Sunday, July 19, 2009

ಸಂಗೀತ - ನಮ್ಮ ಬದುಕು

ಸಂಗೀತ ನಮ್ಮ ಮನಸ್ಸಿನ ಮೇಲೆ ನೇರವಾಗಿ ಹಾಗೂ ಆ ಕ್ಷಣದಲ್ಲೇ ಪರಿಣಾಮ ಬೀರುತ್ತದೆ. ಯಾವುದಾದರೊಂದು ಒಳ್ಳೆಯ ಹಾಡನ್ನು ನಾವು ಕೇಳಿದಾಗ, ನಮ್ಮ ಮನಸ್ಸು ಎಷ್ಟೇ ಮುನಿಸಿಕೊಂಡಿರಲಿ, ಅಳುತ್ತಿರಲಿ ಅಥವಾ ಖಿನ್ನವಾಗಿರಲಿ, ಆ ಹಾಡು ಮನಸ್ಸನ್ನು ಖಂಡಿತವಾಗಿ ಮುಟ್ಟತ್ತೆ ಮತ್ತು ಎಚ್ಚತ್ತುಕೊಳ್ಳುವಂತೆ ಮಾಡುತ್ತದೆ. ಅಂದರೆ ಹಾಡು ನಮ್ಮ ಭಾವನೆಳನ್ನು ಜಾಗೃತಿಗೊಳಿಸುತ್ತೆ. ಹಾಡುಗಳ ಸಾಹಿತ್ಯ ನಮ್ಮನ್ನು ನಮ್ಮ ಚಿಂತನೆಗಳಿಂದ ದೂರ ಸರಿಸತ್ತೆ. ಖಿನ್ನಗೊಂಡಿರುವ ಮನಸ್ಸು ತನಗಿಷ್ಟವಾದ, ಒಳ್ಳೆಯ ಹಾಡು ಕೇಳಿದಾಕ್ಷಣ, ರಚ್ಚೆ ಹಿಡಿದ ಮಗು ತನ್ನ ಇಷ್ಟದ ವಸ್ತು ಕೈಗೆ ಸಿಕ್ಕ ತಕ್ಷಣ ಅಳು ನಿಲ್ಲಿಸುವಂತೆ, ಖಿನ್ನತೆಯಿಂದ ಹೊರ ಬಂದು, ಹಾಡಿಗೆ ಕಿವಿಗೊಡುತ್ತದೆ. ಆ ಹಾಡಿನ ರಾಗ ಅಂತರಾಳಕ್ಕೆ ಹೊಕ್ಕಾಕ್ಷಣ ರಾಗದ ಮೋಡಿಯನ್ನು ಹಿಂಬಾಲಿಸಿಕೊಂಡು ಹೋಗಿ ಬಿಡುತ್ತದೆ.

ಹಾಡುಗಳು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉತ್ಕಟವಾಗಿ ಸಾರುತ್ತಿದೆ. ಸಂಶೋಧನೆಗಳೂ ಕೂಡ ಸಂಗೀತ ಹಾಡುವಿಕೆ ಆರೋಗ್ಯವನ್ನು ಉತ್ತಮ ಪಡಿಸುತ್ತದೆಂದು ಖಚಿತಪಡಿಸಿವೆ. ಅಂದರೆ ಹಾಡುಗಾರರು, ರಾಗಗಳನ್ನಾಗಲೀ, ಕೃತಿಗಳನ್ನಗಲೀ ಹಾಡುವಾಗ, ಉಸಿರಾಟದಿಂದ ಪ್ರಾಣವಾಯು ಹೆಚ್ಚಾಗಿ, ರಕ್ತ ಪರಿಚಲನೆ ಸುಗಮವಾಗುತ್ತದೆ, ಮತ್ತು ನಮ್ಮ ಪಚನ ಶಕ್ತಿ ಕೂಡ ಹೆಚ್ಚಾಗುತ್ತದೆ ಎನ್ನುತ್ತಾರೆ ನಮ್ಮ ಸಂಶೋಧಕರು. ಅದರಲ್ಲೂ ಶಾಸ್ತ್ರೀಯ ಸಂಗೀತವನ್ನು ನಾವು ಅಡಿ ನಾಭಿಯಿಂದ ಉಸಿರೆಳೆದುಕೊಂಡು ಹಾಡುವುದರಿಂದ, ಉದರದ ಎಲ್ಲಾ ಅವಯವಗಳಿಗೂ ತಕ್ಕುದಾದ ವ್ಯಾಯಾಮ ಆಗುತ್ತದೆ. ನಾವು ಹಾಡುವಾಗ ಉತ್ಪತ್ತಿಯಾಗುವ ಶಬ್ದ ತರಂಗಗಳು ನಮ್ಮ ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಹೆಚ್ಚಿಸುತ್ತದೆ.

ನಮ್ಮ ಪಂಚೇಂದ್ರಿಯಗಳೂ ಶಬ್ದ ತರಂಗಗಳಿಗೆ ಸ್ಪಂದಿಸುವುದರಿಂದ, ಅವುಗಳನ್ನು ನಾವು ಅತ್ಯುತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು, ಹಾಡುವಿಕೆ ಸಹಜವಾಗಿ, ಸಹಾಯವಾಗುತ್ತದೆ. ನಮ್ಮ ಒಳಗಿರುವ ಶಬ್ದ ತರಂಗಗಳೂ ಮತ್ತು ನಮ್ಮ ಹೊರಗಿನ ಶಬ್ದ ತರಂಗಗಳೆರಡೂ ಸಮತೋಲನದಲ್ಲಿದ್ದಾಗ ಮಾತ್ರವೇ ನಾವು ಸುಖವಾಗಿ ಬದುಕಲು ಸಾಧ್ಯವಾಗುವುದು. ಹಾಡುಗಾರಿಕೆಯಿಂದ ನಾವು ಉಂಟಾಗಿಸುವ ತರಂಗಗಳು, ನಮ್ಮನ್ನು ಅಶಾಂತಿಯ ಸ್ಥಿತಿಯಿಂದ ಶಾಂತ ಸ್ಥಿತಿಗೆ ತರುತ್ತದೆ. ಶಾಸ್ತ್ರೀಯ ಸಂಗೀತದ ಸಾಹಿತ್ಯದಲ್ಲಿರುವ ಭಕ್ತಿಯ ಪರಕಾಷ್ಠೆ ಅಥವಾ ಭಗವಂತನ ವರ್ಣನೆ, ನಮ್ಮನ್ನು ಹಿಡಿದಿಡುವಾಗ, ಅದರ ಜೊತೆ ನಾವು ಹಾಡುವ ರಾಗ ಕೂಡ ನಮ್ಮ ಸೂಕ್ಷ್ಮ ಮನಸ್ಸನ್ನು ಹಿತವಾಗಿ ಎಚ್ಚರಿಸುತ್ತದೆ. ರಾಗ - ಸಾಹಿತ್ಯ ಎರಡೂ ಒಟ್ಟಿಗೇ ಮೇಳೈಸಿದಾಗ ಮನಸ್ಸು ಧ್ಯಾನ ಸ್ಥಿತಿಗೆ ತನ್ನಂತೆ ತಾನೇ ಸರಿದು ಹೋಗಿ ಬಿಡುತ್ತದೆ. ನಮ್ಮ ಭಾವನೆಗಳು, ಧ್ಯಾನದ ಮೂಲಕ ನಮ್ಮ ಹತೋಟಿಗೆ ಬಂದಾಗ, ನಮ್ಮ ಕೊರಗು, ದು:ಖ, ನಕಾರಾತ್ಮಕ ಚಿಂತನೆ ಎಲ್ಲವೂ ಕರಗಿ, ಅಲ್ಲಿ ಪರಿಶುದ್ಧವಾದ, ಆರೋಗ್ಯ ಹಾಗೂ ಮನ:ಶಾಂತಿಯಿಂದ ಕೂಡಿದ ಮನುಷ್ಯನ ಅವತಾರ ಆಗುತ್ತದೆ.

ಗುಂಪುಕೂಡಿ ಒಟ್ಟಿಗೆ ಹಾಡುವಾಗ ಶಬ್ದ ತರಂಗಗಳು ಅಲ್ಲಿ ಉಪಸ್ಥಿತರಿರುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನೂರು / ಸಾವಿರ ಧ್ವನಿಗಳು ಒಟ್ಟಿಗೆ ನಾದ ಬಿಂದುವಿನಲ್ಲಿ ಲೀನವಾದಾಗ, ಇಡೀ ವಾತಾವರಣವೇ ಸಕಾರಾತ್ಮಕವಾಗಿ ಬದಲಾಗಿ ಬಿಟ್ಟಿರುತ್ತದೆ. ಇದರ ಉಪಯೋಗ ಪಡೆಯುವುದಕ್ಕೋಸ್ಕರವೇ ಹಿಂದಿನಿಂದಲೂ ಸಾಯಂಕಾಲದ ಹೊತ್ತು ಮನೆಯವರೆಲ್ಲರೂ ಕುಳಿತು, ಭಜನೆ ಮಾಡುವುದು, ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದೆಲ್ಲಾ ಅಭ್ಯಾಸದಲ್ಲಿತ್ತು. ಸಂಗೀತ ಮತ್ತು ಹಾಡುಗಾರಿಕೆ ಎರಡೂ ನಮ್ಮ "ಆತ್ಮ". ಜೀವಕ್ಕೆ ಅತ್ಮನೇ ಆಧಾರ. ಆ ಆತ್ಮ ಎಚ್ಚೆತ್ತುಕೊಳ್ಳಬೇಕು, ಜೀವನದ ಸಾರ್ಥಕತೆ ಆಗಬೇಕೆಂದರೆ, ಸಂಗೀತ ನಮ್ಮ ಜೀವನದಲ್ಲಿ ಅವಶ್ಯವಾಗಿರಬೇಕು.

ಮಗುವಿನಿಂದ ವೃದ್ಧರವರೆಗೂ ಸಂಗೀತಕ್ಕೆ ಆಕರ್ಷಿತರಾಗದವರು ಯಾರೂ ಇಲ್ಲ. ಚಿಕ್ಕ ಮಕ್ಕಳು ತಾಯಿಯ ಗರ್ಭದಲ್ಲೇ ಸಂಗೀತದ ಮೋಡಿಗೆ ಸಿಲುಕಿರುತ್ತಾರೆ. ಜನಿಸಿದ ನಂತರವಂತೂ, ಲಾಲಿಯ ಹಾಡಿನ ರಾಗಕ್ಕೆ ಮರುಳಾಗದ ಮಕ್ಕಳೇ ಇಲ್ಲ.
ಹೀಗೆ ಸಂಗೀತ ನಮ್ಮ ಉಸಿರಾದಾಗ, ನಾವು, ನಮ್ಮ ಮನೆ, ನಮ್ಮ ಸುತ್ತ ಮುತ್ತಲಿನ ಜನ, ವಾತಾವರಣ ಎಲ್ಲವೂ ಸಕಾರಾತ್ಮಕವಾಗೇ ಇರತ್ತೆ ಮತ್ತು ಸಂಗೀತಮಯವಾಗೇ ಬದುಕು ಸುಲಲಿತವಾಗಿ ರಾಗ ಪ್ರವಾಹದಂತೆ ಹರಿಯುತ್ತದೆ.

1 comment:

  1. ಶ್ಯಾಮಲ ಅವರೆ,
    ಬದುಕಿಗೆ ಸಂಗೀತದ ಮಹತ್ವದ ಬಗ್ಗೆ ಚೆನ್ನಾಗಿ ವರ್ಣಿಸಿ ಬರೆದಿದ್ದೀರ.

    ನನಗೆ ಹಾಡಲು ಇಷ್ಟ. ಆದರೆ ನಾ ಹಾಡೋದನ್ನು ನನಗೇ ಕೇಳೋಕೆ ಆಗಲ್ಲ. ಹಾಡು ಕೇಳುವುದು ತುಂಬಾ ಇಷ್ಟ. ಶಾಸ್ತ್ರೀಯ ಸಂಗೀತವೆಂದರೆ ಪ್ರಾಣ.
    ಸಂಗೀತವನ್ನು ಔಷದಿಯಾಗಿ ಉಪಯೋಗಿಸುತ್ತಾರೆ ಅಂತ ಕೇಳಿದ್ದೀನಿ. ನಿಮಗೆ ಇದರ ಬಗ್ಗೆ ಮಾಹಿತಿ ಗೊತ್ತಿದ್ದರೆ ದಯವಿಟ್ಟು ಮುಂದಿನ ಪೋಸ್ಟ್ ಗಳಲ್ಲಿ ಹಾಕಿ.

    ಮತ್ತೊಮ್ಮೆ ಅಭಿನಂದನೆಗಳು.
    ನನ್ನ ಬ್ಲಾಗ್ ಅಂತರ್ವಾಣಿಯನ್ನೂ ಓದಿ.

    ReplyDelete