Friday, September 2, 2011

ದಾಸವರೇಣ್ಯರಲ್ಲಿ ಗುರು ಪರಂಪರೆ :

ದೇವರ ನಾಮಗಳು - ದಾಸವರೇಣ್ಯರು ಎಂದೊಡನೆ ನಮ್ಮ ಮನಸ್ಸಿಗೆ ಬರುವವರು ಪುರಂದರದಾಸರು. ಅವರ ರಚನೆಗಳು ನಮ್ಮ ದೈನಂದಿನ ಬದುಕಿನಲ್ಲಿ ಹಾಸು ಹೊಕ್ಕಾಗಿ ಬಿಟ್ಟಿದೆ.

ಶ್ರೀ ಮನ್ಮಧ್ವಾಚಾರ್ಯರಿಂದ ಮೂರನೆಯವರು ಎಂದೆನಿಸಿಕೊಳ್ಳುವವರು ನರಹರಿ ತೀರ್ಥರು. ಮೂಲತ: ಇವರು ಗೀರ್ವಾಣ ಭಾಷಾ ಪಂಡಿತರಾಗಿದ್ದರೂ ಕೂಡ, ಕನ್ನಡ ಭಾಷೆ ಕಲಿತು ದೇವರ ನಾಮಗಳನ್ನು ರಚಿಸಿದರೆಂದು ತಿಳಿದು ಬರುತ್ತದೆ. ಇವರ ರಚನೆಗಳು ಹೆಚ್ಚು ಗೋಚರವಾಗಿಲ್ಲವೆಂದು ತಿಳಿದು ಬಂದಿದೆ. ಇವರ ನಂತರ ಬಂದವರು ಮತ್ತು ಹರಿದಾಸ ಕೃತಿಗಳನ್ನು ರೂಢಿಸಿ ಪ್ರಚಲಿತ ಪಡಿಸಿದವರು ಶ್ರೀಪಾದರಾಜರು. ಇವರಿಂದಲೇ ಭಾಗವತ ಧರ್ಮ ಪ್ರಚಾರ ಪಡೆಯಿತೆಂದು, ಹರಿದಾಸ ಪೀಳಿಗೆಯವರೆಲ್ಲರೂ ಇಂದಿಗೂ ಎಲ್ಲಕ್ಕಿಂತ ಮೊದಲು ಶ್ರೀಪಾದರಾಜರಿಗೆ "ನಮ: ಶ್ರೀಪಾದರಾಜಾಯ" ಎಂದು ನಮಿಸುವ ಸಂಪ್ರದಾಯವಿದೆ. ಕೀರ್ತನಕಾರರು ಕೀರ್ತನೆ ಮಾಡುವ ಮುನ್ನ..

ನಮ: ಶ್ರೀಪಾದರಾಜಾಯ | ನಮಸ್ತೇ ವ್ಯಾಸಯೋಗಿನೇ |

ನಮ: ಪುರಂದರಾರ್ಯಾಯ | ವಿಜಯರಾಜಾಯತೇ ನಮ: ||

ಎಂದು ಶ್ರೇಷ್ಠ ದಾಸವರೇಣ್ಯರೂ, ಅಗ್ರಗಣ್ಯರೂ ಆದ ನಾಲ್ವರು ದಾಸರನ್ನು ಬಹು ಶ್ರದ್ಧೆ, ಭಕ್ತಿಯಿಂದ ಸ್ಮರಿಸಿ ನಮಿಸುತ್ತಾರೆ. ಶ್ರೀಪಾದರಾಜರ ನಂತರ ಅನೇಕ ದಾಸರುಗಳಾದ ಮೇಲೆ ಬಂದ "ವಿಜಯದಾಸ"ರೆಂದು ಪ್ರಖ್ಯಾತರಾದ ಶ್ರೀ ದಾಸಪ್ಪದಾಸರು ಒಂದು ಸುಳಾದಿ "ಶ್ರೀಪಾದರಾಯ ಗುರುವೆ... ದೃಢ ಭಕುತಿಯಿಂದ ಶ್ರೀಪಾದಪದುಮವ ನೆರೆನಂಬಿದವನ ಭಾಗ್ಯ..." ಎಂದು ರಚಿಸಿದ್ದಾರೆ. ಈ ಸುಳಾದಿಯಲ್ಲಿ ವಿಜಯದಾಸರು ಗುರು ಶ್ರೀಪಾದರಾಜರು ಒಲಿದರೆ ಸಾಕು, ವ್ಯಾಸಮುನಿರಾಯ, ಪುರಂದರದಾಸರು ಎಲ್ಲರ ಕರುಣೆಯೂ ಸಿದ್ಧಿಸಿಯೇ ಬಿಡುವುದೆನ್ನುತ್ತಾರೆ.

ಶ್ರೀಪಾದರಾಜರ ನಂತರ ಬಂದವರೇ ಶ್ರೀವ್ಯಾಸತೀರ್ಥರು. ಇವರು ವಿಜಯನಗರದ ಸಿಂಹಾಸನವನ್ನು ಕೆಲಕಾಲ ಏರಿದ್ದರಿಂದ ಇವರಿಗೆ ವ್ಯಾಸರಾಯರೆಂದೂ ಕರೆಯುತ್ತಾರೆ. ಶ್ರೀ ವ್ಯಾಸರಾಯರು ಶ್ರೀಪಾದರಾಜರ ಶಿಷ್ಯರು. ತಮ್ಮ ಕಡೆಯ ದಿನಗಳಲ್ಲಿ ಶ್ರೀ ವ್ಯಾಸರಾಯರು ತಮ್ಮ ಶಿಷ್ಯರಾದ ಶ್ರೀ ಪುರಂದರದಾಸರು ಹಾಗೂ ಕನಕದಾಸರ ಮುಂದೆ "ಹರಿದಾಸರ ಸಂಗಕೆ ಸರಿಯುಂಟೆ.... ಗುರುಕರುಣೆ ಇನ್ನು ಪಡಿಯುಂಟೆ".. ಎಂದು ಹಾಡಿದ್ದರಂತೆ. ಶ್ರೀ ವಾದಿರಾಜರು, ಪುರಂದರ, ಕನಕ ದಾಸರುಗಳು ಶ್ರೀ ವ್ಯಾಸರಾಯರ ಶಿಷ್ಯರುಗಳು.

ಶ್ರೀ ವಿಜಯದಾಸರು ಗುರು ಪರಂಪರೆಯನ್ನು ಸ್ತೋತ್ರ ಮಾಡುತ್ತಾ ತಮ್ಮ ಒಂದು ರಚನೆ.. "ವ್ಯಾಸರಾಯರ ಭಜಿಸಿರೋ | ವ್ಯಾಸರಾಯರ ಭಜಿಸಿ | ಏಸು ಜನುಮದ ಪಾಪ | ನಾಶವಾಗುವುದು ನಿಮ್ಮಾಸೆ ಸಿದ್ಧಿಸುವುದು...." ಎಂಬ ಕೃತಿಯಲ್ಲಿ "ಅಲ್ಲಿ ಘೃಣಿನೇತ್ರ ಶಿರಿ".. ಎಂದು ಶ್ರೀಪಾದರಾಜರನ್ನೂ... "ಬನ್ನೂರು ಗ್ರಾಮದಲಿ..." ಎಂದು ವ್ಯಾಸರಾಯರನ್ನೂ ಸ್ಮರಿಸುತ್ತಾ ಅವರ ಜೀವನ ಚರಿತ್ರೆಯನ್ನೇ ವರ್ಣಿಸುತ್ತಾರೆ. ಹಾಗೇ "ಯಂತ್ರೋದ್ಧಾರಕನ.." ಎಂಬ ಮುಂದಿನ ಚರಣದಲ್ಲಿ ಕನಕ, ವಾದಿರಾಜ, ಪುರಂದರ ದಾಸರನ್ನು ಸ್ಮರಿಸುತ್ತಾರೆ.

ತಮ್ಮ ಗುರುಗಳಾದ ವ್ಯಾಸರಾಯರು ಬೃಂದಾವನಸ್ಥರಾದಾಗ ಪುರಂದರ ದಾಸರು

ಚಿತೈಸಿದ ವ್ಯಾಸರಾಯ | ಜಿತ್ತಜನೈಯನ ಸಭೆಗೆ |

ಮುಕ್ತ ಮುತ್ತೈದೆಯರೆಲ್ಲಾ | ರತ್ನದಾರುತಿಯೆತ್ತೆ ||... ಎನ್ನುತ್ತಾ

ಭಕುತಿಯುಕುತರಾಗಿ ಮುಕುತಿ ಮಾರ್ಗ ಪಿಡಿದು | ಅಖಿಳ ಬಗೆಯಿಂದ ಧ್ಯಾನಿಸುತ

ಸಕಲಾಗಮಗೇಯ ಸದ್ಗುಣ ಪರಿಪೂರ್ಣ | ಅಕಳಂಕ ಪುರಂದರ ವಿಠಲ ಬಳಿಗೆ ||

ಎಂದು ಹಾಡುತ್ತಾ ತಮ್ಮ ಗೌರವ ತೋರಿಸುತ್ತಾ ಸ್ಮರಿಸುತ್ತಾರೆ.

ಶ್ರೀ ವಾದಿರಾಜರು ಶ್ರೀ ವ್ಯಾಸತೀರ್ಥರ ಶಿಷ್ಯರು. ವಾದಿರಾಜರು ಲೋಕಗುರು ಶ್ರೀ ವೇದವ್ಯಾಸರನ್ನು ಪ್ರತ್ಯಕ್ಷ ಕಂಡಾಗ ಪರವಶರಾಗಿ ರಚಿಸಿದ ಪದ

ಮಧ್ವಾಂತರ್ಗತ ವೇದವ್ಯಾಸ | ಕಾಯೋ ಶುದ್ಧ ಮೂರುತಿಯೇ ಸರ್ವೇಶಾ ||

ಶ್ರದ್ಧೆಯಿಂದಲಿ ನಿಮ್ಮ ಭಜಿಸುವ ಸುಜನರ್ಗೆ | ಬುದ್ಧ್ಯಾದಿಗಳನಿತ್ತುದ್ಧರಿಸೋ ದೇವರದೇವ ||

ಎಂದು ಸ್ಮರಿಸಿದ್ದಾರೆ ಮತ್ತು ನಮಿಸಿದ್ದಾರೆ.

ಜಗನ್ನಾಥದಾಸರು ವಾದಿರಾಜರನ್ನು ಕುರಿತು "ವಾದಿರಾಜ ಸಲಹೋ ವಾದಿರಾಜ | ವಾದಿರಾಜ ಗುರು ನೀ ದಯವಾಗದೆ | ಈ ದುರಿತವ ಕಳೆದಾದಪರ್ಯಾರೋ" ಎಂದು ಮಾಡಿರುವ ಈ ಪದದಲ್ಲಿ ತಮ್ಮ ಗುರುವಿನಲ್ಲಿ ಶರಣಾಗತಿಯನ್ನು ತೋರಿಸುತ್ತಾರೆ. ತಮ್ಮ ಇನ್ನೊಂದು ಪದ "ತನುವ ನೀರೊಳಗದ್ದಿ ಫಲವೇನೂ.." ಎಂಬುದರಲ್ಲಿ ನೇರವಾಗಿ "ಗುರುಗಳ ಪಾದ ದರ್ಶನವೇ ಸ್ನಾನ" ಎಂದು ಸಾರುತ್ತಾರೆ.

"ವ್ಯಾಸವಿಠಲ"ನೆಂಬ ಅಂಕಿತದಿಂದ ಪ್ರಖ್ಯಾತರಾದ ಸುಬ್ಬಣ್ಣಾಚಾರ್ಯರು ತಮ್ಮ ಗುರುಗಳಾದ ಶ್ರೀವಿಜಯದಾಸರನ್ನು ಕುರಿತು ಮಾಡಿದ

ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ | ದುರಿತ ತರಿದು ಪೊರೆವ ವಿಜಯ ಗುರುಗಳೆಂಬರ | ಸ್ತೋತ್ರ 27 ಚರಣಗಳನ್ನೊಳಗೊಂಡು ಸಂಪೂರ್ಣವಾಗಿ ಗುರು ಮಹಿಮೆಯನ್ನು ಪ್ರದರ್ಶಿಸುತ್ತದೆ. ಎಲ್ಲಾ ದುರಿತಗಳನ್ನೂ ಹರಿಸಿ, ಗುರು, ಮೋಕ್ಷದ ದಾರಿಯನ್ನು ಕರುಣಿಸುವನೆಂಬುದನ್ನು ವಿವರಿಸುತ್ತದೆ.

ಒಮ್ಮೆ ವಿಜಯದಾಸರು ತಮ್ಮ ಶಿಷ್ಯರಿಗೆ ಉಪದೇಶ ಮಾಡುತ್ತಾ ಕುಳಿತಿದ್ದಾಗ, ದೂರದಿಂದ ಕಂಡ ಜಗನ್ನಾಥದಾಸರು ಸಾಷ್ಟಾಂಗ ನಮಸ್ಕರಿಸಿ, ಹರಿದಾಸ ಗೋಷ್ಠಿಯನ್ನು ಕುರಿತು "ರತ್ನ ದೊರಕಿತಲ್ಲಾ | ಎನಗೆ ದಿವ್ಯ ರತ್ನ ದೊರಕಿತಲ್ಲಾ | ರತ್ನ ದೊರಕಿತು ಎನ್ನ ಜನ್ಮ ಪವಿತ್ರವಾಯಿತು" ... ಎಂಬ ಪದ ರಚಿಸಿ ಹಾಡಿದಾಗ, ವಿಜಯದಾಸರು ಜಗನ್ನಾಥದಾಸರನ್ನು ಹತ್ತಿರ ಕರೆದು, ಅವರಿಗೆ ಮುಂದೆ ಸಿಗುವ ಕೀರ್ತಿ, ಮನ್ನಣೆಯ ಬಗ್ಗೆ ತಿಳಿಸುತ್ತಾ ಅನುಗ್ರಹಿಸುತ್ತಾರೆ. ಅದಕ್ಕೆ ಉತ್ತರವಾಗಿ ಭಯ ಭಕ್ತಿಯಿಂದ ಜಗನ್ನಾಥ ದಾಸರು "ವಿಜಯದಾಸರ ಚರಣಾನುಗ್ರಹವಾದ ಮೇಲೆ ತಮ್ಮ ಜನ್ಮ ಸಾರ್ಥಕವೂ, ತಮ್ಮ ಯಾತ್ರೆ ದಿಗ್ವಿಜಯವೂ ಆಯಿತು" ಎನ್ನುತ್ತಾ ಮೋಹನದಾಸರು ವಿಜಯದಾಸರ ಬಗ್ಗೆ ಆಡಿದ ಮಾತು -

ವಿ ಎನಲು ವಿಮಲತೆಯು

ಜ ಎಂದವಗೆ ಜಯವು

ಯ ಎನಲು ಯಾಗಫಲವು

ಎಂಬುದರ ಪ್ರಥಮ ಫಲಭೋಗಿಯೇ ತಾವಾದೆವೆಂದು ಹರ್ಷಿಸುತ್ತಾರೆ. ಹೀಗಿತ್ತು ಗುರು ಕರುಣೆಯ ಮಹತ್ವ.

ಗುರು ಪರಂಪರೆಯನ್ನು ಶ್ರೀ ಮಧ್ವಾಚಾರ್ಯರಿಂದ ಆರಂಭಿಸಿ ನಮಿಸುವ ಒಂದು ಪದ ...

ಗುರು ಮಧ್ವರಾಯರಿಗೆ ನಮೋ ನಮೋ | ನಮ್ಮ ಗುರು ಮಧ್ವ ಸಂತತಿಗೆ ನಮೋ ನಮೋ ||

ಇದು ವಿಜಾಪುರದ ಶ್ರೀ ಹುಂಡೇಕಾರ ದಾಸರ ರಚನೆ. ಇವರ ಅಂಕಿತ "ಶ್ರೀಶವಿಠ್ಠಲ" ಮತ್ತು ಇವರು 1721 ರಿಂದ 1765 ರವರೆಗೆ ಇದ್ದವರೆಂದು ತಿಳಿದುಬರುತ್ತದೆ.

"ಗುರು" ಎಂಬುದು ಒಬ್ಬ ವ್ಯಕ್ತಿಗೆ ಸಂಬಂಧ ಪಟ್ಟಿದ್ದಲ್ಲ, ಅದೊಂದು ಅತ್ಯಂತ ಪರಿಣಾಮಕಾರಿಯಾದ, ಪ್ರಚಂಡ ಶಕ್ತಿ ಎಂಬುದು ದಾಸವರೇಣ್ಯರು ಮಾಡಿರುವ ಗುರುವಿನ ಕುರಿತಾದ ಪ್ರತೀ ಪದಗಳಲ್ಲೂ ಪ್ರತಿಪಾದಿತವಾಗಿದೆ. ಮತ್ತೆ ಮತ್ತೆ ಒತ್ತಿ ಹೇಳುತ್ತಾ ನಾವು ಗುರು ಎಂಬ ಶಕ್ತಿಯನ್ನು ಆರಾಧಿಸುವಂತೆ ಮಾಡುತ್ತಾರೆ ನಮ್ಮ ದಾಸರುಗಳು.

ಕೊನೆಯದಾಗಿ ನನಗೆ ತುಂಬಾ ಇಷ್ಟವಾದ ಒಂದು ಪದ

ಸ್ಮರಿಸು ಗುರುಗಳ ಮನವೆ | ಸ್ಮರಿಸು ಗುರುಗಳ ನಿನಗೆ ಪರಮಮಂಗಳ |

ದುರಿತ ಪರ್ವಕ ಪವಿಯೆಂದು ತಿಳಿದು ||

ಇದು ಉತ್ತನೂರು ಶ್ರೀ ಸೀನಪ್ಪದಾಸರ ರಚನೆ. ಇದರಲ್ಲಿ ಗುರುವನ್ನು ಸ್ಮರಿಸುವುದರಿಂದಲೇ ನಮ್ಮೆಲ್ಲಾ ಕಷ್ಟಗಳೂ ಪರಿಹಾರವಾಗಿ, ಸಕಲ ಸಂಪತ್ತು ಲಭಿಸುವುದು ಎನ್ನುತ್ತಾರೆ. ಗುರು ನಮ್ಮ ಭೌತಿಕ ಬದುಕಿನ ಎಲ್ಲಾ ಸಂಬಂಧಗಳಿಗೂ ಮೀರಿದ ಸಂಬಂಧವಾದರೂ ಕೂಡ, ನಮಗೆ ಗುರು ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ, ಮಿತ್ರ ಎಂಬ ಎಲ್ಲಾ ಪಾತ್ರಗಳನ್ನೂ ನಿರ್ವಹಿಸುತ್ತಾನೆ. ನಮ್ಮನ್ನು ಜ್ಞಾನದ ದಾರಿಗೆ ಹಚ್ಚುತ್ತಾ, ಅತ್ಯಂತ ಆಪ್ತನಾಗುತ್ತಾನೆ. ನಮ್ಮ ಜೀವನದ ಪರಮ ಉದ್ದೇಶ ಹಾಗೂ ಗುರಿಯಾದ ಹರಿಯೊಲುಮೆ ಸಂಪಾದಿಸುವುದಕ್ಕೆ ಗುರು ಮಾರ್ಗದರ್ಶಿಯಾಗುತ್ತಾನೆ.

ಅತ್ಯಂತ ಶ್ರೇಷ್ಠ ಗುರುವನ್ನು ಪಡೆಯುವುದು ಎಷ್ಟು ಕಷ್ಟವೋ, ಹಾಗೇ ಒಳ್ಳೆಯ ಶಿಷ್ಯನನ್ನು ಪಡೆಯುವುದೂ ಕಷ್ಟವೇ. ತಮ್ಮೆಲ್ಲ ಜ್ಞಾನವನ್ನೂ ಧಾರೆಯೆರೆಯಲು, ಸನ್ಮಾರ್ಗ ತೋರಿಸಿ, ತಮ್ಮ ನಂತರ ತಮ್ಮ ಹಾದಿಯಲ್ಲಿ ನಡೆಯುವ, ಪರಂಪರೆ ಉಳಿಸಿಕೊಂಡು ಹೋಗುವಂತಹ ಶಿಷ್ಯನನ್ನು ಗುರುವೂ ಕೂಡ ಕಾತುರದಿಂದ ಹುಡುಕುತ್ತಾ ಕಾಯುತ್ತಿರುತ್ತಾರೆ. ಇದಕ್ಕೆ ನಿದರ್ಶನವಾಗಿ ನಮ್ಮ ದಾಸವರೇಣ್ಯರ ಸಾಲಿನಲ್ಲಿ, ಒಂದು ಉತ್ಕೃಷ್ಟ ದೃಷ್ಟಾಂತವಾಗಿರುವ ಗುರು-ಶಿಷ್ಯರ ಸಂಬಂಧವೆಂದರೆ ವ್ಯಾಸರಾಯರು ಹಾಗೂ ಪುರಂದರ ದಾಸರದ್ದು. ತನ್ನ ಶಿಷ್ಯನನ್ನೇ ಹೃತ್ಪೂರ್ವಕವಾಗಿ ಪ್ರಶಂಸಿಸಿ, ಪದ ರಚಿಸಿ ಹಾಡಿ, ಅದನ್ನು ದಾಸ ಸಾಹಿತ್ಯದಲ್ಲಿ ದಾಖಲಾಗುವಂತೆ ಮಾಡಿರುವವರು ಶ್ರೀವ್ಯಾಸರಾಯರು. ಮೇಧಾವಿ ಶಿಷ್ಯನನ್ನು, ಸರ್ವಗುಣ ಸಂಪನ್ನನಾದ ಶಿಷ್ಯನನ್ನು ಪಡೆದು, ಅವರನ್ನು ಪ್ರಶಂಸಿಸಿದ ವ್ಯಾಸರಾಯರನ್ನು ನಾವು ನಮಿಸಲೇ ಬೇಕು, ಗೌರವಿಸಿ, ಆರಾಧಿಸಲೇಬೇಕು.

ಶ್ರೀವ್ಯಾಸರಾಯರು ತಮ್ಮ ನೆಚ್ಚಿನ ಶಿಷ್ಯರಾದ ಪುರಂದರ ದಾಸರನ್ನು ಕುರಿತು ಮಾಡಿದ ರಚನೆಯೊಂದಿಗೆ ಈ ಬರಹ ಮುಕ್ತಾಯ ಮಾಡುವುದು ನಮ್ಮ ಇಡೀ ದಾಸ ಪರಂಪರೆಗೆ ನಾ ಮಾಡುವ ವಿನಯಪೂರ್ವಕ ಹಾಗೂ ಭಕ್ತಿಪೂರ್ವಕ ನಮನ...

ದಾಸರೆಂದರೆ ಪುರಂದರ ದಾಸರಯ್ಯ |

ವಸುದೇವ ಕೃಷ್ಣನ್ನ ಸೂಸಿ ಪೂಜಿಸುವ |

ಗೀತ ನರ್ತನದಿ ಶ್ರೀ ಕೃಷ್ಣನ್ನ ಪೂಜಿಸುವ |

ಪೂತಾತ್ಮ ಪುರಂದರ ದಾಸರಿವರಯ್ಯಾ ||

9 comments:

  1. ದಾಸರ ಬಗ್ಗೆ ತಿಳಿಯದ ಎಷ್ಟೋ ವಿಷಯಗಳು ಇಂದು ತಿಳಿದವು. ಇಂತಹ ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು.

    ReplyDelete
  2. ಹರಿದಾಸ ಪರ೦ಪರೆಯ ಬಗೆಗಿನ ಕಿರುಪರಿಚಯದ ಈ ಉತ್ತಮ ಲೇಖನ ಸ೦ಗ್ರಹಯೋಗ್ಯವಾಗಿದೆ. ಕನ್ನಡ ಭಾಷೆಯನ್ನು ಹೆಚ್ಚು ಶ್ರೀಮ೦ತಗೊಳಿಸುತ್ತಾ, ಆಧ್ಯಾತ್ಮದ ತಿರುಳನ್ನು ಸರಳವಾಗಿ, ಜನಜನಿತವಾಗಿ ಮಾಡುವಲ್ಲಿ ದಾಸ ಸಾಹಿತ್ಯ ಮೇರು ಸ್ಥಾನವನ್ನು ಪಡೆದಿದೆ. ಗುರು ಪರ೦ಪರೆಯ ಶಿರೋನಾಮೆಯಡಿಯಲ್ಲಿ ದಾಸ ಸಾಹಿತ್ಯದ ಹೂರಣವನ್ನು ಬಡಿಸಿದ ಶ್ಯಾಮಲಾ ಅವರ ಈ ಪ್ರಾಮಾಣಿಕ ಪ್ರಯತ್ನ ತು೦ಬಾ ಸಕಾಲಿಕ ಹಾಗೂ ಅತ್ತ್ಯುತ್ತಮ ಸಾಧನೆ. ಅಭಿನ೦ದನೆಗಳು.

    ಅನ೦ತ್

    ReplyDelete
  3. ದಾಸಪರಂಪರೆಯನ್ನು ಓದಿದಾಗ ತೀರ್ಥ ಕುಡಿದಷ್ಟು ಸುಖವಾಯಿತು. ಧನ್ಯವಾದಗಳು,ಶ್ಯಾಮಲಾ.

    ReplyDelete
  4. ವಿಜಯಕವಚ ತುಂಬಾ ಒಳ್ಳೆ ರಚನೆ.
    ಅದನ್ನ ಬಹಳ ಜನ ದಿನವೂ ಹೇಳಿಕೊಲ್ಲೋದನ್ನ ಕೇಳಿದ್ದೇನೆ.
    ಅದರ ಲಾಲಿತ್ಯಕ್ಕಾಗಿ ನನಗದು ತುಂಬಾ ಇಷ್ಟ.
    ನೆನಪಿಸಿದ್ದಕ್ಕಾಗಿ ವಂದನೆಗಳು
    ಸ್ವರ್ಣ

    ReplyDelete
  5. ಶ್ಯಾಮಲಾಜೀ..
    ದಾಸ ಪರಂಪರೆಯನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
    ಚಂದ್ರು

    ReplyDelete
  6. ಧನ್ಯವಾದಗಳು ಅನಂತ್ ಸಾರ್..
    ನಿಮ್ಮ ಮಾತು ನಿಜ ನಮ್ಮ ದಾಸ ಸಾಹಿತ್ಯ ಅತ್ಯಂತ ಶ್ರೀಮಂತ ಸಾಹಿತ್ಯ. ಇದರ ಒಳಹೊಕ್ಕು ಅರ್ಥೈಸಿಕೊಳ್ಳುವ ಒಂದು ಚಿಕ್ಕ ಪ್ರಯತ್ನ ಮಾಡಿದರೆ ಸಾಕು, ನಮ್ಮ ಮುಂದೆ ದೊಡ್ಡ ಸಾಗರವೇ ತೆರೆದುಕೊಂಡು ಬಿಡುತ್ತದೆ. ಇದರಲ್ಲಿರುವ ಆಧ್ಯಾತ್ಮದ ತಿರುಳೇ ಸಾಕು, ಬೇರೇನೂ ಬೇಡ. ನಾನೂ ಈಗ ತಾನೇ ಈ ಸತ್ಯವನ್ನು ಅರಿಯುತ್ತಿದ್ದೇನೆ. ನನ್ನ ಬರಹ ಮೆಚ್ಚಿ ಪ್ರೋತ್ಸಾಹಿಸಿದ ನಿಮಗೆ ಮತ್ತೊಮ್ಮೆ ಧನ್ಯವಾದಗಳು... :-)

    ReplyDelete
  7. ಸುನಾತ್ ಕಾಕಾ

    ತೀರ್ಥ ಕುಡಿದಷ್ಟು ಸಂತೋಷವಾಯಿತು ಎಂದು ಹೇಳಿ ಪ್ರೋತ್ಸಾಹಿಸಿದ ನಿಮಗೆ ಅನಂತ ಧನ್ಯವಾದಗಳು...

    ReplyDelete
  8. ಪ್ರವೀಣ್, ಸ್ವರ್ಣ ಮತ್ತು ಚಂದ್ರೂ...

    ದಾಸ ಸಾಹಿತ್ಯವನ್ನು ಪರಿಚಯಿಸುವ ನನ್ನ ಪುಟ್ಟ ಪ್ರಯತ್ನ ಮೆಚ್ಚಿದ ನಿಮಗೆಲ್ಲರಿಗೂ ವಂದನೆಗಳು. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು... :-)

    ReplyDelete
  9. halavaaru daasasaahityada anarghyaratnagala parichaya maadisiddiraa dhanyavaadagalu./

    ReplyDelete