ ಕುದೀತಿದೆ... ತಲೆ ಮೇಲೆ ಸುರೀತೀನಿ ಬಾರೋ’.... ಎಂದಿದ್ದಳು....

ಮತ್ತೊಂದು ದಿನ... ಯಾರೋ ಕರೆ ಮಾಡಿ.... ಮಸಾಲೆ ದೋಸೆ ಪಾರ್ಸೆಲ್ ಕಳಿಸಿ ಎಂದಾಗ... ನಾನು ಇದು .....ಇಂಥವರ ಮನೆ, ಇಲ್ಲಿಗೂ ಮೂರು ದೋಸೆ ಪಾರ್ಸೆಲ್ ನಿಮ್ಮ ಲೆಕ್ಕದಲ್ಲೇ ಕಳಿಸಿ ಎಂದಿದ್ದೆ....

ಹೀಗೆ ನಮ್ಮ ಮನೆಯಲ್ಲಿ ಮೊದಲ ಬಾರಿಗೆ ಸ್ಥಾಪಿತಗೊಂಡ ಸ್ಥಿರ ದೂರವಾಣಿಯ ಸಂಪರ್ಕ ಹಲವು ವಿನೋದ ಪ್ರಸಂಗಗಳಿಗೆ ದಾರಿ ಮಾಡಿಕೊಟ್ಟಿತ್ತು....

ಮತ್ತೆ ನಾಳೆ ನಿಮಗೆ ಇದರಿಂದಾಗಿ ಅನುಭವಿಸಿದ/ಇನ್ನೂ ಅನುಭವಿಸುತ್ತಿರುವ ಕಿರಿಕಿರಿಗಳನ್ನು ತಿಳಿಸುತ್ತೇನೆ.... ಅಲ್ಲೀವರೆಗೂ ನಿಮ್ಮ ದೂರವಾಣಿ ಟ್ರೀಣ್... ಟ್ರೀಣ್.... ಅನ್ನುತ್ತಿರಲಿ......

ಸಂಪದದಲ್ಲಿ ಇದು ಪ್ರಕಟವಾಗಿದೆ ಈ ಕೆಳಗಿನ ಕೊಂಡಿಯಲ್ಲಿ..
http://www.sampada.net/article/22493

6 comments:

  1. ಶಾಮಲಾ ಮೇಡಮ್...
    ಭಾಗ ಒಂದನ್ನು ನಿಮ್ಮ ಬ್ಲಾಗ್ ನಲ್ಲೂ ಭಾಗ ಎರಡನ್ನೂ ಸಂಪದದಲ್ಲೂ ಓದಿದೆ...
    ಬಂದ ಹೊಸತರಲ್ಲಿ ತುಂಬಾ ಕುತೂಹಲ ಕೆರಳಿಸಿದ್ದ ದೂರವಾಣಿ ಈಗೀಗ ಸಮಸ್ಯೆ ಸೃಷ್ಟಿಸುತ್ತಿರುವ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..
    ಕೆಲವು ಪ್ರಸಂಗಗಳು ನಗೆ ತರಿಸಿದರೂ ಅನುಭವಿಸುವವರ ಗೋಳು ನೆನೆದು ಬೇಸರವಾಯಿತು....
    ಆದರೆ ಕಾಶಿಗೋ ಗಯಾಕ್ಕೋ ಹೋಗಿ ಬಿಟ್ಟು ಬರ್ತೀನಿ ಅಂದ್ರಲ್ಲಾ... ಬೇಡ ಅಂತ ನನ್ನ ಅನಿಸಿಕೆ.. :)

    ReplyDelete
  2. ನಾ ಉಮೇಶ ದೇಸಾಯಿ ಅಂತ ಹೇಳಿದ್ರೂ ಕೇಳೂದಿಲ್ಲ ಬಾರ್ಕಲೆ ಕಂಪನಿಅವ್ರು ಸುರೇಶ್ ಅನ್ನಾವಗ ಸಾಲ ಕೊಟ್ಟಾರ ಅವನ್ನ ಹುಡುಕ್ಕೋತ ನಮ್ಮನಿಗೆ ದಿನಕ್ಕ ಐದುಸಲ ಫೋನು ಬರ್ತಾವ ಈ ಲ್ಯಾಂಡಲೈನಿಂದು ಒಂದು ನಮೂನಿ ಆದ್ರ ಈ ಸಂಚಾರಿದೂ
    ಇನ್ನೊಂದು ಕತಿ !

    ReplyDelete
  3. ಶ್ಯಾಮಲಾ ಅವರೆ, ದೂರವಾಣಿ ಸಂಪರ್ಕ, ನಂತರದ ಖುಷಿ, ಕೂಗಾಟ, ರಾಂಗ್ ನಂಬರ್‍, ಕಿರಿಕಿರಿ ಎಲ್ಲ ಒಂಥರಾ ಆಗಾಗ ನೆನಪಿಸಿಕೊಳ್ಳುವ ವಿಚಾರಗಳೆನಿಸುತ್ತದೆ. ಲೇಖನ ಚೆನ್ನಾಗಿತ್ತು. ನಾನು ಕಚೇರಿಗೆ ಸೇರುವವರೆಗೂ ಈ ಕಪ್ಪಗಿನ, ದಪ್ಪನೆಯ ದೂರವಾಣಿ ನೋದಿದ್ದೆ. ಅಂಕಿಗಳನ್ನು ತಿರುಗಿಸುವಾಗ ಆಗುತ್ತಿದ್ದ ತೊಂದರೆಗಳು ಅನೇಕ. ಕೆಲವೊಮ್ಮೆ ಅದು ಪೂರ್ತಿ ತಿರುಗದೇ ಬೇರೆ ನಂಬರಿಗೆ ಕರೆ ಹೋಗುತ್ತಿದ್ದದ್ದೂ ಇದೆ. ಮೊಬೈಲು ಇನ್ನೊಂಥರಾ ಕಿರಿಕಿರಿಯಾದರೂ ಸಮಯ ಸಂದರ್ಭಗಳಲ್ಲಿ ಅನುಕೂಲಿಯಾಗಿರುತ್ತದೆ. ಅನುಕೂಲ-ಅನಾನುಕೂಲ, ಖುಷಿ-ದು:ಖ ಇವೆಲ್ಲ ಜೊತೆಯಂತೆಯೇ ಇದೂ ಸಹ ಜೀವನದ ಅವಿಭಾಜ್ಯ ಎನ್ನಬಹುದು. ಲೇಖನ ಚೆನ್ನಾಗಿದೆ.
    ಧನ್ಯವಾದಗಳು.

    ReplyDelete
  4. ಧನ್ಯವಾದಗಳು ದಿಲೀಪ್...
    ನೀವು ಸಂಪದದಲ್ಲಿದ್ದೀರಾ?... ಏನೇ ಕಿರಿಕಿರಿ ಆದರೂ ಅದು ಈಗ ನಮ್ಮ ಜೀವನದಲ್ಲಿ ಅತಿ ಅವಶ್ಯಕವಾಗಿ ಬಿಟ್ಟಿದೆ ಅಲ್ವಾ? ಹಾಗಾಗಿ ಕಾಶಿ / ಗಯಾ ಎಲ್ಲಿಗೇ ಹೋದರು ಜೋಪಾನವಾಗಿ ವಾಪಸ್ಸು ತರ್ತೀನಿ ಬಿಡಿ... :-)

    ReplyDelete
  5. ಹೌದು ಉಮೇಶ್ ಸಾರ್...
    ಎರಡೂ ಒಂದೊಂದು ಥರದ ಉಪದ್ರವವೇ... ಆದರೆ ಅವೀಗ ನಮಗೆ ಎಷ್ಟು ಅವಶ್ಯಕ ಆಗಿಬಿಟ್ಟಿವೆ ಎಂದರೆ... ಬಿಡಲೂ ಆಗೊಲ್ಲ... ಹೀಗೇ ಕಿರಿಕಿರಿ ಅನುಭವಿಸುತ್ತಲೇ..ಉಪಯೋಗಿಸುತ್ತಲೇ ಇರಬೇಕು.... ಅಂತೂ ನಿಮಗೂ ಈ ಅನುಭವ ಆಗಿದೆ (ಅಥವಾ ಆಗುತ್ತಲೇ ಇದೆ)..... :-)ಧನ್ಯವಾದಗಳು.

    ReplyDelete
  6. ಚಂದ್ರು ಅವರೆ...
    ಧನ್ಯವಾದಗಳು ಲೇಖನ ಮೆಚ್ಚಿದ್ದಕ್ಕೆ... ಹೌದು ಹಳೆಯ ಕಾಲದ ಆ ದಪ್ಪ ಕಪ್ಪು ಯಂತ್ರ ಉಪಯೋಗಿಸಿ.. ಸಾಕಾಗಿತ್ತು... ಒಂದೇ ಬೆರೆಳಿನಲ್ಲಿ ತಿರುಗಿಸಿ, ತಿರುಗಿಸಿ ನೋವು ಬರುತ್ತಿತ್ತು...
    ನಿಮ್ಮನ್ನು ’ಛಾಯಾ ಕನ್ನಡಿ’ಯ ಪುಸ್ತಕ ಬಿಡುಗಡೆ ಸಮಾರಂಭದ ಚಿತ್ರದಲ್ಲಿ ನೋಡಿದೆ.... :-)

    ReplyDelete