Wednesday, June 1, 2011

ದೇಹ - ದೇವಾಲಯ

ಬ್ರಹ್ಮಮು ಬಯಲೈ ವುಂಡಗ

ವೆದಕುಚು ಭುವಿಯೆಲ್ಲ ತಿರುಗು ವೆರ್ರುಲು ಕಲರಾ ?

ವೆದಕವಲೇ ಘಟಮು ಚೊರಬಡಿ

ಚಿಕ್ಕುನು ಬ್ರಹ್ಮಂಬಪ್ಪುಡು ಶೀಘ್ರಂಬುನನು ||

ಬ್ರಹ್ಮವು ಸರ್ವತ್ರ ವ್ಯಾಪಿಸಿ ಬಯಲಾಗಿರುವಾಗ ಹುಡುಕುತ್ತ ಭೂಮಂಡಲವೆಲ್ಲ ಅಲೆಯುವ ಹುಚ್ಚರುಂಟೆ ?

ದೇಹದ ಒಳಹೊಕ್ಕು ಹುಡುಕಬೇಕು. ಆಗ ಬ್ರಹ್ಮವು ಶೀಘ್ರವಾಗಿ ಸಿಕ್ಕುತ್ತದೆ.

ನಿನ್ನು ನೀವೇ ತೆಲಿಯ ರಾ - ನೀಲೋ ವುನ್ನದಿ ದ್ಯಾವರಾ - ನಿನ್ನನ್ನು ನೀನೇ ತಿಳಿ.. ನಿನ್ನೊಳಗೆ ಇದ್ದಾನೆ ದೇವರು ಎನ್ನುತ್ತಾರೆ ಕೈವಾರ ತಾತಯ್ಯನವರು.

ಪ್ರತಿಯೊಂದು ಆತ್ಮವೂ ಈ ಜಗತ್ತಿನಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಒಂದು ದೇಹಕ್ಕೆ ಸೇರಲೇ ಬೇಕು. ತನ್ನ ಕರ್ಮಗಳಿಗನುಸಾರವಾಗಿ, ದೇಹವನ್ನು ಧರಿಸಿ, ಲ್ಲಿ ಅಂದರೆ ಈ ಭೌತಿಕ ಜಗತ್ತಿನಲ್ಲಿ ಯಾವುದೋ ಒಂದು ಹೆಸರಿನಿಂದ, ಯಾರದೋ ಮಗ/ಮಗಳು, ತಂಗಿ-ಅಕ್ಕ, ತಮ್-ಅಣ್ಣ, ಸ್ನೇಹಿತ-ಸ್ನೇಹಿತೆ ಹೀಗೇ ನಾನಾ ತರದ ಸಂಬಂಧಗಳಿಂದ ಗುರುತಿಸಲ್ಪಡುತ್ತದೆ. ಆದರೆ ಆತ್ಮದ ನಿಜವಾದ ಪರಿಚಯ ಆ ಆತ್ಮಕ್ಕೇ ತಿಳಿದುಕೊಳ್ಳುವ ಒಂದು ಅದ್ಭುತವಾದ ಅವಕಾಶವನ್ನು ಭಗವಂತ ಮನುಷ್ಯರಿಗೆ ಮಾತ್ರ ಕೊಟ್ಟಿದ್ದಾನೆ. ನಮಗೆ ನಮ್ಮದೇ ಆದ ಒಂದು "ವಿವೇಕ" ಕೊಟ್ಟಿದ್ದಾನೆ. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದನ್ನು ತರ್ಕಿಸಿ ನೋಡುವ ಬುದ್ಧಿವಂತಿಕೆಯನ್ನೂ ಕೊಟ್ಟಿದ್ದಾನೆ. ಅದರ ಜೊತೆಗೇ.. ನಾವು ಆ ಭಗವಂತನನ್ನು ಅರಿಯುವ ಪ್ರಯತ್ನ ಮಾಡಬೇಕೆಂಬ ಪ್ರೇರಣೆಯನ್ನೂ ಕೊಡುತ್ತಾನೆ. ನಾವು ಜನ್ಮಗಳ ನಂತರ ಜನ್ಮಗಳನ್ನೆತ್ತುವುದೇ ನಮ್ಮನ್ನು ನಾವು, ನಮ್ಮ ಮೂಲ ಸ್ವರೂಪವನ್ನು ಅರಿಯಲು, ನಮ್ಮೊಳಗಿನ ಆ ಭಗವಂತನನ್ನು ಅರಿಯಲು. ಆದರೆ ಈ ಮೂಲವಾದ ಉದ್ದೇಶವನ್ನೇ ನಾವು ಮರೆತು ಬಿಟ್ಟಿರುತ್ತೇವೆ. ಯಾವುದೂ ನಮ್ಮದಲ್ಲಾ ಎಲ್ಲಾ ಅವನ ಕರುಣೆ ಎನ್ನುವುದನ್ನು ಮರೆತು ನಮ್ಮ "ವಿವೇಕ"ವನ್ನು ನಮ್ಮ ಅಹಂಕಾರ ಬೆಳೆಸುವುದರಲ್ಲೇ ವ್ಯಯ ಮಾಡಿ, ಮತ್ತೆ ಮತ್ತೆ ಕರ್ಮಗಳನ್ನು ಮಾಡುತ್ತಾ, ಜನ್ಮಗಳನ್ನು ಎತ್ತುತ್ತಾ ಮುಗಿಯದ ಸುಳಿಯಲ್ಲಿ ಸಿಲುಕಿ ಬಿಡುತ್ತೇವೆ. ಈ ಒಂದು ವರ್ತುಲದಿಂದ ನಮ್ಮನ್ನು ನಾವು ಬಿಡಿಸಿಕೊಳ್ಳಲು ನಮ್ಮ ಆತ್ಮ ಧರಿಸಿ ಬರುವುದೇ ದೇಹವನ್ನು ಎಂಬ ಒಂದು ಮಾತನ್ನು ನಾವು ಸ್ವಲ್ಪ ಆಳವಾಗಿ ಯೋಚಿಸಬಹುದು. ಪರಮಾತ್ಮನಲ್ಲಿ ಅಗಾಧ ನಂಬಿಕೆ ಇಟ್ಟು ಅವನನ್ನು ಅರಿಯು ಒಂದು ಅವಕಾಶ ನಮಗೆ ಹುಟ್ಟಿನಲ್ಲಿ ಲಭಿಸಿದೆ ಎಂಬ ಭಾವ
ನಮಗೆ ಬಂದಾಗ, ನಮ್ಮ ದೇಹ ನಮ್ಮ ಈ ಜೀವಕ್ಕೆ ಸಂಬಂಧ ಪಟ್ಟಿದ್ದು ಮಾತ್ರ ಒಳಗಿರುವ ಚೇತನ ಬೇರೆಯೇ ಇದೆ. ಜೀವಕ್ಕೆ ಸಂಬಂಧ ಪಟ್ಟಿದ್ದೆಲ್ಲಾ ಆ ಚೇತನಕ್ಕೆ ಸಂಬಂಧ ಪಟ್ಟಿರುವುದಿಲ್ಲ, ನಮ್ಮೊಳಗಿದ್ದರೂ, ಭಗವಂತ ನಮ್ಮಲ್ಲಿ ನೆಲೆಯಿಲ್ಲ ಎಂಬ ಸತ್ಯ ನಮಗೆ ಗೋಚರವಾದ ಕ್ಷಣದಿಂದ ನಾವು ಭಗವಂತನ ವರವಾಗಿ ನಮಗೆ ಲಭ್ಯವಾಗಿರುವ ಈ ದೇಹವನ್ನೇ ಒಂದು ದೇವಾಲಯವಾಗಿಸುವತ್ತ ಮನಸ್ಸು ತಿರುಗಿಸಬೇಕು. ದೇಹ ನಮಗೆ ಭಗವಂತನ ಅರಿವನ್ನು ತಿಳಿಯಲು ಸಿಕ್ಕಿರುವ ಒಂದು ಅಪೂರ್ವ ಸಾಧನ.
ದೇಹವನ್ನೇ ದೇಗುಲವಾಗಿಸುವುದೆಂಬ ಮಾತು ಮೇಲೆ ಕಂಡು ಬರುವಷ್ಟು ಸುಲಭ ಹಾಗೂ ಸರಳವಾಗಿಲ್ಲ. ನಾವು ದಿನ ನಿತ್ಯ ತಿಳಿದು ಮಾಡುವ
, ತಿಳಿಯದೇ ಮಾಡುವ, ಮಾನಸಾದಿ ಸಹಿತ ಕರ್ಮಗಳನ್ನೆಲ್ಲಾ ಅವಲೋಕನ ಮಾಡುಕೊಳ್ಳುತ್ತಾ.. ಎಚ್ಚರದಲ್ಲೂ, ನಿದ್ರೆಯಲ್ಲೂ, ಸದಾಕಾಲವೂ ಭಗವಂತನ ಸ್ಮರಣೆ ಮಾಡುತ್ತಾ, ಸಮಸ್ತವನ್ನೂ ಅವನಿಗೇ ಅರ್ಪಿಸುತ್ತಾ ಈ ಹುಟ್ಟಿನಿಂದ ಗುರುತಿಸಲ್ಪಟ್ಟಿರುವ ಈ ದೇಹವನ್ನು ಸ್ವಚ್ಚ ಮಾಡುವ ಕಾರ್ಯ ಶುರುವಾಗ ಬೇಕಾಗುತ್ತದೆ. ನಮ್ಮ ಮನಸ್ಸೆನ್ನುವುದು ಒಂದು ಖಾಲಿ ನಿವೇಶನದಂತೆ. ನಿವೇಶನದಲ್ಲಿ ಮನೆಯನ್ನು ಕಟ್ಟಬೇಕಾದರೆ ಹೇಗೆ ನೆಲವನ್ನು ಅಗೆದು, ಮಣ್ಣು ಸಡಿಲಿಸಿ, ಕಸ ಕಡ್ಡಿ, ಕಲ್ಲುಗಳನ್ನು ಹೆಕ್ಕಿ ದೂರ ಬಿಸುಟು, ಆಳವಾದ ಗುಂಡಿಯನ್ನು ತೋಡಿ, ನೆಲದೊಳಗಿಂದ ಅಡಿಪಾಯ ಹಾಕಿ ಮೇಲಿನ ಮನೆ ಗಟ್ಟಿಯಾಗಿ ನೆಲೆ ನಿಲ್ಲುವಂತೆ ಮಾಡುತ್ತೇವೆಯೋ ಹಾಗೆ, ನಮ್ಮ ಮನಸ್ಸನ್ನೂ ಮೊದಲು ನಾವು ಅಗೆದು, ಶುಚಿಗೊಳಿಸಬೇಕು. ಕಸ ಕಡ್ಡಿ ಹೆಕ್ಕಿದಂತೆ, ನಾವು ಆಡುವ ಪ್ರತಿಯೊಂದು ಅನವಶ್ಯಕ ಶಬ್ದಗಳನ್ನೂ ಹೆಕ್ಕಿ ದೂರ ಬಿಸಾಡಬೇಕು. ಹಲವಾರು ಜನ್ಮಗಳಿಂದಲೂ ಗಂಟುಗಳಾಗಿ ಬೆಳೆಸಿಕೊಂಡು ತಂದಿರುವಂತಹ ಅನೇಕ ಋಣಾತ್ಮಕ ಭಾವಗಳನ್ನೂ, ಅಹಂಕಾರವನ್ನೂ ಬುಡ ಸಮೇತ ಕಿತ್ತು ಎಸೆಯಬೇಕು. ತಿಳಿಯಾದ ಧನಾತ್ಮಕ ಭಾವವನ್ನು ಬೆರೆಸಿ, ಪ್ರೇಮ ಜಲದಿಂದ ಮನಸ್ಸೆಂಬ ನೆಲವನ್ನು ನೆನೆಸಿ, ಅಗೆದು, ಭದ್ರವಾದ ಭಕ್ತಿಯೆಂಬ ಬುನಾದಿಯನ್ನು ಹಾಕಬೇಕು. ಅದರ ಮೇಲೆ ಕಲ್ಲು, ಇಟ್ಟಿಗೆ, ಸಿಮೆಂಟು, ಮರಳು ಎಂಬ ಸರಿಯಾದ ಪ್ರಮಾಣದಲ್ಲಿ ಬೆರೆತ ವಸ್ತುಗಳಿಂದ ಗಟ್ಟಿಯಾದ ಗೋಡೆಗಳನ್ನು ಕಟ್ಟಬೇಕು. ಇಲ್ಲಿ ಗೋಡೆಗಳು ಎಂದರೆ, ನಾವು ನಮ್ಮ ಮನದಲ್ಲಿ ನಿರಂತರವಾಗಿ ಬರುವ ದುಷ್ಟ ವಿಚಾರಗಳನ್ನು, ಋಣಾತ್ಮಕ ಭಾವಗಳನ್ನು ಅಡ್ದಗಟ್ಟಲು ಶಕ್ಯವಾಗುವ ಭಗವಂತ ಸ್ಮರಣೆಯ ಬಲು ಮಜಬೂತಾದ ಗೋಡೆಯನ್ನು ಕಟ್ಟಬೇಕೆಂಬ ಅರ್ಥ. ಹೀಗೆ ನಮ್ಮ ದೇಹವನ್ನು ದೇವಾಲಯವಾಗಿಸ ಬೇಕೆಂಬ ವಿಚಾರ ಹೊಸದಲ್ಲ. ಅನೇಕ ಶತಮಾನಗಳ ಹಿಂದಿನಿಂದಲೂ ನಮ್ಮ ಜನ್ಮದ ಉದ್ದೇಶ ಅರಿತಿದ್ದ ನಮ್ಮ ಶಿವಶರಣ / ಶರಣೆಯರ ಮತ್ತು ಸರ್ವಜ್ಞನ ವಚನಗಳಲ್ಲಿ ಈ ತತ್ವವನ್ನು ಕಾಣಬಹುದು.

ವಚನಗಳು ಎಂದಾಗ ಎಲ್ಲಕ್ಕಿಂತ ಮೊದಲು ನೆನಪಿಗೆ ಬರುವುದು ಬಸವಣ್ಣನವರ ಉಳ್ಳವರೂ ಶಿವಾಲಯವ ಮಾಡುವರಯ್ಯ.. ನಾನೇನು ಮಾಡಲಿ ಬಡವನಯ್ಯಾ....” ಇದರಲ್ಲಿ ಭಕ್ತಿ ಭಾವದಿಂದ ಬಸವಣ್ಣನವರು ತಮಗೆ ಶಿವನಲ್ಲಿ ಲಯಗೊಳ್ಳಲು ಭೌತಿಕವಾಗಿ ಆಲಯ ಕಟ್ಟಿಸುವ ಶಕ್ತಿಯಿಲ್ಲವೆಂದೂ, ಸಾಂಕೇತಿಕವಾಗಿ ಇಲ್ಲಿ ಹಣ ಮುಖ್ಯವಲ್ಲ ಮನವೇ ಮುಖ್ಯವೆಂದು ಹೇಳಿರುತ್ತಾರೆ. ಮುಂದುವರೆಯುತ್ತಾ ಅವರು ತಮ್ಮ ದೇಹವನ್ನೇ ಶಿವನ ಅಲಯವನ್ನಾಗಿ ಮಾಡುವ ವಿವರಣೆ ಕೊಡುತ್ತಾರೆ. ಎನ್ನ ಕಾಲೇ ಕಂಭವು, ದೇಹವೇ ದೇಗುಲ" ಎನ್ನುತ್ತಾ ತಮ್ಮೆರಡು ಕಾಲುಗಳನ್ನು ಕಂಭಗಳಾಗಿ ದೇಹವೆಂಬ ದೇಗುಲಕ್ಕೆ ಆಧಾರ ಮಾಡಿ ನಿಲ್ಲಿಸುತ್ತಾರೆ. ತಮ್ಮ ಶಿರವನ್ನೇ ಶಿವನ ಆಲಯದ ಹೊನ್ನ ಕಳಶವನ್ನಾಗಿಸುತ್ತಾರೆ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎನ್ನುವ ಮೂಲಕ ಈ ದೇಹ ನಶ್ವರ ಅದರೊಳಗಿನ ಆತ್ಮ ಮಾತ್ರ ನಿರಂತರ ಎಂಬ ಶ್ರೇಷ್ಠ ಮಾತು ಹೇಳುತ್ತಾರೆ. “ಲಯ” ವೆಂದರೆ ಸೇರಿ ಹೋಗುವುದು, ಲೀನವಾಗುವುದು ಎಂಬ ಅರ್ಥದಲ್ಲಿ... ಬಸವಣ್ಣನವರು ದೇಹವನ್ನು ದೇವನ ಅವಾಸ ಸ್ಥಾನವಾಗಿಸಿ ಸಾಧನೆಗೆ ಉಪಯೋಗಿಸಿಕೊಂಡು ನಮ್ಮ ಒಳಗಿರುವ ಅಂತರಾತ್ಮವನ್ನು ಮುಕ್ತಿ ಪಥದತ್ತ ನಡೆಯಿಸ ಬೇಕೆನ್ನುತ್ತಾರೆ.

ಅಕ್ಕಮಹಾದೇವಿಯವರ ವಚನಗಳಲ್ಲೂ ನಾವು ಈ ತತ್ವವನ್ನು ತುಂಬಾ ಗಾಢವಾಗಿ ಕಾಣಬಹುದು. ಅಕ್ಕ ತನ್ನ ಬದಕನ್ನು ಮಲ್ಲಿಕಾರ್ಜುನನ ಆರಾಧನೆಗೆ ಮೀಸಲಿಟ್ಟಳು. ಸಮಾಜದ ಎಲ್ಲ ಹಂಗುಗಳನ್ನೂ ತೊರೆದು ಸಾಧನೆಗೆ ನಡೆದವಳು ಮತ್ತು ಮಲ್ಲಿಕಾರ್ಜುನನನ್ನು ಒಲಿಸಿಕೊಂಡವಳು.

“ಅಂಗವ ಲಿಂಗಮುಖಕ್ಕೆ ಅರ್ಪಿಸಿ ಅಂಗ ಅನಂಗವಾಯಿತ್ತು

ಮನನ ಅರಿವಿಂಗರ್ಪಿಸಿ ಮನ ಲಯವಾಯಿತ್ತು

ಭಾವವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತು"

ಅಂಗ ಈಶ್ವರನ ಆಲಯವಾಗಿ ಹೋಗಿತ್ತು. ಮನದ ಕ್ಲೇಶಗಳನ್ನೆಲ್ಲಾ, ಆಸೆಗಳನ್ನೆಲ್ಲಾ ತೃಪ್ತಿಗೆ ಅರ್ಪಿಸಿದಾಗ ಮನವೇ ಉಳಿಯದೆ ಶೂನ್ಯವಾಗಿ ಹೋಯಿತು. ಭಾವವನ್ನು ತೃಪ್ತಿಯಾವರಿಸಿದಾಗ ಅದು ಕರಗಿ ಬಯಲಾಗಿ ಹೋಯಿತು. ಅಂಗ, ಮನ, ಭಾವ ಎಲ್ಲವೂ ಅಳಿದು ಬಿಟ್ಟಾಗ ದೇಹವೇ ಮಾಯವಾಯಿತು. ಮಲ್ಲಿಕಾರ್ಜುನನಲ್ಲಿ ಲೀನವಾದ ಆನಂದದ ಅನುಭವ ಅತ್ಮಕ್ಕಾಯಿತು. ಕಾಯ ಅಕಾಯವಾಯಿತ್ತು ಎನ್ನುತ್ತಾಳೆ.

ಕಾಯ ಪ್ರಸಾದವೆನ್ನ ಜೀವ ಪ್ರಸಾದವೆನ್ನ

ಪ್ರಾಣ ಪ್ರಸಾದವೆನ್ನ ಭಾವ ಪ್ರಸಾದವೆನ್ನ

ಸುಯಿದಾನ ಪ್ರಸಾದವೆನ್ನ ಸಮಯ ಪ್ರಸಾದವೆನ್ನ

ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಪ್ರಸಾದವ ಹಾಸಿ ಹೊದೆದು ಕೊಂಡಿಪ್ಪೆನು ||

ಎನ್ನುತ್ತಾ ಅಕ್ಕ ಹೇಗೆ ತನ್ನದೆಂದು ಈ ಭೌತಿಕ ಪ್ರಪಂಚದಲ್ಲಿ ಗುರುತಿಸಲ್ಪಡುವುದನ್ನೆಲ್ಲಾ ಮಲ್ಲಿಕಾರ್ಜುನನ ಪ್ರಸಾದವೆಂದು ಆ ಭಗವಂತನಿಗೇ ಸಮರ್ಪಿಸುತ್ತಾ... ನನ್ನ ದೇಹ, ಪ್ರಾಣ, ಭಾವ, ಜೀವ, ಸುಯಿದಾನ (ರಕ್ಷಣೆ), ಸಮಯ ಎಲ್ಲವೂ ನಿನ್ನದೆ ಪ್ರಸಾದ. ಅದನ್ನೇ ಹಾಸಿ, ಹೊದ್ದು, ಬದುಕಾಗಿಸಿ ಕೊಂಡಿದ್ದೇನೆ. ಅದನ್ನೇ.. ನಿನ್ನದನ್ನೇ ನಿನಗೇ ಅರ್ಪಿಸುತ್ತೇನೆ ಎನ್ನುತ್ತಾ....

ತನುವನುವಾಯಿತ್ತು... ಮನವನುವಾಯಿತ್ತು.... ಪ್ರಾಣವನುವಾಯಿತ್ತು”..... ಎನ್ನುತ್ತಾಳೆ. ತನ್ನ ತನುವನ್ನೂ, ಮನವನ್ನೂ, ಪ್ರಾಣವನ್ನೂ ಶುಚಿಗೊಳಿಸಿ ನಿರ್ಮಲ ಚಿತ್ತವನ್ನು ಚೆನ್ನ ಮಲ್ಲಿಕಾರ್ಜುನನೊಡನೆ ಲಯಗೊಳಿಸಿ.. ಬಾರಾ ಎಂದು ಆರ್ತಳಾಗಿ ಕರೆಯುವ ಪರಿ ಅತಿ ಭಾವುಕವಾಗಿದೆ.

ಸರ್ವಜ್ಞನ ವಚನಗಳಲ್ಲೂ ದೇಹದ ಮೋಹ ಬಿಟ್ಟು, ಭಕ್ತಿ – ವಿರಕ್ತಿ ಬೆಳೆಸಿಕೊಂಡು, ನಮಗೆ ವರವಾಗಿ ಸಿಕ್ಕಿರುವ ಈ ದೇಹವನ್ನು ಪರಮಾತ್ಮನ ಅರಿವು ಮೂಡಿಸಿಕೊಳ್ಳಲು ಸಾಧನವಾಗಿ ಮಾಡಿಕೊಳ್ಳುವ ಮಾತುಗಳು ತುಂಬಾ ಪರಿಣಾಮಕಾರಿಯಾಗಿಯೇ ಇವೆ. ನಮಗೆ ಈ ದೇಹವೆಂಬ ಚಿನ್ಹೆ ಸಿಕ್ಕಿರುವುದೇ ಪರಮಾತ್ಮನನ್ನು ಅರಿಯಲು ಎನ್ನುತ್ತಾ..

ಕುರುಹು ದೊರೆಯಿತು ದೇಹ ಅರಿವನರಿಯಿತು ಪ್ರಾಣ

ಹರುವಾಗಿ ಹೋಯ್ತು ಭವಪಾಶ ಮುಕ್ತಿಯ

ಎರವು ನಿರವಯವು ಸರ್ವಜ್ಞ " ||

ಯಾವಾಗ ಪ್ರಾಣವು ಜ್ಞಾನವನ್ನು ತಿಳಿಯಿತೋ ಆಗ ಈ ಭವವೆಂಬ ಸಂಸಾರದ ಮಾಯೆ ತೊಲಗಿ ಹೋಯಿತು ಎನ್ನುತ್ತಾರೆ.

ಭಕ್ತಿಯಿಂದಲೇ ಮುಕ್ತಿ ಭಕ್ತಿಯಿಂದಲೇ ಶಕ್ತಿ ಭಕ್ತಿಯೆಂಬುದೆ ಬೀಜ ಮುಕ್ತಿ ಎಂಬುದೇ ಫಲವು
ಭಕ್ತಿ ವಿರಕ್ತಿ ಯುಳಿದರೀ ಜಗದಲ್ಲಿ ಯುಕ್ತಿಯಿಂ ವೃಕ್ಷ ವೇರಿದಗೆ ಇಹದಲ್ಲಿ
ಮುಕ್ತಿಯಿಲ್ಲೆಂದ ಸರ್ವಜ್ಞ ಮುಕ್ತಿ ಇಹುದೆಂದ ಸರ್ವಜ್ಞ

ಭಕ್ತಿ, ಸಮರ್ಪಣೆ ಎಂಬುದು ಕಾಯಾ ವಾಚ ಮನಸಾ ಆಗದಿದ್ದರೆ ಆತ್ಮ ಸಾಕ್ಷಾತ್ಕಾರ ಆಗುವುದಿಲ್ಲವೆಂದು ಹೇಳುತ್ತಾ

ದೇಹ ದೇವಾಲಯವು ಜೀವವೇ ಶಿವಲಿಂಗ
ಬಾಹ್ಯಂಗಗಳಿದು ಭಜಿಪಂಗೆ ಮುಕ್ತಿ ಸಂದೇಹವಿಲ್ಲೆಂದ ಸರ್ವಜ್ಞ
ವೆನ್ನುತ್ತಾರೆ. ನಮ್ಮ ದೇಹವೇ ದೇವಾಲಯ / ಶಿವಾಲಯ ಆದರೆ.. ಒಳಗಿರುವ ಜೀವವೇ ಶಿವಲಿಂಗ. ನಮ್ಮ ಇಂದ್ರಿಯಗಳ ಅಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕಿ, ಸದಾ ಕಾಲ ಭಗವಂತನನ್ನು ಭಜಿಸುತ್ತಾ ಇರುವವನಿಗೆ ಮುಕ್ತಿಯು ನಿಶ್ಚಿತವಾಗಿದೆ ಎನ್ನುತ್ತಾನೆ ಸರ್ವಜ್ಞ.

9 comments:

 1. ಮೇಡಮ್,
  ಇವತ್ತಿನ ಕೆಲಸ ಆರಂಭಿಸುವ ಮೊದಲು ನಿಮ್ಮ ಈ ಲೇಖನವನ್ನು ಓದಿದೆ. ಆಧ್ಯಾತ್ಮದ ಚಿಂತನೆಯೂ ಮನಸ್ಸಿಗೆ ಉಲ್ಲಾಸವೆನಿಸಿದೆ. ಮನಸ್ಸಿಗೆ ನೆಮ್ಮದಿಯನ್ನು ಇಂಥ ಲೇಖನದಿಂದಾಗಿ ನನ್ನ ಇವತ್ತಿನ ಕೆಲಸ ಚೆನ್ನಾಗಿ ಆಗುತ್ತದೆಯಲ್ಲವೇ..

  ReplyDelete
 2. ಉತ್ತಮ ಮತ್ತು ಅರ್ಥಪೂರ್ಣ ಲೇಖನ. ಧನ್ಯವಾದಗಳು.

  ReplyDelete
 3. ಶ್ಯಾಮಲಾ,
  ತತ್ವದರ್ಶನವನ್ನು ಹಾಗು ಅಕ್ಕನ ವಚನಗಳ ಸ್ವಾರಸ್ಯವನ್ನು ತಿಳಿಯಾಗಿ ವಿವರಿಸಿದ್ದೀರಿ.
  ಅಭಿನಂದನೆಗಳು.

  ReplyDelete
 4. ಶ್ಯಾಮಲಾ jee,
  ಉತ್ತಮ ಲೇಖನ.
  ಧನ್ಯವಾದಗಳು.

  ReplyDelete
 5. ಶಿವೂ ಸಾರ್, ಪ್ರಕಾಶ್ ಸಾರ್, ಚಂದ್ರೂ.. ಧನ್ಯವಾದಗಳು.

  ಕಾಕಾ..
  ಶಿವಶರಣರ ವಚನಗಳೆಲ್ಲಾ ನಮಗೆ ತತ್ವ ದರ್ಶನವನ್ನೇ ಮಾಡಿಸುತ್ತವೆ ಆಲ್ವಾ? ನನಗೆ ಈಗೀಗ ಸಾಹಿತ್ಯವನ್ನು ಸುಮ್ಮನೆ ಓದುವ ಅಭ್ಯಾಸ ಆಗುತ್ತಿದೆ.. ಎಷ್ಟೊಂದು ಸಮೃದ್ಧವಾಗಿದೆ ನಮ್ಮ ಕನ್ನಡ ಸಾಹಿತ್ಯ.. ಧನ್ಯವಾದಗಳು ಕಾಕಾ.

  ReplyDelete
 6. ಬಹಳ ಉತ್ತಮ ವಿಚಾರವನ್ನು ಸರಳವಾಗಿ, ಮನಮುಟ್ಟುವ೦ತೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಶ್ಯಾಮಲಾ ಅವರೇ.ಕೈವಾರ ತಾತಯ್ಯನವರ ಉಕ್ತಿಗಳು, ಬಸವಣ್ಣನವರು ಹಾಗೂ ಅಕ್ಕಮಹಾದೇವಿಯವರ ವಚನಗಳು ಬಹಳ ಇಷ್ಟವಾಯಿತು.

  ReplyDelete
 7. ಉತ್ತಮ ಲೇಖನ,ಧನ್ಯವಾದಗಳು.
  Pl visit my Blog vedasudhe.blogspot.com

  ReplyDelete
 8. ‘’ನಾನು ಯಾರು' ಎಂಬ ವಿಚಾರ ಮಾರ್ಗವನ್ನು ಸೂಚಿಸುವರು’’
  ಅಧ್ಯಾತ್ಮ ಬಂಧುಗಳೇ, ಈ ಅಪೂರ್ವವಾದ ಪ್ರಶ್ನೆಗೆ “ನಾನು ಯಾರು ಇಲ್ಲಿರುವ ಪ್ರಶ್ನೆ. “ಈ ಪ್ರಶ್ನೆಗೆ ಉತ್ತರ ತಿಳಿದಿಲ್ಲ ಈ ವಿವರಣೆ ಆತ್ಮಶೋಧನೆಗೊಂದು ಮಾರ್ಗವಾಗಿ

  ReplyDelete
 9. 1.“ನಾನು ಯಾರು” ಎಂಬ ಪ್ರಶ್ನೆ ಹುಟ್ಟುವುದು ಮತ್ತು ನಾವು ಅದಕ್ಕೆ ಉತ್ತರ ಹುಡುಕುವುದು ಕೂಡ. ಭಗವದ್ಗೀತೆಯಲ್ಲಿ ಕೂಡ “ನಿಜ ಅರ್ಥದಲ್ಲಿ ನಮ್ಮನ್ನು ನಾವು ಅರಿತುಕೊಳ್ಳಲಾಗುವುದು ಆತ್ಮ ಮೌನದಲ್ಲಿದ್ದಾಗ ಮಾತ್ರ ಸಾಧ್ಯ” ಎಂದಿದ್ದಾರೆ. “ಮೌನ”ವೆಂದರೆ “ಮನನ” ಮತ್ತು ಮನನವೇ ಭಗವಂತನ ಚಿಂತನೆ.
  2.“ನಾನು ಯಾರು” ಎಂಬ ಪ್ರಶ್ನೆ ಹುಟ್ಟುವುದು ಮತ್ತು ನಾವು ಅದಕ್ಕೆ ಉತ್ತರ ಹುಡುಕುವುದು.ತನಗೆ ತಾನೇ ಪ್ರಶ್ನಿಸಿಕೊಳ್ಳುತ್ತಾ ಅನುಭಾವವಾಗುವುದು.
  3.ಮೌನ ನಮ್ಮನ್ನು ನಾವೇ ತಿಳಿದುಕೊಳ್ಳಲು, ಪರಿಶುದ್ಧಗೊಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಮೌನವು ವಿಷಯಾಸಕ್ತಿಗಳಿಂದ ಖಾಲಿಯಾದ ಜಾಗದಲ್ಲಿ ಪ್ರಕೃತಿಯಲ್ಲಿರುವ ಧನಾತ್ಮಕ ಕಿರಣಗಳು, ಚೈತನ್ಯದಾಯಕ ತರಂಗಗಳು, ವಿಶ್ವ ಚಿಕಿತ್ಸಕ ಶಕ್ತಿಯ ಧಾರೆಯು ನಮ್ಮೊಳಗೆ ಸೇರಲು ಅನುವು ಮಾಡಿಕೊಡುತ್ತದೆ. ತುಂಬಾ ಮುಖ್ಯವಾಗಿ ಮೌನ ನಮ್ಮನ್ನು ಭಗವಂತನೆಡೆಗೆ ತಿರುಗುವಂತೆ ಮಾಡುತ್ತದೆ. ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ಜ್ಞಾನಿ


  ಆತ್ಮ ವಿಚಾರವನ್ನು, ಅಂದರೆ, 'ನಾನು ಯಾರು' ಎಂಬ ಆತ್ಮಾನ್ವೇಷಣಾ ವಿಧಾನವನ್ನು ಆತ್ಮ ಜ್ಙಾನ ಪ್ರಾಪ್ತಿಗೆ ಮುಖ್ಯ ಸಾಧನವೆಂದು ಬೋಧಿಸುವರು - ಈ ವಿಧಾನವನ್ನು ಎಂಬ ಪ್ರಬಂಧದಲ್ಲಿ ವಿಸ್ತರಿಸಿರುವರು. ಈ ಆತ್ಮವಿಚಾರ ವಿಧಾನವನ್ನು ಬುಧ್ಯಾತ್ಮಕ ವ್ಯಾಯಾಮವೆಂದು ಅಪಾರ್ಥ ಮಾಡಬಾರದೆಂದೂ ಎಚ್ಚರಿಸುವರು - ಅಂದರೆ, ಉಚಿತ ರೀತಿಯಲ್ಲಿ ಮಾಡಿದ್ದಲ್ಲಿ, ಈ ಆತ್ಮವಿಚಾರವು 'ನಾನು' ಎಂಬ ಸಂವೇದನೆಯ ಮೇಲೆ ಆಲೋಚನೆಗಳಿಲ್ಲದೆ ಸುಭದ್ರವಾಗಿ ಮತ್ತು ಪ್ರಖರವಾಗಿ ಕೇಂದ್ರೀಕರಿಸುವುದೇ ಆಗಿರುವುದು ಎಂದು ವಿಶದಪಡಿಸಿರುವರು. ಶ್ರೀ ರಮಣರ ಸ್ವಂತ ಆತ್ಮವಿಚಾರವನ್ನು ಅವರು ಈ ರೀತಿ ಈ ರೀತಿ ಬಣ್ಣಿಸುವರು: ನಾನು ಸತ್ಯವಾದುದಾವುದೋ ಆಗಿದ್ದೆ. ನನ್ನ ಪ್ರಸ್ತುತ ಸ್ಥಿತಿಯಲ್ಲಿನ ಒಂದೇ ಸತ್ಯತೆಯಾಗಿದ್ದೆ ಮತ್ತು ದೇಹದೊಡನೆ ಪ್ರಜ್ಙಾಪೂರ್ವಕವಾಗಿ ಜೋಡಣೆಗೊಂಡಿದ್ದೆಲ್ಲವೂ ಆ 'ನಾನು' ಎಂಬುದರ ಮೇಲೆಯೇ ಕೇಂದ್ರೀಕೃತವಾಗಿತ್ತು. ಆ ಕ್ಷಣದ ನಂತರ, 'ನಾನು' ಅಥವಾ ಆತ್ಮವು, ಈ ಪ್ರಬಲ ವಿಸ್ಮಿತತೆಯಿಂದ ತನ್ನ ಮೇಲೆಯೇ ಗಮನವನ್ನು ಕೇಂದ್ರೀಕರಿಸಿತು. ಸಾವಿನ ಭಯವು ಎಂದೆಂದಿಗೂ ಮಾಯವಾಗಿ ಹೋಯಿತು. ಅಹಂ ಎಂಬುದು ಆತ್ಮ ಪ್ರಜ್ಙೆಯ ಮಹಾಪೂರದಲ್ಲಿ ಕಳೆದು ಹೋಯಿತು. ಆ ಸಮಯದಿಂದ ಆತ್ಮಲೀನತೆಯು ಲುಪ್ತಿಯಿಲ್ಲದೆ ಮುಂದುವರೆಯಿತು. ಬೇರೆ ಆಲೋಚನೆಗಳು ಸಂಗೀತದ ನಾದಗಳಂತೆ ಬಂದು ಹೋಗಬಹುದು. ಆದರೆ 'ನಾನು' ಎಂಬುದು ಮೂಲಭೂತ ಶೃತಿಯಂತೆ ಮುಂದುವರೆಯಿತು. ಅದು ಉಳಿದೆಲ್ಲ ನಾದಗಳ ಪಾಯದಲ್ಲಿದ್ದು ಉಳಿದೆಲ್ಲ ನಾದಗಳನ್ನು ಮಿಶ್ರಿಸುವ ಶೃತಿ".

  ReplyDelete