Wednesday, November 4, 2009

ನವಾವರಣ ಕೃತಿಗಳು - ೪

ಶ್ರೀ ಮಹಾಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯನ ಪ್ರಾರ್ಥನೆಯ ನಂತರ, ನಾವು ದೇವಿ ಕಮಲಾಂಬಿಕೆಯನ್ನೇ ಧ್ಯಾನಿಸುತ್ತೇವೆ. ಈ ಧ್ಯಾನ ಕೃತಿಯನ್ನು ದೀಕ್ಷಿತರು ೮ನೇ ಮೇಳ ಹನುಮ ತೋಡಿ ರಾಗದಲ್ಲಿ ರಚಿಸಿದ್ದಾರೆ. ಈ ಕೃತಿಯು ತೋಡಿ ರಾಗದ ನಿಷಾದ ಸ್ವರದಿಂದ ಆರಂಭವಾಗುವುದು ಮತ್ತು ಗಾಯಕರನ್ನು ಶುರುವಿನಿಂದಲೇ ಭಕ್ತಿಯ ದಾರಿಗೆ ಎಳೆದುಕೊಂಡುಬಿಡುತ್ತದೆ... ಸ್ವರ ಪ್ರಸ್ತಾರ ಇಡೀ ಕೃತಿಯಲ್ಲಿ, ತೋಡಿ ರಾಗದ ಸಾರವನ್ನು ಪರಿಪೂರ್ಣವಾಗಿ ಬಿಂಬಿಸುತ್ತದೆ. ಸಂಗೀತಗಾರರಿಗೆ ಈ ಕೃತಿ ಹಾಡುವುದೊಂಥರಾ ಆತ್ಮ ತೃಪ್ತಿಕೊಡುತ್ತದೆ.

ಪಲ್ಲವಿ

ಕಮಲಾಂಬಿಕೆಯೇ... ಅಂಬ.... ಕಮಲಾಂಬಿಕೇ ಆಶೃತ ಕಲ್ಪಲತಿಕೇ... ಚಂಡಿಕೇ...
ಕಮನೀಯಾರುಣಾಂಶುಕೇ..... ಕರವಿಧೃತ ಶುಕೇ ಮಾಮವ..... ||

ಅನುಪಲ್ಲವಿ

ಕಮಲಾಸನಾನಿ ಪೂಜಿತ... ಕಮಲಪದೇ... ಬಹು ವರದೇ....
ಕಮಲಾಲಯ ತೀರ್ಥವೈಭವೇ... ಶಿವೇ.... ಕರುಣಾರ್ಣವೇ...... ||

ಚರಣ

ಸಕಲಲೋಕ ನಾಯಿಕೇ... ಸಂಗೀತ ರಸಿಕೇ... ಸುಕವಿತ್ವ ಪ್ರದಾಯಿಕೇ...
ಸುಂದರಿಗತ ಮಾಯಿಕೇ.... ವಿಕಳೇ... ಬರಮುಕ್ತಿದಾನ ನಿಪುಣೇ....
ಅಘಹರಣೇ..... ವಿಯದಾದಿ ಭೂತ ಕಿರಣೇ... ವಿನೋದ ಚರಣೇ... ಅರುಣೇ...
ಸಕಲೇ ಗುರುಗುಹ ಚರಣೇ..... ಸದಾಶಿವಾಂತ:ಕರಣೇ.....
ಅಕಚಟತಪಾದಿವರ್ಣೇ.... ಅಖಂಡೈಕರಸಪೂರ್ಣೇ..... ||


ಭಕ್ತರಿಗೆ ಮತ್ತು ನಿನ್ನನ್ನು ಆಶ್ರಯಿಸಿದವರಿಗೆ ಕಲ್ಪಲತೆಯಂತೆ, ಬೇಡಿದ್ದನ್ನೆಲ್ಲಾ, ಇಷ್ಟಾರ್ಥಗಳನ್ನೆಲ್ಲಾ ಕೊಡುವವಳೇ, ಚಂಡಿಕಾರೂಪದಿಂದ ದುಷ್ಟರನ್ನು ಸಂಹರಿಸುವವಳೇ, ಸುಂದರವಾದ ಕೆಂಪು ವಸ್ತ್ರವನ್ನುಟ್ಟಿರುವವಳೇ, ಕೈಯಲ್ಲಿ ಗಿಣಿಯನ್ನು ಹಿಡಿದು, ಅತ್ಯಂತ ಸೌಂದರ್ಯವತಿಯಾದವಳೇ, ಪ್ರಜ್ವಲಿಸುತ್ತಿರುವವಳೇ, ಕಮಲಾಂಬಿಕೆಯೇ... ನನ್ನನ್ನು ರಕ್ಷಿಸು, ಸಂರಕ್ಷಿಸು ಎಂದು ಆರಂಭಿಸುತ್ತಾರೆ ದೀಕ್ಷಿತರು...

ಬ್ರಹ್ಮಾದಿ ಮೊದಲುಗೊಂಡು ಇಡೀ ದೇವತಾ ಸಮೂಹದಿಂದಲೇ ಪುಜಿಸಲ್ಪಡುವವಳೇ... ಪಾದ ಕಮಲಗಳುಳ್ಳವಳೇ.. ನಾವು ಬೇಡಿದ್ದಕ್ಕಿನಾ ಹೆಚ್ಚಾಗಿಯೇ ವರವನ್ನು ಕರುಣಿಸುವಂಥಹ, ಕರುಣಾಮಯಿಯೇ.. ಮಾತೆಯೇ.. ತಿರುವಾರೂರಿನಲ್ಲಿರುವ ಕಮಲಾಂಬಾ ದೇವಸ್ಥಾನದ ಸರೋವರವಾದ ಬ್ರಹ್ಮತೀರ್ಥದ ವೈಭವವುಳ್ಳವಳೇ, ಶಿವೇ... ಮಂಗಳ ಸ್ವರೂಪಿಣಿಯೇ... ನನ್ನನ್ನು ರಕ್ಷಿಸು... ಸಂರಕ್ಷಿಸು ತಾಯೇ...

ಚರಣದಲ್ಲಿ ದೀಕ್ಷಿತರು ದೇವಿಯನ್ನು ಸಕಲ ಲೋಕದ ನಾಯಕಿಯೇ.. ಜಗನ್ಮಾತೆಯೇ... ಜಗತ್ತಿಗೇ ಒಡೆಯಳೇ... ಸಂಗೀತವನ್ನು ರಸಿಕತೆಯಿಂದ ಅನುಭವಿಸುವವಳೇ... ಗಾನಪ್ರಿಯಳೇ... ಸುಖವನ್ನು ದಯಪಾಲಿಸುವವಳೇ.. ವಾಕ್ಚಾತುರ್ಯ ನೀಡುವವಳೇ... ಸುಂದರೇಶ್ವರನನ್ನು ಮೋಹಿಸಿದ, ಅತ್ಯಂತ ಮೋಹಕಳಾದ, ಸುಂದರಾಂಗಿಯೇ... ವಿದೇಹ ಮುಕ್ತಿದಾನವನ್ನು ದಯಪಾಲಿಸುವಲ್ಲಿ ನಿಪುಣಳೇ ಆಗಿರುವ ದೇವಿ ಕಮಲಾಂಬಿಕೆಯೇ ರಕ್ಷಿಸು... ಓ ದೇವಿಯೇ ನೀನು ಪಾಪಗಳನ್ನು ಪರಿಹರಿಸುವವಳೂ, ಪಂಚಭೂತಗಳನ್ನು ಹಿಡಿತದಲ್ಲಿಟ್ಟುಕೊಂಡಿರುವವಳೂ, ಪ್ರಕಾಶಿಸುವಂತೆ ಮಾಡುವವಳೂ, ವಿನೋದಶೀಲಳೂ, ಸಕಲ ಚರಾಚರಗಳನ್ನೂ ನಿಯಂತ್ರಿಸುವವಳೂ... ಸ್ಕಂದನ ಮಾತೆಯೂ... ಸದಾಶಿವನ ಸತಿಯೂ.. ಜಗತ್ಸ್ವರೂಪಿಣಿಯೂ, ಸೌಂದರ್ಯವತಿಯೂ... ಕಮಲಾಂಬಿಕೆಯೂ ಆದ ತಾಯಿಯೇ ನನ್ನನ್ನು ರಕ್ಷಿಸು ಎಂದು ದೇವಿಯಲ್ಲಿ ಮೊರೆಯಿಡುತ್ತಾರೆ...


ಪ್ರಥಮಾವರಣ ಕೃತಿ :

ಆನಂದಭೈರವಿ ರಾಗದಲ್ಲಿ ರಚಿಸಲ್ಪಟ್ಟಿದೆ. ಮುದ ನೀಡುವ ಆನಂದಭೈರವಿ ರಾಗ ಈ ಕೃತಿಯನ್ನು ಹಾಡಿದಾಗ ಮನಸ್ಸಿಗೆ ಸಮಾಧಾನ ತಂದುಕೊಡುತ್ತದೆ. ಶಾಂತವಾದ, ಧೃಡ ಮನಸ್ಸನ್ನು ದೇವಿಯ ಪಾದಾರವಿಂದಗಳಲ್ಲಿ ನೆಲೆಗೊಳಿಸರು ವೇದಿಕೆ ಸಿದ್ಧಪಡಿಸುವಂತೆ ಮಾಡುತ್ತದೆ. ಮೊದಲನೆಯ ಆವರಣ ಪೂಜೆ ಮಾಡಲು ಆರಂಭಿಸಿದೊಡನೆಯೇ ಆರಾಧಕನ ಮನಸ್ಸು ಪಕ್ವಗೊಂಡು, ದೇವಿಯ ಆರಾಧನೆಯಲ್ಲಿ ತಲ್ಲೀನವಾಗಿ ಬಿಡುತ್ತದೆ.

ಪಲ್ಲವಿ

ಕಮಲಾಂಬಾ ಸಂರಕ್ಷತು ಮಾಂ.... ಹೃತ್ಕಮಲಾ ನಗರ ನಿವಾಸಿನೀ... ಅಂಬ... ||

ಅನುಪಲ್ಲವಿ

ಸುಮನ ಸಾರಾಧಿತಾಬ್ಜಮುಖೀ... ಸುಂದರಮನ: ಪ್ರಿಯಕರ ಸಖೀ...
ಕಮಲಜಾನಂದ ಬೋಧಸುಖೀ... ಕಾಂತಾಧಾರ ಪಂಜರಶುಕೀ..... ||

ಚರಣ

ತ್ರಿಪುರಾದಿ ಚಕ್ರೇಶ್ವರೀ... ಅಣಿಮಾದಿ ಸಿದ್ಧೀಶ್ವರೀ... ನಿತ್ಯಕಾಮೇಶ್ವರೀ...
ಕ್ಷಿತಿಪುರ ತ್ರೈಲೋಕ್ಯಮೋಹನ ಚಕ್ರವರ್ತಿನೀ... ಪ್ರಕಟಯೋಗಿನೀ...
ಸುರರಿಪು ಮಹಿಷಾಸುರಾದಿ ಮರ್ಧಿನೀ... ನಿಗಮಪುರಾಣಾದಿ ಸಂವೇದಿನೀ.. ||

ಮಧ್ಯಮಕಾಲದ ಸಾಹಿತ್ಯ

ತ್ರಿಪುರೇಶೀ ಗುರುಗುಹ ಜನನೀ... ತ್ರಿಪುರ ಭಂಜನ ರಂಜನೀ..
ಮಧುರಿಪು ಸಹೋದರೀ ತಲೋದರೀ... ತ್ರಿಪುರಸುಂದರೀ ಮಹೇಶ್ವರೀ.... ||

ನನ್ನ ಹೃದಯಕಮಲದಲ್ಲಿ ನೆಲೆಸಿರುವವಳೇ ಮತ್ತು ತಿರುವಾರೂರು ಜಿಲ್ಲೆಯ ಕಮಲಾನಗರವೆಂಬ ಜಾಗದಲ್ಲಿ ನೆಲೆಸಿರುವ ಓ ಕಮಲಾಂಬಿಕೆಯೇ.. ನನ್ನನ್ನು ರಕ್ಷಿಸಲಿ ಎಂದು ದೀಕ್ಷಿತರು ದೇವಿಯನ್ನು ಪ್ರಾರ್ಥಿಸುತ್ತಾ ಈ ಪ್ರಥಮಾವರಣ ಕೃತಿಯನ್ನು ಶುರುಮಾಡುತ್ತಾರೆ...

ಅನುಪಲ್ಲವಿಯಲ್ಲಿ ಮುಂದುವರೆಯುತ್ತಾ ದೀಕ್ಷಿತರು ಕಮಲದಂತೆ ಸುಂದರ ಮುಖಾರವಿಂದವುಳ್ಳವಳೇ... ಸಕಲ ದೇವತೆಗಳಿಂದಲೂ ಪೂಜಿಸಲ್ಪಡುವವಳೇ... ಸುಂದರೇಶನ ಪ್ರಿಯಕರಿಯೇ.. ಬ್ರಹ್ಮಾನಂದಾನುಭವದಿಂದ ಸುಖಿಸುವವಳೇ... ಓಂಕಾರವೆಂಬ ಸುಂದರವಾದ ಪಂಜರದಲ್ಲಿ ವಿಹರಿಸುತ್ತಿರುವ ಗಿಳಿಯೂ ಆದ ಓ ಕಮಲಾಂಬಿಕೆಯೇ ನನ್ನನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತಾರೆ...

ದೇವಿಯನ್ನು ತ್ರಿಪುರಾದಿ ಚಕ್ರೇಶ್ವರೀ ಎಂದೆನ್ನುತ್ತಾರೆ, ಅಂದರೆ ನವಚಕ್ರಗಳಾದ ೧) ತ್ರೈಲೋಕ್ಯ ಮೋಹನ ಚಕ್ರ.. ೨) ಸರ್ವಾಶಾಪರಿಪೂರಕ ಚಕ್ರ... ೩) ಸರ್ವ ಸಂಕ್ಷೋಭಣ ಚಕ್ರ... ೪) ಸರ್ವ ಸೌಭಾಗ್ಯದಾಯಕ ಚಕ್ರ... ೫) ಸರ್ವಾರ್ಥ ಸಾಧಕ ಚಕ್ರ.. ೬) ಸರ್ವ ರಕ್ಷಾಕರ ಚಕ್ರ... ೭) ಸರ್ವ ರೋಗಹರ ಚಕ್ರ... ೮) ಸರ್ವ ಸಿದ್ಧಿ ಪ್ರದಾಯಕ ಚಕ್ರ... ೯) ಸರ್ವಾನಂದಮಯ ಚಕ್ರ... ಇವುಗಳ ಅಂದರೆ ಈ ಚಕ್ರಗಳಿಗೆಲ್ಲಾ ಸಾಮ್ರಾಜ್ಞೀ ಎನ್ನುತ್ತಾರೆ. ಇಷ್ಟೇ ಅಲ್ಲ ಅಣಿಮಾದಿಯಾದ ಅಷ್ಟ ಸಿದ್ಧಿಗಳಿಗೆ ಅಂದರೆ .. ೧) ಅಣಿಮಾ.. ೨) ಮಹಿಮಾ.. ೩) ಈಶಿತ್ವ.. ೪) ವಶಿತ್ವ... ೫) ಪ್ರಾಕಾಮ್ಯ... ೬) ಭಕ್ತಿ... ೭) ಇಚ್ಛಾ... ೮) ಪ್ರಾಪ್ತಿ... ಸಿದ್ಧಿಗಳಿಗೆಲ್ಲಾ ಈ ದೇವಿ ಕಮಲಾಂಬಿಕೆಯೇ ಅಧೀಶ್ವರಿ.... ಒಡೆಯಳು..... ಕಾರಣ ಕರ್ತಳು....
ನಿತ್ಯ ಕಾಮೇಶ್ವರಿ ಎಂಬ ೧೫ ನಿತ್ಯೆಗಳಿಗೂ... ಅಂದರೆ.. ೧) ಕಾಮೇಶ್ವರಿ... ೨) ಭಗಮಾಲಿನಿ... ೩) ನಿತ್ಯಕ್ಲಿನ್ನಾ... ೪) ಭೇರುಂಡಾ... ೫) ವಹ್ನಿ ವಾಹಿನಿ.... ೬)
ಮಹಾ ವಿದ್ಯೇಶ್ವರಿ... ೭) ಶಿವದೂತಿ... ೮) ತ್ವರಿತಾ... ೯) ಕುಳ ಸುಂದರಿ... ೧೦) ನಿತ್ಯಾ... ೧೧) ನೀಲಪತಾಕಾ... ೧೨) ವಿಜಯಾ... ೧೩) ಸರ್ವ ಮಂಗಳ... ೧೪) ಜ್ವಾಲಾಮಾಲಿನಿ... ಮತ್ತು ೧೫) ಚಿತ್ರಾ... ಮೊದಲಾದವುಗಳಿಗೆ ಯಜಮಾನಿಯೂ... ಒಡೆಯಳೂ.... ತ್ರೈಲೋಕ್ಯ ಅಥವಾ ಭೂಪುರವೆಂಬ ಮೂರು ಲೋಕಗಳಿಗೂ... ಮೋಹನರೂಪಳಾದ, ಚಕ್ರವರ್ತಿನಿಯೂ... ಸಾಮ್ರಾಜ್ಞಿಯೂ, ಪ್ರಕಟಯೋಗಿನೀ ಎಂಬ ಹೆಸರು ಗಳಿಸಿದವಳೂ... ಸುರರ ಶತೃಗಳಾದ ಮಹಿಷಾಸುರ ಮುಂತಾದ ಅಸುರರನ್ನು ಸಂಹರಿಸಿದವಳೂ.... ವೇದ ಪುರಾಣಾದಿ ಸಕಲ ಶಾಸ್ತ್ರಗಳನ್ನು ಬಲ್ಲವಳೂ.... ಪರಶಿವನ ಮಡದಿಯೂ... ಗುರುಗುಹ / ಷಣ್ಮುಖನ ಮಾತೆಯೂ... ತ್ರಿಪುರಾಸುರನನ್ನು ನಿಗ್ರಹಿಸಿ ತುಷ್ಟಿ ಪಡೆದವಳೂ.... ಮಹಾ ವಿಷ್ಣುವಿನ ಪ್ರಿಯ ಸಹೋದರಿಯೂ ಆದ ಕಮಲಾಂಬಿಕೆಯು ನನ್ನನ್ನು ಪಾಲಿಸಲಿ ಎಂದು ಪ್ರಾರ್ಥಿಸುತ್ತಾರೆ....


ಶ್ರೀ ವಾಮಕೇಶ್ವರ ತಂತ್ರದಲ್ಲಿ ಬರುವ ಶ್ರೀ ಉಮಾ ಮಹೇಶ್ವರರ ಸಂವಾದ, ದೇವಿ ಖಡ್ಗಮಾಲಾ ಸ್ತೋತ್ರದಲ್ಲಿ, ದೇವಿಯ ಒಡೆತನದ ನವ ಚಕ್ರಗಳು, ನವ ಸಿದ್ಧಿಗಳು, ೧೫ ನಿತ್ಯೆಗಳೂ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಇಷ್ಟೇ ಅಲ್ಲದೆ ದೇವಿಯನ್ನು ಅತಿ ರಹಸ್ಯಯೋಗಿನಿ, ತ್ರಿಪುರೇ, ತ್ರಿಪುರೇಶಿ, ತ್ರಿಪುರ ಸುಂದರಿ, ತ್ರಿಪುರವಾಸಿನಿ, ತ್ರಿಪುರಾಶ್ರೀ:, ತ್ರಿಪುರಮಾಲಿನಿ, ತ್ರಿಪುರಾಸಿದ್ಧೇ, ತ್ರಿಪುರಾಂಬಾ, ಮಹಾತ್ರಿಪುರಸುಂದರಿ, ಮಹಾಮಹೇಶ್ವರಿ, ಮಹಾಮಹಾರಾಜ್ಞೀ, ಮಹಾಮಹಾ ಶಕ್ತೇ, ಮಹಾಮಹಾ ಸ್ಕಂದೇ, ಮಹಾಮಹಾಶಯೇ, ಮಹಾಮಹಾ ಶ್ರೀ ಚಕ್ರನಗರ ಸಾಮ್ರಾಜ್ಞೀ.... ನಮಸ್ತೇ... ನಮಸ್ತೇ... ಎಂದೆಲ್ಲಾ ವರ್ಣಿಸುತ್ತಾರೆ. ಈ ದೇವಿ ಖಡ್ಗಮಾಲಾ ಸ್ತೋತ್ರವನ್ನು ದಿನವೂ ಪಠಿಸುವುದರಿಂದ ನಮ್ಮ ಎಲ್ಲಾ ಕಷ್ಟಗಳನ್ನೂ ದೇವಿಯ ಖಡ್ಗ ಕತ್ತರಿಸಿ ಎಸೆಯುತ್ತದೆಂಬ ನಂಬಿಕೆ ಕೂಡ ಇದೆ....






8 comments:

  1. ಶ್ಯಾಮಲ,
    ಸರಣಿ ಚೆನ್ನಾಗಿ ಮೂಡಿಬರ್ತಿದೆ..
    ಹೀಗೇ ಮುಂದುವರೆಯಲಿ..

    ತಡವಾದ ಪ್ರತಿಕ್ರಿಯೆಗೆ ಕ್ಷಮೆಯಿರಲಿ..

    -ಅನಿಲ್

    ReplyDelete
  2. ಸ್ವಾಗತ ಅನಿಲ್...

    ತುಂಬಾ ದಿನಗಳ ನಂತರ ಬರುತ್ತಿದ್ದೀರಿ. ತಡವಾದರೂ ಪರವಾಗಿಲ್ಲ... ಓದಿದಿರಲ್ಲ... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು... ಹೀಗೇ ಬರುತ್ತಿರಿ...

    ಶ್ಯಾಮಲ

    ReplyDelete
  3. ಶ್ಯಾಮಲ ಮೇಡಮ್,

    ನಿಮ್ಮ ಬ್ಲಾಗಿಗೆ ಬರಬೇಕಾದರೆ ಸ್ವಲ್ಪ ಮನಸ್ಥಿತಿಯನ್ನು ಸಂಗೀತಕ್ಕೆ ಭಕ್ತಿಗೆ ಬದಲಿಸಿಕೊಂಡು ಬರಬೇಕು. ಏಕೆಂದರೆ ಇತ್ತೀಚೆಗೆ ದೀಕ್ಷಿತರ ಬಗ್ಗೆ ಅವರ ಅನೇಕ ರಾಗಗಳ ಬಗ್ಗೆ ತುಂಬಾ ಚೆನ್ನಾಗಿ ವಿವರಿಸುತ್ತಿದ್ದೀರಿ...

    ಧನ್ಯವಾದಗಳು.

    ReplyDelete
  4. ಶಿವು ಸಾರ್...
    ಧನ್ಯವಾದಗಳು ಸಾರ್... ಇಲ್ಲಿಗೆ ಬಂದರೆ ಮನಸ್ಥಿತಿ ತಾನಾಗೆ ಸಂಗೀತದ ಕಡೆ ವಾಲುತ್ತದೆ..... ಇದೊಂದು ಸರಣಿ ಬರಹ. ಒಟ್ಟು ೯ (ನವಾವರಣ) ಕೃತಿಗಳಿವೆ... ನಾನಿನ್ನೂ ೧ನೆಯದು ಬರೆದಿದ್ದೇನೆ. ಇದೊಂಥರಾ ತಪಸ್ಸಿನ ತರಹ ಆಗಿಹೋಗಿದೆ ನನಗೆ.... ಏಕತಾನತೆ ಮುರಿಯಲು ಇನ್ನೇನಾದರೂ ಬರೀತೀನಿ ತಡೀರಿ... ನಿಮ್ಮ ಪುಸ್ತಕ ಬಿಡುಗಡೆಯ ಸಂಭ್ರಮದ ನಂತರ ಓದಬಹುದು....
    ಶ್ಯಾಮಲ

    ReplyDelete
  5. ಶಾಮಲಾವ್ರೆ, ಬ್ಲಾಗ್ ಪೋಸ್ಟ್ಗಳ ಏಕತಾನತೆ ಮುರಿವಂತೆ ಮೂಡಿಬರುತ್ತಿರುವ ನಿಮ್ಮ ಸರಣಿ ನಮಗೆ ವಿಭಿನ್ನ ವಿಚಾರಗಳನ್ನು ತಿಳಿಸುತ್ತಿದೆ...ಧನ್ಯವಾದಗಳು.

    ReplyDelete
  6. ಆಜಾದ್ ಸಾರ್...
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.... ಲೇಖನ ಮೆಚ್ಚಿದ್ದಕ್ಕೆ ಖುಷಿ ಆಯಿತು. ಹೀಗೇ ಬರುತ್ತಿರಿ....

    ಶ್ಯಾಮಲ

    ReplyDelete
  7. ಮೇಡಂ,
    ನಿಮ್ಮ ಬ್ಲಾಗಿಗೆ ಮೊದಲ ಬಾರಿಗೆ ಬಂದೆ, ಸಂಗೀತದ ಒಳ್ಳೆಯ ಪಾಠ ಲಭಿಸಿದೆ
    ತುಂಬಾ ವಿವರವಾಗಿ ಬರೆದಿದ್ದೀರ
    ಇಷ್ಟವಾಯಿತು ಬರಹ

    ReplyDelete
  8. ಡಾ.ಗುರುಮೂರ್ತಿ ಹೆಗಡೆಯವರಿಗೆ ನಮಸ್ಕಾರಗಳು...

    ನನ್ನ ಅಂತರಂಗದ ಮಾತುಗಳನ್ನೋದಲು ಬಂದ ನಿಮಗೆ ಸುಸ್ವಾಗತ ಮತ್ತು ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು. ಇದು ಸರಣಿ ಬರಹವಾದದ್ದರಿಂದ ಮುಂದುವರೆಯುತ್ತದೆ, ಹೀಗೇ ಬರುತ್ತಿರಿ....

    ReplyDelete