Friday, October 2, 2009

ಎರಡು ಸಾವಿನ ಸುತ್ತ.........

ಮೊದಲನೆಯ ಸಂದರ್ಭ :

ಸಾವು ಮನುಷ್ಯನ ಗತ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ ಎಂಬ ಚಿಕ್ಕ ಸತ್ಯ ನಿನ್ನೆ ನನ್ನ ಅನುಭವಕ್ಕೆ ಬಂತು. ನಮ್ಮ ಕಟ್ಟಡದಲ್ಲಿ ಕಾವಲುಪಡೆಯ ಸದಸ್ಯನಾದ ಒಬ್ಬ ವ್ಯಕ್ತಿ ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ಮರಳಲು ಸಮವಸ್ತ್ರ ಬದಲಿಸಿ ಬಂದಾಗ, ಸುಸ್ತಾಗುತ್ತಿದೆ ಎಂದನಂತೆ. ಬೆಳಿಗ್ಗೆ ಕೆಲಸಕ್ಕೆ ಬಂದವರು ಮತ್ತು ಅಲ್ಲಿದ್ದ ಮತ್ತಿತರು, ಆ ವ್ಯಕ್ತಿಯನ್ನು ಕುರ್ಚಿಯಲ್ಲಿ ಕುಳ್ಳಿರಿಸಿ, ಕಾಫಿ ತರಿಸಿ ಕುಡಿಸಿ, ಚಾಕೊಲೇಟ್ ಕೊಟ್ಟು, ಮಾತನಾಡಿಸಿ ಉಪಚರಿಸಿದ್ದಾರೆ. ಆದರೆ ತೀವ್ರ ಹೃದಯಾಘಾತದಿಂದ ಆ ವ್ಯಕ್ತಿ ಕುಳಿತಲ್ಲೇ ನಿಧನ ಹೊಂದಿದ್ದ. ಮನೆಗೆ ತಲುಪಿಸುವ ಏರ್ಪಾಟು ಮಾಡಿದಾಗ, ವ್ಯಕ್ತಿಯ ಮನೆಯಲ್ಲಿ ಅವನ ಹೆಂಡತಿ ಮತ್ತು ಮಕ್ಕಳು ಸ್ವೀಕರಿಸಲು ನಿರಾಕರಿಸಿಬಿಟ್ಟಿದ್ದಾರೆ. ಕಾರಣವೇನೆಂದರೆ ಸತ್ತ ವ್ಯಕ್ತಿ ಒಂದು ವರುಷದ ಹಿಂದೆ ಮನೆಯವರ ಜೊತೆ ಜಗಳವಾಡಿಕೊಂಡು, ಮನೆ ಬಿಟ್ಟು ಬಂದಿದ್ದನಂತೆ....... ಕೊನೆಗೆ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಆ ವ್ಯಕ್ತಿಯ ಮಗ ಬಂದು ತಂದೆಯ ಶವವನ್ನು ತೆಗೆದುಕೊಂಡು ಹೋದ.....

ಮನುಷ್ಯ ಬದುಕಿರುವಾಗ ಮಾಡುವ ಎಲ್ಲಾ ಕಾರ್ಯಗಳಿಗೂ ಅವನ ಸಾವಿನ ನಂತರದಲ್ಲಿ ಅವನ ಸಂಬಂಧಿಕರಿಂದಾಗಲಿ ಅಥವಾ ಅವನ ಸಹವಾಸಕ್ಕೆ ಬಂದ ಇತರರಿಂದಾಗಲಿ ಅರ್ಥ ಹುಡುಕುವಂತಾಗುತ್ತದೆ. ಈ ವ್ಯಕ್ತಿ ಬದುಕಿದ್ದಾಗ ಹೇಗಿದ್ದ, ತನ್ನ ಸಂಸಾರವನ್ನು ಹೇಗೆ ಪಾಲಿಸಿದ ಅಥವಾ ಹೆಂಡತಿ ಮಕ್ಕಳೊಂದಿಗೆ ಯಾವ ರೀತಿಯ ಬಾಂಧವ್ಯ ಹೊಂದಿದ್ದ ಎಂಬ ವಿಚಾರ ನನಗೆ ತಿಳಿದಿಲ್ಲ. ತಿಳಿದುಕೊಳ್ಳುವ ಅವಶ್ಯಕತೆಯೂ ಇಲ್ಲಿ ಇಲ್ಲ. ಆದರೆ ಈ ಸಂದರ್ಭದಲ್ಲಿ ಆ ಮೃತ ವ್ಯಕ್ತಿಯ ಕುಟುಂಬ ನಡೆದುಕೊಂಡ ರೀತಿ ನನಗೆ ಗೊಂದಲವನ್ನುಂಟುಮಾಡಿದೆ. ಮರಣದಲ್ಲಿ ನಮ್ಮ ಆಕ್ರೋಶ, ಸಿಟ್ಟು, ದ್ವೇಷ, ಹತಾಶೆ ಎಂಬ ಭಾವೋದ್ವೇಗಗಳನ್ನು ಹರಿಯ ಬಿಡಬಹುದೋ - ಬಾರದೋ ಎಂಬುದೇ ನನ್ನ ತರ್ಕಕ್ಕೆ ನಿಲುಕದ ವಿಷಯವಾಗಿದೆ. ಜೀವ ದೇಹವನ್ನು ಬಿಟ್ಟು ಹೋದ ನಂತರ ನಮ್ಮ ಸಂಸ್ಕೃತಿಯ ಪ್ರಕಾರ ಅದಕ್ಕೆ ಸಂಸ್ಕಾರ ಮಾಡಬೇಕದದ್ದು ಮಗನ ಅಥವಾ ಕುಟುಂಬದ ಇತರ ಸದಸ್ಯರ ಕರ್ತವ್ಯ. ಆದರೆ ಮನೆಬಾಗಿಲಿಗೆ ಬಂದ ಶವವನ್ನು ನಿರಾಕರಿಸುವುದರಿಂದ ಏನನ್ನು ಸಾಧಿಸಿದಂತಾಗಿದೆ? ಬದುಕಿದ್ದಾಗ ಆ ವ್ಯಕ್ತಿ ನಡೆದುಕೊಂಡಿದ್ದಿಕ್ಕಿಂತ ಕೀಳ್ತನದಲ್ಲಿ, ಕುಟುಂಬದವರು ನಡೆದುಕೊಂಡರೆಂದು ನನಗನ್ನಿಸಿತು. ದೇಹವನ್ನು ಸಂಸ್ಕಾರ ಮಾಡದೆ ಬಿಡುವುದರಿಂದ, ನಾವು ಪರಿಸರನಾಶಕ್ಕೆ ಕಾರಣರಾಗಬಹುದೇ ಹೊರತು, ಸತ್ತ ಆ ವ್ಯಕ್ತಿಗೆ ಅವನು ಮಾಡಿದ ತಪ್ಪುಗಳನ್ನು ಯಾವ ರೀತಿ ಅರ್ಥಮಾಡಿಸಿದಂತಾಯಿತು ?

ಎರಡನೆಯ ಸಂದರ್ಭ :

ಕೆಲವು ದಿನಗಳ ಕೆಳಗೆ ನಮಗೆ ತುಂಬಾ ತಿಳಿದವರ ಸಾವು ಘಟಿಸಿತ್ತು. ಮೃತರಾದ ವ್ಯಕ್ತಿ ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಎಂದಿಗೂ ಗೌರವಿಸಲೇಯಿಲ್ಲ. ಒಬ್ಬನೇ ಮಗನನ್ನು ಆದರಿಸಲೇ ಇಲ್ಲ. ಬದುಕಿದ್ದಷ್ಟೂ ದಿನವೂ ಹೆಂಡತಿಯನ್ನು ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಹಿಂಸಿಸಿದ ಆತ, ಸಾಯುವ ಕಾಲಕ್ಕೆ ಒಂದು ಅಪರೂಪದ ಲಿವರ್ ಕ್ಯಾನ್ಸರ್ ನಿಂದ ನರಳುತ್ತಿದ್ದರು. ಆದರೆ ತನಗೆ ಈ ಮಾರಕ ರೋಗ ಇರುವ ವಿಷಯ ಅವರಿಗೆ ತಿಳಿಯಲೇ ಇಲ್ಲ. ಜಾಂಡೀಸ್ ಎಂದು ಆಸ್ಪತ್ರೆ ಸೇರಿದವರಿಗೆ ೪ನೇ ಹಂತದಲ್ಲಿದ್ದ ಕ್ಯಾನ್ಸರ್ ರೋಗ ಕಂಡುಹಿಡಿಯಲ್ಪಟ್ಟಿತ್ತು. ಕೆಮೋ ಥೆರಪಿ ಬೇಡವೆಂದ ಹೆಂಡತಿ, ಊರಿಗೆ ಕರೆದುಕೊಂಡು ಹೋಗಿ ಅಲ್ಲಿಯ ಆಸ್ಪತ್ರೆಗೆ ಸೇರಿಸಿ, ವೈದ್ಯ ಮಾಡಿಸಿ, ಬದುಕಿದ್ದ ಹದಿನೈದು ದಿನಗಳು ಆರೈಕೆ ಮಾಡಿದರು. ತನಗೆ ಆತ ಮಾಡಿದ ಎಲ್ಲಾ ಅನ್ಯಾಯ-ಅಕ್ರಮವನ್ನೂ ಮರೆತು ಮಾನವೀಯತೆ ಮೆರೆದರು.

ಮರಣಾನಂತರವೂ ಈ ವ್ಯಕ್ತಿಯ ಅಂತ್ಯ ಸಂಸ್ಕಾರ ಎದುರು ನೋಡದಿದ್ದ ರೀತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ತಂದೆ ಪ್ರೀತಿಯನ್ನೇ ಪಡೆಯದೆ ಬರಿಯ ಅಪಮಾನಗಳನ್ನೇ ಸಹಿಸಿದ ಮಗ ಕೂಡ ಶದ್ಧೆಯಿಂದ, ಪಾಂಗಿತವಾಗಿ ಎಲ್ಲವನ್ನೂ ಮಾಡಿದ. ಯಾವುದೋ ಜಾತಿಯಲ್ಲಿ ಹುಟ್ಟಿದ್ದರೂ ಕೂಡ ಉತ್ತಮ ರೀತಿಯಲ್ಲಿ ಸಂಸ್ಕಾರ ಪಡೆದ ಈ ವ್ಯಕ್ತಿ ನಿಜವಾಗಿ ಹಿಂದಿನ ಜನ್ಮದಲ್ಲಿ ಏನೋ ಪುಣ್ಯ ಮಾಡಿದ್ದಿರಬೇಕೆಂಬ ಕಲ್ಪನೆ ನನ್ನ ಮನಸ್ಸಿನಲ್ಲಿ ಮೂಡಿತ್ತು !!!

ಇಷ್ಟೆಲ್ಲಾ ಮಾಡಿ ಮುಗಿಸುವಾಗ ಹೆಂಡತಿಯ ಮನದಲ್ಲಿ ಏನು ಭಾವನೆಗಳಿದ್ದವೋ ಗೊತ್ತಿಲ್ಲ ಆದರೆ ನಾನು ನನ್ನ ಕರ್ತವ್ಯ ಮಾಡಿದೆ ಎಂಬಂಥ ಮಾತುಗಳನ್ನು ಆಡಿದ್ದರು ಆಕೆ.

ಮೇಲಿನ ಘಟನೆಗೆ ವಿರುದ್ಧವಾದ ಈ ಪ್ರಸಂಗ ಈ ವ್ಯಕ್ತಿಯ ಗತಜೀವನದತ್ತ ಬೆಳಕು ಚೆಲ್ಲಲೇಯಿಲ್ಲ. ಬಾಹ್ಯ ಪ್ರಪಂಚಕ್ಕೆ ಎಲ್ಲಾ ಒಳ್ಳೆಯತನವನ್ನೂ ಹೊಂದಿದ್ದ ವ್ಯಕ್ತಿ ಕೀಳರಿಮೆಯಿಂದ ನರಳುತ್ತಿದ್ದರೆಂಬ ನನ್ನ ನಂಬಿಕೆ ಧೃಡಪಟ್ಟಿತ್ತು. ಇಂತಹ ಕೀಳರಿಮೆಯಿಂದ ನರಳುವ ಗಂಡಸರು ನಮ್ಮ ಸಮಾಜದಲ್ಲಿ ಇನ್ನೂ ಅನೇಕರಿದ್ದಾರೆ. ಹೆಂಡತಿಯ ಏಳಿಗೆ ಸಹಿಸದ, ತನ್ನನ್ನು ಉದ್ಧರಿಸಿಕೊಳ್ಳಲು ಅರಿಯದ ಜನರು, ಸ್ವಲ್ಪ ಗಮನ ಇಟ್ಟು ನೋಡಿದರೆ, ನಮ್ಮ ಮಧ್ಯೆ ಇನ್ನೂ ಅನೇಕರು ಇದ್ದಾರೆ.

21 comments:

  1. ಶ್ಯಾಮಲಾ ಮೇಡಂ..
    ನಿಮ್ಮ ಬರಹ ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ..

    ವ್ಯಕ್ತಿ ಬದುಕಿದ್ದಾಗ ದ್ವೇಷ ಸಾಧಿಸುವದು ಸಹಜ.. ಆತನ ಧುರ್ನ ಡತೆ, ಆತನಿಂದಾದ ಅವಮಾನ, ಆತ ನೀಡಿದ ನೋವು, ಮಾಡಿದ ಮೋಸ ಇವೆಲ್ಲಾ ದ್ದ್ವೇಶ ಸಾಧನೆಗೆ ಕಾರಣವಾಗಿರಬಹುದು...

    ಆದರೆ, ಆತ ಸತ್ತ ನಂತರ ದ್ವೇಷ ಸಾಧಿಸುವುದರಿಂದ ಆಗುವ ಪ್ರಯೋಜನವಾದರೂ ಏನು..? ಈ ದೃಷ್ಟಿಯಲ್ಲಿ ಎರಡನೇ ಘಟನೆಯಲ್ಲಿನ ಮಹಿಳೆ ಮತ್ತು ಆಕೆಯ ಮಗ ಆದರ್ಶಪ್ರಾಯರಾಗುತ್ತಾರೆ..

    ಉತ್ತಮ ಬರಹ... ಅಭಿನಂದನೆಗಳು...

    ReplyDelete
  2. ಶ್ಯಾಮಲಾ ಮೇಡಮ್,

    ನಿಮ್ಮ ಬರಹ ನಿಜಕ್ಕೂ ಚಿಂತನೆಗೆ ಅರ್ಹವಾದುದು. ಎರಡು ಸಾವಿನ ನಂತರದ ಘಟನೆಗಳಲ್ಲಿ ಮೊದಲನೆಯದು ಅವರ ಮನೆಯವರು ನಡೆದುಕೊಂಡ ರೀತಿಯಿಂದ ಮಾಡಿದ ಸಾಧನೆ ಎಂಥದ್ದು? ಮತ್ತೆ ಎರಡನೇ ಘಟನೆಯಲ್ಲಿ ಹೆಂಡತಿ ಮಗ ಕರ್ತವ್ಯ ಪಾಲನೆ ಎಂದು ಮಾಡಿದರೂ ಅದನ್ನು ಮನಸ್ಸಿಟ್ಟು ಮಾಡಿರುವುದರಿಂದ ಅವರಿಬ್ಬರೂ ಬದುಕಿನಲ್ಲಿ ಆದರ್ಶವ್ಯಕ್ತಿಗಳೆನಿಸಿಬಿಡುತ್ತಾರೆ...

    ಧನ್ಯವಾದಗಳು.

    ReplyDelete
  3. ಮೇಡಂ ನಿಮ್ಮ ಬರಹ ಚಿಂತನೆಗೆ ಗುರಿಮಾಡುತ್ತದೆ,ಕಾಯಿಲೆ ಮನುಷ್ಯನಿಗೆ ಅಸಹಾಯಕತೆ ತರುತ್ತದೆ ಹಾಗೆಯೇ ಅದು ಅವನ
    ಗರ್ವಭಂಗದ ಘಟ್ಟವೂ ಹೌದು ಮಣ್ಣು ಸೇರುವುದು ಶತಃಸಿದ್ಧ ಆದರೂ ನಾವೇಕೆ ಹೊಡೆದಾಡುತ್ತೇವೆ...ತಿಳಿಯುವದಿಲ್ಲ

    ReplyDelete
  4. ಚಿಂತನೆಗೆ ಹಚ್ಚುವ ಬರಹ...

    ಸತ್ತಮೇಲೆ ದ್ವೇಷ ಸಾಧಿಸುವದು ಸರಿಯಲ್ಲ ಅಂತ ನಮ್ಮ ಪುರಾಣಗಳು ಹೇಳುತ್ತವೆ...
    (ಮಹಾಭಾರತದ ಯುದ್ಧದ ಕೊನೆಯಲ್ಲಿ..ಕೌರವರ ಅಂತಿಮ ಕಾರ್ಯಗಳನ್ನು ಮಾಡುವ ಸಂದರ್ಭದಲ್ಲಿ)

    ಮಾನಸಿಕವಾಗಿ ದೊಡ್ಡವರಿದ್ದರೆ ಸತ್ತಮೇಲೂ ದ್ವೇಷ , ಹಗೆ ಸಾಧಿಸಲಾರರು...

    ತುಂಬಾ ಒಳ್ಳೆಯ ಬರಹ...

    ಅಭಿನಂದನೆಗಳು...

    ReplyDelete
  5. ತುಂಬ ಒಳ್ಳೆಯ ಬರಹ,, ಯೋಚಿಸುವಂತೆ ಮಾಡಿದೆ.. ಹೌದು,, ಮನುಷ್ಯ ಸತ್ತ ಮೇಲೆ,, ಅವರು ಮಾಡಿರುವ ಪಾಪ ಪುಣ್ಯ ಗಳು,,ಅದರ ಮೇಲೆ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ... ಹೀಗೆ ಇರಲಿ, ಸತ್ತ ಮೇಲೆ ನಮ್ಮ ಸಂಸ್ಕೃತಿಯ ಪ್ರಕಾರ ಸಂಸ್ಕಾರ ಮಾಡುವುದು ಮನವಿಯ ಧರ್ಮ...

    ReplyDelete
  6. ಹಮ್ಮಂ , ಏನಕ್ಕೋ ಇಷ್ಟು ದೊಡ್ಡ ವಿಷಯಕ್ಕೆ ಪ್ರತಿಕ್ರಿಯೆ ಬರೆಯೋದು ನನಗೆ ಸ್ವಲ್ಪ ಕಷ್ಟನೆ ಆಗುತ್ತೆ , ಹಾಗಂತ ಚೆನ್ನಾಗಿದೆ , ಉತ್ತಮ ಬರಹ ಅಂದುಬಿಟ್ಟರೆ ನಾ ಏನು ಹೇಳಲೇ ಇಲ್ಲವಲ್ಲ ಅನಿಸಿಬಿಡುತ್ತದೆ. ಹಾಗಾಗಿ ಸ್ವಲ್ಪ ಹೇಳುತ್ತೇನೆ.
    ನೀವು ವಿವರಿಸಿರುವ ಘಟನೆಗಳನ್ನ ಬಿಟ್ಟು ಯೋಚಿಸೋಣ, " ಯಾವುದು ಸರಿ , ಯಾವುದು ತಪ್ಪು ಅನ್ನೋದಕ್ಕಿಂತ ಯಾಕೆ ಹಾಗೆ ಅನ್ನೋದು ಮುಖ್ಯ ಅನಿಸುತ್ತೆ , ಮೇಲಿನ ಸಂಧರ್ಭಗಳಲ್ಲಿ ಅವರು ತೋರಿರುವ ರೀತಿಗಳಿಗೆ ಅವರದೇ ಆದ ಕಾರಣ ಗಳಿರಬಹುದು, ಅವರಿಗೆ ಸರಿ ಎನಿಸಿದ್ದು ಹೊರಗಿನವರಾದ ನಮಗೆ ಸರಿ ಅಥವಾ ತಪ್ಪು ಏನು ಬೇಕಾದರೂ ಅನಿಸಬಹುದು".
    ವ್ಯಕ್ತಿ ಎಂತವನೆ ಆಗಿದ್ದರು ಸತ್ತ ನಂತರ ಅವನ ಮೇಲೆ ದ್ವೇಷ ಸಾಧಿಸುವುದು ಸರಿ ಅಲ್ಲ ಅಂತ ಅಂದುಕೊಂಡರೆ
    ಎಲ್ಲ ಭಯೋತ್ಪಾದಕರು ಹುತಾತ್ಮರೆ ಅಲ್ವ? ಹಾಗಂತ ದ್ವೇಷ ಸಾಧಿಸುವುದು ಸರಿ ಅಲ್ಲ.
    ಅಲ್ಲಿ ಎಲ್ಲ ಅವರವರ ಮನಸ್ಥಿತಿ , ಯೋಚನಾ ಲಹರಿ ಹಾಗೂ ಕೆಲವು ಸಂಧರ್ಭಗಳಲ್ಲಿ ಅವರಲ್ಲಿರುವ ಸ್ವಾರ್ಥದ ಒಂದು ಭಾಗ ಅನ್ನಬಹುದು ಅಷ್ಟೇ.


    ಇಂತಿ
    ವಿನಯ

    ReplyDelete
  7. ಚಿಂತನೆಗೆ ಹಚ್ಚುವ, ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲುವ ಉತ್ತಮ ಬರಹ

    ReplyDelete
  8. ದಿಲೀಪ್....
    ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಸತ್ತ ನಂತರ ದ್ವೇಷ ಸಾಧಿಸುವುದಾದರೂ ಯಾರ ಜೊತೆ ಅಲ್ವಾ?
    ಶ್ಯಾಮಲ

    ReplyDelete
  9. ಉಮೇಶ್ ಸಾರ್...
    ಎರಡನೆಯ ಘಟನೆಯ ವ್ಯಕ್ತಿ ಮತ್ತೆ ಮತ್ತೆ ಅದೇ ತಪ್ಪುಗಳನ್ನೇ ಮಾಡಿ ಕೊನೆಗೂ ಪಶ್ಚಾತ್ತಾಪ ಪಡದೆಯೇ ಹೋದರು. ಇದೇ ಅವರ ದೃಷ್ಟಿಯಲ್ಲಿ ಬದುಕು ಅಲ್ಲವಾ?

    ಶ್ಯಾಮಲ

    ReplyDelete
  10. ಪ್ರಕಾಶ್ ಸರ್ (ಸಿಮೆಂಟು.......)
    ಮಾನಸಿಕವಾಗಿ ದೊಡ್ಡವರೋ ಅಲ್ಲವೋ ಗೊತ್ತಿಲ್ಲ...ಆದರೆ ಹಿಂದಿನ ಭಾವನೆಗಳೇನೇ ಇರಲಿ, ಸಮಾಜದಲ್ಲಿ ಆ ವ್ಯಕ್ತಿಗೆ ಸತ್ತ ನಂತರ ಸಿಗಬೇಕಿದ್ದ ಎಲ್ಲಾ ಮರ್ಯಾದೆಗಳೂ ಸಿಕ್ಕವು... ನೊಂದ ಹೆಣ್ಣಿನ ಅಂತರಂಗದಲ್ಲಿ ಹೊಕ್ಕು ನೋಡಿದವರು ಯಾರು? ಅಲ್ಲೆಂತಹ ಅಗ್ನಿ ಪರ್ವತವಿತ್ತೋ?....ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು......
    ಶ್ಯಾಮಲ

    ReplyDelete
  11. ಗುರು ಸಾರ್.....
    ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಮನಸ್ಸಿಲ್ಲದಿದ್ದರೂ ಕರ್ತವ್ಯ ಎಂದಾದರೂ ಮಾಡಲೇಬೇಕದದ್ದು ಮಾನವೀಯ ಧರ್ಮ... ಆದರೆ ಬದುಕಿದ್ದಷ್ಟು ದಿನವೂ ಆ ವ್ಯಕ್ತಿ ಹೆಂಡತಿಯನ್ನು ಪ್ರೀತಿಸುವ, ಗೌರವಿಸುವ ಮಾನವೀಯ ಧರ್ಮದ ಬಗ್ಗೆ ಯೋಚಿಸಲೇ ಇಲ್ಲ......
    ಶ್ಯಾಮಲ

    ReplyDelete
  12. ತಮ್ಮಾ ವಿನಯ.....
    ವ್ಯಕ್ತಿ ಸತ್ತ ನಂತರ ದ್ವೇಷ ಸಾಧಿಸುವುದು ಖಂಡಿತಾ ಸರಿಯಲ್ಲ. ಭಯೋತ್ಪಾದನೆಯನ್ನು ದ್ವೇಷಿಸುತ್ತೇವೆ, ಖಂಡಿಸುತ್ತೇವೆಯೇ ವಿನ: ಆ ವ್ಯಕ್ತಿಯನ್ನಲ್ಲ. ಅವನು ಯಾವನೇ ಆಗಿದ್ದರೂ ಅವನ ಪ್ರಾಣ ಹೋದನಂತರ ಅದು ಕೇವಲ ಹೆಣವಾಗುತ್ತದೆ, ಅದಕ್ಕ ಸಂಸ್ಕಾರ ಅತ್ಯಗತ್ಯವಾಗಿ ಬೇಕೇ ಬೇಕು.... ಈ ಬರಹ ನಾನು ಎಲ್ಲರೂ ನನ್ನ ಬರವಣಿಗೆ ಮೆಚ್ಚಲಿ ಎಂದು ಬರೆಯಲಿಲ್ಲ.. ನನ್ನ ಮನಸ್ಸಿನ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ ಅಷ್ಟೆ. ಈ ಎರಡೂ ಘಟನೆಗಳನ್ನೂ ನಾನು ಹತ್ತಿರದಿಂದ ನೋಡಿದೆನಾದ್ದರಿಂದ, ನನ್ನ ಮನಸ್ಸು ವಿಚಾರ ಮಾಡಲು ತೊಡಗಿತು.... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಕಣೋ ತಮ್ಮಾ.......

    ReplyDelete
  13. ಪರಾಂಜಪೆ ಸಾರ್.....
    ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು......
    ಶ್ಯಾಮಲ

    ReplyDelete
  14. ಶಿವು ಸಾರ್....
    ಎರಡೂ ಸಂದರ್ಭದಲ್ಲೂ ನಡೆಯಬೇಕಾದ ಅಂತಿಮ ಸಂಸ್ಕಾರ ನಡೆಯಿತು. ಆದರೆ ನೀವೆಂದಂತೆ ಎರಡನೆಯ ಘಟನೆಯಲ್ಲಿ, ಮಾಡಿದವರ ಮನಸ್ಸಿನಲ್ಲಿ ಏನಿತ್ತೋ ಗೊತ್ತಿಲ್ಲ ಅಂತೂ ಎಲ್ಲವೂ ವ್ಯವಸ್ಥಿತವಾಗಿ ನಡೆಯಿತು. ಎರಡರ ಮಧ್ಯೆ ಇರುವ ವ್ಯತ್ಯಾಸವೆಂದರೆ, ಒಬ್ಬರು ಮೊದಲು ಅಯಿಷ್ಟವನ್ನು ತೋರ್ಪಡಿಸಿ, ಆರಕ್ಷಕರ ಭಯಕ್ಕೇನೋ ಎಂಬಂತೆ ಮಾಡಿದರು, ಅದೂ ಕರ್ತವ್ಯವೇ ಆದರೆ ಎರಡನೆಯ ಸಂದರ್ಭದಲ್ಲಿ ಸ್ವಇಚ್ಛೆಯಿಂದ ಮಾಡಿದರು, ಇದೂ ಕರ್ತವ್ಯವೇ... ಅಪ್ರೋಚ್ ಬೇರೆ ಇತ್ತು ಅಷ್ಟೆ ಅಂತ ನನಗನ್ನಿಸಿತು. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ಶ್ಯಾಮಲ

    ReplyDelete
  15. ಅಂತರಂಗದ ಮೃದಂಗ ಕೇಳಲು ಬಂದ ಗೌತಮ್ ಹೆಗಡೆ ಅವರಿಗೆ ಸ್ವಾಗತ..... ನಾನು ನಿಮ್ಮ ಬ್ಲಾಗ್ ನೋಡಿದೆ. ಸ್ವರೂಪವೇ ತುಂಬಾ ಮುದ್ದಾಗಿ, ಸೆಳೆಯುವಂತಿದೆ....ಅಮ್ಮಂದಿರ ಮನಸ್ಸೆಲ್ಲಾ ಹೀಗೇ ಕರಗುತ್ತಲೇ ಇರುತ್ತೇನೋ..... ಮತ್ತೆ ಮತ್ತೆ ಬರುತ್ತಿರಿ ಹೀಗೇ ನನ್ನ ಬ್ಲಾಗ್ ಗೆ. ಧನ್ಯವಾದಗಳು.......
    ಶ್ಯಾಮಲ

    ReplyDelete
  16. ಶ್ಯಾಮಲಾ ಅವರೆ...
    ಬದುಕಿನ ಸಂಬಂಧಗಳು ಹಾಗೂ ಒಂದು ಸಾವಿನ ನಂತರದಲ್ಲಿ ಉಳಿದ ಜೀವಂತ ಭಾವಗಳ ಬಗ್ಗೆ ಯೋಚನೆಗೆ ಹಚ್ಚುವಂಥ ಬರಹ.

    ReplyDelete
  17. ಶಾಂತಲಾ ಅವರೆ.....
    ನನ್ನ ಬ್ಲಾಗ್ ಲೋಕಕ್ಕೆ ನಿಮಗೆ ಆದರದ ಸ್ವಾಗತ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ...ನಿಮ್ಮೆಲ್ಲರ ಪ್ರೋತ್ಸಾಹವೇ ನನ್ನ ಬರಹಕ್ಕೆ ಸ್ಫೂರ್ತಿಯಾಗುವುದು.......ಧನ್ಯವಾದಗಳು.

    ಶ್ಯಾಮಲ

    ReplyDelete
  18. ಉತ್ತಮ ಲೇಖನ ನಿಡಿದ್ದಿರಿ....
    ಅದಕ್ಕೆ ನಾವು ನಾಳೆ ಇರುತ್ತೇವೆಯೋ ಇಲ್ಲವೊ ಎಂಬತ್ತೆ ಬದುಕಬೇಕು. ಮತ್ತು ಇತರರಿಗೆ ಸಹಾಯ ಮಾಡುತ್ತ ಒಳ್ಳೆಯತನ ಬೇಳಿಸಿಕೋಳ್ಳಬೇಕು. ಎಂಬ ಸಂದೇಶ ವನ್ನು ಸಾರುವಂತಹ ಲೇಖನ ತುಂಬಾ ಧನ್ಯವಾದಗಳು.

    ReplyDelete
  19. ಗೋಪಾಲ್ ಅವರೆ
    ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ನಾವೆಷ್ಟೇ ವೈರಾಗ್ಯದಿಂದ ಬದುಕುತ್ತೇವೆಂದರೂ, ಈ ಸಮಾಜ ಮತ್ತು ಬದುಕು ನಮ್ಮನ್ನು ಸ್ಥಿತಪ್ರಜ್ಞರಂತಿರಲು ಬಿಡುವುದಿಲ್ಲ ಅಲ್ಲವಾ? ಹೌದು ನಮ್ಮ ಕೈಲಾದ ಸಹಾಯ ಖಂಡಿತಾ ಮಾಡಲೇಬೇಕು........

    ಶ್ಯಾಮಲ

    ReplyDelete
  20. ನಿಮ್ಮ ಈ ಬರಹ ನನಗೆ ವೈಯಕ್ತಿಕವಾಗಿ ಕೂಡ ಮುಖ್ಯವೆನಿಸಿದೆ. ಮೊದಲ ಪ್ರಕರಣದಲ್ಲಿ ಶವವನ್ನು ಸ್ವೀಕರಿಸಲು ನಿರಾಕರಿಸಿದ್ದು ಎಲ್ಲ ರೀತಿಯಿಂದಲೂ ತಪ್ಪು. ಮೃತದೇಹಕ್ಕೆ ಅಗೌರವ ತೋರಿಸುವ ಯಾವುದೇ ವಿಧಾನ ಕಾನೂನು ರೀತ್ಯ ಶಿಕ್ಷಾರ್ಹ ಅಪರಾಧ ಕೂಡ. ಮತ್ತೆ, ಅಂಥ ನಡವಳಿಕೆಯಿಂದ ಸತ್ತ ವ್ಯಕ್ತಿಯಂತೂ ತಿದ್ದಿಕೊಳ್ಳುವುದು ಸಾಧ್ಯವಿಲ್ಲ ಎನ್ನುವ ಕಾರಣಕ್ಕೂ ದ್ವೇಷ, ಅಸಮಾಧಾನಗಳೆಲ್ಲ ಅರ್ಥ ಕಳೆದುಕೊಳ್ಳುತ್ತವೆ ಎನ್ನುವುದು ಕೂಡ ಸರಿಯೇ. ಆದರೆ, ಒಂದು ಕ್ಷಣ ಭಾವಾತೀರೇಕದ ಈ ತಪ್ಪನ್ನು ಮರೆತು, ಈ ಕ್ರಿಯೆಗೆ ಕಾರಣವಾಗಿರಬಹುದಾದ - ಸತ್ತವ್ಯಕ್ತಿಯ ಕುರಿತ ಭಾವನೆಗಳನ್ನು ಮಾತ್ರ ನೋಡುವುದಾದರೆ ಅವರ ನಡವಳಿಕೆಯಲ್ಲಿ ಸಮಾಜಕ್ಕೆ ಖಂಡಿತವಾಗಿಯೂ ಒಂದು ಸಂದೇಶವಿದೆ.

    ಮನುಷ್ಯರಾಗಿ ಹುಟ್ಟಿಬಂದಿರುವ ನಮಗೆ ಸಂಬಂಧಗಳ ಬಗ್ಗೆ, ಬದುಕಿನ ಒಟ್ಟಂದವನ್ನು ಕಾಯ್ದುಕೊಳ್ಳುವುದರ ಬಗ್ಗೆ, ತನ್ನನ್ನು ನಂಬಿದವರ ಬದುಕು-ಭವಿಷ್ಯಗಳನ್ನು ಕೆಡಿಸದೇ ಬದುಕಬೇಕಾಗಿರುವ ಜವಾಬ್ದಾರಿಯ ಬಗ್ಗೆ ಪ್ರಜ್ಞೆ ಇರಬೇಕು. ಇಲ್ಲಿ ನಾಯಿ-ನರಿ-ಹಂದಿಗಳಂಥ ತ್ಯಾಜ್ಯಗಳನ್ನು ತಿಂದು ಬದುಕುವ ಪ್ರಾಣಿಗಳು ಕೂಡ ಹೊಟ್ಟೆಪಾಡು-ಸಂಸಾರ-ಮಕ್ಕಳುಮರಿ-ಕಾಮ-ಪ್ರೇಮ ಎಲ್ಲ ನಡೆಸುತ್ತವೆ. ಮನುಷ್ಯ ಪ್ರಾಣಿಗಳಿಗಿಂತ ಕೀಳಾಗುವುದು ಬದುಕಿಗೆ-ಸಂಬಂಧಗಳಿಗೆ ಮತ್ತು ತನ್ನನ್ನು ಅವಲಂಬಿಸಿದವರಿಗೆ ಇರುವ ತನ್ನ ಬದ್ಧತೆಯನ್ನು ಮರೆತಾಗ. ಇಂಥ ಬೇಜವಾಬ್ದಾರ ಮನುಷ್ಯರನ್ನು ಸಮಾಜ-ಒಡಹುಟ್ಟಿದವರು-ಗುರು-ಹಿರಿಯರು ತಿದ್ದಬೇಕಾಗುತ್ತದೆ, ಇಲ್ಲದಿದ್ದರೆ ಅವರ ವ್ಯಕ್ತಿತ್ವವನ್ನು ಸಹಿಸಿಕೊಂಡು ಪೋಷಿಸಿದ್ದಕ್ಕೆ ಎಲ್ಲರೂ ಹೊಣೆಗಾರರೇ ಆಗುತ್ತಾರೆ ಎಂಬುದು ಸತ್ಯ. ಆದರೂ ಎಲ್ಲ ಪ್ರಯತ್ನವನ್ನು ಮೀರಿ ಅಂಥವರು ಭಂಡತನದಿಂದ ನಮ್ಮೆದುರೇ ಎದೆ ಸೆಟೆಸಿಕೊಂಡು ಬದುಕುತ್ತಿರುತ್ತಾರೆ. ಇದಕ್ಕೇನು ಮಾಡುತ್ತೀರಿ? ನಾನು ಕೆಲಸ ಮಾಡುವಲ್ಲಿಯೇ ಇಂಥ ಕೆಲವು ಕುಡುಕರು-ವ್ಯಭಿಚಾರಿಗಳು ಮತ್ತು ಜೂಜುಕೋರ ಬೇಜವಾಬ್ದಾರ ವ್ಯಕ್ತಿಗಳನ್ನು ನಾನು ಕಂಡಿದ್ದೇನೆ. ಅವರ ಹೆಂಡಿರು-ಮಕ್ಕಳು ಹೆಜ್ಜೆ ಹೆಜ್ಜೆಗೂ ಅನುಭವಿಸುವ ನೋವು-ಅಪಮಾನ-ಅವರ ಸ್ಥಿತಿಯನ್ನು ಬಳಸಿಕೊಳ್ಳಲು ಮುಂದಾಗುವ ಬಲಾಢ್ಯರ ಶೋಷಣೆ ಎಲ್ಲವನ್ನೂ ಕಂಡಿದ್ದೇನೆ. ಬಲಾಢ್ಯರು ಎಂದರೆ ಶ್ರೀಮಂತರು ಅಂತ ಅಲ್ಲ, ನನ್ನಂಥ ವಿದ್ಯಾವಂತ ಮಧ್ಯಮವರ್ಗದವರೂ ಬಂದರು ಅದರಲ್ಲಿ. ವಿಪರ್ಯಾಸವೆಂದರೆ, ಇಂಥ ಗಂಡಸರ ಕೆಲಸ ಹೋದಾಗಲೂ ಪೆಟ್ಟು ಬೀಳುವುದು ಈ ಹೆಂಡಿರು ಮಕ್ಕಳಿಗೇ ಹೊರತು ಅವರು ಮಾತ್ರ ಇನ್ನೆಲ್ಲೋ ಆಯ್ದುಕೊಂಡು ತಿಂದು-ಕುಡಿದು-ಮಲಗಿ ನಿಶ್ಚಿಂತೆಯಿಂದಲೇ ಇರುವಂತೆ ಕಾಣುತ್ತಾರೆ.

    ಇಂಥವರು ಸತ್ತಾಗ ಅವರ ಅದೇ ಹೆಂಡಿರು ಮಕ್ಕಳು ನೀವು ಎರಡನೆಯ ಪ್ರಕರಣದಲ್ಲಿ ಹೇಳಿದ ಹಾಗೆ ಎಲ್ಲ ಮರೆತು ಸಹಜವಾಗಿಯೇ ಅಂತ್ಯ ಸಂಸ್ಕಾರ ಇತ್ಯಾದಿ ಮಾಡುತ್ತಾರೆ ಕೂಡ, ಸಮಾಜಕ್ಕೆ ಹೆದರಿಯಾದರೂ! ಮೊದಲನೆಯ ಪ್ರಕರಣ ಕೇವಲ ಒಂದು ಅಪವಾದದಂಥ ವಿದ್ಯಮಾನ ಅಷ್ಟೇ. ನೀವು ಒಂದು ಕಡೆ ಪ್ರತಿಕ್ರಿಯೆಗೆ ಸ್ಪಂದಿಸುತ್ತ ಬರೆದಿದ್ದೀರಿ, "ನೊಂದ ಹೆಣ್ಣಿನ ಅಂತರಂಗದಲ್ಲಿ ಹೊಕ್ಕು ನೋಡಿದವರು ಯಾರು? ಅಲ್ಲೆಂತಹ ಅಗ್ನಿ ಪರ್ವತವಿತ್ತೋ?.... " ನನಗೆ ಇದೇ ಮುಖ್ಯವಾಗಿ ಕಾಣುತ್ತದೆ. ಯಾಕೆಂದರೆ, ಎಷ್ಟೋ ಸಂದರ್ಭದಲ್ಲಿ ಸಹಾಯಕ್ಕೆ ಬರುವ ಯಾರೂ ಇಲ್ಲದ ಇಂಥವರಿಗೆ ಇರುವ ಪ್ರಾಯಕ್ಕೆ ಬಂದ, ಮದುವೆ ವಯಸ್ಸಿನ ಹುಡುಗಿಯರ ಬದುಕು-ಭವಿಷ್ಯ ಏನಾಗುತ್ತದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಮುಂದೆ ಸಂಸಾರ ಸಾಗಿಸಲು ಆತನ ಹೆಂಡತಿ ಯಾರ್ಯಾರ ಮರ್ಜಿ ಹಿಡಿಯಬೇಕಾಗುತ್ತದೆ, ಅದೆಲ್ಲ ಅವಳನ್ನು, ಅವಳ ಮಕ್ಕಳನ್ನು ಯಾವ ಹಾದಿಗೆ ನೂಕುತ್ತದೆ ಎನ್ನುವುದು ಕೂಡ ನಮಗೆ ತಿಳಿಯುವುದಿಲ್ಲ. ಅನೇಕ ಬಾರಿ ಸಮಾಜದ ಪುಂಡು ಪೋಕರಿಗಳು, ರೌಡಿ-ದಾದಾಗಳು, ಭಯೋತ್ಪಾದಕರು, ಸೂಳೆಯರೆಂದು ನಾವು ತುಚ್ಛೀಕರಿಸುವ ಹೆಣ್ಣುಮಕ್ಕಳು ಇಲ್ಲಿಂದಲೇ ಜನ್ಮ ತಳೆಯುತ್ತಾರೆ. ಅಂಥ ವ್ಯಕ್ತಿಯ ಸಾವಿನೊಂದಿಗೆ ಮುಗಿಯುವುದು ಆತನ ಬದುಕು ಮಾತ್ರ. ಆದರೆ ಬದುಕಿರುವವರ ನರಕ ಮಾತ್ರ ಅಲ್ಲಿಂದಲೇ ಘೋರವಾಗುತ್ತ ಹೋಗುತ್ತದೆ. ಇಂಥ ನರಕಕ್ಕೆ ತಮ್ಮನ್ನು ಶಾಶ್ವತವಾಗಿ ತಳ್ಳಿದ ವ್ಯಕ್ತಿಯ ಬಗ್ಗೆ ಆತ ಸತ್ತ ಮಾತ್ರಕ್ಕೆ ಪ್ರೀತಿ-ಶ್ರದ್ಧೆ ಬಂದೀತೆ? ಸಂಸ್ಕಾರ ನಡೆಸಲೇ ಬೇಕು, ನಿಜ, ನಡೆಸುತ್ತಾರೆ. ಆದರೆ ಯಾರ, ಯಾವುದರ ಸಂಸ್ಕಾರ ಅದು ಎನ್ನುವುದು ಎಲ್ಲರಿಗೂ ಕಾಣಿಸುವುದಿಲ್ಲ.

    ReplyDelete