ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆ ತುಂಗಾ, ಭದ್ರೆಯರ ಒಡಲು ತುಂಬಿ ಹರಿದು ಉಕ್ಕಿಸುತ್ತಿದೆ. ಎಲ್ಲಾ ಸುದ್ದಿ ಕಾಗದಗಳಲ್ಲೂ, ದೂರ ದರ್ಶನದ ವಾಹಿನಿಗಳಲ್ಲೂ ಅಣೆಕಟ್ಟು ಗರಿಷ್ಠ ಮಟ್ಟ ಮುಟ್ಟಿರುವ ಸಂಗತಿ ಓದಿ, ಓದಿ, ಭೋರ್ಗರೆಯುತ್ತಿರುವ ಜೋಗ ಜಲಪಾತದ ಚಿತ್ರಗಳನ್ನು ನೋಡಿ ಮನಸ್ಸು ಬಾಲ್ಯದ ದಿನಗಳತ್ತ, ಜಿಗಿದು ಓಡಿದೆ.......
ನಾವೆಲ್ಲಾ ಚಿಕ್ಕವರಿದ್ದಾಗ ಗಾಜನೂರಿನಲ್ಲಿ ತುಂಗಾ ನದಿಯ ಅಣೆಕಟ್ಟು ಇಷ್ಟು ದೊಡ್ಡದಾಗಿರಲಿಲ್ಲ. ಒಳ ಹರಿವು ಜಾಸ್ತಿಯಾದೊಡನೆ ನದಿಯಲ್ಲಿ ನೀರಿನ ಮಟ್ಟ ಏರುತ್ತಿತ್ತು. ತುಂಗಾ ನದಿಗೆ ರೈಲು ಮತ್ತು ಇತರ ವಾಹನಗಳ ಸಂಚಾರದ ಸೇತುವೆ ಎರಡೂ ಒಂದರ ಪಕ್ಕದಲ್ಲೇ ಒಂದು ಇವೆ. ರೈಲು ಸೇತುವೆಯ ಕೆಲವೇ ಅಡಿಗಳಷ್ಟು ಬಿಟ್ಟು ತುಂಬಿ ಹರಿಯುತ್ತಿದ್ದ ತುಂಗೆಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತಿದ್ದ ಕಾಲವದು......
ಈಗ ಸುಮಾರು ೩೦ -೩೫ ವರ್ಷಗಳಷ್ಟು ಹಿಂದೆ ಮಳೆ ಬೆಳೆ ಚೆನ್ನಾಗಿ ಆಗುತ್ತಿದ್ದ ಕಾಲ. ಚಿಕ್ಕ ಊರಾದ ಭದ್ರಾವತಿಯ ಹಳೇನಗರ ಹಳೆಯ ಕಾಲದ ಮನೆಗಳು, ಆಟದ ಬಯಲುಗಳು, ಸರ್ಕಾರಿ ಶಾಲೆಗಳಿಂದ ಕೂಡಿತ್ತು. ನಾವು ಬೆಳೆದ ಮನೆ, ನಮ್ಮ ತಂದೆಯವರ ಮನೆ, ಉದ್ದವಾಗಿ ರೈಲ್ವೆ ಭೋಗಿಗಳಂತೆ ಇತ್ತು. ಮೊದಲು ಮಧ್ಯದಲ್ಲಿ ಸ್ವಲ್ಪ ಜಾಗ ಬಿಟ್ಟು ಎರಡು ಭಾಗಗಳಾಗಿ ಕಟ್ಟಿದ್ದ ಮನೆ ಕೊನೆಗೆ ಗೋಡೆಗಳಿಂದ ಬೆಸೆಯಲ್ಪಟ್ಟು, ಒಂದೇ ಉದ್ದನೆಯ ತಾಳಗುಪ್ಪ ಎಕ್ಸ್ ಪ್ರೆಸ್ ಆಗಿತ್ತು. ಮಧ್ಯದಲ್ಲಿ ನಾವು ಮೂರು ಮೆಟ್ಟಿಲು ಇಳಿದು ಹಿಂದುಗಡೆಯ ಭಾಗದ ಮನೆಗೆ ಹೋಗಬೇಕಿತ್ತು. ನಮ್ಮ ಮನೆ ಮೂಲೆ ಮನೆಯಾಗಿತ್ತು, ಪಕ್ಕದಲ್ಲಿ ಖಾಲಿ ಜಾಗ ಮತ್ತು ರಸ್ತೆ ಇತ್ತು. ಚಿಕ್ಕ, ಆಳವಿಲ್ಲದ ಚರಂಡಿ ರಸ್ತೆ ಬದಿಗೆ...... ಮನೆ ಮುಂದುಗಡೆ ಎತ್ತರ ಮಾಡಿ, ಹಲವಾರು ಮೆಟ್ಟಿಲು ಹತ್ತಿ ಬೀದಿ ಬಾಗಿಲಿಗೆ ಬರುವಂತೆ ಇತ್ತು. ಆಗೆಲ್ಲಾ ಹೊಳೆಯಲ್ಲಿ ನೀರು ಹೆಚ್ಚಾದರೆ, ಹೆಚ್ಚು ಮನೆಗಳಿಲ್ಲದ ಕಾರಣ, ನಮ್ಮ ಮನೆಯವರೆಗೂ ಭದ್ರೆ ಹರಿದು ಬರುತ್ತಿದ್ದಳಂತೆ, (ಭದ್ರೆ ನಮ್ಮ ಮನೆಯ ಮುಂದೆಯೇ ಹರಿಯುತ್ತಾಳೆ), ಆದ್ದರಿಂದ ಮೆಟ್ಟಿಲುಗಳನ್ನಿಟ್ಟು ಮನೆ ಕಟ್ಟುತ್ತಿದ್ದರು. ದೊಡ್ಡದಾದ ಜಗುಲಿ, ಒಂದು ಮಳಿಗೆ, ಒಂದು ಕಡೆ ಪಕ್ಕಕ್ಕೆ ಮನೆಯ ಹೆಬ್ಬಾಗಿಲು ಇತ್ತು. ನಾವು ಮಕ್ಕಳು ಯಾವಾಗಲೂ ಜಗುಲಿಯ ಮೇಲೆಯೇ ಕುಳಿತು ಆಟ ಆಡುತ್ತಿರುತ್ತಿದ್ದೆವು.
ಮಳೆಗಾಲದಲ್ಲಿ ಮಳೆ ಹೆಚ್ಚಾಗಿ ನದಿಯಲ್ಲಿ ನೀರು ಬಿಟ್ಟರೆ, ಘಂಟೆ ಘಂಟೆಗೂ ಹೋಗಿ ನೋಡುವುದೇ ನಮಗೊಂದು ದೊಡ್ಡ ಸಂಭ್ರಮದ ಕೆಲಸವಾಗುತ್ತಿತ್ತು. ನದಿಯ ಮಧ್ಯೆ ಇರುವ ಮಂಟಪ ಎಷ್ಟು ಮುಳುಗಿದೆ ಎಂದು ನೋಡುವುದು ನಮಗೊಂಥರಾ ಮಜವಾಗಿತ್ತು. ಒಮ್ಮೆ ಹೀಗೆ ಕುಂಭದ್ರೋಣ ಮಳೆ ಸುರಿದಾಗ, ನಾನಿನ್ನೂ ತುಂಬಾ ಚಿಕ್ಕವಳು. ಅಕ್ಕಂದಿರ ಜೊತೆ ಯಾರದೋ ಮನೆಗೆ ಹೋಗಿ ಬಿಟ್ಟಿದ್ದೆ. ೨ - ೩ ತಾಸು ಬಿಡದೇ ಸುರಿದ ಮಳೆಗೆ ರಸ್ತೆಯೆಲ್ಲಾ ನೀರು ನಿಂತು, ದೂರದಿಂದ ನಮ್ಮ ಮನೆ ಸಮುದ್ರದ ಮಧ್ಯದಲ್ಲಿಯ ಪುಟ್ಟ ದ್ವೀಪದಂತೆ ಆಗಿಬಿಟ್ಟಿತ್ತು. ಅಮ್ಮ ಹೆದರಿ ಮನೆ ಪಕ್ಕದಲ್ಲಿ ಸೊಸೈಟಿಯಲ್ಲಿ ಕೆಲಸ ಮಾಡುವ ಬಸವರಾಜನನ್ನು, ನಮ್ಮನ್ನು ಕರೆತರಲು ಕಳುಹಿಸಿದ್ದರು. ಬಸವರಾಜು ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು, ಅಕ್ಕಂದಿರ ಕೈ ಹಿಡಿದು ಮನೆ ತಲುಪಿಸಿದ್ದ. ಬಸವರಾಜನ ಸೊಂಟದವರೆಗೂ ನೀರು ರಸ್ತೆಯಲ್ಲಿ ನಿಂತಿತ್ತು. ರೈಲ್ವೆ ಭೋಗಿಯಂಥ ನಮ್ಮ ಮನೆಯ ಎಲ್ಲಾ ಕಿಟಕಿಗಳೂ ರಸ್ತೆಗೆ ತೆರೆದುಕೊಂಡಿದ್ದವು. ಹಿಂದಿನ ಕಾಲದ ಮನೆಗಳಲ್ಲಿ ಕಿಟಕಿಗಳು ಅಗಲವಾಗಿ ಇರುತ್ತಿದ್ದವು. ಆ ದಿನ ಮನೆಗೆ ಬಂದು ಕಿಟಕಿ ಹತ್ತಿ ಕುಳಿತ ನಾನು ಕೆಲವು ಘಂಟೆಗಳ ನಂತರ ಅಮ್ಮನಿಂದ ಒದೆ ಬಿದ್ದ ನಂತರವೇ ಕೆಳಗಿಳಿದಿದ್ದೆ. ಹೋಯ್ , ಹುಯ್ ಎಂದು ಕೂಗುತ್ತಾ ಚಪ್ಪಲಿಗಳನ್ನು ಕಳಚಿ ಕೈಯಲ್ಲಿ ಹಿಡಿದು, ನೀರಿನಲ್ಲಿ ನಡೆದು ಹೋಗುತ್ತಿದ್ದ ಜನಗಳು, ಮಧ್ಯೆ ಮಧ್ಯೆ ಹೋಗುವ ಒಂದೊಂದು ವಾಹನಗಳು ಎಲ್ಲಾ ನನಗೆ ತುಂಬಾ ಮೋಜುಕೊಡುತ್ತಿದ್ದ ಸಂಗತಿಗಳು. ಪುಸ್ತಕದಿಂದ ಒಂದೊಂದೇ ಕಾಗದ ಹರಿದು ದೋಣಿ ಮಾಡಿ ತೇಲಿ ಬಿಡುತ್ತಿದ್ದ ಖುಷಿ..... ಆಹಾ ಎಂಥಹ ಸುಂದರ ದಿನಗಳವು.......
ದೊಡ್ಡವಳಾಗಿ, ಮದುವೆಯಾದ ನಂತರ ಕಲ್ಕತ್ತಾ ಸೇರಿದಾಗ, ಕೆಲಸ - ಮನೆ - ಮಗು - ಅಡಿಗೆ ಎಂಬ ಏಕತಾನತೆಗೆ ಬದುಕು ಹೊಂದಿಕೊಳ್ಳುತ್ತಿತ್ತು, ಆಗ ಬಂದುದೇ ಮತ್ತೆ ಮಳೆಗಾಲ. ನಾವು ಮಹಡಿಯ ಮೇಲಿನ ಮನೆಯಲ್ಲಿ ಇದ್ದೆವು. ನಮ್ಮ ಮನೆ ಕೆಳಗಡೆ ಬರಿಯ ಅಂಗಡಿ ಸಾಲುಗಳಿದ್ದವು. ಕಲ್ಕತ್ತಾದ ಮಳೆ ಪ್ರತೀ ವರ್ಷ ನನಗೆ ನಮ್ಮೂರಿನ ಸಿಹಿ ನೆನಪುಗಳನ್ನು ಹೊತ್ತು ತರುತ್ತಿತ್ತು..... ೨ - ೩ ಘಂಟೆಗಳ ಕಾಲ ಮಳೆ ಸುರಿದರೆ ಸಾಕು, ಕಲ್ಕತ್ತಾದಲ್ಲಿ ರಸ್ತೆಗಳು ಜಲಾವೃತವಾಗಿ ಬಿಡುತ್ತಿತ್ತು. ಆಗ ಎಲ್ಲಾ ಕಛೇರಿಗಳು ಅಘೋಷಿತ ರಜೆಯಾಗಿ ಬಿಡುತ್ತಿತ್ತು. ಬೆಂಗಾಲಿಗಳು ಬೆಚ್ಚಗೆ ಮನೆಯಲ್ಲೇ ಕುಳಿತು ಮಿಷ್ಠಿ (ಸಿಹಿ ಖಾದ್ಯಗಳು), ಸಮೋಸ ತಿಂದು ಬಿಸಿ ಬಿಸಿ ಚಹಾ ಹೀರುತ್ತಿದ್ದರೆ, ನಾವು ಬಿಸಿ ಬಿಸಿ ಪಕೋಡ, ಬಜ್ಜಿ ತಿಂದು ಕಾಫಿ ಕುಡಿಯುತ್ತಿದ್ದೆವು. ಹೊರಗೆ ಹೋದ ಜನಗಳು ಮನೆಗೆ ಮರಳಿ ಬರಲಾರದೆ, ಸೈಕಲ್ ರಿಕ್ಷಾಗಳಲ್ಲಿ ಬರುತ್ತಿದ್ದರೆ, ರಿಕ್ಷಾವಾಲ ಘಂಟೆಯ ಶಬ್ದದ ತರಹ ಶಬ್ದಾ ಮಾಡುತ್ತಾ ದೇಖೇ..... ಓ ದಾದಾ.....(ಅಣ್ಣಾ) ಎಂದು ಕೂಗುತ್ತಿದ್ದರೆ, ನಾವು ಬಾಲ್ಕನಿಯಲ್ಲಿ ನಿಂತು ನೋಡುತ್ತಿದ್ದೆವು. ಒಮ್ಮೊಮ್ಮೆ ನೀರು ಎದೆಯ ಮಟ್ಟದವರೆಗೂ ಇರುತ್ತಿತ್ತು. ಇಂತಹ ಮಳೆಯ ದಿನಗಳೇ ರಿಕ್ಷಾದವರಿಗೆ ಹಬ್ಬ....... ಆ ನೀರಿನಲ್ಲಿ ನಡೆಯಲಾಗದೆ ಅವರು ಕೇಳಿದಷ್ಟು ದುಡ್ಡು ಕೊಟ್ಟು ಅವರನ್ನೂ, ಮಳೆಯನ್ನೂ, ಚರಂಡಿ ವ್ಯವಸ್ಥೆ ಸರಿಯಾಗಿ ಮಾಡದ ಕಲ್ಕತ್ತಾ ನಗರಸಭೆಯನ್ನೂ ಶಪಿಸುತ್ತಾ ಮನೆ ತಲುಪಬೇಕಾಗಿತ್ತು.........
ನನ್ನ ಮಗ ೨ - ೩ ವರ್ಷದವನಿದ್ದಾಗಿನಿಂದ ಅವನು ೪ ನೇ ತರಗತಿಗೆ ಬರುವವರೆಗೂ, ನಾವಿಬ್ಬರೂ ಮಳೆ ಬಂದು ನೀರು ತುಂಬಿದ ತಕ್ಷಣ ದೋಣಿಗಳನ್ನು ಮಾಡಿ ಮಾಡಿ ಮಹಡಿಯಿಂದಲೇ ಕೆಲವನ್ನು ಹಾರಿಸಿ ಬಿಡುತ್ತಿದ್ದೆವು. ತೃಪ್ತಿಯಾಗದೆ ಕೆಳಗೆ ಬಂದು ಮೆಟ್ಟಿಲುಗಳ ಮೇಲೆ ಕುಳಿತು, ಒಂದರ ಹಿಂದೆ ಒಂದರಂತೆ ಸರತಿಯಲ್ಲಿ ಬಿಡುತ್ತಾ ಕುಳಿತಿರುತ್ತಿದ್ದೆವು. ಯಾರ ದೋಣಿ ಮೊದಲು ಮತ್ತು ಎಷ್ಟು ದೂರ ಹೋಗುತ್ತದೆಂದು ನೋಡಿ, ಹಿಗ್ಗುತ್ತಿದ್ದೆವು. ಮಳೆಗಾಲದ ನನ್ನ ಬಾಲ್ಯದ ಆನಂದ, ನಮ್ಮೂರ ನೆನಪು, ನನಗೆ ನನ್ನ ಮಗನ ಮುಖಾಂತರ ದೂರದ ಕಲ್ಕತ್ತಾದಲ್ಲಿ, ಆಗುತ್ತಿತ್ತು........
ಈಗ ತುಂಬಿ ಹರಿಯುತ್ತಿರುವ ತುಂಗಾ ಭದ್ರೆಯರು ನನ್ನೆಲ್ಲಾ ಸವಿಯಾದ ಬಂಗಾರದ ನೆನಪುಗಳನ್ನು ಕೆದಕಿ, ಮನಸ್ಸು ಮರಳಿ ಭದ್ರಾವತಿಗೆ ಹೋಗುವಂತೆ ಮಾಡಿತು....................
ನಿಮ್ಮ ಬರವಣಿಗೆಯಲ್ಲಿ ಆಪ್ತತೆ ಇದೆ...
ReplyDeleteಇಷ್ಟವಾಗುತ್ತದೆ....
ಬಾಲ್ಯದ ನೆನಪುಗಳೇ ಹಾಗೆ..
ಬಾಲ್ಯದಷ್ಟೇ ಸುಂದರ...
ನಿಮ್ಮ ಕಲ್ಕತ್ತ ಅನುಭವ ಕೂಡ...
ನಿಮ್ಮ ಬ್ಲಾಗ್ ಇಷ್ಟವಾಯಿತು...
ಅಭಿನಂದನೆಗಳು....
ಬಾಲ್ಯದ ನೆನಪು ಬಲು ಸುಂದರ.
ReplyDeleteಅದನ್ನು ನೀವು ಬರೆದಿರುವುದು ಇನ್ನೂ ಸುಂದರ.
ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ನಿಮ್ಮ ಬರಹದಂತೆ.
ಅಕ್ಕ ಸಕತ್ ಆಗಿದೆ ಬಾಲ್ಯದ ನೆನಪು .
ReplyDeleteಬಾಲ್ಯ ಬಾಲ್ಯವೇ ಅದಕ್ಕೆ ಬೇರೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ.
ಈಗಲೂ ನಮ್ ಕಡೆ ಬಾರಿ ಮಳೆ ಆದಾಗ ರಸ್ತೆ ಬ್ಲಾಕ್ ಆಗುತ್ತೆ , ನೋಡಲಿಕ್ಕೆ ಮಜಾವಾಗಿರುತ್ತೆ.
ಮೊನ್ನೆ ಊರಿಗೆ ಹೋದಾಗಲೂ ಬಾರಿ ಮಳೆ ಬರುತಿತ್ತು.
ಇಂತಿ
ಅಕ್ಕರೆಯಿಂದ
ವಿನಯ